Tag: ಜ್ಯುವೆಲರಿ ಅಂಗಡಿ

  • ಪೊಲೀಸರ ಸೋಗಿನಲ್ಲಿ ಕಳ್ಳತನ- ನೌಕರ ನೆನಪಿಟ್ಟುಕೊಂಡಿದ್ದ ಜೀಪ್ ನಂಬರ್ ಆಧರಿಸಿ ಆರೋಪಿಗಳು ಅರೆಸ್ಟ್

    ಪೊಲೀಸರ ಸೋಗಿನಲ್ಲಿ ಕಳ್ಳತನ- ನೌಕರ ನೆನಪಿಟ್ಟುಕೊಂಡಿದ್ದ ಜೀಪ್ ನಂಬರ್ ಆಧರಿಸಿ ಆರೋಪಿಗಳು ಅರೆಸ್ಟ್

    ಬೆಂಗಳೂರು: ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗೆ ನುಗ್ಗಿದ ಕಳ್ಳರು, ರೇಡ್ ಮಾಡುವ ನೆಪದಲ್ಲಿ 800 ಗ್ರಾಂ. ಚಿನ್ನವನ್ನು ಹೊತ್ತೊಯ್ದಿದ್ದು, ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಸಿಲಿಕಾನ್ ಸಿಟಿಯ ಹಲಸೂರು ಗೇಟ್ ನಗರ್ತಪೇಟೆಯಲ್ಲಿ ಘಟನೆ ನಡೆದಿದ್ದು, ಚಿನ್ನಾಭರಣ ಪಾಲಿಶ್ ಮಾಡುವ ಗೀತಾ ಜ್ಯುವೆಲರ್ಸ್‍ಗೆ ಆರು ಜನ ಪೊಲೀಸ್ ವೇಷಧಾರಿಗಳು ನುಗ್ಗಿ ಸುಮಾರು 800 ಗ್ರಾಂ. ಚಿನ್ನಾಭರಣ, ದಾಖಲೆಗಳನ್ನು ಕಳ್ಳತನ ಮಾಡಿದ್ದರು. ಪ್ರಕರಣಿಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಕಲಿ ಚಿನ್ನ ಮಾರಾಟ ಮಾಡುತ್ತಿರುವುದಾಗಿ ಹೇಳಿ ನಕಲಿ ಪೊಲೀಸರು ದಾಳಿ ಮಾಡಿದ್ದಾರೆ. ನಾವು ಪೊಲೀಸರು ರೇಡ್ ಗೆ ಬಂದಿದ್ದೆವೆ ಎಂದು ಹೇಳಿ ಕಳ್ಳತನ ಮಾಡಿದ್ದಾರೆ. ಅಂಗಡಿ ಕೆಲಸಗಾರನನ್ನು ಜೀಪ್ ನಲ್ಲಿ ಕೂರಿಸಿ ಕಳ್ಳರು ದಾಖಲೆ ಕೊಂಡೊಯ್ದಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿದ್ದ ಗೀತಾ ಜ್ಯುವೆಲರ್ಸ್ ಮಾಲೀಕನಿಗೆ ಕರೆ ಮಾಡಿ, ನಿಮ್ಮ ಅಂಗಡಿ ಮೇಲೆ ರೇಡ್ ಮಾಡಿದ್ದೇವೆ ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆದಿದ್ದಾರೆ.

    ಕಳ್ಳರ ಮಾತು ನಂಬಿ ಗೀತಾ ಜ್ಯುವೆಲರ್ಸ್ ಮಾಲೀಕ ಕಾರ್ತಿಕ್ ಕೋಲ್ಕತ್ತಾ ದಿಂದ ಬಂದಿದ್ದು, ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಜ್ಯುವೆಲರ್ಸ್ ನಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ತಿಕ್ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

    ಜೀಪ್ ನಂಬರ್ ಆಧಾರದ ಮೇಲೆ ಬಂಧನ
    ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಜ್ಯುವಲರಿ ಶಾಪ್ ನೌಕರರನ್ನು ವಿಚಾರಣೆ ನಡೆಸಿದ್ದು, ಈ ವೇಳೆ ನೌಕರ ಜೀಪ್ ನಂಬರ್ ನೆನಪಿಟ್ಟುಕೊಂಡಿದ್ದನ್ನು ಹೇಳಿದ್ದಾರೆ. ಜೀಪ್ ನಂಬರ್ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಇದೀಗ ಪೊಲಿಸರು ಬಂಧಿಸಿದ್ದಾರೆ. ನಾಗಮಂಗಲ ಮೂಲದ ನಾಲ್ವರನ್ನ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ಕಾಫಿನಾಡಲ್ಲಿ ಹಾಡಹಗಲೇ ಫೈರಿಂಗ್- ಬೆಚ್ಚಿಬಿದ್ದ ಜನ

