Tag: ಜೋಡುಪಾಲ

  • ಮತ್ತೆ ಅಪಾಯದಲ್ಲಿದೆ ಮಡಿಕೇರಿ – ಮಂಗಳೂರು ಹೈವೇ : ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

    ಮತ್ತೆ ಅಪಾಯದಲ್ಲಿದೆ ಮಡಿಕೇರಿ – ಮಂಗಳೂರು ಹೈವೇ : ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

    ಮಡಿಕೇರಿ: ಮೈಸೂರು – ಬಂಟ್ವಾಳ ರಾಷ್ಟ್ರೀಯ ರಸ್ತೆ ಮಾರ್ಗದಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡುಪಾಲ ಸಮೀಪ ಇರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದ್ದು, ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ.

    ಇತ್ತೀಚೆಗೆ ಸುರಿದ ಮಳೆಯ ಪರಿಣಾಮದಿಂದ ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದೆ. ನಿರಂತರವಾಗಿ ಭಾರೀ ವಾಹನಗಳು ಸಂಚಾರ ಮುಂದುವರಿಸಿದಲ್ಲಿ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.

    ಈ ಹಿಂದೆ ಮಳೆಗಾಲದ ಸಮಯದಲ್ಲಿ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸಲಾಗುತ್ತಿತ್ತು. ಇದರ ನಡುವೆಯೇ ರಸ್ತೆ ಕೆಳಭಾಗದಿಂದ ಕುಸಿತಕ್ಕೆ ಒಳಗಾಗುತ್ತಿದೆ. ಮತ್ತೆ ಮಳೆ ಬಂದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

    ಸ್ಥಳಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆ ಬದಿ ನಿರ್ಮಾಣ ಮಾಡಲಾಗಿರುವ ಚರಂಡಿ ಬಳಿ ಮಣ್ಣು ಕುಸಿದಿದ್ದು, ರಸ್ತೆಯ ಮೇಲೆ ನೀರು ಹೋಗುತ್ತಿದೆ. ಆದ್ದರಿಂದ ತಕ್ಷಣ ರಸ್ತೆ ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಅವರಿಗೆ ಸೂಚಿಸಿದ್ದಾರೆ.

    ಹೆದ್ದಾರಿ ಬಳಿ ಮತ್ತಷ್ಟು ಸಿಪೇಜ್ ಆಗುವುದು ಕಂಡುಬಂದಲ್ಲಿ ತಾತ್ಕಾಲಿಕವಾಗಿ ಬದಲಿ ಸಂಚಾರ ಮಾರ್ಗ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಹಾಗೆಯೇ ಬೃಹತ್ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕರು ಸಲಹೆ ನೀಡಿದ್ದಾರೆ.

    ಈ ಬಗ್ಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಪ್ರತಿಕ್ರಿಯಿಸಿ, ಭಾರೀ ವಾಹನಗಳಿಗೆ ರಸ್ತೆಯಲ್ಲಿ ಸಂಚಾರ ನಡೆಸುವುದು ನಿಷೇಧ ಹೇರಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬದಲಿ ರಸ್ತೆ ಮಾರ್ಗದ ಬಗ್ಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

     

  • ಮಡಿಕೇರಿಯ ಜೋಡುಪಾಲ ಬಳಿ ಮತ್ತೆ ರಸ್ತೆ ಕುಸಿತ

    ಮಡಿಕೇರಿಯ ಜೋಡುಪಾಲ ಬಳಿ ಮತ್ತೆ ರಸ್ತೆ ಕುಸಿತ

    ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು -ಮಡಿಕೇರಿಯನ್ನು ಸಂಪರ್ಕಿಸುವ ಜೋಡುಪಾಲ ಬಳಿ ರಸ್ತೆ ಕುಸಿದಿದೆ.

    ನೀರಿನ ರಭಸಕ್ಕೆ ರಸ್ತೆ ಬದಿ ಮಣ್ಣು ಕೊಚ್ಚಿಹೋಗುತ್ತಿದೆ. ತೋಡಿನ ನೀರು ಹೊಳೆಯಂತೆ ಹರಿಯುತ್ತಿದೆ. ಮಣ್ಣು ಮತ್ತಷ್ಟು ಕುಸಿದರೆ ರಸ್ತೆ ಸಂಪರ್ಕ ಕಡಿತವಾಗಲಿದೆ.

    ಎರಡು ವರ್ಷದ ಹಿಂದೆ ಕುಸಿದ ಜಾಗದಲ್ಲಿ ಈಗಲೂ ಕುಸಿಯಲು ಆರಂಭಗೊಂಡಿದೆ. ರಸ್ತೆಯ ಅಡಿಯಲ್ಲಿ ನೀರು ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ನೀರಿನ ರಭಸಕ್ಕೆ ರಸ್ತೆಯ ಬದಿ ಮಣ್ಣುಗಳು ಕೊಚ್ಚಿಕೊಂಡು ಹೋಗಿದೆ.

    ಭಾರೀ ಮಳೆಗೆ ಸೋಮವಾರಪೇಟೆಯ ಹಾಕತ್ತೂರು ಸೇತುವೆ ಕೊಚ್ಚಿಹೋಗಿದೆ. ನೀರಿನ ಸೆಳೆತಕ್ಕೆ ಸೇತುವೆ ಕುಸಿದು ಬಿದ್ದಿದ್ದು, ಬಿಳಿಗೇರಿ ಹಾಕತ್ತೂರು ಸಂಪರ್ಕ ಕಡಿತಗೊಂಡಿದೆ.

    ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಕಾವೇರಿ ನದಿಯ ಭೋರ್ಗರೆತವೂ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಸೇತುವೆಗಳು ಮುಳುಗಡೆಯಾಗಿವೆ. ಕೊಡಗಿನ ಗಡಿ ಭಾಗದಲ್ಲಿನ ಪ್ರಸಿದ್ಧವಾದ ಗೋಲ್ಡನ್‌ ಟೆಂಪಲ್‌ಗೆ ಹೋಗುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.

    ಈ ಭಾಗದಲ್ಲಿನ ಸೇತುವೆಯೂ ಮುಳುಗಡೆಯಾಗಿದೆ. ಇದರಿಂದ ಗೋಲ್ಡನ್ ಟೆಂಪಲ್ ಗೆ ಸಂಪರ್ಕ ಕಡಿತವಾಗಿದ್ದು ಅಲ್ಲದೆ ಹಲವು ಗ್ರಾಮಗಳ ಸಂಪರ್ಕವು ಸಂಪೂರ್ಣವಾಗಿ ಕಡಿತವಾಗಿದೆ.

  • ಕೊಡಗು ಮಳೆ – ಜೋಡುಪಾಲ ಬಳಿ ಮತ್ತೆ ಭೂ ಕುಸಿತ

    ಕೊಡಗು ಮಳೆ – ಜೋಡುಪಾಲ ಬಳಿ ಮತ್ತೆ ಭೂ ಕುಸಿತ

    ಮಡಿಕೇರಿ: ಜೋಡುಪಾಲ ಬಳಿ ಕಳೆದ ಬಾರಿ ಗುಡ್ಡ ಕುಸಿದ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಗುಡ್ಡ ಕುಸಿದಿದೆ.

    ಗುಡ್ಡ ಕುಸಿತದ ಪರಿಣಾಮ ನಿರ್ಮಾಣ ಹಂತದ ಮನೆ ಜಖಂಗೊಂಡಿದೆ. ಆದರೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

    ಕಳೆದ ಬಾರಿ ಗುಡ್ಡಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಜಾಗದ ವಾಸ್ತವ ಸ್ಥಿತಿ ಬಗ್ಗೆ ಭೂವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಬಳಿಕ ಜೋಡುಪಾಲ ಬಳಿಯ ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈ ಬಾರಿ ಅಷ್ಟೊಂದು ಮಳೆ ಬಾರದಿದ್ದರೂ ಗುಡ್ಡ ಕುಸಿದಿರುವುದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಸೃಷ್ಟಿಸಿದೆ

    ಹವಾಮಾನ ಇಲಾಖೆ ಶನಿವಾರ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುವ ಸೂಚನೆಯನ್ನ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಆದರೆ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯನ್ನ ವಾಪಸ್ ಪಡೆದು ಆರೆಂಜ್ ಅಲರ್ಟ್ ಜಾರಿ ಮಾಡಿದೆ. ಅದರೆ ಬೆಳಿಗ್ಗೆಯಿಂದಲೂ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ.

    ಮುರಿದು ಬಿದ್ದ ಮರ: ಮೈಸೂರು ವಿರಾಜಪೇಟೆ ಅಂತರಾಜ್ಯ ಹೆದ್ದಾರಿ ಮಧ್ಯದಲ್ಲಿ ರೋ ಮಜ್ಜಿಗೆ ಹಳ್ಳದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರ ಮುರಿದು ಬಿದ್ದು ಮೂರು ವಾಹನಗಳು ಜಖಂಗೊಂಡಿದೆ. ಒಂದು ಜೀಪು,ಕಾರು, ಗೂಡ್ಸ್ ಆಟೋ ಜಖಂಗೊಂಡಿದೆ.

  • ಕೊಡಗಿನ ಜೋಡುಪಾಲದ ಸ್ಥಿತಿ ದೇವರಿಗೆ ಪ್ರೀತಿ

    ಕೊಡಗಿನ ಜೋಡುಪಾಲದ ಸ್ಥಿತಿ ದೇವರಿಗೆ ಪ್ರೀತಿ

    -ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶದಂತೆ ಕಾಣ್ತಿದೆ ಜೋಡುಪಾಲ

    ಮಂಗಳೂರು: ಆಗಸ್ಟ್ 17, 18ರಂದು ಮಡಿಕೇರಿಯ ಜೋಡುಪಾಲ, ಮೊಣ್ಣಂಗೇರಿ ಬಳಿ ಸಂಭವಿಸಿದ ಜಲಸ್ಫೋಟ ಕೊಡಗು ಜಿಲ್ಲೆ ಕಂಡು ಕೇಳರಿಯದ ದುರಂತಕ್ಕೆ ಕಾರಣವಾಗಿತ್ತು. ಹಸಿರ ಸಿರಿಯಾಗಿ ಗಗನ ಚುಂಬಿಸುತ್ತಿದ್ದ ಬೆಟ್ಟಗಳು ಛಿದ್ರಗೊಂಡು ತಪ್ಪಲು ಭಾಗದಲ್ಲಿ ಕಟ್ಟಿಕೊಂಡಿದ್ದ ಮನೆ, ರೆಸಾರ್ಟ್ ಕಟ್ಟಡಗಳು ಹೇಳ ಹೆಸರಿಲ್ಲದಂತೆ ಭೂಸಮಾಧಿಯಾಗಿದ್ದವು.

