Tag: ಟಿಎಂಸಿ

  • ಟಿಎಂಸಿ ದುರ್ಬಲ ಪಕ್ಷವಲ್ಲ, ಒಬ್ಬರು ಹೋದ್ರೆ 500 ಜನ ಬರ್ತಾರೆ: ದೀದಿ

    ಟಿಎಂಸಿ ದುರ್ಬಲ ಪಕ್ಷವಲ್ಲ, ಒಬ್ಬರು ಹೋದ್ರೆ 500 ಜನ ಬರ್ತಾರೆ: ದೀದಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ದುರ್ಬಲ ಪಕ್ಷವಲ್ಲ. ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕೌನ್ಸಿಲರ್ ಗಳ ಸಭೆಯಲ್ಲಿ ಮಾತನಾಡಿದ ಅವರು, ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್ ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಗುಡುಗಿದರು.

    ವೈದ್ಯರ ಮುಷ್ಕರ ಬೆನ್ನಲ್ಲೇ ಟಿಎಂಸಿಗೆ ಪಕ್ಷಾಂತರ ಶಾಕ್ ಉಂಟಾಗಿದೆ. ನವದೆಹಲಿಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್‍ನ ಶಾಸP ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

    ಟಿಎಂಸಿಯ ಇಬ್ಬರು ಶಾಸಕರು, 50ಕ್ಕೂ ಜನ ಕೌನ್ಸಿಲರ್ ಗಳು ಮೇ 28ರಂದು ಬಿಜೆಪಿ ಸೇರಿದ್ದರು. ಈ ಮೂಲಕ ತೃಣಮೂಲ ಕಾಂಗ್ರೆಸ್‍ನ 10 ಶಾಸಕರು ಈಗಾಗಲೇ ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ತಿಳಿಸಿದ್ದಾರೆ.

  • ಮನೆ ಮೇಲೆ ಬಾಂಬ್ ಎಸೆದು, ಗುಂಡಿಟ್ಟು ಟಿಎಂಸಿ ಕಾರ್ಯಕರ್ತರ ಹತ್ಯೆ

    ಮನೆ ಮೇಲೆ ಬಾಂಬ್ ಎಸೆದು, ಗುಂಡಿಟ್ಟು ಟಿಎಂಸಿ ಕಾರ್ಯಕರ್ತರ ಹತ್ಯೆ

    -ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ಶಂಕೆ

    ಕೋಲ್ಕತ್ತಾ: ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಸರ್ಕಾರ ರಚನೆಯಾಗಿ ವಾರಗಳೇ ಕಳೆದಿವೆ. ಚುನಾವಣೆಯ ಸಮಯಲ್ಲಿ ರಾಜಕೀಯ ಸಂಘರ್ಷದ ಕಿಡಿ ಇನ್ನೂ ತಣ್ಣಗಾಗಿಲ್ಲ. ಬಿಜೆಪಿ ಮತ್ತು ಟಿಎಂಸಿ (ತೃಣಮೂಲ ಕಾಂಗ್ರೆಸ್) ಕಾರ್ಯಕರ್ತರ ನಡುವಿನ ಗಲಾಟೆಗಳು ಕೊಲೆಯಲ್ಲಿ ಅಂತ್ಯಗೊಳ್ಳುತ್ತಿವೆ. ಮನೆಯ ಮೇಲೆ ಬಾಂಬ್ ಎಸೆದು, ಗುಂಡಿಟ್ಟು ಟಿಎಂಸಿಯ ಮೂವರು ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕೊಲೆ ನಡೆದಿದೆ. ಮೃತರನ್ನು ಖೈರೂದ್ದೀನ್ ಖಾನ್ ಮತ್ತು ಸೋಹೆಲ್ ಖಾನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಕಾರ್ಯಕರ್ತನ ಗುರುತು ಪತ್ತೆಯಾಗಿಲ್ಲ. ಓರ್ವನನ್ನು ಕಾಂಗ್ರೆಸ್ ನವರು ಮತ್ತಿಬ್ಬರನ್ನು ಬಿಜೆಪಿ ಬೆಂಬಲಿಗರು ಕೊಲೆ ಮಾಡಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದಾರೆ.

    ಮೃತ ಕುಟುಂಬಸ್ಥರ ಸಂಬಂಧಿ ಮಾತನಾಡಿ, ಆರೋಪಿಗಳು ಈಗಾಗಲೇ ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಆ ಪ್ರಕರಣದಲ್ಲಿ ನಾನು ಸಾಕ್ಷಿಯಾಗಿದ್ದರಿಂದ ನನ್ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ಮನೆಯಲ್ಲಿ ನಾನು ಸಿಗದಿದ್ದಾಗ, ಇವರನ್ನು ಕೊಲೆ ಮಾಡಿದ್ದಾರೆ. ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು, ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆಂದು ಕಣ್ಣೀರು ಹಾಕಿದರು.

