Tag: ಜೈಲು ಶಿಕ್ಷೆ

  • ಕರು ಕೊಂದಿದ್ದಕ್ಕೆ 10 ವರ್ಷ ಜೈಲು, 1 ಲಕ್ಷ ರೂ. ದಂಡ

    ಕರು ಕೊಂದಿದ್ದಕ್ಕೆ 10 ವರ್ಷ ಜೈಲು, 1 ಲಕ್ಷ ರೂ. ದಂಡ

    ಗಾಂಧಿನಗರ: ಕರು ಕೊಂದಿದ್ದಕ್ಕೆ ಗುಜರಾತ್‍ನ ರಾಜ್‍ಕೋಟ್ ಜಿಲ್ಲಾ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

    ಜಿಲ್ಲ ನ್ಯಾಯಾಲಯದ ನ್ಯಾ.ಎಚ್.ಕೆ.ದವೆ ಅವರು ಗುಜರಾತ್ ಪ್ರಾಣಿ ಸಂರಕ್ಷಣೆ(ತಿದ್ದುಪಡಿ) ಕಾಯ್ದೆ 2017ರ ಅನ್ವಯ ಆರೋಪಿ ಸಲೀಂಗೆ ಶಿಕ್ಷೆ ವಿಧಿಸಿದ್ದಾರೆ.

    ಜನವರಿಯಲ್ಲಿ ಸತ್ತರ್ ಕೋಲಿಯಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ಆರೋಪಿ ಮಕ್ರಾನಿ ತನ್ನ ಮಗಳ ಮದುವೆ ಹಿನ್ನೆಲೆ ಮನೆಯಲ್ಲಿದ್ದ ಕರುವನ್ನು ಯಾರಿಗೂ ಗೊತ್ತಾಗದಂತೆ ಕೊಂದು ಬಾಡೂಟ ಮಾಡಿಸಿ, ಮದುವೆ ಊಟವನ್ನಾಗಿ ಬಡಿಸಿದ್ದ ಎಂದು ದೂರುದಾರರು ಆರೋಪಿಸಿದ್ದರು.

    ಎಫ್‍ಐಆರ್ ದಾಖಲಾದ ನಂತರ ತನಿಖೆ ನಡೆಸಲಾಗಿದ್ದು, ಸಾಕ್ಷಿಗಳು ಹಾಗೂ ವಿಧಿವಿಜ್ಞಾನ ವರದಿಯನ್ನು ಆಧಾರಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಿದ್ದುಪಡಿಯಾದ ಕಾಯ್ದೆಯನ್ವಯ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡದ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

    ತಿದ್ದುಪಡಿ ಮಾಡಿದ ಹೊಸ ಕಾಯ್ದೆಯನ್ವಯ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ. ಈ ಕಾಯ್ದೆಯ ಪ್ರಕಾರ ಗೋಮಾಂಸ ಸಾಗಣೆ, ಮಾರಾಟ ಮತ್ತು ಸಂಗ್ರಹಣೆಗಾಗಿ 7-10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಈ ಹಿಂದೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಕಾಯ್ದೆಯ ತಿದ್ದುಪಡಿ ನಂತರ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಿಸಲಾಗಿತ್ತು.

  • ವಿಮಾನ ಆಟೋ-ಪೈಲೆಟ್ ಮೋಡ್‍ನಲ್ಲಿಟ್ಟು 15ರ ಬಾಲಕಿ ಜೊತೆ ಕೋಟ್ಯಧಿಪತಿ ಸೆಕ್ಸ್!

    ವಿಮಾನ ಆಟೋ-ಪೈಲೆಟ್ ಮೋಡ್‍ನಲ್ಲಿಟ್ಟು 15ರ ಬಾಲಕಿ ಜೊತೆ ಕೋಟ್ಯಧಿಪತಿ ಸೆಕ್ಸ್!

    ವಾಷಿಂಗ್ಟನ್: 15 ವರ್ಷದ ಅಪ್ರಾಪ್ತ ಬಾಲಕಿಯ ಜೊತೆ ಸೆಕ್ಸ್ ಮಾಡಲು ತನ್ನ ಖಾಸಗಿ ವಿಮಾನವನ್ನು ಆಟೋ-ಪೈಲೆಟ್ ಮೋಡ್‍ನಲ್ಲಿಟ್ಟಿದ್ದ ಕೋಟ್ಯಧಿಪತಿ ಉದ್ಯಮಿ ಈಗ ಕಂಬಿ ಏಣಿಸುತ್ತಿದ್ದಾನೆ.