    ಕಾಫಿನಾಡಲ್ಲಿ ಹಾಡಹಗಲೇ ಫೈರಿಂಗ್- ಬೆಚ್ಚಿಬಿದ್ದ ಜನ

    ಚಿಕ್ಕಮಗಳೂರು: ಜನಜಂಗುಳಿಯಿಂದ ಕೂಡಿರುವ ರಸ್ತೆ. ರಸ್ತೆಯ ಆರಂಭ ಹಾಗೂ ಅಂತ್ಯದ ಎರಡೂ ಬದಿಯಲ್ಲೂ ಪೊಲೀಸರು. ಈ ರೀತಿಯ ಜನವಸತಿ ರಸ್ತೆಯಲ್ಲಿ ಹಾಡಹಗಲೇ ಗುಂಡಿನ ಶಬ್ಧ ಕೇಳಿ ನಗರದ ಜನ ಆತಂಕಕ್ಕೀಡಾಗಿದ್ದಾರೆ.

    ನಗರದ ಎಂ.ಜಿ.ರಸ್ತೆಯ ಅಂಡೇ ಛತ್ರ ವೃತ್ತದ ಬಳಿ ಇರುವ ಕೇಸರಿ ಜ್ಯುವೆಲರಿ ಶಾಪ್‍ಗೆ ಬಂದ ಮೂವರು ದರೋಡೆಕೋರರು ದರೋಡೆಗೆ ಯತ್ನಿಸಿದ್ದಾರೆ. ಪಲ್ಸರ್ ಬೈಕಿನಲ್ಲಿ ಬಂದ ಮೂವರು ಅಂಗಡಿ ಬಾಗಿಲಲ್ಲಿ ಬೈಕ್ ನಿಲ್ಲಿಸಿ ಒಳ ಹೋಗಿದ್ದಾರೆ. ಬೈಕ್ ರೈಡ್ ಮಾಡುತ್ತಿದ್ದವ ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿಕೊಂಡಿದ್ದ. ಉಳಿದ ಇಬ್ಬರು ತಲೆಗೆ ಟೋಪಿ, ಗುರುತು ಸಿಗದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಬೈಕ್ ಇಳಿದು ಅಂಗಡಿ ಒಳಗೆ ಹೋದ ಮೂವರು ಅಂಗಡಿಯಲ್ಲಿದ್ದ ಚಿನ್ನವನ್ನು ಚೀಲಕ್ಕೆ ತುಂಬುವಂತೆ ಹೇಳಿದ್ದಾರೆ. ಅಂಗಡಿ ಮಾಲೀಕ ವಿರೋಧಿಸಿದ್ದಕ್ಕೆ ಜೇಬಿನಲ್ಲಿದ್ದ ಪಿಸ್ತೂಲ್ ತೆಗೆದು ಹೆದರಿಸಿದ್ದಾರೆ. ಆದರೆ ಅಂಗಡಿ ಮಾಲೀಕ ಹೆದರದೆ ಅವರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಆತನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿ ಮಾಲೀಕ ಫೈರಿಂಗ್ ನಿಂದ ತಪ್ಪಿಸಿಕೊಂಡು ಕೂಗಾಡಿದ್ದಾನೆ. ಈ ವೇಳೆ ದರೋಡೆಗೆ ಬಂದಿದ್ದ ದರೋಡೆಕೋರರು ಹೆದರಿ ಬೈಕ್ ಹತ್ತಿಕೊಂಡು ನಾಪತ್ತೆಯಾಗಿದ್ದಾರೆ.

    ಗುಂಡಿನ ದಾಳಿ ವೇಳೆ ಅಂಗಡಿ ಮಾಲೀಕನ ಕಾಲಿಗೆ ಸಣ್ಣ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಂಗಡಿ ಮಾಲೀಕನಿಂದ ಮಾಹಿತಿ ಕಲೆಹಾಕಿದ್ದಾರೆ. ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಶೀಘ್ರವೇ ದರೋಡೆಕೋರರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ದರೋಡೆಕೋರರ ಬಂಧನಕ್ಕೆ ತಂಡ ರಚಿಸಿ ಶೀಘ್ರವೇ ಅವರನ್ನು ಬಂಧಿಸುವುದಾಗಿ ತಿಳಿಸಿದರು.