Tag: ಟಿಡಿಪಿ

  • ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಚಂದ್ರಬಾಬು ನಾಯ್ಡು ಮನೆ ಧ್ವಂಸಕ್ಕೂ ಜಗನ್ ನೋಟಿಸ್

    ಹೈದರಾಬಾದ್: 8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ತೆಲುಗುದೇಶಂ ಪಕ್ಷದ (ಟಿಡಿಪಿ) ಕಚೇರಿ `ಪ್ರಜಾ ವೇದಿಕೆ’ ಧ್ವಂಸಗೊಳಿಸಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕುತ್ತು ಬಂದಿದೆ.

    ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದೆ. ಪ್ರಜಾ ವೇದಿಕೆ ಸ್ಥಳದಿಂದ ಕೂಗಳತೆ ದೂರದಲ್ಲಿ ಚಂದ್ರಬಾಬು ನಾಯ್ಡು ಮನೆ ಇದೆ. ಪ್ರಸ್ತುತ ನಾಯ್ಡು ಅವರ ಕುಟುಂಬ ವಿದೇಶ ಪ್ರವಾಸದಲ್ಲಿದ್ದು, ನೊಟೀಸ್ ಅನ್ನು ಅವರ ನಿವಾಸಕ್ಕೆ ಅಂಟಿಸಲಾಗಿದೆ. ಒಂದು ವಾರದೊಳಗೆ ಉತ್ತರಿಸದಿದ್ದರೆ, ಕಟ್ಟಡ ತೆರವುಗೊಳಿಸುವ ಕುರಿತು ನಿರ್ಧರಿಸಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.

    ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿದ್ದಾರೆ.

    ಪ್ರಜಾ ವೇದಿಕಾ ಎಂಬ ಅತಿಥಿ ಗೃಹದ ಒಂದು ಭಾಗವನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ. ಪ್ರಜಾ ವೇದಿಕಾವನ್ನು ಸರ್ಕಾರಿ ವೆಚ್ಚದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದೆ ಎಂದು ಹೇಳಿ ಆಂಧ್ರ ಸರ್ಕಾರ ನೆಲಸಮಗೊಳಿಸಲು ಆದೇಶ ನೀಡಿತ್ತು. ಇದೀಗ ಇದೇ ಕಾರಣವನ್ನು ನೀಡಿ ಮನೆಯನ್ನು ತೆರವುಗೊಳಿಸುವಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೂಚಿಸಲಾಗಿದೆ.

  • ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    -ಟಿಡಿಪಿ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಜಂಪ್

    ನವದೆಹಲಿ: ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ವಿದೇಶಿ ಪ್ರವಾಸದಲ್ಲಿರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಜರ್ ಸರ್ಜರಿ ಮಾಡಿದ್ದು, ನಾಲ್ವರು ಟಿಡಿಪಿ ರಾಜ್ಯಸಭಾ ಸದಸ್ಯರನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದಿಂದ ಒರ್ವ ಶಾಸಕ ಸೇರಿ 14 ಜನ ಕಾರ್ಪೋರೇಟರ್‍ಗಳು ಬಿಜೆಪಿ ಸೇರುವ ಮೂಲಕ ಟಿಎಂಸಿಗೆ ಶಾಕ್ ನೀಡಿದ್ದರು. ಇದೀಗ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದೀಯ ನಾಯಕ ವೈ.ಎಸ್.ಚೌಧರಿ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದು, ಈ ಮೂಲಕ ಮೇಲ್ಮನೆಯಲ್ಲಿ ಟಿಡಿಪಿ ಬಲ ಕೇವಲ 2 ಸ್ಥಾನಕ್ಕೆ ಕುಸಿದಿದೆ.

    ಚೌಧರಿ ಅವರು ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದು, ಅವರೊಂದಿಗೆ ಇನ್ನೂ ಮೂವರು ಸದಸ್ಯರಾದ ಟಿ.ಜಿ.ವೆಂಕಟೇಶ್, ಜಿ.ಮೋಹನ್ ರಾವ್, ಸಿ.ಎಂ.ರಮೇಶ್ ಹಾಗೂ ವೆಂಕಟೇಶ್ ಸಹ ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದಾರೆ. ಚೌಧರಿ ಅವರು ಈ ಹಿಂದೆ ಎಬಿವಿಪಿ ಹಾಗೂ ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿದ್ದರು ಹೀಗಾಗಿ ಈ ನಡೆ ಸಹಜ ಎಂದು ಹೇಳಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ರಾಷ್ಟ್ರದ ಒಟ್ಟಾರೆ ಹಿತದೃಷ್ಟಿಯಿಂದ ಹಾಗೂ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ಅಭಿವೃದ್ಧಿ ರಾಜಕಾರಣದಿಂದ ಪ್ರಭಾವಿತರಾಗಿ ತಕ್ಷಣದಿಂದಲೇ ಬಿಜೆಪಿ ಸೇರುತ್ತಿದ್ದೇವೆ ಎಂದು ಚೌಧರಿ ಅವರು ಸಹಿ ಮಾಡಿ ರಾಜ್ಯಸಭೆಗೆ ನೀಡಿರುವ ಟಿಡಿಪಿಯ ಶಾಸಕಾಂಗ ಪಕ್ಷದ ನಿರ್ಣಯವನ್ನು ಓದಿದ್ದಾರೆ.

    ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರಲು ಇಚ್ಛಿಸಿದ್ದು, ಅಂತಹ ನಾಯಕರನ್ನು ನಾವು ಸ್ವಾಗತಿಸುತ್ತೇವೆ. ಈ ಮೂಲಕ ಪಕ್ಷದ ಬಲವರ್ಧನೆಯಾದಂತಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ತಿಳಿಸಿದ್ದಾರೆ.

    ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ವಿದೇಶದಲ್ಲಿದ್ದು, ಸಂಸದರು ಬಿಜೆಪಿ ಸೇರುತ್ತಿರುವ ಸುದ್ದಿಯನ್ನು ತಿಳಿದು ಚೌಧರಿ ಅವರೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಪಕ್ಷದಿಂದ ಹೊರ ನಡೆಯದಂತೆ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಪಕ್ಷ ಸೋಲುಂಡಿರುವುದೇ ನಾಯಕರು ಪಕ್ಷ ತೊರೆಯಲು ಕಾರಣ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 126 ಸ್ಥಾನಗಳಿಂದ 23 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳಿಂದ ಕೇವಲ ಮೂರು ಸ್ಥಾನಕ್ಕೆ ಟಿಡಿಪಿ ಕುಸಿದಿದೆ.

    ಬಿಜೆಪಿ ನೂತನ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಂತರ ಮಾತನಾಡಿದ ಜೆಪಿ ನಡ್ಡಾ, ಟಿಡಿಪಿ ನಾಯಕರ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ವೈ.ಎಸ್. ಚೌಧರಿ ಅವರು 2014ರಲ್ಲಿ ಮೋದಿ ಸಂಪುಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018ರಲ್ಲಿ ಚಂದ್ರಬಾಬು ನಾಯ್ಡು ಎನ್‍ಡಿಎ ಕೂಟ ತೊರೆದ ಬಳಿಕ ಚೌಧರಿ ರಾಜೀನಾಮೆ ಕೊಟ್ಟಿದ್ದರು. ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಸದಸ್ಯ ಬಲ ಹೆಚ್ಚಳ ಆಗುತ್ತಿರುವುದು ಮೋದಿ ಸರ್ಕಾರಕ್ಕೆ ವರವಾಗಲಿದೆ. ರಾಜ್ಯ ಸಭೆಯಲ್ಲಿ ಸಂಖ್ಯಾಬಲ ಹೆಚ್ಚಾಗುವುದರಿಂದ ಪ್ರಮುಖ ಮಸೂದೆಗಳನ್ನು ಜಾರಿಗೆ ಬೆಂಬಲ ಪಡೆಯಲು ಸಹಕಾರಿ ಆಗಲಿದೆ. ಹಾಗಾಗಿಯೇ ರಾಜ್ಯಸಭೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ಗಮನ ಹರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    – ಒಂದೇ ದಿನದಲ್ಲಿ ಹೀರೋ ಆಗಿದ್ದ ನಿವೃತ್ತ ಸರ್ಕಲ್ ಇನ್‍ಸ್ಪೆಕ್ಟರ್

    ಹೈದರಾಬಾದ್: ಸಂಸದರಾಗಿ ಆಯ್ಕೆಯಾದ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಡಿವೈಎಸ್‍ಪಿ ಸೆಲ್ಯೂಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಂಧ್ರಪ್ರದೇಶದ ಕದಿರಿಯಲ್ಲಿ ಗೋರಂಟ್ಲಾ ಮಾಧವ್ ಅವರು ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಈಗ ಹಿಂದೂಪುರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

    ಮಾಧವ್ ಅವರಿಗೆ ಹಿಂದಿನ ಮುಖ್ಯಸ್ಥ, ಸಿಐಡಿ ಉಪ ಅಧೀಕ್ಷಕ ಮೆಹಬೂಬ್ ಬಾಷಾ ಅವರು  ಸೆಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಮಾಧವ್ ಅವರ ಸಾಧನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಮಾಧವ್ ಅವರು ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ಮೂಲಕ ಅಲ್ಲಿನ ಸಂಸದರಾಗಿದ್ದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಂಸದ ಕ್ರಿಸ್ತಪ್ಪ ನಿಮ್ಮಾಲಾ ಅವರ ವಿರುದ್ಧ 1,40,748 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಸಂಸದರಾಗಲು ಪ್ರೇರಣೆ ಏನು?
    ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದ ಮಾಧವ್ ಅವರ ಕುಟುಂಬದಲ್ಲಿ ಯಾರೊಬ್ಬರೂ ರಾಜಕಾರಣಿಗಳಿಲ್ಲ. ಅಷ್ಟೇ ಅಲ್ಲದೆ ಅವರು ಚುನಾವಣೆಗೆ ನಿಲ್ಲಬೇಕೆಂದು ಬಯಸಿದವರಲ್ಲ. ಅಷ್ಟೇ ಅಲ್ಲದೆ ಚುನಾವಣಾ ಖರ್ಚು ನಿಭಾಯಿಸುವಷ್ಟು ಹಣವೂ ಅವರ ಬಳಿ ಇರಲಿಲ್ಲ. ಆದರೂ ಓರ್ವ ರಾಜಕಾರಣಿಯ ಅಸಭ್ಯ ವರ್ತನೆ ಅವರನ್ನು ಚುನಾವಣಾ ಕಣಕ್ಕೆ ತಂದು ನಿಲ್ಲಿಸಿತ್ತು. ಈಗ ಅವರು ಭರ್ಜರಿ ಗೆಲುವು ಸಾಧಿಸಿ, ತಿರುಗೇಟು ಕೊಟ್ಟಿದ್ದಾರೆ.

    ರಾಜಕಾರಣಿ ಜೆ.ಸಿ.ದಿವಾಕರ ರೆಡ್ಡಿ ಅವರು ಪ್ರಕರಣವೊಂದರ ವಿಚಾರವಾಗಿ ಪೊಲೀಸರ ಬಗ್ಗೆ ಅಸಭ್ಯ ಪದ ಬಳಸಿದ್ದರು. ಪೊಲೀಸರು ‘ಹಿಜಡಾ’ಗಳಿಗಿಂತ ಕಡೆ ಎಂದು ದಿವಾಕರ ರೆಡ್ಡಿ ಜರಿದಿದ್ದರು. ಈ ಮಾತುಗಳು ಮಾಧವ್ ಅವರ ಕೋಪಕ್ಕೆ ಕಾರಣವಾಗಿತ್ತು.

