Tag: ಜ್ಞಾನ ದೀವಿಗೆ

  • ‘ಜ್ಞಾನದೀವಿಗೆ’ಗೆ ಪುಟ್ಟಸ್ವಾಮಿಗೌಡ 10.48 ಲಕ್ಷ ಸಹಾಯ

    ‘ಜ್ಞಾನದೀವಿಗೆ’ಗೆ ಪುಟ್ಟಸ್ವಾಮಿಗೌಡ 10.48 ಲಕ್ಷ ಸಹಾಯ

    – 300 ಟ್ಯಾಬ್‍ಗಳಿಗೆ ಹಣ ನೀಡಿದ ಉದ್ಯಮಿ
    – ಗೌರಿಬಿದನೂರು ಕ್ಷೇತ್ರದ ವಿದ್ಯಾರ್ಥಿಗಳಿಗೆ ಟ್ಯಾಬ್

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆಸುತ್ತಿರುವ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆಯ ‘ಜ್ಞಾನದೀವಿಗೆ’ ಮಹಾಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್‍ನ ಉದ್ಯಮಿ ಹಾಗೂ ಸಮಾಜಸೇವಕ ಪುಟ್ಟಸ್ವಾಮಿಗೌಡ ಅವರು 10.48 ಲಕ್ಷ ರೂ.ಗಳನ್ನು ನೀಡಿದ್ದಾರೆ.

    ಜಿಲ್ಲೆಯ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್ ನ ಉದ್ಯಮಿ ಹಾಗೂ ಸಮಾಜಸೇವಕರಾದ ಪುಟ್ಟಸ್ವಾಮಿಗೌಡರು 300 ಟ್ಯಾಬ್ ಗಳಿಗೆ ಬೇಕಾಗುವ 10,48,500 ರೂಪಾಯಿಗಳ ಚೆಕ್‍ನ್ನು ಪಬ್ಲಿಕ್ ಟಿವಿಗೆ ಹಸ್ತಾಂತರಿಸಿದ್ದಾರೆ.

    ಪಬ್ಲಿಕ್ ಟಿವಿಯ ಸಮಾಜಮುಖಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪುಟ್ಟಸ್ವಾಮಿಗೌಡರು, ಈ ಟ್ಯಾಬ್‍ಗಳನ್ನು ಗೌರಿಬಿದನೂರು ತಾಲೂಕಿನ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಟ್ಯಾಬ್‍ಗಳು ಸಹಾಯವಾಗಲಿವೆ. ಇದು ಗೌರಿಬಿದನೂರಿನ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಪುಟ್ಟಸ್ವಾಮಿಗೌಡರು ಆಶಿಸಿದ್ದಾರೆ.

  • ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ 1.5 ಲಕ್ಷ ನೀಡಿದ ಪ್ರಿಯಾಂಕ್ ಖರ್ಗೆ

    ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ 1.5 ಲಕ್ಷ ನೀಡಿದ ಪ್ರಿಯಾಂಕ್ ಖರ್ಗೆ

    ಕಲಬುರಗಿ: ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಂದೂವರೆ ಲಕ್ಷವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದ್ದು, ಪಬ್ಲಿಕ್ ಟಿವಿಯ ಈ ಅಭಿಯಾನಕ್ಕೆ ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಸಹ ಕೈ ಜೋಡಿಸಿದ್ದಾರೆ. ಅವರ ಒಂದು ತಿಂಗಳ ಶಾಸಕರ ಸಂಬಳ ಸೇರಿದಂತೆ ಒಟ್ಟು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಎಸ್‍ಎಸ್‍ಎಲ್‍ಸಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಪಬ್ಲಿಕ್ ಟಿವಿಯ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಪೂರ್ಣ ಯಶಸ್ವಿಯಾಗಲಿ ಪ್ರತಿ ವಿದ್ಯಾರ್ಥಿಗೂ ಇದರ ಲಾಭ ಆಗಲಿ ಎಂದು ಹಾರೈಸಿದ್ದಾರೆ.

  • ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು – ಸುರೇಶ್‍ಕುಮಾರ್

    ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು – ಸುರೇಶ್‍ಕುಮಾರ್

    – ಸಚಿವರಿಂದ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಟ್ಯಾಬ್ ವಿತರಣೆ
    – 150 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಬೆಂಗಳೂರು: ಇಂದು ಬೆಂಗಳೂರು ಹೊರವಯಲದ ದೇವನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪಬ್ಲಿಕ್ ಟಿವಿ ಜ್ಞಾನ ದೀವಿಗೆಯ ಟ್ಯಾಬ್ ವಿತರಿಸಿದರು.

    ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಸಹಾಯವಾಗಲಿ ಎಂದು ಟ್ಯಾಬ್ ನೀಡಲಾಗುತ್ತಿದೆ. ಕೊರೊನಾ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ. ಇದಕ್ಕೆ ಶಿಕ್ಷಣ ಸಚಿವರು ಸಂಪೂರ್ಣ ಸಾಥ್ ನೀಡಿದ್ದು ಫೇಸ್‍ಬುಕ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಇಂದು ದೇವನಹಳ್ಳಿಗೆ ಭೇಟಿ ನೀಡಿದೆ. ಪಬ್ಲಿಕ್ ಟೀವಿ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿರುವ ಜ್ಞಾನ ದೀವಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಅಭಿಯಾನದಲ್ಲಿ ಈ ತಾಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ದೇವನಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ, ಬಚ್ಚಹಳ್ಳಿ ಈ ಎರಡು ಶಾಲೆಗಳ 150 ವಿದ್ಯಾರ್ಥಿಗಳು ಟ್ಯಾಬ್ ಗಳನ್ನು ಪಡೆದಿದ್ದಾರೆ.

    ಈ ಪೈಕಿ ಸುಮಾರು ಹದಿನೈದು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಟ್ಯಾಬ್ ಪ್ರಯೋಜನೆ ಕುರಿತು ಮಾತನಾಡಿದೆ. ಎಲ್ಲ ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು. ಕೋರ್ ವಿಷಯಗಳು, ಆಂಗ್ಲ ಭಾಷಾ ಬೋಧನೆ ಪರಿಣಾಮಕಾರಿಯಾಗಿದೆ ಎಂದು ಆ ಮಕ್ಕಳು ಹೇಳಿದರು. ಕೊರೊನಾ ಸಮಯದಲ್ಲಿ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಈ ರೀತಿ ಕೈ ಜೋಡಿಸಿದಲ್ಲಿ ನಿಜಕ್ಕೂ ಪರಿಣಾಮಕಾರಿ ಯಾಗುತ್ತದೆ. ಪಬ್ಲಿಕ್ ಟೀವಿ ಅಭಿಯಾನಕ್ಕೆ ಅಭಿನಂದನೆಗಳು.

    ಈ ಮಕ್ಕಳು ಚಂದನ ಟಿವಿಯಲ್ಲಿ ಬರುತ್ತಿರುವ ಪಾಠಗಳನ್ನು ಸಹ ವೀಕ್ಷಿಸುತ್ತಿದ್ದಾರೆ. ಅದರಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳಿಂದ ದೂರವಿರುವುದು ಸಂತಸ ತಂದಿಲ್ಲವೆನ್ನುವುದು ಅವರೊಂದಿಗೆ ನಾನು ಚರ್ಚಿಸಿದಾಗ ಖಚಿತವಾದ ಅಂಶ. ಸಂಶಯ ಪರಿಹಾರಕ್ಕೆ ಶಿಕ್ಷಕರಿಲ್ಲ, ಸ್ಪರ್ಧಾತ್ಕಕವಾದ ಮನೋಭಾವಕ್ಕೆ ಕುಂದುಂಟಾಗಿದೆ, ಆಟಪಾಠಗಳೆಂಬ ದೈಹಿಕ ಚಟುವಟಿಕೆಗಳಿಲ್ಲ, ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿಲ್ಲ ಎಂಬ ಸಮಸ್ಯೆಗಳು ಕೇಳಿಬಂದವು.

