– ಮ್ಯಾಗಿ ತಿಂದು ದಿನದೂಡುತ್ತಿದ್ದ ಯುವಕನ ಯಶಸ್ವಿ ಕಥೆ
– 5 ಸಾವಿರದಿಂದ ಆರಂಭವಾಗಿತ್ತು ಸ್ಟಾರ್ಟ್ ಅಪ್
ಪ್ರತಿದಿನ ಮ್ಯಾಗಿ ತಿಂದು ಜೀವನ ನಡೆಸುತ್ತಿದ್ದ 22 ವರ್ಷದ ಯುವಕ ಸೌರಭ್ ಮೌರ್ಯ ಮೂರು ಸ್ಟಾರ್ಟ್ ಅಪ್ ಗಳಿಂದ ವಾರ್ಷಿಕ 22 ಕೋಟಿಗೂ ಅಧಿಕ ಟರ್ನ್ ಓವರ್ ಗಳಿಸುತ್ತಿದ್ದಾರೆ. ಐಐಟಿ ಬಿಹೆಚ್‍ಯುನ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಸೌರಭ್, ಬನಾರಸ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ. ಸೌರಭ್ ಪೋಷಕರು ಆರ್ಥಿಕ ಪರಿಸ್ಥಿತಿಯೇನು ಉತ್ತಮವಾಗಿರಲಿಲ್ಲ. ಆದ್ರೆ ಬಡತನದಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಅನ್ನೋ ಕನಸುಗಳಿಗೆ ಬಡತನ ಇರಲಿಲ್ಲ. ತಂದೆ-ತಾಯಿಯ ಕನಸುಗಳನ್ನು ಸೌರಭ್ ಇಂದು ನನಸು ಮಾಡಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಸ್ವಾವಲಂಬಿಯಾಗಿದ್ದಾರೆ.

ಚಿಕ್ಕವನಿದ್ದಾಗ ಪೋಷಕರ ಜೊತೆ ಸಂತೆಗೆ ಹೋದಾಗ ಒಂದು ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕು. ಅಂಗಡಿಗೆ ಬರೋ ಗ್ರಾಹಕರ ಮೊಬೈಲ್ ಗಳಿಗೆ ಹಾಡು ಹಾಕೋದು ನನ್ನದು ಪುಟ್ಟ ಕನಸು ಆಗಿತ್ತು. ಎಂದಿಗೂ ದೊಡ್ಡ ಕನಸು ಕಂಡವನಲ್ಲ. ಆದ್ರೆ ಪೋಷಕರು ಮಾತ್ರ ನಮ್ಮ ಜೀವನದ ಬಗ್ಗೆ ಬಣ್ಣ ಬಣ್ಣದ ಕನಸಿನ ಗೋಪುರ ನಿರ್ಮಿಸಿಕೊಂಡಿದ್ದರು ಎಂದು ಸೌರಭ್ ಹೇಳುತ್ತಾರೆ.

ಐಐಟಿ ಪ್ರವೇಶ: ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪೋಷಕರು ಸೌರಭ್ ಸೇರಿದಂತೆ ಇನ್ನಿಬ್ಬರು ಸೋದರರನ್ನು ಬನಾರಸಗೆ ಕಳುಹಿಸುತ್ತಾರೆ. ಸೌರಭ್ 11ನೇ ತರಗತಿಯಲ್ಲಿದ್ದಾಗ ಇಬ್ಬರು ಅಣ್ಣಂದಿರು ಐಐಟಿ ಎಕ್ಸಾಂ ಕ್ಲಿಯರ್ ಮಾಡಿಕೊಂಡರು. ಸೌರಭ್ ಸಹ ಐಐಟಿ ಕ್ಲೀಯರ್ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬುವುದು ಪೋಷಕರು ಕನಸಾಗಿತ್ತು. ಆದ್ರೆ 11ನೇ ಕ್ಲಾಸ್ ಓದುತ್ತಿದ್ದಾಗಲೂ ಸೌರಭ್ ಗೆ ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕೆಂಬ ಆಸೆ ಗಟ್ಟಿಯಾಗಿತ್ತು. 12ನೇ ತರಗತಿಯಲ್ಲಿ ಸೌರಭ್ ಜೆಇಇ ಕ್ಲಿಯರ್ ಮಾಡಿಕೊಳ್ಳಲು ವಿಫಲರಾದಾಗ ಅಂದು ದಿನವಿಡೀ ಕಣ್ಣೀರು ಹಾಕಿದ್ದರು. ಆದ್ರೆ ಪೋಷಕರ ಬೆಂಬಲದೊಂದಿಗೆ ಒಂದು ವರ್ಷ ಡ್ರಾಪ್ ಔಟ್ ಮಾಡಿಕೊಂಡು ಮದುವೆ, ಕಾರ್ಯಕ್ರಮ, ಹಬ್ಬ, ಮೊಬೈಲ್ ಎಲ್ಲವನ್ನೂ ತೊರೆದು ಆಸಕ್ತಿಯಿಂದ ಓದಿ ಮುಂದಿನ ವರ್ಷ ಐಐಟಿಯ ಪ್ರವೇಶ ಪಡೆದುಕೊಂಡರು.

