Tag: ಜೀವನ ನಿರ್ವಹಣೆ

  • ಅವರಿಂದಾಗಿ ನೀವು ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ – ತಂದೆಯನ್ನು ಹೊರಹಾಕಿದ ಪುತ್ರರಿಗೆ ಸುಪ್ರೀಂ ಚಾಟಿ

    ಅವರಿಂದಾಗಿ ನೀವು ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ – ತಂದೆಯನ್ನು ಹೊರಹಾಕಿದ ಪುತ್ರರಿಗೆ ಸುಪ್ರೀಂ ಚಾಟಿ

    ನವದೆಹಲಿ:ಜನ್ಮ ಕೊಟ್ಟ ತಂದೆಯನ್ನೇ ಮನೆಯಿಂದ ಹೊರ ಹಾಕಿದ್ದಕ್ಕೆ ಇಬ್ಬರು ಪುತ್ರರಿಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿ ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿದೆ.

    ವಯೋ ವೃದ್ಧನಾಗಿರುವ ನನಗೆ ನಿರ್ವಹಣೆಯ ವೆಚ್ಚವನ್ನೂ ನೀಡದೇ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ದುಡಿಯುತ್ತಿರುವ ಇಬ್ಬರು ಪುತ್ರರು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ನೀವು ತಂದೆಯವರಿಗೆ ಸಹಾಯ ಮಾಡುವುದಿಲ್ಲ ಯಾಕೆ? ಇವರು ನಿಮ್ಮ ತಂದೆ. ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದು ಎಷ್ಟು ಸರಿ? ನೀವು ಈ ಹಂತಕ್ಕೆ ಬರಲು ನಿಮ್ಮ ತಂದೆ ಕಾರಣ ಎಂಬುದನ್ನು ಮರೆಯಬೇಡಿ ಎಂದು ಹೇಳಿ ಇಬ್ಬರು ಸಹೋದರರ ನಿರ್ಲಕ್ಷ್ಯದ ನಡೆಯನ್ನು ಕಟು ಪದಗಳಲ್ಲಿ ಟೀಕಿಸಿತು.

    ಅವರ ಶ್ರಮದಿಂದ ಈಗ ನೀವು ಉನ್ನತ ಶಿಕ್ಷಣ ಕಲಿತು ಉದ್ಯೋಗ ಪಡೆದುಕೊಂಡಿದ್ದೀರಿ. ನಿಮಗೆ ಆಸ್ತಿ ಬಂದಿರುವುದೇ ನಿಮ್ಮ ತಂದೆಯಿಂದ. ಹೀಗಿರುವಾಗ ಈ ಸಮಯದಲ್ಲೂ ಮನೆಯಿಂದ ಹೊರಹಾಕಿದ್ದು ಎಷ್ಟು ಸರಿ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.

    ವಯೋವೃದ್ದ ತಂದೆಯನ್ನು ಮನೆ ಬಿಟ್ಟು ಹೊರಹೋಗುವಂತೆ ಒತ್ತಾಯಿಸುವುದು ಮತ್ತು ಹಣಕಾಸಿನ ನೆರವು ನೀಡಲು ನಿರಾಕರಿಸುವುದು ಕ್ಷಮಾರ್ಹವಲ್ಲ. ತಂದೆಯ ಪೂರ್ವಜರಿಂದ ಬಂದಿರುವ ಆಸ್ತಿಯನ್ನು ನೀವು ಪಡೆದುಕೊಂಡಿದ್ದೀರಿ. ಆದರೆ ಬಾಡಿಗೆಯ ಸ್ವಲ್ಪ ಭಾಗವನ್ನೂ ತಂದೆಗೆ ಯಾಕೆ ನೀಡುವುದಿಲ್ಲ? ಪೂರ್ವಜರ ಆಸ್ತಿಯ ಮೇಲಿರುವ ತಂದೆಯ ಹಕ್ಕನ್ನು ಕಸಿಯಲಾಗದು ಎಂದು ಕೋರ್ಟ್‌ ಈ ವೇಳೆ ಅಭಿಪ್ರಾಯಪಟ್ಟಿತು.

    ನನ್ನನ್ನು ಇಬ್ಬರು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ವಯೋ ವೃದ್ಧ ತಂದೆ ಟ್ರಿಬ್ಯುನಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಇಬ್ಬರು ಪುತ್ರರಿಗೆ ತಂದೆಯ ನಿರ್ವಹಣಾ ವೆಚ್ಚವಾಗಿ ಪ್ರತಿ ತಿಂಗಳು 7 ಸಾವಿರ ರೂ. ಪಾವತಿಸುವಂತೆ ಆದೇಶಿಸಿತ್ತು. ತಂದೆ-ತಾಯಿ ನಿರ್ವಹಣೆ, ಕಲ್ಯಾಣಕ್ಕೆ ಸಬಂಧಿಸಿದಂತೆ 2007ರ ಹಿರಿಯ ನಾಗರಿಕರ ಕಾಯ್ದೆಯ ಅಡಿ ಈ ಆದೇಶವನ್ನು ಪುತ್ರರು ಪ್ರಶ್ನಿಸಿದ್ದರಿಂದ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

    ಹೈಕೋರ್ಟ್‌ ತಡೆ ನೀಡಿದ್ದನ್ನು ಪ್ರಶ್ನಿಸಿ ವೃದ್ಧ ತಂದೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಈ ಕಾಲದಲ್ಲಿ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ರೂ. ಪಾವತಿಸುವಂತೆ ಆದೇಶ ನೀಡಬೇಕೆಂದು ತಂದೆಯ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಇಬ್ಬರೂ ಮಕ್ಕಳಿಗೆ ನೋಟಿಸ್ ಜಾರಿ ಮಾಡಿದೆ.

  • ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಜೀವನ ನಿರ್ವಹಣೆಯಷ್ಟು ವೇತನ ಇದೆ – ಪತಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದ ಕೋರ್ಟ್

    ಕೋಲ್ಕತ್ತಾ: ಜೀವನ ನಿರ್ವಹಣೆಗೆ ಸಾಕಾಗುವಷ್ಟು ವೇತನ ಹೊಂದಿದ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಅಗತ್ಯವಿಲ್ಲ ಎಂದು ಕೋಲ್ಕತಾ ಹೈ ಕೋರ್ಟ್ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

    ವಿಚ್ಛೇದನ ಕೋರಿ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪತಿಯಿಂದ ಜೀವನ ನಿರ್ವಹಣೆಗೆ ಜೀವನಾಂಶವನ್ನು ಕೋರಿ ಪತಿಯ ಸಂಪಾದನೆ ಮಾಹಿತಿ ನೀಡಿದ್ದರು. ಅಲ್ಲದೇ ಇದೇ ವೇಳೆ ತಮ್ಮ ವೇತನ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ನ್ಯಾ. ಬಿಸ್ವಾಜಿತ್ ಬಸು ಅವರು, ಮಹಿಳೆಯ ವೇತನ 74 ಸಾವಿರಕ್ಕಿಂತ ಕಡಿಮೆ ಇಲ್ಲ. ಇದು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಅವರ ಜೀವನ ನಿರ್ವಹಣೆಗೆ ಕೇಳಿರುವ 50 ಸಾವಿರ ರೂ. ಗಳನ್ನು ಗಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಮಹಿಳೆಗೆ ಜೀವನಾಂಶ ಪಡೆಯಲು ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಕೆಳ ನ್ಯಾಯಾಲಯದಲ್ಲಿ ಮಧ್ಯಂತರ ಜೀವನಾಂಶ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನ ತಿರಸ್ಕರಿಸಿತ್ತು. ಇದಕ್ಕೂ ಮುನ್ನ 2016 ಮಾರ್ಚ್ ರಂದು ನಲ್ಲಿ ಟ್ರಯಲ್ ಕೋರ್ಟ್ ಮಹಿಳೆಗೆ  ದಾವೆ ವೆಚ್ಚವಾಗಿ 30 ಸಾವಿರ ರೂ. ಗಳನ್ನು ನೀಡುವಂತೆ ಪತಿಗೆ ಆದೇಶ ನೀಡಿತ್ತು.

    ಹೈ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪತಿ ವಾರ್ಷಿಕ 83 ಲಕ್ಷ ಆದಾಯವನ್ನು ಪಡೆಯುತ್ತಿದ್ದು, ಪತಿಯ ಆದಾಯಕ್ಕನುಗುಣವಾಗಿ ಜೀವನಾಂಶ ನೀಡಬೇಕು. ನನ್ನ ಆದಾಯವು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕವಾದ ಪತಿಯಿಂದ ಪ್ರತಿ ತಿಂಗಳು 50 ಸಾವಿರ ಜೀವನಾಂಶ ಕೊಡಿಸಬೇಕು. ಇದರಲ್ಲಿ ಮನೆ ನಿರ್ವಹಣೆಗೆ 10 ಸಾವಿರ ರೂ., ಪಾಕೆಟ್ ಮನಿ 4 ಸಾವಿರ ರೂ., 22 ಸಾವಿರ ರೂ. ಸರಕು, ಬಟ್ಟೆ ದಿನ ನಿತ್ಯದ ಖರ್ಚಿಗೆ ಮತ್ತು 14 ಸಾವಿರ ರೂ. ಕಾನೂನು ಹೋರಾಟದ ವೆಚ್ಚವನ್ನು ನೀಡಬೇಕೆಂದು ಕೋರಿದ್ದರು.

    ಇದೇ ವೇಳೆ ಕೋರ್ಟಿಗೆ ಮಹಿಳೆ ತನ್ನ ವೇತನದ ಲೆಕ್ಕಪತ್ರಗಳನ್ನು ಸಲ್ಲಿಕೆ ಮಾಡಿದ್ರು. ಡಿ.2018, ಜ.2019 ಮತ್ತು ಮಾ.2019 ರಲ್ಲಿ ಮಹಿಳೆಯ ವೇತನ 74,624 ರಷ್ಟಿತ್ತು. ಕಳೆದ ತಿಂಗಳು 81,219 ವೇತನ ಪಡೆಯುತ್ತಿದ್ದಾರೆ ಎಂದು ದೃಢಪಟ್ಟಿತ್ತು. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಮಹಿಳೆಯ ಅವಶ್ಯಕತೆಗಳಿಗೆ 50 ಸಾವಿರ ಸಾಕಾಗುತ್ತದೆ ಎಂದು ತಿಳಿಸಿದೆ.