ನವದೆಹಲಿ: ಕೇಂದ್ರದ ವೈಫಲ್ಯವನ್ನು ಖಂಡಿಸಿ ದೇಶದಲ್ಲಿ ಶೀಘ್ರವೇ ಲೋಕಸಭೆ ಚುನಾವಣೆಗೆ ಆಗ್ರಹಿಸಿ 100 ಮಂದಿ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಹೌದು. 2019ರ ಲೋಕಸಭಾ ಚುನಾವಣೆ ಸಂಬಂಧ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿರುವುದು ಹಳೇ ಸುದ್ದಿ. ಆದರೆ ಈಗ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು 100 ಮಂದಿ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

ಈ ಪ್ರತಿಭಟನೆಯ ಅಂಗವಾಗಿ ಇಂದು ವೈಎಸ್‍ಆರ್ ಕಾಂಗ್ರೆಸ್ 5 ಮಂದಿ ಸಂಸದರು ರಾಜೀನಾಮೆ ನೀಡಿದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ವಿಪಕ್ಷಗಳು ಈ ತಂತ್ರವನ್ನು ಹೆಣೆದಿವೆ ಎನ್ನಲಾಗಿದೆ.
ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿದೆ ಎಂದು ವಾಹಿನಿ ಹೇಳಿದೆ. ಎನ್‍ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಈ ವಾರ ದೆಹಲಿಯಲ್ಲಿ ಶರದ್ ಪವಾರ್ ಮತ್ತು ಇತರೇ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು ಈ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ವಿಚಾರವನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರತಿಪಕ್ಷಗಳ ಪ್ಲಾನ್ ಏನು?
2019ಕ್ಕೂ ಮೊದಲೇ ಚುನಾವಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿವೆ. ಈಗ ಈ ತಂತ್ರವನ್ನು ಅನುಸರಿಸಿದರೆ ಜನರನ್ನು ತಲುಪಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೇ ಮೋದಿ ವಿರೋಧಿ ಅಲೆಯನ್ನು ದೇಶದೆಲ್ಲೆಡೆ ಪಸರಿಸಲು ಈ ನಿರ್ಧಾರ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಈಗ ಒಂದಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಆರ್ ಜೆಡಿ, ಕಾಂಗ್ರೆಸ್, ಜೆಡಿಯು ಮಹಾಘಟಬಂಧನ್ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ತಂತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ಮೈತ್ರಿ ಮಾಡಿಕೊಂಡರೆ ಹಂಚಿಕೆಯಾಗಲಿರುವ ಮತಗಳು ಓರ್ವ ಅಭ್ಯರ್ಥಿಗೆ ಬೀಳಬಹುದು. ಮೈತ್ರಿಯ ಪೂರ್ವಭಾವಿಯಾಗಿ ಈ ರಾಜೀನಾಮೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಕಲಾಪ ಸರಿಯಾಗಿ ನಡೆಯದೇ ಇದ್ದ ಕಾರಣ ಎನ್‍ಡಿಎ ಸಂಸದರು ಸಂಬಳವನ್ನು ಪಡೆಯದೇ ಇರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷಗಳಿಂದಾಗಿ ಕಲಾಪ ಹಾಳಾಗಿದೆ ಎನ್ನುವುದನ್ನು ತೋರಿಸಲು ಜನರ ತೆರಿಗೆ ಹಣವನ್ನು ಪಡೆಯುವುದು ಸಮಂಜಸ ಅಲ್ಲ ಎನ್ನುವ ನಿರ್ಧಾರಕ್ಕೆ ಎನ್‍ಡಿಎ ಬಂದಿದೆ. ನಮ್ಮ ಮೇಲೆ ಬಂದಿರುವ ಈ ಆರೋಪಕ್ಕೆ ತಿರುಗೇಟು ನೀಡಲು ಸದನ ಸರಿಯಾಗಿ ನಡೆಯದೇ ಇರಲು ನಾವು ಕಾರಣವಲ್ಲ. ಸರ್ಕಾರದ ನೀತಿಯಿಂದಲೇ ಕಲಾಪ ವ್ಯರ್ಥವಾಗಿದೆ ಎನ್ನುವುದನ್ನು ಜನರಿಗೆ ವಿವರಿಸಲು ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ ಎನ್ನಲಾಗಿದೆ.
ಆಂಧ್ರದ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕೇಂದ್ರ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಾಮೂಹಿಕ ರಾಜೀನಾಮೆಯ ತಂತ್ರಕ್ಕೆ ಬಂದಿದೆ ಎಂದು ಹೇಳಲಾಗುತ್ತದೆ.

ಸಾಮೂಹಿಕ ರಾಜೀನಾಮೆ ಯಶಸ್ವಿಯಾಗುತ್ತಾ?
ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್ ತೆಗೆದುಕೊಂಡಿದ್ದರೂ ಉಳಿದ ನಾಯಕರು ಒಪ್ಪಿಗೆ ಸೂಚಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೊರತಾಗಿರುವ ಮೂರನೇ ಮೈತ್ರಿಕೂಟ ರಚನೆಯಾಗಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಡಿಶಾದಲ್ಲಿ ಬಿಜೆಡಿ ಬೆಂಬಲಿಸುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.
ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಶಿವಸೇನೆ, ಡಿಎಂಕೆ, ಎಐಡಿಎಂಕೆ, ಬಿಜೆಡಿ, ಟಿಎಂಸಿ ನಾಯಕರ ನಿರ್ಧಾರದ ಮೇಲೆ ಸಾಮೂಹಿಕ ರಾಜೀನಾಮೆ ತಂತ್ರ ನಿಂತಿದೆ ಎನ್ನುವ ವಿಶ್ಲೇಷಣೆ ಈಗ ಕೇಳಿಬಂದಿದೆ.