Tag: ಟಿಎಂಸಿ

  • ಪಶ್ಚಿಮ ಬಂಗಾಳ, ಉತ್ತರಾಖಂಡ್ ಉಪಚುನಾವಣೆ – 3ರಲ್ಲಿ ಟಿಎಂಸಿ, 1 ರಲ್ಲಿ ಬಿಜೆಪಿಗೆ ಗೆಲುವು

    ಪಶ್ಚಿಮ ಬಂಗಾಳ, ಉತ್ತರಾಖಂಡ್ ಉಪಚುನಾವಣೆ – 3ರಲ್ಲಿ ಟಿಎಂಸಿ, 1 ರಲ್ಲಿ ಬಿಜೆಪಿಗೆ ಗೆಲುವು

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ್ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ತೃಣಮೂಲ ಕಾಂಗ್ರೆಸ್(ಟಿಎಂಸಿ) 3 ಹಾಗೂ ಬಿಜೆಪಿ ಕೇವಲ ಒಂದು ಸ್ಥಾನಗಳಲ್ಲಿ ಜಯಗಳಿಸಿವೆ.

    ಪಶ್ಚಿಮ ಬಂಗಾಳದಲ್ಲಿ ಆಡಳೀತಾರೂಢ ಟಿಎಂಸಿ ಬಿಜೆಪಿಯನ್ನು ಸ್ವೀಪ್ ಮಾಡಿದ್ದು, ಎಲ್ಲ ಮೂರು ಕ್ಷೇತ್ರಗಳಲ್ಲಿಯೂ ಜಯಗಳಿಸಿದೆ. ಉತ್ತರಾಖಂಡ್ ಪಿತೋರ್ಗರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 3,267 ಮತಗಳಿಂದ ಜಯಗಳಿಸಿದ್ದಾರೆ.

    ಪಿತೋರ್ಗರ್ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಪಂತ್ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಪ್ರಕಾಶ್ ಪಂತ್ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಪತ್ನಿ ಚಂದ್ರಾ ಪಂತ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾಳಿಯಗಂಜ್, ಕರೀಂಪುರ ಹಾಗೂ ಖರಗ್‍ಪುರಗಳಲ್ಲಿ ಜಯಗಳಿಸಿದೆ. ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ಖರಗ್‍ಪುರದಲ್ಲಿ ಟಿಎಂಸಿ ಜಯಗಳಿಸಿದೆ. ಬಿಜೆಪಿ ಕೇವಲ ಶೇ.39ರಷ್ಟು ಮತಗಳನ್ನು ಪಡೆದಿದೆ.

    ಬೆಂಗಾಳ್ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಅವರು ಲೋಕಸಭಾ ಚುನಾವಣೆಯಲ್ಲಿ ಖರಗ್‍ಪುರ ಕ್ಷೇತ್ರದಿಂದ ಜಯಗಳಿಸಿದ್ದರು. ಕೇವಲ ಜಯಗಳಿಸಿರುವುದು ಮಾತ್ರವಲ್ಲ ಲೋಕಸಭೆಯಲ್ಲಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಜಯಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ ವಿರುದ್ಧ ಟಿಎಂಸಿ 18 ಸಾವಿರ ಮತಗಳ ಅಂತರದಿಂದ ಜಯಗಳಿಸಿದೆ.

    ಕಾಳಿಗರಂಜ್ ಗೆಲ್ಲುವ ಮೂಲಕ ಟಿಎಂಸಿ ಉತ್ತರ ಬೆಂಗಾಳ್‍ನಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಿಕೊಂಡಿದೆ. ಈ ಮೂಲಕ ಟಿಎಂಸಿ ಲೋಕಸಭೆಯಲ್ಲಿ ಕಳೆದುಕೊಂಡ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಸಾಧಿಸುತ್ತಿದೆ. ಕರಿಂಪುರದಲ್ಲಿಯೂ ಸಹ ಟಿಎಂಸಿ 24 ಸಾವಿರ ಮತಗಳ ಅಂತರದಿಂದ ಜಯಗಳಿಸಿದೆ.

