Tag: ಜ್ವರ

  • ಶಂಕಿತ ಡೆಂಗ್ಯೂ ಜ್ವರಕ್ಕೆ 4 ವರ್ಷದ ಮಗು ಸಾವು

    ಶಂಕಿತ ಡೆಂಗ್ಯೂ ಜ್ವರಕ್ಕೆ 4 ವರ್ಷದ ಮಗು ಸಾವು

    ಗದಗ: ಶಂಕಿತ ಡೆಂಗ್ಯೂ ಜ್ವರಕ್ಕೆ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮುಂಡರಗಿ ಪಟ್ಟಣದ ಬ್ಯಾಲವಾಡಗಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 4 ವರ್ಷದ ಪಲ್ಲವಿ ಸೋಮಣ್ಣ ಸಾಲ್ಮನಿ ಎಂಬ ಮಗು ಮೃತಪಟ್ಟಿದೆ. ಪಲ್ಲವಿ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದಳು.

    ಜ್ವರದಿಂದ ಬಳಲುತ್ತಿದ್ದ ಕಾರಣ ಪೋಷಕರು ಪಲ್ಲವಿಯನ್ನು ಮುಂಡರಗಿ, ಗದಗ ಆಸ್ಪತ್ರೆಗಳಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಡೆಂಗ್ಯೂ ಜ್ವರಕ್ಕೆ ಬಾಲಕಿ ಪಲ್ಲವಿ ಮೃತಪಟ್ಟಿದ್ದಾಳೆ. ಬಾಲಕಿ ಸಾವಿನಿಂದ ಕುಟುಂಬ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಅಡ್ವಾಣಿ ನಿವಾಸದಲ್ಲಿಲ್ಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

    ಅಡ್ವಾಣಿ ನಿವಾಸದಲ್ಲಿಲ್ಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

    ನವದೆಹಲಿ: ರಾಜಕೀಯ ಭೀಷ್ಮ, ಕೇಸರಿ ಪಡೆಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ನಿವಾಸದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ರದ್ದಾಗಿದೆ.

    ಹೌದು. 91 ವರ್ಷದ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ 5 ದಿನದಿಂದ ಅವರು ವೈರಲ್ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಅಡ್ವಾಣಿ ನಿವಾಸದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಇರುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

    ಆಗಸ್ಟ್ 7 ರಂದು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಸಂದರ್ಭದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು. ಆ ವೇಳೆ ಸುಷ್ಮಾರನ್ನು ನೆನೆದು ಅವರು ತೀವ್ರ ದುಃಖಿತರಾಗಿದ್ದರು.

  • ಅತ್ತ ಮನೆ ಇಲ್ಲ, ಇತ್ತ ಚಿಕಿತ್ಸೆಯೂ ಇಲ್ಲ- ಜ್ವರದಿಂದ ಬಾಲಕ ಪರದಾಟ

    ಅತ್ತ ಮನೆ ಇಲ್ಲ, ಇತ್ತ ಚಿಕಿತ್ಸೆಯೂ ಇಲ್ಲ- ಜ್ವರದಿಂದ ಬಾಲಕ ಪರದಾಟ

    – ಇಂದಿನಿಂದ ರಾಯರ ಆರಾಧನೆ

    ರಾಯಚೂರು: ಭೀಕರ ಪ್ರವಾಹದಿಂದ ಅತ್ತ ಮನೆಯೂ ಇಲ್ಲ, ಇತ್ತ ಚಿಕಿತ್ಸೆಯೂ ಸಿಗದೆ ಬಾಲಕನೋರ್ವ ಪರದಾಡುತ್ತಿರುವ ಘಟನೆ ರಾಯಚೂರಿನ ಯಳಗುಂದಿ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.

    ಲಿಂಗಸುಗೂರಿನ ಕಡದರಗಡ್ಡಿ ನಡುಗಡ್ಡೆಯ ಬಾಲಕ ಯಲ್ಲಪ್ಪ ಕಳೆದ ಎಂಟು ದಿನಗಳಿಂದ ಬಾಲಕ ಜ್ವರ ಹಾಗೂ ಕಾಲು ಬಾವಿನಿಂದ ನರಳಾಡುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ವೈದ್ಯರು ಬಾಲಕನನ್ನು ರಾಯಚೂರಿಗೆ ಕಳುಹಿಸಲು ಸೂಚನೆ ನೀಡಿದ್ದಾರೆ.

