Tag: ಟಿಎ ಶರವಣ

  • ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

    ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

    ಬೆಂಗಳೂರು: ಸಿಎಂ ಇಬ್ರಾಹಿಂ (CM Ibrahim) ಅವರ ಮಗನ ಚುನಾವಣೆಗೆ ನನ್ನಿಂದ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ಪರಿಷತ್ ಸದಸ್ಯ ಶರವಣ (T A Sharavana) ವಾಗ್ದಾಳಿ ನಡೆಸಿದ್ದಾರೆ.

    ಎಂಎಲ್‌ಸಿ (MLC) ಮಾಡೋಕೆ ಶರವಣರಿಂದ ಕುಮಾರಸ್ವಾಮಿ ಹಣ ಪಡೆದಿಲ್ಲ ಅಂತ ಮಗನ ಮೇಲೆ ತಲೆ ಕೈ ಇಟ್ಟು ಆಣೆ ಮಾಡಿ ಎಂಬ ಇಬ್ರಾಹಿಂ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ಸಮಯಕ್ಕೆ ತಕ್ಕಂತೆ ಪಕ್ಷ ಬದಲಾವಣೆ ಮಾಡೋನೂ ನಾನಲ್ಲ. 25 ವರ್ಷಗಳಿಂದ ದೇವೇಗೌಡ, ಕುಮಾರಸ್ವಾಮಿ (HD Kumaraswamy) ಜೊತೆ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ. ನನ್ನ ರಕ್ತವೇ ಜೆಡಿಎಸ್ ಆಗಿದೆ. ಅಧಿಕಾರಕ್ಕಾಗಿ ಯಾವುದೇ ಪಕ್ಷಕ್ಕೆ ಹೋಗಲ್ಲ. ವಿರೋಧ ಪಕ್ಷ ನಾಯಕ ಮಾಡಿಲ್ಲ ಅಂತ ಹೀಗೆ ಮಾತನಾಡುತ್ತಿದ್ದಾರಾ? ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಕೊಡಲಿಲ್ಲ ಅಂತ ಜೆಡಿಎಸ್‌ಗೆ ಬಂದ್ರಿ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದಾಗ ಇಬ್ರಾಹಿಂ ಕೇಳಿಯೇ ಎಲ್ಲವನ್ನು ವರಿಷ್ಠರು ಮಾಡಿದ್ದರು. ದೇವೇಗೌಡರು ನನ್ನ ತಂದೆ ಸಮಾನ ಎಂದು ಹೇಳಿದ್ದಿರಿ. ಎಂಎಲ್‌ಸಿ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ್ದು ಇಬ್ರಾಹಿಂ. ಈಗ ಯಾಕೆ ಹೀಗೆ ಮಾತನಾಡುತ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜಸ್ಥಾನ ವಿಧಾನಸಭೆ ಚುನಾವಣೆ – 7 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

    ನಿಮ್ಮ ಮಗನಿಗೆ ಹುಮ್ನಾಬಾದ್‌ನಲ್ಲಿ ಟಿಕೆಟ್ ಕೊಟ್ಟಿದ್ದು ಪುತ್ರ ವ್ಯಾಮೋಹ ಅಲ್ಲವಾ? ಕುಮಾರಸ್ವಾಮಿ ಪಕ್ಷ ನಡೆಸೋಕೆ ನನ್ನಂತಹ ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಪಕ್ಷಕ್ಕೆ ತನು ಮನ, ಧನ ಸಹಾಯ ಮಾಡಿರುತ್ತೇವೆ. ಅದನ್ನು ಹಣ ಪಡೆದಿದ್ದಾರೆ ಅಂದರೆ ಹೇಗೆ? ಕುಮಾರಸ್ವಾಮಿ ಮನೆ ಕಟ್ಟೋಕೆ ಹಣ ಬಳಸಿಕೊಂಡಿಲ್ಲ. ಪಕ್ಷಕ್ಕಾಗಿ ಹಣ ಬಳಕೆ ಮಾಡಿದ್ದಾರೆ. ನಿಮ್ಮ ಮಗನ ಚುನಾವಣೆಗೆ ಸಹಾಯ ಮಾಡಿ ಅಂದಾಗ ನಾನು ನಿಮಗೆ ಆರ್ಥಿಕ ಸಹಾಯ ಮಾಡಿರಲಿಲ್ಲವಾ? ಪಕ್ಷ ಕಟ್ಟೋಕೆ ನಮ್ಮಂತಹವರಿಂದ ಕುಮಾರಸ್ವಾಮಿ ಪಡೆದಿದ್ದಾರೆ. ನಾವು ಪಕ್ಷ ಕಟ್ಟೋಕೆ ಕೈಲಾದ ಸೇವೆ ಮಾಡಿರುತ್ತೇವೆ. ಅದನ್ನು ಕುಮಾರಸ್ವಾಮಿ ಹಣ ತೆಗೆದುಕೊಂಡರು ಎನ್ನುತ್ತೀರಾ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಾತಾಡೋಕೆ ಯಾರಿಗೂ ಯೋಗ್ಯತೆ ಇಲ್ಲ: ನರೇಂದ್ರಸ್ವಾಮಿ

