Tag: ಟಿಎಂಸಿ

  • ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    – 3 ಕ್ಷೇತ್ರಗಳಿಂದ 115ಕ್ಕೆ ಬಿಜೆಪಿ ಜಂಪ್
    – ವರ್ಕೌಟ್ ಆಗದ ಕಾಂಗ್ರೆಸ್ ಮೈತ್ರಿ ತಂತ್ರಗಾರಿಕೆ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ-ಸೀ ವೋಟರ್ ಸಮೀಕ್ಷೆ ಹೇಳಿದೆ. 292 ಕ್ಷೇತ್ರಗಳಲ್ಲಿ ಕೇವಲ ಮೂರರಲ್ಲಿ ಗೆದ್ದಿದ್ದ ಬಿಜೆಪಿ 115ರಲ್ಲಿ ಗೆಲ್ಲಲಿದೆ ಎಂದು ಹೇಳಿದೆ.

    2016ರ ಚುನಾವಣೆಯಲ್ಲಿ 211 ಕ್ಷೇತ್ರಗಳಲ್ಲಿ 211ರಲ್ಲಿ ಗೆಲುವು ದಾಖಲಿಸಿತ್ತು. ಈ ಬಾರಿ ಬಿಜೆಪಿಯ ತೀವ್ರ ಪೈಪೋಟಿ ನಡುವೆ 158 ರಲ್ಲಿ ಗೆಲ್ಲಲಿದೆ ಎಂದು ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಹೇಳಿದೆ. ಕಳೆದ ಬಾರಿಗಿಂತ ಟಿಎಂಸಿ 53 ಸ್ಥಾನ ಕಳೆದುಕೊಳ್ಳಲಿದೆ.

    ಪಶ್ಚಿಮ ಬಂಗಾಳದಲ್ಲಿ ಬೃಹತ್ ಸಮಾವೇಶದ ಮೂಲಕ ಪ್ರಚಾರ ನಡೆಸಿದ್ದ ಬಿಜೆಪಿ 2016ರ ಚುನಾವಣೆಗಿಂತ 112ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಮಲ ಬಾವುಟ ಹಾರಿಸಲಿದೆ ಎಂದು ಸಮೀಕ್ಷೆ ಹೇಳಿದೆ. 2016ರಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದ ಭಾಜಪ ಈ ಬಾರಿ 115ರಲ್ಲಿ ಜಯದ ಮಾಲೆ ಧರಿಸಲಿದೆ ಎಂಬುವುದು ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ.

    ಇನ್ನೂ ಕಾಂಗ್ರೆಸ್ ಮೈತ್ರಿ (ಕಾಂಗ್ರೆಸ್+ಎಡ+ಐಎಸ್‍ಎಫ್) 19 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆಗಳಿವೆ. ಕಾಂಗ್ರೆಸ್ ಮೈತ್ರಿ ಪಶ್ಚಿಮ ಬಂಗಾಳದಲ್ಲಿಯೂ ವರ್ಕೌಟ್ ಆದಂತೆ ಕಾಣಿಸುತ್ತಿಲ್ಲ. ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದ ಜನತೆ ಯಾವುದೇ ಪಕ್ಷೇತರರಿಗೆ ಮಣೆ ಹಾಕಿಲ್ಲ.

    ಶೇಕಡಾವಾರು ಮತಗಳಿಕೆ: ಟೈಮ್ಸ್ ನೌ – ಸೀ ವೋಟರ್ ಸಮೀಕ್ಷೆ ಪ್ರಕಾರ ಟಿಎಂಸಿ ಶೇ.42.1 (-ಶೇ.2.6), ಬಿಜೆಪಿ ಶೇ.39.2 (+ಶೇ.30), ಕಾಂಗ್ರೆಸ್ ಮೈತ್ರಿ ಶೇ.15.4 (-ಶೇ.23.8) ಮತ್ತು ಇತರರು ಶೇ.3.3 (-ಶೇ.3.6) ರಷ್ಟಿದೆ.

    ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು 148 ಶಾಸಕರ ಬಲ ಬೇಕು. ಈ ಸಮೀಕ್ಷೆಯ ಪ್ರಕಾರ ಟಿಎಂಸಿ ಸರಳವಾಗಿ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲಿದೆ. ಆದ್ರೆ ಸಿಎನ್‍ಎಕ್ಸ್ ಟಿಎಂಸಿಗೆ 128-138, ಬಿಜೆಪಿಗೆ 138-148 ಮತ್ತು ಕಾಂಗ್ರೆಸ್ ಮೈತ್ರಿ ಕೇವಲ 11-21ರ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.

  • ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಧರಣಿ

    ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಧರಣಿ

    ಕೋಲ್ಕತ್ತಾ: ಪ್ರಚಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಧರಣಿ ನಡೆಸಿದ್ದಾರೆ.

    ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿಗೆ ವೀಲ್ಹ್ ಚೇರ್ ಮೇಲೆಯೇ ಬಂದ ಮಮತಾ ಬ್ಯಾನರ್ಜಿ ಕಪ್ಪು ಬಣ್ಣದ ಮಾಸ್ಕ್ ಮತ್ತು ಶಾಲ್ ಧರಿಸುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ವಿರೋಧಿಸಿದ್ದಾರೆ. ಧರಣಿ ವೇಳೆ ಪೇಟಿಂಗ್ ಮಾಡಿದ ದೀದಿ ನಂತ್ರ ಎಲ್ಲರಿಗೂ ತೋರಿಸಿದರು.

    ಈ ಹಿಂದೆ ಅಲ್ಪಸಂಖ್ಯಾತರ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಚುನಾವಣಾ ಆಯೋಗ ಕಾರಣ ಕೇಳಿ 2 ನೋಟಿಸ್ ಜಾರಿ ಮಾಡಿತ್ತು. ಇದಾದ ಬಳಿಕವೂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ವಿರುದ್ಧ ಹೇಳಿಕೆ ನೀಡಿದ್ದರು. ನಿರಂತರವಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ರಾತ್ರಿ 8 ಗಂಟೆಯವರೆಗೆ ಪ್ರಚಾರಕ್ಕೆ ನಿರ್ಬಂಧ ಹೇರಿ ಆದೇಶ ಪ್ರಕಟಿಸಿತ್ತು.