  • ಬಂಗಾಳಿ ಭಾಷೆ ಮಾತನಾಡುವವರಿಗಷ್ಟೇ ಬಂಗಾಳದಲ್ಲಿರಲು ಅವಕಾಶ: ಮಮತಾ ಬ್ಯಾನರ್ಜಿ

    ಬಂಗಾಳಿ ಭಾಷೆ ಮಾತನಾಡುವವರಿಗಷ್ಟೇ ಬಂಗಾಳದಲ್ಲಿರಲು ಅವಕಾಶ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ರಾಜಕೀಯ ಗಲಭೆಗಳ ಮೂಲಕ ಬಿಜೆಪಿ, ಬಂಗಾಳವನ್ನು ಗುಜರಾತ್ ಮಾಡಲು ಹೊರಟಿದೆ. ಆದರೆ, ನಾನು ಜೀವಂತವಾಗಿರುವವರೆಗೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬಂಗಾಳದಲ್ಲಿ ಇರಲು ಬಯಸುವವರು ಬಂಗಾಳಿ ಭಾಷೆಯನ್ನು ಕಲಿಯಲೇ ಬೇಕು. ಬೇರೆ ಭಾಷೆಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ಹಿಂದಿ ಹೇರಿಕೆ ಹಾಗೂ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

    ಪರಗಣ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ರಾಜಕೀಯ ಗಲಭೆ ಎಬ್ಬಿಸುವ ಮೂಲಕ ಬಂಗಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇತ್ತೀಚೆಗೆ ವೈದ್ಯರ ಮುಷ್ಕರ ವಿಷಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

    ದೆಹಲಿಗೆ ತೆರಳಿದಾಗ ಹಿಂದಿಯಲ್ಲಿ ಮಾತನಾಡುತ್ತೇವೆ. ಪಂಜಾಬ್‍ಗೆ ತೆರಳಿದಾಗ ಪಂಜಾಬಿ ಭಾಷೆ ಮಾತನಾಡುತ್ತೇವೆ. ತಮಿಳುನಾಡಿಗೆ ತೆರಳಿದಾಗ ತಮಿಳು ಮಾತನಾಡಲು ಬರದಿದ್ದರೂ ತಮಿಳು ಭಾಷೆಯ ನಾಲ್ಕು ಪದಗಳನ್ನಾದರೂ ಮಾತನಾಡುತ್ತೇನೆ. ಅದೇ ರೀತಿ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನೇ ಬಳಸಬೇಕು. ಈ ಮೂಲಕ ಬಂಗಾಳದಲ್ಲಿ ಬಂಗಾಳಿ ಭಾಷೆಯನ್ನು ಪ್ರಚಾರಪಡಿಸಬೇಕೆಂದು ತಿಳಿಸಿದ್ದಾರೆ.

    ನೀವು ಬಂಗಾಳಕ್ಕೆ ಬರುವುದಾದರೆ ಬಂಗಾಳಿಯಲ್ಲೇ ಮಾತನಾಡಬೇಕು. ಹೊರ ರಾಜ್ಯ, ಹೊರ ದೇಶದಿಂದ ಬಂದು ಬಂಗಾಳಿಯವರ ಮೇಲೆ ದಬ್ಬಾಳಿಕೆ ನಡೆಸಲು ನಾನು ಬಿಡುವುದಿಲ್ಲ. ಡಿಎಂಕೆ ಮತ್ತು ಪಿಎಂಕೆ ಸೇರಿದಂತೆ ದಕ್ಷಿಣ ಭಾರತದ ರಾಜಕೀಯ ಪಕ್ಷಗಳು ಬಿಜೆಪಿಯ ಕನ್ನಡಿಗಳಿದ್ದಂತೆ. ಇತ್ತೀಚೆಗಷ್ಟೆ ರೈಲ್ವೆ ಇಲಾಖೆ ತಮಿಳುನಾಡಿನಲ್ಲಿ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಸಂವಹನ ನಡೆಸುವ ಕುರಿತು ಚರ್ಚೆ ನಡೆದಿತ್ತು. ಇದರಿಂದ ತಮಿಳು ಭಾಷೆಗೆ ಧಕ್ಕೆಯಾಗಲಿದೆ ಎಂಬ ಟೀಕೆಯೂ ಈ ವೇಳೆ ವ್ಯಕ್ತವಾಗಿತ್ತು.

  • ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್  ಕಾರ್ಯಕರ್ತರ ಮೃತದೇಹ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಮೃತದೇಹ ಪತ್ತೆ

    ಕೋಲ್ಕತ: ಟಿಎಂಸಿ ಹಾಗೂ ಬಿಜೆಪಿ ನಡುವೆ ದೀದಿ ನಾಡಲ್ಲಿ ರಾಜಕೀಯ ದ್ವೇಷ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದು ಬಿಜೆಪಿ ಕಾರ್ಯಕರ್ತನ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಟಿಎಂಸಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಹಲವೆಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕವೂ ಟಿಎಂಸಿ ಕಾರ್ಯಕರ್ತರು ಹಾಗೂ ಬಿಜೆಪಿ ನಡುವೆ ಗಲಾಟೆಗಳು ನಡೆಯುತ್ತಲೇ ಇದ್ದು ಹಿಂಸಾಚಾರ ಭುಗಿಲೆದ್ದಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದು ಪಶ್ಚಿಮ ಬಂಗಾಳದ ಬಿಗುವಿನ ವಾತಾವರಣ ಸೃಷ್ಟಿಸಿದೆ.

