Tag: ಟಯರ್

  • 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    ಮುಂಬೈ:  ಪ್ರಖ್ಯಾತ ಟಯರ್‌ ಕಂಪನಿ ಎಂಆರ್‌ಎಫ್‌ (MRF) ಭಾರತದ ಷೇರು ಮಾರುಕಟ್ಟೆಯಲ್ಲಿ (Share Market) ಹೊಸ ದಾಖಲೆ ಬರೆದಿದೆ.

    ಮಂಗಳವಾರ ಬೆಳಗ್ಗಿನ ವಹಿವಾಟಿನಲ್ಲಿ ಎಂಆರ್‌ಎಫ್‌ ಕಂಪನಿಯ ಒಂದು ಷೇರಿನ ಬೆಲೆ 1 ಲಕ್ಷ ರೂ. ದಾಟಿತ್ತು. ಈ ಮೂಲಕ ಒಂದು ಷೇರಿನ ಬೆಲೆ 1 ಲಕ್ಷ ರೂ.ದಾಟಿದ ದೇಶದ ಮೊದಲ ಕಂಪನಿ ಎಂಬ ಇತಿಹಾಸ (History Created) ಸೃಷ್ಟಿಸಿತು.

    2023ರ ನಾಲ್ಕನೇಯ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 86% ಏರಿಕೆಯಾಗಿ 313.5 ಕೋಟಿ ರೂ. ದಾಖಲಿಸಿತ್ತು. ಕಳೆದ ವರ್ಷ ಈ ಅವಧಿಯಲ್ಲಿ 168. ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಕಚ್ಚಾ ವಸ್ತುಗಳ ಬೆಲೆಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಕಂಪನಿಯು ಜನವರಿ – ಮಾರ್ಚ್ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಬೆನ್ನಲ್ಲೇ ಷೇರುಗಳ ಬೆಲೆಯೂ ಏರಿಕೆ ಕಂಡಿತ್ತು.

    ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಕಂಪನಿಯು 5,841.7 ಕೋಟಿ ರೂ. ಆದಾಯ ಗಳಿಸಿದೆ. ಕಂಪನಿಯು ಕಳೆದ ವರ್ಷ ಈ ಅವಧಿಯಲ್ಲಿ 5,304.8 ಕೋಟಿ ರೂ. ಆದಾಯ ಗಳಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿರೆ ಈ ಬಾರಿ ಆದಾಯ ಗಳಿಕೆ 10.12% ರಷ್ಟು ಏರಿಕೆ ಕಂಡಿದೆ.

    ಈ ವರ್ಷದ ಆರಂಭದಿಂದಲೇ ಎಂಆರ್‌ಎಫ್‌ ಷೇರು ಮೌಲ್ಯ ವೃದ್ಧಿಸುತ್ತಿದೆ. 1993 ಏಪ್ರಿಲ್‌ 27 ರಂದು ಎಂಆರ್‌ಎಫ್‌ ಕಂಪನಿಯ ಒಂದು ಷೇರಿನ ಬೆಲೆ 11 ರೂ. ಇತ್ತು. ಇದನ್ನೂ ಓದಿ: Bomb Threat:ಬೆಂಗಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ

    ಯಾವ ವರ್ಷ ಎಷ್ಟು ರೂ. ಇತ್ತು?
    2001 ಜನವರಿ – 1,200
    2005 ಜನವರಿ – 2,540
    2010 ಜನವರಿ – 6,145
    2015 ಜನವರಿ – 38,000
    2020 ಜನವರಿ – 66,700
    2023 ಜೂನ್‌ – 1,00,000

    ಸೋಮವಾರ ಎಂಆರ್‌ಎಫ್‌ ಕಂಪನಿಯ ಷೇರಿನ ಬೆಲೆ 98,968.55 ರೂ.ಗೆ ಕೊನೆಯಾಗಿದ್ದರೆ ಇಂದು ಬೆಳಗ್ಗೆ 1,00,439 ರೂ.ಗೆ ಏರಿಕೆಯಾಗಿ ಕೊನೆಗೆ 99,900 ರೂ.ಗೆ ಇಂದಿನ ವ್ಯವಹಾರ ಮುಗಿಸಿತು.

  • ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್‌ ಚಕ್ರಕ್ಕೆ 9 ಮಂದಿ ಬಲಿ?

    ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್‌ ಚಕ್ರಕ್ಕೆ 9 ಮಂದಿ ಬಲಿ?

    ತುಮಕೂರು: ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೇನಹಳ್ಳಿಯಲ್ಲಿ 9 ಮಂದಿಯ ಬಲಿ ತೆಗೆದುಕೊಂಡ ಅಪಘಾತಕ್ಕೆ ಕ್ರೂಸರ್‌ ಚಕ್ರ ಕಾರಣವಾಯಿತೇ ಎಂಬ ಅನುಮಾನ ಎದ್ದಿದೆ.

    ಹೌದು. ಇಂದು ಮುಂಜಾನೆ ನಡೆದ ಅಪಘಾತದಲ್ಲಿ‌ ಮೂವರು ಮಕ್ಕಳು, ಚಾಲಕ ಸೇರಿ ಕ್ರೂಸರ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಚಕ್ರ ಕಾರಣವಾಗಿರಬಹುದು ಎಂಬ ಅನುಮಾನ ಮೂಡಿದೆ.

    ಅಪಘಾತ ಹೇಗಾಯ್ತು?
    ರಾಯಚೂರಿನಿಂದ 23 ಕಾರ್ಮಿಕರನ್ನು ಹೊತ್ತುಕೊಂಡು ಬೆಂಗಳೂರಿಗೆ ಕ್ರೂಸರ್‌ ಬರುತ್ತಿತ್ತು. ಮುಂಜಾನೆ 3:30ರ ವೇಳೆಗೆ ವೇಗವಾಗಿ ಬರುತ್ತಿದ್ದ ಕ್ರೂಸರ್‌ ಮೊದಲು ಹೈವೇಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಅರ್ಧ ಭಾಗ ರಸ್ತೆಯಲ್ಲಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್‌ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಟಯರ್‌ ಕಾರಣವೇ?
    ಕ್ರೂಸರ್‌ ಎಂಯುವಿ(ಮಲ್ಟಿ ಯುಟಿಲಿಟಿ ವೆಹಿಕಲ್‌) ಆಗಿದ್ದು ಇದರ ಹಿಂಭಾಗದ ಚಕ್ರ ಸವೆದು ಹೋಗಿದೆ. ಮುಂಭಾಗದ ಬಲಗಡೆಯ ಚಕ್ರ ಸ್ಫೋಟಗೊಂಡಿದ್ದು, ಕೇವಲ ರಿಮ್‌ ಮಾತ್ರ ಇದೆ. ಈ ಕಾರಣದಿಂದ ಆರಂಭದಲ್ಲಿ ಮುಂಭಾಗದ ಚಕ್ರ ಸ್ಫೋಟಗೊಂಡು ಡಿವೈಡರ್‌ಗೆ ಗುದ್ದಿದೆ. ಈ ವೇಳೆ ಹಿಂದಿನ ವೇಗವಾಗಿ ಬರುತ್ತಿದ್ದ ಲಾರಿ ಕ್ರೂಸರ್‌ಗೆ ಗುದ್ದಿದೆ. ಡಿವೈಡರ್‌ಗೆ ಗುದ್ದಿದರಿಂದ ಕ್ರೂಸರ್‌ ಮುಂದುಗಡೆ ಕುಳಿತವರು, ಲಾರಿ ಗುದ್ದಿದರಿಂದ ಹಿಂದುಗಡೆ ಕುಳಿತವರು ಸಾವನ್ನಪ್ಪಿದ್ದಾರೆ. ಕ್ರೂಸರ್‌ ಮಧ್ಯ ಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹೈವೇಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಅಪಘಾತಗಳು ಟಯರ್‌ ಸ್ಫೋಟಗೊಂಡು ಸಂಭವಿಸುತ್ತಿರುತ್ತದೆ. ಟಯರ್‌ ಸವೆದು ಹೋಗಿದ್ದರೆ ಅದನ್ನು ಬದಲಿಸಬೇಕಾಗುತ್ತದೆ. ಆದರೆ ಸವೆದು ಹೋಗಿದ್ದರೂ ವೇಗವಾಗಿ ವಾಹನ ಓಡಿಸಿದರೆ ಬಿಸಿಯಿಂದಾಗಿ ಚಕ್ರ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

