Tag: ಜೈ ಶ್ರೀರಾಮ

  • ಜೈ ಶ್ರೀರಾಮ ಹೇಳದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಜೈ ಶ್ರೀರಾಮ ಹೇಳದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಚಂಡೀಗಢ (ಗುರುಗ್ರಾಮ): ಜೈ ಶ್ರೀರಾಮ ಘೋಷಣೆ ಹೇಳದಕ್ಕೆ ಮತ್ತು ಬೀದಿಯಲ್ಲಿ ಟೋಪಿ ಧರಿಸಿ ತಿರುಗಾಡಿದ ಮುಸ್ಲಿಂ ಯುವಕನ ಮೇಲೆ ಕೆಲ ಪುಡಾರಿಗಳು ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುಡಾರಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಮೊಹಮ್ಮದ್ ಬರಕತ್ ಆಲಮ್ ಹಲ್ಲೆಗೊಳಗಾದ ಯುವಕ. ಶನಿವಾರ ರಾತ್ರಿ ನಮಾಜ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೆಲ ಯುವಕರನ್ನು ಆಲಮ್ ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ರಂಜಾನ್ ಮಾಸವಾಗಿದ್ದರಿಂದ ಆಲಮ್ ಉಪವಾಸ ನಿರತನಾಗಿದ್ದರು. ಸಂಜೆ ನಮಾಜ್ ಬಳಿಕವೂ ಸರಿಯಾಗಿ ಆಹಾರ ಸೇವಿಸದ ಆಲಮ್ ರಾತ್ರಿ ಬೇಗ ಬೇಗ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಲ್ಲೆ ನಡೆದಿದೆ.

    ಈ ಕುರಿತು ರಾಷ್ಟ್ರೀಯ ವಾಹಿನಿ ಜೊತೆ ಮಾತನಾಡಿರುವ ಆಲಮ್, ಮಾರ್ಗ ಮಧ್ಯೆ ನಾಲ್ವರು ಬೈಕ್ ಸವಾರರು ಸೇರಿದಂತೆ ಮತ್ತಿಬ್ಬರು ನನ್ನನ್ನು ಅಡ್ಡಗಟ್ಟಿದರು. ಆರು ಜನರಲ್ಲಿ ಓರ್ವ ಈ ಪ್ರದೇಶದಲ್ಲಿ ಟೋಪಿ ಧರಿಸಿ ಹೋಗಬಾರದು ಎಂದು ಹೇಳಿದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಹಲ್ಲೆಗೆ ಮುಂದಾದರು. ಈ ಗುಂಪಿನಲ್ಲಿದ್ದ ಮತ್ತೋರ್ವ ಜೈ ಶ್ರೀರಾಮ್ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆ ಹೇಳಲು ಒತ್ತಾಯಿಸಿದರು. ನಾನು ಘೋಷಣೆ ಕೂಗದೇ ಇದ್ದಾಗ ತಲೆಯ ಮೇಲಿನ ಟೋಪಿ ರಸ್ತೆಗೆ ಎಸೆದು ಎಲ್ಲರೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.

    ಕೆಲವರು ನನ್ನ ಶರ್ಟ್ ಹರಿದು, ಧರ್ಮ ನಿಂದನೆ ಮಾಡಿದರು. ಭಯಬೀತನಾದ ನಾನು ನಡುಗುತ್ತಾ ಸ್ಥಳದಲ್ಲಿದ್ದ ಪೌರ ಕಾರ್ಮಿಕರನ್ನು ಸಹಾಯಕ್ಕೆ ಅಂಗಲಾಚಿದೆ. ಆದ್ರೆ ಯಾರು ನನ್ನ ಸಹಾಯಕ್ಕೆ ಮುಂದಾಗಲಿಲ್ಲ. ಕೊನೆಗೆ ಸ್ಥಳೀಯ ಮಸೀದಿಯ ಕೆಲವರಿಗೆ ಹಾಗೂ ಕುಟುಂಬಸ್ಥರಿಗೆ ಹಲ್ಲೆಯ ವಿಷಯ ತಿಳಿಸಿದೆ. ಇತ್ತ ಆರು ಜನರು ಹಲ್ಲೆಯ ಬಳಿಕ ನಾಪತ್ತೆಯಾದರು ಎಂದು ಆಲಮ್ ಹೇಳುತ್ತಾರೆ.

    ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಮಸೀದಿಯ ಸಿಬ್ಬಂದಿ ಆಲಮ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪೊಲೀಸರು ಆಲಮ್ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದಲ್ಲಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಕೆಲ ಬೈಕ್ ಗಳು ನಿಂತಿರೋದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಆಲಮ್ ವಿಶ್ರಾಂತಿ ಪಡೆಯುತ್ತಿದ್ದಾರೆ.