Tag: ಟಿಆರ್ ಎಸ್

  • ಕಲ್ಲು ತೂರಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡನ ಹತ್ಯೆ

    ಕಲ್ಲು ತೂರಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡನ ಹತ್ಯೆ

    ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಮುಖಂಡ ನಾರಾಯಣ ರೆಡ್ಡಿಯನ್ನು ಕಲ್ಲು ತೂರಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ವಿಕರಾಬಾದ್ ನಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ವಿಕರಾಬಾದ್ ಜಿಲ್ಲೆಯ ಸುಲ್ತಾನಪುರ ಗ್ರಾಮದಲ್ಲಿ ಕಲ್ಲಿನಿಂದ ಹೊಡೆದು, ಹತ್ಯೆ ಮಾಡಿದ ರೀತಿಯಲ್ಲಿ ನಾರಾಯಣ್ ರೆಡ್ಡಿ ಮೃತದೇಹ ಪತ್ತೆಯಾಗಿದೆ. ರೆಡ್ಡಿಯ ಹತ್ಯೆಯ ಸುದ್ದಿ ಹಬ್ಬುತ್ತಲೇ, ಟಿಆರ್‍ಎಸ್ ಕಾರ್ಯಕರ್ತರು ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಕೆಲವು ಕಾರ್ಯಕರ್ತರ ಮೇಲೆ ದಾಳಿ ನಡೆಸಿ, ಹಲ್ಲೆ ನಡೆಸಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಟಿಆರ್ ಎಸ್ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಅಲ್ಲದೇ ಗಂಭೀರವಾಗಿ ಗಾಯಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ.

    ನಾರಾಯಣ ರೆಡ್ಡಿ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು, ಟಿಆರ್ ಎಸ್ ಮುಖಂಡ ನಾರಾಯಣ ರೆಡ್ಡಿ ಮೃತದೇಹ ಪತ್ತೆಯಾಗಿದ್ದು, ರೆಡ್ಡಿಯವರನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಅಲ್ಲದೇ ಈ ಕೊಲೆಯಲ್ಲಿ ಯಾವುದೇ ರಾಜಕೀಯ ವೈಷಮ್ಯ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

    ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಎಸ್‍ಪಿ ಬಳಿಕ ಟಿಆರ್‌ಎಸ್‌  ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬಿಎಸ್‍ಪಿ ಬಳಿಕ ಟಿಆರ್‌ಎಸ್‌ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಪಡೆಯಲು ಮಯಾವತಿಯವರ ಬಿಎಸ್‍ಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ರಾಜಕಾರಣವನ್ನು ಮುಂದುವರೆಸಿದ್ದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದೊಂದಿಗೆ ಸೇರಿ ತೃತೀಯ ರಂಗ ರಚಿಸಲು ಹೊರಟಿದೆ.

    ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಪಕ್ಷದ ನಾಯಕ ಕೆಸಿ ಚಂದ್ರಶೇಖರ್ ರಾವ್(ಕೆಸಿಆರ್) ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಗರದ ಪದ್ಮನಾಭ ನಗರದ ಎಚ್‍ಡಿಡಿ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ಸುಮಾರು 2 ಗಂಟೆಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್ ಎಸ್ ಪಕ್ಷದ ಸಂಸದರು, ಶಾಸಕರು ಚರ್ಚೆಯಲ್ಲಿ ಭಾಗಿದ್ದರು.

    ಎಚ್‍ಡಿಡಿ ನಿವಾಸದಲ್ಲೇ ಮಧ್ಯಾಹ್ನದ ಭೋಜನ ಸೇವಿಸಿದ ಕೆಸಿಆರ್ ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕದಲ್ಲಿರುವ ಎಲ್ಲ ತೆಲುಗು ಭಾಷಿಕ ಮತದಾರರಿಗೆ ಮನವಿ ಮಾಡುವುದಾಗಿ ಘೋಷಿಸಿದರು. ಅಲ್ಲದೇ ಕುಮಾರಸ್ವಾಮಿ ಅವರು ಎಲ್ಲೆಲ್ಲಿ ನನ್ನ ಅಗತ್ಯ ಇದೆ ಎಂದು ಕರೆಯುತ್ತಾರೋ ಅಲ್ಲಿಗೆ ನಾನು ಪ್ರಚಾರಕ್ಕೆ ಬರುತ್ತೇನೆ ಎಂದರು.

    ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಸಿಆರ್, ರಾಜ್ಯ ಜೆಡಿಎಸ್ ಬೆಂಬಲದೊಂದಿಗೆ ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ವಿಷಯವನ್ನು ಪ್ರಸ್ತಾಪಿಸಿದರು. ಈಗಾಗಲೇ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜೊತೆ ಚರ್ಚೆ ನಡೆಸಲಾಗಿದೆ. ದೇಶದ ಪ್ರಮುಖ ನದಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದೆ. ಆದರೆ ರಾಜ್ಯಗಳ ನಡುವೆ ನಿರಂತರವಾಗಿ ನೀರಿಗಾಗಿ ಜಗಳ ನಡೆಯುತ್ತಿದೆ. ಈ ಜಲ ಯುದ್ಧಕ್ಕೆ ಕಾರಣ ಯಾರು? 65 ವರ್ಷ ಕಳೆದರೂ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ನೀರು ಸಿಗುತ್ತಿಲ್ಲ. ಕೇಂದ್ರ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್ ಟ್ರ್ಯಾಪ್ ನಿಂದ ಪ್ರಾದೇಶಿಕ ಪಕ್ಷಗಳನ್ನು ಹೊರತರಬೇಕಿದೆ. ಇದಕ್ಕಾಗಿ ನೂತನ ತೃತೀಯ ರಂಗ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.

    ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ. ದೇಶದಲ್ಲಿ ಸಾಕಷ್ಟು ನೀರು ಇದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಸಮರ್ಪಕ ನೀರು ಸಿಗುವಂತೆ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಭಾರತ, ಭಾರತ ಮಾತೆ ಮತ್ತು ಭಾರತೀಯರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ನಮ್ಮ ತೃತೀಯ ರಂಗಕ್ಕೆ ಸೇರಿದರೂ ಆ ಪಕ್ಷಕ್ಕೆ ಸ್ವಾಗತ ಎಂದರು.

    ಈ ವೇಳೆ ಮಾತನಾಡಿದ ಎಚ್‍ಡಿಡಿ ತೃತೀಯ ರಂಗ ಎನ್ನುವುದಕ್ಕಿಂತ ಇದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ. ಕೆಸಿಆರ್ ತೆಲಂಗಾಣ ಪ್ರತ್ಯೇಕ ರಾಜ್ಯ ನಂತರ ಇದು ಮೊದಲ ಭೇಟಿಯಾಗಿದ್ದು, ರಾಜ್ಯದ ಸಿಎಂ ಆಗಿ ಕೆಸಿಆರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಬ್ಬರು ನೀರಾವರಿ ಹಾಗೂ ರೈತರ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

    ವಿಶೇಷವಾಗಿ ಈ ಭೇಟಿಯಲ್ಲಿ ಭಾಗವಹಿಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ ಮಾತನಾಡಿ, ನಾವು ಸಮಾನ ಮನಸ್ಕರು ಒಂದು ವೇದಿಕೆಯಾಡಿ ಬರುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ರಾಷ್ಟ್ರಾಭಿವೃದ್ದಿ ಸಾಧ್ಯವಾಗಿಲ್ಲ. ಹಾಗಾಗಿ ಯಾರನ್ನೂ ಮುಕ್ತ ಮಾಡುವ ವಿಷಯ ನಮ್ಮದಲ್ಲ. ನಾನು ಯಾವೊಂದು ರಾಜಕೀಯ ಪಕ್ಷವನ್ನೂ ಬೆಂಬಲಿಸುತ್ತಿಲ್ಲ. ಹಾಗಾಗಿಯೇ ಅಭಿವೃದ್ಧಿ ಪರವಾದ ಕೆಸಿಆರ್ ಪ್ರಯತ್ನಕ್ಕೆ ನಾನು ಕೈ ಜೋಡಿಸಿದ್ದೇನೆ ಎಂದರು.