Tag: ಜ್ವರ

  • ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    ಬೆಂಗ್ಳೂರಿಗರೇ ಎಚ್ಚರ, 6 ದಿನಕ್ಕೆ19 ಮಂದಿ ಬಲಿ

    – ನಿಗೂಢ ಹೆಜ್ಜೆ ಇಡುತ್ತಿದೆ ಕೊರೊನಾ
    – ಹೆಚ್ಚಾಗುತ್ತಿದೆ ವಿಷಮ ಶೀತ ಜ್ವರ, ಸಾರಿ ಪ್ರಕರಣ
    – ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು ಬೆಂಗಳೂರಿನಲ್ಲಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಈಗ ನಿಗೂಢ ಹೆಜ್ಜೆಯನ್ನು ಇಡುತ್ತಿದೆ. ಇಲ್ಲಿಯವರೆಗೆ ಟ್ರಾವೆಲ್ ಹಿಸ್ಟರಿ, ಸೋಂಕಿತರ ಸಂಪರ್ಕದಿಂದ ಕೊರೊನಾ ಬರುತ್ತಿತ್ತು. ಆದರೆ ಈಗ ಯಾವುದೇ ಸಂಪರ್ಕ ಇಲ್ಲದೇ ಕೊರೋನಾ ಗುಪ್ತಗಾಮಿನಿಯಂತೆ ದೇಹ ಸೇರುತ್ತಿದೆ.

    ಲಾಕ್‌ಡೌನ್‌ ಸಮಯದಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಅನ್‌ಲಾಕ್‌ ಆಗುತ್ತಿದ್ದಂತೆ ಜನರ ಓಡಾಟದ ಜಾಸ್ತಿಯಾಗಿದ್ದು, ಅಂತರಾಜ್ಯ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಈಗ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಕೊರೊನಾ ಬಗ್ಗೆ ಜನರಲ್ಲಿ ಸ್ವಲ್ಪವಾದರೂ ಭಯವಿತ್ತು. ಆದರೆ ಈಗ ಭಯ ಇಲ್ಲದಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧನವಾಗಿ ಹೆಚ್ಚಾಗುತ್ತಿದೆ.

    ಶೀತ, ಕೆಮ್ಮು, ಜ್ವರ ಬಂದಿದೆ ಎಂದು ಸುಮ್ಮನಾದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. 5 ದಿನಗಳಲ್ಲಿ ಬೆಂಗಳೂರಿನಲ್ಲಿ ವಿಷಮ ಶೀತ ಜ್ವರ(Influenza Like Illness -ಐಎಲ್‌ಐ) ಉಸಿರಾಟದ(ಸಾರಿ) ಪ್ರಕರಣ ಹೆಚ್ಚಾಗಿದೆ.

    ಯಾವ ದಿನ ಎಷ್ಟು?
    ಜೂನ್‌ 9 ರಂದು ಒಟ್ಟು 29 ಪ್ರಕರಣಗಳು ಬಂದಿದ್ದು ಇದರಲ್ಲಿ 2 ಐಎಲ್‌ಐ, ಜೂನ್‌ 10 ರಂದು ಬಂದ 42 ಪ್ರಕರಣಗಳಲ್ಲಿ 21 ಐಎಲ್‌ಐ ಆಗಿತ್ತು. ಜೂನ್‌ 11ರಂದು ಒಟ್ಟು 17 ಪ್ರಕರಣಗಳು ಬಂದಿದ್ದು 6 ಐಎಲ್‌ಐ ಆಗಿದ್ರೆ 1 ಸಾರಿ ಆಗಿತ್ತು. ಜೂನ್‌ 12 ರಂದು ಬಂದ 36 ರಲ್ಲಿ 11 ಮಂದಿಗೆ ಐಎಲ್‌ಐ, 5 ಮಂದಿಗೆ ಸಾರಿ ಬಂದಿತ್ತು. ಜೂನ್‌ 13 ರಂದು ಒಟ್ಟು 31 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 12 ಮಂದಿಗೆ ವಿಷಮಶೀತ ಜ್ವರ ಇದ್ದರೆ ಇಬ್ಬರಿಗೆ ಉಸಿರಾಟ ತೊಂದರೆಯಿದೆ.

    6 ದಿನಕ್ಕೆ 19 ಬಲಿ:
    ಬೆಂಗಳೂರಿನಲ್ಲಿ ಬರೋಬ್ಬರಿ 6 ದಿನಕ್ಕೆ 19 ಜನ ಮೃತಪಟ್ಟಿದ್ದಾರೆ. ಜೂ.8 ರಿಂದ 13ನೇ ತಾರೀಖಿನವರೆಗೆ ಬಲಿಯಾದ 19 ಮಂದಿ ಸಾರಿ, ಐಎಲ್‌ಐ ಕಾರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೃದಯ ಸಂಬಂಧಿ ಖಾಯಿಲೆ ಮತ್ತು ಮಧುಮೇಹದಿಂದ ಬಳಲುತ್ತಾ ಇದ್ದವರಿಗೆ ಐಎಲ್‌ಐ, ಸಾರಿ ಹೆಚ್ಚು ಬರುತ್ತಿರುವುದು ದೊಡ್ಡ ತಲೆನೋವಾಗಿದೆ.

    ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇವರಿಗೆ ಹೇಗೋ ಕೊರೊನಾ ವೈರಸ್‌ ತಗುಲಿ ಮತ್ತಷ್ಟು ಸಮಸ್ಯೆ ತಂದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಸದ್ಯ ಈಗ ಬೆಂಗಳೂರಿನಲ್ಲಿ 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ ಒಟ್ಟು 648 ಮಂದಿಗೆ ಸೋಂಕು ಬಂದಿದ್ದು, ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬೆಂಗಳೂರಿನಲ್ಲೇ  ಬಲಿಯಾಗಿದ್ದಾರೆ. 648ರ ಪೈಕಿ 319 ಸಕ್ರಿಯ ಪ್ರಕರಣಗಳಿದ್ದು, 299 ಮಂದಿ ಬಿಡುಗಡೆಯಾಗಿದ್ದಾರೆ.

  • ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಲವರಿಗೆ ಜ್ವರ, ಮೆ- ಕೈ ನೋವು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಗ್ರಾಮದಲ್ಲಿ ಪ್ರತಿ ದಿನ ಸುಮಾರು 15ರಿಂದ 20 ಜನರಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಸ್ಥರು ಗಾಬರಿಯಾಗಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಗೆ ಹೋದರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ನಮ್ಮ ಬಳಿ ಆಸ್ಪತ್ರೆಗೆ ತೋರಿಸಲು ಹಣವೂ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯೂ ಸಿಗುತ್ತಿಲ್ಲ. ಹೀಗಾಗಿ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗುಣಮುಖನಾಗಿದ್ದ ಸೋಂಕಿತನಿಗೆ ಮತ್ತೆ ಜ್ವರ – ಆತಂಕದಲ್ಲಿ ಕೊಡಗಿನ ಜನತೆ

    ಗುಣಮುಖನಾಗಿದ್ದ ಸೋಂಕಿತನಿಗೆ ಮತ್ತೆ ಜ್ವರ – ಆತಂಕದಲ್ಲಿ ಕೊಡಗಿನ ಜನತೆ

    ಮಡಿಕೇರಿ: ಕೊರೊನಾ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು ಜಿಲ್ಲೆಯ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

    ಕೊಡಗು ಜಿಲ್ಲೆಗೆ ದುಬೈನಿಂದ ಹಿಂದಿರುಗಿದ್ದ 35 ವರ್ಷದ ವ್ಯಕ್ತಿಗೆ ಮಾರ್ಚ್ 19ರಂದು ಕೊರೊನಾ ಪತ್ತೆಯಾಗಿತ್ತು. ಬಳಿಕ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಿ 22 ದಿನಗಳ ಕಾಲ ಐಸೊಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಗುಣಮುಖನಾಗಿದ್ದರಿಂದ ಏಪ್ರಿಲ್ 11 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

    ಈಗ ಈ ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಂಡಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ವ್ಯಕ್ತಿಯೇ ಸ್ವಯಂಪ್ರೇರಿತವಾಗಿ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಸದ್ಯ ವ್ಯಕ್ತಿಗೆ ಐಸೊಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ಲ್ಯಾಬ್ ಕಳುಹಿಸಿಕೊಡಲಾಗಿದೆ.

    ನಾಳೆ ವ್ಯಕ್ತಿಯ ಲ್ಯಾಬ್ ರಿಪೋರ್ಟ್ ಬರಲಿದ್ದು ಜಿಲ್ಲಾಡಳಿತ ಕೂಡ ಆತಂಕದಿಂದ ಕಾಯುತ್ತಿದೆ. ಆದರೆ ಜಿಲ್ಲೆಯ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್ – ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

    ಕೊರೊನಾ ಎಫೆಕ್ಟ್ – ಸರಿಯಾದ ವೇಳೆಗೆ ಚಿಕಿತ್ಸೆ ಸಿಗದೆ ಬಾಲಕಿ ಸಾವು

    ಬಳ್ಳಾರಿ: ಕೊರೊನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಬಾಲಕಿಯೊಬ್ಬಳು ಕೊನೆಯುಸಿರೆಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಾಂಡ್ರಿ ಗ್ರಾಮದ ನಿವಾಸಿಗಳಾದ ರವಿಕುಮಾರ್ ಹಾಗೂ ಶಕುಂತಲಾ ದಂಪತಿ ಮಗಳು ಸ್ನೇಹ (13) ಮೃತ ದುರ್ದೈವಿ. ಸ್ನೇಹಾಗೆ ಮಾರ್ಚ್ 28ರಂದು ಮನೆಯಲ್ಲಿ ಇರುವ ವೇಳೆ ಜ್ವರ ಕಾಣಿಸಿಕೊಂಡಿತ್ತು. ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿಗೆ ಮಾರ್ಚ್ 29ರಂದು ಪುನಃ ಜ್ವರ ಮತ್ತು ವಾಂತಿ ಕಾಣಿಸಿಕೊಂಡಿತ್ತು.

    ಇದರಿಂದ ಭಯಗೊಂಡ ಪೋಷಕರು ಸಂಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಹೊಸಪೇಟೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ತಂದೆ ರವಿ, ತನ್ನ ಪುತ್ರಿಯನ್ನು ಕರೆತಂದು ಹೊಸಪೇಟೆಗೆ ಬಂದು ಆಸ್ಪತ್ರೆಗಳನ್ನೆಲ್ಲ ಸುತ್ತಾಡಿದ್ದಾರೆ. ಎರಡು ತಾಸು ಅಲೆದಾಡಿದರೂ ಖಾಸಗಿ ಕ್ಲಿನಿಕ್ ಸಿಬ್ಬಂದಿ, ಜ್ವರವು ಕೊರೊನಾ ಲಕ್ಷಣವಾಗಿರುವ ಹಿನ್ನೆಲೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ.

    ಕೊನೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿನವರು ವಿಮ್ಸ್‍ನ ದಾರಿ ತೋರಿಸಿದ್ದಾರೆ. ಅಂಬ್ಯುಲೆನ್ಸ್‍ನಲ್ಲಿ ಅಲ್ಲಿಂದ ಬಳ್ಳಾರಿಗೆ ಕರೆತಂದು ಚಿಕಿತ್ಸೆಗೆ ದಾಖಲಿಸುತ್ತಿದ್ದಂತೆ ಬಾಲಕಿ ಕೊನೆಯುಸಿರು ಎಳೆದಿದ್ದಾಳೆ. ಒಂದು ವೇಳೆ ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ಮಗಳು ಬದುಕುಳಿಯುವ ಸಾಧ್ಯತೆಗಳಿದ್ದವು ಎಂದು ಮೃತ ಬಾಲಕಿಯ ತಂದೆ ರವಿಕುಮಾರ್ ಆರೋಪಿಸಿದ್ದಾರೆ.

  • ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯ: ಇದಕ್ಕಿದ್ದಂತೆ ಒಂದು ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ 50 ಮಂದಿ ಜನರಿಗೆ ಕಳೆದ ಹಲವು ದಿನಗಳಿಂದ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮದಲ್ಲಿ 100 ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಜ್ವರ ಕಾಣಿಸಿಕೊಂಡಿದೆ. ಇದರದ ಇಡೀ ಗ್ರಾಮ ಹಾಗೂ ಅಕ್ಕ-ಪಕ್ಕದ ಜನರು ಗಾಬರಿಗೊಂಡಿದ್ದಾರೆ.