  • ದೀದಿ ರಾಜ್ಯದಲ್ಲಿ ಮತ್ತೆ ರಕ್ತದೋಕುಳಿ- ಬಿಜೆಪಿ ನಾಯಕನ ಕಗ್ಗೊಲೆ

    ದೀದಿ ರಾಜ್ಯದಲ್ಲಿ ಮತ್ತೆ ರಕ್ತದೋಕುಳಿ- ಬಿಜೆಪಿ ನಾಯಕನ ಕಗ್ಗೊಲೆ

    ಕೋಲ್ಕತಾ: ಮಮತಾ ಬ್ಯಾನರ್ಜಿ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ರಾಜಕೀಯ ದ್ವೇಷದ ರಕ್ತದೋಕುಳಿ ಚೆಲ್ಲಿದೆ. ಹೂಗ್ಲಿ ಜಿಲ್ಲೆಯ ಆರಾಮ್‍ಬಾಗ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕನನ್ನು ಕೊಲೆಗೈಯಲಾಗಿದ್ದು, ಇದರಲ್ಲಿ ಟಿಎಂಸಿ(ತೃಣಮೂಲ ಕಾಂಗ್ರೆಸ್) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

    ಆರಾಮ್‍ಬಾಗ್ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕ ಶೇಖ್ ಅಮಿರ್ ಖಾನ್ ಮೃತ ದುರ್ದೈವಿ. ಖಾನ್ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಬಿದಿರು ಕೋಲಿನಿಂದ ಥಳಿಸಿ ಮಾರಣಾಂತಿಕ ದಾಳಿ ನಡೆಸಲಾಗಿತ್ತು. ಈ ಹಲ್ಲೆಯಿಂದ ಗಂಭೀರ ಗಾಯಗೊಂಡ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಖಾನ್ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಈ ಕೊಲೆ ಹಿಂದೆ ಟಿಎಂಸಿ ಪಕ್ಷದ ಕೈವಾಡವಿದೆ. ಖಾನ್ ಅವರ ಮೇಲೆ ದಾಳಿ ನಡೆದ ಸ್ಥಳ ಎಸ್‍ಡಿಪಿಒ ಕಚೇರಿಯಿಂದ ಹೆಚ್ಚು ದೂರವಿಲ್ಲ. ಆದರೂ ಪೊಲೀಸರು ಸ್ಥಳಕ್ಕೆ ತಲುಪಲು ತಡಮಾಡಿದರು ಎಂದು ಸ್ಥಳೀಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರು ಹತ್ಯೆಯನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

    ಆದರೆ ಈ ಆರೋಪಗಳನ್ನು ಟಿಎಂಸಿ ಪಕ್ಷ ತಳ್ಳಿಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಹೂಗ್ಲಿ ಟಿಎಂಸಿ ನಾಯಕ ಮಾತನಾಡಿ, ಕೊಲೆ ಪ್ರಕರಣದಲ್ಲಿ ತಮ್ಮ ಪಕ್ಷದವರ ಕೈವಾಡವಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರೇ ಲೋಕಸಭಾ ಚುನಾವಣೆಯ ಬಳಿಕ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

    ಈ ಹಿಂದೆ ಕೂಡ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು, ಆರ್‍ಎಸ್‍ಎಸ್ ನಾಯಕರು ಹಾಗೂ ಟಿಎಂಸಿ ನಾಯಕರ ಕೊಲೆಗಳು, ಅನುಮಾನಾಸ್ಪದ ಸಾವಿನ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಲೋಕಸಭೆ ಚುನಾವಣೆ ಸಮಯದಲ್ಲಿ ಹಾಗೂ ಚುನಾವಣೆ ಬಳಿಕ ರಾಜಕೀಯ ನಾಯಕರ ಕೊಲೆ ಪ್ರಕರಣ ಹೆಚ್ಚಾಗಿದ್ದವು. ಈಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಕೂಡ ಸೇರಿಕೊಂಡಿದೆ.

  • ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ – ಮಮತಾ ಬ್ಯಾನರ್ಜಿ

    ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದೆ – ಮಮತಾ ಬ್ಯಾನರ್ಜಿ

    ಕೊಲ್ಕತ್ತಾ: ದೇಶದಲ್ಲಿ ಸೂಪರ್ ತುರ್ತು ಪರಿಸ್ಥಿತಿ ಇದ್ದು, ಸಂವಿಧಾನ ಕೊಡಮಾಡಿದ ಹಕ್ಕು ಹಾಗೂ ಸ್ವಾತಂತ್ರ್ಯ ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.

    ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಶುಭಕೋರಿ ಟ್ವೀಟ್ ಮಾಡಿರುವ ಅವರು, ನಮ್ಮ ದೇಶ ಸ್ಥಾಪಿಸಿರುವ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಮತ್ತೊಮ್ಮೆ ಪ್ರತಿಜ್ಞೆ ಮಾಡೋಣ. ಸೂಪರ್ ತುರ್ತುಪರಿಸ್ಥಿತಿಯ ಈ ಯುಗದಲ್ಲಿ ನಾವು ಹೋರಾಟ ನಡೆಸಬೇಕಿದೆ. ಈ ಮೂಲಕ ನಮ್ಮ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸಬೇಕಿದೆ ಎಂದು ಕರೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿರುವ ಅವರು, ಭಿನ್ನಾಭಿಪ್ರಾಯಗಳಿಂದ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಗೆ ‘ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು’ ಎಂದು ಹೇಳಿದ್ದರು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳ ನಾಯರು ಭಾರೀ ವಾಗ್ದಾಳಿ ನಡೆಸಿದ್ದರು.

    ಮಮತಾ ಬ್ಯಾನರ್ಜಿ ಅವರು ಹೊಸ ಸಂಚಾರಿ ನಿಯಮ ಸೇರಿದಂತೆ ಕೇಂದ್ರ ಅನೇಕ ಯೋಜನೆಗಳನ್ನು ವಿರೋಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ನಿಯಮಗಳು ಜಾರಿಗೆ ಬರುವುದಿಲ್ಲ ಎಂದು ಎಚ್ಚರಿಸಿದ್ದರು. ಅಲ್ಲದೆ, ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್‍ನ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಮೋದಿ ಆಗಮಿಸಿದಾಗಲೂ ಸಹ ಮಮತಾ ಬ್ಯಾನರ್ಜಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ಚಂದ್ರಯಾನ-2ನ ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ಇಸ್ರೋ ಕೇಂದ್ರ ಕಚೇರಿಗೆ ತೆರಳಿದ್ದಾರೆ. ಚಂದ್ರಯಾನ-2 ಇದೇ ಮೊದಲೇ, ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ನಾವು ಇಂತಹ ಪ್ರಯತ್ನ ಮಾಡಿರಲಿಲ್ಲವೇ, ಇವರೇ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.

  • ದಿದಿಗೆ ಮತ್ತೆ ಶಾಕ್ – ಟಿಎಂಸಿ ಶಾಸಕ ಬಿಜೆಪಿ ಸೇರ್ಪಡೆ

    ದಿದಿಗೆ ಮತ್ತೆ ಶಾಕ್ – ಟಿಎಂಸಿ ಶಾಸಕ ಬಿಜೆಪಿ ಸೇರ್ಪಡೆ

    ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಘಾತ ಉಂಟಾಗಿದ್ದು, ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಶಾಸಕ ಸೋವನ್ ಚಟರ್ಜಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇಂದು ದೆಹಲಿಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೋವನ್ ಚಟರ್ಜಿ ಅವರು ಕೋಲ್ಕತ್ತಾದ ಮಾಜಿ ಮೇಯರ್ ಸಹ ಆಗಿದ್ದು, ಈಗ ತೃಣಮೂಲ ಕಾಂಗ್ರೆಸ್ ಶಾಸಕರಾಗಿದ್ದಾರೆ.

    ಸೋವನ್ ಚಟರ್ಜಿ ಆಪ್ತ ಬೈಸಾಕಿ ಬ್ಯಾನರ್ಜಿ ಸಹ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೋವನ್ ಇತ್ತೀಚೆಗೆ ಹೆಚ್ಚು ಬಾರಿ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲದೆ, ಬಿಜೆಪಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಸೋವನ್ ಚಟರ್ಜಿ ಅವರನ್ನು ಮನವೊಲಿಸಲು ಮಮತಾ ಬ್ಯಾನರ್ಜಿ ಅವರು ಹಲವು ಬಾರಿ ಪ್ರಯತ್ನಿಸಿದ್ದರು. ಹುದ್ದೆಯನ್ನು ನೀಡುವುದಾಗಿ ಸಹ ಭರವಸೆ ನೀಡಿದ್ದರು. ಅಲ್ಲದೆ, ಮಮತಾ ಬ್ಯಾನರ್ಜಿ ಅವರ ಆಪ್ತ ಹಾಗೂ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಸೋವನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಈ ಪ್ರಯತ್ನ ವಿಫಲವಾಗಿತ್ತು.