    ಜೆ.ಸಿ.ದಿವಾಕರ ರೆಡ್ಡಿ ಅವರ ಹೇಳಿಕೆ ವಿಚಾರವಾಗಿ ಮಾಧವ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಪೊಲೀಸರ ಬಗ್ಗೆ ಕಿಳುಮಟ್ಟದ ಪದ ಬಳಕೆ ಮಾಡಿದ ಜೆ.ಸಿ.ದಿವಾಕರ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಪೊಲೀಸ್ ಭಾಷೆಯಲ್ಲಿಯೇ ರೆಡ್ಡಿ ಅವರ ವಿರುದ್ಧ ಕಿಡಿ ಕಾರಿ ಮೀಸೆಯನ್ನು ತಿರುವಿ ಸವಾಲು ಹಾಕಿದ್ದರು.

    ಮಾಧವ್ ಅವರ ಸುದ್ದಿಗೋಷ್ಠಿಯ ವಿಡಿಯೋ ಆಂಧ್ರಪ್ರದೇಶದಲ್ಲಿ ವೈರಲ್ ಆಗಿತ್ತು. ಅಸಭ್ಯ ಪದ ಬಳಕೆ ಮಾಡುವ ರಾಜಕಾರಣಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮಾಧವ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮೂಲಕ ಮಾಧವ್ ಒಂದೇ ದಿನದಲ್ಲಿ ಜನಪ್ರಿಯತೆ ಗಳಿಸಿದರು. ಈ ವಿಡಿಯೋವನ್ನು ನೋಡಿದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಮಾಧವ್ ಅವರನ್ನು ಭೇಟಿಯಾಗಿ ಹಿಂದೂಪುರ್ ಟಿಕೆಟ್ ನೀಡಿದರು. ಇದರಿಂದಾಗಿ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿ ಮಾಧವ್ ಅವರು ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.

  • ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಕರ್ನೂಲ್: ಚುನಾವಣಾ ಪ್ರಚಾರದ ವೇಳೆ ಗಲಾಟೆ ಸಂಭವಿಸಿದ್ದಕ್ಕೆ ಅಂಗರಕ್ಷಕ ನೆಲಕ್ಕೆ ಹಾರಿಸಿದ ಗುಂಡು ಅಭ್ಯರ್ಥಿ ಹಾಗೂ ವ್ಯಕ್ತಿಯೊಬ್ಬರಿಗೆ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಗ್ಗಲ್ ಗ್ರಾಮದಲ್ಲಿ ನಡೆದಿದೆ.

    ತೆಲುಗುದೇಶಂ ಪಕ್ಷದ (ಟಿಡಿಪಿ) ತಿಕ್ಕಾರೆಡ್ಡಿ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅಭ್ಯರ್ಥಿ. ಮಂತ್ರಾಲಯ ವಿಧಾನಸಭಾ ಕ್ಷೇತ್ರದಿಂದ ತಿಕ್ಕಾರೆಡ್ಡಿ ಅವರು ಇಂದು ಕಗ್ಗಲ್ ಗ್ರಾಮದಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

    ಆಗಿದ್ದೇನು?:
    ಮಂತ್ರಾಲಯ ವಿಧಾನಸಭಾ ಕ್ಷೇತ್ರದ ಮತದಾನ ಏಪ್ರಿಲ್ 11ಕ್ಕೆ ನಡೆಯಲಿದೆ. ಹೀಗಾಗಿ ಟಿಡಿಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟಿಡಿಪಿ ಬಾವುಟಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳವಾಗಿದೆ.

    ಟಿಡಿಎಸ್ ಅಭ್ಯರ್ಥಿ ತಿಕ್ಕಾರೆಡ್ಡಿ ಜಗಳವನ್ನ ಬಿಡಿಸಲು ಹೋದಾಗ ಪರಸ್ಥಿತಿ ಕೈಮೀರಿತ್ತು. ತಕ್ಷಣವೇ ತಿಕ್ಕಾರೆಡ್ಡಿ ಅಂಗರಕ್ಷಕ ಎರಡು ಸುತ್ತು ಗಾಳಿಯಲ್ಲಿ ಹಾಗೂ ಮೂರು ಸುತ್ತು ನೆಲಕ್ಕೆ ಗುಂಡು ಹಾರಿಸಿದ್ದಾರೆ. ನೆಲಕ್ಕೆ ಹಾರಿಸಿದ ಗುಂಡುಗಳು ತಿಕ್ಕಾರೆಡ್ಡಿ ಹಾಗೂ ಎಎಸ್‍ಐ ವೇಣುಗೋಪಾಲ್ ಅವರಿಗೆ ತಗುಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಘಟನೆಯಿಂದಾಗಿ ಕಗ್ಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಂಧ್ರ ಸರ್ಕಾರದಿಂದ ದೆಹಲಿ ಪ್ರತಿಭಟನೆಗೆ ಜನರನ್ನ ಕೊಂಡ್ಯೊಯಲು 1.12 ಕೋಟಿ ರೂ. ಖರ್ಚು

    ಆಂಧ್ರ ಸರ್ಕಾರದಿಂದ ದೆಹಲಿ ಪ್ರತಿಭಟನೆಗೆ ಜನರನ್ನ ಕೊಂಡ್ಯೊಯಲು 1.12 ಕೋಟಿ ರೂ. ಖರ್ಚು

    ಹೈದರಾಬಾದ್: ಕೇಂದ್ರ ಸರ್ಕಾರದ ವಿರುದ್ಧ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಫೆ.11 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಜನರನ್ನು ಕೊಂಡ್ಯೊಯಲು ಬರೋಬ್ಬರಿ 1.23 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಆಂಧ್ರ ಪ್ರದೇಶ ಆಡಳಿತಾತ್ಮಕ ಇಲಾಖೆ ರಾಜ್ಯದಿಂದ ರೈಲುಗಳಲ್ಲಿ ಜನರನ್ನು ಕರೆದುಕೊಂಡು ಹೋಗಲು ಹಣವನ್ನು ಬಿಡುಗಡೆ ಮಾಡಿದೆ. ಅನಂತಪುರಂ, ಶ್ರೀಕಾಕುಳಂ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಸ್ವಯಂ ಸೇವಕರನ್ನು ದೆಹಲಿಗೆ ಕರೆತರಲಿದ್ದು, ಫೆ.11 ರಂದು ‘ದೀಕ್ಷಾ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಚಂದ್ರಬಾಬು ನಾಯ್ಡು ಅವರು ಕೈಗೊಳ್ಳಲಿದ್ದಾರೆ.