    ಪಶ್ಚಿಮ ಬಂಗಾಳದ ಹೌರಾದ ಸರ್ಪೋಟಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಸಮಟುಲ್ ದೊಲುಯಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೊಲುಯಿ ಸಾವಿಗೆ ಟಿಎಂಸಿ ಕಲಾರ್ಯಕರ್ತರೇ ಕಾರಣವೆಂದು ದೊಲುಯಿ ಕುಟುಂಬಸ್ಥರು ಹಾಗೂ ಹೌರಾದ ಬಿಜೆಪಿ ನಾಯಕರು ಟಿಎಂಸಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇತ್ತೀಚೆಗೆ ದೊಲುಯಿ ಅವರು ಸ್ಥಳೀಯ ಪ್ರದೇಶಗಳಲ್ಲಿ `ಜೈ ಶ್ರೀರಾಮ್’ ರ‍್ಯಾಲಿಗಳನ್ನು ಮಾಡುತ್ತಿದ್ದರು. ಆದ್ದರಿಂದ ಅವರಿಗೆ ಪ್ರಾಣ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಹೌರಾದ ಗ್ರಾಮೀಣ ಭಾಗದ ಬಿಜೆಪಿ ಅಧ್ಯಕ್ಷ ಅನುಪಮ್ ತಿಳಿಸಿದ್ದಾರೆ.

    ಅಲ್ಲದೆ, ದೊಲುಯಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುತ್ತಿರುವ ವೇಳೆ ಕೆಲ ಕಿಡಿಗೇಡಿಗಳು ಶವವನ್ನು ಹೊತ್ತೊಯ್ಯಲು ಯತ್ನಿಸಿದ್ದು, ಗ್ರಾಮಸ್ಥರು ಈ ವಿಚಾರಕ್ಕೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಆರ್‌ಎಎಫ್‌ (ರ‍್ಯಾಪಿಡ್  ಆಕ್ಷನ್ ಫೋರ್ಸ್) ಅನ್ನು ನಿಯೋಜಿಸಿದೆ.

    ಭಾನುವಾರದಂದು ಆರ್‍ಎಸ್‍ಎಸ್ ಹಿರಿಯ ಸ್ವದೇಶ್ ಮನ್ನಾ ಅವರ ಮೃತದೇಹವೂ ಕೂಡ ಅಟ್ಚಾಟಾ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಅಲ್ಲದೆ, ದೊಲುಯಿ ಹಾಗೂ ಸ್ವದೇಶ್ ಇಬ್ಬರು `ಜೈ ಶ್ರೀರಾಮ್’ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು ಎಂದು ಎನ್ನಲಾಗಿದೆ. ಈ ಹಿನ್ನೆಲೆ ಇಬ್ಬರನ್ನೂ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಹತ್ಯೆ ಮಾಡಿದ್ದಾರೆ ಎಂದು ಅನುಪಮ್ ಆರೋಪಿಸಿದ್ದಾರೆ.

    ಬಿಜೆಪಿ ಆರೋಪವನ್ನು ಟಿಎಂಸಿ ಎಂಎಲ್‍ಎ ಪುಲಕ್ ರಾಯ್ ತಳ್ಳಿಹಾಕಿದ್ದಾರೆ. ತಮ್ಮ ಪಕ್ಷದ ಈ ರೀತಿ ಮಾಡಿಲ್ಲ ಎಂದು ಕಾರ್ಯಕರ್ತರ ಪರವಹಿಸಿದ್ದಾರೆ. ಅಲ್ಲದೆ, ಬಿಜೆಪಿ ಅವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಟಿಎಂಸಿಯ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಮಾತನಾಡಿ, ಬಿಜೆಪಿಯವರು ಸುಮ್ಮನೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಟಿಎಂಸಿ ಸರ್ಕಾರವನ್ನು ಬೀಳಿಸಿ ಇಲ್ಲಿ ರಾಷ್ಟ್ರಪತಿ ಆಡಳಿತ ತರಲು ಅವರು ಪ್ರಯತ್ನಿಸುತ್ತಿದ್ದಾರೆ. ಟಿಎಂಸಿ ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ. ಅವರ ಮನೆಗಳ ಮೇಲೆ ಕೂಡ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

  • ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ – ನಾಲ್ವರು ಕಾರ್ಯಕರ್ತರ ಕೊಲೆ

    ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ – ನಾಲ್ವರು ಕಾರ್ಯಕರ್ತರ ಕೊಲೆ

    ಕೊಲ್ಕತ್ತಾ: ಲೋಕಸಭಾ ಚುನಾವಣೆ ಅಂತ್ಯವಾದರು ಪಶ್ಚಿಮಾ ಬಂಗಾಳದಲ್ಲಿ ಹಿಂಸಾಚಾರ ಇನ್ನೂ ನಿಂತಿಲ್ಲ. ಇದರ ಪರಿಣಾಮ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಓರ್ವ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.