    ಆದರೆ ಜಲದುರ್ಗ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ನಿರಾಶ್ರಿತರ ಕೇಂದ್ರದಿಂದ ಹೊರಗಡೆ ಬಾರದ ಸ್ಥಿತಿಯಲ್ಲಿದ್ದಾರೆ. ಹೆಲಿಕಾಪ್ಟರ್ ಮೂಲಕವಾದರೂ ಕರೆದ್ಯೊಯ್ದು ಬಾಲಕನಿಗೆ ಚಿಕಿತ್ಸೆ ಕೊಡಿಸುವಂತೆ ಪೋಷಕರು ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದಾರೆ.

    ಇತ್ತ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಪ್ರವಾಹದ ಭೀತಿಯಂತೂ ಸದ್ಯಕ್ಕೆ ದೂರವಾಗಿದೆ. ಹೀಗಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲು ಸಕಲ ಸಿದ್ಧತೆಗಳು ನಡೆದಿದೆ. ಇಂದಿನಿಂದ ಆಗಸ್ಟ್ 18 ವರೆಗೆ ರಾಯರ 348ನೇ ಆರಾಧನಾ ಮಹೋತ್ಸವ ನಡೆಯಲಿದೆ.

    ಇಂದು ಸಂಜೆ ಗೋಪೂಜೆ, ಧ್ವಜಾರೋಹಣದೊಂದಿಗೆ ಆರಾಧನೆಗೆ ಚಾಲನೆ ಸಿಗಲಿದೆ. ಇನ್ನು ಆಗಸ್ಟ್ 16ರಂದು ಪೂರ್ವರಾಧನೆ ನಡೆಯಲಿದ್ದು ಈ ಬಾರಿಯ ವಿಶೇಷವೆಂದರೆ ತಿರುಪತಿ ತಿರುಮಲ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ಪೂರ್ವಾರಾಧನೆ ದಿನವೇ ರಾಯರಿಗೆ ಸರ್ಮಪಣೆ ಮಾಡಲಾಗುತ್ತಿದೆ.

  • ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ- ತಂಗಿ ತೀವ್ರ ಅಸ್ವಸ್ಥ

    ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ- ತಂಗಿ ತೀವ್ರ ಅಸ್ವಸ್ಥ

    ಮಂಡ್ಯ: ಡೆಂಗ್ಯೂ ಜ್ವರಕ್ಕೆ ಏಳು ವರ್ಷದ ಶಾಲಾ ಬಾಲಕಿ ಮೃತಪಟ್ಟಿದ್ದು, ಆಕೆಯ ತಂಗಿ ಕೂಡ ಡೆಂಗ್ಯೂ ಜ್ವರದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರವಿಕುಮಾರ್, ರಾಣಿ ದಂಪತಿಗಳ ಪುತ್ರಿ ಹೇಮಾವತಿ ಮೃತ ದುರ್ದೈವಿ. ಕೆ.ಆರ್ ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ರೆ, ಆಕೆಯ 5 ವರ್ಷದ ತಂಗಿ ಪ್ರೇರಣ ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಹೇಮಾವತಿ ನಿಧನರಾದರೆ, ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

    ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅಗಸರಹಳ್ಳಿ ಗ್ರಾಮದಲ್ಲಿ ಆತಂಕವು ಮನೆ ಮಾಡಿದೆ.

  • ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ತೀವ್ರ ಜ್ವರಕ್ಕೆ ಮಂಗ್ಳೂರಲ್ಲಿ ಕಂದಮ್ಮಗಳು ಬಲಿ

    ಮಂಗಳೂರು: ತೀವ್ರ ಜ್ವರ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಸಿಧ್ರಾತುಲ್ ಮುನ್ತಾಹ (8) ಮತ್ತು ಸೋದರಿ 6 ತಿಂಗಳ ಮಗು ಶಿನಾಜ್ ಮೃತ ಕಂದಮ್ಮಗಳು. ಇವರು ಸಿದ್ದಿಕ್ ಮತ್ತು ನಿಶಾ ದಂಪತಿಯ ಮಕ್ಕಳಾಗಿದ್ದು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಕನ್ಯಾಪಡಿಯ ನಿವಾಸಿಗಳಾಗಿದ್ದಾರೆ.