    ಆಂಧ್ರ ಪ್ರದೇಶದಿಂದ ಹೊರಡುವ ಎರಡು ರೈಲುಗಳು ಭಾನುವಾರ 10 ಗಂಟೆಗೆ ದೆಹಲಿಯನ್ನು ತಲುಪಲಿದ್ದು, ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 2014ರಲ್ಲಿ ಆಂಧ್ರಪ್ರದೇಶ ವಿಭಜನೆ ಕಾಯ್ದೆ ಆನ್ವಯ ಕೇಂದ್ರ ಸರ್ಕಾರ ತಮಗೇ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಬೇಕು ಎಂಬುವುದು ಚಂದ್ರಬಾಬು ನಾಯ್ಡು ಸರ್ಕಾರದ ಪ್ರಮುಖ ಬೇಡಿಕೆ ಆಗಿದೆ.

    ಕೇವಲ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮಾತ್ರವಲ್ಲದೇ ವಿರೋಧಿ ಪಕ್ಷಗಳ ಸಹಕಾರವನ್ನು ಕೂಡ ಚಂದ್ರಬಾಬು ನಾಯ್ಡು ಅವರು ಕೋರಿದ್ದು, ಬಿಜೆಪಿ ಪಕ್ಷ ಹೊರತು ಪಡಿಸಿ ಉಳಿದೆಲ್ಲಾ ಪಕ್ಷಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದಹಾಗೇ ಕಳೆದ ವರ್ಷವಷ್ಟೇ ಟಿಡಿಪಿ ಪಕ್ಷ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶ ಉಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ: ಚಂದ್ರಬಾಬು ನಾಯ್ಡು

    ದೇಶ ಉಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ: ಚಂದ್ರಬಾಬು ನಾಯ್ಡು

    ನವದೆಹಲಿ: ದೇಶವನ್ನು ಬಿಜೆಪಿಯಿಂದ ಉಳಿಸಲು ಕಾಂಗ್ರೆಸ್ ಜೊತೆ ತೆಲುಗು ದೇಶಂ ಪಕ್ಷ(ಟಿಡಿಪಿ) ಕೈ ಜೋಡಿಸಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

    ದೆಹಲಿಯಲ್ಲಿಂದು ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ. ರಾಹುಲ್ ಗಾಂಧಿಯವರೊಂದಿಗೆ ದೀರ್ಘ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವೆಲ್ಲಾ ದೇಶವನ್ನು ಉಳಿಸಲು ಒಂದಾಗಿದ್ದೇವೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ನಮ್ಮ ಹಳೆಯದ್ದನ್ನು ಮರೆತು ಒ0ದಾಗಿದ್ದೇನೆ. ಎಲ್ಲಾ ವಿರೋಧ ಪಕ್ಷಗಳು ಒಂದಾಗುತ್ತವೆ ಎಂದು ತಿಳಿಸಿದರು.

    ಸದ್ಯದ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಪ್ರತಿಪಕ್ಷಗಳು ಒಂದಾಗಬೇಕಿದೆ. ನಮಗೆ ರಾಹುಲ್ ಗಾಂಧಿಯವರೇ ಪ್ರಮುಖ ನಾಯಕರು. ಹೀಗಾಗಿ ನಾವು ಎಲ್ಲಾ ಪ್ರತಿಪಕ್ಷಗಳನ್ನು ಒಂದುಗೂಡಿಸುವಲ್ಲಿ ಯತ್ನಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಸೋಲಿಸಿ, ದೇಶದ ಭವಿಷ್ಯವನ್ನು ಕಾಪಾಡಬೇಕು. ನಾವುಗಳು ಮಹಾಮೈತ್ರಿಯ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಬದ್ಧರಾಗಿರಬೇಕೆಂದು ಹೇಳಿದರು.

    ಇದೇ ವೇಳೆ ರಾಹುಲ್ ಗಾಂಧಿ ಮಾತನಾಡಿ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಇಂದು ಕಾಂಗ್ರೆಸ್ ಜೊತೆ ಒಂದಾಗಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ಭ್ರಷ್ಟಾಚಾರ, ರಫೇಲ್ ಡೀಲ್, ನಿರುದ್ಯೋಗ ಹಾಗೂ ವ್ಯವಸಾಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸುಪ್ರೀಂ ಕೋರ್ಟ್, ಸಿಬಿಐ, ಜಾರಿ ನಿರ್ದೇಶನಾಲಯ, ಆರ್ ಬಿಐ ಸೇರಿದಂತೆ ಹಲವು ಸಂಸ್ಥೆಗಳನ್ನು ಹಾಳು ಮಾಡುತ್ತಿದೆ ಎಂದು ದೂರಿದರು.

    ಟಿಡಿಪಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇಕೆ?
    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಣಕಾಸು ಬಜೆಟ್ ನಲ್ಲಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಎನ್‍ಡಿಎ ಮೈತ್ರಿಕೂಟದಿಂದ ಹೊರ ಬಂದಿತ್ತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈಗ ಇದನ್ನೂ ಲೋಕಸಭಾ ಚುನಾವಣೆಗೂ ವಿಸ್ತರಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕ್ಸಲರ ಗುಂಡಿಗೆ ಟಿಡಿಪಿ ಮಾಜಿ, ಹಾಲಿ ಶಾಸಕರು ಬಲಿ!