    ಕಳೆದ ಹಲವು ತಿಂಗಳುಗಳಿಂದ ಸೋವನ್ ಟಿಎಂಸಿಯಿಂದ ಸಂಪೂರ್ಣವಾಗಿ ದೂರವಾಗುತ್ತಲೇ ಬಂದಿದ್ದರು. ಅಲ್ಲದೆ, ಕಳೆದ ವರ್ಷ ನವೆಂಬರ್‍ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋವನ್ ಅವರಿಗೆ ಕೋಲ್ಕತ್ತಾ ಮೇಯರ್ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ಆಗಿನಿಂದ ಮಮತಾ ಬ್ಯಾನರ್ಜಿ ಮತ್ತು ಸೋವನ್ ನಡುವಿನ ಬಿರುಕು, ಹಂತ ಹಂತವಾಗಿ ಹೆಚ್ಚಾಗಿತ್ತು. ಹೀಗಾಗಿ ಅಂತಿಮವಾಗಿ ಅವರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ಹಂತವನ್ನು ತಲುಪಿದೆ.

    ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಸೋವನ್ ಅವರು ಬಹುದೊಡ್ಡ ಕೊಡುಗೆ ನೀಡಿದ್ದರು. ಇದೀಗ ಸೋವನ್ ಬಿಜೆಪಿ ಸೇರಿರುವುದು ಬಂಗಾಳದ ರಾಜಕೀಯದಲ್ಲಿ ಬಹುದೊಡ್ಡ ಬೆಳವಣಿಗೆಯಗಿದೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ತಿಳಿಸಿದ್ದಾರೆ.

  • ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ಕೈವಾಡದ ಆರೋಪ

    ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ಕೈವಾಡದ ಆರೋಪ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕಾಶೀನಾಥ್ ಘೋಷ್ (45) ಕೊಲೆಯಾದ ಬಿಜೆಪಿ ಕಾರ್ಯಕರ್ತ. ಕಾಶೀನಾಥ್ ಟಿಎಂಸಿ ಕಾರ್ಯಕರ್ತ ಲಾಲ್‍ಚಂದ್ ಬಾಗ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಶೀನಾಥ್ ಇಂದು ಹೂಗ್ಲಿ ಜಿಲ್ಲೆಯ ಗೋಘಾಟ್ ಪ್ರದೇಶದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ನಕುಂದಾ ಎಂಬ ಪ್ರದೇಶದಲ್ಲಿ ಜುಲೈ 22ರಂದು ಲಾಲ್‍ಚಂದ್ ಕೊಲೆಯಾಗಿದ್ದ. ಈ ಪ್ರಕರಣದಲ್ಲಿ ಕಾಶೀನಾಥ್ ಭಾಗಿಯಾಗಿದ್ದ ಎಂದು ಟಿಎಂಸಿ ಗಂಭೀರವಾಗಿ ಆರೋಪಿಸಿತ್ತು. ಆದರೆ ಬಿಜೆಪಿ ನಾಯಕರು ಆರೋಪವನ್ನು ತಳ್ಳಿ ಹಾಕಿ, ನಿಜವಾದ ಹಂತಕರನ್ನು ರಕ್ಷಿಸಲು ಟಿಎಂಸಿ ನಾಯಕರು ಹೀಗೆ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಕಾಶೀನಾಥ್ ಶವವಾಗಿ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.

    ಈ ಕುರಿತು ಟ್ವೀಟ್ ಮಾಡಿರುವ ಬಂಗಾಳ ಬಿಜೆಪಿಯು, ಅರಂಬಾಗ್‍ನ ಬಿಜೆಪಿ ಬೂತ್ ಅಧ್ಯಕ್ಷ ಕಾಶೀನಾಥ್ ಘೋಷ್ ಅವರನ್ನು ಟಿಎಂಸಿ ಗೂಂಡಾಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.44ರಷ್ಟು ಮತ ಗಳಿಸಿದೆ. ಬಿಜೆಪಿ ನಾಯಕರ ಪಟ್ಟಿ ಸಿದ್ಧಪಡಿಸಿರುವ ಟಿಎಂಸಿ ಈ ಕೃತ್ಯ ಎಸಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರ ಬರುವ ಫಲಿತಾಂಶ ತಡೆಯಲು ಸಾಧ್ಯವಿಲ್ಲ. ಹುತಾತ್ಮ ಸಂಖ್ಯೆ 74 ಎಂದು ಬರೆದುಕೊಂಡಿದೆ.

