Tag: ಜೋಡಣೆ

  • ಕಾವೇರಿ ಸೇರಿದಂತೆ 5 ನದಿಗಳ ಜೋಡಣೆ

    ಕಾವೇರಿ ಸೇರಿದಂತೆ 5 ನದಿಗಳ ಜೋಡಣೆ

    ನವದೆಹಲಿ: ಕಾವೇರಿ ಸೇರಿ 5 ನದಿಗಳ ಜೋಡಣೆಗೆ ಯೋಜನೆ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದು ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ

    ಕೃಷ್ಣ, ಗೋದಾವರಿ, ಕಾವೇರಿ, ಪೆನ್ನಾರ್, ನರ್ಮದಾ ಐದು ನದಿಗಳ ನದಿ ಜೋಡಣೆ ಯೋಜನೆಗಳಿಗೆ ಒತ್ತು ನೀಡಲಾಗುವುದು. ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆಗೆ 44,000 ಕೋಟಿ ರೂಪಾಯಿ ನೀಡಲಾಗಿದೆ. ರಾಷ್ಟ್ರೀಯ ಯೋಜನೆಯಡಿ 5 ನದಿಗಳನ್ನು ಜೋಡಿಸುವ ಯೋಜನೆಗಳು ಮತ್ತು ಡಿಪಿಆರ್‌ಗಳನ್ನು ಮಾಡಲಾಗಿದೆ. ಗಂಗಾ ನದಿ ಕಾರಿಡಾರ್‌ನಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಕೆನ್ -ಬೆಟ್ಟಾ ಲಿಂಕ್ ಯೋಜನೆ ದೇಶದಲ್ಲಿ ಕೈಗೊಂಡಿರುವ ನದಿಗಳ ಜೋಡಣೆಯ ಮೊದಲ ಯೋಜನೆಯಾಗಿದೆ. ಯಮುನಾದ 2 ಉಪನದಿಗಳಾದ ಬೆಟ್ಟಾ ನದಿಗೆ ಜೋಡೆಣೆ ಮಾಡಲಾಗುತ್ತದೆ. ಈ ಯೋಜನೆಯಿಂದ 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್, 27 MW ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ವಾಜಪೇಯಿ ಸರ್ಕಾರದಿಂದ ಸುಮಾರು 20 ವರ್ಷಗಳ ನಂತರ ಮೊದಲ ಕೆನ್ ಬೆಟ್ಟಾ ನದಿ ಜೋಡನೇ ಯೋಜನೆಗೆ ಹಂಚಿಕೆಯೊಂದಿಗೆ ಇದು ಅತ್ಯಂತ ಮಹತ್ವದ ಘೋಷಣೆಯಾಗಿದೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

    ಏನಿದು ಯೋಜನೆ?: ಬಂಗಾಳಕೊಲ್ಲಿ ಸಮುದ್ರದ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಸುಮಾರು 60 ಸಾವಿರ ಕೋಟಿ ರೂ. ಮೊತ್ತದ ಪ್ರಾಜೆಕ್ಟ್‌ ಇದಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಅನುಕೂಲವಾಗಲಿರುವ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸಮ್ಮತಿ ನೀಡಲಾಗಿದೆ.

    ಬಹುದಿನಗಳ ಬೇಡಿಕೆಯ ಯೋಜನೆಗಳಾದ ಕಾವೇರಿ- ಪೆನ್ನಾರ್‌ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ 2022ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಮೊದಲು ಆಂಧ್ರದಲ್ಲಿ ಪೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್‌ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಕೊಳವೆ ಮಾರ್ಗದಲ್ಲಿ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್‌ ಕೊಳವೆಗಳ ಮೂಲಕ ನೀರನ್ನು ಹರಿಸುವ ಉದ್ದೇಶ ಹೊಂದಲಾಗಿದೆ.

    ಈ ನದಿ ಜೋಡಣೆಯಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಸಿ, ಅಲ್ಲಿಂದ ಮುಂದೆ ಪೆನ್ನಾರ್‌(ಉತ್ತರ ಪಿನಾಕಿನಿ) ನದಿಯಿಂದ ಕಾವೇರಿ ನದಿಗೆ ಹರಿಸುವ ಎರಡು ಯೋಜನೆಗಳು ನದಿ ಜೋಡಣೆಯ ಭಾಗವಾಗಿ ಈ ಯೋಜನೆ ಆಗಿದೆ.

    ಪ್ರಾರಂಭಿಕ ಹಂತದಲ್ಲಿ 300 ಟಿಎಂಸಿ ಗೋದಾವರಿ ನದಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್‌ ಮೂಲಕ ಪೋಲಾವರಂ ಯೋಜನೆಗೆ ಬೆಸೆದು ಬಳಿಕ ಕೃಷ್ಣಾ ನದಿಗೆ ತರುವುದು. ಅಲ್ಲಿಂದ ಮುಂದೆ ಪೆನ್ನಾರ್‌ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ ಅದನ್ನು ಮುಂದೆ ಗ್ರ್ಯಾಂಡ್‌ ಅಣೆಕಟ್‌ ಡ್ಯಾಮ್‌ ಮೂಲಕ ಕಾವೇರಿ ನದಿಗೆ ಸೇರಿಸುವುದು. ಇಲ್ಲಿ ಸ್ಟೀಲ್‌ ಕೊಳವೆ ಮಾರ್ಗದ ಮೂಲಕವೇ ನೀರು ಹರಿದುಬರಲಿದೆ. ಈ ಪ್ರಾಜೆಕ್ಟ್‌ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

  • ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ನವದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕುರಿತು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ.

    ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಹಾಗೂ ಸರ್ಕಾರದ ಸವಲತ್ತು ಪಡೆಯುವ ಯೋಜನೆಗಳಲ್ಲಿ ಮಾತ್ರವೇ ಬಳಸುವಂತೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಜೋಡಿಸಲು ಮುಂದಾಗುತ್ತಿದೆ.

    ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕೆಂದರೆ ಮೊದಲು ಜನಪ್ರತಿನಿಧಿ ಕಾಯ್ದೆ-1951 ರ ತಿದ್ದುಪಡಿಯಾಗಬೇಕಿದೆ. ಹೀಗಾಗಿ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶೀಘ್ರವೇ ಪ್ರಸ್ತಾವನೆಯನ್ನು ಸಲ್ಲಿಸಲು ಮುಂದಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

    ಇದಲ್ಲದೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಎಂ.ಎಲ್.ರವಿ ಎಂಬವರು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಬಗ್ಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಈ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲವೆಂದು ಚುನಾವಣಾ ಆಯೋಗ ಹೇಳಿತ್ತು.

    ಜೋಡಣೆಯಿಂದ ಉಪಯೋಗವೇನು?
    ದೇಶದಲ್ಲಿರುವ ಎಲ್ಲಾ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದರೆ, ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಅಕ್ರಮ ಮತದಾನದ ಹಾವಳಿ ನಿಯಂತ್ರಣವಾಗುತ್ತದೆ. ಅಲ್ಲದೇ ಎರಡೆರಡು ಗುರುತಿನ ಚೀಟಿಗಳನ್ನು ಪಡೆದವರ ಕಾರ್ಡು ಗಳು ರದ್ದಾಗುತ್ತವೆ. ಇದರಿಂದಾಗಿ ದೇಶದಲ್ಲಿರುವ ಮತದಾರರ ನಿಖರ ಸಂಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv