Tag: ಜೇಸನ್ ರಾಯ್

  • ರಂಗೇರಿಸಿದ ರಹಾನೆ, ಧೂಳೆಬ್ಬಿಸಿದ ದುಬೆ – ಚೆನ್ನೈ ಸೂಪರ್‌ ಕಿಂಗ್ಸ್‌ಗೆ 49 ರನ್‌ಗಳ ಭರ್ಜರಿ ಜಯ

    ರಂಗೇರಿಸಿದ ರಹಾನೆ, ಧೂಳೆಬ್ಬಿಸಿದ ದುಬೆ – ಚೆನ್ನೈ ಸೂಪರ್‌ ಕಿಂಗ್ಸ್‌ಗೆ 49 ರನ್‌ಗಳ ಭರ್ಜರಿ ಜಯ

    – ರನ್‌ ಹೊಳೆಯಲ್ಲಿ ತೇಲಾಡಿದ ಕಿಂಗ್ಸ್‌

    ಕೋಲ್ಕತ್ತಾ: ಅಜಿಂಕ್ಯಾ ರಹಾನೆ (Ajinkya Rahane), ಶಿವಂ ದುಬೆ (Shivam Dube), ಡಿವೋನ್‌ ಕಾನ್ವೆ (Devon Conway) ಭರ್ಜರಿ ಬ್ಯಾಟಿಂಗ್‌ ಹಾಗೂ ಶಿಸ್ತು ಬದ್ಧ ಬೌಲಿಂಗ್‌ ದಾಳಿ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 49 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು 20 ಓವರ್‌ಗಳಲ್ಲಿ ಭರ್ಜರಿ 235 ರನ್‌ ಸಿಡಿಸಿತ್ತು. 236 ರನ್‌ಗಳ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಕೆಕೆಆರ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ನಾರಾಯಣ್‌ ಜಗದೀಶನ್‌ 1 ರನ್‌ ಗಳಿಸಿದರೆ, ಸುನೀಲ್‌ ನರೇನ್‌ ಶೂನ್ಯ ಸುತ್ತಿದರು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ವೆಂಕಟೇಶ್‌ ಅಯ್ಯರ್‌ (Venkatesh Iyer) ಕೇವಲ 20 ರನ್‌, ನಾಯಕ ನಿತೀಶ್‌ ರಾಣಾ 27 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. ಇದರಿಂದ ತಂಡಕ್ಕೆ ಸೋಲು ಖಚಿತವಾಗಿತ್ತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜೇಸನ್‌ ರಾಯ್‌ ಹಾಗೂ ರಿಂಕು ಸಿಂಗ್‌ ಜೋಡಿ 37 ಎಸೆತಗಳಲ್ಲಿ 65 ರನ್‌ ಸಿಡಿಸಿತ್ತು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡ ಚೇತರಿಕೆ ಕಂಡಿತ್ತು. ಆದರೆ ಜೇಸನ್‌ ರಾಯ್‌ (Jason Roy) ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ರಿಂಕು ಸಿಂಗ್‌ ಏಕಾಂಗಿ ಹೋರಾಟ ನಡೆಸಬೇಕಾಯಿತು. ಜೇಸನ್‌ ರಾಯ್‌ 26 ಎಸೆತಗಳಲ್ಲಿ 61 ರನ್‌ ಗಳಿಸಿದರೆ, ಕೊನೆಯವರೆಗೂ ಹೋರಾಡಿದ ರಿಂಕು ಸಿಂಗ್‌ (Rinku Singh) 33 ಎಸೆತಗಳಲ್ಲಿ 53 ರನ್‌ (3 ಬೌಂಡರಿ, 4 ಸಿಕ್ಸರ್)‌ ಗಳಿಸಿ ಅಜೇಯರಾಗುಳಿದರು. ಆ್ಯಂಡ್ರೆ ರಸ್ಸೆಲ್‌ 9 ರನ್‌, ಡೇವಿಡ್‌ ವೈಸ್‌ 1 ರನ್‌, ಉಮೇಶ್‌ ಯಾದವ್‌ 4 ರನ್‌ ಗಳಿಸಿದರು.

    ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತುಶಾರ್‌ ದೇಶ್‌ಪಾಂಡೆ ಹಾಗೂ ಮಹೀಶ್‌ ತೀಕ್ಷಣ ತಲಾ 2 ವಿಕೆಟ್‌ ಕಿತ್ತರೆ, ಆಕಾಶ್‌ ಸಿಂಗ್‌, ಮೊಯಿನ್‌ ಅಲಿ, ರವೀಂದ್ರ ಜಡೇಜಾ ಹಾಗೂ ಮಥೀಶ ಪತಿರಾಣಾ ತಲಾ ಒಂದೊಂದು ವಿಕೆಟ್‌ ಗಳಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅಜಿಂಕ್ಯಾ ರಹಾನೆ, ಶಿವಂ ದುಬೆ, ಡಿವೋನ್‌ ಕಾನ್ವೆ ಅವರ ಅಮೋಘ ಪ್ರದರ್ಶನದಂದಾಗಿ ದಾಖಲೆಯ ಮೊತ್ತ ಪೇರಿಸಿತು. ಚೆನ್ನೈ ತಂಡದ ಅಗ್ರ ಕ್ರಮಾಂಕದ ಎಲ್ಲಾ ಆಟಗಾರರೂ ಅಬ್ಬರದ ಪ್ರದರ್ಶನ ನೀಡಿದರು. ಅದರಲ್ಲೂ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್‌ಗಳನ್ನು ಧೂಳಿಪಟ ಮಾಡಿದರು. ಈ ಜೋಡಿ ಕೇವಲ 32 ಎಸೆತಗಳಲ್ಲಿ 85 ರನ್‌ಗಳ ಜೊತೆಯಾಟ ನೀಡುವ ಮೂಲಕ ಸಿಎಸ್‌ಕೆ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಇದಕ್ಕೂ ಮುನ್ನ ಆರಂಭಿಕರಾದ ಡಿವೋನ್‌ ಕಾನ್ವೆ ಹಾಗೂ ಋತುರಾಜ್‌ ಗಾಯಕ್ವಾಡ್‌ 45 ಎಸೆತಗಳಲ್ಲಿ 73 ರನ್‌ ಸಿಡಿಸಿದ್ದರು.

    ಋತುರಾಜ್ 20 ಎಸೆತಗಳಲ್ಲಿ 35 ರನ್‌ಗಳಿಸಿ ಔಟಾದರು. ನಂತರ ಅರ್ಧ ಶತಕ ಸಿಡಿಸಿದ ಕಾನ್ವೆ 40 ಎಸೆತಗಳಲ್ಲಿ 56 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಜೊತೆಯಾಗಿದ್ದು ರಹಾನೆ ಹಾಗೂ ದುಬೆ ಜೋಡಿ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಕೇವಲ 21 ಎಸೆತಗಳಲ್ಲೇ 50 ರನ್‌ (5 ಸಿಕ್ಸರ್‌, 2 ಬೌಂಡರಿ) ಗಳಿಸಿ ಚಚ್ಚಿದರು. ಆದರೆ ಅಜಿಂಕ್ಯಾ ರಹಾನೆ ಕೊನೆಯ ವರೆಗೂ ವಿಕೆಟ್ ಕಳೆದುಕೊಳ್ಳದೇ ಕೆಕೆಆರ್‌ ಬೌಲರ್‌ಗಳನ್ನ ಚೆಂಡಾಡಿದರು. ಕೇವಲ 29 ಎಸೆತಗಳಲ್ಲಿ ಅವರು 71 ರನ್‌ (5 ಸಿಕ್ಸರ್‌, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು.

    ಕೊನೆಯ ಕ್ಷಣದಲ್ಲಿ ರವೀಂದ್ರ ಜಡೇಜಾ 8 ಎಸೆತಗಳಲ್ಲಿ ಎದುರಿಸಿ 18 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಎಂ.ಎಸ್ ಧೋನಿ 2 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್‌ಕೆ ಈ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್‌ಗಳಿಸಿತು. ಇದು ಈ ವರ್ಷದ ಐಪಿಎಲ್‌ನಲ್ಲಿ ಬೃಹತ್‌ ಮೊತ್ತ ಎಂಬ ದಾಖಲೆ ಸಹ ಬರೆಯಿತು.

    ಕೆಕೆಆರ್‌ ಪರ ಕುಲ್ವಂತ್ ಖೇಜ್ರೋಲಿಯಾ 2 ವಿಕೆಟ್‌ ಕಿತ್ತರೆ, ವರುಣ್‌ ಚಕ್ರವರ್ತಿ ಹಾಗೂ ಸುಯಶ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

  • ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

    – ಕೊನೆಗೂ ಪಿಎಸ್‍ಎಲ್ ಮುಂದೂಡಿದ ಪಿಸಿಬಿ

    ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಂಡುತನ ತೋರಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ನಡೆಸುತ್ತಿತ್ತು. ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಈಗ ಟೂರ್ನಿಯನ್ನೇ ಮುಂದೂಡಿದೆ.

    ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಪಿಎಸ್‍ಎಲ್ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ.

    ಪಿಎಸ್‍ಎಲ್ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಇಂದು ನಡೆಯಬೇಕಿತ್ತು. ಜೊತೆಗೆ ಫೈನಲ್ ಪಂದ್ಯ ಬುಧವಾರ ನಿಗದಿಯಾಗಿತ್ತು. ಕಳೆದ ವಾರವಷ್ಟೇ ಕರಾಚಿಯಲ್ಲಿ ಪಿಎಸ್‍ಎಲ್‍ಅನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಿಸಿಬಿ ನಿರ್ಧರಿಸಿತ್ತು. ಅದೇ ಸಮಯದಲ್ಲಿ ಟೂರ್ನಿಯನ್ನು 4 ದಿನ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರರು ದೇಶವನ್ನು ತೊರೆದ ನಂತರ ಟೂರ್ನಿಯನ್ನು ಮುಂದೂಡಲು ಪಿಸಿಬಿ ನಿರ್ಧರಿಸಿತು.

    ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡಿನ 6 ಆಟಗಾರರಿದ್ದಾರೆ. ಅವರೆಲ್ಲರೂ ಈಗ ದೇಶಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಹಿಂದುರುಗಿದ್ದಾರೆ.

    ಪಾಕಿಸ್ತಾನದಲ್ಲಿ ಒಟ್ಟು 184 ಕೊರೊನಾ ಕೇಸ್‍ಗಳು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.