    10-15 ಮೀಟರ್ ಎತ್ತರಕ್ಕೆ ಹರಿದ ನೀರಿನ ರಭಸಕ್ಕೆ ದೊಡ್ಡ ದೊಡ್ಡ ಮರಗಳು ತರಗೆಲೆಗಳಂತೆ ಕೊಚ್ಚಿ ಹೋಗಿದ್ದವು. ಹೆದ್ದಾರಿಗಳು, ಸ್ಥಳೀಯರು ಮಾಡಿಕೊಂಡಿದ್ದ ಕೃಷಿ ಬೆಳೆಗಳು ನಿರ್ನಾಮವಾಗಿದ್ದವು. ಅಂದು ದುರಂತ ಎದುರಾಗುವ ಮೊದಲೇ ಅಲ್ಲಿನ ಜನ ಸ್ಥಳ ಬಿಟ್ಟು ತೆರಳಿದ್ದರಿಂದ ಜೀವ ಉಳಿಸಿಕೊಂಡಿದ್ದರು. ಮಡಿಕೇರಿಯಿಂದ ಆರು ಕಿಮೀ ದೂರದ 2ನೇ ಮೊಣ್ಣಂಗೇರಿಯ ಹೆದ್ದಾರಿ ಬದಿಯಲ್ಲಿ ದೊಡ್ಡ ರೆಸಾರ್ಟ್ ಇತ್ತು. ಆದ್ರೆ ಆವತ್ತಿನ ಪ್ರವಾಹಕ್ಕೆ ತುತ್ತಾದ ರೆಸಾರ್ಟ್ ಕಟ್ಟಡ ಕುರುಹೇ ಇಲ್ಲದಂತೆ ನಾಶವಾಗಿ ಹೋಗಿದೆ.

    ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶ ಹೇಗಿರುತ್ತೋ ಹಾಗಿದೆ ಅಲ್ಲಿನ ಸದ್ಯದ ಸ್ಥಿತಿ. ಒಂದು ಭಾಗದಿಂದ ಬೆಟ್ಟ ಗುಡ್ಡ ಕುಸಿದು ಹೋಗಿದ್ದರೆ, ಅಲ್ಲಿಯೇ ಕೆಳಭಾಗದಲ್ಲಿದ್ದ ರೆಸಾರ್ಟ್ ಕಟ್ಟಡದ ತಳಪಾಯವೇ ಇಲ್ಲದಂತೆ ನಾಪತ್ತೆಯಾಗಿದೆ. ಒಂದುಕಡೆ ಬಿದ್ದುಕೊಂಡಿರುವ ಟಾಯ್ಲೆಟ್, ಕೊಠಡಿಗಳ ಗೋಡೆಗಳು, ಅಲಂಕಾರಿಕ ಕಟ್ಟಡದ ಕಂಬಗಳು ಹಂಪಿಯ ಸ್ಥಿತಿಯನ್ನು ನೆನಪಿಸುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

    ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

    ಮಡಿಕೇರಿ: ಮಹಾಮಳೆಗೆ ಕೊಚ್ಚಿ ಹೋಗಿದ್ದ ಮಗಳ ಮೃತದೇಹ ಪತ್ತೆಗಾಗಿ ಪೋಷಕರು ಹುಡುಕಾಡಿದರೂ ಶವ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಮಗಳ ಆತ್ಮಕ್ಕೆ ಶಾಂತಿ ದೊರಕಲು ಗೊಂಬೆಯನ್ನು ಅಲಂಕರಿಸಿ, ಮದುವೆ ಮಾಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಕೊಡಗಿನ ಮದೆನಾಡಿನಲ್ಲಿ ನಡೆದಿದೆ.

    ಮಡಿಕೇರಿ ತಾಲೂಕಿನ ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜೋಡುಪಾಲ ನಿವಾಸಿ ಮಂಜುಳಾ ಭಾರೀ ಮಳೆಯಿಂದ ಉಂಟಾದ ನೆರೆಗೆ ಕೊಚ್ಚಿ ಹೋಗಿದ್ದಳು. ಕೊಚ್ಚಿ ಹೋದ ಬಳಿಕ ಆಕೆಯ ಮೃತದೇಹಕ್ಕಾಗಿ ಪೋಷಕರು, ಊರವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಎಷ್ಟು ಹುಡುಕಾಡಿದರೂ ಶವ ಸಿಗದ ಹಿನ್ನೆಲೆಯಲ್ಲಿ ಮಗಳ ಆತ್ಮಕ್ಕೆ ಶಾಂತಿ ಸಿಗಲು ಮಂಜುಳಾ ಪೋಷಕರು ಇದು ಗೊಂಬೆಯನ್ನು ಮದುವೆ ಮಾಡಿಸಿ ಅಂತ್ಯಸಂಸ್ಕಾರ ನಡೆಸಿದರು.

    ಹೀಗಿತ್ತು ಕಾರ್ಯಕ್ರಮ:
    ಮನೆ ಕೊಚ್ಚಿಹೋದ ಸ್ಥಳದಲ್ಲೇ ಮಂಜುಳಾ ಪ್ರತಿಕೃತಿ ತಯಾರು ಮಾಡಿ ಶೃಂಗಾರ ಮಾಡಲಾಗಿತ್ತು. ಅನೇಕ ಮಹಿಳೆಯರು ಸೇರಿ ಗೊಂಬೆಗೆ ಸೀರೆ ಉಡಿಸಿ, ಮಾರುದ್ದ ಜಡೆಗೆ ಮಲ್ಲಿಗೆ ಹೂವನ್ನ ಮುಡಿಸಿದರು. ಜೀವ ಇಲ್ಲದ ಗೊಂಬೆಗೆ ಮಾನಸಿಕವಾಗಿ ಜೀವ ನೀಡಿ, ಮದುವೆಯೂ ಮಾಡಿ ಅಂತ್ಯಸಂಸ್ಕಾರಕ್ಕೆ ಸಿದ್ಧಗೊಳಿಸಲಾಯಿತು. ಸಕಲ ಪೂಜೆಗಳನ್ನು ನೆರವೇರಿಸಿ ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಪೋಷಕರು ಪ್ರಾರ್ಥನೆ ಸಲ್ಲಿಸಿದರು.