    ಇಬ್ಬರು ಮಕ್ಕಳು ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದ ಮುನ್ತಾಹ ಮಂಗಳವಾರ ಮೃತಪಟ್ಟಿದ್ದಾನೆ. ಶಿನಾಜ್ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

    ಮಕ್ಕಳ ತಾಯಿ ನಿಶಾ ಕೂಡ ಈಗ ಅದೇ ಆಸ್ಪತ್ರೆಯಲ್ಲಿ ಜ್ವರದಿಂದ ದಾಖಲಾಗಿದ್ದಾರೆ ಎಂದು ಕುಟುಂಬ ತಿಳಿಸಿದೆ. ಈ ಪ್ರಕರಣಗಳ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ರಸ್ತೆಯಲ್ಲಿರುವ ತಮ್ಮ ತಾಯಿಯ ಮನೆಯಲ್ಲಿದ್ದಾಗ ಮಕ್ಕಳು ಸೋಂಕಿಗೆ ಒಳಗಾಗಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಜ್ವರಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ವೈದ್ಯಕೀಯ ಅಧಿಕಾರಿ ನೇತೃತ್ವದ ವೈದ್ಯರ ತಂಡ ಈ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದರು.

  • ಮಧ್ಯರಾತ್ರಿಯೇ ನಟ ಶಿವರಾಜ್ ಕುಮಾರ್ ಆಸ್ಪತ್ರೆಗೆ ದಾಖಲು

    ಮಧ್ಯರಾತ್ರಿಯೇ ನಟ ಶಿವರಾಜ್ ಕುಮಾರ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭಾನುವಾರ ಮಧ್ಯರಾತಿಯೇ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶಿವರಾಜ್‍ಕುಮಾರ್ ಅವರು ಜ್ವರ ಮತ್ತು ಕೆಮ್ಮುನಿಂದ ಬಳಲುತ್ತಿದ್ದರು. ಆದ್ದರಿಂದ ರಾತ್ರಿಯೇ ಶಿವರಾಜ್ ಕುಮಾರ್ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಶಿವಣ್ಣನ ಜೊತೆ ಕುಟುಂಬದವರು ಇದ್ದಾರೆ.

    ಸದ್ಯಕ್ಕೆ ಶಿವರಾಜ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಟ ವಿನಯ್ ರಾಜ್ ಕುಮಾರ್ ತಮ್ಮ ಚಿಕ್ಕಪ್ಪನ ಆರೋಗ್ಯವನ್ನು ವಿಚಾರಿಸಿದ್ದಾರೆ. ಭಾನುವಾರ ಸಂಜೆ ಸಿಎಂ ಕುಮಾರಸ್ವಾಮಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿವರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣೆ ಪ್ರಚಾರದಲ್ಲಿ ದಂಪತಿ ಸಮೇತ ಭಾಗಿಯಾಗುತ್ತೇವೆ ಅಂತಾ ಭರವಸೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

    ಸದ್ಯ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಶಿವರಾಜ್‍ಕುಮಾರ್ ಜೆಡಿಎಸ್ ಪರ ಚುನಾವಣೆ ಪ್ರಚಾರ ನಡೆಸುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇಂದು ಅಥವಾ ಮಂಗಳವಾರ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೊದಲು ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಅವರನ್ನೇ ಕಣಕ್ಕೆ ಇಳಿಸಲಾಗುತ್ತೆ ಎನ್ನಲಾಗುತ್ತಿತ್ತು. ಚುನಾವಣೆಗೆ ಶಿವರಾಜ್‍ಕುಮಾರ್ ದಂಪತಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಲಬುರಗಿಯಲ್ಲಿ ಎಚ್1ಎನ್1ಗೆ ವ್ಯಕ್ತಿ ಬಲಿ – ಸಾರ್ವಜನಿಕರಲ್ಲಿ ಆತಂಕ

    ಕಲಬುರಗಿಯಲ್ಲಿ ಎಚ್1ಎನ್1ಗೆ ವ್ಯಕ್ತಿ ಬಲಿ – ಸಾರ್ವಜನಿಕರಲ್ಲಿ ಆತಂಕ

    ಕಲಬುರಗಿ: ಎಚ್1ಎನ್1ಗೆ ಅಫಜಲಪುರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ.

    ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅಫಜಲಪುರ ಪಟ್ಟಣ ನಿವಾಸಿ ಲಕ್ಷ್ಮೀಪುತ್ರ ಎಚ್1 ಎನ್1ಗೆ ಬಲಿಯಾಗಿದ್ದಾರೆ. ಮೊದಲು ಜ್ವರ ಕಾಣಿಸಿಕೊಂಡ ವೇಳೆ ಲಕ್ಷ್ಮಿ ಪುತ್ರ ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಅವರಿಗೆ ಎಚ್1 ಎನ್1 ಸೋಕು ತಗುಲಿರುವುದು ಖಚಿತವಾಗಿದೆ.

    ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಳೆದ ಎರಡು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಲಕ್ಷ್ಮೀಪುತ್ರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಮಹಾರಾಷ್ಟ್ರದ ಸೊಲ್ಲಾಪುರ ಬಬಲಾದ್ ಬಳಿ ಸಣ್ಣ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಸದ್ಯ ಮೃತ ಲಕ್ಷ್ಮೀಪುತ್ರ ಎಚ್1ಎನ್1 ಗೆ ನಿಂದ ಮೃತಪಟ್ಟಿರುವುದು ಖಚಿತವಾಗುತ್ತಿದಂತೆ ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಜಿಲ್ಲಾ ಆರೋಗ್ಯ ಇಲಾಖೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೇ ಸಾರ್ವಜನಿಕರಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿಲ್ಲ. ಕೂಡಲೇ ಜನರಿಗೆ ಈ ಕುರಿತೆ ಎಚ್ಚರಿಕೆ ನೀಡಿ ಮಾಹಿತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2ದಿನ ರಜೆ, ಸೋಮವಾರ ಬನ್ನಿ- ತಾಲೂಕು ಆಸ್ಪತ್ರೆಗೆ ಬಂದ ರೋಗಿಗೆ ಗದರಿದ ನರ್ಸ್

    2ದಿನ ರಜೆ, ಸೋಮವಾರ ಬನ್ನಿ- ತಾಲೂಕು ಆಸ್ಪತ್ರೆಗೆ ಬಂದ ರೋಗಿಗೆ ಗದರಿದ ನರ್ಸ್

    ಗದಗ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ರಾತ್ರಿಯಿಡೀ ರೋಗಿಗಳು ಪರದಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

    ಬಾಲಕ ನವೀನ್ ತೀವ್ರ ಜ್ವರದಿಂದ ಬಳಲುತ್ತಿದ್ರೂ ಗಜೇಂದ್ರಗಡ ತಾಲೂಕು ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಬಾಲಕ ರಾತ್ರಿಯಿಡೀ ಜ್ವರದಿಂದ ಸಾಕಷ್ಟು ಬಳಲಿದ್ದಾನೆ. ಕೇಳಿದ್ರೆ ಎರಡನೆ ಶನಿವಾರ, ರವಿವಾರ ರಜೆ ಇದೆ ಸೋಮವಾರ ಬನ್ನಿ ಎಂದು ನರ್ಸ್ ಗದರಿಸಿ ಕಳುಹಿಸಿದ್ದಾರೆ.

    ವೈದ್ಯರಿಗೆ ಫೋನ್ ಮಾಡಿದ್ರೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂಬುದು ರೋಗಿಗಳ ಆರೋಪವಾಗಿದೆ. ಗಜೇಂದ್ರಗಡ ಆಸ್ಪತ್ರೆನಲ್ಲಿ ವೈದ್ಯರಾಗಲಿ, ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಚಿಕಿತ್ಸೆ ನೀಡಲ್ಲ. ಎರಡನೇ ಶನಿವಾರ, ರವಿವಾರ ಅಥವಾ ಇತರೆ ಸರ್ಕಾರಿ ರಜೆ ಬಂದ್ರೆ ಆಸ್ಪತ್ರೆ ಖಾಲಿಖಾಲಿ ಆಗಿರುತ್ತೆ. ಸರ್ಕಾರಿ ರಜೆ ಬಂದ್ರೆ ರೋಗಿಗಳನ್ನ ದಾಖಲು ಸಹ ಮಾಡಿಕೊಳ್ಳುವುದಿಲ್ಲ. ರೋಗಿಗಳಿಗೆ ಹುಷಾರಾಗಲಿ, ಆಗದೇ ಇರಲಿ, ರಜೆಯ ಹಿಂದಿನ ದಿನವೇ ಎಲ್ಲಾ ರೋಗಿಗಳನ್ನ ಡಿಸ್‍ಚಾರ್ಜ್ ಮಾಡಿ ಕಳುಹಿಸುತ್ತಾರೆ. ಇಲ್ಲಿ ಹೆಳೋರು ಕೆಳೋರು ಯಾರೂ ಇಲ್ಲದಂತಾಗಿದೆ ಎಂಬುದು ರೋಗಿಗಳ ಆರೋಪವಾಗಿದೆ.

    ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನೊಂದರೋಗಿಗಳು ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜ್ವರಕ್ಕೆ ಅಂತಾ ಡಾಕ್ಟರ್ ಇಂಜೆಕ್ಷನ್ ಕೊಟ್ರು- ವ್ಯಕ್ತಿಯ ಇಡೀ ದೇಹದ ಚರ್ಮವೇ ಕಪ್ಪಾಯ್ತು!