ಕೆಲಸ ನೀಡದ ತರಬೇತಿ ಕೇಂದ್ರಗಳು: ಐಐಟಿ ಬಂದಿದ್ದ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯ ಜೊತೆ ಬಂದಿದ್ದರು. ಆದ್ರೆ ಕಂಪ್ಯೂಟರ್ ಶಾಪ್ ತೆರೆಯಬೇಕೆಂದು ಆಸೆ ಹೊಂದಿದ್ದ ಸೌರಭ್ ಗೆ ಐಐಟಿ ಹೊಸ ಅನುಭವಗಳನ್ನು ನೀಡಿತು. ಗ್ರಾಮದಲ್ಲಿ ಮಕ್ಕಳಿಗೆ ಸೌರಭ್ ಪಾಠ ಮಾಡುತ್ತಿದ್ದರು. ಕಾಲೇಜಿನ ಅವಧಿ ಮುಗಿದ ಬಳಿಕ ಕೋಚಿಂಗ್ ಕ್ಲಾಸ್ ಗಳಲ್ಲಿ ಕೆಲಸ ಮಾಡಿದ್ರೆ ಒಂದಿಷ್ಟು ಹಣ ಸಂಪಾದಿಸಬಹುದು ಅರ್ಜಿ ಸಲ್ಲಿಸಿದ್ದರು. ಆದರೆ ಅನುಭವ ಇಲ್ಲದ ಕಾರಣ ಸೌರಭ್ ಯಾವ ತರಬೇತಿ ಕೇಂದ್ರ ಕೆಲಸ ನೀಡಿರಲಿಲ್ಲ.

ಅಮ್ಮ ನೀಡಿದ 5 ಸಾವಿರದಿಂದ ಆರಂಭ: ಒಮ್ಮೆ ಸೌರಭ್ ಗೆ ಅವರ ತಾಯಿ ತಂದೆಗೆ ತಿಳಿಯದಂತೆ ತಾವು ಉಳಿಸಿದ್ದ 5 ಸಾವಿರ ರೂ. ನೀಡಿದ್ದರು. ಅದೇ ಹಣದಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಸೌರಭ್ ತಮ್ಮ ಸ್ಟಾರ್ಟ್ ಅಪ್ ಆರಂಭಿಸಿದರು. ಯುಟ್ಯೂಬ್ ಚಾನೆಲ್ ಆರಂಭಿಸಿದ ಸೌರಭ್, ಮಕ್ಕಳಿಗೆ ಪಾಠ ಹೇಳುವ ವೀಡಿಯೋಗಳನ್ನ ಅಪ್ಲೋಡ್ ಮಾಡಲಾರಂಭಿಸಿದ್ರು. ಆರಂಭದಲ್ಲಿ ಸೌರಭ್ ಬಳಿ ವೈಟ್ ಬೋರ್ಡ್ ಸಹ ಇರಲಿಲ್ಲ. ಸೌರಭ್ ಪೇಪರ್ ಮೇಲೆ ಸಮಸ್ಯೆಗಳನ್ನ ಪರಿಹರಿಸುತ್ತಿದ್ರೆ ಮತ್ತೋರ್ವ ಗೆಳೆಯ ವೀಡಿಯೋ ಮಾಡುತ್ತಿದ್ದರು. ಬಹು ದಿನಗಳ ಬಳಿಕ 1,300 ರೂ. ನೀಡಿ ವೈಟ್ ಬೋರ್ಡ್ ಖರೀದಿಸಿದ್ದರು.

ಕಮೆಂಟ್ ನಿಂದ ಆರಂಭವಾಯ್ತು ಸ್ಟಾರ್ಟ್ ಅಪ್: ತಮ್ಮದೇ ಯು ಟ್ಯೂಬ್ ಚಾನೆಲ್ ನಲ್ಲಿ ವೀಡಿಯೋಗಳನ್ನ ಅಪ್ಲೋಡ ಮಾಡುತ್ತಿದ್ದರು. ಒಂದು ದಿನ ತಮ್ಮ ಐಐಟಿ ಜರ್ನಿಯ ಬಗ್ಗೆ ಮಾತನಾಡಿ ವೀಡಿಯೋ ಹಂಚಿಕೊಂಡಿದ್ದರು. ಓರ್ವ ವಿದ್ಯಾರ್ಥಿ ನಮಗೆ ಐಐಟಿಗೆ ಪ್ರವೇಶ ಪಡೆಯಲು ತರಬೇತಿ ನೀಡ್ತೀರಾ ಅಂತ ಕೇಳಿದ್ದರು. ಈ ಒಂದು ಕಮೆಂಟ್ ಸೌರಬ್ ಗೆ ತಮ್ಮದೇ ಸ್ಟಾರ್ಟ್ ಅಪ್ ಆರಂಭಿಸಲು ಹುರಿದುಂಬಿಸಿತು. ಅಂದೇ ಐಐಟಿ ತಯಾರಿ ನಡೆಸುತ್ತಿರೋ 11 ಮತ್ತು 12ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವೀಡಿಯೋ ಮಾಡಲು ಆರಂಭಿಸಿದರು.

ಈ ವೀಡಿಯೋ ನೋಡಲು 99 ರೂಪಾಯಿ ಪ್ಯಾಕ್ ಲಾಂಚ್ ಮಾಡಿದ್ರು. ಹೀಗೆ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಾಗ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದು ಸೌರಭ್‍ಗೆ ಕಷ್ಟವಾದಾಗ ತಮ್ಮ ಗೆಳೆಯರ ಸಹಾಯ ಪಡೆದರು. ಇದರಿಂದ ಬಂದ ಹಣದಿಂದ ಎಲ್ಲರಿಗೂ ಗೌರವ ಧನವಾಗಿ ನೀಡಿದರು. ಮುಂದೆ ವಾಟ್ಸಪ್ ಮೂಲಕವೂ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಹಿತಿ ನೀಡಲಾರಂಭಿಸಿದರು.

ಐಐಟಿ ಹಾಸ್ಟೆಲ್ ನಲ್ಲಿದ್ದರೂ ಕಾಲೇಜಿನ ಸಮೀಪವೇ ಸೌರಭ್ ರೂಮ್ ಬಾಡಿಗೆಗೆ ಪಡೆದುಕೊಂಡು ಹಗಲು ರಾತ್ರಿ ಎನ್ನದೇ ಅಭ್ಯಾಸ ಆರಂಭಿಸಿದರು. ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದ ಕಾರಣ ಬರೋಬ್ಬರಿ 8 ತಿಂಗಳು ಮ್ಯಾಗಿ ತಿಂದು ಓದುತ್ತಿದ್ದರು ಸೌರಭ.