    ಈ ಗ್ರಾಮಕ್ಕೆ ಮುಂಬೈ, ದುಬೈ ಹಾಗೂ ಬೆಂಗಳೂರಿನಿಂದ ಹಲವು ಜನರು ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಲವು ದಿನಗಳಿಂದ ಜ್ವರ ಬಂದಿದ್ದರೂ ಸಹ ಜನರು ಆಸ್ಪತ್ರೆಗೆ ಹೋಗುತ್ತಿಲ್ಲ. ಆಸ್ಪತ್ರೆಗೆ ಹೋದರೆ ಕ್ವಾರಂಟೈನ್‍ನಲ್ಲಿ ಹಾಕಬಹುದು ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.

    ಇಂದಿಗೂ ಸಹ ಈ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲಿಟ್ಟಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಜನರನ್ನು ತಪಾಸಣೆ ಮಾಡಬೇಕಾಗಿದೆ.

  • ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ

    – ಅಲೆಪ್ಪಿ ಆಸ್ಪತ್ರೆಯಿಂದ ಶುಕ್ರವಾರ ಪರಾರಿ
    – ದಂಪತಿಗಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರು

    ತಿರುವನಂತಪುರಂ: ಆಸ್ಪತ್ರೆಗೆ ದಾಖಲಾದ ಬಳಿಕ ಪರಾರಿಯಾಗಿದ್ದ ಅಮೆರಿಕ ಪ್ರಜೆಗಳು ಕೊನೆಗೂ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಮೆರಿಕದ ಮೂಲದ ದಂಪತಿ ದೋಹಾ ಮೂಲಕ ಮಾರ್ಚ್ 9 ರಂದು ಕೇರಳದ ಕೊಚ್ಚಿಗೆ ಬಂದಿದ್ದರು. ದಂಪತಿ ಪೈಕಿ ಒಬ್ಬರಲ್ಲಿ ಕೊರೊನಾ ಲಕ್ಷಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲೆಪ್ಪಿ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು.

    ಆಸ್ಪತ್ರೆ ದಾಖಲಾಗುವಾಗ ನಾವು ಅಮೆರಿಕದ ಪ್ರಜೆಗಳು, ಕಳೆದ ಮೂರು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿದ್ದೇವೆ ಎಂದು ತಿಳಿಸಿದ್ದರು. ಆಸ್ಪತ್ರೆಯ ಸಿಬ್ಬಂದಿ ನಿಮ್ಮನ್ನು  ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಅದರೆ ದಂಪತಿ ಕೊರೊನಾ ಪರೀಕ್ಷೆ ನಡೆಸಲು ಅನುಮತಿ ನೀಡಿರಲಿಲ್ಲ.

    ಈ ಸಂಬಂಧ ಪೊಲೀಸರು ಮಾಹಿತಿ ನೀಡಿ ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಪರೀಕ್ಷೆಗೆ ವೈರಾಲಜಿ ಆಸ್ಪತ್ರೆಗೆ ದಾಖಲಾಗಬೇಕು, ಪ್ರತ್ಯೇಕ ನಿಗಾದಲ್ಲಿರಬೇಕು ಎಂದು ಸೂಚಿಸಿದ್ದರು. ಈ ಮಧ್ಯೆ ದಂಪತಿ ಯಾರಿಗೂ ತಿಳಿಸದೇ ಶುಕ್ರವಾರ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ನಾಪತ್ತೆಯಾದ ಈ ದಂಪತಿ ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.

    ಇಂದು ಬೆಳಗ್ಗೆ ಈ ದಂಪತಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದ್ದು, ಈಗ ಆಸ್ಪತ್ರೆಗೆ ದಾಖಲಿಸಿ ನಿಗಾ ಇಡಲಾಗಿದೆ. ದಂಪತಿ ಕ್ಯಾಬ್ ಮೂಲಕ ಪ್ರಯಾಣಿಸಿದ್ದು ಕ್ಯಾಬ್ ಚಾಲಕನನ್ನು ಸಹ ದಾಖಲಿಸಿ ನಿಗಾ ಇಡಲಾಗಿದೆ.