    ಜ್ವರಕ್ಕೆ ಅಂತಾ ಡಾಕ್ಟರ್ ಇಂಜೆಕ್ಷನ್ ಕೊಟ್ರು- ವ್ಯಕ್ತಿಯ ಇಡೀ ದೇಹದ ಚರ್ಮವೇ ಕಪ್ಪಾಯ್ತು!

    ಮೈಸೂರು: ಜ್ವರಕ್ಕೆ ಕೊಟ್ಟ ಇಂಜೆಕ್ಷನ್ ಅಡ್ಡಪರಿಣಾಮದಿಂದ ವ್ಯಕ್ತಿಯೊಬ್ಬನ ಚರ್ಮಕ್ಕೆ ಹಾನಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸುರೇಶ್ ಎಂಬವರಿಗೆ ಇಂತಹ ಅನುಭವವಾಗಿದ್ದು, ಇದೀಗ ಅವರು ಆತಂಕಕ್ಕೆ ಒಳಗಾಗಿದ್ದಾರೆ.

    ನಂಜನಗೂಡಿನ ಹೋಟೆಲೊಂದರಲ್ಲಿ ನೌಕರನಾಗಿರುವ ಸುರೇಶ್, ಕೆಲವು ದಿನಗಳ ಹಿಂದೆ ಜ್ವರಕ್ಕಾಗಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.ಈ ವೇಳೆ ಅಲ್ಲಿನ ವೈದ್ಯರಾದ ಡಾ. ಚಿದಾನಂದ ಮೂರ್ತಿ, ಸುರೇಶ್ ಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಸ್ವಲ್ಪ ಸಮಯಕ್ಕೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಬಳಿಕ ಇಡೀ ದೇಹ ಆವರಿಸಿದೆ. ಯಾವುದೋ ಕಾಯಿಲೆ ಬಂದಿರಬಹುದೆಂದು ತಿಳಿದುಕೊಂಡು ಮಾನಸಿಕವಾಗಿ ಸುರೇಶ್ ಕುಗ್ಗಿದ್ದಾರೆ.

    ಸುರೇಶ್ ಪರಿಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ ಮಂಜು ಕೂಡಲೇ ವೈದ್ಯ ಚಿದಾನಂದಮೂರ್ತಿ ಅವರನ್ನ ಸಂಪರ್ಕಿಸಿದಾಗ ತಾವು ಕೊಟ್ಟ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಆಗಿದೆ. ನಾನೇ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ. ವೈದ್ಯರ ಎಡವಟ್ಟಿನಿಂದ ಸುರೇಶ್ ಗೆ ಇಲ್ಲವಾಗಿದ್ದ ಕಾಯಿಲೆ ಬಂದಿದ್ದು, ಮಾಡದ ತಪ್ಪಿಗೆ ಅಮಾಯಕ ಶಿಕ್ಷೆ ಅನುಭವಿಸುವಂತಾಗಿದೆ.

  • ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚುನಾವಣಾ ಎಫೆಕ್ಟ್, ಅಧಿಕಾರಿಗಳ ನಿರ್ಲಕ್ಷ್ಯ- ರಾಜ್ಯಕ್ಕೆ ಹಾಲು ನೀಡುವ ರೈತರಲ್ಲಿ ಕಣ್ಣೀರು!

    ಚಿಕ್ಕಬಳ್ಳಾಪುರ: ಹೈನೋದ್ಯಮವೇ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ರೈತರ ಪ್ರಮುಖ ಜೀವನಾಧಾರ. ಜಿಲ್ಲೆಯಲ್ಲಿ ನೀರಿಗೆ ಬರ ಇದ್ದರೂ ಹಾಲಿಗೆ ಮಾತ್ರ ಎಂದೂ ಬರ ಇಲ್ಲ. ಹಾಲಿನ ಹೊಳೆಯನ್ನೇ ಹರಿಸುವ ರೈತರಿಗೆ ಮಿಶ್ರ ತಳಿ ಸೀಮೆ ಹಸುಗಳೇ ಬದುಕಿನ ಆಧಾರಕ್ಕೆ ಆರ್ಥಿಕ ಮೂಲ. ಆದರೆ ಈಗ ಕ್ಷೀರಸಾಗರದ ಮೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಹೈನು ಗಾರಿಕೆಯ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ.