    ನಕ್ಸಲರ ಗುಂಡಿಗೆ ಟಿಡಿಪಿ ಮಾಜಿ, ಹಾಲಿ ಶಾಸಕರು ಬಲಿ!

    ಹೈದರಾಬಾದ್: ತೆಲಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಕಿದರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಶಿವಾರಿ ಸೋಮಾ ಅವರನ್ನು ಇಂದು ನಕ್ಸಲರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

    ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಕಣಿವೆಯ ಪ್ರದೇಶದ ದುಂಬ್ರಿಗುಡ ಮಂಡಲದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿದ್ದಾಗ ನಕ್ಸಲರು ದಾಳಿ ಮಾಡಿದ್ದಾರೆ.

    ಸರ್ವೇಶ್ವರ ಹಾಗೂ ಶಿವಾರಿ ಸೋಮಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ನಕ್ಸಲರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಶಾಸಕರು ಮೃತಪಟ್ಟಿದ್ದಾರೆ.

    2014ರ ವಿಧಾನಸಭಾ ಚುನಾವಣೆಯಲ್ಲಿ ವಾಯ್‍ಎಸ್‍ಆರ್‍ಸಿಪಿ ಯಿಂದ ಸ್ಪರ್ಧಿಸಿದ್ದ ಸರ್ವೇಶ್ವರ್, ಟಿಡಿಪಿಯಿಂದ ಅಭ್ಯರ್ಥಿಯಾಗಿದ್ದ ಸೋಮಾ ಅವರನ್ನು ಸೋಲಿಸಿದ್ದರು. ಚುನಾವಣೆ ಬಳಿಕ 2016ರಲ್ಲಿ ಸರ್ವೇಶ್ವರ್ ಟಿಡಿಪಿಗೆ ಸೇರಿಕೊಂಡರು. ಈ ಇಬ್ಬರು ನಾಯಕರಿಗೂ ನಕ್ಸಲರಿಂದ ಕೊಲೆ ಬೆದರಿಕೆ ಕರೆಗಳು ಬೆದರಿಕೆಗಳು ಬರುತ್ತಿದ್ದವು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!

    ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು: ವಿಶ್ವಾಸ ಗೆದ್ದ ಮೋದಿ!

    – ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ದೇಶವಾಸಿಗಳಿಂದ ಮಾತ್ರ ಸಾಧ್ಯ
    – ರಾಹುಲ್ ಬಲವಂತದ ಆಲಿಂಗನಕ್ಕೆ ಮೋದಿ ತಿರುಗೇಟು

    ನವದೆಹಲಿ: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಉತ್ತರ ನೀಡಿದ ಬಳಿಕ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮತದಾನಕ್ಕೆ ಅನುಮತಿ ನೀಡಿದರು. ಸರ್ಕಾರದ ಪರ 325 ಮತಗಳು ಬಿದ್ದರೆ, ಅವಿಶ್ವಾಸ ನಿರ್ಣಯದ ಪರ 126 ಮತ ಬಂದಿತು. ಸದನದಲ್ಲಿ ಈ ವೇಳೆ ಒಟ್ಟು 451 ಸದಸ್ಯರು ಹಾಜರಿದ್ದರು.

    ಬಿಜೆಪಿ ಸರ್ಕಾರದ ವಿರುದ್ಧ ಟಿಡಿಪಿ (ತೆಲಗು ದೇಶಂ ಪಾರ್ಟಿ) ಅವಿಶ್ವಾಸ ಗೊತ್ತುವಳಿ ಮಂಡಿಸಿದ ಚರ್ಚೆಯಲ್ಲಿ ವಿರೋಧ ಪಕ್ಷದ ಎಲ್ಲಾ ನಾಯಕರು ಮಾತನಾಡಿದ್ದರು. ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದ ಕೊನೆಗೆ ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿಕೊಂಡಿದ್ದರು. ರಾಹುಲ್ ಆಲಿಂಗನ ಬಗ್ಗೆ ತಮ್ಮ ಭಾಷಣದ ಆರಂಭದಲ್ಲೇ ಪ್ರತಿಕ್ರಿಯಿಸಿದ ಮೋದಿ, ನನ್ನ ಬಳಿ ಬಂದ ರಾಹುಲ್ ಗಾಂಧಿ ಏಳಿ ಎದ್ದೇಳಿ ಅಂದ್ರು. ನನ್ನನ್ನು ಈ ಸ್ಥಾನದಿಂದ ಎದ್ದೇಳಿಸಲು 125 ಕೋಟಿ ಜನರಿಂದ ಮಾತ್ರ ಸಾಧ್ಯ ಎಂದು ತಿರುಗೇಟು ನೀಡಿದರು.

    ಅವಿಶ್ವಾಸ ಮಾತು ಏಕೆ ಬಂತು ಎಂಬ ಪ್ರಶ್ನೆ ನನ್ನಲ್ಲಿ ಇನ್ನು ಇದೆ. ವಿಪಕ್ಷಗಳು ಮೋದಿ ಹಠಾವೋ ಎಂಬ ಉದ್ದೇಶದಿಂದ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಇದು ಬಲ ಪ್ರದರ್ಶನ ಅಲ್ಲ, ಬಲವಂತದ ಪ್ರದರ್ಶನ ಅಂತಾ ವಾಗ್ದಾಳಿ ನಡೆಸಿದರು. ಯಾರು ಅಧಿಕಾರಕ್ಕೆ ಬರೋದಿಲ್ಲವೋ, ಅವರು ಅಹಂಕಾರವನ್ನು ಅಳವಡಿಸಿಕೊಂಡಿದ್ದಾರೆ. 2019ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಪ್ರಧಾನಿ ಯಂತೆ ವ್ಯಂಗ್ಯ ಮಾಡಿದರು.