    ನಿರ್ಬಂಧ ಯಾಕೆ?
    ಕೂಚ್‍ಬಿಹಾರ್ ಜಿಲ್ಲೆಯ ಸಿತಾಲ್‍ಕುಚಿಯಲ್ಲಿನ ಮತದಾನದ ವೇಳೆ ನಡೆದ ಹಿಂಸಾಚಾರದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಣತಿಯಂತೆ ಈ ಹಿಂಸಾಚಾರ ನಡೆದಿದ್ದು, ಭದ್ರತಾ ಪಡೆಗಳು ಅಮಿತ್ ಶಾ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಮತಾ ಆಗ್ರಹಿಸಿದ್ದರು.

    ಘಟನೆ ದಿನವೇ ಚುನಾವಣಾ ಆಯೋಗ ಪೊಲೀಸ್ ಹಾಗೂ ಚುನಾವಣಾ ಅಧಿಕಾರಿಗಳಿಂದ ವರದಿ ತರಿಸಿಕೊಂಡಿತ್ತು. ದುಷ್ಕರ್ಮಿಗಳು ಭದ್ರತಾ ಪಡೆಗಳಿಂದ ಶಸ್ತಾಸ್ತ್ರ ಕಸಿಯಲು ಬಂದಾಗ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಲಾಗಿದೆ. ಇದರ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

    ಸಿಆರ್ಪಿಎಫ್ ನಿರ್ದೇಶಕ ಕುಲದ್ದೀಪ್ ಸಿಂಗ್ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ನಿರ್ದೇಶನದಂತೆ ಸಿಆರ್ಪಿಎಫ್ ಕೆಲಸ ಮಾಡುತ್ತದೆ. ರಾಜಕೀಯ ಪಕ್ಷಗಳ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ ಎಂದು ತಿಳಿಸಿದ್ದರು.

    ಕೂಚ್‍ಬಿಹಾರ್ ಸ್ಥಳಕ್ಕೆ ಯಾವುಬ್ಬ ರಾಜಕೀಯ ವ್ಯಕ್ತಿ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ಎಂಸಿಸಿ ಮೋಡಿ ಕೋಡ್ ಆಫ್ ಕಂಡಕ್ಟ್ ಎಂದು ಬದಲಾಗಬೇಕು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಹಿಂದೆ ಮುಸ್ಲಿಮ್ ಮತದಾರರು ವಿವಿಧ ರಾಜಕೀಯ ಪಕ್ಷಗಳಿಗೆ ಮತವನ್ನು ಹಾಕಿ ವಿಭಜನೆ ಮಾಡದೇ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಬೇಕು ಎಂದು ಮನವಿ ಮಾಡಿದ್ದರು. ಚುನಾವಣಾ ಸಮಯದಲ್ಲಿ ಕೋಮು ನೆಲೆಯಲ್ಲಿ ಮತ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದಾದ ಬಳಿಕ ಆಯೋಗ ಮಮತಾಗೆ ನೋಟಿಸ್ ನೀಡಿತ್ತು.

  • ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ – ಗುಂಡೇಟಿಗೆ ನಾಲ್ವರು ಬಲಿ

    – ಆರೋಪ, ಪ್ರತ್ಯಾರೋಪದಲ್ಲಿ ಟಿಎಂಸಿ, ಬಿಜೆಪಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ಕನೇ ಹಂತದ ಮತದಾನದ ವೇಳೆ ನೆತ್ತರು ಚೆಲ್ಲಿದೆ. ಬಂಗಾಳದ ಕೂಚ್‍ಬೆಹಾರದ ಮತಗಟ್ಟೆ ಮುಂಭಾಗ ಗೋಲಿಬಾರ್ ನಡೆದಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.

    ನಡೆದಿದ್ದೇನು?: ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸಿಟಾಲ್ಕು ಚಿಯಾಟ್‍ನ ಮತದಾನದ ಕೇಂದ್ರದಲ್ಲಿ ಅಪರಿಚಿತರು ಕ್ಯೂಆರ್‍ಟಿ (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಕ್ಯೂಆರ್‍ಟಿ ವಾಹನ ಧ್ವಂಸಗೊಳಿಸಲು ಮುಂದಾಗಿ, ಗನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ಅಪರಿಚಿತರ ಚಲನವಲನ ಗಮನಿಸಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿ ವೇಳೆ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನ ಹಮಿದುಲ್ ಹಕ್, ಮನಿರೂಲ್ ಹಕಂ ಸಮಿಯುಲ್ ಹಕ್ ಮತ್ತು ಅಜ್ಮದ್ ಹುಸೈನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಗುರುತು ಪತ್ತೆಯಾಗಿಲ್ಲ.

    ಎಡಿಜಿ ಸ್ಪಷ್ಟನೆ: ಗೋಲಿಬಾರ್ ಸಂಬಂಧ ಒಂದು ಗಂಟೆಯಲ್ಲಿ ಪ್ರಾಥಮಿಕ ವರದಿ ನೀಡುವಂತೆ ಚುನಾವಣಾ ಆಯೋಗ ಕೂಚಿಬೆಹಾರನ ಡಿಇಓಗೆ ಸೂಚನೆ ನೀಡಿದೆ. ಪಶ್ಚಿಮ ಬಂಗಾಳದ ಎಡಿಜಿ ಜಗಮೋಹನ್ ನಾಲ್ವರು ಮೃತಪಟ್ಟಿರೋದನ್ನು ಖಚಿತ ಪಡಿಸಿದ್ದಾರೆ. ಅಪರಿಚಿತರು ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದಾಗ ಸಿಐಎಸ್‍ಎಫ್ ನ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಗುಂಡು ಹಾರಿಸ್ತೀರಾ?: ಈ ಕುರಿತು ಟಿಎಂಸಿ ಸಂಸದ ಡೆರೆಕೆ ಓ ಬ್ರಾಯನ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನೀವು ನಮ್ಮನ್ನ ಸೋಲಿಸಲು ಆಗದ್ದಕ್ಕೆ, ಗುಂಡು ಹಾರಿಸ್ತೀರಾ? ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಫೈರಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಕೆಲ ದಿನಗಳ ಹಿಂದೆ ಇಲ್ಲಿಯ ಡಿಜಿ, ಎಡಿಜಿ ಮತ್ತು ಗೋಲಿಬಾರ್ ನಡೆದ ಸ್ಥಳದ ಎಸ್‍ಪಿಯನ್ನ ಸಹ ಬದಲಿಸಿತ್ತು ಎಂದು ಆರೋಪಿಸಿದ್ದಾರೆ.