    ಮದ್ಯ ಸೇವನೆ ಮಾಡಿದ್ನಾ ಚಾಲಕ?
    ರಾಯಚೂರಿನಿಂದ ಹೊರಟ್ಟಿದ್ದ ಕ್ರೂಸರ್‌ ಅನ್ನು ಮದ್ಯ ರಾತ್ರಿ ಚಾಲಕ ಚಹಾ ಕುಡಿಯಲು ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ಕಾರ್ಮಿಕರು ಚಹಾ ಕುಡಿಯಲು ಅಂಗಡಿಗೆ ತೆರಳಿದ್ದರೆ ಚಾಲಕ ಕೃಷ್ಣಪ್ಪ ಬೇರೆ ಕಡೆ ಹೋಗಿದ್ದ. ಈ ಸಂದರ್ಭದಲ್ಲಿ ಆತ ಮದ್ಯ ಸೇವನೆ ಮಾಡಿರಬಹುದು. ನಿಲ್ಲಿಸಿದ ಬಳಿಕ ಕ್ರೂಸರ್‌ ಅನ್ನು ಬಹಳ ವೇಗವಾಗಿ ಓಡಿಸುತ್ತಿದ್ದ ಎಂದು ಗಾಯಾಳುಗಳು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಕೆಲಸ:
    ಮೃತಪಟ್ಟವರೆಲ್ಲರೂ ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ ಹಾಗೂ ದೇವದುರ್ಗ ತಾಲೂಕಿನವರಾಗಿದ್ದಾರೆ. ಬೆಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಊರಿಗೆ ತೆರಳಿದ್ದರು. ಊರಿನಿಂದ ಬೆಂಗಳೂರಿಗೆ ಬರಲು ವಡವಟ್ಟಿ ಗ್ರಾಮ ಕೃಷ್ಣಪ್ಪ ಅವರ ಕ್ರೂಸರ್‌ ಅನ್ನು ಬುಕ್‌ ಮಾಡಿದ್ದರು. ನಿನ್ನೆ ಮಧ್ಯಾಹ್ನ ಇವರೆಲ್ಲ ಕಾರ್ಮಿಕರು ಊರು ಬಿಟ್ಟು ಬೆಂಗಳೂರು ಕಡೆ ಹೊರಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ

    ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ

    ದಾವಣಗೆರೆ: ತಡರಾತ್ರಿ ಕೆಟ್ಟು ನಿಂತಿದ್ದ ಅಂಬುಲೆನ್ಸ್ ಟಯರ್ ಬದಲಿಸಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾನವೀಯತೆ ಮೆರೆದಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ನ್ಯಾಮತಿ ರಸ್ತೆಯಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿತ್ತು. ಅದೇ ಮಾರ್ಗದಲ್ಲಿ ರೇಣುಕಾಚಾರ್ಯ ಬರುತ್ತಿದ್ದರು. ಅಂಬುಲೆನ್ಸ್ ನಿಂತಿರುವುದನ್ನು ಕಂಡ ಕೊಡಲೇ ತಮ್ಮ ವಾಹನವನ್ನು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್ ಪಂಚರ್ ಆಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಎಗ್‍ಲೆಸ್ ‘ಚಾಕೊಲೇಟ್ ಬ್ರೌನಿ’ ಮಾಡುವ ವಿಧಾನ

    ಈ ಹಿನ್ನೆಲೆ ರೇಣುಕಾಚಾರ್ಯ ತಕ್ಷಣ ಜಾಕ್ ನೀಡಿ, ಅವರೇ ಸ್ಥಳದಲ್ಲಿ ನಿಂತು ಅಂಬುಲೆನ್ಸ್ ರಿಪೇರಿಗೆ ನೆರವಾಗಿದ್ದಾರೆ. ಬಳಿಕ ಅಂಬುಲೆನ್ಸ್‌ನಲ್ಲಿದ್ದ ರೋಗಿಯ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಸ್‍ನ ಟಯರ್ ಸ್ಫೋಟ – 20 ಮಂದಿ ಪ್ರಯಾಣಿಕರಿಗೆ ಗಾಯ

    ಬಸ್‍ನ ಟಯರ್ ಸ್ಫೋಟ – 20 ಮಂದಿ ಪ್ರಯಾಣಿಕರಿಗೆ ಗಾಯ

    ಚಾಮರಾಜನಗರ: ತಮಿಳುನಾಡಿನ ಮೆಟ್ಟೂರಿನಿಂದ ಮೈಸೂರಿಗೆ ಬರುತ್ತಿದ್ದ ತಮಿಳುನಾಡಿನ ಸಾರಿಗೆ ಸಂಸ್ಥೆ ಬಸ್‍ನ ಟಯರ್ ಸ್ಫೋಟಗೊಂಡು 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಸಮೀಪ ನಡೆದಿದೆ.

    ಬಸ್ ಸಂಚರಿಸುತ್ತಿರುವಾಗಲೇ ಟಯರ್ ಸ್ಫೋಟಗೊಂಡು ರಸ್ತೆ ಪಕ್ಕದ ಕಮರಿಗೆ ಹೋಗಿ ನಿಂತಿದೆ. ಅದೃಷ್ಟವಶಾತ್ ಬಸ್‍ನ ಅಕ್ಕಪಕ್ಕ ಯಾವುದೇ ವಾಹನಗಳು ಇರಲಿಲ್ಲ. ಜೊತೆಗೆ ಬಸ್ ನಿಧಾನಗತಿಯಲ್ಲಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್‍ನಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿತ್ತು ಎಂಬ ಮಾಹಿತಿ ತಿಳಿದುಬಂದಿದ್ದು, 20 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಂಡ್ಯ SP ಹುದ್ದೆ ಹರಾಜಿಗಿದೆ – ಸಾಮಾಜಿಕ ಜಾಲತಾಣದಲ್ಲಿ ಲೇವಡಿ

    ತಮಿಳುನಾಡಿನ ಸಾರಿಗೆ ಡಿಪೋ ರೀ ಬಿಲ್ಟ್ ಟಯರ್ ಬಳಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು ಸದ್ಯ ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ಹನೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿ – ಸವಾರನನ್ನು ಒದ್ದು ಕೊಂದ ಕಿರಾತಕ

  • ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಚೆನ್ನೈ: ಟಯರ್ ಸ್ಫೋಟಗೊಂಡು ಜೀವ ಉಳಿಸಬೇಕಾದ ಅಂಬುಲೆನ್ಸ್ ಮರಕ್ಕೆ ಹೊಡೆದ ಪರಿಣಾಮ ತುಂಬು ಗರ್ಭಿಣಿ ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಗರ್ಣಿಣಿ ಜಯಲಕ್ಷ್ಮಿ(26), ಅತ್ತೆ ಸೆಲ್ವಿ(55) ಹಾಗೂ ನಾದಿನಿ ಅಂಬಿಕಾ (30) ಎಂದು ಗುರುತಿಸಲಾಗಿದೆ. ಸೊರಪುಟ್ಟ ಗ್ರಾಮದ ನಿವಾಸಿ ಜಯಲಕ್ಷ್ಮಿ ಅವರು 9 ತಿಂಗಳ ಗರ್ಭಿಣಿ. ಇವರಿಗೆ ಗುರುವಾರ ನಸುಕಿನ ಜಾವ 2.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಯಲಕ್ಷ್ಮಿ ಪತಿ 108 ಗೆ ಕರೆ ಮಾಡಿದ್ದಾರೆ. ಹೀಗಾಗಿ ಜಯಲಕ್ಷ್ಮಿ ಅತ್ತೆ ಹಾಗೂ ಅವರ ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಅಂಬುಲೆನ್ಸ್ ಹತ್ತಿದ್ದಾರೆ.