    ವಿರೋಧ ಬಣಗಳು ಒಂದಾಗಿವೆ: ಕೇವಲ ಓರ್ವ ಮೋದಿಯನ್ನು ಹಿಂದಿಕ್ಕಿಲು ಎಲ್ಲ ವಿರೋಧ ಬಣಗಳು ಒಂದಾಗಿವೆ. ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಾವು ಶಿವಭಕ್ತರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ನಾನು ಕೂಡ ಶಿವದೇವನನ್ನು ನಂಬುತ್ತೇನೆ ಮತ್ತು ಆರಾಧಿಸುತ್ತೇನೆ. ಇಂದು ಅದೇ ಶಿವನಲ್ಲಿ 2024ರಲ್ಲಿ ರಾಹುಲ್ ಇದೇ ರೀತಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲಿ ಎಂದು ಕೇಳುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರೋದು ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ಮುಳುಗಿದೆ. ಕಾಂಗ್ರೆಸ್ ಜೊತೆ ಹೋಗುವವರು ಮುಳಗಲಿದ್ದೀರಿ, ಹಾಗಾಗಿ ಅವರ ಜೊತೆ ಹೋಗುವುದನ್ನು ನಿಲ್ಲಿಸಿ ಅಂದ್ರು.

    ನಮ್ಮದು ಕೆಲಸ ಮಾಡುವ ಸರ್ಕಾರ. ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಎಲ್ಲ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು ಆದ್ರೆ ಮಾಡಲಿಲ್ಲ. ಜನ್‍ಧನ್ ಯೋಜನೆಯಲ್ಲಿ ಬ್ಯಾಂಕ್ ನೋಡದವರು ಖಾತೆಗಳನ್ನು ಹೊಂದಿದ್ದಾರೆ. ಇದೇ ವೇಳೆ ಸರ್ಕಾರದ ಯೋಜನೆ ಕಾರ್ಯಕ್ರಮಗಳ ಉದಾಹರಣೆಯನ್ನು ನೀಡುವ ಮೂಲಕ ವಿರೋಧ ಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.

    ಡೋಕ್ಲಾಂ ವಿಷಯದ ಬಗ್ಗೆ ಗೊತ್ತಿದ್ದರೆ ಮಾತ್ರ ಮಾತನಾಡಿ. ಗೊತ್ತಿಲ್ಲವೆಂದ್ರೆ ಮಾತನಾಡಲು ಹೋಗಬಾರದು. ಎರಡು ದೇಶಗಳ ವಿಷಯದ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ದೇಶದ ಭದ್ರತೆಯ ವಿಷಯದಲ್ಲಿ ಸಣ್ಣತನ ತೋರಿಸಬಾರದು. ರೆಫೆಲ್ ಮಿಸೈಲ್ ವಿಚಾರದಲ್ಲಿಯೂ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ದೇಶದ ಭದ್ರತೆಯ ಬಗ್ಗೆ ಸ್ವಲ್ಪವೂ ಜವಾಬ್ದಾರಿಗಳು ನಿಮಗೆ ಇಲ್ಲವಾ? ಎಂದು ಪ್ರಶ್ನಿಸಿದರು. ರೆಫೆಲ್ ವಿಚಾರದಲ್ಲಿ ಕಾಂಗ್ರೆಸ್ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರೆಫೆಲ್ ಒಪ್ಪಂದದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಈ ವೇಳೆ ವಿರೋಧ ಪಕ್ಷದ ನಾಯಕರು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾದರು. ವಿರೋಧ ನಾಯಕರ ಗಲಾಟೆ ನೋಡಿ ಒಂದು ಕ್ಷಣ ಆಕ್ರೋಶಗೊಂಡ ಪ್ರಧಾನಿಗಳು ಎಷ್ಟು ಚೀರಾಡುತ್ತೀರೋ ಚೀರಾಡಿ. ಇದು ಸತ್ಯವನ್ನು ಮರೆ ಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಸೈನಿಕರಿಗೆ ಅವಮಾನ ಮಾಡಬೇಡಿ: ರೆಫೆಲ್ ಒಪ್ಪಂದ ಎರಡು ಜವಾಬ್ದಾರಿ ಸರ್ಕಾರಗಳ ನಡುವೆ ಆಗಿದೆ. ವಿರೋಧ ಪಕ್ಷದ ನಾಯಕರು ದೇಶದ ಸೇನಾಧಿಕಾರಿಗಳಿಗೆ ಬಳಸಿರುವ ಮಾತುಗಳು ತುಂಬಾ ಕೆಳಮಟ್ಟದಲ್ಲಿತ್ತು. ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಅವಮಾನ ಮಾಡಿದ್ದೀರಿ. ನಿಮಗೆ ಬೈಯ್ಯುವ ಹಾಗಿದ್ದೀರಿ ನಿಮ್ಮ ಮುಂದೆ ನಾನು ನಿಂತಿದ್ದೇನೆ. ನನಗೆ ನೀವು ಬೈಯಬಹುದು, ದೇಶದ ಸೈನಿಕರಿಗಾಗಿ ನಾನು ಎಲ್ಲವನ್ನು ಸಹಿಸಿಕೊಳ್ಳುತ್ತೇನೆ. ಆದ್ರೆ ದೇಶದ ಸೈನಿಕರಿಗೆ ಅವಮಾನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

    ಈ ಮೊದಲು ದೇವೇಗೌಡರ ಸರ್ಕಾರ ಉಳಿಸಿ ಅವಮಾನಿಸಿದರು. ನಂತರ ಐ ಕೆ ಗುಜ್ರಾಲ್ ಸರ್ಕಾರವನ್ನು ಉರುಳಿಸಿದರು. ಕಾಂಗ್ರೆಸ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಎರಡರೆಡು ಬಾರಿ ಅವಿಶ್ವಾಸವನ್ನು ಮಂಡಿಸಿತ್ತು. ವೋಟಿಗೆ ಬದಲು ನೋಟು ಅಂತಾ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಇತಿಹಾಸದ ಉದಾಹರಣೆಗಳನ್ನು ನೀಡುವ ಮೂಲಕ ವಿರೋಧಿಗಳು ತಿವಿದರು.