    ಕಾಶೀನಾಥ್ ದೇಹದ ಮೇಲೆ ಗಾಯಗಳು ಕಂಡು ಬಂದಿದ್ದು, ಪ್ರಾಥಮಿಕ ವದಿಯ ಪ್ರಕಾರ ಇದೊಂದು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಗೋಘಾಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸಮೀರ್ ಡೇ ತಿಳಿಸಿದ್ದಾರೆ.

  • 13 ವರ್ಷದವನಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಟಿಎಂಸಿ ಸಂಸದ

    13 ವರ್ಷದವನಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಟಿಎಂಸಿ ಸಂಸದ

    ನವದೆಹಲಿ: ನಾನು 13 ವರ್ಷದವನಿದ್ದಾಗ ಕೋಲ್ಕತ್ತಾದ ಬಸ್‍ನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

    ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮಸೂದೆ-2019ಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿತು. ಈ ವೇಳೆ ಮಾತನಾಡಿದ ಸಂಸದರು, ನಾನು ಚಿಕ್ಕವನಿದ್ದಾಗ ಟೆನ್ನಿಸ್ ಆಡಿ ಶಾಟ್ರ್ಸ್ ಮೇಲೆ ಕಿಕ್ಕಿರಿದ ಬಸ್‍ನಲ್ಲಿ ಬರುತ್ತಿದ್ದೆ. ಆಗ ವ್ಯಕ್ತಿಯೊಬ್ಬ ನನ್ನ ತೊಡೆಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಹಿರಿಯರು ಇಂತಹ ವಿಷಯಗಳ ಬಗ್ಗೆ ಮಾತನಾಡಲು ಮಕ್ಕಳಿಗೆ ಧೈರ್ಯ ಬರುತ್ತದೆ ಎಂದು ಹೇಳಿದರು.

    ಪೋಕ್ಸೊ ಮಸೂದೆ-2019 ಮಸೂದೆಯ ಅನ್ವಯ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಲೈಂಗಿಕಚಿತ್ರಗಳಿಗೆ ಮಕ್ಕಳನ್ನು ಬಳಸಿಕೊಂಡ ಅಪರಾಧಿಗಳಿಗೆ ದಂಡ ಮತ್ತು ಸೆರೆವಾಸವನ್ನು ವಿಧಿಸಲು ಅವಕಾಶ ಮಾಡಿಕೊಡಲಿದೆ.

    ಈ ಮಸೂದೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮøತಿ ಇರಾನಿ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು. ಈ ವೇಳೆ ಮಾತನಾಡಿದ್ದ ಅವರು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅವಶ್ಯಕತೆ ಇದೆ. ಹೀಗಾಗಿ ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.

    ಮಸೂದೆಯ ಕುರಿತು ಚರ್ಚೆ ನಡೆದಾಗ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ನೆನೆದರು. (ಪೋಕ್ಸೊ) ಮಸೂದೆ-2019ಕ್ಕೆ ಬುಧವಾರ ರಾಜ್ಯಸಭೆಯು ಅನುಮೋದನೆ ನೀಡಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚಾಗಿದ್ದು, 2019ರಲ್ಲಿಯೇ ಪೋಕ್ಸೊ ಕಾಯ್ದೆ ಅಡಿ ಸುಮಾರು 12,609 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ದೇಶಾದ್ಯಂತ 1.6 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ವರದಿಯಾಗಿದೆ.