    ಮತ್ತೋರ್ವ ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಸಿಎಪಿಎಫ್ ನವರು ನಾಲ್ವರನ್ನ ಕೊಲೆ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗವೇ ಕಾರಣ. ಮೋದಿ-ಅಮಿತ್ ಶಾ ಫೋರ್ಸ್ ನಿಯಂತ್ರಣ ಮಾಡಲು ಆಗದವರು. ಈ ಗೊಂಬೆಗಳನ್ನ ಸದನದಲ್ಲಿ ತೋರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಪ್ರತಿಕ್ರಿಯೆ: ಸಿಲಿಗುಡಿ ಬಿಜೆಪಿ ರ್ಯಾಲಿಯಲ್ಲಿ ಕೂಚ್‍ಬೆಹರಾ ಗೋಲಿಬಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ದೀದಿ ಮತ್ತು ಅವರ ಗೂಂಡಾಗಳು ಬಿಜೆಪಿಯ ಗೆಲುವನ್ನು ಕಂಡು ಚಡಪಡಿಸುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಹಿಂಸೆಯ ಮೊರೆ ಹೋಗಿದ್ದಾರೆ. ಆದ್ರೆ ಈ ಹಿಂಸೆ ಬಂಗಾಲದಿಂದ ದೀದಿಯನ್ನ ಹೊರ ಕಳುಹಿಸೋದರಿಂದ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

  • ಅಂದು ಬಿಜೆಪಿ ವಾಹನ, ಇಂದು ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ

    ಅಂದು ಬಿಜೆಪಿ ವಾಹನ, ಇಂದು ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ

    ಕೋಲ್ಕತ್ತಾ: ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿದೆ. ಪಶ್ಚಿಮ ಬಂಗಾಳಕ್ಕೆ ಮೂರನೇ ಹಂತದಲ್ಲಿ 31 ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ವೋಟಿಂಗ್ ನಡೆಯುತ್ತಿದೆ.

    ಮತದಾನದ ಹಿಂದಿನ ದಿನ ಟಿಎಂಸಿ ನಾಯಕ ಗೌತಮ್ ಘೋಷ್ ಮನೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಲಭ್ಯವಾಗಿವೆ.ಚುನಾವಣೆಯಲ್ಲಿ ಟಿಎಂಸಿ ಗೋಲ್ಮಾಲ್ ಮಾಡಲು ಮುಂದಾಗಿದೆ ಎಂದು ಉತ್ತರ ಉಲುಬೆರಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಆರೋಪಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿ ಹೆಚ್ಚಿನ ಜನ ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕಾಗಿ ಚುನಾವಣಾ ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದ ಗುಂಪುಗಳನ್ನು ಚದುರಿಸಿದ್ದಾರೆ.

    ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಲಭ್ಯವಾದ ಹಿನ್ನೆಲೆ ಚುನಾವಣಾ ಆಯೋಗ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಅಲ್ಲಿ ಸಿಕ್ಕಿರೋದು ರಿಸರ್ವ್ ಇವಿಎಂ. ಅದನ್ನ ಮತದಾನಕ್ಕಾಗಿ ಬಳಸಲ್ಲ. ಚುನಾವಣಾ ಅಧಿಕಾರಿ ಮಶೀನ್ ಜೊತೆ ಸಂಬಂಧಿಕರ ಮನೆಗೆ ಮಲಗಲು ತೆರಳಿದ್ದು ನಿಯಮ ಉಲ್ಲಂಘಟನೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈ ಸಂಬಂಧ ಟಿಎಂಸಿ ನಾಯಕ ಗೌತಮ್ ಘೋಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ವಾಹನದಲ್ಲಿ ಇವಿಎಂ ಸಾಗಿಸಲಾಗಿತ್ತು. ಇದನ್ನೂ ಓದಿ: ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ

  • ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸಿಎಂ ಆಗ್ತಾರೆ – ದೀದಿ ಬೆಂಬಲಕ್ಕೆ ನಿಂತ ಜಯಾ ಬಚ್ಚನ್

    ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸಿಎಂ ಆಗ್ತಾರೆ – ದೀದಿ ಬೆಂಬಲಕ್ಕೆ ನಿಂತ ಜಯಾ ಬಚ್ಚನ್

    ಕೋಲ್ಕತ್ತಾ: ಟಿಎಂಸಿ ಮುಖ್ಯಸ್ಥೆ, ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ನಟಿ, ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಭವಿಷ್ಯ ನುಡಿದಿದ್ದಾರೆ.

    ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ನಾಯಕಿಯಾಗಿರುವ ಜಯಾ ಬಚ್ಚನ್ ಇವತ್ತು ಟಿಎಂಸಿ ಅಭ್ಯರ್ಥಿಗಳ ಪರವಾಗಿ ನಡೆದ ರೋಡ್ ಶೋನಲ್ಲಿ ಭಾಗಿಯಾಗಿ ಮತ ಯಾಚನೆ ಮಾಡಿದರು. ಟಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಅರುಣ್ ವಿಶ್ವಾಸ್ ಕಣಕ್ಕಿಳಿಸಿದ್ದಾರೆ. ಬಿಜೆಪಿ ಪರವಾಗಿ ಕೇಂದ್ರ ಸಚಿವೆ ಬಬುಲ್ ಸುಪ್ರಿಯೋ ಚುನಾವಣೆ ಮೈದಾನದಲ್ಲಿದ್ದಾರೆ.

    ರೋಡ್ ಶೋ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಯಾ ಬಚ್ಚನ್, ಪಶ್ಚಿಮ ಬಂಗಾಳದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಆಗಲಿದೆ. ಅದು ಕೇವಲ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಸಿಎಂ ಆದಾಗ ಮಾತ್ರ ಸಾಧ್ಯ ಎಂದು ಹೇಳಿದರು. ಇತ್ತ ಟಿಎಂಸಿಗೆ ಸಾಥ್ ನೀಡಿದ್ದಕ್ಕೆ ಜಯಾ ಬಚ್ಚನ್ ಮತ್ತು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಮಮತಾ ಬ್ಯಾನರ್ಜಿ ಧನ್ಯವಾದ ಸಲ್ಲಿಸಿದ್ದಾರೆ.

    ಜಯಾ ಬಚ್ಚನ್ ಕ್ಯಾಂಪೇನ್ ಕುರಿತು ಪ್ರತಿಕ್ರಿಯಿಸಿರುವ ಬಬುಲ್ ಸುಪ್ರಿಯೋ, ಅವರು ನೇರವಾಗಿ ಮಾತನಾಡುವ ನಾಯಕಿ. ಪಕ್ಷಗಳ ಆದೇಶದ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರವಾಗಿ ಚುನಾವಣೆ ಪ್ರಚಾರ ನಡೆಸುತ್ತಿರಬಹುದು. ಬಚ್ಚನ್ ಕುಟುಂಬದ ಆಪ್ತರಲ್ಲಿ ನಾನು ಒಬ್ಬ. ಕ್ಯಾಂಪೇನ್ ನಲ್ಲಿ ಬಿಜೆಪಿ ವಿರುದ್ಧ ಆರೋಪಗಳನ್ನ ಮಾಡಬಹುದು, ಆದ್ರೆ ನನ್ನ ವಿರುದ್ಧ ಜಯಾಜೀ ಮಾತನಾಡಲಾರು ಎಂದು ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಸಿನಿಮಾಗಳ ಹಾಡುಗಳಿಗೆ ಬಬೂಲ್ ಸುಪ್ರಿಯೋ ಧ್ವನಿ ನೀಡಿದ್ದಾರೆ. ಇದನ್ನೂ ಓದಿ: ಇಷ್ಟು ಕೆಟ್ಟ ಪ್ರಧಾನಿ, ಗೃಹ ಸಚಿವರನ್ನ ನೋಡಿಯೇ ಇಲ್ಲ: ದೀದಿ ವಾಗ್ದಾಳಿ

  • ಇಷ್ಟು ಕೆಟ್ಟ ಪ್ರಧಾನಿ, ಗೃಹ ಸಚಿವರನ್ನ ನೋಡಿಯೇ ಇಲ್ಲ: ದೀದಿ ವಾಗ್ದಾಳಿ

    ಇಷ್ಟು ಕೆಟ್ಟ ಪ್ರಧಾನಿ, ಗೃಹ ಸಚಿವರನ್ನ ನೋಡಿಯೇ ಇಲ್ಲ: ದೀದಿ ವಾಗ್ದಾಳಿ

    – ನಾನಾಗಿಯೇ ಹಿಂದೆ ಸರಿಯೋವರೆಗೂ ನನ್ನನ್ನ ಹಿಂದಿಕ್ಕಲು ಸಾಧ್ಯ ಇಲ್ಲ

    ಕೋಲ್ಕತ್ತಾ: ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕೆಟ್ಟ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರನ್ನ ನೋಡಿಲ್ಲ ಎಂದು ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರಣಕಣ ದಿನದಿಂದ ದಿನಕ್ಕೆ ಅಬ್ಬರ ಪಡೆದುಕೊಳ್ಳುತ್ತಿದೆ.

    ಹೂಗ್ಲಿಯ ಫುರೂಶುರಾ ಸಮಾವೇಶದಲ್ಲಿ ಭಾಗಿಯಾಗಿದ್ದ ಮಮತಾ ಬ್ಯಾನರ್ಜಿ, ಆರಂಭದಿಂದಲೂ ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಏಳು ಬಾರಿ ಸಂಸದೆಯಾಗಿದ್ದೇನೆ. ರಾಜಕೀಯ ಜೀವನದಲ್ಲಿ ಹಲವು ಪ್ರಧಾನಿಗಳು ಮತ್ತ ಸಚಿವರನ್ನ ಕಂಡಿದ್ದೇನೆ. ಆದ್ರೆ ಎಂದೂ ಇಷ್ಟು ಕೆಟ್ಟ ಸರ್ಕಾರವನ್ನ ನೋಡಿರಲಿಲ್ಲ.

    ಕೊಲೆ ಮಾಡುವ, ಸುಳ್ಳು ಹೇಳುವವರು ಬಂಗಾಳಕ್ಕೆ ಬಂದಿದ್ದಾರೆ. ಬಂಗಾಳದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬದಲಾವಣೆಗಾಗಿ ಬಂದಿದ್ದೇವೆ ಎಂದು ಸಾಲು ಸಾಲು ಸುಳ್ಳುಗಳನ್ನ ಹೇಳಿ ಮತ ಕೇಳುತ್ತಿದ್ದಾರೆ. ಎಲ್ಲಯವರೆಗೂ ನಾನೇ ಹಿಂದೆ ಸರಿಯಲ್ಲವೋ, ಅಲ್ಲಿಯವರೆಗೂ ನನ್ನ ಹಿಂದಿಕ್ಕಿಲು ಸಾಧ್ಯವಿಲ್ಲ ಎಂದು ಗುಡುಗಿದರು.

    ಟಿಎಂಸಿ ಮತ್ತು ಸಿಪಿಐಎಂ ತೊರೆದು ಬಿಜೆಪಿ ಸೇರಿದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ನಮ್ಮಲ್ಲಿಯ ಕೆಲ ಮೀರ್ ಜಾಫರ್ ಗಳು ಬಿಜೆಪಿಗೆ ಹೋದರು. ಅವರಿಗೆ ಸುಳ್ಳು ಹೇಳೋದು ಹೊರತಾಗಿ ಏನೂ ಗೊತ್ತಿಲ್ಲ. ಗೃಹ ಸಚಿವರು ಟಿಎಂಸಿ ದೇಶ ದ್ರೋಹಿಯಾಗಿದ್ದು, ದೇಶದ ಬಗ್ಗೆ ಪ್ರೀತಿ ಹೊಂದಿಲ್ಲ ಅಂತ ಆರೋಪಿಸುತ್ತಾರೆ. ಗೃಹ ಸಚಿವರೇ ನೀವು ದೆಹಲಿಯಲ್ಲ ಎಷ್ಟು ಜನರನ್ನು ಕೊಲೆ ಮಾಡಿದ್ರಿ? ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಎಷ್ಟು ಸಾವನ್ನಪ್ಪಿದ್ರು. ನೀವು ದೇಶಪ್ರೇಮಿಗಳು ನಾವು ದೇಶದ್ರೋಹಿಗಳಾ ಎಂದು ಪ್ರಶ್ನಿಸಿದರು.