    ತಾಲೂಕಿನ ಶಿಕ್ಷಕರು ವಿದ್ಯಾಗಮ ಕಾರ್ಯಕ್ರಮವು ಸ್ಥಗಿತಗೊಂಡಿರುವ ಕಾರಣ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆ, ಪೋಷಕರಲ್ಲಿ ಅವರ ಕಲಿಕೆಯನ್ನು ಮುಂದುವರೆಸಲು ನಿರಾಸಕ್ತಿ, ಹೆಚ್ಚುತ್ತಿರುವ ಸಾಮಾಜಿಕ ಸಮಸ್ಯೆಗಳು ಎಲ್ಲವನ್ನೂ ಶಿಕ್ಷಕರು ಗಮನಕ್ಕೆ ತಂದರು. ನಾನು ಇಂದು ಹೋಗಿದ್ದ ಆ ಸರಕಾರಿ ಶಾಲೆಯ ಕಟ್ಟಡವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸಂಸ್ಥೆ ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟಿದೆ. ಸಿಎಸ್‍ಆರ್ ಅನುದಾನದಡಿ ಈ ಉತ್ತಮ ಕಾರ್ಯ ನಡೆದಿದೆ.

  • ಪಬ್ಲಿಕ್ ಟಿವಿ ಜ್ಞಾನ ದೀವಿಗೆ – ಯಾದಗಿರಿಯಲ್ಲಿ ಟ್ಯಾಬ್ ವಿತರಣೆ

    ಪಬ್ಲಿಕ್ ಟಿವಿ ಜ್ಞಾನ ದೀವಿಗೆ – ಯಾದಗಿರಿಯಲ್ಲಿ ಟ್ಯಾಬ್ ವಿತರಣೆ

    ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದೊಂದಿಗೆ, ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಉಚಿತ ಟ್ಯಾಬ್ ನೀಡಲಾಯಿತು.

    ಜ್ಞಾನ ದೀವಿಗೆ ಯೋಜನೆ ಮೊದಲ ಹಂತದಲ್ಲಿ ಮೊಟ್ಟ ಮೊದಲ ಬಾರಿಗೆ, ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹತ್ತಿಕುಣಿಯ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ. ಇಂದು ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಪಬ್ಲಿಕ್ ಟಿವಿ ಕ್ಯಾಪ್ಟನ್ ಹೆಚ್.ಆರ್ ರಂಗನಾಥ್ ಮತ್ತು ರೋಟರಿ ಕ್ಲಬ್ ಅಧ್ಯಕ್ಷರು ಚಾಲನೆ ನೀಡಿದ್ದರು.

    ಇದರ ಪ್ರಯುಕ್ತ ಹತ್ತಿಕುಣಿ ಶಾಲೆಯಲ್ಲಿ ಸಾಂಕೇತಿಕವಾಗಿ ಮಕ್ಕಳಿಗೆ ಪಠ್ಯ ಪುಸ್ತಕ ಸಂಗ್ರಹಿಸಿದ ಟ್ಯಾಬ್ ನೀಡಲಾಯಿತು. ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹತ್ತನೆಯ ತರಗತಿಯಲ್ಲಿ, ಸುಮಾರು 86 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿ ಎರಡು ವಿದ್ಯಾರ್ಥಿಗಳಿಗೆ ಒಂದು ಟ್ಯಾಬ್ ನಂತೆ 43 ಮೂರು ಟ್ಯಾಬ್‍ಗಳನ್ನು ವಿತರಣೆ ಮಾಡಲಾಯಿತು.

    ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರೋಟರಿ ಕ್ಲಬ್ ಅಸಿಸ್ಟೆಂಟ್ ಗೌರ್ನರ್ ಮುರಳೀಧರ್ ಮಾಗನೂರ, ರೋಟರಿ ಮಿಟೌನ್ ಪ್ರೆಸಿಡೆಂಟ್ ಸುಧಾ ಹಲ್ಕಾಯಿ, ರೋಟರಿ ಕ್ಲಬ್ ಯಾದಗಿರಿ ಅಧ್ಯಕ್ಷರು ಸಿ.ಎಂ ಪಾಟೀಲ್, ಶ್ರೀನಿವಾಸ್ ರೆಡ್ಡಿ, ಬಿಇಒ ಚಂದ್ರಕಾಂತ್, ಶಾಲಾ ಮುಖ್ಯ ಶಿಕ್ಷಕಿ ಲತಾ ಭಾಗವಹಿಸಿದ್ದರು.

    ಡಿಡಿಪಿಐ ಶ್ರೀನಿವಾಸ್ ರೆಡ್ಡಿ ಮತ್ತು ರೋಟರಿ ಕ್ಲಬ್ ಅಸಿಸ್ಟೆಂಟ್ ಗೌರ್ನರ್ ಮುರಳೀಧರ್ ಮಾತನಾಡಿ ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

  • ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ

    ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ‘ಜ್ಞಾನ ದೀವಿಗೆ’ ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ನಟ ಶಿವರಾಜ್ ಕುಮಾರ್ ಅವರು ಕೈ ಜೋಡಿಸಿ, 100 ಟ್ಯಾಬ್‍ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶಕ್ತಿ ಇರುವವರು ಒಂದು ಟ್ಯಾಬ್ ಆದರೂ ನೀಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ.

    ‘ಜ್ಞಾನ ದೀವಿಗೆ’ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉತ್ತಮ ಕೆಲಸ ಮಾಡುತ್ತಿದ್ದೀರಿ, ರೋಟರಿ ಸಂಸ್ಥೆ ಜೊತೆ ಸೇರಿ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕೊರೊನಾ ಬಂದ ಮೇಲೆ ನಾವೆಲ್ಲ ಸ್ವಾರ್ಥಿಗಳಾಗಿದ್ದೇವೆ. ಇಡೀ ಪ್ರಪಂಚಕ್ಕೆ ಈ ಸಮಸ್ಯೆ ಆವರಿಸಿದೆ. ಏನೇ ಸಮಸ್ಯೆ ಬಂದರೂ ಸಹಾಯದ ಮನೋಭಾವವಿದ್ದರೆ ಯಾರು ಬೇಕಾದರೂ ಮಾಡಬಹುದು ಎಂದು ಕರೆ ನೀಡಿದರು. ಇದನ್ನೂ ಓದಿ: ವಿವಿಧ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

    ವಿದ್ಯಾದಾನ ಶ್ರೇಷ್ಠ ದಾನ. ಇದಕ್ಕೆ ಸಹಾಯ ಮಾಡುವುದು ಸಹ ನಮ್ಮ ಜವಾಬ್ದಾರಿ. ಪಬ್ಲಿಕ್ ಟಿವಿಯಲ್ಲಿ ಈ ಅಭಿಯಾನ ಕಾರ್ಯಕ್ರಮ ನೋಡಿ, ಪತ್ನಿ ಗೀತಾ ಅವರು ನಾವೂ ಸಹಾಯ ಮಾಡಬೇಕು ಎಂದು ಹೇಳಿದರು. ಅಲ್ಲದೆ ಎಸ್‍ಎಸ್‍ಎಲ್‍ಸಿ ಎನ್ನುವುದು ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್, ಹೀಗಾಗಿ ನಾನು ಇದಕ್ಕೆ ಕೈ ಜೋಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಈ ಅಭಿಯಾನ ದೊಡ್ಡ ಅಲೆ, ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು. ನನ್ನ ಕಡೆಯಿಂದ ಸಣ್ಣ ಸಹಾಯ ಎಂಬಂತೆ 100 ಟ್ಯಾಬ್‍ಗಳನ್ನು ನೀಡಲು ನಿರ್ಧರಿಸಿದ್ದೇನೆ. ರಾಜ್ಯದ ಜನತೆ ಎಲ್ಲರೂ ಸಾಧ್ಯವಾದರೆ ಒಂದೊಂದು ಟ್ಯಾಬ್ ನೀಡಿ ಸಹಾಯ ಮಾಡಿ. ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ನಾವು ಮಾಡಿ ಇತರರಿಗೆ ಹೇಳಬೇಕು. ಹೀಗಾಗಿ ನಾನು ಈ ಕೆಲಸ ಮಾಡಿದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿ. ಒಂದು ಕೈಯಿಂದ ಹತ್ತು, ನೂರು, ಸಾವಿರ, ಲಕ್ಷ, ಕೋಟಿ ಹೀಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಹೇಳಿದರು.

  • ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಂಗಳೂರು: ಬೆಳಕಿನ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳ ಬಾಳಿಗೆ ‘ಜ್ಞಾನದೀವಿಗೆ’ ಅಭಿಯಾನದ ಮೂಲಕ ಬೆಳಕು ನೀಡುತ್ತಿದ್ದೀರಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

    ಜ್ಞಾನ ದೀವಿಗೆ ಕಾರ್ಯಕ್ರಮದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಂಬಾ ಉತ್ತಮ ಕಾರ್ಯ, ಈ ಹಿಂದೆ ನೆರೆ ಹಾವಳಿ ಬಂದಾಗ ನೀವೂ ಯಾವ ರೀತಿ ಸಹಾಯ ಮಾಡಿದ್ದೀರೋ, ಅದೇ ರೀತಿ ಜನ ಸಹ ಸ್ಪಂದಿಸಿದರು. ಇದೀಗ ಜ್ಞಾನ ದೀವಿಗೆ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಕೊಡುಗೆ ನೀಡುತ್ತಿದ್ದೀರಿ. ಕಳೆದ ಎಂಟು ತಿಂಗಳಿಂದ ಶಾಲೆ ತರಗತಿ ಇಲ್ಲದೆ ಮಕ್ಕಳು ವಂಚಿತರಾಗಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಮನಗಂಡು ನೀವು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಟ್ಯಾಬ್ ವಿತರಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದರು. ಇದನ್ನೂ ಓದಿ: ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ಅನೇಕ ಮಕ್ಕಳು ಶಿಕ್ಷಣದಿಂದ ಲಕ್ಷಾಂತರ ಮಕ್ಕಳು ವಂಚಿತರಾಗಿದ್ದರು. ಅವರ ಬದುಕಿಗೆ ನೀವೂ ಬೆಳಕಾಗುತ್ತಿದ್ದೀರಿ. ಈ ಮೂಲಕ ಬೆಳಕಿನ ಹಬ್ಬದ ಸಂದರ್ಭದಲ್ಲಿ ಅವರ ಬದುಕಿಗೆ ಬೆಳಕನ್ನು ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಜ್ಞಾನದೀವಿಗೆ’ ಸದಾ ಉರಿಯುತ್ತಿರಬೇಕು. ಆದರೆ ಕಳೆದ ಎಂಟು ತಿಂಗಳಿಂದ ಅದು ಆರುವ ಹಂತ ತಲುಪಿತ್ತು. ಅದು ಆರದಿರುವ ಹಾಗೆ ಉರಿಸುವಂತಹ ಕೆಲಸ ಮಾಡುತ್ತಿದ್ದೀರಿ, ಉರಿಯುವಂತೆ ಮಾಡಿದ್ದೀರಿ. ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ

    ಎಲ್ಲ ಇಲಾಖೆಗಳಿಂತ ಶಿಕ್ಷಣ ಇಲಾಖೆ ತುಂಬಾ ಅನಿಶ್ಚಿತತೆಯಲ್ಲಿದೆ. ಯಾವಾಗ ಶಾಲೆ ಆರಂಭಿಸಬೇಕು, ಮಕ್ಕಳಿಗೆ ಏನು ಮಾಡಬೇಕು ಎಂಬ ದುಗುಡ ಶಿಕ್ಷಣ ಸಚಿವರಲ್ಲಿದೆ. ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೋಂಕು ತಗುಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಯಾವ ರೀತಿ ಮಾಡಬೇಕೆಂಬ ಸವಾಲು ಕಾಡುತ್ತಿದೆ. ಅಲ್ಲದೆ ಅಧ್ಯಯನ ಯೋಗ್ಯವಾಗಿದೆ. ನಮ್ಮ ಶಿಕ್ಷಣ ಸಚಿವರು ಸಹ ತುಂಬಾ ಶ್ರಮಪಡುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ರೀತಿಯೇ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಷ್ಟದಲ್ಲಿದ್ದವರಿಗೆ ಅವರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಇಂದೂ ಸಹ ಪಬ್ಲಿಕ್ ಟಿವಿ ಜೊತೆಗೆ ಕೈ ಜೋಡಿಸಿ, ಮಕ್ಕಳಿಗೆ ಟ್ಯಾಬ್ ಮುಟ್ಟಿಸಲು ಸಾಥ್ ನೀಡಿರುವುದು ಸಂತಸದ ವಿಷಯ. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

  • ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ಬೆಂಗಳೂರು: ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ಪ್ರಯತ್ನಿಸಿದರೆ ಯಾವುದು ಅಸಾಧ್ಯವಲ್ಲ ಎಂಬುದು ತಿಳಿದಿರುವ ಸಂಗತಿ. ತುಂಬಾ ಚಿಂತನೆ ಮಾಡಿ ‘ಜ್ಞಾನ ದೀವಿಗೆ’ ಅಭಿಯಾನ ಆರಂಭಿಸಿದ್ದೀರಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

    ಜ್ಞಾನದೀವಿಗೆ ಕಾರ್ಯಕ್ರಮ ಸಂಬಂಧ ಮಾತನಾಡಿದ ಅವರು, ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಡಿಜಿಟಲ್ ಶಿಕ್ಷಣ ಪಡೆಯಲು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವರು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.

    ಈ ಅಭಿಯಾನಕ್ಕೆ ಸರ್ಕಾರದ ಸಂಪೂರ್ಣ ಸಹಕಾರ ಇದೆ. ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನಿಮ್ಮೊಂದಿಗೆ ನಾನು ವೈಯಕ್ತಿಕವಾಗಿ ಸಹ ಮಾತನಾಡುತ್ತೇನೆ. ಈ ಅಭಿಯಾನವನ್ನು ಸಮರ್ಥವಾಗಿ ಜಾರಿಗೆ ತರುವ ಪ್ರಯತ್ನ ಮಾಡೋಣ ಎಂದು ಅಭಯ ನೀಡಿದರು.

    ಕೊರೊನಾದಿಂದಾಗಿ ರಾಜ್ಯದ ಆರ್ಥಿಕತೆ ಹಿನ್ನಡೆ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಪರ್ಯಾಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಆನ್‍ಲೈನ್ ಶಿಕ್ಷಣ ಕ್ರಮ ಸಹ ಒಂದು. ಆದರೆ ಅಂತರ್ಜಾಲ ಸಮಸ್ಯೆಯಿಂದ ಆನ್‍ಲೈನ್ ಶಿಕ್ಷಣದಿಂದ ಮಕ್ಕಳು ವಂಚಿತರಾಗಿತ್ತಿದ್ದಾರೆ. ಹೀಗಾಗಿ ಆನ್‍ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ‘ಜ್ಞಾನ ದೀವಿ’ಗೆ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಕ್ಕಳಿಗೆ ಉಚಿತ ಟ್ಯಾಬ್‍ಗಳನ್ನು ನೀಡಲಾಗುತ್ತಿರುವುದು ಶ್ಲಾಘನೀಯ.

