Tag: ಜೆಡಿಎಸ್ ರಾಜ್ಯಾಧ್ಯಕ್ಷ

  • ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ, ಮಗಳಿಗೂ ಕೊರೊನಾ ಸೋಂಕು

    ಜೆಡಿಎಸ್ ರಾಜ್ಯಾಧ್ಯಕ್ಷರ ಪತ್ನಿ, ಮಗಳಿಗೂ ಕೊರೊನಾ ಸೋಂಕು

    ಹಾಸನ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಕೆ ಕುಮಾರಸ್ವಾಮಿಯವರ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ ಅವರಿಗೂ ಕೂಡ ಕೊರೊನಾ ವೈರಸ್ ಹಬ್ಬಿದೆ.

    ಕಳೆದ ವಾರ ಆಲೂರಿನಲ್ಲಿ ಶಾಸಕರು ಹಾಗೂ ಅವರ ಆಪ್ತ ಸಹಾಯಕ ಮತ್ತು ಗನ್ ಮ್ಯಾನ್ ಸೇರಿದಂತೆ ಒಟ್ಟು 11 ಜನರ ಗಂಟಲು ದ್ರವವನ್ನು ಪಡೆದುಕೊಂಡು ಟೆಸ್ಟಿಂಗ್‍ಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಬೆಳಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರದ ಸದಸ್ಯೆ ಚಂಚಲ ಕುಮಾರಸ್ವಾಮಿ, ಅವರ ಮಗಳು ಹಾಗೂ ಕಾರಿನ ಡ್ರೈವರ್ ಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಜಿಲ್ಲಾ ಪಂಚಾಯತಿ ಸದಸ್ಯರು ಆಗಿರುವ ಚಂಚಲ ಅವರು ತಮ್ಮ ಮಗಳ ಮನೆಯಲ್ಲಿ ಹೋಂ ಐಸೋಲೇಷನ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕ ಹಾಸನ ಜಿಲ್ಲಾ ಕೋವಿಡ್ ಕೇಂದ್ರದಲ್ಲಿದ್ದಾರೆ. ಸದಸ್ಯೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಾಸಕರು ಸೇರಿದಂತೆ ಅವರ ಎಲ್ಲ ಸಿಬ್ಬಂದಿ ವರ್ಗದವರು ಪ್ರತ್ಯೇಕವಾಗಿ ಮನೆಯಲ್ಲಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚಂಚಲ ಕುಮಾರಸ್ವಾಮಿ ಅವರು, ನನ್ನ ಮಗಳು ಕೂಡ ವೈದ್ಯೆಯಾಗಿದ್ದಾಳೆ. ಕೊರೊನಾ ಇದೆ ಎಂಬುದನ್ನು ಬಿಟ್ಟರೆ ನಮಗೆ ಯಾವುದೇ ಬೇರೆ ಆರೋಗ್ಯ ಸಮಸ್ಯೆಯಿಲ್ಲ. ನಾವು ಎಲ್ಲ ರೀತಿಯಲ್ಲೂ ಆರೋಗ್ಯವಾಗಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇವೆ. ಕೊರೊನಾಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿದ್ದರೆ ಕೊರೊನಾವನ್ನು ಸುಲಭವಾಗಿ ಹೆದರಿಸಬಹುದು ಎಂದು ತಿಳಿಸಿದ್ದಾರೆ.

  • ಜಿ.ಟಿ ದೇವೇಗೌಡಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಚರಿಕೆ

    ಜಿ.ಟಿ ದೇವೇಗೌಡಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಚರಿಕೆ

    ಹಾಸನ: ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಅವರ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ರೀತಿಯ ಆಟಗಳನ್ನು ಆಡುತ್ತಿರಬಹುದು. ಆದರೆ ನೀವು ಪಕ್ಷಕ್ಕೆ ನಿಷ್ಟರಾಗಿ ಇರುವುದಾದರೆ ಇರಬಹುದು. ದ್ವಂದ್ವ ನಿಲುವು ತೆಗೆದುಕೊಂಡು ಕಾರ್ಯಕರ್ತರನ್ನು ಅಧೀರರನ್ನಾಗಿ ಮಾಡಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

    ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜಿ.ಟಿ ದೇವೇಗೌಡ ನಡೆ ಬಗ್ಗೆ ಆಕ್ರೋಶ ಹೊರಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜಿಟಿಡಿ ಅವರ ಮನಸ್ಸಿಗೆ ಬಂದಂತೆ ಮಾತನಾಡುವ ಹೇಳಿಕೆಗಳು ನಮ್ಮ ಪಕ್ಷಕ್ಕೆ ಮುಜುಗರ ತಂದಿವೆ. ಇಲ್ಲೂ ಇದ್ದು ಅಲ್ಲೂ ಇರೋ ಕೆಲಸ ಮಾಡೋದು ಬೇಡ. ಇದು ಅಶಿಸ್ತಿನ ಪರಮಾವಧಿ. ಅವರಿಗೆ ಇನ್ನೂ ಯಾವುದೇ ನೋಟೀಸ್ ಕೊಟ್ಟಿಲ್ಲ. ಆದರೆ ಅವರ ನಡವಳಿಕೆ ಗಮನಿಸುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.

    ಮೊದಲು ಅವರ ದೇಹ ಇಲ್ಲಿತ್ತು. ಮನಸ್ಸು ಅಲ್ಲಿತ್ತು. ಈಗ ದೇಹ ಮತ್ತು ಮನಸ್ಸು ಎರಡೂ ಬಿಜೆಪಿ ಜೊತೆ ಇದೆ. ಎಂಎಲ್‍ಸಿ ಚುನಾವಣೆಯಲ್ಲಿ ಗುಪ್ತ ಮತದಾನ ಇತ್ತು. ವಿಪ್ ನೀಡಿರಲಿಲ್ಲ. ಮುಂದೆ ರಾಜ್ಯಸಭಾ ಚುನಾವಣೆ ಇದೆ. ಆ ಸಂದರ್ಭದಲ್ಲಿ ಕಾನೂನು ಕಟ್ಟಲೆ ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ನಾನೇ ನನ್ನ ಸ್ವಂತ ಶಕ್ತಿಯಿಂದ ಗೆದ್ದಿದಿನಿ ಎನ್ನುವ ಭಾವನೆ ಇರಬಹುದು. ಯಾವುದೇ ಸಮಸ್ಯೆ ಇದ್ರೆ ನಮ್ಮ ನಾಯಕರ ಜೊತೆ ಮಾತಾಡಿ ಬಗೆ ಹರಿಸಿ ಕೊಳ್ಳಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಭವಿಷ್ಯದಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯಲು, ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಸಹಾಯ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಶಾಂತ್ ಕಿಶೋರ್ ಕರೆಸುವ ಬಗ್ಗೆ ಯೋಚಿಸಿರುವುದು ನಿಜ. ಆದರೆ ಪ್ರಶಾಂತ್ ಕಿಶೋರ್ ಭೇಟಿ ಮಾಡಿಲ್ಲ. ಹೆಚ್.ಡಿ ಕುಮಾರಸ್ವಾಮಿ ಪ್ರಶಾಂತ್ ಕಿಶೋರ್ ಬಗ್ಗೆ ಮನಸ್ಸು ಮಾಡಿದ್ದಾರೆ. ಅನುಕೂಲ ಆಗೋದಾದ್ರೆ ಯಾರೇ ಸಲಹೇ ಸೂಚನೆ ನೀಡಿದ್ರು ಸ್ವಾಗತ ಎಂದು ತಿಳಿಸಿದರು.