    ಇದಕ್ಕೂ ಮೊದಲು ಹೂಗ್ಲಿಯ ಸಮಾವೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್, ಕಾಶ್ಮೀರದಲ್ಲಿದ್ದ ಗೂಂಡಾ ರಾಜಕಾರಣದ ಬಂಗಾಳದಲ್ಲಿದೆ. ಈಗ ಕಾಶ್ಮೀರ ಶಾಂತವಾಗಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬಂಗಾಳದ ಶಾಂತಿಗಾಗಿ ಬಿಜೆಪಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಬಿಜೆಪಿಗೆ ಮತ ಹಾಕಿದ್ರೆ ಎಲ್ಲರನ್ನೂ ರಾಜ್ಯದಿಂದ ಓಡಿಸ್ತಾರೆ: ಮಮತಾ ಬ್ಯಾನರ್ಜಿ

    ಬಿಜೆಪಿಗೆ ಮತ ಹಾಕಿದ್ರೆ ಎಲ್ಲರನ್ನೂ ರಾಜ್ಯದಿಂದ ಓಡಿಸ್ತಾರೆ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಎಲ್ಲರನ್ನೂ ಪಶ್ಚಿಮ ಬಂಗಾಳದಿಂದ ಓಡಿಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಎರಡನೇ ಸುತ್ತಿನ ಮತದಾನ ಹತ್ತಿರವಾಗುತ್ತಿದ್ದಂತೆ ರಾಜಕೀಯ ರ್ಯಾಲಿಗಳು ಜೋರಾಗಿದ್ದು, ಇಂದು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ 8 ಕಿ.ಮೀ. ವ್ಹೀಲ್ ಚೇರ್ ಮೂಲಕವೇ ಪಾದಯಾತ್ರೆ ನಡೆಸಿದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದರೆ ಪ್ರತಿಯೊಬ್ಬರನ್ನೂ ಈ ರಾಜ್ಯದಿಂದ ಹೊರಹಾಕಲಿದೆ ಎಂದರು.

    ಒಂದು ವೇಳೆ ನೀವು ಬಿಜೆಪಿಗೆ ಮತ ಹಾಕಿದರೆ ಅವರು ನಿಮ್ಮನ್ನು ರಾಜ್ಯದಿಂದಲೇ ಓಡಿಸುತ್ತಾರೆ. ಗೂಂಡಾಗಳನ್ನು ಇಟ್ಟುಕೊಂಡರೆ ಅವರು ಎಲ್ಲವನ್ನೂ ಹಿಡಿದಿಟ್ಟುಕೊಳ್ಳುತ್ತಾರೆ. ಬಂಗಾಳದ ಅಸ್ತಿತ್ವವನ್ನು ಸೆರೆಹಿಡಿಯುತ್ತಾರೆ. ಆದರೆ ಟಿಎಂಸಿಗೆ ಮತ ಹಾಕಿದರೆ ನಿಮ್ಮ ಮನೆ ಬಾಗಿಲಿಗೆ ಉಚಿತ ಪಡಿತರ ಬರಲಿದೆ ಎಂದು ಗುಡುಗಿದ್ದಾರೆ.

    ಕ್ಷೇತ್ರದಲ್ಲಿ ಗೆದ್ದ ನಂತರ ನಂದಿಗ್ರಾಮದಲ್ಲಿ ಕಚೇರಿ ತೆರೆಯುತ್ತೇನೆ. ಈ ಆಟದಲ್ಲಿ ನಾವು ಗೆಲ್ಲಬೇಕು. ಬಿಜೆಪಿಯವರು ಗೂಂಡಾಗಿರಿ ಮಾಡಲು ಪ್ರಯತ್ನಿಸಿದರೆ ಪಾತ್ರೆ ಹಾಗೂ ಪೊರಕೆಗಳ ಮೂಲಕವೇ ಓಡಿಸಬೇಕು ಎಂದರು.

    ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಅವರ ಭೂಮಿಯನ್ನು ಕದಿಯುತ್ತಿದ್ದಾರೆ. ಅವರ ಭೂಮಿ, ಪಶ್ಚಿಮ ಬಂಗಾಳ, ಪಶ್ಚಿಮ ಬಂಗಾಳದ ಸಂಸ್ಕøತಿಯನ್ನು ಲೂಟಿ ಮಾಡಲು ಬಿಡಬೇಡಿ. ಅಲ್ಲದೆ ನಮ್ಮ ತಾಯಿ, ಸಹೋದರಿಯರ ಗೌರವವನ್ನು ಹಾಳು ಮಾಡಲು ಬಿಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಂಗಾಳದಲ್ಲಿ ಮೊದಲ ಹಂತದ ಮತದಾನ – ಟಿಎಂಸಿ V/s ಬಿಜೆಪಿ, ಕಾಂಗ್ರೆಸ್ ಮತ್ತು CPI(M) ನೆಪ ಮಾತ್ರಕ್ಕೆ ಸ್ಪರ್ಧೆ

    ಬಂಗಾಳದಲ್ಲಿ ಮೊದಲ ಹಂತದ ಮತದಾನ – ಟಿಎಂಸಿ V/s ಬಿಜೆಪಿ, ಕಾಂಗ್ರೆಸ್ ಮತ್ತು CPI(M) ನೆಪ ಮಾತ್ರಕ್ಕೆ ಸ್ಪರ್ಧೆ

    ನವದೆಹಲಿ: ಪಂಚ ರಾಜ್ಯಗಳ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಪಶ್ಚಿಮ ಬಂಗಾಳದಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆಯಲಿದೆ. 294 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

    21 ಮಹಿಳೆಯರು ಸೇರಿ 191 ಅಭ್ಯರ್ಥಿಗಳು ಕಣದಲ್ಲಿದ್ದು ಜನರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಸೆಣಸಾಟವಿರುವ ಹಿನ್ನೆಲೆ ಮೊದಲ ಹಂತದ ಮತದಾನಕ್ಕೆ ಭಾರೀ ಬಿಗಿ ಭದ್ರತೆ ನಿಯೋಜನೆ ಮಾಡಿದ್ದು 732 (ಸಿಎಪಿಎಫ್) ಸಶಸ್ತ್ರ ಮೀಸಲು ಪಡೆ ಕಂಪನಿಗಳ ನೇಮಕ ಮಾಡಿದೆ.

    ಸದ್ಯ ಚುನಾವಣೆ ನಡೆಯುತ್ತಿರುವ 30 ಕ್ಷೇತ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಟಿಎಂಸಿ ಜಯಭೇರಿ ಬಾರಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ 18 ಕ್ಷೇತ್ರಗಳನ್ನು ಗೆದ್ದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.

    ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಗೋಪಿ ಬಲ್ಲವಪುರ, ಸೆಲ್ಬೋನಿ, ಜಾರ್ಗ್‍ಂಕಂತಿ, ಉತ್ತರಕರಪುರ, ರಾಮನಗರ, ಕಂತಿ ಉತ್ತರ, ಜಾರ್ಗಮ್ ಕ್ಷೇತ್ರಗಳು ಸೂಕ್ಷ್ಮ ಕ್ಷೇತ್ರಗಳು ಎಂದು ಆಯೋಗ ಹೇಳಿದೆ. ಒಟ್ಟು ಎಂಟು ಹಂತದಲ್ಲಿ ನಡೆಯಲಿದ್ದು ಎಪ್ರಿಲ್ 01, 06, 10, 17, 22, 26, 29 ರಂದು ಬಾಕಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ಮೂರನೇ ಬಾರಿ ಸಿಎಂ ಗದ್ದುಗೆ ಏರಲು ಸಿಎಂ ಮಮತಾ ಬ್ಯಾನರ್ಜಿ ಪ್ರಯತ್ನ
    40 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಕಪಿಮುಷ್ಠಿಯಲ್ಲಿತ್ತು. ಕೈಗಾರಿಕೆಗಳಿಗೆ ರೈತರ ಭೂಮಿ ನೀಡುವ ಎಡಪಕ್ಷದ ಸರ್ಕಾರ ನಿರ್ಧಾರ ವಿರೋಧಿಸಿ 2011 ರಲ್ಲಿ ನಂದಿಗ್ರಾಮದಲ್ಲಿ ಹೋರಾಟ ಆರಂಭಿಸಿದ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದರು. 2011 ರಿಂದ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಮತಾ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

    ಸಿಎಎ, ಎನ್‍ಆರ್‍ಸಿ ವಿರೋಧ, ಮೂರು ಕೃಷಿ ಕಾನೂನುಗಳನ್ನು ವಿರೋಧಿಸುವುದು, ಪ್ರತಿವರ್ಷ 5 ಲಕ್ಷ ಉದ್ಯೋಗ ಸೃಷ್ಟಿ, ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್, ರೈತರ ಆದಾಯ ಏರಿಕೆ, ಮಾಶಸನ ಹೆಚ್ಚಳ, ಮನೆ ಬಾಗಿಲಿಗೆ ರೇಷನ್, ಮಹಿಶ್ಯ ತಿಲಿ, ತಮುಲ್, ಸಹಾಸ್ ಸಮುದಾಯಗಳನ್ನು ಒಬಿಸಿಗೆ ಸೇರಿಸಲು ಸಮಿತಿ ರಚನೆ ಸೇರಿದಂತೆ ಹಲವು ಭರವಸೆಗಳನ್ನು ಮಮತಾ ನೀಡಿದ್ದಾರೆ.

    ಇತ್ತ ಎಡಪಂಥೀಯ ನಿಲುಗಳಿರುವ ರಾಜ್ಯದಲ್ಲಿ ಈ ಬಾರಿ ಕೇಸರಿ ಧ್ವಜ ಹಾರಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿದೆ. 2019ರ ಲೋಕಸಭೆ ಸಮರದಲ್ಲಿ ಸೀಟು ಹೆಚ್ಚಿರುವುದೇ ಬಿಜೆಪಿ ಉತ್ಸಾಹಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ 34 ಸ್ಥಾನಗಳಿಂದ 22ಕ್ಕೆ ಟಿಎಂಸಿ ಕುಸಿದರೇ, ಬಿಜೆಪಿ 18 ಕ್ಷೇತ್ರಗಳಲ್ಲಿ ಗೆಲ್ಲಲು ಮೂಲಕ ಅಚ್ಚರಿ ಮೂಡಿಸಿತ್ತು. ಇದೇ ಕಾರಣಕ್ಕಾಗಿ ಬಿಜೆಪಿ ತನ್ನೆಲ್ಲ ಸಾಮಥ್ರ್ಯವನ್ನು ಪಶ್ಚಿಮ ಬಂಗಾಳದಲ್ಲಿ ಹಾಕಿದೆ.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಪ್ರಚಾರ ನಡೆಸಿದ್ದಾರೆ.

    ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮೊದಲ ಸಂಪುಟ ಸಭೆಯಲ್ಲಿ ಸಿಎಎ ಜಾರಿ ಮಾಡುವ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಅಲ್ಲದೇ ಮಹಿಶ್ಯ ತಿಲಿ, ತಮುಲ್, ಸಹಾಸ್ ಸಮುದಾಯಗಳನ್ನು ಒಬಿಸಿಗೆ ಮಾನ್ಯತೆ, ರೈತರು ಮೀನುಗಾರರಿಗೆ ಆರ್ಥಿಕ ಭದ್ರತೆ ಮತ್ತು ಮೂರು ಲಕ್ಷದ ವಿಮೆ, ಎಲ್ ಕೆಜಿಯಿಂದ ಪಿಜಿ ವರೆಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ 33% ಮೀಸಲಾತಿ, ಮನೆಗೊಬ್ಬರಿಗೆ ನೌಕರಿ,ಬಂಗಾಳಿ ಭಾಷೆಗೆ ಆದ್ಯತೆ ಸೇರಿ ಹಲವು ಭರವಸೆ ಬಿಜೆಪಿ ನೀಡಿದೆ.

    ಕುಸಿದ ಬಲ, ನೆಪಮಾತ್ರಕ್ಕೆ ಸ್ಪರ್ಧೆ
    ಈ ಬಾರಿ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಚುನಾವಣಾ ಅಖಾಡದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಟಿಎಂಸಿ ಬಿಜೆಪಿ ನಡುವಿನ ಹೋರಾಟದಲ್ಲಿ ಅಸ್ತಿತ್ವಕ್ಕಗಾಗಿ ಈ ಎರಡು ಪಕ್ಷಗಳು ಹೋರಾಡುತ್ತಿವೆ.