    ಜೆಪಿ ಭವನ ಕಟ್ಟಿದಾಗ ಮೊದಲು 10 ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ನಿಮ್ಮ ಮಗನ ಚುನಾವಣೆಗೆ ಹಣ ಕೊಟ್ಟಿಲ್ಲವಾ ನಾನು. ಈಗ ಕುಮಾರಸ್ವಾಮಿ ಮಗನ ಮೇಲೆ ಆಣೆ ಮಾಡಿ ಎನ್ನುತ್ತಿದ್ದೀರಿ. ಇದು ಸರಿಯಾದ ವರ್ತನೆ ಅಲ್ಲ. ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟು ಇವತ್ತು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದೀರಿ. ಅನೇಕ ವರ್ಷಗಳಿಂದ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಪಕ್ಷದಿಂದ ಹೊರಗೆ ಹೋಗಿದ್ದೀರಿ. ನಿಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ ಎಂದರು. ಇದನ್ನೂ ಓದಿ: ಬಿಜೆಪಿಯವ್ರು ಹೇಳಿದ್ರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ದತ್ತ ಮಾಲೆನೂ ಹಾಕ್ತಾರೆ: ಚಲುವರಾಯಸ್ವಾಮಿ

  • ಸಿದ್ದರಾಮಯ್ಯ ಡೀಲ್ ರಾಜ, ಸೂಟ್‌ಕೇಸ್‌ನಲ್ಲಿ ಹಣ ತೆಗೆದುಕೊಂಡಿದ್ದಾರೆ: ಟಿಎ ಶರವಣ

    ಸಿದ್ದರಾಮಯ್ಯ ಡೀಲ್ ರಾಜ, ಸೂಟ್‌ಕೇಸ್‌ನಲ್ಲಿ ಹಣ ತೆಗೆದುಕೊಂಡಿದ್ದಾರೆ: ಟಿಎ ಶರವಣ

    ಬೆಂಗಳೂರು: ರಾಜ್ಯಸಭೆ ಚುನಾವಣೆ ಬಳಿಕ ಮಾತಿನ ಸಮರಗಳು ಜೋರಾಗಿ ನಡೆಯುತ್ತಿವೆ. ಅಡ್ಡ ಮತದಾನ ಮಾಡಿದ ಶಾಸಕರು ಮತ್ತು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆಯ ಹಾದಿ ಹಿಡಿದಿದೆ. ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಸಭೆ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಕಿಡಿಕಾರಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಹಾಗೂ ಸಿದ್ದರಾಮಯ್ಯ ಡೀಲ್ ರಾಜ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JSD ನಿರ್ಧಾರ

    ಸಿದ್ದರಾಮಯ್ಯ ಡೀಲ್ ರಾಜ, ಡೀಲ್ ರಾಮಯ್ಯ. ಸಿದ್ದರಾಮಯ್ಯ ಸುಳ್ಳು ರಾಮಯ್ಯ. ಮಾತಾಡೋದು ಆಚಾರ, ಮಾಡೋದು ಬದನೆಕಾಯಿ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಎಂಬುದು ಗೊತ್ತಾಗಿದೆ. ಬಿಜೆಪಿ ಗೆಲ್ಲಿಸೋಕೆ ಎಷ್ಟು ಸೂಟ್‌ಕೇಸ್ ತಗೊಂಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು ಎಂದು ಒತ್ತಾಯ ಮಾಡಿದರು.