    ಹೀಗೆ ಅಂಬುಲೆನ್ಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಅಂಬುಲೆನ್ಸ್ ಟಯರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಅಂಬುಲೆನ್ಸ್ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬಂಡೀಪುರ ಸಂರಕ್ಷಿತಾರಣ್ಯದಲ್ಲಿ ಹುಲಿ ಸಾವು

    ಘಟನೆ ಸಂಬಂಧಿಸಿಂದತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಜಯಲಕ್ಷ್ಮಿ ಕುಟುಂಬಕ್ಕೆ 5 ಲಕ್ಷ ಹಾಗೂ ಅವರ ತ್ತೆ ಹಾಗೂ ನಾದಿನಿ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಟಯರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಹತ್ತಿದ ಹೊಸ ಕಾರು

    ಟಯರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೆ ಹತ್ತಿದ ಹೊಸ ಕಾರು

    ಬೆಂಗಳೂರು: ಕಾರಿನ ಟಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ಡಿವೈಡರ್ ಮೇಲೆ ಹತ್ತಿರುವ ಘಟನೆ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.

    ಮೇಕ್ರಿ ಸರ್ಕಲ್ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದ್ದು, ಅವಘಡ ತಪ್ಪಿದಂತಾಗಿದೆ. ಹೊಸ ಕಾರನ್ನು ಓಡಿಸುತ್ತಿದ್ದ ವೇಳೆ ಅಂಡರ್ ಪಾಸ್‍ನಲ್ಲಿ ಇದ್ದಕ್ಕಿದ್ದಂತೆ ಕಾರಿನ ಟಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಮೇಲೆ ಹತ್ತಿದೆ.

    ಈ ಅವಘಡದಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದ ಕಾರನ್ನು ಡಿವೈಡರ್‌ನಿಂದ ಕೆಳಗಿಳಿಸಿದ್ದಾರೆ. ಈ ಕುರಿತು ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.

    ಹೆದ್ದಾರಿ ಪಕ್ಕದ ಮಮತಾ ಪೆಟ್ರೋಲ್ ಬಂಕ್‍ಗೆ ಹೊಂದಿಕೊಂಡಿರುವ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಆವರಣದಲ್ಲಿನ ಟ್ರಾಕ್ಟರ್ ಟಯರ್‌ಗಳ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಾವಿರಾರು ಟ್ರಾಕ್ಟರ್‌ನ ಟಯರ್‌ಗಳು ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದಿವೆ.

    ಅಗ್ನಿ ಅವಘಡದಿಂದ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಮುಗಿಲೆತ್ತರಕ್ಕೆ ಆವರಿಸಿದೆ. ಅಗ್ನಿ ಅವಘಡದ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಹರಸಾಹಸ ಪಟ್ಟು ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 4 ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿನಂದಿಸುವ ಕಾರ್ಯ ಸಾಗಿದ್ದು, ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.

    ಟಯರ್ ಸುಟ್ಟು ವಾಸನೆಯಿಂದ ಜನ ಕಸಿವಿಸಿಗೊಂಡಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಬಂಕ್ ಸಹ ಪಕ್ಕದಲ್ಲೇ ಇರುವ ಕಾರಣ ಸಾಕಷ್ಟು ಆತಂಕ ಸಹ ಮನೆ ಮಾಡಿದ್ದು, ಸಾರ್ವಜನಿಕರನ್ನ ಹತ್ತಿರ ಸುಳಿಯಲು ಸಹ ಪೊಲೀಸರು ಬಿಟ್ಟಿಲ್ಲ. ಇನ್ನೂ ಈ ಟಯರ್ ಗೋಡೌನ್ ಪಕ್ಕದಲ್ಲೇ ತಯಾರಾದ ಹೊಚ್ಚ ಹೊಸ ಟ್ರಾಕ್ಟರ್​​ಗಳನ್ನ ನಿಲ್ಲಿಸಲಾಗಿದ್ದು, ಅದೃಷ್ಟವಶಾತ್ ಬೆಂಕಿ ನಂದಿಸುವ ಕಾರ್ಯ ನಡೆಸಿ ಟ್ರಾಕ್ಟರ್​​ಗಳಿಗೆ ಬೆಂಕಿ ತಗುಲದಂತೆ ತಡೆಯಲಾಗಿದೆ.

    ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿದ್ದಾರ ಎನ್ನುವ ಅನುಮಾನ ಮೂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಚಲಿಸುತ್ತಿದ್ದ ಕಾರಿನಿಂದ ಇದ್ದಕ್ಕಿದ್ದಂತೆ ಕಳಚಿ ರಸ್ತೆಯಲ್ಲಿ ಉರುಳಾಡಿದ ಟಯರ್

    ಚಲಿಸುತ್ತಿದ್ದ ಕಾರಿನಿಂದ ಇದ್ದಕ್ಕಿದ್ದಂತೆ ಕಳಚಿ ರಸ್ತೆಯಲ್ಲಿ ಉರುಳಾಡಿದ ಟಯರ್

    ಮಡೀಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರೊಂದರ ಟಯರ್ ಇದ್ದಕ್ಕಿದ್ದಂತೆ ಕಳಚಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

    ಪಿರಿಯಪಟ್ಟಣದ ಸುರೇಶ್ ಎಂಬವರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪತ್ನಿಯೊಂದಿಗೆ ತಮ್ಮ ತುಂಬು ಗರ್ಭಿಣಿ ಮಗಳನ್ನು ವೈದ್ಯಕೀಯ ಚಿಕಿತ್ಸೆಗೊಳಪಡಿಸಿ ಇಂದು ಮಧ್ಯಾಹ್ನ 12.30ರ ಸಮಯದಲ್ಲಿ ಕೆಎ-13 ಎಂ-6661 ಇಂಡಿಕಾ ಕಾರಿನಲ್ಲಿ ಹಿಂತಿರುಗುತ್ತಿದ್ದರು.

    ಮಾರ್ಗಮಧ್ಯೆ ಸುಂಟಿಕೊಪ್ಪ ಪಟ್ಟಣದ ಎ.ವಿ.ಎಂ. ಸ್ಟೋರ್ ಮುಂಭಾಗದಲ್ಲಿ ಕಾರಿನ ಹಿಂಬದಿಯ ಬಲಭಾಗದ ಟಯರ್ ಇದ್ದಕ್ಕಿದ್ದಂತೆ ಕಳಚಿಕೊಂಡು ರಸ್ತೆಯಲ್ಲಿ ಉರುಳಾಡಿದೆ. ಕಾರಿನ ಚಾಲಕ ಚಾಕಚಕ್ಯತೆಯಿಂದ ಕಾರನ್ನು ಹತೋಟಿಗೆ ತಂದು ರಸ್ತೆ ಬದಿ ನಿಲ್ಲಿಸಿದ್ದಾನೆ. ಇಲ್ಲವಾದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

    ಅದೃಷ್ಟವಶಾತ್ ಚಾಲಕನ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುರೇಶ್ ಹಾಗೂ ಅವರ ಪತ್ನಿ ಮತ್ತು ತುಂಬು ಗರ್ಭಿಣಿಯಾಗಿರುವ ಮಗಳು ಯಾವುದೇ ಗಾಯಕ್ಕೊಳಗಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಬೈಕ್ ಸಮೇತ ಓಪನ್ ಮ್ಯಾನ್ ಹೋಲ್ ಗೆ ಬಿದ್ದು, ಟಯರ್ ಸ್ಫೋಟಗೊಂಡು ಯುವಕ ದುರ್ಮರಣ

    ಮುಂಬೈ: ಬೈಕ್ ಸಮೇತ ಮ್ಯಾನ್ ಹೋಲ್ ಗೆ ಬಿದ್ದು ಬಳಿಕ ಟಯರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.