    ಇದರಿಂದ ಆನ್‍ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ಸಹಾಯವಾಗಲಿದೆ. ಪ್ರತಿ ಇಬ್ಬರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಒಂದರಂತೆ ಟ್ಯಾಬ್ ವಿತರಿಸುತ್ತಿರುವುದು ಅಭಿನಂದನೀಯ. ಅಂದಾಜು 2.68 ಲಕ್ಷ ಮಕ್ಕಳು ಇದರಿಂದ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದ ಎಲ್ಲ 30 ಜಿಲ್ಲೆಗಳ ಬಹುತೇಕ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳು ಈ ಅಭಿಯಾನದ ವ್ಯಾಪ್ತಿಗೆ ಬರಲಿವೆ. ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ.

    ರೋಟರಿ ಸಂಸ್ಥೆ ಹಾಗೂ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಹಮ್ಮಿಕೊಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಾಗುತ್ತಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈ ಜೋಡಿಸುವ ಮೂಲಕ ಸಮಾಜದ ಏಳಿಗೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

  • ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ

    ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ

    ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿ ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದ ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ.

    ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಗವರ್ನರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಭಹಾರೈಸಿ, ರಂಗನಾಥ್ ಅವರು ಬಹಳಷ್ಟು ಚಿಂತನೆ ಮಾಡಿಯೇ ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದೊಂದು ಸ್ವಾಗತಾರ್ಹ ಸಂಗತಿ. ಸರ್ಕಾರ ನಿಮ್ಮ ಜೊತೆ ಇದೆ. ಎಲ್ಲಾ ರೀತಿಯ ಸಹಕಾರ ಸರ್ಕಾರದಿಂದ ಸಿಗಲಿದೆ. ಎಲ್ಲರೂ ಒಟ್ಟಿಗೆ ಸೇರಿ ಕಾರ್ಯರೂಪಕ್ಕೆ ತರುವ ಈ ಕಾರ್ಯದಲ್ಲಿ ತಾವು ಕೈ ಜೋಡಿಸುವುದಾಗಿ ತಿಳಿಸಿದರು. ಅಲ್ಲದೆ ಈ ಕುರಿತು ಹೆಚ್. ಆರ್ ರಂಗನಾಥ್ ಜೊತೆ ಶೀಘ್ರವೇ ಚರ್ಚೆ ನಡೆಸುವುದಾಗಿ ತಿಳಿಸಿದ ಸಿಎಂ, ಕಾರ್ಯಕ್ರಮಕ್ಕೆ ಅಪಾರ ಮೆಚ್ಚುಗೆಯನ್ನು ಸೂಚಿಸಿದರು.

    ಗ್ರಾಮೀಣ ಭಾಗದ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ತಿಳಿಸಿದರು. ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

    ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ನಡೆಸಿರುವ ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೂಡ ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಬಹುದು. ಒಂದು ಟ್ಯಾಬ್ ದರ 3,495 ರೂಪಾಯಿ. ಬನ್ನಿ ಸಹಾಯ ಮಾಡೋಣ, ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ.

    ದೇಣಿಗೆ ನೀಡ ಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
    PUBLIC TV EDUCATIONAL & CHARITABLE TRUST
    NAME OF THE BANK : AXIS BANK
    ACCOUNT NO : 916010043440024
    BRANCH : R T NAGAR BRANCH
    IFSC CODE : UTIB0000363

  • ಗ್ರಾಮೀಣ ಭಾಗದ SSLC ಮಕ್ಕಳಿಗೆ ಉಚಿತ ಟ್ಯಾಬ್ – ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸಿ

    ಗ್ರಾಮೀಣ ಭಾಗದ SSLC ಮಕ್ಕಳಿಗೆ ಉಚಿತ ಟ್ಯಾಬ್ – ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕೈಜೋಡಿಸಿ

    ಬೆಂಗಳೂರು: ಕೋವಿಡ್ ಕಾಲದಲ್ಲಿ ಹತ್ತು ಹಲವು ಕಾರಣಗಳಿಂದ ಗ್ರಾಮೀಣ ಭಾಗದ ಎಸ್‍ಎಸ್‍ಎಲ್‍ಸಿ ಮಕ್ಕಳು ಆನ್‍ಲೈನ್ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಚಾರವನ್ನು ಗಮನಿಸಿದ ನಿಮ್ಮ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಮಹಾಯಜ್ಞವನ್ನು ಆರಂಭಿಸಿದೆ. ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಡ ಮಕ್ಕಳ ಪಾಲಿಗೆ ಜ್ಞಾನದೀವಿಗೆಯಾಗಲು ಮುಂದಾಗಿದೆ.

    ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿರುವ ಪಬ್ಲಿಕ್ ಟಿವಿ ಮುಖ್ಯ ಕಚೇರಿಯಲ್ಲಿ `ಜ್ಞಾನ ದೀವಿಗೆ’ ಹೆಸರಿನ ಈ ಮಹಾ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಜ್ಞಾನದೀವಿಗೆಗೆ ಕೈಜೋಡಿಸಿದ ದಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    1. ದಾನಿಗಳ ನೆರವಿನಿಂದ ಪ್ರತಿ ಇಬ್ಬರು ವಿದ್ಯಾರ್ಥಿಗಳಿಗೆ ಒಂದರಂತೆ ಎಸ್‍ಎಸ್‍ಎಲ್‍ಸಿ ಪಠ್ಯವುಳ್ಳ ಟ್ಯಾಬ್ ವಿತರಿಸುವ ಗುರಿ ಹೊಂದಿದೆ.
    2. ರಾಜ್ಯದ ಎಲ್ಲಾ 30 ಜಿಲ್ಲೆಗಳ ಬಹುತೇಕ ಸರ್ಕಾರಿ ಪ್ರೌಢಶಾಲೆಗಳು ಈ ಅಭಿಯಾನದ ವ್ಯಾಪ್ತಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ.

    3. ಪ್ರತಿ ಟ್ಯಾಬ್..,ಪರಿಣತ ಬೋಧಕರು ಸಿದ್ಧಪಡಿಸಿರುವ 10ನೇ ತರಗತಿಯ ರೆಡಿಮೇಡ್ ಡಿಜಿಟಲ್ ಪಾಠ ಒಳಗೊಂಡಿರುತ್ತದೆ. ಟ್ಯಾಬ್ ನಲ್ಲಿ ಸಮಾಜ, ವಿಜ್ಞಾನ, ಗಣಿತ ಹಾಗೂ ಇಂಗ್ಲೀಷ್ ವಿಷಯಗಳ ಸಿದ್ಧಪಾಠ ಇರುತ್ತದೆ. ಎಲ್ಲವೂ ಪ್ರೀ ಲೋಡೆಡ್ ಆಗಿರುತ್ತದೆ.
    4. ಈ ಟ್ಯಾಬ್ ನಲ್ಲಿ ಸಿಮ್ ಇರುವುದಿಲ್ಲ ಹಾಗೂ ಆಪ್ ಲಾಕ್ ತಂತ್ರಜ್ಞಾನ ಹೊಂದಿದೆ. ಇದರಿಂದ ದುರುಪಯೋಗದ ಮಾತೇ ಉದ್ಭವಿಸುವುದಿಲ್ಲ. 10ನೇ ತರಗತಿಯ ಡಿಜಿಟಲ್ ಪಾಠ ಹೊರತುಪಡಿಸಿದರೆ ಇನ್ಯಾವುದೇ ಕಾರ್ಯಕ್ಕೂ ಇದು ಬಳಕೆಯಾಗುವುದಿಲ್ಲ.

    ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ನಡೆಸಿರುವ ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೂಡ ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಬಹುದು. ಒಂದು ಟ್ಯಾಬ್ ದರ 3,495 ರೂಪಾಯಿ. ಬನ್ನಿ ಸಹಾಯ ಮಾಡೋಣ, ನೀವು ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ.

    ದೇಣಿಗೆ ನೀಡ ಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
    PUBLIC TV EDUCATIONAL & CHARITABLE TRUST
    NAME OF THE BANK : AXIS BANK
    ACCOUNT NO : 916010043440024
    BRANCH : R T NAGAR BRANCH
    IFSC CODE : UTIB0000363