Tag: ಝೆಡ್ ಶ್ರೇಣಿ

  • ನಾನು ಸಾವಿಗೆ ಹೆದರಲ್ಲ – Z ಶ್ರೇಣಿಯ ಭದ್ರತೆ ತಿರಸ್ಕರಿಸಿದ ಓವೈಸಿ

    ನಾನು ಸಾವಿಗೆ ಹೆದರಲ್ಲ – Z ಶ್ರೇಣಿಯ ಭದ್ರತೆ ತಿರಸ್ಕರಿಸಿದ ಓವೈಸಿ

    ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದರೆ ಈ ಭದ್ರತೆಯನ್ನು ಇದೀಗ ಓವೈಸಿ ನಿರಾಕರಿಸಿದ್ದಾರೆ.

    ಈ ವಿಚಾರವನ್ನು ಇಂದು ಲೋಕಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ ಓವೈಸಿ, ನಾನು ಸಾವಿಗೆ ಹೆದರಲ್ಲ. ಹೀಗಾಗಿ ನನಗೆ ಕೇಂದ್ರ ನೀಡುತ್ತಿರುವ ಝೆಡ್ ಮಾದರಿಯ ಭದ್ರತೆ ಬೇಡ, ಅದನ್ನು ನಾನು ನಿರಾಕರಿಸುತ್ತೇನೆ. ನನ್ನನ್ನು ‘ಎ’ ವರ್ಗದ ನಾಗರಿಕನನ್ನಾಗಿ ಗುರುತಿಸಿ. ನಾನು ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ, ದಯಮಾಡಿ ನನಗೆ ನ್ಯಾಯ ಕೊಡಿ. ಯಾರು ನನ್ನ ವಾಹನದ ಮೇಲೆ ಗುಂಡು ಹಾರಿಸಿದರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅಲ್ಲದೆ ಆ ದುಷ್ಕರ್ಮಿಗಳನ್ನು ಭಯೋತ್ಪಾದನಾ ವಿರೋಧಿ ಕೇಸ್ ದಾಖಲಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ – ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ

    ಭದ್ರತೆ ನೀಡುವಂತೆ ಕೇಂದ್ರ ಆದೇಶ:
    ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡು ಹಾರಿಸಿದ ಘಟನೆ ದೆಹಲಿ-ಮೀರತ್ ಇ-ವೇನಲ್ಲಿ ಛಜರ್ಸಿ ಟೋಲ್ ಬಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಓವೈಸಿಗೆ ಭದ್ರತೆಗೆ ಕೇಂದ್ರ ಸರ್ಕಾರ ಝಡ್ ಮಾದರಿಯ ಭದ್ರತೆ ನೀಡಲು ಆದೇಶ ನೀಡಿದ್ದು, ಸಿಆರ್ ಪಿಎಫ್‍ನ Z ಕೆಟಗರಿ ಭದ್ರತೆ ಇರಲಿದೆ. ಪ್ರಾಣ ಬೆದರಿಕೆ ಇರುವವರಿಗೆ 4-6 NSG ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 22 ಸಿಬ್ಬಂದಿ ಇರುವುದು ‘Z Z category ಭದ್ರತೆಯಾಗಿದೆ. ಇದನ್ನು ದೆಹಲಿ ಪೊಲೀಸ್ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಥವಾ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಕಾರ್ ಜೊತೆಗೆ ಭದ್ರತೆಗೆ ಒದಗಿಸುತ್ತಾರೆ. ಇದನ್ನೂ ಓದಿ: ಕಾಂಗ್ರೆಸ್‌ ಕೆಲಸ ಮಾಡಿದ್ದರೆ, ನಾನು ರಾಜಕೀಯಕ್ಕೆ ಬರುವ ಅಗತ್ಯವಿರುತ್ತಿರಲಿಲ್ಲ: ಕೇಜ್ರಿವಾಲ್‌

    ನಿನ್ನೆ ನಡೆದಿದ್ದೇನು?:
    ಉತ್ತರಪ್ರದೇಶದ ಮೀರತ್‍ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಓವೈಸಿ ವಾಹನದ ಮೇಲೆ 3-4 ಸುತ್ತು ಗುಂಡು ಹಾರಿಸಲಾಗಿತ್ತು. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಓರ್ವನನ್ನು ಬಂಧಿಸಲಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಓವೈಸಿ, ಎಲ್ಲರೂ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದರು. ಅಲ್ಲದೆ ಗುಂಡು ಹಾರಿಸಿದ ವ್ಯಕ್ತಿ ಆಯುಧಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದರು. ನಾನು ಮೀರತ್ ನಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟೋಲ್ ಬಳಿ ಇಬ್ಬರು ದುಷ್ಕರ್ಮಿಗಳು ನನ್ನ ವಾಹನದ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾರೆ. ಇವರ ಜೊತೆ ಇನ್ನೂ 3-4 ಮಂದಿ ಇದ್ದರು. ಗುಂಡು ಹಾರಿಸಿದ ಪರಿಣಾಮ ನನ್ನ ವಾಹನ ಪಂಕ್ಚರ್ ಆಯಿತು. ಹೀಗಾಗಿ ನಾನು ಬೇರೆ ವಾಹನದಲ್ಲಿ ಅಲ್ಲಿಂದ ತೆರಳಿದೆ ಎಂದು ಓವೈಸಿ ತಮ್ಮ ಟ್ವೀಟ್ ನಲ್ಲಿ ವಿವರಿಸಿದ್ದರು.

    ಫೋಟೋ ಸಮೇತ ಓವೈಸಿ ಟ್ವೀಟ್ ಮಾಡಿದ್ದು, ಫೋಟೋದಲ್ಲಿ ಓವೈಸಿ ಇದ್ದ ಕಾರಿಗೆ ಗುಂಡು ತಾಗಿರುವುದನ್ನು ಹಾಗೂ ಟೈಯರ್ ಗಳು ಪಂಕ್ಚರ್ ಆಗಿರುವುದನ್ನು ಕಾಣಬಹುದಾಗಿದೆ. ಘಟನೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.