    ಮಗಳ ಮೃತದೇಹ ದೊರೆಯುತ್ತಿದ್ದರೆ, ಆಕೆಗೆ ಮುಕ್ತಿ ಕೊಡಿಸುತ್ತಿದ್ದೇವು ಎಂದು ಅಂತಾ ಮಂಜುಳಾ ತಾಯಿ ಅಳಲು ತೊಡಿಕೊಂಡರು. ಅಂತ್ಯಸಂಸ್ಕಾರ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ಮದೆನಾಡು ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೌನಾಚಾರಣೆ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಸಹೋದರ ಕೂಡ ತಂಗಿಯನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ಮಂಜುಳಾ ಉತ್ತಮ ಥ್ರೋ ಬಾಲ್ ಆಟಗಾರ್ತಿಯಾಗಿದ್ದಳು.

    ಸೋಮಯ್ಯ ಅವರು ತಮ್ಮ ಪುತ್ರಿ ಮಂಜುಳಾನ್ನು ವ್ಯಾಸಂಗಕ್ಕಾಗಿ ತಂಗಿಯ ಮನೆಯಲ್ಲಿ ಬಿಟ್ಟಿದ್ದರು. ಮದೆನಾಡು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುಳಾ, ಬಸಪ್ಪ-ಗೌರಮ್ಮ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ ಆಗಸ್ಟ್ 17ರಂದು ಸುರಿದ ಮಹಾಮಳೆಗೆ ಬಸಪ್ಪ-ಗೌರಮ್ಮ ಅವರ ಪುತ್ರಿ ಮೋನಿಷಾ ಹಾಗೂ ಮಂಜುಳಾ ಕೊಚ್ಚಿ ಹೋಗಿದ್ದರು. ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದಾಗ ಮಂಜುಳಾ ಶವ ಹೊರತುಪಡಿಸಿ, ಮೂವರ ದೇಹವೂ ದೊರೆತಿವೆ. ದಿನಗಳು ಕಳೆದರೂ ಮಂಜುಳಾ ಮೃತದೇಹ ಪತ್ತೆಯಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ಮಂಗಳೂರು: ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ದುರಂತ ಎದುರಾಗಿ ಹತ್ತು ದಿನ ಕಳೆದಿವೆ. ಆದರೂ ಅಲ್ಲಿನ ಮೂರು ಗ್ರಾಮಗಳ ಸಾವಿರಾರು ನಿವಾಸಿಗಳು ಇನ್ನು ಕಲ್ಲುಗುಂಡಿ, ಸಂಪಾಜೆಯಲ್ಲಿರುವ ಕೇಂದ್ರದಲ್ಲೇ ತಂಗಿದ್ದಾರೆ.

    ಈ ನಡುವೆ ತಮ್ಮ ತಮ್ಮ ಮನೆಗಳನ್ನು ನೋಡಿ ಹೋಗಲು ಬರುವ ಬಹುತೇಕ ನಿವಾಸಿಗಳು ಅಲ್ಲಿಂದ ಸಾಮಾಗ್ರಿಗಳನ್ನು ಹೊತ್ತು ಒಯ್ಯುತ್ತಿದ್ದಾರೆ. ಕೆಲವು ಮನೆಗಳಿಗೆ ಹಾನಿ ಆಗದಿದ್ದರೂ, ಇಲ್ಲಿ ಮತ್ತೆ ಮಳೆಯಾಗಿ ಭೂಕುಸಿತವಾದರೆ ಅಪಾಯ ಅನ್ನುವ ಭಾವನೆ ನಿವಾಸಿಗಳಲ್ಲಿದೆ. ಹೀಗಾಗಿ ಸರ್ಕಾರದಿಂದ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಿಕೊಟ್ಟರೆ ತಮ್ಮ ಮನೆಗಳನ್ನು ಬಿಟ್ಟು ಅಲ್ಲಿಗೆ ತೆರಳಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ವಯಂಸೇವಕರ ಜೊತೆಗೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ.

    ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರು ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದಿದ್ದರು. ಹೀಗಾಗಿ ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು, ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

    ಇನ್ನೊಂದೆಡೆ ಘಟ್ಟಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಿರುಕು ಬಿಟ್ಟು ನಿಂತಿರುವ ಕಾರಣ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಾನವ ವಾಸ ತಕ್ಕುದಾಗಿಲ್ಲವಾದರೆ, ಬಡವರಿಗೆ ಪ್ರತ್ಯೇಕ ವಸತಿ ನಿರ್ಮಿಸಿ, ಅಲ್ಲಿರುವ ಕಾಫಿ ಎಸ್ಟೇಟ್‍ಗಳನ್ನು ವಶಕ್ಕೆ ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಮಡಿಕೇರಿ: ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದಿರುವ ದುರಂತದಿಂದ ಈ ಭಾಗದ ಜನ ಕಂಗೆಟ್ಟು ಹೋಗಿದ್ದಾರೆ. ಇಲ್ಲಿ ಭಾರೀ ದೊಡ್ಡ ಸ್ಫೋಟ ಸಂಭವಿಸಿದ್ದು, ಆ ಬಳಿಕ ಸಾಕಷ್ಟು ಮನೆಗಳಿಗೆ ನೀರು, ಮಣ್ಣು ನುಗ್ಗಿತ್ತು. ಹೀಗಾಗಿ ಇಲ್ಲಿಯ ನಿವಾಸಿಗಳು ಬಹಳ ತೊಂದರೆಗಳನ್ನು ಅನುಭವಿಸಿದ್ದು, ಜನ ತಮ್ಮ ನಿವಾಸದಿಂದ ತೆರಳಿ ನಿರಾಶ್ರಿತ ಕೇಂದ್ರಗಳಲ್ಲಿ ವಾಸವಿದ್ದರು.