  • ಕೇಂದ್ರ ಸರ್ಕಾರ ಎರಡು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಉಳಿಯಲ್ಲ: ಮಮತಾ ಬ್ಯಾನರ್ಜಿ

    ಕೇಂದ್ರ ಸರ್ಕಾರ ಎರಡು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಉಳಿಯಲ್ಲ: ಮಮತಾ ಬ್ಯಾನರ್ಜಿ

    -ಟಿಎಂಸಿ ಶಾಸಕರಿಗೆ 2 ಕೋಟಿ, ಪೆಟ್ರೋಲ್ ಪಂಪ್ ಆಫರ್

    ಕೋಲ್ಕತ್ತಾ: ಕೇಂದ್ರದ ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವ ವಿಧಾನವನ್ನು ನೊಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸೇರದಿದ್ದಲ್ಲಿ ಚಿಟ್ ಫಂಡ್ ಹಗರಣ ಪ್ರಕರಣಗಳಲ್ಲಿ ಕೇಂದ್ರದ ಏಜೆನ್ಸಿಗಳ ಮೂಲಕ ದಾಳಿ ನಡೆಸಿ ಜೈಲಿಗೆ ಕಳುಹಿಸುವುದಾಗಿ ಟಿಎಂಸಿ ನಾಯಕರಿಗೆ ಬೆದರಿಕೆ ಹಾಕುತ್ತಿದೆ. ಈ ಮೂಲಕ ನಮ್ಮ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಸೇರುತ್ತೀರೋ ಇಲ್ಲವೋ ಜೈಲು ಸೇರುತ್ತೀರೋ ಎಂದು ಅವರಿಗೆ ಕೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

    ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಶಾಸಕರನ್ನು ಖರೀದಿಸುವುದರಲ್ಲೇ ಕಾಲ ಕಳೆಯುತ್ತಿದ್ದು, ಸರ್ಕಾರ ನಡೆಯುತ್ತಿರುವ ವಿಧಾನವನ್ನು ನೋಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ತೃಣಮೂಲ ಕಾಂಗ್ರೆಸ್ ಶಾಸಕರಿಗೆ 2 ಕೋಟಿ ರೂ. ಹಾಗೂ ಪೆಟ್ರೋಲ್ ಪಂಪ್ ಆಫರ್ ಮಾಡುತ್ತಿದೆ. ಕರ್ನಾಟಕದಲ್ಲಿ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿಯೂ ಸಹ ಬಿಜೆಪಿ ಕುದುರೆ ವ್ಯಾಪಾರಕ್ಕೆ ತೊಡಗಿಕೊಂಡಿದೆ ಎಂದು ದೂರಿದರು.

    ಬಿಜೆಪಿ ಈವರೆಗೆ ವಶಪಡಿಸಿಕೊಂಡಿರುವ ಕಪ್ಪುಹಣದ ಮಾಹಿತಿ ನೀಡುವಂತೆ ಜು.26ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಸಂಸತ್ ಸುಗಮವಾಗಿ ನಡೆಸುವ ಮನ್ನಣೆ ವಿರೋಧ ಪಕ್ಷಗಳಿಗೆ ಸಲ್ಲುತ್ತದೆ. ಅಧಿಕಾರದಲ್ಲಿರುವವರಿಗೆ ಅಲ್ಲ ಎಂದು ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.

  • ಡೋಂಟ್ ಟಚ್ ಮೈ ಸ್ಟಾಫ್: ವಿರೋಧ ಪಕ್ಷದ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ

    ಡೋಂಟ್ ಟಚ್ ಮೈ ಸ್ಟಾಫ್: ವಿರೋಧ ಪಕ್ಷದ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ

    ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿರೋಧ ಪಕ್ಷದ ಸದಸ್ಯರಿಗೆ ಡೋಂಟ್ ಟಚ್ ಮೈ ಸ್ಟಾಫ್ ಎಂದು ಗುಡುಗಿದ ಪ್ರಸಂಗ ಶುಕ್ರವಾರ ಅಧಿವೇಶನದಲ್ಲಿ ನಡೆದಿದೆ.

    ಪ್ರಶ್ನೋತ್ತರ ವೇಳೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ನಾಯಕರುಗಳು ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಇದಕ್ಕೆ ಆಸ್ಪದ ನೀಡದ ಓಂ ಬಿರ್ಲಾ ಅವರು, ನಿಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಿ ಎಂದು ಪ್ರತಿಭಟನಾನಿರತ ಸದಸ್ಯರಿಗೆ ಸೂಚನೆ ನೀಡಿದರು. ಆದರೆ ಪ್ರತಿಪಕ್ಷದ ಸದಸ್ಯರು ನಮಗೆ ನ್ಯಾಯ ಬೇಕು, ತಾನ್ ಶಾಹಿ ನಹಿ ಚಲೇಗಿ ಎಂದು ಘೋಷಣೆ ಕೂಗಲು ಆರಂಭಿಸಿದರು.