    ಕಣ್ಣಸನ್ನೆ: ರಾಹುಲ್ ಗಾಂಧಿ ನನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅಂತಾ ಸವಾಲು ಹಾಕುತ್ತಾರೆ. ಆದ್ರೆ ನಮಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನಮಗೆ ಸಾಧ್ಯವಿಲ್ಲ. ನೀವು ಕೇವಲ ನಾಮದಾರ್ ನಾವು ಕಾಮದಾರ್ ಎಂದು ತಿರುಗೇಟು ನೀಡಿದರು. ಈ ಹಿಂದೆ ಕಾಂಗ್ರೆಸ್ ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ ಜಯಪ್ರಕಾಶ್, ಮೂರಾರ್ಜಿ ದೇಸಾಯಿ, ಪ್ರಣಬ್ ಮುಖರ್ಜಿ, ಶರದ್ ಪವಾರ್ ಅಂತಹ ಹಿರಿಯ ನಾಯಕರ ಸ್ಥಿತಿ ಏನಾಗಿದೆ ನಮ್ಮೆಲ್ಲರಿಗೂ ತಿಳಿದಿದೆ. ಕಣ್ಣಲ್ಲಿ ಕಣ್ಣಿಟ್ಟು ಸವಾಲು ಹಾಕುವವವರ ಕಣ್ಣಸನ್ನೆ ಇಂದು ಇಡೀ ದೇಶವೇ ನೋಡಿದೆ ಎಂದು ತಿವಿದರು.

    ದೇಶದ ಜನರ ದುಃಖದಲ್ಲಿ ನಾನು ಭಾಗಿದಾರ: ಇಂದು ನಾನು ಯಾರನ್ನು ಬಿಡಲ್ಲ. ಎಲ್ಲರ ನಾಯಕರ ಲೆಕ್ಕವನ್ನು ಪೂರ್ಣ ಮಾಡುತ್ತೇನೆ, ಯಾರು ಭಯ ಪಡಬಾರದು ಎಂದು ಹೇಳುವ ಮೂಲಕ ಭಾಷಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸಂಸದರ ವಿರುದ್ಧ ಗುಡುಗಿದರು. ರಾಹುಲ್ ಗಾಂಧಿ ನಾನು ದೇಶದ ಚೌಕಿದಾರ ಅಲ್ಲ, ಭಾಗಿದಾರ ಎಂದು ಹೇಳುತ್ತಾರೆ. ಹೌದು ನಾನು ಭಾಗಿದಾರ, ದೇಶದ ಜನರ ದುಃಖದಲ್ಲಿ ನಾನು ಭಾಗಿದಾರನಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ. ನಾನೇನು ನಿಮ್ಮ ಹಾಗೆ ಸೌಧಾಗಾರ(ದಲ್ಲಾಳಿ), ಟೋಕಿದಾರ ಅಲ್ಲ ಅಂತಾ ರಾಹುಲ್ ಗಾಂಧಿಯ ಕಾಲೆಳೆದರು.

    ತನ್ನ ಲಾಭಕ್ಕಾಗಿ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದೆ. ತನ್ನ ರಾಜಕೀಯಕ್ಕಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎಂದು ರಾಜ್ಯಗಳು ಒಡೆದಿದೆ. ಆದ್ರೆ ಈ ಕಾಂಗ್ರೆಸ್‍ಗೆ ಎರಡೂ ರಾಜ್ಯಗಳು ಸಿಗಲಿಲ್ಲ. ಈ ಹಿಂದೆ ಭಾರತದಿಂದ ಪಾಕಿಸ್ತಾನವನ್ನು ಇಬ್ಬಾಗ ಮಾಡಿದ್ದು ಕಾಂಗ್ರೆಸ್. ಅಂದಿನ ಕಾಂಗ್ರೆಸ್ ಒಡೆದು ಆಳಿದ ನೀತಿಯಿಂದಾಗಿ ಭಾರತ ಇಂದು ತೊಂದರೆ ಅನುಭವಿಸುತ್ತಿದೆ.

    ಕೇಸಿನೇನಿ ಶ್ರೀನಿವಾಸ ವ್ಯಂಗ್ಯ: ಪ್ರಧಾನಿ ಮೋದಿ ಓರ್ವ ಅಧ್ಭುತ ಕಲಾವಿದ. ಒಂದೂವರೆ ಗಂಟೆಗಳ ಕಾಲ ನನಗೆ ಬಾಲಿವುಡ್‍ನ ಬ್ಲಾಕ್ ಬಸ್ಟರ್ ಸಿನಿಮಾ ನೋಡಿದಂತೆ ಆಯಿತು. ಪ್ರಧಾನಿ ಮೋದಿ 2014ರಲ್ಲಿಯೂ ಇಂತಹದ ದೊಡ್ಡ ನಾಟಕ ಮಾಡುವ ಮೂಲಕ ಜನರನ್ನು ಮೋಸಗಳಿಸಿದ್ದಾರೆ. ಆಂಧ್ರದ ಅವೈಜ್ಞಾನಿಕ ವಿಭಜನೆಗೂ ಬಿಜೆಪಿಯೇ ಕಾರಣವಾಗಿದೆ. ನಮಗೆ ಕೇವಲ ಭರವಸೆಗಳನ್ನು ನೀಡಿದ್ದು, ಆದ್ರೆ ಯಾವುದೇ ಈಡೇರಿಲ್ಲ. ಮೋದಿಯವರು ತೆಲುಗು ತಾಯಿಯನ್ನು ಕೊಂದು ವಿಭಜನೆ ಮಾಡಲಾಯಿತು ಅಂದ್ರು. ಆದ್ರೆ ಮೋದಿ ಆಂಧ್ರವನ್ನು ಕೈಮಾ ಮಾಡಿದ್ದಾರೆ. ಪ್ರಪಂಚದ ಅದ್ಭುತ ನಟ ಎಂದು ಮೋದಿಯವರಿಗೆ ಪ್ರಶಸ್ತಿ ನೀಡಬಹುದು ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ ವ್ಯಂಗ್ಯಮಾಡಿದರರು.

  • ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿರುವುದು ಪ್ರಧಾನಿ, ರೆಡ್ಡಿ ವಿರುದ್ಧದ ಕೇಸ್ ವಜಾ ಗೊಳಿಸಿದ್ರಿ: ಟಿಡಿಪಿ ಸಂಸದ

    ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿರುವುದು ಪ್ರಧಾನಿ, ರೆಡ್ಡಿ ವಿರುದ್ಧದ ಕೇಸ್ ವಜಾ ಗೊಳಿಸಿದ್ರಿ: ಟಿಡಿಪಿ ಸಂಸದ

    ನವದೆಹಲಿ: ಗಾಲಿ ಜನಾರ್ದನ ರೆಡ್ಡಿ ಪ್ರಕರಣ ಮುಚ್ಚಿ ಹಾಕುವಲ್ಲಿ ಬಿಜೆಪಿ ಹೆಚ್ಚು ಕಾಳಜಿ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿಡಿಪಿ ಸಂಸದ ಗಲ್ಲಾ ಜಯದೇವ್ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭೆ ಕಲಾಪದಲ್ಲಿ ಬಿಜೆಪಿ ವಿರುದ್ಧ ಅವಿಶ್ವಾಸ ಮಂಡನೆಯಲ್ಲಿ ಮಾತನಾಡಿದ ಸಂಸದರು, ನಾನು ಭ್ರಷ್ಟಾಚಾರ ಮಾಡಲ್ಲ. ಬೇರೆಯವರಿಗೂ ಅವಕಾಶ ನೀಡುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದರು. ಆದರೆ ಪ್ರಧಾನಿಗಳೇ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಗಾಲಿ ಜನಾರ್ದನ ರೆಡ್ಡಿ ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಹಲವು ಪ್ರಕರಣಗಳು ದಾಖಲಾಗಿವೆ. ಆದರೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಲಾಯಿತು. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕಾಗಿ ಜನಾರ್ದನ ರೆಡ್ಡಿಯನ್ನು ಬಳಸಿಕೊಳ್ಳಲಾಗಿದೆ. ನಿಮ್ಮ ಈ ನಡೆ ಭ್ರಷ್ಟಾಚಾರವನ್ನು ಬೆಂಬಲಿಸುವಂತಿದೆ. ದೇಶದ ಜನತೆ ಇದನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ್ದಾರೆ ಎಂದು ದೂರಿದರು.

     

  • ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಮೋದಿಗೆ ಟಿಡಿಪಿ ಶಾಕ್

    ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಮೋದಿಗೆ ಟಿಡಿಪಿ ಶಾಕ್

    ನವದೆಹಲಿ: ಲೋಕಸಭಾ ಚುನಾವಣಾ ಹೊಸ್ತಿನಲ್ಲಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಿದ್ದು, ಟಿಡಿಪಿ ಸಂಸದರು ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

    ಇಂದು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿಡಿಪಿ ನಾಯಕ, ಕಾಕಿನಾಡ ಸಂಸದ ಕೆಸಿನೇನಿ ಶ್ರೀನಿವಾಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದಕ್ಕೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜುಲೈ 20ರಂದು ಲೋಕಸಭೆಯಲ್ಲೂ, 23ರಂದು ರಾಜ್ಯಸಭೆಯಲ್ಲೂ ಚರ್ಚೆಗೆ ಅವಕಾಶ ನೀಡಿದ್ದಾರೆ. ಇದನ್ನು ಓದಿ: ಎನ್‍ಡಿಎಯಿಂದ ಹೊರಬಂದ ಟಿಡಿಪಿ: ಲೋಕಸಭೆ, ರಾಜ್ಯಸಭೆಯಲ್ಲಿ ಬಲಾಬಲ ಹೇಗಿದೆ?

    ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣಕ್ಕೆ ಮೈತ್ರಿಕೂಟದ ಸದಸ್ಯರಾಗಿದ್ದ ಟಿಡಿಪಿ ಮಾರ್ಚ್ ತಿಂಗಳಲ್ಲಿ ಎನ್‍ಡಿಎಗೆ ಗುಡ್‍ಬೈ ಹೇಳಿತ್ತು. ಈ ಹಿನ್ನೆಲೆ, ಶೂನ್ಯ ವೇಳೆಯಲ್ಲಿ ಟಿಡಿಪಿಯ ಸದಸ್ಯ ಶ್ರೀನಿವಾಸ್ ಮಂಡಿಸಿದ್ದ ನಿರ್ಣಯವನ್ನು ಸ್ಪೀಕರ್ ಒಪ್ಪಿಕೊಂಡರು. ಇನ್ನು ಅವಿಶ್ವಾಸ ನಿರ್ಣಯ ಎದರಿಸಲು ನಾವು ಸಿದ್ಧ. ಲೋಕಸಭೆಯಲ್ಲಿ ನಮಗೆ ಹೆಚ್ಚು ಬಹುಮತವಿದ್ದು, ಗೆಲುವು ನಿಶ್ಚಿತ ಅಂತ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಒಂದು ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮತಿ ನೀಡದಿದ್ದರೇ, ಟಿಡಿಪಿ ಸಂಸದರು ವಿಪಕ್ಷ ನಾಯಕರು ಹಾಗೂ ಇತರೆ ಪಕ್ಷದ ಸದಸ್ಯರೊಂದಿಗೆ ಸೇರಿ ಪ್ರತಿಭಟನೆಗೆ ಇಳಿಯಲು ಮುಂದಾಗಿದ್ದರು ಎಂದು ವರದಿಯಾಗಿದೆ.