    ಶನಿವಾರ ರಾತ್ರಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡು ನಾಲ್ವರು ಕಾರ್ಯಕರ್ತರು ಮೃತಪಟ್ಟಿದ್ದಾರೆ.

    ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರನ್ನು ಸುಕಾಂತ್ ಮಂಡಲ್, ಪ್ರದೀಪ್ ಮಂಡಲ್ ಮತ್ತು ತಪನ್ ಮಂಡಲ್ ಎಂದು ಗುರುತಿಸಿದ್ದು. ಮತ್ತೊಬ್ಬ ತೃಣಮೂಲ ಕಾರ್ಯಕರ್ತನ್ನು ಕಯಮ್ ಮೊಲ್ಲಾ ಎಂದು ಗುರುತಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸಯಂತಾನ್ ಬಸು, ಟಿಎಂಸಿ ಕಾರ್ಯಕರ್ತರು ನಮ್ಮ ಬಿಜೆಪಿ ಪಕ್ಷದ ಕೇಸರಿ ಧ್ವಜವನ್ನು ಕೀಳಲು ಬಂದಿದ್ದಾರೆ. ಇದಕ್ಕೆ ವಿರೋಧ ಮಾಡಿದ ನಮ್ಮ ಮೂರು ಜನ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಕಯಮ್ ಮೊಲ್ಲಾ ಅವರನ್ನು ಅವರೇ ಕೊಲೆ ಮಾಡಿ ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಘರ್ಷಣೆಯಲ್ಲಿ ಬಿಜೆಪಿ 18 ಕಾರ್ಯಕರ್ತರು ಕಾಣೆಯಾಗಿದ್ದಾರೆ ಎಂದು ನಾಯಕರ ಆರೋಪಿಸುತ್ತಿದ್ದಾರೆ. ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಜ್ಯೋತಿಪ್ರಿಯ ಮುಲ್ಲಿಕ್, ನಾವು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿಲ್ಲ. ಬಿಜೆಪಿ ಅವರೇ ಹೊರಗಿನಿಂದ ಜನರನ್ನು ಕರೆಸಿ ನಮ್ಮ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

  • ನಮ್ಮನ್ನ ಹೊಡೆಯುವವರು ತುಂಡು-ತುಂಡಾಗ್ತಾರೆ : ಬಿಜೆಪಿ ವಿರುದ್ಧ ದೀದಿ ಕಿಡಿ

    ನಮ್ಮನ್ನ ಹೊಡೆಯುವವರು ತುಂಡು-ತುಂಡಾಗ್ತಾರೆ : ಬಿಜೆಪಿ ವಿರುದ್ಧ ದೀದಿ ಕಿಡಿ

    – ಬಿಜೆಪಿಗೆ ನೀವು ಹೆದರಬೇಕಾಗಿಲ್ಲ
    – ಅಲ್ಪಸಂಖ್ಯಾತರ ಮನವೊಲಿಸಲು ಬ್ಯಾನರ್ಜಿ ಯತ್ನ

    ಕೋಲ್ಕತ್ತಾ: ನಮ್ಮನ್ನ ಹೊಡೆಯುವವರು ಚೂರ್-ಚೂರ್ (ತುಂಡು-ತುಂಡು) ಆಗುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ರಂಜಾನ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ನಿಮ್ಮ ಆಶೀರ್ವಾದವಿದೆ. ಪವಿತ್ರ ರಂಜಾನ್ ನಿಮಿತ್ತ ಒಂದು ತಿಂಗಳ ಕಾಲ ನೀವು ಉಪವಾಸ ಮಾಡಿದ್ದೀರಿ. ಎಷ್ಟೇ ಕಷ್ಟ ಬಂದರೂ ಧಾರ್ಮಿಕ ನಿಯಮ ಪಾಲಿಸಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದರು.

    ನೀವು ಅವರಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ. ದುಃಖ, ನೋವಿನಲ್ಲಿ ಕಾಲ ಕಳೆಯಬೇಕಾಗಿಲ್ಲ. ಮುಂದೆ ಬನ್ನಿ, ಅಭಿವೃದ್ಧಿ ಹೊಂದಿ, ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಮುಸ್ಲಿಂ ಸಮುದಾಯದ ಜನರಿಗೆ ಮಮತಾ ಅಭಯ ನೀಡಿದರು.

    ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು, ಮಮತಾ ಬ್ಯಾನರ್ಜಿ ಅಭಿಮಾನಿಗಳು ನಿನ್ನೆಯಷ್ಟೇ ‘ಜೈ ಹಿಂದ್’, ‘ಜೈ ಬಂಗಾಳ್’ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಕಾರ್ಡ್ ಕಳುಹಿಸಿದ್ದಾರೆ.

    ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಬರೆದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಪತ್ರಗಳನ್ನು ಕಳುಹಿಸಿದ್ದರು. ಈ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ‘ಜೈ ಹಿಂದ್’, ‘ಜೈ ಬಂಗಾಳ್’ ಹಾಗೂ ‘ವಂದೇ ಮಾತರಂ’ ಎಂದು ಬರೆದು 10 ಸಾವಿರ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

    ಅಂಚೆಪತ್ರ ವಾರ್ ಆರಂಭವಾಗಿದ್ದೇಕೆ?:
    ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರ ಪ್ರದೇಶದಲ್ಲಿ ಕಳೆದ ಗುರುವಾರ ಕಾರಿನಲ್ಲಿ ಮಮತಾ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ತಕ್ಷಣವೇ ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ಅವರು, ನನ್ನನ್ನು ಏನು ಎಂದು ತಿಳಿದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತೀರಾ? ನನ್ನ ವಿರುದ್ಧ ಘೋಷಣೆ ಕೂಗಲು ನಿಮಗೆಷ್ಟು ಧೈರ್ಯ? ನಾನಿದನ್ನು ಸಹಿಸಿಸುವುದಿಲ್ಲ. ನಿಮ್ಮ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಕ್ರಮಕೈಗೊಳ್ಳುತ್ತೇನೆ ಎಂದು ಗುಡುಗಿದ್ದರು.

    ಪರಿಸ್ಥಿತಿ ಕೈಮಿರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಮತಾ ಬ್ಯಾನರ್ಜಿ ಅವರು ಕಾರಿನಿಂದ ಇಳಿದು ಬಂದು ಅಬ್ಬರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ, ಜೈ ಶ್ರೀರಾಮ್ ಎಂದು ಬರೆದು ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಅಂಚೆಪತ್ರ ಕಳುಹಿಸಿತ್ತು.

    ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ ಅವರು ಸೋಮವಾರ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಕಚೇರಿ ಬಾಗಿಲು ಮುರಿದು, ಅಲ್ಲಿ ಟಿಎಂಸಿ ಚಿಹ್ನೆ ಬಿಡಿಸಿ ಬಂದಿದ್ದರು.

    2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

    ಲೋಕಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಟಿಎಂಸಿಯ ಕೆಲ ಶಾಸಕರು ಹಾಗೂ 50 ಜನ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆ ನಂತರವೂ ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ವಾಗ್ದಾಳಿ, ಅಂಚೆಪತ್ರ ಸಮರ ನಡೆಯುತ್ತಲೇ ಇದೆ.

  • ಜೈ ಹಿಂದ್, ಜೈ ಬಂಗಾಳ್ – ದೀದಿ ಪಡೆಯಿಂದ ಮೋದಿಗೆ 10 ಸಾವಿರ ಅಂಚೆಪತ್ರ

    ಜೈ ಹಿಂದ್, ಜೈ ಬಂಗಾಳ್ – ದೀದಿ ಪಡೆಯಿಂದ ಮೋದಿಗೆ 10 ಸಾವಿರ ಅಂಚೆಪತ್ರ

    – ಬಿಜೆಪಿ, ಟಿಎಂಸಿ ಮಧ್ಯೆ ಪೋಸ್ಟ್‌ಕಾರ್ಡ್ ವಾರ್

    ಕೋಲ್ಕತ್ತಾ: ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಧ್ಯೆ ಅಂಚೆಪತ್ರ ವಾರ್ ಏರ್ಪಟ್ಟಿದೆ. ಬಿಜೆಪಿಯವರು ‘ಜೈ ಶ್ರೀರಾಮ್’ ಬರೆದರೆ, ಮಮತಾ ಬ್ಯಾನರ್ಜಿ ಅಭಿಮಾನಿಗಳು ‘ಜೈ ಹಿಂದ್’, ‘ಜೈ ಬಂಗಾಳ್’ ಬರೆದು ಮೋದಿಗೆ ಅಂಚೆ ಕಾರ್ಡ್ ಅಭಿಯಾನ ಆರಂಭಿಸಿದೆ.

    ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಬರೆದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಪತ್ರಗಳನ್ನು ಕಳುಹಿಸಿದ್ದರು. ಈ ಬೆನ್ನಲ್ಲೇ ಇಂದು ಟಿಎಂಸಿ ಕಾರ್ಯಕರ್ತರು ‘ಜೈ ಹಿಂದ್’, ‘ಜೈ ಬಂಗಾಳ್’ ಹಾಗೂ ‘ವಂದೇ ಮಾತರಂ’ ಎಂದು ಬರೆದು 10 ಸಾವಿರ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

    ಅಂಚೆ ಕಚೇರಿಯ ಮುಂದೆ ಸರದಿ ಸಾಲಿನಲ್ಲಿ ನಿಂತ ನೂರಾರು ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈ ಮೂಲಕ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಪತ್ರ ಸಮರ ಜೋರಾಗಿದೆ.

    ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರ ಪ್ರದೇಶದಲ್ಲಿ ಕಳೆದ ಗುರುವಾರ ಕಾರಿನಲ್ಲಿ ಮಮತಾ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ತಕ್ಷಣವೇ ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ಅವರು, ನನ್ನನ್ನು ಏನು ಎಂದು ತಿಳಿದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತೀರಾ? ನನ್ನ ವಿರುದ್ಧ ಘೋಷಣೆ ಕೂಗಲು ನಿಮಗೆಷ್ಟು ಧೈರ್ಯ? ನಾನಿದನ್ನು ಸಹಿಸಿಸುವುದಿಲ್ಲ. ನಿಮ್ಮ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಕ್ರಮಕೈಗೊಳ್ಳುತ್ತೇನೆ ಎಂದು ಗುಡುಗಿದ್ದರು.

    ಪರಿಸ್ಥಿತಿ ಕೈಮಿರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಮಾತಾ ಬ್ಯಾನರ್ಜಿ ಅವರು ಕಾರಿನಿಂದ ಇಳಿದು ಬಂದು ಅಬ್ಬರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ, ಜೈ ಶ್ರೀರಾಮ್ ಎಂದು ಬರೆದು ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಅಂಚೆಪತ್ರ ಕಳುಹಿಸಿತ್ತು.

    ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ ಅವರು ಸೋಮವಾರ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಕಚೇರಿ ಬಾಗಿಲು ಮುರಿದು, ಅಲ್ಲಿ ಟಿಎಂಸಿ ಚಿಹ್ನೆ ಬಿಡಿಸಿ ಬಂದಿದ್ದರು.

    2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

    ಲೋಕಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಟಿಎಂಸಿಯ ಕೆಲ ಶಾಸಕರು ಹಾಗೂ 50 ಜನ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆ ನಂತರವೂ ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ವಾಗ್ದಾಳಿ, ಅಂಚೆಪತ್ರ ಸಮರ ನಡೆಯುತ್ತಲೇ ಇದೆ.

  • ದೀದಿ ಹಿರಣ್ಯ ಕಶಿಪು ವಂಶಸ್ಥೆ: ಸಾಕ್ಷಿ ಮಹಾರಾಜ್

    ದೀದಿ ಹಿರಣ್ಯ ಕಶಿಪು ವಂಶಸ್ಥೆ: ಸಾಕ್ಷಿ ಮಹಾರಾಜ್

    ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಹಿರಣ್ಯ ಕಶಿಪು ವಂಶಸ್ಥೆ ಎಂದು ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂಸದ ಸಾಕ್ಷಿ ಮಹಾರಾಜ್, ಈ ಹಿಂದೆ ಹಿರಣ್ಯ ಕಶಿಪು ಎಂಬ ರಾಕ್ಷಸನಿದ್ದ. ಜೈ ಶ್ರೀರಾಮ್ ಎಂದು ಜಪಿಸುತ್ತಿದ್ದ ಪುತ್ರನನ್ನು ಜೈಲಿನಲ್ಲಿ ಇರಿಸಿದ್ದ. ಇಂದು ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಎಂದು ಹೇಳುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಹಿರಣ್ಯ ಕಶಿಪುವಿನ ವಂಶಸ್ಥರು ಇರಬಹುದು ಎನ್ನುವುದು ನನ್ನ ಅನಿಸಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೆಲವು ದಿನಗಳ ಸಿಎಂ ಮಮತಾ ಬ್ಯಾನರ್ಜಿ ಮಾರ್ಗ ಮಧ್ಯೆ ಕೆಲ ಯುವಕರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಕಾರಿನಿಂದ ಹೊರ ಬಂದ ಸಿಎಂ, ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

    ತೃಣಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕ ಅರ್ಜುನ್ ಸಿಂಗ್, ಟಿಎಂಸಿಯ ಸಭೆಯ ವೇಳೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆ ಖಂಡಿಸಿ ದೀದಿ ನಿವಾಸಕ್ಕೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡುಗಳನ್ನು ಬಿಜೆಪಿ ನಾಯಕರು ಕಳುಹಿಸಲಿದ್ದೇನೆ ಎಂದು ಹೇಳಿದ್ದಾರೆ.