    ಇದೀಗ ಸುಮಾರು 5 ದಿನಗಳ ಬಳಿಕ ಮನೆಗೆ ಬಂದು ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಈ ವೇಳೆ ಮನೆಯ ಸ್ಥಿತಿಯನ್ನು ನೋಡಲು ಬಂದ ಕುಟುಂಬವನ್ನು ಪಬ್ಲಿಕ್ ಟಿವಿ ಮಾತನಾಡಿಸಿತ್ತು. `ಮೊನ್ನೆ ಸುಮಾರು 8.30ಗೆ ಜೋಡುಪಾಲದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಹೀಗಾಗಿ ಅಲ್ಲಿಂದ ಸುಮಾರು 20 ಮಂದಿ ನಮ್ಮ ಮನೆಗೆ ಬಂದ್ರು. ಅವರಿಗೆ ಬೆಳಗ್ಗಿನ ಉಪಹಾರ ನೀಡಿ, ಇನ್ನೇನು ಮಧ್ಯಾಹ್ನ ಊಟಕ್ಕೆ ಸಿದ್ಧತೆ ನಡೆಸುತ್ತಿರಬೇಕಾದ್ರೆ ಅಂದ್ರೆ 11.30 ಸುಮಾರಿಗೆ ನಮ್ಮ ಮನೆಯ ಹಿಂದೆಯೇ ಮತ್ತೊಂದು ಸ್ಫೋಟ ಸಂಭವಿಸಿತ್ತು. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ನಮ್ಮ ತೋಟ, ಮರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು. ಇದರಿಂದ ಗಾಬರಿಗೊಂಡ ನಾವು ಮಗಳ 2 ತಿಂಗಳ ಮಗುವನ್ನು ಎತ್ತಿಕೊಂಡು ಬೆಟ್ಟಕ್ಕೆ ಓಡಿದೆವು. ಅಲ್ಲಿದ್ದಾಗ ಮತ್ತೊಮ್ಮೆ ಅಂತದ್ದೇ ದೊಡ್ಡ ಶಬ್ದವೊಂದು ಕೇಳಿಸಿತ್ತು. ಹೀಗಾಗಿ ಅಲ್ಲಿಂದ ಮತ್ತೊಂದು ಬೆಟ್ಟಕ್ಕೆ ಓಡಿದೆವು. ಅಲ್ಲಿಗೆ ಮಿಲಿಟ್ರಿಯವರು ಬಂದ್ರು. ನನ್ನ ಪತಿ, 2 ತಿಂಗಳ ಮಗುವನ್ನು ಹಿಡಿದುಕೊಂಡು ಪಾರಾದ್ರು, ನಾನು ಮತ್ತು ನನ್ನ ಬಾಣಂತಿ ಮಗಳನ್ನು ಮಿಲಿಟ್ರಿಯವರು ರಕ್ಷಿಸಿದ್ರು. ನಂತರ ನಾವು ಸ್ವಲ್ಪ ದೂರ ನಡೆದು ಪರಿಹಾರ ಕೇಂದ್ರಕ್ಕೆ ತೆರಳಿದೆವು ಅಂತ ನಡೆದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಮಹಿಳೆಯೊಬ್ಬರು ವಿವರಿಸಿದ್ರು.

    ಮಗಳು ಬಾಣಂತಿಯಾಗಿದ್ದರಿಂದ ಮಗುವನ್ನು ಹಿಡಿದುಕೊಂಡು ಪರಿಹಾರ ಕೇಂದ್ರದಲ್ಲಿ ಇರಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಅಲ್ಲಿಂದ ಸಂಬಂಧಿಕರ ಮನೆಗೆ ತೆರಳಿದೆವು. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ನಮಗೆ ಧೈರ್ಯ ಬಂತು. ಒಟ್ಟಿನಲ್ಲಿ 5 ದಿನದ ಬಳಿಕ ಮನೆಯ ಪರಿಸ್ಥಿತಿಯನ್ನು ನೋಡಲು ಮನೆ ಬಂದಿದ್ದೇವೆ ಅಂತ ಮನೆಯವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mYi6vJ3i3Wg

  • ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ರಾಜ್ಯ ನೈಸರ್ಗಿಕ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

    ಭೂ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಗುಡ್ಡ ಪ್ರದೇಶದಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ. ಮತ್ತೆ ಕೆಲವು ಕಡೆ ಗುಡ್ಡಗಳು ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

    ಭಾರೀ ಮಳೆಯಿಂದಾಗಿ ಮಣ್ಣು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡ ಪರಿಣಾಮ ಅಂತರ್ಜಲ ಮಟ್ಟ ಏರಿ ಈ ಕುಸಿತ ಸಂಭವಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ವಾತಾವರಣವನ್ನು ನೋಡಿದರೆ ಜನರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ಈಗ ನಾವು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಬಂದಿದ್ದು ಮುಂದೆ ಸಮಗ್ರ ಅಧ್ಯಯನಕ್ಕೆ ತಂಡ ಬರಲಿದೆ. ಘಟನೆಗೆ ಏನು ಕಾರಣ ಎಂಬ ಬಗ್ಗೆ 2 ತಿಂಗಳು ಅಧ್ಯಯನ ನಡೆಸಿ ವರದಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಇಲ್ಲಿ ಜನರು ವಾಸಿಸಬಹುದೇ ಇಲ್ಲವೇ ಎಂಬುದನ್ನು ನೋಡಲು ಬಂದಿದ್ದೇವೆ. ಬಳಿಕ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಕಂಡು ಕೊಳ್ಳಬೇಕಿದೆ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಮಾಡಿರುವ ತಪ್ಪನ್ನು ಮುಂದೆ ಮಾಡದೇ ಇರುವ ಹಾಗೇ ನೋಡಿಕೊಳ್ಳಬೇಕಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