    ಹೌದು. ಜಿಲ್ಲೆಯಾದ್ಯಂತ ಮಹಾಮಾರಿ ಕಾಲುಬಾಯಿ ಜ್ವರಕ್ಕೆ ನೂರಾರು ಜಾನುವಾರುಗಳ ಮರಣ ಮೃದಂಗ ಮುಂದುವರೆದಿದೆ. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಸುಮಾರು 80 ಸಾವಿರ ರೂ. ಮೌಲ್ಯದ ಹಸು ಕಾಲುಬಾಯಿಜ್ವರಕ್ಕೆ ಬಲಿಯಾಗಿದೆ. ಅಲ್ಲದೇ ಉಳಿದ ಮೂರು ಹಸುಗಳು ಕೂಡ ಕಾಲು ಬಾಯಿ ಜ್ವರಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ನರಳಾಡುತ್ತಿವೆ. ಅಂದ ಹಾಗೆ ಕಳೆದ 15 ದಿನಗಳಿಂದ ತಿಪ್ಪೇನಹಳ್ಳಿ ಗ್ರಾಮವೊಂದರಲ್ಲಿ 15ಕ್ಕೂ ಹೆಚ್ಚು ಸೀಮೆ ಹಸುಗಳು ಈ ಕಾಲುಬಾಯಿಜ್ವರಕ್ಕೆ ಬಲಿಯಾಗಿವೆ.

    ಏನಿದು ಕಾಲುಬಾಯಿ ಜ್ವರ..?
    ಇಂಗ್ಲಿಷ್ ನಲ್ಲಿ ಫೂಟ್ ಅಂಡ್ ಮೌತ್ ಡಿಸೀಸ್ ಎನ್ನವ ಈ ಕಾಯಿಲೆ ಸಾಂಕ್ರಾಮಿಕವಾಗಿ ಹರಡುವ ವರ್ಗಕ್ಕೆ ಸೇರಿದೆ. ಗಾಳಿಯಿಂದ ಹರಡುವ ಈ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ ನಿಯಂತ್ರಣಕ್ಕೆ ತುರುವುದ ಬಹುಕಷ್ಟದ ಕೆಲಸ. ನಿಯಂತ್ರಣಕ್ಕೆ ತರುವ ವೇಳೆಗೆ ಸಾಂಕ್ರಾಮಿಕ ರೋಗಕ್ಕೆ ನೂರಾರು ಹಸುಗಳು ಬಲಿಯಾಗಿರುತ್ತದೆ. ಗಾಳಿಯ ಮೂಲಕ ಅತಿ ವೇಗವಾಗಿ ಹರಡುವುದರಿಂದ ಅಕ್ಕ-ಪಕ್ಕದ ರಾಸುಗಳಿಗೆ ಬಹುಬೇಗ ಈ ಸೋಂಕು ತಗುಲುತ್ತದೆ.

    ಸಾಮಾನ್ಯವಾಗಿ ಗೊರಸು ಇರುವಂತಹ ರಾಸುಗಳಿಗೆ ತಗುಲುವ ಈ ಸೋಂಕು, ಜಾನುವಾರುಗಳ ಕಾಲು, ಬಾಯಿ, ನಾಲಿಗೆ ಕೆಚ್ಚಲು ಸೇರಿದಂತೆ ದೇಹದ ಬಹುತೇಕ ಅಂಗಾಂಗಗಳ ಮೇಲೆ ಗಾಯಗಳಿಗೆ ಕಾರಣವಾಗುತ್ತವೆ. ಬಾಯಿ ಹುಣ್ಣಾಗಿ ಕನಿಷ್ಠ ಮೇವು ಕೂಡ ತಿನ್ನಲಾಗದಂತಹ ದುಸ್ಥಿತಿಗೆ ತಲುಪುವುತ್ತವೆ. ಅಲ್ಲದೇ ಗಾಯಗೊಂಡ ಜಾಗದಲ್ಲಿ ಹುಣ್ಣು ಹೆಚ್ಚಾಗಿ ನಿಶ್ಯಕ್ತಿಯಿಂದ ಬಾಯಿಯಲ್ಲಿ ಜೊಲ್ಲು ಸುರಿಸುತ್ತಾ ಕೊನೆಗೆ ಸಾವನ್ನಪ್ಪುತ್ತವೆ. ಕಳೆದ 2013-14 ರಲ್ಲೂ ಕೂಡ ಜಿಲ್ಲೆಯಲ್ಲಿ ನೂರಾರು ಹಸುಗಳು ಸಾವನ್ನಪ್ಪಿದ್ದವು. ಮಳಮಾಚನಹಳ್ಳಿ ಗ್ರಾಮವೊಂದರಲ್ಲೇ 45 ಹಸುಗಳು ಸಾವನ್ನಪ್ಪಿದ್ದವು.