    ಕೇರಳದಲ್ಲಿ 19 ಮಂದಿ ಕೊರೊನಾ ಪೀಡಿತರಿದ್ದಾರೆ. ಶುಕ್ರವಾರ ಒಂದು ಕೇಸ್ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಖ್ಯೆ 19ಕ್ಕೆ ಏರಿಕೆ ಆಗಿತ್ತು.

  • ಮೆಕ್ಕಾದಿಂದ ಬಂದಿರೋ ಹಾಸನ ಮಹಿಳೆಗೆ ಜ್ವರ- ಹಿಮ್ಸ್ ಸ್ಪೆಷಲ್ ವಾರ್ಡ್‍ಗೆ ದಾಖಲು

    ಮೆಕ್ಕಾದಿಂದ ಬಂದಿರೋ ಹಾಸನ ಮಹಿಳೆಗೆ ಜ್ವರ- ಹಿಮ್ಸ್ ಸ್ಪೆಷಲ್ ವಾರ್ಡ್‍ಗೆ ದಾಖಲು

    ಹಾಸನ: ಮೆಕ್ಕಾದಿಂದ ಆಗಮಿಸಿದ್ದ ಹಾಸನ ಮೂಲದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮಹಿಳೆಗೆ ಹಾಸನದ ಹಿಮ್ಸ್ ಆಸ್ಪತ್ರೆಯ ಸ್ಪೆಷಲ್ ವಾರ್ಡ್‍ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಇತ್ತೀಚೆಗಷ್ಟೇ ಮಹಿಳೆ ಮೆಕ್ಕಾದಿಂದ ವಾಪಸ್ಸಾಗಿದ್ದರು. ಮೆಕ್ಕಾದಿಂದ ವಾಪಸ್ಸಾದ ನಂತರ ಮಹಿಳೆಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು. ಆದರೆ ಜ್ವರ ವಾಸಿಯಾಗದ ಕಾರಣ ಮಂಗಳವಾರ ರಾತ್ರಿ ಮಹಿಳೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಹಿಳೆಯ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು, ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆಯಿದೆ.

    ಇತ್ತ ಫೆಬ್ರವರಿ 29ರಂದು ಸೌದಿ ಅರೇಬಿಯಾದಿಂದ ಬಂದ 75 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜೀಮ್ಸ್ ಆಸ್ಪತ್ರೆಯಿಂದ ಹೈದರಬಾದ್‍ಗೆ ಶಿಫ್ಟ್ ಮಾಡಲಾಗಿದೆ. ವೃದ್ಧನ ಕುಟುಂಬಸ್ಥರು ಹೈದರಾಬಾದ್‍ಗೆ ಕರೆದೊಯ್ದಿದ್ದಾರೆ.

    ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದ್ರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆ. ಈಗಾಗಲೇ ಕುಟುಂಬಸ್ಥರನ್ನು ಕೂಡ ತಪಾಸಣೆ ಮಾಡಿರುವ ವೈದ್ಯರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

  • ವಿಚಿತ್ರ ಜ್ವರ, ಮೊದಲ ಬಲಿ- ಗ್ರಾಮದಲ್ಲಿ ಭಯದ ವಾತಾವರಣ

    ವಿಚಿತ್ರ ಜ್ವರ, ಮೊದಲ ಬಲಿ- ಗ್ರಾಮದಲ್ಲಿ ಭಯದ ವಾತಾವರಣ

    ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದ ಜನರು ವಿಚಿತ್ರ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಶಂಕೆ ವ್ಯಕ್ತವಾಗಿದೆ. ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ್ ಎಂಬ ಯುವಕ ಸಾವನ್ನಪ್ಪಿದ್ದಾನೆ.