    ಈಗಾಗಲೇ ಕಮ್ಯುನಿಸ್ಟ್ ನೆಲದಲ್ಲಿ ಕಮ್ಯುನಿಸ್ಟ್ ಪಕ್ಷವೇ ನೆಲಕಚ್ಚಿದೆ. ಮಮತಾ ಅಲೆಯಲ್ಲಿ ಕುಸಿತ ಕಂಡಿದ್ದ ಸಿಪಿಐ(ಎಂ) ಬಿಜೆಪಿ ಅಬ್ಬರದಲ್ಲಿ ನೆಲಕಚ್ಚಿದೆ. 2016ರಲ್ಲಿ 19 ಕ್ಷೇತ್ರಗಳಲ್ಲಿ ಗೆದಿದ್ದ ಕಮ್ಯುನಿಸ್ಟ್ 2019 ರಲ್ಲಿ ಇದ್ದ ಎರಡು ಲೋಕಸಭೆ ಕ್ಷೇತ್ರಗಳಲ್ಲೂ ಸೋತು ಸೊನ್ನೇ ಸುತ್ತಿಕೊಂಡಿತ್ತು. ಹಾಗಾಗಿ ಈ ಬಾರಿ ಕಮ್ಯುನಿಸ್ಟ್ ನಿಂದ ದೊಡ್ಡದೇನು ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

    ಇನ್ನು ಸಿಪಿಐ(ಎಂ) ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಕಥೆ ಭಿನ್ನವಾಗಿಲ್ಲ.2016 ರಲ್ಲಿ 23 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದ್ದ ಕೈ, 2019 ರ ಲೋಕಸಭೆಯಲ್ಲಿ ನಾಲ್ಕು ಸ್ಥಾನಗಳಿಂದ ಎರಡಕ್ಕೆ ಇಳದಿತ್ತು. ಹೀಗಾಗಿ ಈಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕಮ್ಯುನಿಸ್ಟ್ ಬಲ ಕುಸಿದಿದ್ದು, ನೆಪಮಾತ್ರಕ್ಕೆ ಸ್ಪರ್ಧೆ ಮಾಡುವಂತಾಗಿದೆ.

    ಬಿಜೆಪಿ – ಟಿಎಂಸಿ ಸಮ ಬಲದ ಹೋರಾಟ
    ಸದ್ಯ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಸರ್ಸ್ ಬಿಜೆಪಿ ಹೋರಾಟ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಬಲಗೈಯಂತಿದ್ದ ಸುವೇಂದು ಅಧಿಕಾರಿ ಸೇರಿದಂತೆ 10 ಕ್ಕೂ ಅಧಿಕ ಪ್ರಮುಖ ನಾಯಕರು ಬಿಜೆಪಿ ಸೇರಿದ್ದು ಟಿಎಂಸಿಗೆ ಈ ಬಾರಿ ದೊಡ್ಡ ಹಿನ್ನಡೆ ಎನ್ನಲಾಗಿದೆ. ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧವೇ ಸ್ಪರ್ಧೆ ಮಾಡುತ್ತಿದ್ದಾರೆ.

    ನಂದಿಗ್ರಾಮದಲ್ಲಿ ಪ್ರಚಾರ ವೇಳೆದ ಗಲಭೆಯಲ್ಲಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆಯಾಗಿದ್ದು ರಾಜಕೀಯ ಕೆಸರಾಟಕ್ಕೆ ಕಾರಣವಾಗಿತ್ತು. ಈ ದಾಳಿಯಲ್ಲಿ ಮಮತಾ ಬ್ಯಾನರ್ಜಿ ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಹಲ್ಲೆಯ ಹಿಂದೆ ಬಿಜೆಪಿ ಇದೆ, ನಾನೊಂದು ಗಾಯಾಗೊಂಡ ಹುಲಿ ಬಿಜೆಪಿಯಂಥ ಪಕ್ಷಕ್ಕೆ ಅಧಿಕಾರ ರಚಿಸಲು ಬಿಡುವುದಿಲ್ಲ ಎಂದು ವೀಲ್ ಚೇರ್ ಮೇಲೆ ಮಮತಾ ಪ್ರಚಾರ ನಡೆಸಿದ್ದರು. ಇತ್ತ ಬಿಜೆಪಿ ಕೂಡಾ ಮಮತಾ ಗೆ ಪ್ರತಿಹಂತದಲ್ಲೂ ತಿರುಗೇಟು ನೀಡುವ ಪ್ರಯತ್ನ ಮಾಡುತ್ತಿದ್ದು ಇಂದಿನ ಮೊದಲ ಹಂತದಲ್ಲಿ ನಡೆಯುತ್ತಿರುವ ಮತದಾನ ಯಾರಿಗೆ ವೇಗ ನೀಡಲಿದೆ ಎನ್ನುವುದು ಕಾದು ನೋಡಬೇಕು

    ಶಬ್ಬೀರ್ ನಿಡಗುಂದಿ

  • ಶೇ.30 ರಷ್ಟು ಮುಸ್ಲಿಮರು ಒಂದಾದರೆ ಭಾರತದಲ್ಲಿ 4 ಪಾಕಿಸ್ತಾನ ಸೃಷ್ಟಿಸಬಹುದು – ಟಿಎಂಸಿ ನಾಯಕ

    ಶೇ.30 ರಷ್ಟು ಮುಸ್ಲಿಮರು ಒಂದಾದರೆ ಭಾರತದಲ್ಲಿ 4 ಪಾಕಿಸ್ತಾನ ಸೃಷ್ಟಿಸಬಹುದು – ಟಿಎಂಸಿ ನಾಯಕ

    ಕೋಲ್ಕತ್ತಾ: ಶೇ.30 ರಷ್ಟು ಮುಸ್ಲಿಮರು ಒಂದಾದರೆ ಭಾರತದಲ್ಲಿ 4 ಪಾಕಿಸ್ತಾನವನ್ನು ಸೃಷ್ಟಿ ಮಾಡಬಹುದು ಎಂದು ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಶೇಖ್ ಆಲಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬಿರ್ಭುಮ್ ಪ್ರದೇಶದ ನ್ಯಾನೂರ್‌ನ ಬಾಸಾ ಪ್ಯಾರಾದಲ್ಲಿ ಟಿಎಂಸಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಶೇಖ್, ಮುಸ್ಲಿಂ ಜನಸಂಖ್ಯೆಯ ಶೇಕಡಾ 30 ರಷ್ಟು ಜನರು ಒಗ್ಗೂಡಿದರೆ ನಾವು 4 ಹೊಸ ಪಾಕಿಸ್ತಾನ ರಚಿಸಬಹುದು ಎಂದಿದ್ದಾರೆ.

