Tag: ಜೈನ್ ಸಮುದಾಯ

  • ಜೈನ್ ಮಿಷನ್ ಆಸ್ಪತ್ರೆ ಉದ್ಘಾಟಿಸಿದ ಸಚಿವ ಸುಧಾಕರ್

    ಜೈನ್ ಮಿಷನ್ ಆಸ್ಪತ್ರೆ ಉದ್ಘಾಟಿಸಿದ ಸಚಿವ ಸುಧಾಕರ್

    – 1 ವರ್ಷದೊಳಗೆ ಸರ್ಕಾರಿ ಮೆಡಿಕಲ್ ಕಾಲೇಜು ಲೋಕಾರ್ಪಣೆ

    ಚಿಕ್ಕಬಳ್ಳಾಪುರ: ನಗರದ ಬೆಂಗಳೂರು ಮುಖ್ಯ ರಸ್ತೆಯ ಜಡಲತಿಮ್ಮನಹಳ್ಳಿ ಕ್ರಾಸ್ ಬಳಿ ನಿರ್ಮಾಣಗೊಂಡಿರುವ ನೂತನ ಜೈನ್ ಮಿಷನ್ ಆಸ್ಪತ್ರೆಯನ್ನ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಲೋಕಾರ್ಪಣೆ ಮಾಡಿದರು.

    ಜೈನ್ ಮಿಷನ್ ಸಂಸ್ಥೆಯಿಂದ ನೂತನ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ನೂತನ ಆಸ್ಪತ್ರೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್‍ರವರು, ಜಿಲ್ಲೆಗೆ ಇಂತಹದೊಂದು ಆಸ್ಪತ್ರೆ ಅತ್ಯವಶ್ಯಕವಾಗಿದ್ದು, ಜೈನ್ ಮಿಷನ್ ವತಿಯಿಂದ ಆರಂಭವಾಗಿರುವ ಈ ಆಸ್ಪತ್ರೆಯನ್ನ ಜಿಲ್ಲೆಯ ಜನತೆ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

    ಜೈನ್ ಸಮುದಾಯದವರು ಸೇವಾ ಮನೋಭಾವದವರು ಆ ಸಮುದಾಯದ ಬಗ್ಗೆ ನನಗೆ ಹೆಮ್ಮೆ ಇದೆ. ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಜನರ ಸೇವೆ ಮಾಡಲು ಮುಂದಾಗಿರುವ ಜೈನ್ ಮಿಷನ್ ಸೇವೆ ಶ್ಲಾಘನೀಯವಾದದ್ದು. ಲಾಭ ರಹಿತ ಉದ್ದೇಶದಿಂದ ಈ ಆಸ್ಪತ್ರೆ ಆರಂಭವಾಗಿದೆ. ಈ ಆಸ್ಪತ್ರೆಗೆ ಬೇಕಾದ ಎಲ್ಲ ಸಹಕಾರವನ್ನ ತಾವು ನೀಡುವುದಾಗಿ ತಿಳಿಸಿದರು.

    ಆಸ್ಪತ್ರೆ ಶೇ. 90 ರಷ್ಟು ನಿರ್ಮಾಣ ಆಗಿದ್ದಾಗಲೇ ಇಡೀ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆ ಮಾಡಿ ಸೋಂಕಿತರಿಗೆ ಚಿಕಿತ್ಸೆ ಕೊಡಲು ಬಳಸಿಕೊಳ್ಳಿ ಅಂತ ಆಸ್ಪತ್ರೆಯ ಮುಖ್ಯಸ್ಥರಾದ ನರಪತ್ ಸೋಲಂಕಿಯವರು, ಉತ್ತಮ್ ಚಂದ್‍ರವರು ಉದಾರತಾ ಭಾವದಿಂದ ಹೇಳಿದ್ದರು. ಕೋವಿಡ್ ಆಸ್ಪತ್ರೆ ಮಾಡಲು ಸಕಲ ಸಿದ್ದತೆಗಳನ್ನ ಸಹ ಜಿಲ್ಲಾಡಳಿತ ಮಾಡಿಕೊಂಡಿತ್ತು. ಆದರೆ ಈಗ ಕೋವಿಡ್ ಕಡಿಮೆ ಆದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆ ಆರಂಭ ಮಾಡುವುದು ಅವಶ್ಯಕವಾಗಲಿಲ್ಲ. ಹೀಗಾಗಿ ಸದ್ಯ ಜೈನ್ ಮಿಷನ್ ಸಂಸ್ಥೆಯವರೇ ಜನರಲ್ ಆಸ್ಪತ್ರೆ ಆರಂಭಿಸಿದ್ದು, ಜನತೆಗೆ ಉತ್ತಮ ಚಿಕಿತ್ಸೆ ಸಿಗುವಂತಗಾಲಿ ಎಂದು ಸಚಿವರು ಆಶಿಸಿದರು. ಇದನ್ನೂ ಓದಿ: ಲಾಕ್‍ಡೌನ್ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ

    ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ಸಹ ಭರದಿಂದ ಸಾಗುತ್ತಿದ್ದು 1 ವರ್ಷದೊಳಗೆ ಕಾಲೇಜು ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.