    ಬೋಪಯ್ಯ ತಿರುಗೇಟು: ಜೋಡುಪಾಲ ವಾಸ ಯೋಗ್ಯ ಅಲ್ಲವೆಂಬ ತಜ್ಞರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ಹತ್ತಾರು ವರ್ಷಗಳಿಂದ ವಾಸವಿದ್ದವರನ್ನು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.

    ಸಂಪಾಜೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಅವರು, ಯಾವುದೇ ಹೋಮ್ ಸ್ಟೇಗಳಿದ್ದಲ್ಲಿ ಭೂ ಕುಸಿತ ಆಗಿಲ್ಲ, ಬರೀ ಬಡವರ ಮನೆಗಳಿರುವಲ್ಲಿ ಹೆಚ್ಚು ಭೂಕುಸಿತವಾಗಿ ನಾಶ ಆಗಿದೆ. ಹೋಮ್ ಸ್ಟೇ ಇಲ್ಲದ ಮೊಣ್ಣಂಗೇರಿ ಸ್ಥಳಗಳಲ್ಲಿ ಪೂರ್ತಿ ನಾಶವಾಗಿದೆ. ಒಂದು ವರ್ಷದಲ್ಲಿ ಬೀಳಬೇಕಾಗಿದ್ದ ಮಳೆ 15 ದಿನದಲ್ಲಿ ಬಿದ್ದ ಪರಿಣಾಮ ಈ ದುರ್ಘಟನೆಯಾಗಿದೆ ಎಂದು ಎಂದು ವಿಜ್ಞಾನಿಗಳ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!

    ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!

    ಮಂಗಳೂರು: ಕೊಡಗಿನ ಜೋಡುಪಾಲದಲ್ಲಿಯೂ ದುರಂತ ಸಂಭವಿಸುವ ಮುನ್ನ ಮೂಕ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಿದ್ದವು ಎಂಬ ಮಾಹಿತಿಯನ್ನು ಜೋಡಪಾಲದ ಸಂತ್ರಸ್ತರು ಹಂಚಿಕೊಂಡಿದ್ದಾರೆ.

    ಸಾಕು ನಾಯಿಗಳು, ತೋಟದಲ್ಲಿದ್ದ ಮಂಗಗಳು ವಿಲಕ್ಷಣವಾಗಿ ಕೂಗು ಹಾಕಿದ್ದವು. ಈ ಬಗ್ಗೆ ದೂರದ ಮಂಗಳೂರಿಗೆ ಬಂದು ಸಂಬಂಧಿಕರ ಮನೆಯಲ್ಲಿ ನೆಲೆಸಿರುವ ಜೋಡುಪಾಲದ ಸಂತ್ರಸ್ತರಾದ ಶಿಶಿರ್ ಅವರು ತಮ್ಮ ಅನುಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಆಗಸ್ಟ್ 16ರ ಬೆಳಗ್ಗೆಯಿಂದಲೇ ನಾಯಿ ವಿಚಿತ್ರವಾಗಿ ಬೊಗಳುವುದು ಮತ್ತು ತಮ್ಮ ಮನೆಯ ಸುತ್ತಮುತ್ತ ಇದ್ದ ಮಂಗಗಳೆಲ್ಲವೂ ಕೂಗಾಡುತ್ತಿದ್ದವು. ರಾತ್ರಿಯ ವೇಳೆ ಆನೆಗಳು ಕೂಡ ಘೀಳಿಡುತ್ತಿದ್ದವು. ಕೊಡಗಿನಲ್ಲಿ ಪ್ರಾಣಿಗಳು ಕೂಗುವುದು ಸಹಜವಾಗಿರುವ ಕಾರಣ ನಾವು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದರು.

    ಪ್ರಾಣಿಗಳು ಕೂಗಾಟ ಜಾಸ್ತಿಯಾಗುತ್ತಿದ್ದಂತೆ ಮನೆಯ ಹೊರಗಡೆ ಬಂದಾಗ ಭೂಮಿ ಒಳಭಾಗದಿಂದ ರೈಲು ಹೋಗುವ ಹಾಗೇ, ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳೆಲ್ಲ ಕೊಚ್ಚಿಕೊಂಡು ಹೋಗುವ ಹಾಗೇ ಶಬ್ದಗಳು ಕೇಳಿಬರುತ್ತಿತ್ತು. ಅಲ್ಲಿದ್ದ ಸಣ್ಣ ಹೊಳೆಯೊಂದು ನೋಡ ನೋಡುತ್ತಲೇ 10 ಪಟ್ಟು ಹೆಚ್ಚಾಗಿ ಹರಿದು ತೋಟಗಳೆಲ್ಲ ನಾಶವಾಯಿತು. ಆದರೂ ಧೈರ್ಯ ಮಾಡಿ ನಮ್ಮ ಕುಟುಂಬ ಮನೆಯಲ್ಲೇ ತಂಗಿತ್ತು. ಮಾರನೇ ದಿನ 17 ರಂದು ಬೆಟ್ಟದಲ್ಲಿ ಸುಮಾರು 5 ರಿಂದ 6 ಬಾರಿ ಭಾರೀ ಸ್ಫೋಟ ಸಂಭವಿಸಿದ ಕೂಡಲೇ ನಾವು ಭಯಗೊಂಡು ಮಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂದು ಶಿಶಿರ್ ವಿವರಿಸಿದರು.