ಮೊದಲ ವರ್ಷವೇ 11 ಕೋಟಿ: ಮಾರ್ಗದರ್ಶನದ ಜೊತೆ ವಿದ್ಯಾರ್ಥಿಗಳಿಗೆ ಕೋರ್ಸ್ ಅವಶ್ಯಕತೆ ಇರೋದು ನನ್ನ ಗಮನಕ್ಕೆ ಬಂತು. ಆದರೆ ಕೋಚಿಂಗ್ ಸೆಂಟರ್ ಆರಂಭಿಸುವ ಸಂಪನ್ಮೂಲ ನನ್ನ ಬಳಿ ಇರಲಿಲ್ಲ. ತದನಂತರ ಎರಡು ಸಾವಿರ ರೂಪಾಯಿಯಲ್ಲಿ ಇಯರ್ ಲಾಂಗ್ ಮತ್ತು ಕ್ರೈಶ್ ಕೋರ್ಸ್ ನೀಡಿದ್ದು ಬಹಳ ವಿದ್ಯಾರ್ಥಿಗಳಿಗೆ ಅನಕೂಲವಾಯ್ತು. 2019 ಜನವರಿಯಲ್ಲಿ ಎಸ್‍ಎಸ್‍ಟಿ ಅ್ಯಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿ ಗೆಳೆಯರೊಂದಿಗೆ ಕೆಲಸ ಆರಂಭಿಸಿದೆ. ಈ ಕಂಪನಿಯಲ್ಲಿ ಎರಡು ಸ್ಟಾರ್ಟ್ ಅಪ್ ಆರಂಭಿಸಲಾಯ್ತು. ಒಂದು ಕೋರ್ಸ್ ಮತ್ತೊಂದು ಮೇಂಟರಿಂಗ್. ಇದಕ್ಕಾಗಿ ತಿಂಗಳಿಗೆ 1,500 ರೂ. ಶುಲ್ಕ ನಿಗದಿ ಮಾಡಲಾಯ್ತು. ಮೊದಲ ವರ್ಷದಲ್ಲಿಯೇ 11 ಕೋಟಿ ಟರ್ನ್ ಓವರ್ ಆಯ್ತು. ನಂತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪಿಜಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನ ನಮ್ಮ ಕಂಪನಿಯಿಂದ ನೀಡಲಾರಂಭಿಸಿದೇವು. ಇದಕ್ಕಾಗಿ ರ‍್ಯಾಂಕರ್ಸ್ ಕನ್ಸಲಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಹುಟ್ಟಿಕೊಂಡಿತು ಎಂದು ಸೌರಭ್ ಹೇಳ್ತಾರೆ.

200 ಐಐಟಿ ವಿದ್ಯಾರ್ಥಿಗಳ ತಂಡ: ಇಂದು ಸೌರಭ್ ಬನಾರಸನಲ್ಲಿ ಮೂರು ಮತ್ತು ಗಾಜಿಯಾಬಾದ್ ನಲ್ಲೊಂದು ಬ್ರ್ಯಾಂಚ್ ಹೊಂದಿದ್ದಾರೆ. ನಾಲ್ಕು ಬ್ರ್ಯಾಂಚ್ ಗಳಲ್ಲಿ 200 ವಿದ್ಯಾರ್ಥಿಗಳಿದ್ದಾರೆ. 30ಕ್ಕೂ ಅಧಿಕ ಡೌಟ್ ಸಾಲ್ವ್ ಮಾಡೋ ಪರಿಣಿತರಿದ್ದಾರೆ. 13 ಜನರ ಉಪನ್ಯಾಸಕರ ತಂಡವಿದೆ. ಪ್ರತಿ ತಿಂಗಳು ಸುಮಾರು 45 ಲಕ್ಷ ರೂ. ಮೌಲ್ಯದ ಕೋರ್ಸ್ ಸೇಲ್ ಮಾಡುತ್ತೇವೆ. ಇಂದು 2,700 ಅಧಿಕ ವಿದ್ಯಾರ್ಥಿಗಳು ನಮ್ಮ ಬಳಿಯಲ್ಲಿದ್ದು, ಕೋವಿಡ್ ವೇಳೆ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಂದಾಗಿ ಬಹುತೇಕ ಎಲ್ಲ ವಲಯಗಳು ನಷ್ಟ ಅನುಭವಿಸಿವೆ. ಆದ್ರೆ ಆನ್‍ಲೈನ್ ನಿಂದಾಗಿ ಶಿಕ್ಷಣ ಕ್ಷೇತ್ರ ಮತ್ತಷ್ಟು ಬೆಳವಣಿಗೆಯಾಗಿದೆ ಎಂದು ಸೌರಭ್ ತಮ್ಮ ಕಥೆಯನ್ನ ಹಂಚಿಕೊಂಡರು.