Tag: ಜೇಮ್ಸ್ ಪ್ಯಾಟಿನ್ಸನ್

  • ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಬ್ರಿಸ್ಬೇನ್: ಅಂಪೈರ್, ಎದುರಾಳಿ ಆಟಗಾರರೊಂದಿಗೆ ಅಸಭ್ಯ ವರ್ತಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ನಿಷೇಧದ ಬರೆ ಬಿದ್ದಿದೆ. ಇದರಿಂದಾಗಿ ಮುಂದಿನ ವಾರ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟಿಗೆ ಜೇಮ್ಸ್ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ದೇಶೀಯ ಪಂದ್ಯದ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ಯಾಟಿನ್ಸನ್ ರನ್ನು ನಿಷೇಧಿಸಲಾಗಿದೆ. ಪ್ಯಾಟಿನ್ಸನ್ ಶೆಫೀಲ್ಡ್  ವಿಕ್ಟೋರಿಯಾ ಪರ ಆಡುವಾಗ ಕ್ವೀನ್ಸ್ ಲ್ಯಾಂಡ್ ಆಟಗಾರ ಮತ್ತು ಅಂಪೈರ್ ಜೊತೆ ಕೆಟ್ಟದಾಗಿ ವರ್ತಿಸಿದರು.

    ಪ್ಯಾಟಿನ್ಸನ್ ಕಳೆದ ವರ್ಷವೂ ನಿಯಮ ಉಲ್ಲಂಘಿಸಿ ಎರಡು ಬಾರಿ ಶಿಕ್ಷೆಗೆ ಗುರಿಯಾಗಿದ್ದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದ ಪ್ಯಾಟಿನ್ಸನ್, ಕಳೆದ ವಾರ ತವರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ವೀನ್ಸ್ ಲ್ಯಾಂಡ್ ಆಟಗಾರನನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅಂತರಾಷ್ಟ್ರೀಯ ಪಂದ್ಯವೊಂದಕ್ಕೆ ಪ್ಯಾಟಿನ್ಸನ್ ಅವರಿಗೆ ನಿಷೇಧಿಸಲಾಯಿತು. ಈ ಮೂಲಕ ಗಬ್ಬಾದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ಆ ಒಂದು ಕ್ಷಣದಲ್ಲಿ ನಾನು ತಪ್ಪು ಮಾಡಿದ್ದೇನೆ. ಅದನ್ನು ತಕ್ಷಣವೇ ಅರಿತುಕೊಂಡೆ. ಹೀಗಾಗಿ ಅದೇ ಸಮಯದಲ್ಲಿ ಅಂಪೈರ್ ಮತ್ತು ಎದುರಾಳಿ ಆಟಗಾರರಿಗೆ ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದ್ದೇನೆ. ಇದರಿಂದಾಗಿ ಟೆಸ್ಟ್ ಪಂದ್ಯದಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ.

    ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಕೂಡ ಜೇಮ್ಸ್ ಪ್ಯಾಟಿನ್ಸನ್ ಅವರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷದ ನಿಷೇಧ ಹೇರಿದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ಶಿಸ್ತಿನ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪ್ಯಾಟಿನ್ಸನ್ ವಿರುದ್ಧದ ಕಠಿಣ ಕ್ರಮವೂ ಇದಕ್ಕೆ ಸಾಕ್ಷಿ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಬ್ರಿಸ್ಬೇನ್‍ನಲ್ಲಿ ಪ್ರಾರಂಭವಾಗಲಿದೆ.