    ಸಮ್ಮಿಶ್ರ ಸರ್ಕಾರದ ಬೆನ್ನಿಗೆ ಚೂರಿ ಹಾಕಿದ್ದೀರಿ. ಕಾಂಗ್ರೆಸ್‌ನ ಅನೇಕ ಶಾಸಕರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯರಿಂದ ನಿಮಗೆ ಸೋಲು ಆಯ್ತು ಎಂದು ಆರೋಪ ಮಾಡಿದರು. ನಾನು, ಫಾರೂಕ್, ದೇವೇಗೌಡರ ಸೂಚನೆ ಮೇಲೆ ಸಿದ್ದರಾಮಯ್ಯಗೆ ಮನವಿ ಮಾಡಲು ಅವರ ಮನೆಗೆ ಹೋಗಿದ್ವಿ. ಆದರೆ ಸಿದ್ದರಾಮಯ್ಯ ಹೊರಗೆ ಬಂದು ಸುಳ್ಳು ಹೇಳಿದರು. ನಾನು ಕುಪೇಂದ್ರ ರೆಡ್ಡಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೆ. ಆದರೆ ಅದನ್ನು ಹೇಳದೇ ಬೇರೆ ರೀತಿ ಬಿಂಬಿಸಿದರು ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭೆಗೆ ಆಯ್ಕೆ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ

    2023ಕ್ಕೆ ಜನ ನಿಮಗೆ ತಕ್ಕಪಾಠ ಕಲಿಸುತ್ತಾರೆ. ಕುಮಾರಸ್ವಾಮಿ, ದೇವೇಗೌಡರು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕು. ಇಬ್ಬರು ಶ್ರೀನಿವಾಸರಿಗೆ ತಿರುಪತಿ ಶ್ರೀನಿವಾಸ ಶಾಪ ಕೊಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರು ನಿಮಗೆ ಪಾಠ ಕಲಿಸುತ್ತಾರೆ. ನಿಮಗೆ ತಾಕತ್ತಿದ್ದರೆ, ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಿ. ತಾಯಿಗೆ ಮೋಸ ಮಾಡುತ್ತೀರಿ ಅಲ್ವಾ? ಮಾನ ಮರ್ಯಾದೆ ಇದೆಯಾ ನಿಮಗೆ ಎಂದು ತರಾಟೆಗೆ ತೆಗೆದುಕೊಂಡರು.

  • ಮಾಜಿ ವಿಧಾನಪರಿಷತ್ ಸದಸ್ಯ ಟಿಎ ಶರವಣರಿಂದ ಉಚಿತ ಊಟ

    ಮಾಜಿ ವಿಧಾನಪರಿಷತ್ ಸದಸ್ಯ ಟಿಎ ಶರವಣರಿಂದ ಉಚಿತ ಊಟ

    ಬೆಂಗಳೂರು: ಮಾಜಿ ವಿಧಾನಪರಿಷತ್ ಸದಸ್ಯ ಟಿಎ ಶರವಣ ಕೂಡ ಕೊರೊನಾ ಕಷ್ಟಕಾಲಕ್ಕೆ ನೆರವಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹುಟ್ಟುಹಬ್ಬದಂದು ಶರವಣ ಅವರು ಹಸಿವು ನೀಗಿಸುವ ಕೆಲಸ ಆಗುತ್ತಿದೆ.

    ಈ ಮೂಲಕ ಮಾಜಿ ಪ್ರಧಾನಿಯ ಹುಟ್ಟುಹಬ್ಬವನ್ನು ಶರವಣ ಅವರು ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ. ಮಾಜಿ ಪ್ರಧಾನಿ ಹುಟ್ಟುಹಬ್ಬದಂದು ಅಪ್ಪಾಜಿ ಕ್ಯಾಂಟೀನ್ ಗೆ ಚಾಲನೆ ನೀಡಲಾಗಿತ್ತು. ಹಸಿದವರ ಹೊಟ್ಟೆ ತುಂಬಿಸೋ ಕೆಲಸ ಮಾಡ್ತಿದ್ದಾರೆ. ಮೊಬೈಲ್ ಕ್ಯಾಂಟಿನ್ ಮೂಲಕ ಪ್ರತಿನಿತ್ಯ ಸಾವಿರಾರು ಜನರಿಗೆ ಊಟ ಒದಗಿಸ್ತಿದ್ದಾರೆ.

    ಶರವಣರಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಜನರಿಗೆ ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಇದ್ದವರು ಮುಂಚೆಯೇ ತಿಳಿಸಿದರೆ ಮನೆ ಬಾಗಿಲಿಗೆ ಊಟ ಒದಗಿಸಲಾಗುವ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದ ಸೇವೆ ಆರಂಭಿಸಿರುವ ದೇವೇ ಗೌಡ ಅಪ್ಪಾಜಿ ಮೊಬೈಲ್ ಕ್ಯಾಂಟೀನ್, ಊಟದ ಜೊತೆಗೆ ಮಾಸ್ಕ್ ಸ್ಯಾನಿಟೈಸರ್ ಗಳ ಹಂಚಿಕೆ ಮಾಡಲಾಗುತ್ತಿದೆ.

  • ಕೆಆರ್‌ಪುರಂನಲ್ಲಿ ಸಾಯಿ ಗೋಲ್ಡ್‌ ಪ್ಯಾಲೇಸ್‌ – ಗ್ರಾಹಕರಿಗೆ ಹಲವು ಕೊಡುಗೆ

    ಕೆಆರ್‌ಪುರಂನಲ್ಲಿ ಸಾಯಿ ಗೋಲ್ಡ್‌ ಪ್ಯಾಲೇಸ್‌ – ಗ್ರಾಹಕರಿಗೆ ಹಲವು ಕೊಡುಗೆ

    ಬೆಂಗಳೂರು: ಚಿನ್ನಾಭರಣ ಮಾರಾಟದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ ಇಡೀ ಕರ್ನಾಟಕ ರಾಜ್ಯಾದ್ಯಂತ ಮನೆ ಮಾತಾಗಿರುವಂತಹ ಡಾ. ಟಿಎ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸಿನ 5ನೇ ನೂತನ ಮಳಿಗೆ ಮಾರ್ಚ್‌ 21ರ ಭಾನುವಾರ ಕೆಆರ್‌ಪುರಂನಲ್ಲಿ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.

    ಈಗಾಗಲೇ ಬಸವನಗುಡಿಯಲ್ಲಿ 2 ಮಳಿಗೆ, ಎಚ್‌ಎಸ್‌ಆರ್‌ ಲೇಔಟ್‌, ಯಲಹಂಕದಲ್ಲಿ ಮಳಿಗೆ ತೆರೆದಿರುವ ಸಾಯಿಗೋಲ್ಡ್‌ ಪ್ಯಾಲೇಸ್‌ ಈಗ ಹಳೆ ಮದ್ರಾಸ್‌ ರಸ್ತೆ, ಕೆಆರ್‌ಪುರಂ ಸಬ್‌ ರಿಜಿಸ್ಟ್ರಾರ್‌ ಕಚೇರಿ ಬಳಿ ಮಾ. 21 ರಂದು ಉದ್ಘಾಟನೆಯಾಗಲಿದೆ.

    ಗುಣಮಟ್ಟ, ವಿನ್ಯಾಸ, ಗ್ರಾಹಕರ ಆಪೇಕ್ಷೆಗೆ ತಕ್ಕಂತೆ ಚಿನ್ನಾಭರಣಗಳು ಇಲ್ಲಿ ಇರುವುದು ವಿಶೇಷ. 25ನೇ ವರ್ಷದ ಆಚರಣೆಯ ಶುಭ ಸಮಾರಂಭದಲ್ಲಿ ದುಬೈ ಬೆಲೆಯಲ್ಲೇ ಚಿನ್ನದ ಆಭರಣವನ್ನು ಖರೀದಿ ಮಾಡುವಂತಹ ಸುವರ್ಣ ಅವಕಾಶ ಗ್ರಾಹಕರಿಗೆ ಸಿಕ್ಕಿದೆ.

    ಎಲ್ಲ ರೀತಿಯ ಆಂಟಿಕ್‌ ಜುವೆಲ್ಲರಿ, ಟೆಂಪಲ್‌ ಜುವೆಲ್ಲರಿ, ಹ್ಯಾಂಡ್‌ ಕ್ರಾಫ್ಟ್‌ ಜ್ಯುವೆಲ್ಲರಿ ಇಲ್ಲಿದೆ. ವಜ್ರ, ಬೆಳ್ಳಿ, ಬೆಳ್ಳಿಯ ಕಡಿಮೆ ಭಾರ ಹೊಂದಿರುವ ಆಭರಣದ ಜೊತೆ ಹೊಸ ವಿನ್ಯಾಸದ ಎಲ್ಲರೂ ಇಷ್ಟ ಪಡುವ ಆಭರಣಗಳು ಗ್ರಾಹಕರಿಗಾಗಿ ತಯಾರಾಗಿದೆ.

    ಗ್ರಾಹಕರಿಗೆ ಕೊಡುಗೆ:
    ವೈವಿಧ್ಯಮಯವಾದ ಆಭರಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಸಾಯಿ ಗೋಲ್ಡ್ ಪ್ಯಾಲೇಸ್‌ ತನ್ನ ಎಲ್ಲ ಮಳಿಗೆಗಳಲ್ಲಿ ವೇಸ್ಟೇಜ್‌ ಮತ್ತು ಸ್ಟೋನ್‌ ಶುಲ್ಕ ವಿಧಿಸುತ್ತಿಲ್ಲ. ಹೊಸದಾಗಿ ಆರಂಭಗೊಳ್ಳಲಿರುವ ಮಳಿಗೆಯಲ್ಲಿ ಗ್ರಾಹಕರು ದುಬೈ ದರದಲ್ಲಿ ಚಿನ್ನಾಭರಣ ಖರೀದಿ ಮಾಡಬಹುದು. ಪ್ರತಿ 1 ಕೆಜಿ ಬೆಳ್ಳಿ ವಸ್ತು ಖರೀದಿಸಿದರೆ 2 ಸಾವಿರ ರೂ. ರಿಯಾಯಿತಿ ಪಡೆಯಬಹುದು

    50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣ ಖರೀದಿಸಿದರೆ ಚಿನ್ನದ ನಾಣ್ಯ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲದೇ ಬೆಳ್ಳಿ ಆಭರಣಗಳ ಖರೀದಿಯ ಮೇಲೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ.

    ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕರು ಮತ್ತು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್‌ ಅಧ್ಯಕ್ಷ ಡಾ.ಟಿ.ಎ ಶರವಣ ಮಾತನಾಡಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಂದರ್ಭ. ಚಿನ್ನದ ಬೆಲೆ ಯಾವ ಸಮಯದಲ್ಲಿ ಏರಿಕೆ ಆಗಲಿದೆ ಎಂದು ಊಹಿಸುವುದೇ ಕಷ್ಟ. ಹೀಗಾಗಿ ನಾವು ಕೆ.ಆರ್‌.ಪುರಂ ಮಳಿಗೆಯಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ್ದು ಗ್ರಾಹಕರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.

    ಡಾ. ಟಿಎ ಶರವಣರ ಬಗ್ಗೆ:
    ಬಡತನದಲ್ಲಿ ಹುಟ್ಟಿ ಬೆಳೆದ ಶರವಣ ಅವರು ಇಂದು ಚಿನ್ನದ ಮಳಿಗೆಗಳನ್ನು ತೆರೆದಿರಬಹುದು. ಆದರೆ ಈ ಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ. ಸಾಧನೆಗೆ ಯಾವುದೇ ಶಾರ್ಟ್‌ಕಟ್‌ ಇಲ್ಲ ಎಂಬಂತೆ ಆರಂಭದಲ್ಲಿ ಸೇಲ್ಸ್‌ಮನ್‌ ಆಗಿ ಚಿನ್ನ ಉದ್ಯಮದ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಶರವಣ ತನಗೆ ಎದುರಾಗಿದ್ದ ಸವಾಲುಗಳನ್ನು ಮೆಟ್ಟಿ ನಿಂತು ಇಂದು ʼಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ʼ ಕಟ್ಟಿದ್ದಾರೆ.

    ಐದು ಸಹೋದರಿಯರು ಮತ್ತು ಓರ್ವ ಸಹೋದರನಿದ್ದ ದೊಡ್ಡ ಕುಟುಂಬದಲ್ಲಿ ಜನಿಸಿದ್ದ ಶರವಣ ಅವರಿಗೆ ಆರಂಭದಲ್ಲೇ ಕುಟುಂಬದ ಹೊರೆ ಇತ್ತು. ಕುಟುಂಬದ ಹೊರೆ, ಉದ್ಯಮ ಎಲ್ಲವನ್ನು ನಿಭಾಯಿಸಿ ಈಗ ಯಶಸ್ವಿ ಚಿನ್ನದ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.

    ಒಂದು ಕಡೆ ಉದ್ಯಮದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಇನ್ನೊಂದು ಕಡೆ ಶರವಣ ಸಹಾಯ ಹಸ್ತ ನೀಡತೊಡಗಿದರು. ಶಿರಡಿ ಸಾಯಿ ಬಾಬಾ ಅವರ ಭಕ್ತರಾಗಿರುವ ಶರವಣ ವಿವಿಧ ದೇವಾಲಯ ಮತ್ತು ಮಠಗಳಿಗೆ ಸಹಾಯ ನೀಡಿದ್ದಾರೆ. ಸಾಯಿ ಬಾಬಾ ಹೆಸರಿನಲ್ಲಿ ಧಾರಾವಾಹಿ ನಿರ್ಮಿಸಿ ಪಾತ್ರವನ್ನೂ ಮಾಡಿದ್ದರು. ಇವರ ಸಮಾಜಮುಖಿ ಕೆಲಸಗಳಿಂದ ಇವರು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

     

  • ಟವೆಲ್ ಆದ್ರೂ ಕೊಡ್ತಾರೆ ಅಂದ್ರೆ ಕರ್ಚೀಫ್ ಕೊಟ್ಟವರೆ: ಕೇಂದ್ರ ನೆರೆ ಪರಿಹಾರಕ್ಕೆ ಶರವಣ ವ್ಯಂಗ್ಯ

    ಟವೆಲ್ ಆದ್ರೂ ಕೊಡ್ತಾರೆ ಅಂದ್ರೆ ಕರ್ಚೀಫ್ ಕೊಟ್ಟವರೆ: ಕೇಂದ್ರ ನೆರೆ ಪರಿಹಾರಕ್ಕೆ ಶರವಣ ವ್ಯಂಗ್ಯ

    ಬೆಂಗಳೂರು: ನಾವು ಟವೆಲ್ ಆದ್ರು ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರೋದು ಕರ್ಚೀಫ್ ಮಾತ್ರ ಎಂದು ಕೇಂದ್ರದ ನೆರೆ ಪರಿಹಾರದ ಹಣವನ್ನು ವಿಧಾನ ಪರಿಷತ್ ಸದಸ್ಯ ಟಿಎ ಶರವಣ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಜೆಡಿಎಸ್ ಪಕ್ಷ ಮಾಡುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು 5000 ಕೋಟಿ ತುರ್ತು ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರ ಕರ್ಚೀಫ್ ಕೊಟ್ಟ ಹಾಗೆ ರಾಜ್ಯಕ್ಕೆ ಪುಡಿಗಾಸು ಕೊಟ್ಟಿದ್ದಾರೆ. ಅದ್ದರಿಂದ 87 ರ ಇಳಿ ವಯಸ್ಸಿನಲ್ಲೂ ದೇವೇಗೌಡರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಹೇಳಿದರು.

    ಕೇಂದ್ರ ನಮಗೆ ಸುಮ್ಮನೆ ಏನು ಹಣ ಕೊಡುತ್ತಿಲ್ಲ. ರಾಜ್ಯದಿಂದ 1 ಲಕ್ಷ ಕೋಟಿಗೂ ಹೆಚ್ಚು ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಪ್ರವಾಹದಿಂದ ತತ್ತರಿಸಿದ ಜನರನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಜೆಡಿಎಸ್ ಪಕ್ಷ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ಮಾಡುತ್ತಿದೆ ಎಂದು ತಿಳಿಸಿದರು.

    ಇದೇ ವೇಳೆ ಅಧಿವೇಶನಕ್ಕೆ ಮಾಧ್ಯಮಗಳ ತಡೆ ವಿಚಾರವಾಗಿ ಮಾತನಾಡಿದ ಶರವಣ, ಬಿಜೆಪಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳಾಗಿವೆ. ಅವರ ಕೈಯಲ್ಲಿ ನಿಭಾಯಿಸೋದಕ್ಕೆ ಆಗಿಲ್ಲ. ಪ್ರವಾಹದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಜನರಿಗೆ ಇವರ ಬಂಡವಾಳ ಎಲ್ಲಿ ಗೊತ್ತಾಗಿಬಿಡುತ್ತೆ ಎಂದು ಮಾಧ್ಯಮಗಳ ನಿಯಂತ್ರಣ ಮಾಡಿದ್ದಾರೆ. ಮಾಧ್ಯಮ ಪ್ರಜಾಪ್ರಭುತ್ವದ ಒಂದ ಅಂಗ, ಅದನ್ನು ದೂರ ಇಡೋದು ಸರಿಯಲ್ಲ. ಕೂಡಲೇ ಮಾಧ್ಯಮಗಳ ನಿಯಂತ್ರಣ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

  • ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ‘ನಮ್ಮ ಅಪ್ಪಾಜಿ ಕ್ಯಾಂಟೀನ್’ಗಿಂದು ದೇವೇಗೌಡ್ರಿಂದ ಚಾಲನೆ- 5 ರೂ.ಗೆ ತಟ್ಟೆ ಇಡ್ಲಿ-ವಡೆ, 10 ರೂ.ಗೆ ಮುದ್ದೆ-ಬಸ್ಸಾರು

    ಬೆಂಗಳೂರು: ರಿಯಾಯಿತಿ ದರದಲ್ಲಿ ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸಲು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿದ್ರೆ, ಇತ್ತ ಜೆಡಿಎಸ್ ಎಂಎಲ್‍ಸಿ ಶರವಣ ನೇತೃತ್ವದಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ತೆರೆಯುತ್ತಿದೆ.

    ಇಂದಿರಾ ಕ್ಯಾಂಟೀನ್‍ಗೂ ಮುನ್ನವೇ ಅಪ್ಪಾಜಿ ಕ್ಯಾಂಟೀನ್ ಸಿದ್ಧಗೊಂಡಿದ್ದು, ಇಂದಿನಿಂದ ಜನರಿಗೆ ರುಚಿಯಾದ ತಿಂಡಿ-ಊಟ ನೀಡಲು ಮುಂದಾಗಿದೆ. ಶ್ರೀಸಾಯಿ ಸಮರ್ಪಣ ಚಾರಿಟೆಬಲ್ ವತಿಯಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಇಂದು ಬೆಳಗ್ಗೆ 11 ಗಂಟೆಗೆ ಕ್ಯಾಂಟೀನ್‍ಗೆ ಚಾಲನೆ ನೀಡುತ್ತಿದ್ದಾರೆ.

    5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್, ಕೇಸರಿಬಾತ್ ಹಾಗೆ 10 ರೂ.ಗೆ ಪೊಂಗಲ್, ಮುದ್ದೆ-ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್. 3 ರೂಪಾಯಿಗೆ ಬಿಸಿಬಿಸಿ ಕಾಫಿ-ಟೀ ಈ ಕ್ಯಾಂಟೀನ್‍ನಲ್ಲಿ ಸಿಗಲಿದೆ. ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರುತ್ತದೆ. ನಮ್ಮ ಅಪ್ಪಾಜಿ ಕ್ಯಾಂಟೀನ್‍ನಲ್ಲಿಯೇ ಅಡುಗೆ ತಯಾರಿ ಮಾಡಲಾಗುತ್ತದೆ. 10 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ನಿರ್ಮಾಣಗೊಂಡಿದೆ. ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದೇವೇಗೌಡರು ಉಪಸ್ಥಿತರಿರಲಿದ್ದಾರೆ. ಒಂದು ವೇಳೆ ಈ ಕ್ಯಾಂಟೀನ್ ಯಶಸ್ವಿಯಾದ್ರೆ ನಗರದ 27 ವಿಧಾನಸಭಾ ಕ್ಷೇತ್ರದಲ್ಲೂ ವಿಸ್ತರಿಸಲು ಟಿ.ಎ.ಶರವಣ ನಿರ್ಧರಿಸಿದ್ದಾರೆ.