    ಶ್ರೀಮಂತ ಉದ್ಯಮಿ, ನ್ಯೂ ಜೆರ್ಸಿಯ ಕೋಟ್ಯಧಿಪತಿ ಸ್ಟೀಫನ್ ಬ್ರಾಡ್ಲಿ ಮೆಲ್(53) ಮೆಲ್‍ಗೆ ಮೂರು ಮಕ್ಕಳಿದ್ದಾರೆ. ಆದರೂ ಕೂಡ ಆತ ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದನು. 2018ರ ಡಿಸೆಂಬರ್ ನಲ್ಲಿ ಈ ಕೃತ್ಯ ಎಸಗಿದ್ದು, ಈಗ ನ್ಯಾಯಾಲಯ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಬಾಲಕಿಯು ಬಡ ಕುಟುಂಬದವಳು. ಆಕೆಯ ತಾಯಿ ಮೆಲ್ ಬಳಿ ತನ್ನ ಮಗಳಿಗೆ ವಿಮಾನ ಹಾರಾಟದ ತರಬೇತಿ ನೀಡಿ ಎಂದು ಮನವಿ ಮಾಡಿದ್ದರು. ಆದರೆ ತರಬೇತಿ ನೀಡುವ ನೆಪದಲ್ಲಿ ಉದ್ಯಮಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಈ ಸಂಬಂಧ ಉದ್ಯಮಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೊತೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

    ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಮೆಲ್ ಪರ ವಕೀಲರು, ಉದ್ಯಮಿ ಉತ್ತಮ ಗುಣ ನಡತೆಯುಳ್ಳ ವ್ಯಕ್ತಿ. ಆದರೆ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಹೀಗಾಗಿ ಹಿಂದೊಮ್ಮೆ 2012ರಲ್ಲಿ ಸ್ನೇಹಿತರೊಂದಿದೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೇಲೆ ಕೂಡ ಹೀಗೆ ಮಾಡಿದ್ದ ಎಂದು ವಾದಿಸಿದ್ದರು. ಆದರೆ ನ್ಯಾಯಲಯವು ಈಗಾಗಲೇ ಆಟೋ ಪೈಲಟ್ ಮೋಡ್‍ನಲ್ಲಿ ಪ್ಲೇನ್ ಚಲಾಯಿಸಿದ್ದ ಆರೋಪಕ್ಕೆ ಮಾತ್ರ ಉದ್ಯಮಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನೂ ಅಪ್ರಾಪ್ತ ಬಾಲಕಿಯೊಂದಿಗೆ ಸೆಕ್ಸ್ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.

    ಆರೋಪಿಯು ತನ್ನದೇ ಚಾರಿಟಿ ಸಂಸ್ಥೆಯನ್ನು ಹೊಂದಿದ್ದಾನೆ. ಜೊತೆಗೆ ಏರ್ ಲೈಫ್ ಲೈನ್ ವ್ಯವಸ್ಥೆಯನ್ನು ಕೂಡ ಆರಂಭಿಸಿದ್ದನು. ಈ ಸಂಸ್ಥೆಗಳ ಮೂಲಕ ಆರೋಗ್ಯ ಸಮಸ್ಯೆಯಿದ್ದ ಬಡ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದನು.

  • ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 7 ವರ್ಷ ಜೈಲು

    ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ 7 ವರ್ಷ ಜೈಲು

    ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಅಲ್ ಅಜೀಜಿಯಾ ಸ್ಟೀಲ್‍ಮಿಲ್ಸ್ ಭ್ರಷ್ಟಾಚಾರ ಎಸಗಿದ ಪ್ರಕರಣದಲ್ಲಿ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

    ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದಲ್ಲಿ ಈಗಾಗಲೇ 11 ವರ್ಷಗಳ ಸೆರೆಮನೆ ಶಿಕ್ಷೆಯನ್ನು ನವಾಜ್ ಷರೀಫ್‍ ಅನುಭವಿಸುತ್ತಿದ್ದು, ಈ ಸಂಬಂಧ ಷರೀಫ್ ಮೇಲೆ ಒಟ್ಟು 3 ಕೇಸ್‍ಗಳು ದಾಖಲಾಗಿದ್ದವು.

    ಸದ್ಯ ಅಲ್ ಅಜೀಜಿಯಾ ಸ್ಟೀಲ್ ಮಿಲ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ಭ್ರಷ್ಟಚಾರ ನಿಗ್ರಹ ನ್ಯಾಯಾಲಯ 2.5 ಮಿಲಿಯನ್ ಡಾಲರ್(ಅಂದಾಜು 17.33 ಕೋಟಿ ರೂ.) ದಂಡದೊಂದಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಳಿದಂತೆ ಫ್ಲ್ಯಾಗ್ ಶಿಪ್ ಇನ್‍ವೆಸ್ಟ್ ಮೆಂಟ್ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

    2017ರ ಜುಲೈನಲ್ಲಿ ಪನಾಮ ಪೇಪರ್ಸ್ ಹಗರಣದಲ್ಲಿ ಸುಪ್ರೀಂ ಕೋರ್ಟ್ ನವಾಜ್‍ರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು. 2018ರ ಜುಲೈನಲ್ಲಿ ಅವೆನ್‍ಫೀಲ್ಡ್ ಭ್ರಷ್ಟಾಚಾರ ಹಗರಣದಲ್ಲಿ ನವಾಜ್, ಅವರ ಪುತ್ರಿ ಮಾರ್ಯಾಮ್ ಮತ್ತು ಅಳಿಯ, ನಿವೃತ್ತ ಸೇನಾಧಿಕಾರಿ ಮಹಮದ್ ಸಫ್ಡರ್ ಅವರಿಗೆ ಅನುಕ್ರಮವಾಗಿ 11, ಎಂಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿವೃತ್ತ ಸರ್ಕಾರಿ ಉದ್ಯೋಗಿಯನ್ನ ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಜೈಲು!