  • ಸಮ್ಮಿಶ್ರ ಸರ್ಕಾರ ಸೇಫ್ ಐತೆ, ಹಳ್ಳಿ ಮಾತ್ನಾಗ ಹೇಳೋದಾದ್ರೆ ಗುಂಡ್ರಗೂಳಿ ತರ ಇದೆ: ಎಚ್.ವಿಶ್ವನಾಥ್

    ಸಮ್ಮಿಶ್ರ ಸರ್ಕಾರ ಸೇಫ್ ಐತೆ, ಹಳ್ಳಿ ಮಾತ್ನಾಗ ಹೇಳೋದಾದ್ರೆ ಗುಂಡ್ರಗೂಳಿ ತರ ಇದೆ: ಎಚ್.ವಿಶ್ವನಾಥ್

    ಹಾಸನ: ಜೆಡಿಎಸ್ ಹಾಗೂ ಕಾಂಗ್ರಸ್ಸಿನ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಹಳ್ಳಿ ಮಾತಿನಲ್ಲಿ ಹೇಳೊದಾದರೆ ಗುಂಡ್ರಗೂಳಿ ತರ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

    ಹೊಳೆನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗುವುದು ಕೇವಲ ಊಹಾಪೋಹ. ಕೆಲ ಕೈ ಶಾಕಸರು ಬಿಜೆಪಿಗೆ ಹೋಗಲಿದ್ದಾರೆ, ಸರಕಾರ ಪತನವಾಗಲಿದೆ ಎಂಬುದು ಮಾಧ್ಯಮಗಳ ಸೃಷ್ಟಿ ಅಷ್ಟೇ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಒಂದೇ ಸಮುದಾಯದವರು. ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಹೋಗಬೇಕು ಎನ್ನುವ ಅಭಿಪ್ರಾಯವಿದೆ. ಬಿಜೆಪಿಗೆ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂಬುದು ದೇವೇಗೌಡರ ಅಭಿಪ್ರಾಯವಾಗಿದೆ ಎಂದು ಹೇಳಿದರು.

    ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಪೂರ್ಣವಾಗಿದೆ. ಸಮನ್ವಯ ಸಮಿತಿ ಪುನರ್ ರಚನೆಯ ಅಗತ್ಯವಿದೆ. ಆದರೆ ಸಮನ್ವಯ ಸಮಿತಿ ಅಧ್ಯಕ್ಷರು ಸದ್ಯ ವಿದೇಶದಲ್ಲಿದ್ದಾರೆ. ಅವರು ರಾಜ್ಯಕ್ಕೆ ಮರಳಿದ ನಂತರ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಸಚಿವ ಡಿ.ಕೆ.ಶಿವಕುಮಾರ್ ಪ್ರಕರಣಕ್ಕೂ, ಸಮ್ಮಿಶ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಐಟಿ, ಇಡಿ ಹಾಗೂ ಸಿಬಿಐ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಒತ್ತಡ ಹೇರುತ್ತಿದೆ. ಹೀಗೆ ಮಾಡುವುದು ತಪ್ಪು. ಕೇಂದ್ರ ಸರ್ಕಾರಕ್ಕೆ ಇದನ್ನು ಬಿಟ್ಟು ಮಾಡಲು ಬೇರೆ ಕೆಲಸಗಳು ಬಹಳ ಇವೆ ಎಂದು ತಿಳಿಸಿದರು.

    ಜೆಡಿಎಸ್ ರಾಜ್ಯ ಘಟಕ ಶೀಘ್ರವೇ ಪುನರ್ ರಚನೆಯಾಗಲಿದೆ. ಈಗಾಗಲೇ ಈ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೊಂದಿಗೆ ಚರ್ಚೆ ನಡೆಸಿದ್ದೇವೆ. ಎಲ್ಲಾ ಸಮುದಾಯಕ್ಕೆ ಆಧ್ಯತೆಯನ್ನು ನೀಡಿ, ಶೀಘ್ರವೇ ನೂತನ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾತನಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ: ಲೋಕಲ್ ಚುನಾವಣೆ ಮೈತ್ರಿಗೆ ಎಚ್‍ಡಿಡಿ ಟ್ವಿಸ್ಟ್

    ಬೆಂಗಳೂರು: ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಸರ್ವಾನುಮತದಿಂದ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

    ಪಕ್ಷದ ಕಚೇರಿಯಾದ ಜೆಪಿ ಭವನದಲ್ಲಿ ಜೆಡಿಎಸ್ ಬಾವುಟವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಎಚ್.ವಿಶ್ವನಾಥ್ ಅವರಿಗೆ ಹಸ್ತಾಂತರಿಸಿ, ಅಧಿಕಾರ ಒಪ್ಪಿಸಿದರು.

    ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಒಬ್ಬರೇ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವುದು ಕಷ್ಟ. ಒಂದೂವರೆ ತಿಂಗಳ ಹಿಂದೆಯೇ ಕುಮಾರಸ್ವಾಮಿಯೂ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವಂತೆ ಕೇಳಿದ್ದರು ಎಂದು ಹೇಳಿದರು.

    ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂ.ಪಿ.ಪ್ರಕಾಶ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಬ್ಬ ವ್ಯಕ್ತಿಗೆ ಒಂದೇ ಸ್ಥಾನ ಎನ್ನುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ಎಚ್.ವಿಶ್ವನಾಥ್ ಅವರಿಗೆ ವಹಿಸಲಾಗಿದೆ ಎಂದರು.

    ಚುನಾವಣೆ ಮೈತ್ರಿಗೆ ಟ್ವಿಸ್ಟ್:
    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕಷ್ಟ. ಕಾಂಗ್ರೆಸ್ ಜೊತೆಗೆ ನಮಗೆ ಒಡಂಬಡಿಕೆ ಇದೆ. ಆದರೆ ಸ್ಥಾನಗಳ ಸಂಚಿಕೆಯಲ್ಲಿ ಅವರಿಗೂ ಕಷ್ಟವಾಗುತ್ತದೆ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ. ಅದರಲ್ಲಿ ಯಾವುದೇ ದೋಷವಿಲ್ಲ. ನಮ್ಮ ಪಕ್ಷವು ಪ್ರತ್ಯೇಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲಿದೆ. ಚುನಾವಣೆಯಲ್ಲಿ ದೋಸ್ತಿ ಪಕ್ಷಗಳ ಮಧ್ಯೆ ತಿಕ್ಕಾಟ ಇರುವುದಿಲ್ಲ ಎಂದು ಟ್ವಿಸ್ಟ್ ನೀಡಿದ್ದಾರೆ.

    ಯುವಕರಿಗೆ ಪಕ್ಷದಲ್ಲಿ ಮಣೆ:
    ಪಕ್ಷದ ಸಂಘಟನೆ ಉದ್ದೇಶದಿಂದ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸಂಪೂರ್ಣವಾಗಿ ಯುವಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಹಿಂದುಳಿದವರು, ಮುಸ್ಲಿಂ ಸೇರಿದಂತೆ ಇತರರಿಗೂ ಸ್ಥಾನ, ಜವಾಬ್ದಾರಿ ನೀಡಲಾಗುತ್ತದೆ. ಪಕ್ಷದ ಹಿರಿಯರನ್ನು ನಾವು ಕಡೆಗಣಿಸುತ್ತಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದುವರಿಯುತ್ತೇವೆ. ಮುಂದಿನ 10 ದಿನಗಳಲ್ಲಿ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ರಾಷ್ಟ್ರೀಯ ಪಕ್ಷವೊಂದು ಸಾಲಮನ್ನಾ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸಿ, ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೂರಿದ ಅವರು, ಕುಮಾರಸ್ವಾಮಿ ಬಜೆಟ್ ಮೂರು ಜಿಲ್ಲೆಗೆ ಸೀಮಿತವಾಗಿಲ್ಲ. ಇಂತಹ ಆರೋಪ ತೊಡೆಯಲು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತದೆ. ಅದನ್ನು ರಾಜ್ಯದ ಮನೆ ಮನೆಗಳಿಗೆ ಹಂಚಿ ಸತ್ಯವನ್ನು ಸಾಬೀತು ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

    ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ 5 ವರ್ಷ, ನಾನು ಒಂದು ವರ್ಷ ಹಾಗೂ ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿ ಆಗಿದ್ದೇವೆ. ಯಾರು ಉತ್ತರ ಕರ್ನಾಟಕಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆಂದು ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.