    ಈ ಘಟನೆ ಮುಂಬೈನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಮೃತ ದುರ್ದೈವಿ ಯುವಕನನ್ನು ಮೋಹನ್ ರಾಥೋಡ್(27) ಎಂದು ಗುರುತಿಸಲಾಗಿದೆ. ಇವರು ಉಲ್ವೆ ನಿವಾಸಿ ಎನ್ನಲಾಗಿದೆ.

    ಏನಿದು ಘಟನೆ?: ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ತನ್ನ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಮೋಹನ್ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ. ಬೈಕ್ ಮ್ಯಾನ್ ಹೋಲ್ ಗೆ ಬಿದ್ದ ಬಳಿಕ ಮ್ಯಾನ್ ಹೋಲ್ ಒಳಗಡೆಯೇ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಅವರ ದೇಹ ಭಾಗಶಃ ಸುಟ್ಟು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಸ್ಮಿತಾ ಜಾಧವ್ ತಿಳಿಸಿದ್ದಾರೆ.

    ಪೈಪ್ ಲೈನ್ ಗೋಸ್ಕರ ಈ ಮ್ಯಾನ್ ಹೋಲ್ ತೆರೆದಿದ್ದು, ಇದರ ಮೇಲೆ ಕವರ್ ಮಾಡದಿರುವುದು ಘಟನೆಗೆ ಕಾರಣವಾಗಿದ್ದು, ಅಲ್ಲದೇ ಮೃತ ಮೋಹನ್ ಮದ್ಯಪಾನ ಮಾಡಿದ್ದರಿಂದ ಬೈಕನ್ನು ನಿಯಂತ್ರಿಸಲು ಸಾಧ್ಯವಾಗದೇ ಈ ದುರಂತ ಸಂಭವಿಸಿದೆ ಅಂತ ಅವರು ಹೇಳಿದ್ದಾರೆ.

    ಘಟನೆಯ ಬಳಿಕ ಕೆಲ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಮೋಹನ್ ಅವರನ್ನು ಮ್ಯಾನ್ ಹೋಲ್ ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೋಹನ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಸಿವಿಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೋಹನ್ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಅಂತ ಪೊಲೀಸರು ವಿವರಿಸಿದ್ದಾರೆ.

  • ಟಯರ್ ಬ್ಲಾಸ್ಟ್ ಆಗಿ ಇನೋವಾ ಕಾರ್ ಪಲ್ಟಿ- ನಾಲ್ವರ ದುರ್ಮರಣ

    ಟಯರ್ ಬ್ಲಾಸ್ಟ್ ಆಗಿ ಇನೋವಾ ಕಾರ್ ಪಲ್ಟಿ- ನಾಲ್ವರ ದುರ್ಮರಣ

    ಹಾವೇರಿ: ಇನೋವಾ ಕಾರಿನ ಟಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದು, ಮೂವರಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದ ಬಳಿ ಇರೋ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

    ಬಂಕಾಪುರದ ಬಳಿ ಇರೋ ಪಂಚತಾರಾ ಹೋಟೆಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರು ರಾಣೇಬೆನ್ನೂರು ನಗರದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

    ಇನ್ನೋವಾ ಕಾರು ಹುಬ್ಬಳ್ಳಿಯಿಂದ ದಾವಣಗೆರೆ ಕಡೆ ಹೊರಟಿದ್ದು, ತಮ್ಮ ಸಂಬಂಧಿಕರನ್ನು ಹಜ್ ಯಾತ್ರೆ ಕಳುಹಿಸಿ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಬಂಕಾಪುರ ಹಾಗೂ ಶಿಗ್ಗಾಂವಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ರು.

    ಅಲ್ಲದೆ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಅಣ್ಣಪ್ಪನಾಯಕ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.