    ಚುನಾವಣಾ ಸೈಡ್ ಎಫೆಕ್ಟ್.!
    ಈ ಬಾರಿ ಇದೆಕ್ಕೆಲ್ಲಾ ಪ್ರಮುಖ ಕಾರಣ, ಚುನಾವಣಾ ಸೈಡ್ ಎಫೆಕ್ಟ್. ಅಂದ ಹಾಗೆ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಜಿಲ್ಲೆಯ ಎಲ್ಲಾ ಜಾನುವಾರಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲುಬಾಯಿಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಆದರೆ ಈ ಬಾರಿ ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಲಸಿಕೆಯನ್ನ ಹಾಕಿಲ್ಲ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿಜ್ವರ ವ್ಯಾಪಕವಾಗಿ ಹರಡಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರ ಸಾಕಷ್ಟು ಉಲ್ಭಣಗೊಂಡಿದ್ದು, ನೂರಾರು ರಾಸುಗಳು ಬಲಿಯಾಗಿವೆ. ಇನ್ನೂ ಗಾಳಿಯಲ್ಲಿ ಹರಡುವ ಈ ಖಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದುವರೆಗೂ ಇಲಾಖೆಯ ಅಧಿಕಾರಿಗಳು ಲಸಿಕೆ ಹಾಕಲು ಮುಂದಾಗಿಲ್ಲ.

    ಸಂಕಷ್ಟದಲ್ಲಿ ರೈತ:
    ಹೈನುಗಾರಿಕೆಯೇ ಜೀವನಾಧಾರ, ಹಸುಗಳಿಂದಲೇ ಉತ್ಪಾದನೆಯಾಗುವ ಹಾಲಿನಿಂದ ಬರುವ ಆದಾಯವೇ ಜಿಲ್ಲೆಯ ಬಹುತೇಕ ಕುಟುಂಬಗಳ ಸಂಸಾರದ ನೌಕೆಗೆ ಆರ್ಥಿಕ ಮೂಲ. ಒಂದು ಸೀಮೆಹಸುವಿಗೆ 60 ಸಾವಿರದಿಂದ ರೂ. ನಿಂದ 1 ಲಕ್ಷ ರೂ. ಕೊಟ್ಟು ಖರೀದಿ ಮಾಡಲಾಗುತ್ತದೆ. ಆದರೆ ಪ್ರತಿ ವರ್ಷವೂ ಬಿಟ್ಟು ಬಿಡದೆ ಕಾಣಿಸಿಕೊಳ್ಳುತ್ತಿರುವ ಈ ಕಾಲು ಬಾಯಿ ಜ್ವರದಿಂದ ಪ್ರತಿ ವರ್ಷವೂ ನೂರಾರು ಸೀಮೆ ಹಸುಗಳು ಬಲಿಯಾಗುತ್ತಿವೆ.

    ಒಂದೆಡೆ ಪ್ರೀತಿಯಿಂದ ಸಾಕಿದ ಹಸು ಕಳೆದುಕೊಂಡ ದುಃಖ, ಮತ್ತೊಂದೆಡೆ ಕುಟುಂಬದ ಆರ್ಥಿಕ ಮೂಲವನ್ನೇ ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆರ್ಥಿಕ ನಷ್ಟದಿಂದ ಹಸುಗಳನ್ನ ಸಾಕುವ ಮನೆಯ ಮಹಿಳೆಯರ ಹಾಗೂ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಅಲ್ಲದೇ ಜ್ವರದಿಂದ ಸಾವನ್ನಪ್ಪಿದ ಹಸುವನ್ನು ಹಾಗೇ ಬಿಸಾಡುವ ಹಾಗಿಲ್ಲ, ಜೆಸಿಬಿ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ ಮಣ್ಣಲ್ಲಿ ಹೂತು ಹಾಕಬೇಕು. ಇಲ್ಲವಾದಲ್ಲಿ ಕಾಯಿಲೆ ಹರಡುವ ವೇಗ ಮತ್ತೆ ಹೆಚ್ಚಾಳವಾಗುತ್ತದೆ. ಸಂಕಷ್ಟದಲ್ಲಿರುವ ರೈತ ಜೆಸಿಬಿಗೆ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗುತ್ತದೆ. ಇನ್ನೂ ರೋಗ ಪೀಡಿತ ಹಸುವಿನ ಹಾಲನ್ನ ಸಹ ಹಾಲು ಉತ್ಪಾದಕರ ಸಂಘಗಳು ಖರೀದಿಸುವುದಿಲ್ಲ. ಇಷ್ಟೆಲ್ಲಾ ನೋವುನುಂಗಿಕೊಳ್ಳುವ ರೈತರು ಅಧಿಕಾರಿ ವರ್ಗ, ಸರ್ಕಾರಕ್ಕೆ ಹಿಡಿಶಾಪ ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.