    ಗ್ರಾಮದ ಜನತೆ ವಿಚಿತ್ರ ಜ್ವರದಿಂದ ಬಳಲುತ್ತಿದ್ದಾರೆ. ಸುಮಾರು 150 ರಿಂದ 200 ಜನ ವಿಚಿತ್ರ ಜ್ವರಕ್ಕೆ ಒಳಗಾಗಿದ್ದು, ಸೂಕ್ತ ಚಿಕಿತ್ಸೆ ದೊರಕದೆ ನರಳುತ್ತಿದ್ದಾರೆ. ಇಡೀ ಗ್ರಾಮವೇ ಜ್ವರದಿಂದ ಬಳಲುತ್ತಿದ್ದರೂ ಸಹ ಆರೋಗ್ಯಾಧಿಕಾರಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ರೋಗಿಗಳ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಕೂಡಲೇ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿದ್ರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ರೋಗಿಗಳು ಊರಿನಲ್ಲೆ ಇದ್ದು ಸೂಕ್ತ ಚಿಕಿತ್ಸೆಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

    ವಿಚಿತ್ರ ಜ್ವರಕ್ಕೆ ಮೊದಲ ಬಲಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಾಗರ್ ಎಂಬ ಯುವಕ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾನೆ. ಗ್ರಾಮದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣವಾಗಿದ್ದು, ಆರೋಗ್ಯ ಇಲಾಖೆ ಇನ್ನಾದ್ರೂ ಎಚ್ಚೆತ್ತು ಸೂಕ್ತ ಚಿಕಿತ್ಸೆಗೆ ಮುಂದಾಗಬೇಕಿದೆ.

  • ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

    ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

    ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಾಲಕನೊಬ್ಬ ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ.

    ಕೂಡ್ಲಿಗಿ ಪಟ್ಟಣದ ನಿವಾಸಿ ಗಡ್ಡಿ ವೀರೇಶ್ ಅವರ 8 ವರ್ಷದ ಮಗ ಕಿಶೋರ್ ಡೆಂಗ್ಯೂ ಜ್ವರಕ್ಕೆ ಬಲಿಯಾದ ಬಾಲಕ. ಕಳೆದ ಒಂದು ತಿಂಗಳಿಂದ ವಿಪರೀತ ಜ್ವರದಿಂದ ಕಿಶೋರ್ ಬಳಲುತ್ತಿದ್ದನು. ಹೀಗಾಗಿ ಬಾಲಕನನ್ನು ಆತನ ಪಾಲಕರು ಸ್ಥಳೀಯ ಹಾಗೂ ಹೊಸಪೇಟೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು ಚಿಕಿತ್ಸೆ ಫಲ ನೀಡಲಿಲ್ಲ.

    ಹೀಗಾಗಿ ವೈದ್ಯರ ಸಲಹೆ ಮೇರೆಗೆ ಒಂದು ವಾರದ ಹಿಂದೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ವಿಪರೀತ ಜ್ವರ ಹಾಗೂ ಅತಿಸಾರ ಬೇಧಿಯಿಂದ ಬಳಲುತ್ತಿದ್ದ ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಮುಂಜಾನೆ ಮೃತಪಟ್ಟಿದ್ದಾನೆ.

  • ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಚಾಮರಾಜನಗರ: ಸಮರ್ಪಕ ಚಿಕಿತ್ಸೆ ದೊರೆಯದೆ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಉಯಿಲನತ್ತ ಗ್ರಾಮಸ್ಥರು ಸಾಮೂಹಿಕವಾಗಿ ಜ್ವರ, ಮೈ-ಕೈನೋವು, ಮೂಳೆನೋವು ಮತ್ತು ಸಂದುನೋವಿನಿಂದ ಬಳಲುತ್ತಿದ್ದಾರೆ.

    ಹನೂರು ತಾಲೂಕು ಉಯಿಲನತ್ತ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಜ್ವರ, ಮೈ-ಕೈನೋವು, ಮೂಳೆ ನೋವು, ಸಂದುನೋವಿನಿಂದ ಬಳಲುತ್ತಿದ್ದಾರೆ. ಇವರಿಗೆ ಕೇವಲ ಮಾತ್ರೆ ನೀಡಿ ಮತ್ತೆ ಯಾವುದೇ ಚಿಕಿತ್ಸೆ ನೀಡದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

    ತೀವ್ರ ಜ್ವರ ಹಾಗು ಸಂದುನೋವಿನಿಂದ ಬಳಲುತ್ತಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲೇ ಒಂದು ಕ್ಯಾಂಪ್ ಮಾಡಿ ಸಮಪರ್ಕ ಚಿಕಿತ್ಸೆ ನೀಡಬೇಕು ಇಲ್ಲವೆ ತಾಲೂಕು ಆಸ್ಪತ್ರೆ ಹಾಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.