    ಹಿರಣ್ಯ ಕಶಿಪು ಯಾರು?
    ವಿಷ್ಣು ಪುರಾಣದಲ್ಲಿ ಬರುವ ಹಿರಣ್ಯ ಕಶಿಪು ಹಿರಣ್ಯಾಕ್ಷನ ಅಣ್ಣ. ಪ್ರಹ್ಲಾದನ ತಂದೆ, ಕಯಾದುವಿ ಪತಿ. ತಪಸ್ಸು ಮಾಡಿದ್ದ ಈತ ಅಮರತ್ವ ವರವನ್ನು ಕೊಡುವಂತೆ ಬ್ರಹ್ಮನಲ್ಲಿ ಕೇಳಿದ್ದ. ಅಮರತ್ವದ ವರ ನೀಡಲು ಸಾಧ್ಯವಿಲ್ಲ ಎಂದು ಬ್ರಹ್ಮ ಹೇಳಿದ್ದಕ್ಕೆ, ನನಗೆ ಮನುಷ್ಯನಿಂದ, ಪ್ರಾಣಿಗಳಿಂದ, ದೇವತೆಗಳಿಂದ, ಭೂ, ಜಲ, ವಾಯು ಮತ್ತು ಯಾವುದೇ ಆಯುಧಗಳಿಂದಲೂ ಮರಣ ಸಂಭವಿಸದೇ ಇರುವ ವರವನ್ನು ಕೇಳಿ ಪಡೆದುಕೊಂಡಿದ್ದ. ಕೊನೆಗೆ ವಿಷ್ಣು ಅರ್ಧ ಮಾನವ ಅರ್ಧ ಸಿಂಹ ಹೀಗೆ ನರಸಿಂಹ ಅವತಾರದಲ್ಲಿ ಬಂದು ಶಿವನ ಆರಾಧಕನಾಗಿದ್ದ ಹಿರಣ್ಯ ಕಶಿಪುವನ್ನು ಸಂಹಾರ ಮಾಡಿದ್ದ.

  • ಬಿಜೆಪಿ ಗೆದ್ದ ಸಿಟ್ಟಿಗೆ  ಟ್ಯೂಬ್ ವೆಲ್, ನಲ್ಲಿಗಳನ್ನು ಒಡೆದ ಟಿಎಂಸಿ ಕಾರ್ಯಕರ್ತರು

    ಬಿಜೆಪಿ ಗೆದ್ದ ಸಿಟ್ಟಿಗೆ ಟ್ಯೂಬ್ ವೆಲ್, ನಲ್ಲಿಗಳನ್ನು ಒಡೆದ ಟಿಎಂಸಿ ಕಾರ್ಯಕರ್ತರು

    – ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಗ್ರಾಮಸ್ಥರಿಗೆ ಕಾಟ

    ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಮತನೀಡಿ ಗೆಲ್ಲಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇದೇ ಸಿಟ್ಟಿಗೆ ಪಶ್ಚಿಮ ಬಂಗಾಳದ ಪಶ್ಚಿಮ ಬದ್ರ್ವಾನ್ ಮತ್ತು ಬಿರ್ಬುಮ್ ಜಿಲ್ಲೆಗಳ ಮೂರು ಪ್ರದೇಶಗಳಲ್ಲಿ ಟಿಎಂಸಿ ಕಾರ್ಯಕರ್ತರು ಟ್ಯೂಬ್ ವೆಲ್ ಗಳು ಹಾಗೂ ನೀರಿನ ಪೈಪ್ ಲೈನ್‍ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬದ್ರ್ವಾನ್- ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎಸ್ ಅಹ್ಲುವಾಲಿಯಾ ಅವರು 2,439 ಮತಗಳ ಅಂತರದಲ್ಲಿ ಟಿಎಂಸಿಯ ಮಮತಾಜ್ ಸಂಘಮಿತ ಅವರನ್ನು ಸೋಲಿಸಿದ್ದಾರೆ. ಹಾಗೆಯೇ ಬಿರ್ಬುಮ್‍ನ ರಾಮ್‍ಪುರಹಟ್ ಕ್ಷೇತ್ರದಲ್ಲಿ ಬಿಜೆಪಿಯ ದೂಧ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ತಮ್ಮ ಪಕ್ಷ ಸೋಲು ಕಂಡಿರುವುದಕ್ಕೆ ಸಿಟಿಗೆದ್ದಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಟ್ಯೂಬ್ ವೆಲ್ ಗಳು ಹಾಗೂ ನೀರಿನ ಪೈಪ್ ಲೈನ್‍ಗಳನ್ನು ಒಡೆದು ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

    ಬಿಜೆಪಿ ಹೆಚ್ಚು ಮತಗಳಿಸಿ ಇಲ್ಲಿ ಆಡಳಿತದಲ್ಲಿರುವ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದೆ. ಹೀಗಾಗಿ ಈ ಕ್ಷೇತ್ರದಲ್ಲಿ 5-6 ಟ್ಯೂಬ್ ವೆಲ್ ಗಳು ಹಾಗೂ ಕುಡಿಯುವ ನೀರಿನ ಪೈಪ್‍ಲೈನ್‍ಗಳನ್ನು ಒಡೆದು ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿದಿನ ನೀರು ಸರಬರಾಜು ಮಾಡುವ ಸುಮಾರು 10 ಸಾರ್ವಜನಿಕ ನಲ್ಲಿಗಳನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

    ಈ ಸಂಬಂಧ ಗ್ರಾಮಸ್ಥರೆಲ್ಲ ಟಿಎಂಸಿ ನಾಯಕ ಪಿ. ದಾಸ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆಗ ಟಿಎಂಸಿ ಕಾರ್ಯಕರ್ತರು, ಪಂಚಾಯ್ತಿ ಸದಸ್ಯರು ಹಾಗೂ ಯಾವ ಸ್ಥಳೀಯ ನಾಯಕರು ಈ ಕೃತ್ಯವೆಸಗಿಲ್ಲ. ಬಿಜೆಪಿ ಕ್ಷೇತ್ರದಲ್ಲಿ ಗೆದ್ದಿದೆ. ಆದ್ದರಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಟಿಎಂಸಿ ನಾಯಕ ಆರೋಪವನ್ನು ತಳ್ಳಿಹಾಕಿದ್ದಾರೆ.

