Tag: ಜೋಳದ ಹೊಲ

  • ಜೋಳದ ಹೊಲದಲ್ಲಿ ಹುಲಿ ಪತ್ತೆ- ವ್ಯಾಘ್ರವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ

    ಜೋಳದ ಹೊಲದಲ್ಲಿ ಹುಲಿ ಪತ್ತೆ- ವ್ಯಾಘ್ರವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಧಾರವಾಡದ ಕಲಘಟಗಿ ತಾಲೂಕಿನ ಗಡಿ ಭಾಗದ ಬೆಂಡ್ಲಗಟ್ಟಿ ಗ್ರಾಮದ ಹುಲಿ ಕಾಣಿಸಿಕೊಂಡಿತ್ತು. ಗೋವಿನಜೋಳದ ಗದ್ದೆಯೊಂದರಲ್ಲಿ ಹುಲಿ ಕಂಡಿದ್ದಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

    ಬೆಂಡ್ಲಗಟ್ಟಿ ಗ್ರಾಮದ ಜಮೀನಿನ ಮಾಲೀಕ ತಮ್ಮ ಗೋವಿನ ಜೋಳದ ಬೆಳೆಗೆ ನೀರು ಹರಿಸಲು ತೆರೆಳಿದ್ದರು. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಮಾಲೀಕ ಹುಲಿ ಕಂಡು ಬೆಚ್ಚಿಬಿದ್ದರು. ಬಳಿಕ ರೈತ ಗಾಬರಿಯಿಂದ ಕೂಗಾಡುತ್ತ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದರು. ಆದರೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿ, ಜಮೀನಿನತ್ತ ತೆರಳಿದಾಗ ಹುಲಿ ಯಾರಿಗೂ ಗೋಚರಿಸಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಹುಲಿ ಕಂಡು ಬರಲಿಲ್ಲ. ಈ ಹಿನ್ನೆಲೆಯಲ್ಲಿ ಹುಲಿಯ ಪತ್ತೆಗಾಗಿ ಡ್ರೋಣ್ ನೆರವನ್ನು ಪಡೆಯಲು ನಿರ್ಧರಿಸಿ ಕಾರ್ಯಾಚರಣೆ ನಡೆಸಿದರು. ಆಗ ಗೋವಿನಜೋಳದ ಪೋದೆಯಲ್ಲಿ ಹುಲಿ ನಿದ್ರಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.

    ಹುಲಿ ಇರುವುಕೆಯನ್ನು ಪತ್ತೆ ಹಚ್ಚಿದ ನಂತರ ತಪ್ಪಿಸಿಕೊಳ್ಳದಂತೆ ಬೋನ್ ಇಡುವ ಮೂಲಕ ದಿಗ್ಬಂಧನ ಹಾಕಲಾಯಿತು. ಮುಂಡಗೋಡ ಮತ್ತು ಕಲಘಟಗಿ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಮುಕಾಂ ಹೂಡಿದ್ದು, ಹುಲಿ ಸೆರೆ ಹಿಡಿಯವ ಪ್ರಯತ್ನದಲ್ಲಿ ತೊಡಗಿದ್ದಾರೆ. ಹುಲಿಯ ಚಿತ್ರ ಮತ್ತು ಹೆಜ್ಜೆಯ ಗುರುತನ್ನು ಗಮನಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಹುಲಿ 8ರಿಂದ 9 ವರ್ಷ ಪ್ರಾಯದ್ದಾಗಿರಬಹುದೆಂದು ಅಂದಾಜಿಸಿದ್ದಾರೆ.

    ಹುಲಿ ಕಂಡು ಬಂದ ಸ್ಥಳದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಜನತೆ ಜಾಗೃತರಾಗಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಒಂಟಿಯಾಗಿ ಸಂಚರಿಸದಂತೆ ಎಚ್ಚರಿಸಿದೆ. ಸಾಕು ಪ್ರಾಣಿಗಳನ್ನು ಹೊರಗೆ ಬಿಡದಂತೆ ಸೂಚಿಸಿದ್ದಲ್ಲದೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಇಲಾಖೆಗೆ ತಿಳಿಸುವಂತೆ ವಿನಂತಿಸಿಕೊಳ್ಳಲಾಗಿದೆ.