Tag: ಜೊತೆಯಾಟ

  • ಕೊರೊನಾ ವಿರುದ್ಧ ಹೋರಾಡಲು ಯುವಿ ಕೈಫ್ ರೀತಿ ಒಳ್ಳೆಯ ಜೊತೆಯಾಟಬೇಕು – ಮೋದಿ

    ಕೊರೊನಾ ವಿರುದ್ಧ ಹೋರಾಡಲು ಯುವಿ ಕೈಫ್ ರೀತಿ ಒಳ್ಳೆಯ ಜೊತೆಯಾಟಬೇಕು – ಮೋದಿ

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ತರ ಒಳ್ಳೆಯ ಜೊತೆಯಾಟ ಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಶುಕ್ರವಾರ ದೇಶವನ್ನು ಉದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಮಾರ್ಚ್ 22ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಹೊರಗಡೆ ಬರಬೇಡಿ. ಜನರೇ ಜನರಿಗಾಗಿ ಮಾಡುವ ಕರ್ಫ್ಯೂ ಇದಾಗಿದ್ದು, ನಾವು ಆರೋಗ್ಯವಾಗಿದ್ದರೆ ದೇಶ ಆರೋಗ್ಯದಲ್ಲಿರುತ್ತದೆ ಎಂದು ಮನವಿ ಮಾಡಿ ಜನತಾ ಕಫ್ರ್ಯೂವನ್ನು ಪಾಲನೆ ಮಾಡುವಂತೆ ಕರೆ ಕರೆಕೊಟ್ಟಿದ್ದರು.

    ಈ ಜನತಾ ಕರ್ಫ್ಯೂಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ವಿಚಾರವಾಗಿ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದರು. ನಾವೇಲ್ಲ ಸೇರಿ ನರೇಂದ್ರ ಮೋದಿ ಅವರ ಸೂಚನೆಯನ್ನು ಪಾಲಿಸೋಣ. ನಾವು ಇರುವ ಪರಿಸ್ಥಿತಿ ನಿಜ ಮತ್ತು ನಾವು ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆರೋಗ್ಯಕರ ಜಾಗೃತಿ ಮೂಡಿಸಲು ಮತ್ತು ನಮ್ಮ ದೇಶವನ್ನು ಬೆಂಬಲಿಸಲು ಪ್ರತಿಯೊಬ್ಬ ಭಾರತೀಯನೂ ನನ್ನೊಂದಿಗೆ ಸೇರಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದರು.

    ಇದಾದ ನಂತರ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಕೂಡ, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕಫ್ರ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದಾರೆ.

    ಈ ಇಬ್ಬರು ಸ್ಟಾರ್ ಕ್ರಿಕೆಟಿಗರು ಮಾಡಿರುವ ಟ್ವೀಟ್‍ಗೆ ಮೋದಿಜೀ ಅವರು ರೀಟ್ವೀಟ್ ಮಾಡಿದ್ದು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

    2002 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನ್ಯಾಟ್‍ವೆಸ್ಟ್ ಸೀರಿಸ್ ಫೈನಲ್ ಪಂದ್ಯಲ್ಲಿ ಕೈಫ್ ಮತ್ತು ಯುವರಾಜ್ ಅದ್ಭುತವಾಗಿ ಆಡಿದ್ದರು. 146 ರನ್‍ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತವನ್ನು ಆರನೇ ವಿಕೆಟ್‍ಗೆ ಜೋಡಿ ಆದ ಕೈಫ್ ಮತ್ತು ಯುವರಾಜ್ ಜೊತೆಗೂ 121 ರನ್ ಜೊತೆಯಾಟವಾಡಿದ್ದರು. ಈ ಮೂಲಕ ಭಾರತ ಫೈನಲಿನಲ್ಲಿ ಎರಡು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು.

    2002 ರ ನ್ಯಾಟ್‍ವೆಸ್ಟ್ ಸೀರಿಸ್ ಫೈನಲ್‍ನಲ್ಲಿ ಇಂಗ್ಲೆಂಡ್ ನೀಡದ 325 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕಿತ್ತು. ಆದರೆ ದಿಢೀರ್ ಕುಸಿತ ಕಂಡ ಭಾರತಕ್ಕೆ ಯುವಿ 63 ಎಸೆತಗಳಲ್ಲಿ 69 ಮತ್ತು ಕೈಫ್ 75 ಎಸೆತಗಳಲ್ಲಿ 87 ರನ್ ಸಿಡಿಸಿ ತಂಡವನ್ನು ಗೆಲುವಿನ ತಡ ಸೇರಿಸಿದ್ದರು. ಈ ಪಂದ್ಯದ ಜೊತೆಯಾಟವನ್ನು ಉಲ್ಲೇಖಿಸಿ ಮೋದಿ ಅವರು ಈ ಟ್ವೀಟ್ ಮಾಡಿದ್ದು ಪ್ರಶಂಸೆ ವ್ಯಕ್ತವಾಗಿದೆ.