    ಜೋಡುಪಾಲದ ಸುತ್ತಮುತ್ತ ಒಟ್ಟು 700 ಮನೆಗಳಿದ್ದು, 3 ಸಾವಿರ ಜನರಿದ್ದಾರೆ. ಈ ದುರಂತ ನಡೆದ ಬಳಿಕ 150, 200 ಜನ ಬೆಟ್ಟ ಹತ್ತಿ ಮಡಿಕೇರಿಗೆ ತಲುಪಿದ್ದಾರೆ. 500 ರಿಂದ 1000 ಜನರು ದಕ್ಷಿಣ ಕನ್ನಡದ ಕಲ್ಲುಗುಂಡಿ, ಸಂಪಾಜೆ, ಅರಂತೋಡಿಗೆ ಬಂದು ನೆಲೆಸಿದ್ದಾರೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

    ಸಂಪಾಜೆ ಘಾಟಿ ಶ್ರೇಣಿಯಲ್ಲೇ ಬೆಟ್ಟಗಳು ಭಾರೀ ಕುಸಿತವಾಗಿದ್ದು ಯಾಕೆ?

    ಬೆಂಗಳೂರು: ಕೊಡಗಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ಎಲ್ಲ ಕಡೆ ಯಾಕೆ ಭೂ ಕುಸಿತವಾಗಿಲ್ಲ ಎಂದು ಹಲವು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ದೇವರಕೊಲ್ಲಿ, ಜೋಡುಪಾಲ, ಮದೆನಾಡು, ಮುಕ್ಕೋಡ್ಲು, ಮಾದಾಪುರ ಗಾಳಿಬೀಡು ಹಮ್ಮಿಯಾಲ, ದೇವಸ್ತೂರು, ಸಂಪಾಜೆಯ ಅರೆಕಲ್ಲು, ಜೇಡ್ಲ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದ್ದರಿಂದ ಜನ ಈಗ ಈ ಪ್ರಶ್ನೆ ಕೇಳುತ್ತಿದ್ದಾರೆ.

    ಮಡಿಕೇರಿ- ಮಂಗಳೂರು ಸಂಪರ್ಕ ಕಲ್ಪಿಸುವ ಸಂಪಾಜೆ ಶ್ರೇಣಿಯಲ್ಲಿ ಬಿದ್ದ ಮಳೆಗಿಂತಲೂ ಜಾಸ್ತಿ ಮಳೆ ಪುಷ್ಪಗಿರಿ ಬೆಟ್ಟ, ಕೊಡಗಿನ ಅತಿ ಎತ್ತರ ಬೆಟ್ಟವಾದ ತಡಿಯಂಡಮೋಳು, ಬ್ರಹ್ಮಗಿರಿ ಬೆಟ್ಟ, ತಲಕಾವೇರಿ ಮುಂತಾದ ಬೆಟ್ಟದಲ್ಲಿ ಬಿದ್ದಿದೆ. ಆದರೆ ಇಲ್ಲಿ ಎಲ್ಲೂ ಆಗದ ಕುಸಿತಗಳು ಇಲ್ಲೆ ಯಾಕೆ ಆಗಿದೆ ಎನ್ನುವ ಪ್ರಶ್ನೆಗಳು ಈಗ ಎದ್ದಿದೆ.

    ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಉತ್ತರ ಕಂಡುಕೊಳ್ಳಬೇಕಾದರೆ ಹಲವು ದಿನಗಳು ಬೇಕಾಗಬಹುದು. ಆದರೆ ನಿರಂತರ ಭೂ ಕೊರೆತ, ಭಾರೀ ವಾಹನಗಳ ಓಡಾಟದಿಂದ ಈ ಪ್ರಮಾಣದಲ್ಲಿ ಭೂ ಕುಸಿತವಾಗಿರಬಹುದು ಎನ್ನುವುದು ಸ್ಥಳೀಯರ ಮಾತು.

    ಭಾರೀ ಪ್ರಮಾಣದ ಓಡಾಟ ಹೇಗೆ?
    ಬೆಂಗಳೂರು – ಮೈಸೂರು – ಮಡಿಕೇರಿಯಿಂದ ಬಂಟ್ವಾಳ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 275 ಎಂದು ಘೋಷಿಸಲಾಗಿದ್ದು, ಇದರ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು 2014ರಲ್ಲಿ. ಮೈಸೂರಿನಿಂದ- ಕುಶಾಲನಗರ, ಕುಶಾಲನಗರದಿಂದ ಸಂಪಾಜೆ, ಸಂಪಾಜೆಯಿಂದ ಬಂಟ್ವಾಳ ಹೀಗೆ ಮೂರು ಹಂತದಲ್ಲಿ ಈ ಯೋಜನೆಯನ್ನು ಮುಗಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗುವ ಮೊದಲು ಈ ರಸ್ತೆಯಲ್ಲಿ ಕಡಿಮೆ ಪ್ರಮಾಣದ ವಾಹನಗಳು ಓಡಾಡುತಿದ್ದವು. ಯಾವಾಗ ಹೆದ್ದಾರಿ ಕಾಮಗಾರಿಗಳು ಮುಗಿದವೋ ಆಗ ವಾಹನಗಳ ಸಂಖ್ಯೆಯೂ ಹೆಚ್ಚಾಯಿತು. ಈ ಹಿಂದೆ ಅಪಾಯಕಾರಿ ತಿರುವುಗಳಾಗಿದ್ದ ಜಾಗ ಅಗಲವಾಗಿ ನಿರ್ಮಾಣವಾದ ಪರಿಣಾಮ ಘನವಾಹನಗಳ ಓಡಾಟ ಆರಂಭವಾಯಿತು.

    ಈ ನಡುವೆ ಶಿರಾಡಿ ಘಾಟ್ ಸಂಚಾರ 6 ತಿಂಗಳು ಬಂದ್ ಆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹಗಳ ಸಂಖ್ಯೆ ಹೆಚ್ಚಾಯಿತು. ಘನವಾಹನಗಳು ಸಂಪಾಜೆ, ಕೊಯನಾಡು, ಜೋಡುಪಾಲ, ಮದೆನಾಡು ಮೂಲಕ ಮಡಿಕೇರಿಗೆ ಆಗಮಿಸಿ ಮೈಸೂರಿಗೆ ತೆರಳಿದ್ದರೆ, ಇನ್ನು ಕೆಲವು ಮಡಿಕೇರಿಯ ಮೂಲಕ ಹಟ್ಟಿಹೊಳೆ, ಮಾದಾಪುರ ಮೂಲಕ ಹಾಸನಕ್ಕೆ ಓಡಾಡಿವೆ. ಭಾರೀ ವಾಹನಗಳ ಓಡಾಟದಿಂದ ಮನೆಗಳು, ಭೂಮಿ ಅಲುಗಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದರೂ ಈ ವಿಚಾರಗಳನ್ನು ಯಾರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಘನವಾಹನಗಳ ಸಂಚಾರಕ್ಕೆ ಈ ರಸ್ತೆಯನ್ನು ಬಂದ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

    ಸಂಪಾಜೆ- ಮಡಿಕೇರಿ ರಸ್ತೆ ಮಧ್ಯೆ ಬಾಯಿಬಿಡುವುದು ಅಥವಾ ಕುಸಿತವಾಗುವುದು ಇದೇ ಮೊದಲೆನಲ್ಲ. 2015ರಲ್ಲಿ ಸುರಿದ ಮಳೆಗೆ ಸಂಪಾಜೆಯಿಂದ 1 ಕಿ.ಮೀ ದೂರದಲ್ಲಿರುವ ಕೊಯಿನಾಡು ಬಳಿ ಇರುವ ಸಿಂಕೋನ ಎಸ್ಟೇಟ್ ಸಮೀಪ ರಸ್ತೆ ಬಿರುಕು ಬಿಟ್ಟಿತ್ತು. ಮಳೆ ನೀರು ಹರಿಯಲು ಸರಿಯಾಗಿ ಜಾಗ ಇಲ್ಲ ಕಾರಣ ರಸ್ತೆಯ ಅಡಿಯಲ್ಲೇ ನೀರು ಹೋದ ಪರಿಣಾಮ ಕುಸಿತಗೊಂಡಿತ್ತು. ಈ ಸಮಸ್ಯೆಯಾದ ಬಳಿಕ ದುರಸ್ತಿ ಕಾರ್ಯದ ವೇಳೆ ರಸ್ತೆಯ ಅಡಿ ಭಾಗದಿಂದ ನೀರು ಹೊರಹೋಗಲು ವ್ಯವಸ್ಥೆ ಮಾಡಲಾಗಿತ್ತು. ಈಗ ಕುಸಿತಗೊಂಡ ಭಾಗದಲ್ಲಿ ರಸ್ತೆ ಚೆನ್ನಾಗಿದೆ. ಹೀಗಾಗಿ ಘಾಟಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೇಲಿನಿಂದ ಬಿದ್ದ ನೀರು ರಸ್ತೆಯ ಕೆಳ ಭಾಗದಿಂದ ಹರಿದು ಹೋಗಲು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಹಲವು ಕಡೆ ಕುಸಿತ ಉಂಟಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

    (ಕೊಯಿನಾಡಿನ ಬಳಿ 2015ರಲ್ಲಿ ಕುಸಿತಗೊಂಡ ರಸ್ತೆ. ಸಾಮಾಜಿಕ ಜಾಲತಾಣದಲ್ಲಿ ಜನ ಈ ಬಾರಿ ಕುಸಿತಗೊಂಡ ಫೋಟೋದ ಜೊತೆಗೆ ಈ ಫೋಟೋವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ)

    ಮೇಲೆ ತಿಳಿಸಿದ ಕಾರಣದ ಜೊತೆ ದಾಖಲೆ ಪ್ರಮಾಣದ ಮಳೆ ಕೊಡಗಿನಲ್ಲಿ ಆಗಿದೆ. ಏಪ್ರಿಲ್ ನಿಂದ ಆರಂಭಗೊಂಡ ಬಳಿ ನಿರಂತರವಾಗಿ ಸರಿಯುತ್ತಲೇ ಇದೆ. ಎಲ್ಲದರ ಪರಿಣಾಮ ಅರಣ್ಯ ನಾಶದಿಂದ ಮೊದಲೇ ಸಡಿಲಗೊಂಡಿದ್ದ ಮಣ್ಣು ಆಗಸ್ಟ್ ಮೂರನೇ ವಾರದಲ್ಲಿ ಬಿದ್ದ ಭಾರೀ ಮಳೆಗೆ ರಸ್ತೆಗೆ ಬಿದ್ದಿದೆ. ನೀರಿನ ರಭಸಕ್ಕೆ ಮರಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv