Tag: ಜೆ.ಜೆ.ಎಂ ಯೋಜನೆ

  • ಲಾಕ್‍ಡೌನ್ ಮಾಡದೇ ಇದ್ರೆ ಸರ್ಕಾರದ ಕ್ರಮವನ್ನ ಸ್ವಾಗತಿಸುತ್ತೇನೆ: ಉಮೇಶ್ ಕತ್ತಿ

    ಲಾಕ್‍ಡೌನ್ ಮಾಡದೇ ಇದ್ರೆ ಸರ್ಕಾರದ ಕ್ರಮವನ್ನ ಸ್ವಾಗತಿಸುತ್ತೇನೆ: ಉಮೇಶ್ ಕತ್ತಿ

    ಚಿಕ್ಕೋಡಿ: ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್ ಮಾಡದೆ ಇದ್ರೆ ಸ್ವಾಗತಾರ್ಹ ಎಂದು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ವಿಕಲಚೇತನರಿಗೆ ಟ್ರೈಸಿಕಲ್ ವಾಹನ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ಬದಲು ಜನರೇ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ಕೊರೊನಾ ಮುನ್ನೆಚ್ಚರಿಕೆ ಪಾಲಿಸಿದರೆ ಲಾಕ್‍ಡೌನ್ ಅವಶ್ಯಕತೆ ಇಲ್ಲ. ನೂರಾರು ಜನ ಸೇರಿ ಜಾತ್ರೆ, ಹಬ್ಬ ಮಾಡುವುದನ್ನು ನಿಲ್ಲಿಸಬೇಕು. ಮಾಸ್ಕ್ ಸ್ಯಾನಿಟೈಸರ್ ಬಳಸಿ ಮುಂಜಾಗೃತೆಯಿಂದ ರಾಜ್ಯದ ಜನ ಇದ್ರೆ ಸರ್ಕಾರಕ್ಕೆ ಲಾಕ್‍ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಜೆ.ಜೆ.ಎಂ ಯೋಜನೆ ಅಡಿಯಲ್ಲಿ ಹುಕ್ಕೇರಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಜಾರಿಯಲ್ಲಿದೆ. ಶೀಘ್ರದಲ್ಲಿ ಹುಕ್ಕೇರಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ 24 ಗಂಟೆ ಕುಡಿಯುವ ನೀರು ದೊರೆಯಲಿದೆ. ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ನಮ್ಮ ಗುರಿ ಎಂದು ಹೇಳಿದರು.

    ನಾನು ಹುಕ್ಕೇರಿ ಭಾಗದ ಶಾಸಕನಾಗಿ ಕ್ಷೇತ್ರದ ಚಿತ್ರಣ ಬದಲು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ರೆ ಹುಕ್ಕೇರಿ ಮಾದರಿ ವಿಧಾನಸಭಾ ಕ್ಷೇತ್ರ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!

    ಈ ವೇಳೆ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ತಹಶಿಲ್ದಾರರು ಸೇರಿದಂತೆ ತಾಲೂಕಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.