    ದೇವರ ಮೊರೆ.!
    ಪ್ರತಿ ವರ್ಷವೂ ಬರುವ ಈ ಕಾಲು ಬಾಯಿ ಜ್ವರವನ್ನು ಹಳ್ಳಿಯ ಜನ ಗಾಳಿಯಮ್ಮ ಅಂತಲೇ ಕರೆಯುತ್ತಾರೆ. ದೇವರ ವಕ್ರದೃಷ್ಠಿ ನಮ್ಮ ಊರಿನ ಮೇಲೆ ಬಿದ್ದಿದೆ. ಹಾಗಾಗಿಯೇ ಗ್ರಾಮದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬ ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆ ಜನರಲ್ಲಿದೆ. ಹೀಗಾಗಿ ಗಾಳಿಯಮ್ಮ ಬಂದಿದೆ ಅಂತ ಪ್ರತಿ ಗ್ರಾಮದಲ್ಲೂ ಈ ಕಾಯಿಲೆ ಕಾಣಿಸಿಕೊಂಡಾಗ ಗ್ರಾಮದೇವತೆಗಳ ಮೆರವಣಿಗೆ ಮಾಡಿ ಜಾನುವಾರುಗಳನ್ನ ಉಳಿಸಿಕೊಡುವಂತೆ ದೇವರಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ.

    ಕಳಪೆ ಗುಣಮಟ್ಟದ ಲಸಿಕೆ ಕಾರಣ?
    ಹೌದು, ಅಂದ ಹಾಗೇ ರಾಜ್ಯದಲ್ಲಿ ಈಗಾಗಲೇ ಕಳೆದ 7 ವರ್ಷಗಳಿಂದ ಅಂದರೆ ವರ್ಷಕ್ಕೆ ಎರಡು ಬಾರಿಯಂತೆ 14 ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ. ಈ ಮೊದಲು ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ಅತ್ಯುನ್ನತ ಗುಣಮಟ್ಟದ ಲಸಿಕೆಯನ್ನು ಸರ್ಕಾರ ಖರೀದ ಮಾಡಿ ಲಸಿಕೆ ಹಾಕಲಾಗುತ್ತಿತ್ತು. ಆದರೆ ಕಳೆದ 3 ವರ್ಷಗಳ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಲೂರು ಬಳಿಯ ಬಯೋವೆಟ್ ಎಂಬ ಖಾಸಗಿ ಸಂಸ್ಥೆಯ ಲಸಿಕೆಯನ್ನ ಖರೀದಿ ಮಾಡಿ ಹಾಕಲಾಗುತ್ತಿದೆ. ಆದರೆ ಈ ಬಯೋವೆಟ್ ಲಸಿಕೆಯನ್ನು ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಿರಸ್ಕರಸಿ, ಸಂಸ್ಥೆಯನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇಂತಹ ಸಂಸ್ಥೆಯ ಕಳಪೆ ಗುಣಮಟ್ಟದ ಲಸಿಕೆ ಹಾಕುತ್ತಿರುವುದರಿಂದ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಸಾಧ್ಯವಾಗದಿರುವುದು ಕಾರಣ ಎಂಬುದು ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ರ ಆರೋಪವಾಗಿದೆ.

    ರೋಗ ನಿಯಂತ್ರಣ ಕ್ರಮಗಳು: ಸಮಯಕ್ಕೆ ತಕ್ಕಂತೆ ಕಾಲು ಬಾಯಿ ಜ್ವರ ನಿಯಂತ್ರಕ ಲಸಿಕೆ ಹಾಕಿಸುವುದು. ರೋಗ ಪೀಡಿತ ಹಸುಗಳಿಂದ ರೋಗ ಮುಕ್ತ ಹಸುಗಳನ್ನ ದೂರ ಇಡುವುದು. ರೋಗ ಹರಡದಂತೆ ಸತ್ತ ಹಸುಗಳನ್ನ ಮಣ್ಣಲ್ಲಿ ಹೂತು ಹಾಕುವುದು ಹಾಗೂ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿಯಂತ್ರಣಕ್ಕೆ ತರಬಹುದು.

    – ಮುದ್ದುಕೃಷ್ಣ