    “ನಾವು 30 ಪ್ರತಿಶತ ಮತ್ತು ಅವರು 70 ಪ್ರತಿಶತ ಜನರಿದ್ದಾರೆ. ಅವರು ಶೇ.70 ರಷ್ಟು ಜನರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಾರೆ. ಇದಕ್ಕೆ ಅವರು ನಾಚಿಕೆಪಡಬೇಕು. ನಮ್ಮ ಮುಸ್ಲಿಂ ಜನಸಂಖ್ಯೆಯು ಒಂದು ಬದಿಗೆ ಹೋದರೆ ನಾವು 4 ಹೊಸ ಪಾಕಿಸ್ತಾನಿಗಳನ್ನು ರಚಿಸಬಹುದು. 70 ರಷ್ಟು ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ

    ನೂನೂರ್‌ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಧಾನ್‌ ಚಂದ್ರ ಅವರ ಪರವಾಗಿ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಶೇಖ್ ಆಲಂ ಈ ಹೇಳಿಕೆ ನೀಡಿದ್ದಾರೆ.

    ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣದಿಂದಾಗಿ ಟಿಎಂಸಿ ನಾಯಕರು ಇಂತಹ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಟಿಎಂಸಿ ಮುಖ್ಯಸ್ಥರು ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

  • ಬಿಜೆಪಿ ನನ್ನ ಕೊಲೆಗೆ ಸಂಚು ರೂಪಿಸುತ್ತಿರಬಹುದು: ದೀದಿ ಗಂಭೀರ ಆರೋಪ

    ಬಿಜೆಪಿ ನನ್ನ ಕೊಲೆಗೆ ಸಂಚು ರೂಪಿಸುತ್ತಿರಬಹುದು: ದೀದಿ ಗಂಭೀರ ಆರೋಪ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ರಣ ಕಣ ನಾನಾ ನೀನಾ ಅನ್ನೋ ಹಂತಕ್ಕೆ ತಲುಪಿದೆ. ಕಾಲಿಗೆ ಪ್ಲಾಸ್ಟರ್ ಹಾಕಿಕೊಂಡು ವೀಲ್ ಚೇರ್ ಮೇಲೆ ಕುಳಿತು ಪ್ರಚಾರದ ಅಖಾಡಕ್ಕೆ ಧುಮುಕಿರುವ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ನನ್ನ ಭದ್ರತಾ ಸಿಬ್ಬಂದಿ ಮತ್ತು ಜೊತೆಯಲ್ಲಿರುತ್ತಿದ್ದ ನಿರ್ದೇಶಕರನ್ನ ತೆಗೆದುಹಾಕಿದೆ. ಬಹುಶಃ ಬಿಜೆಪಿ ನನ್ನ ಕೊಲೆಗೆ ಸಂಚು ರೂಪಿಸಿರಬಹುದು ಎಂದು ಆರೋಪಿಸಿದ್ದಾರೆ.

    ಚುನಾವಣೆ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಗೃಹ ಸಚಿವರು ದೇಶವನ್ನ ನಡೆಸುತ್ತಿದ್ದು, ಯಾರು ಸಾಯಬೇಕು ಅಥವಾ ಯಾರನ್ನ ಬಂಧಿಸಬೇಕು ಅನ್ನೋದನ್ನು ನಿರ್ಧರಿಸುತ್ತಿದ್ದಾರೆ. ಯಾರ ಹಿಂದೆ ಯಾವ ಏಜೆನ್ಸಿಯನ್ನ ಬಿಡಬೇಕು ತೀರ್ಮಾನಿಸುತ್ತಾರೆ. ಚುನಾವಣಾ ಆಯೋಗದ ಹಿಂದೆ ಯಾರಿದ್ದಾರೆ ಎಂಬುವುದು ಗೊತ್ತು ಎಂದು ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

    ಚುನಾವಣಾ ಆಯೋಗ ನನ್ನ ಭದ್ರತಾ ಸಿಬ್ಬಂದಿ ಮತ್ತು ನಿರ್ದೇಶಕರನ್ನ ತೆಗೆದಿದೆ. ಬಿಜೆಪಿ ನನ್ನನ್ನ ಕೊಲ್ಲಲು ಸಂಚು ರೂಪಿಸುತ್ತಿರುವ ಅನುಮಾನಗಳು ಹುಟ್ಟಿಕೊಂಡಿದೆ. ಆದ್ರೆ ನಾವು ಯಾವುದಕ್ಕೂ ಭಯಪಡಲ್ಲ. ರಾಜ್ಯದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಚುನಾವಣೆ ನಡೆಯಲಿ. ಕೊರೊನಾ ಮತ್ತು ಅಂಫಾನ್ ವೇಳೆ ಕೇಂದ್ರ ನಮಗೆ ಸಹಾಯ ಮಾಡಲಿಲ್ಲ. ಹೊರಗಿನಿಂದ ಬಂದ ಗೂಂಡಾಗಳಿಗೆ ಚುನಾವಣೆ ನಡೆಸಲು ನಾವು ಬಿಡಲ್ಲ. ಬಂಗಾಳದಲ್ಲಿ ಎಷ್ಟೇ ಹಿಂಸೆ ಸೃಷ್ಟಿಸಲು ಮುಂದಾದ್ರೂ ಅದು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮಮತಾ ನಾಮಪತ್ರ ತಿರಸ್ಕರಿಸಿ – ದಾಖಲೆಯೊಂದಿಗೆ ಆಯೋಗಕ್ಕೆ ಸುವೇಂದು ದೂರು

    ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮೇಲೆ ಯಾವುದೇ ದಾಳಿ ನಡೆದಿಲ್ಲ – ಪ್ರತ್ಯಕ್ಷದರ್ಶಿ ಸ್ಪಷ್ಟನೆ