    ಪ್ರತಿಪಕ್ಷದ ಸದಸ್ಯರ ಘೋಷಣೆ ಜೋರಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಸದನದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಎತ್ತಬೇಡಿ. ಇದು ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಅದರಲ್ಲೂ ಪ್ರಮುಖವಾಗಿ ಸಂವಿಧಾನಿಕ ಹುದ್ದೆಗೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳಿದರು.

    ಪ್ರತಿಪಕ್ಷ ನಾಯಕರ ಪ್ರತಿಭಟನೆ ಮಾತ್ರ ಮುಂದುವರಿದಿತ್ತು. ಸ್ವಲ್ಪ ಸಮಯದ ನಂತರ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಶ್ನೋತ್ತರ ಅವಧಿಯ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

    ಬಳಿಕ ಮಾತನಾಡಿದ ಓಂ ಬಿರ್ಲಾ ಅವರು, ಕರ್ನಾಟಕ ರಾಜಕೀಯ ಬೆಳವಣಿಗೆ ವಿಚಾರವಾಗಿ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ಮಾಡಲು ಈ ಹಿಂದಿನ ಎರಡು ಬಾರಿ ಅವಕಾಶ ನೀಡಿದ್ದೆ ಎಂದು ಪ್ರಸ್ತಾಪಿಸಿದರು. ಇದರಿಂದಾಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷದ ಸದಸ್ಯರು ತಮ್ಮ ಆಸನದ ಕಡೆಗೆ ಮರಳಿದರು.

  • ದೀದಿಗೆ ಮತ್ತೆ ಶಾಕ್! ಟಿಎಂಸಿ, ಕಾಂಗ್ರೆಸ್, ಸಿಪಿಎಂನಿಂದ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧ

    ದೀದಿಗೆ ಮತ್ತೆ ಶಾಕ್! ಟಿಎಂಸಿ, ಕಾಂಗ್ರೆಸ್, ಸಿಪಿಎಂನಿಂದ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳಿಂದ 107 ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಹೇಳಿಕೆಯನ್ನು ಬಿಜೆಪಿ ನಾಯಕ ಮುಕುಲ್ ರಾಯ್ ನೀಡಿದ್ದಾರೆ.

    ಕೋಲ್ಕತ್ತಾದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಭಾರೀ ಬಹುಮತದ ಪರಿಣಾಮ ಪಶ್ಚಿಮ ಬಂಗಾಳದ ಅನೇಕ ಮುಖಂಡರು ಬಿಜೆಪಿ ಸೇರಲು ಬಯಸುತ್ತಿದ್ದಾರೆ. ಅಂತಹ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ತಿಂಗಳು ಹಿಂದಷ್ಟೇ ಟಿಎಂಸಿಯ ಇಬ್ಬರು ಶಾಸಕರಾದ ಸುನಿಲ್ ಸಿಂಗ್ ಮತ್ತು ಬಿಸ್ವಾಜಿತ್ ದಾಸ್ ಬಿಜೆಪಿ ಸೇರಿದ್ದರು. ಮೇ 28ರಂದು ಟಿಎಂಸಿಯ 50ರಿಂದ 60 ಕೌನ್ಸಿಲರ್ ಗಳು, ಇಬ್ಬರು ಹಾಗೂ ಸಿಪಿಎಂನ ಓರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    ನವದೆಹಲಿಯಲ್ಲಿ ಜೂನ್ 18ರಂದು ತೃಣಮೂಲ ಕಾಂಗ್ರೆಸ್‍ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ಕೈಲಾಶ್ ವಿಜಯವರ್ಗೀ ಅವರು, ನಮ್ಮ ಸಂಪರ್ಕದಲ್ಲಿ ಇನ್ನೂ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದರು.

    ಈ ಬೆಳವಣಿಗೆ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕೌನ್ಸಿಲರ್ ಗಳ ಸಭೆಯಲ್ಲಿ ಮಾತನಾಡಿದ್ದ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ದುರ್ಬಲ ಪಕ್ಷವಲ್ಲ. ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ. ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್ ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಗುಡುಗಿದ್ದರು.

  • ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    -ಜನ್ಮದಿಂದಲೂ ಮುಸ್ಲಿಂ, ಈಗಲೂ ಮುಸ್ಲಿಂ
    -ಫತ್ವಾ ಹೊರಡಿಸಿದವ್ರಿಗೆ ಸಂಸದೆ ತಿರುಗೇಟು

    ಕೋಲ್ಕತ್ತಾ: ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದರು.

    ಸಂಸದೆಯಾಗಿ ಆಯ್ಕೆಯಾಗಿರುವ ನಟಿ ನುಸ್ರತ್ ಜಹಾನ್ ಅವರನ್ನು ಇಸ್ಕಾನ್ ದೇವಾಲಯ ಮಂಡಳಿ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕೆಲವು ದಿನಗಳ ಹಿಂದೆ ನುಸ್ರತ್ ಜಹಾನ್ ಕೋಲ್ಕತ್ತಾ ಹಿಂದೂ ಉದ್ಯಮಿ ನಿಖಿಲ್ ಜೈನ್ ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಸೀರೆ ತೊಟ್ಟು, ಸಿಂಧೂರವಿಟ್ಟು, ಕೈ ಬಳೆ ಹಾಕಿ ನವ ವಧುವಿನಂತೆ ಸಂಸತ್ತಿಗೆ ಆಗಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುರ್ಖಾ ಧರಿಸದೇ ಬಂದಿದ್ದಕ್ಕೆ ಕೆಲವು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ನುಸ್ರತ್ ಜಹಾನ್ ಗುರಿಯಾಗಿದ್ದರು.

    ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾಗೆ ಪ್ರತಿಕ್ರಿಯಿಸಿದ ಸಂಸದೆ, ಆಧಾರರಹಿತ ವಿಚಾರಗಳತ್ತ ನಾನು ಗಮನ ನೀಡಲ್ಲ. ನನಗೆ ನನ್ನ ಧರ್ಮ ಯಾವುದು ಎಂಬುವುದು ಗೊತ್ತಿದೆ. ನಾನು ಜನ್ಮದಿಂದಲೂ ಮುಸ್ಲಿಂ, ಇಂದಿಗೂ ಮುಸ್ಲಿಂ ಧರ್ಮದಲ್ಲಿ ನಾನಿದ್ದೇನೆ. ಇದು ಧರ್ಮ ಮತ್ತು ನಂಬಿಕೆಯ ಪ್ರಶ್ನೆಯಾಗಿದ್ದು, ಕೆಲವರು ಈ ಕುರಿತು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದು ತಿರುಗೇಟು ನೀಡಿದರು.

    ಪೂಜೆ ಸಲ್ಲಿಸಿದ ಸಂಸದೆ:
    ಯಾತ್ರೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ ನುಸ್ರತ್ ಜಹಾನ್ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನುಸ್ರತ್ ಜಹಾನ್ ಮಂಗಲಸೂತ್ರ, ಸಿಂಧೂರವಿಟ್ಟು ಆಗಮಿಸಿದ್ದರು. ಹಿಂದೂ ಮಹಿಳೆಯರಂತೆ ವೇಷಭೂಷಣ ತೊಟ್ಟಿದ್ದಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ಹೊಸ ಭಾರತದ ನವ ನಾಗರೀಕರು. ಹಾಗಾಗಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಅವಶ್ಯಕ. ಕೆಲವರು ಮತಗಳಿಗಾಗಿ ದೇವರನ್ನು ವಿಗಂಡನೆ ಮಾಡಲು ಹೊರಟಿದ್ದಾರೆ. ನಾನು ಮುಸ್ಲಿಂ ಮತ್ತು ಜಾತ್ಯಾತೀತ ಭಾರತದ ಮಹಿಳೆ. ದೇವರ ಹೆಸರಿನಲ್ಲಿ ಜನರನ್ನು ವಿಭಜಿಸುವುದು ನನ್ನ ಧರ್ಮ ಎಲ್ಲಿಯೂ ಹೇಳಿಲ್ಲ ಎಂದು ನುಸ್ರತ್ ಜಹಾನ್ ತಿಳಿಸಿದರು.