ದಿಸ್ಪುರ್: ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾರ್ಗ್ ಮ್ಯಾನೇಜರ್ ಹಾಗೂ ಸಿಂಗಾಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ ರಚಿಸಲಾದ ಎಸ್‌ಐಟಿಯು ಮಂಗಳವಾರ (ಸೆ.30) ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಾಂತನನ್ನು ಹಾಗೂ ರಾಜಸ್ಥಾನದಲ್ಲಿ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಅವರನ್ನು ಬಂಧಿಸಿದೆ.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವಿನ ತನಿಖೆಗೆ ಸಿಂಗಾಪುರ ಸರ್ಕಾರದ ಸಹಕಾರ: ಅಸ್ಸಾಂ ಸಿಎಂ
ಜುಬೀನ್ ಸಾವನ್ನಪ್ಪುವ ಮುನ್ನ ಬಂಧಿತ ಆರೋಪಿಗಳಿಬ್ಬರು ಅವರ ಜೊತೆಗಿದ್ದರು ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಲ್ಲದೇ ಈ ಇಬ್ಬರ ಹೊರತಾಗಿಯೂ 60ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಕುರಿತು ಗಾಯಕ ಜುಬೀನ್ ಗಾರ್ಗ್ ಅವರ ಪತ್ನಿ ಗರಿಮಾ ಗಾರ್ಗ್ ಮಾತನಾಡಿ, ನಾನು ಕಾನೂನು ಪ್ರಕ್ರಿಯೆಯಲ್ಲಿ ವಿಶ್ವಾಸ ಹೊಂದಿದ್ದೇನೆ. ಸಾವಿನ ಬಗ್ಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಸಂದರ್ಭದಲ್ಲಿ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಅದಾದ ಬಳಿಕ ಗಾಯಕನ ಸಾವಿನ ತನಿಖೆಗಾಗಿ ಅಸ್ಸಾಂ ಸರ್ಕಾರ ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸಿಂಗಾಪುರ ಸರ್ಕಾರವು ತನಿಖೆಗೆ ಒಪ್ಪಿಗೆ ಸೂಚಿಸಿದ್ದು, ಸದ್ಯ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಅವರ ಸಹಾಯ ಪಡೆಯಲು ಇಬ್ಬರು ಅಸ್ಸಾಂ ಪೊಲೀಸ್ ಅಧಿಕಾರಿಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕ ಜುಬೀನ್ ಗಾರ್ಗ್ ಅಂತ್ಯಕ್ರಿಯೆ