    ನಿವೃತ್ತ ಸರ್ಕಾರಿ ಉದ್ಯೋಗಿಯನ್ನ ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಜೈಲು!

    ಹೈದರಾಬಾದ್: ಕಾನೂನು ಬಾಹಿರವಾಗಿ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರನ್ನು ಬಂಧಿಸಿದ್ದ ಐಎಎಸ್ ಅಧಿಕಾರಿಗೆ ಹೈದರಾಬಾದ್ ಹೈಕೋರ್ಟ್ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

    ಶುಕ್ರವಾರ ಪ್ರಕರಣದ ಸಂಬಂಧ ನ್ಯಾಯಾಧೀಶ ಪಿ.ನವೀನ್ ರಾವ್ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪ ಸಾಬೀತಾದ ಬೆನ್ನಲ್ಲೆ ಕೋರ್ಟ್ ಐಎಎಸ್ ಅಧಿಕಾರಿ ಕೆ.ಶಿವಕುಮಾರ್ ನಾಯ್ಡು ಅವರಿಗೆ 1 ತಿಂಗಳು ಜೈಲು ಶಿಕ್ಷೆ ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ. ಕಾನೂನು ಬಾಹಿರವಾಗಿ ಬಂಧನಕ್ಕೊಳಗಾಗಿದ್ದ ನಿವೃತ್ತ ಸರ್ಕಾರಿ ಉದ್ಯೋಗಿಗೆ ತೆಲಂಗಾಣ ಸರ್ಕಾರವು 50 ಸಾವಿರ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

    ಏನಿದು ಪ್ರಕರಣ?
    ನಿವೃತ್ತ ಸರ್ಕಾರಿ ಉದ್ಯೋಗಿ ಎ.ಬುಚ್ಚಯ್ಯ ಎಂಬವರು ಮೆಹಬೂಬ್ ನಗರದ ಕಲ್ಯಾಣ ಮಂಟಪ ನಿರ್ಮಾಣ ಮಾಡುತ್ತಿದ್ದರು. ಈ ವೇಳೆ ಕೆಲವು ಸ್ಥಳೀಯರು ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಂಟಿ ಆಯುಕ್ತ ಕೆ.ಶಿವಕುಮಾರ್ ನಾಯ್ಡು ಅವರಿಗೆ ದೂರು ನೀಡಿದ್ದರು.

    2017 ಜುಲೈ 1ರಂದು ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯನ್ನು ಶಿವಕುಮಾರ್ ತಡೆಹಿಡಿದಿದ್ದರು. ಅಲ್ಲದೆ ತಮಗಿರುವ ಅಧಿಕಾರವನ್ನು ಬಳಸಿಕೊಂಡು ಬುಚ್ಚಯ್ಯ ಅವರನ್ನು ಬಂಧಿಸಿ, ಎರಡು ತಿಂಗಳು 29 ದಿನ ಜೈಲಿನಲ್ಲಿ ಇರಿಸಿದ್ದರು.

    ಜಾಮೀನು ಪಡೆದು ಜೈಲಿನಿಂದ ಹೊರಬಂದ ಬುಚ್ಚಯ್ಯ ಐಎಎಸ್ ಅಧಿಕಾರಿ ಶಿವಕುಮಾರ್ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ನ್ಯಾಯಾಧೀಶ ನವೀನ್ ಕುಮಾರ್ ಪ್ರಕರಣ ಅಧ್ಯಯನ ಮಾಡಿ ಶಿವಕುಮಾರ್ ಅವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇವು ತಿಂದ ಲಾಲು ಈಗ ಜೈಲುಪಾಲು!

    ಮೇವು ತಿಂದ ಲಾಲು ಈಗ ಜೈಲುಪಾಲು!

    ನವದೆಹಲಿ: ಬಹುಕೋಟಿ ಮೇವು ಹಗರಣ ಸಂಬಂಧ ಆರ್ ಜೆಡಿ  ನಾಯಕ ಲಾಲು ಪ್ರಸಾದ್ ಯಾದವ್ ಜೈಲು ಪಾಲಾಗಿದ್ದಾರೆ.
    ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಸೇರಿ 15 ಮಂದಿ ದೋಷಿಗಳು ಎಂದು ತೀರ್ಪು ನೀಡಿದ್ದು, 7 ಮಂದಿಯನ್ನು ಆರೋಪ ಮುಕ್ತಗೊಳಿಸಿದೆ. ಶಿಕ್ಷೆಯ ಪ್ರಮಾಣವನ್ನು ಜನವರಿ 3 ರಂದು ಕೋರ್ಟ್ ಪ್ರಕಟಿಸಲಿದೆ.
    ಈ ಹಿಂದೆ ಲಾಲು ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು
    ಲಾಲು ಪ್ರಸಾದ್ ಯಾದವ್ ಸೇರಿದಂತೆ ಎಲ್ಲಾ ಆರೋಪಿಗಳು ಪ್ರತ್ಯೇಕ ವಿಚಾರಣೆ ಎದುರಿಸಬೇಕು ಅಷ್ಟೇ ಅಲ್ಲದೇ ಹಾಗೂ 9 ತಿಂಗಳೊಳಗೆ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ಸುಪ್ರೀಂ  2017ರ ಮೇ ತಿಂಗಳಿನಲ್ಲಿ ಆದೇಶ ಪ್ರಕಟಿಸಿತ್ತು
    ಏನಿದು ಪ್ರಕರಣ?
    20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
  • ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

    ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

    ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲು ಚೀನಾ ಸರ್ಕಾರ ಮುಂದಾಗಿದೆ. ಪ್ರಸ್ತುತ 15 ದಿನಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈಗ ಮತ್ತಷ್ಟು ಕಠಿಣ ಕಾನೂನು ತರಲು ಚೀನಾ ಸಂಸತ್ತು ಮುಂದಾಗಿದೆ.

    ಸೋಮವಾರದಿಂದ ಅಧಿವೇಶನ ಆರಂಭಗೊಂಡಿದ್ದು, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ಸಿನ ಕಾನೂನು ಸದಸ್ಯರು ಈಗಾಗಲೇ ಕರಡು ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ.

    ಅಧಿವೇಶನ ಆರಂಭ ಮತ್ತು ಕೊನೆಯಲ್ಲಿ, ಪ್ರಮಾಣವಚನ ಸಮಾರಂಭ, ಧ್ವಜ ದಿನಾಚರಣೆ, ಪ್ರಮುಖ ಆಚರಣೆ, ಪ್ರಶಸ್ತಿ ಸಮಾರಂಭ, ಪ್ರಮುಖ ರಾಜತಾಂತ್ರಿಕ ಸಂದರ್ಭ, ಕ್ರೀಡಾ ಕಾರ್ಯಕ್ರದಲ್ಲಿ ರಾಷ್ಟ್ರಗೀತೆ ಮೊಳಗಬೇಕು. ಅಂತ್ಯಸಂಸ್ಕಾರ, ಖಾಸಗಿ ಕಾರ್ಯಕ್ರಮ, ಸಾರ್ವಜನಿಕ ಜಾಗದಲ್ಲಿ ರಾಷ್ಟ್ರಗೀತೆಯನ್ನು ಹಿನ್ನೆಲೆ ಮ್ಯೂಸಿಕ್ ಆಗಿ ಬಳಸುವುದನ್ನು ನಿಷೇಧ ವಿಧಿಸಿರುವ ಅಂಶ ಕರಡು ಮಸೂದೆಯಲ್ಲಿದೆ.

    ದೇಶಭಕ್ತಿಯನ್ನು ಬೆಳೆಸುವ ಉದ್ದೇಶದಿಂದಾಗಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಯ ಮಕ್ಕಳ ಪಠ್ಯದಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಇರಬೇಕು ಎಂದು ತಿಳಿಸಲಾಗಿದೆ.

    ನಿಮ್ಮ ಅಭಿಪ್ರಾಯ ಏನು? ಭಾರತದಲ್ಲಿ ಚಲನ ಚಿತ್ರ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುವ ಬಗ್ಗೆ ಪರ ವಿರೋಧ ಕೇಳಿ ಬಂದಿದೆ. ಈ ಮಧ್ಯೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ಚೀನಾ ಮುಂದಾಗಿದ್ದು, ಈ ಕ್ರಮದ ಬಗ್ಗೆ ನಿಮ್ಮ ನಿಲುವು ಏನು? ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

  • ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಸೈನೆಡ್ ಮೋಹನ್‍ಗೆ ಗಲ್ಲುಶಿಕ್ಷೆ ಇಲ್ಲ: ಸಾಯೋವರೆಗೂ ಜೈಲು ಶಿಕ್ಷೆ

    ಬೆಂಗಳೂರು: ಸೈನೆಡ್ ಮೋಹನ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಕೆಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಿದೆ.

    ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಮಳೀಮಠ್, ನ್ಯಾ ಜಾನ್ ಮೈಕೆಲ್ ಕುನ್ನಾ ಅವರಿದ್ದ ವಿಭಾಗೀಯ ಪೀಠ, ಸೈನೆಡ್ ಮೋಹನ್ ಕುಮಾರ್ ಸಮಾಜಕ್ಕೆ ಮಾರಕ. ಹೀಗಾಗಿ ಈತ ಸಾಯುವವರೆಗೂ ಜೈಲಿನಲ್ಲಿರಬೇಕು ಎಂದು ಆದೇಶ ನೀಡಿದರು.

    20 ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಸೈನೆಡ್ ನೀಡಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಮೋಹನ್ ಕುಮಾರ್‍ಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013ರ ಡಿಸೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿದ್ದ ಮೋಹನ್ ಕುಮಾರ್‍ಗೆ ಹೈಕೋರ್ಟ್ ರಿಲೀಫ್ ನೀಡಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.

    ತಾನೇ ವಾದಿಸಿದ್ದ:
    ವಿಚಾರಣೆ ವೇಳೆ ನನ್ನ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಇಲ್ಲ. ನಾನು ಅತ್ಯಾಚಾರ ನಡೆಸಿದ್ದಕ್ಕೆ ಪುರಾವೆಯೇ ಇಲ್ಲ. ನಾನು ಸೈನೆಡ್ ತಿನ್ನಿಸಿ ಸಾಯಿಸಿದ್ದೇನೆ ಎಂದು ವಕೀಲರು ವಾದಿಸಿದ್ದಾರೆ. ಆದರೆ ಪ್ರಯೋಗಾಲಯದಲ್ಲಿ ನಾನು ನಾನು ಸೈನೆಡ್ ನೀಡಿ ಕೊಲೆ ಮಾಡಿದ್ದೇನೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಸೈನೆಡ್ ಸೇವಿಸಿದ್ದರೆ ಹೃದಯ ಬಡಿತ ನಿಂತುಹೋಗಿ ನರಗಳು ಹೆಪ್ಪುಗಟ್ಟಿ ಸಾವನ್ನಪ್ಪುತ್ತಾರೆ. ಆದರೆ ವರದಿಯಲ್ಲಿ ಈ ಯಾವುದೇ ವಿವರಗಳು ಇಲ್ಲ ಎಂದು ವಾದಿಸಿದ್ದ.

    ಸುಮಾರು 25ಕ್ಕೂ ಹೆಚ್ಚು ಖಾಲಿ ಪೇಪರ್ ಗಳಿಗೆ ನನ್ನ ಸಹಿ ಮಾಡಿಸಿಕೊಂಡು ಪೊಲೀಸರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ ಕೋರ್ಟ್ ನೀಡಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದ.

    2004ರಿಂದ 2009ರ ಅವಧಿಯಲ್ಲಿ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಸೈನೆಡ್ ಮೋಹನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಾದಿಸಿದ್ದರು. ಬಂಟ್ವಾಳ ಮೂಲದ ಶಿಕ್ಷಕನಾದ ಮೋಹನ್ 2002ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ.

  • 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹೆಡ್‍ಮಾಸ್ಟರ್‍ಗೆ 55 ವರ್ಷ ಜೈಲು ಶಿಕ್ಷೆ

    22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹೆಡ್‍ಮಾಸ್ಟರ್‍ಗೆ 55 ವರ್ಷ ಜೈಲು ಶಿಕ್ಷೆ

    ಚೆನ್ನೈ: ಒಂದೇ ಶಾಲೆಯ 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕನಿಗೆ ತಮಿಳುನಾಡು ವಿಶೇಷ ನ್ಯಾಯಾಲಯ 55 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

    ಮಧುರೈ ಜಿಲ್ಲೆ ಪೊದಂಬು ಗ್ರಾಮದ ಪ್ರೌಢ ಶಾಲೆಯ ಹೆಡ್‍ಮಾಸ್ಟರ್ ಆಗಿದ್ದ ಆರೋಗ್ಯಸ್ವಾಮಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 3.4 ಲಕ್ಷ ರೂ. ದಂಡ ಹಾಗೂ 55 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಆರೋಗ್ಯ ಸ್ವಾಮಿ 7 ವರ್ಷದ ಹಿಂದೆ ಪಂಜು ಎಂಬವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ದಲಿತ ದೌರ್ಜನ್ಯದ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸಿದ ವೇಳೆ ಈತ 22 ವಿದ್ಯಾರ್ಥಿನಿಯರು ಮತ್ತು ಬಾಲಕರ ಮೇಲೂ ದೌರ್ಜನ್ಯ ಎಸಗಿದ್ದ ಎನ್ನುವ ವಿಚಾರ ಬಯಲಾಗಿತ್ತು.

    ಈತನ ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸಿ ಅಮಲಿ ರೋಸ್, ಷಣ್ಮುಗ ಕುಮಾರಸ್ವಾಮಿ ಮತ್ತು ವಿಕ್ಟರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಕೋರ್ಟ್ ಅವರನ್ನು ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ದಂಡದ ಮೊತ್ತವಾದ 3.4 ಲಕ್ಷ ರೂ. ಹಣವನ್ನು ದೌರ್ಜನ್ಯಕ್ಕೆ ಒಳಗಾದ 22 ವಿದ್ಯಾರ್ಥಿನಿಯರಿಗೆ ಸಮಾನವಾಗಿ ಹಂಚಬೇಕು ಎಂದು ಆದೇಶಿಸಿದೆ.

    ಇದುವರೆಗೂ ಕೋರ್ಟ್ ಇತಿಹಾಸದಲ್ಲೇ ಅಪರಾಧಿಗೆ 50 ವರ್ಷಗೂ ಅಧಿಕ ಜೈಲು ಶಿಕ್ಷೆ ವಿಧಿಸಿದ ಪ್ರಕರಣಗಳಿಲ್ಲ. ಆದರೆ 55 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಭಾರತದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊದಲು. ಆದರೆ ಈ ಸಂತಸವನ್ನು ಹಂಚಿಕೊಳ್ಳಲು ಪಂಜು ಅವರ ಮಗಳು ಬದುಕಿಲ್ಲ ಎಂದು ಸರ್ಕಾರಿ ವಕೀಲೆ ಪರಿಮಳದೇವಿ ಹೇಳಿದ್ದಾರೆ.

  • ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?

    ಪಂಚಕುಲಾ: ನಾನು ದೇವರ ಅಪರಾವತರ. ದೇವರ ಸಂದೇಶಗಾರ ಎಂದು ಸ್ವಂಘೋಷಿತ ದೇವಮಾನವನ ಸೋಗಿನಲ್ಲಿ ಅತ್ಯಾಚಾರ ನಡೆಸಿದ ಡೇರಾ ಸಚ್ಛಾಸೌದದ ಗುರ್ಮಿತ್ ರಾಮ್ ರಹೀಂ ಸಿಂಗ್‍ಗೆ ಕೋರ್ಟ್ 20 ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 29 ಲಕ್ಷ ರೂ.ದಂಡ ವಿಧಿಸಿದೆ.

    ಸಿರ್ಸಾ ಆಶ್ರಮದಲ್ಲಿ ಇಬ್ಬರು ಸಾಧ್ವಿಗಳ ಮೇಲೆ ಮೂರು ವರ್ಷ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧಿ ಬಾಬಾಗೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) 506(ಜೀವ ಬೆದರಿಕೆ) ಅಡಿ ಕಠಿಣ ಜೈಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್ ಆದೇಶಿಸಿದ್ದಾರೆ.

    ಮೊದಲಿಗೆ 10 ವರ್ಷ ಅಷ್ಟೇ ಎಂದೇ ಸುದ್ದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ಮೊದಲ ಮತ್ತು 4.30ಕ್ಕೆ ಎರಡನೇ ತೀರ್ಪು ಪ್ರಕಟಿಸಿದರು. ಕೋರ್ಟ್ ಆದೇಶ ಓದಿದ ಬಳಿಕ 2 ಅತ್ಯಾಚಾರ ಕೇಸ್‍ಗಳಲ್ಲಿ ತಲಾ 10ರಂತೆ 20 ವರ್ಷ ಶಿಕ್ಷೆ ಮತ್ತು 15 ಲಕ್ಷ ದಂಡ ಹಾಗೂ 14 ಲಕ್ಷವನ್ನ ಸಂತ್ರಸ್ತೆಯರಿಗೆ ನೀಡುವಂತೆ ಜಡ್ಜ್ ಒಟ್ಟು 29 ಲಕ್ಷ ದಂಡ ವಿಧಿಸಿದ್ದಾರೆ.

    ಸಿಬಿಐ ಕೋರ್ಟ್ ತೀರ್ಪನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸುತ್ತೇವೆ ಎಂದು ರಾಮ್ ರಹೀಮ್ ಪರ ವಕೀಲರು ಸ್ಪಷ್ಟ ಪಡಿಸಿದ್ದಾರೆ. ಶಿಕ್ಷೆಯಲ್ಲಿ ಗೊಂದಲ ಇಲ್ಲ ಎಂದು ಸಿಬಿಐ ವಕ್ತಾರರು ಸಹ ಖಾತ್ರಿ ಪಡಿಸಿದರು. ಆದರೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯೊಬ್ಬರು ಹೈಕೋರ್ಟ್‍ಗೆ ಹೋಗುವುದಾಗಿ ಹೇಳಿದ್ದಾರೆ.

    ತೀರ್ಪಿನ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಅದೇ ಜೈಲಿನಲ್ಲಿ ರಾಮ್ ರಹೀಂಗೆ ಜೈಲು ಉಡುಪು ಕೊಡಲಾಯ್ತು. ಆಗಸ್ಟ್ 25ಕ್ಕೆ ತೀರ್ಪಿನಂತೆ ಹಿಂಸಾಚಾರ ಇವತ್ತು ನಡೆಯಲು ಭದ್ರತಾ ಪಡೆಗಳು ಆಸ್ಪದ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇವತ್ತು ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡು ಹೊಡೆಯಲು ಆದೇಶಿಸಲಾಗಿತ್ತು. ಆದಾಗ್ಯೂ, ಸಿರ್ಸಾದ ಪುಲ್ಕನ್ ಗ್ರಾಮದ ಬಳಿ 2 ಕಾರುಗಳಿಗೆ ಭಕ್ತರು ಬೆಂಕಿ ಹಚ್ಚಿದ್ದರು.

    ಲೈಬ್ರರಿಯಲ್ಲಿ ಕಲಾಪ:
    ರೋಹ್ಟಕ್ ನ ಸುನಾರಿಯಾ ಜೈಲಿನ ಗ್ರಂಥಾಲಯದಲ್ಲಿ ತಾತ್ಕಾಲಿಕ ಕೋರ್ಟ್ ಹಾಲ್ ನಿರ್ಮಿಸಲಾಗಿತ್ತು. ಹೆಲಿಕಾಪ್ಟರ್ ಮೂಲಕ ಜಡ್ಜ್ ಜಗದೀಪ್ ಸಿಂಗ್ ಕೋರ್ಟ್ ಗೆ ಆಗಮಿಸಿದರು. ಶಿಕ್ಷೆ ಪ್ರಕಟಣೆಗೆ ಮುಂಚೆ ರೋಹ್ಟಕ್‍ನ ಸುನರಿಯಾ ಕೋರ್ಟ್ ನಲ್ಲಿ ಭಾರೀ ಹೈಡ್ರಾಮ ನಡೆಯಿತು. ಜಡ್ಜ್ ಜಗದೀಪ್ ಸಿಂಗ್, ಸಿಬಿಐ ಪರ ವಕೀಲ, ಬಾಬಾ ಪರ ವಕೀಲ, ಆರೋಪ ಬಾಬಾ ಸೇರಿ 7 ಮಂದಿ ಮಾತ್ರ ಕೋರ್ಟ್ ಹಾಲ್‍ನಲ್ಲಿದ್ದರು. 2.30ಕ್ಕೆ ಕಲಾಪ ಆರಂಭಿಸಿದ ಜಡ್ಜ್, ಇಬ್ಬರೂ ವಕೀಲರಿಗೆ ಹತ್ತತ್ತು ನಿಮಿಷ ಅವಕಾಶ ಕಲ್ಪಿಸಿದರು.

    ಸಿಬಿಐ ಪರ ವಕೀಲರ ವಾದ ಏನಿತ್ತು?
    ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಬಾಬಾ ರೇಪ್ ಮಾಡಿದ್ದು ತಮ್ಮನ್ನು ನಂಬಿ ಬಂದ ಹೆಣ್ಮಕ್ಕಳ ಜೀವನ ಹಾಳು ಮಾಡಿದ್ದಾರೆ. ಬಾಬಾ ಗುರ್ಮಿತ್ ಕೃತ್ಯವನ್ನು ಸಮಾಜ ಕ್ಷಮಿಸಲಾಗದು. ಅತ್ಯಾಚಾರ ಮಾಡಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಬಾಬಾ ಬೆಂಬಲಿಗರು ತೀರ್ಪಿನ ದಿನ ದಾಂಧಲೆ ಮಾಡಿದ್ದು ಅಲ್ಲದೇ ಈಗಲೂ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ನೀಡಬೇಕು

    ಬಾಬಾ ಪರ ವಕೀಲರ ವಾದ ಏನಿತ್ತು?
    ಸಿಬಿಐ ಪರ ವಕೀಲರ ವಾದವನ್ನು ದಯವಿಟ್ಟು ಪರಿಗಣಿಸಬೇಡಿ. ನಮ್ಮ ಕಕ್ಷಿದಾರನಿಗೆ ವಯಸ್ಸಾಗಿದ್ದು ಆರೋಗ್ಯ ಬೇರೆ ಕೈಕೊಟ್ಟಿದೆ. ನಮ್ಮ ಕಕ್ಷಿದಾರ ಅಪಾರ ಸಮಾಜ ಸೇವೆ ಮಾಡಿದ್ದಾರೆ. ದಯವಿಟ್ಟು ಬಾಬಾ ಗುರ್ಮಿತ್‍ಗೆ ಕನಿಷ್ಠ ಶಿಕ್ಷೆಯನ್ನು ವಿಧಿಸಿ.

    ಬಾಬಾ ಮನವಿ ಏನಿತ್ತು?
    ಕೋರ್ಟ್ ಹಾಲ್‍ಗೆ ಎಂಟ್ರಿ ಕೊಡುತ್ತಲೇ ಭವಿಷ್ಯ ನೆನಪಿಸಿಕೊಂಡು ಕಣ್ಣೀರು ಹಾಕಿ ನನ್ನನ್ನು ಮನ್ನಿಸಬೇಕು. ದಯವಿಟ್ಟು ನನ್ನ ಮೇಲೆ ಕನಿಕರ ತೋರಿ ಕನಿಷ್ಠ ಶಿಕ್ಷೆ ವಿಧಿಸಿ. ನನ್ನ ನಂಬಿರುವ ಜನಕ್ಕೆ ಮತ್ತು ಸಮಾಜದ ಸೇವೆ ಸಲ್ಲಿಸಬೇಕಿದೆ. ಪ್ಲೀಸ್ ದಯವಿಟ್ಟು ನನ್ನನ್ನು ಕ್ಷಮಿಸಿ ಸಣ್ಣ ಪ್ರಮಾಣದ ಶಿಕ್ಷೆ ನೀಡಿ.

    ಜಡ್ಜ್ ತೀರ್ಪು ಏನು?
    ಅಪರಾಧಿ ಮಾಡಿದ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆಯೇ ಸರಿ(ಎರಡು ಕೇಸ್‍ನಲ್ಲಿ ತಲಾ ಹತ್ತತ್ತು ವರ್ಷ ಶಿಕ್ಷೆ). ಅಪರಾಧಿಗೆ ಜೈಲಿನಲ್ಲಿ ವಿವಿಐಪಿ ಸವಲತ್ತು ನೀಡುವಂತಿಲ್ಲ. ಅಷ್ಟೇ ಅಲ್ಲದೇ ಬಾಬಾಗೆ ಸಹಾಯಕನನ್ನು ಸಹ ನೀಡುವಂತಿಲ್ಲ. ನಂಬಿಕೆ ಹೆಸರಿನಲ್ಲಿ ಇಂತಹ ಕೃತ್ಯ ಎಸಗುವವರಿಗೆ ಇದು ಪಾಠ ಆಗಬೇಕು.