    ಟಿಎಂಸಿ ನಾಯಕಿಯೊಬ್ಬರು ಮಾತನಾಡಿ, ಈ ಕೃತ್ಯವೆಸೆಗಿದವರು ಯಾರು ಎಂದು ತಿಳಿದಿಲ್ಲ. ಆದರೆ ಈಗ ಒಡೆದಿರುವ ಪೈಪ್‍ಲೈನ್‍ಗಳು ಹಾಗೂ ನಲ್ಲಿ, ಟ್ಯೂಬ್ ವೆಲ್ ಗಳನ್ನು ರಿಪೇರಿ ಮಾಡಿಸಿದ್ದೇವೆ ಎಂದಿದ್ದಾರೆ. ಈ ಘಟನೆ ಬಳಿಕ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಸಂಘರ್ಷ ಜೋರಾಗಿದೆ.

  • ಮೋದಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲ್ಲ – ಯೂಟರ್ನ್ ಹೊಡೆದ ದೀದಿ

    ಮೋದಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲ್ಲ – ಯೂಟರ್ನ್ ಹೊಡೆದ ದೀದಿ

    ಕೋಲ್ಕತ್ತಾ: ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿ ಯೂಟರ್ನ್ ಹೊಡೆದಿದ್ದಾರೆ.

    ಮಮತಾ ಬ್ಯಾನರ್ಜಿ ಅವರು ಮಂಗಳವಾರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಆದರೆ ಈಗ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ.

    ಪ್ರಧಾನಿ ಹುದ್ದೆ ಅಲಂಕರಿಸುತ್ತಿರುವ ನಿಮಗೆ ಧನ್ಯವಾದಗಳು ನರೇಂದ್ರ ಮೋದಿ ಜೀ. ನಿಮ್ಮ ಪ್ರಮಾಣವಚನ ಕಾರ್ಯಕಾರ್ಯಕ್ರಮಕ್ಕೆ ಹಾಜರಾಗಲು ನಿರ್ಧರಿಸಿದ್ದೆ. ಆದರೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ದುರುದ್ದೇಶದಿಂದ 54 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿಯವರು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ಮಾಧ್ಯಮಗಳಲ್ಲಿ ಇದೇ ಸುದ್ದಿ ಕೇಳಿಬರುತ್ತಿದೆ. ಇದು ಶುದ್ಧ ಸುಳ್ಳು. ರಾಜಕೀಯ ಹಿತಾಸಕ್ತಿಗಾಗಿ ಯಾವುದೇ ಕೊಲೆ ನಡೆದಿಲ್ಲ. ವೈಯಕ್ತಿಕ ವ್ಯಾಜ್ಯ, ಕೌಟುಂಬಿಕ ಕಲಹದಿಂದಾಗಿ ಕೊಲೆಗಳು ನಡೆದಿದೆ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ತಿಳಿಸಿದ್ದಾರೆ.

    ಬಿಜೆಪಿಯ ಆರೋಪದಿಂದಾಗಿ ನಾನು ನಿಮ್ಮ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದಕ್ಕೂ ಮುನ್ನ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು, ಮಮತಾ ಬ್ಯಾನರ್ಜಿ ಯಾಕೆ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಯಾಕೆ ಹಾಜರಾಗುತ್ತಿದ್ದಾರೆ ಎಂದು ರಿವೀಲ್ ಮಾಡಿದ್ದರು.

    ಮಾಧ್ಯಮಗಳ ಜೊತೆಗೆ ಇಂದು ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರು ಸೋದರಳಿಯ, ಟಿಎಂಸಿ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ರಾಜಕೀಯ ಉಳಿವಿಗಾಗಿ ಶ್ರಮಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೋದಿಯವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

    ಅರ್ಜುನ್ ಸಿಂಗ್ ತೃಣಮೂಲ ಕಾಂಗ್ರೆಸ್‍ನ (ಟಿಎಂಸಿ) ನಾಯಕರಾಗಿದ್ದರು. ಅವರು ಭಟ್ಟರಾ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಬಾರ್ರಾಕ್ಪೋರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

    ಮಮತಾ ಬ್ಯಾನರ್ಜಿ ಅವರು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೋದಿಯವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಇದು ಪ್ರಮಾಣವಚನ ಕಾರ್ಯಕ್ರಮವಾಗಿದ್ದರಿಂದ ಹಾಜರಾಗಲು ಯೋಚಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

    2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

    ಲೋಕಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದೆ. ಈ ಮೂಲಕ ಟಿಎಂಸಿಯ ಇಬ್ಬರು ಶಾಸಕರು ಹಾಗೂ 50 ಜನ ಕೌನ್ಸಿಲರ್ ಗಳು ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.