  • ಜೆಡಿಎಸ್ ನೂತನ ಸಾರಥಿಯಾಗಿ ಎಚ್.ವಿಶ್ವನಾಥ್ ಆಯ್ಕೆ!

    ಜೆಡಿಎಸ್ ನೂತನ ಸಾರಥಿಯಾಗಿ ಎಚ್.ವಿಶ್ವನಾಥ್ ಆಯ್ಕೆ!

    ಬೆಂಗಳೂರು: ಜೆಡಿಎಸ್ ಪಕ್ಷದ ನೂತನ ಸಾರಥಿಯಾಗಿ ಮಾಜಿ ಸಚಿವ, ಹುಣಸೂರಿನ ಶಾಸಕ ಅಡಗೂರು ಎಚ್.ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಜೆಡಿಎಸ್ ನ ಮುಖ್ಯಸ್ಥ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಎಚ್. ವಿಶ್ವನಾಥ್ ರವರನ್ನು ಆಯ್ಕೆಮಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ದೇವೇಗೌಡರು ಖುದ್ದು ವಿಶ್ವನಾಥ್ ರವರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದು, ಇದಕ್ಕೆ ವಿಶ್ವನಾಥ್ ರವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಆಗಸ್ಟ್ 5 ರಂದು ನೂತನ ರಾಜ್ಯಾಧ್ಯಕ್ಷರ ನೇಮಕವನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

    ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿಯವರು ಈಗ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಜೆಡಿಎಸ್ ಜವಾಬ್ದಾರಿಯನ್ನು ಎಚ್.ವಿಶ್ವನಾಥ್ ಅವರಿಗೆ ನೀಡಲು ದೇವೇಗೌಡರು ಮುಂದಾಗಿದ್ದಾರೆ.

  • ಕ್ರೂಸರ್ ವಾಹನಗಳು ಡಿಕ್ಕಿ- `ವಿಕಾಸ ಪರ್ವ’ಕ್ಕೆ ಹೊರಟಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಗಾಯ

    ಕ್ರೂಸರ್ ವಾಹನಗಳು ಡಿಕ್ಕಿ- `ವಿಕಾಸ ಪರ್ವ’ಕ್ಕೆ ಹೊರಟಿದ್ದ ಜೆಡಿಎಸ್ ಕಾರ್ಯಕರ್ತರಿಗೆ ಗಾಯ

    ರಾಯಚೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯ ವಿಕಾಸ ಪರ್ವ ಕಾರ್ಯಕ್ರಮಕ್ಕೆ ಹೊರಟಿದ್ದ ಕಾರ್ಯಕರ್ತರ ವಾಹನಗಳ ಮಧ್ಯೆ ಡಿಕ್ಕಿಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ.

    ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಎರಡು ಕ್ರೂಸರ್ ವಾಹನಗಳು ಇಂದು ಬೆಳಗ್ಗಿನ ಜಾವ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಪರಸ್ಪರ ಡಿಕ್ಕಿಯಾಗಿವೆ. ಪರಿಣಾಮ ವಾಹನಗಳಲ್ಲಿದ್ದ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಬೆಂಗಳೂರಿಗೆ ಬೇಗ ತಲುಪಲು ವಾಹನಗಳು ಅತೀ ವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಹಿಂದಿನ ಗಾಡಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ವಿಕಾಸ ಪರ್ವ ಕಾರ್ಯಕ್ರಮಕ್ಕೆ ರಾಯಚೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳಿದ್ದು, ಈ ವೇಳೆ ಅವಘಡ ಸಂಭವಿಸಿದೆ.