    ರೇಪಿಸ್ಟ್ ಬಾಬಾನ ಮುಂದಿನ ಹಾದಿ ಏನು?
    ಶಿಕ್ಷೆ ಅಮಾನತ್ತಿಡಲು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. 20 ವರ್ಷ ಶಿಕ್ಷೆ ವಿಧಿಸಿರುವುದರಿಂದ ಶಿಕ್ಷೆ ಅಮಾನತ್ತಿನಲ್ಲಿಡುವುದು ಕಡಿಮೆ. ಸದ್ಯಕ್ಕೆ ಜಾಮೀನು ನೀಡುವ ಸಾಧ್ಯತೆ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ವಿಚಾರಣೆ ನಡೆಸುವಂತೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು.

  • ಬಾಸ್‍ಗೆ ಅನಾರೋಗ್ಯವಾಗಲೆಂದು ಕಾಫಿಗೆ ಸೋಪ್ ಹಾಕ್ತಿದ್ದ ಮಹಿಳೆಗೆ 3 ವರ್ಷ ಜೈಲು

    ಬಾಸ್‍ಗೆ ಅನಾರೋಗ್ಯವಾಗಲೆಂದು ಕಾಫಿಗೆ ಸೋಪ್ ಹಾಕ್ತಿದ್ದ ಮಹಿಳೆಗೆ 3 ವರ್ಷ ಜೈಲು

    ವಾಷಿಂಗ್ಟನ್: ಕಾಫಿ ಮೇಕರ್‍ನಲ್ಲಿ ಗ್ಲಾಸ್ ಕ್ಲೀನರ್ ಮತ್ತು ಪಾತ್ರೆ ತೊಳೆಯುವ ಸೋಪ್ ಹಾಕಿ ಸಹೋದ್ಯೋಗಿಗಳ ಅನಾರೋಗ್ಯಕ್ಕೆ ಕಾರಣವಾದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಅಮೆರಿಕದ ವರ್ಜೀನಿಯಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 33 ವರ್ಷದ ಮೇಯ್ಡಾ ರಿವೇರಾ ಜುವಾರೆಝ್ ಶಿಕ್ಷೆಗೆ ಒಳಗಾಗಿರುವ ಮಹಿಳೆ. ಕಳೆದ ಫೆಬ್ರವರಿಯಲ್ಲಿ ಈಕೆಯ ಮೇಲಿನ ಆರೋಪ ಸಾಬೀತಾಗಿತ್ತು.

    ವಕೀಲರು ಹೇಳುವ ಪ್ರಕಾರ ಸ್ಟೆರ್ಲಿಂಗ್‍ನಲ್ಲಿರುವ ಜೆಎಎಸ್ ಫಾರ್ವಡಿಂಗ್ ವಲ್ರ್ಡ್‍ವೈಡ್ ನಲ್ಲಿ 2016ರ ಜನವರಿ ಯಲ್ಲಿ ಕೆಲಸಗಾರರಿಗೆ ಹೊಟ್ಟೆ ನೋವು ಹಾಗೂ ವಾಂತಿಯಾಗುವುದು ಶುರುವಾಗಿತ್ತು. ಅಕ್ಟೋಬರ್‍ನಲ್ಲಿ ಯಾರೋ ಕಾಫಿಯಲ್ಲಿ ಏನನ್ನೋ ಬೆರೆಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಹೀಗಾಗಿ ವಿಚಾರಣೆ ನಡೆದು ಕಚೇರಿಯ ಸೂಪರ್‍ವೈಸರ್ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಆಗ ಮೇಯ್ಡಾ ಕಾಫಿ ಮೇಕರ್‍ಗೆ ಗ್ಲಾಸ್ ಕ್ಲೀನರ್ ಬೆರೆಸುತ್ತಿದ್ದುದು ಬಹಿರಂಗವಾಗಿತ್ತು.

    ಮೇಯ್ಡಾ ತನ್ನ ಬಾಸ್‍ಗೆ ಅನಾರೋಗ್ಯವಾಗಲಿ ಎಂಬ ಕಾರಣದಿಂದ ಈ ರೀತಿ ಮಾಡಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೇಯ್ಡಾ ಕೂಡ ಕಾಫಿ ಮೇಕರ್‍ನಲ್ಲಿ ಸೋಪ್ ಹಾಕಿದ್ದನ್ನು ಹಾಗೆ ಒಂದು ಬಾರಿ ನೇರವಾಗಿ ತನ್ನ ಬಾಸ್‍ನ ಕಾಫಿ ಕಪ್‍ನಲ್ಲಿ ಸೋಪ್ ಹಾಕಿದ್ದನ್ನು ಒಪಿಕೊಂಡಿದ್ದಾಳೆ.