Tag: ಜೀವನಾಂಶ

  • ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

    ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

    – ಸುಪ್ರೀಂ ತೀರ್ಪನ್ನು ಪ್ರಶ್ನಿಸಲು ಮುಂದಾದ AIMPLB

    ನವದೆಹಲಿ: ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ (Supreme Court) ಆದೇಶವನ್ನು ಪ್ರಶ್ನಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ.

    ಎಐಎಂಪಿಎಲ್‌ಬಿ ಭಾನುವಾರ ತನ್ನ ಕಾರ್ಯಕಾರಿ ಸಮಿತಿಯ ಸಭೆ ನಡೆಸಿ ಮುಸ್ಲಿಂ ಮಹಿಳೆಯರಿಗೆ ಜೀವನಾಂಶಕ್ಕೆ ಸಂಬಂಧಿಸಿದಂತೆ (Supreme Court verdict on Muslim women’s Maintenance) ಸುಪ್ರೀಂ ನೀಡಿದ ತೀರ್ಪು ಇಸ್ಲಾಮಿಕ್ ಕಾನೂನಿಗೆ (ಷರಿಯಾ) ವಿರುದ್ಧವಾಗಿದೆ ಎಂದು ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಧಾರವನ್ನು ರದ್ದುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಅನ್ವೇಷಿಸಲು ಅದರ ಅಧ್ಯಕ್ಷರಿಗೆ ಅಧಿಕಾರ ನೀಡಿದೆ. ಇದರೊಂದಿಗೆ ಉತ್ತರಾಖಂಡದಲ್ಲಿ ಜಾರಿಯಾಗಿರುವ ಏಕರೂಪದ ನಾಗರಿಕ ಸಂಹಿತೆ ಕಾಯ್ದೆಯನ್ನು (Uniform Civil Code) ಉತ್ತರಾಖಂಡ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮಂಡಳಿ ನಿರ್ಧರಿಸಿದೆ.

    ಸಭೆಯ ನಂತರ ಎಐಎಂಪಿಎಲ್‌ಬಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಚ್ಛೇದನವು ಅತ್ಯಂತ ಅಸಹ್ಯಕರ ಎಂದು ಪವಿತ್ರ ಪ್ರವಾದಿ ಉಲ್ಲೇಖಿಸಿದ್ದಾರೆ. ಆದ್ದರಿಂದ ವಿವಾಹವನ್ನು ಮುಂದುವರಿಸುವುದು ಉತ್ತಮ. ಹೀಗಿದ್ದರೂ ವೈವಾಹಿಕ ಜೀವನ ನಿರ್ವಹಣೆ ಕಷ್ಟವಾಗಿದ್ದರೆ ವಿಚ್ಛೇದನವನ್ನು ಮನುಕುಲಕ್ಕೆ ಪರಿಹಾರವಾಗಿ ಸೂಚಿಸಲಾಗಿದೆ ಎಂದು ಕುರಾನ್‌ (Quran) ಹೇಳಿದೆ ಎಂದು ತಿಳಿಸಿದೆ. ಇದನ್ನೂ ಓದಿ: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ‘ರತ್ನ ಭಂಡಾರ’ದ ಬಾಗಿಲು

    ವಿಚ್ಚೇದನದಿಂದ ಯಶಸ್ವಿಯಾಗಿ ಹೊರಬಂದ ಮಹಿಳೆಯರಿಗೆ ಈ ತೀರ್ಪು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

    ಸಂವಿಧಾನದ 25ನೇ ವಿಧಿ ಪ್ರಕಾರ ಎಲ್ಲಾ ಧರ್ಮಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿವೆ. ಇದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕು. ನಮ್ಮ ಬಹು-ಧಾರ್ಮಿಕ ಮತ್ತು ಬಹು-ಸಾಂಸ್ಕೃತಿಕ ದೇಶದಲ್ಲಿ ಏಕರೂಪದ ನಾಗರೀಕ ಸಂಹಿತೆ ಅಪ್ರಸ್ತುತ. ಇದನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನಗಳು ರಾಷ್ಟ್ರದ ಸ್ಫೂರ್ತಿ ಮತ್ತು ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಸುಪ್ರೀಂ ಕೋರ್ಟ್‌ ಹೇಳಿದ್ದೇನು?
    ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್​ 125ರ ಅಡಿ ಮುಸ್ಲಿಂ ಮಹಿಳೆಯೂ ವಿಚ್ಚೇದನ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ನ್ಯಾ. ಬಿವಿ ನಾಗರತ್ನ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಹೇಳಿತ್ತು. ವಿಚ್ಛೇದಿತ ಮಹಿಳೆಯೂ ತನ್ನ ಪರಿತ್ಯಕ್ತ ಪತಿಯಿಂದ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶವನ್ನು ಕೋರಬಹುದು. ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕಿನ ರಕ್ಷಣೆ) ಕಾಯಿದೆ-1986ರ ನಿಯಮವು ಈ ಸೆಕ್ಷನ್‌ಗೆ ಅನ್ವಯವಾಗುವುದಿಲ್ಲ ಎಂದು ಹೇಳಿತ್ತು.

  • ಮಗನ ಹತ್ಯೆ ಪ್ರಕರಣ- ಜೀವನಾಂಶವಾಗಿ ತಿಂಗಳಿಗೆ 2.5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಸುಚನಾ ಸೇಠ್

    ಮಗನ ಹತ್ಯೆ ಪ್ರಕರಣ- ಜೀವನಾಂಶವಾಗಿ ತಿಂಗಳಿಗೆ 2.5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಸುಚನಾ ಸೇಠ್

    ಬೆಂಗಳೂರು: ಸ್ಟಾರ್ಟ್ಅಪ್ ಕಂಪನಿ ಸಿಇಒ (CEO) ಸುಚನಾ ಸೇಠ್ (Suchana Seth) ಹೆತ್ತ ಮಗನನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಿಂದ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ. ಇದೀಗ ಆರೋಪಿ ಸುಚನಾ ಸೇಠ್ ತನ್ನ ಪತಿಯಿಂದ ದೂರವಾದ ಬಳಿಕ ಜೀವನಾಂಶವಾಗಿ (Sustenance) ತಿಂಗಳಿಗೆ 2.5 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದರು ಎಂಬ ವಿಷಯ ಹೊರಬಿದ್ದಿದೆ.

    ಆರೋಪಿ ಸುಚನಾ ಮತ್ತು ಆಕೆಯ ಪತಿ ವೆಂಕಟರಮಣ ನಡುವೆ ಬಿನ್ನಾಭಿಪ್ರಾಯ ಉಂಟಾದ ಹಿನ್ನೆಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸುಚನಾ ಡಿವೋರ್ಸ್ ಕೇಸ್ ಮೂರು ವಾರದ ಹಿಂದೆ ಅಂದರೆ ಡಿಸೆಂಬರ್ 12ರಂದು ವಿಚಾರಣೆ ನಡೆದಿತ್ತು. ಸುಚನಾ ಪತಿ ವೆಂಕಟರಮಣ ತಿಂಗಳಿಗೆ 9 ಲಕ್ಷ ರೂ. ದುಡಿಯುತ್ತಾರೆ. ಈ ಹಿನ್ನೆಲೆ ವಿಚಾರಣೆ ವೇಳೆ ಜೀವನಾಂಶಕ್ಕೆ ತಿಂಗಳಿಗೆ 2.5 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಮಗುವಿಗೆ ಹೈಡೋಸ್ ಕೊಟ್ಟು, ಎಚ್ಚರ ತಪ್ಪಿಸಿ ಹತ್ಯೆ- ಸೇಠ್ ರೂಮಲ್ಲಿ ಕೆಮ್ಮಿನ ಔಷಧಿ ಬಾಟ್ಲಿ ಪತ್ತೆ

    ಇದಾದ ಬಳಿಕ ಸುಚನಾ ಮನೆಯಿಂದ ಮಗನನ್ನು ಕರೆದುಕೊಂಡು ಗೋವಾಗೆ ಹೋಗಿದ್ದಾಳೆ. ಅಲ್ಲದೇ ಮಹಿಳೆ ವಾಸವಾಗಿದ್ದ ಹೋಟೆಲ್ ರೂಂನಲ್ಲಿ ಎರಡು ಖಾಲಿ ಸಿರಪ್ ಬಾಟಲ್ ಪತ್ತೆಯಾಗಿದೆ. ಖಾಲಿ ಸಿರಪ್ ಬಾಟಲ್‌ಗಳು ಪತ್ತೆ ಆಗಿರೋದು ಗಮನಿಸಿದರೆ ಇದೊಂದು ಪ್ಲ್ಯಾನ್ಡ್ ಮರ್ಡರ್ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಮುಂದೆ ಹೈಡ್ರಾಮ; ಸೀಮೆ ಎಣ್ಣೆ ಸುರಿದುಕೊಂಡು ಮುಸ್ಲಿಂ ಕುಟುಂಬ ಆತ್ಮಹತ್ಯೆಗೆ ಯತ್ನ

    ಸುಚನಾ ಸೇಠ್ ಹೇಳಿದ್ದೇನು?
    ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವೀಡಿಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದಿದ್ದಾಳೆ. ಇದನ್ನೂ ಓದಿ: ಒಡೆದ ಕಾರಿನ ಹೆಡ್‌ಲೈಟ್‌ಗಳನ್ನು ತ್ರಿವರ್ಣ ಧ್ವಜದಿಂದ ಮುಚ್ಚಿದ- ಮುಂದೇನಾಯ್ತು..?

    ಇದೇ ನೋವಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದೆ. ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್‌ಕೇಸ್‌ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು CEO ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ

    ಸುಚನಾ ಸೇಠ್ ಮತ್ತು ವೆಂಕಟರಮಣ 2010ರಲ್ಲಿ ವಿವಾಹವಾಗಿದ್ದರು. 2019ರಲ್ಲಿ ಪುತ್ರ ಜನಿಸಿದ್ದು, 2021ರಿಂದ ಪತಿಯಿಂದ ಬೇರೆಯಾಗಿ ಜೀವನ ನಡೆಸುತ್ತಿದ್ದೇನೆ ಎಂದು ಆರೋಪಿ ಸುಚನಾ ಸೇಠ್ ನ್ಯಾಯಾಲಯದಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಬೆಂಗಳೂರು ಸಿಇಓನಿಂದ ಮಗನ ಹತ್ಯೆ ಪ್ರಕರಣ- ಮಗುವಿನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

  • ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ

    ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ

    ಹಾಸನ: ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪಂಪ್‍ಹೌಸ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.

    ಅಶ್ವಿನಿ(36) ಕೊಲೆಯಾದ ಮಹಿಳೆಯಾಗಿದ್ದು, ಕೊಲೆ ಮಾಡಿದ ನಂತರ ಪತಿ ಜಗದೀಶ್ ಪರಾರಿಯಾಗಿದ್ದಾನೆ. ಶಾಲೆಯಿಂದ ಬಂದ ಮಕ್ಕಳು ಮನೆ ಬಾಗಿಲು ತೆರೆದು ಒಳಹೋದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

    ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ 

    ಏನಿದು ಘಟನೆ?
    ಅಶ್ವಿನಿ ಹಾಗೂ ಜಗದೀಶ್ 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿತ್ತು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಜಗದೀಶ್ ಅದನ್ನು ಬಿಟ್ಟು ಮೆಡಿಕಲ್ ಶಾಫ್ ಇಟ್ಟುಕೊಂಡಿದ್ದ. ಲಾಸ್ ಆದ ಕಾರಣ ಅಂಗಡಿ ಕ್ಲೋಸ್ ಮಾಡಿದ್ದ.

    ಹಣಕಾಸು ವಿಚಾರಕ್ಕೆ ಆಗಾಗ್ಗೆ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಜಗದೀಶ್ ಒಮ್ಮೆ ಅಶ್ವಿನಿಗೆ ಹಲ್ಲೆ ಮಾಡಿದ್ದ ಪರಿಣಾಮ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದಾದ ನಂತರ ಬೇರೊಬ್ಬ ಮಹಿಳೆಯೊಂದಿಗೆ ಜಗದೀಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಅಶ್ವಿನಿ ವಿರೋಧಿಸಿದ್ದಕ್ಕೆ ಹಲವು ಬಾರಿ ಹಲ್ಲೆ ನಡೆಸಿದ್ದ. ಇದರಿಂದ ಬೇಸತ್ತ ಅಶ್ವಿನಿ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.

    ನಾಲ್ಕು ತಿಂಗಳ ಹಿಂದಷ್ಟೇ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಶ್ವಿನಿ ಮೆಡ್‍ಪ್ಲಸ್‍ಗೆ ಕೆಲಸಕ್ಕೆ ಹೋಗುತ್ತಿದ್ದಳು. ಜೀವನಾಂಶ ನೀಡಬೇಕು ಎನ್ನುವ ಕಾರಣಕ್ಕೆ ಮಗನನ್ನು ಕರೆದುಕೊಂಡು ಬಂದ ಜಗದೀಶ್, ಅಶ್ವಿನಿ ಹಾಗೂ ಮಕ್ಕಳ ಜೊತೆಯಲ್ಲಿ ವಾಸವಿದ್ದ.

    ಬುಧವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ನಂತರ ಪತ್ನಿಯನ್ನು ಕೆಲಸಕ್ಕೆ ಬಿಟ್ಟು ಬಂದಿದ್ದ. ಮಧ್ಯಾಹ್ನ ಊಟಕ್ಕೆಂದು ಪತ್ನಿಯನ್ನು ಬೈಕ್‍ನಲ್ಲಿ ಮನೆಗೆ ಕರೆದುಕೊಂಡು ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಮಕ್ಕಳು ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ನೋಡಿದಾಗ ಅವರ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಶ್ವಿನಿ ಪೋಷಕರು ಬರುವಿಕೆಗಾಗಿ ಕಾಯುತ್ತಿದ್ದಾರೆ. ಇತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥವಾಗಿದ್ದು, ಪುಟ್ಟ ತಮ್ಮನನ್ನು ಅಕ್ಕ ಸಂತೈಸುತ್ತಿದ್ದು ಕರುಳು ಹಿಂಡುವಂತಿತ್ತು.

    Live Tv
    [brid partner=56869869 player=32851 video=960834 autoplay=true]

  • ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್

    ಮುಂಬೈ: ವಿದ್ಯಾವಂತೆ ಎನ್ನುವ ಕಾರಣಕ್ಕೆ ಮಹಿಳೆಯನ್ನು ಜೀವನ ನಿರ್ವಹಣೆಗೆ ದುಡಿಯುವಂತೆ ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಪುಣೆಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

    ಅರ್ಜಿಯಲ್ಲಿ ವಿಚ್ಛೇದಿತ ಪತ್ನಿ ಪ್ರಸ್ತುತ ಸ್ಥಿರ ಆದಾಯದ ಮೂಲ ಹೊಂದಿದ್ದಾರೆ. ಆದರೆ ನ್ಯಾಯಾಲಯದಿಂದ ಸತ್ಯವನ್ನು ಮರೆಮಾಚಿದ್ದಾರೆ ಎಂದೂ ಆರೋಪಿಸಿದ್ದರು. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

    ಈ ಕುರಿತು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮಹಿಳೆ ಶೈಕ್ಷಣಿಕ ಪದವಿ, ಅರ್ಹತೆ ಹೊಂದಿದ್ದರೂ ಕೆಲಸ ಮಾಡಬಹುದು ಇಲ್ಲವೇ ಮನೆಯಲ್ಲೇ ಉಳಿಯುವ ಆಯ್ಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

    ಮನೆಯ ಮಹಿಳೆ ಆರ್ಥಿಕವಾಗಿ ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಏಕೆಂದರೆ ಅದು ಮಹಿಳೆಯ ಆಯ್ಕೆಯಾಗಿದೆ. ಆದ್ದರಿಂದ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಲಾಗುವುದಿಲ್ಲ. ಪದವೀಧರಳು ಎಂಬ ಕಾರಣಕ್ಕೆ ಕುಳಿತುಕೊಳ್ಳಬಾರದು ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ `ನಾನಿಂದು ನ್ಯಾಯಧೀಶನಾಗಿದ್ದೇನೆ, ನಾಳೆ ಮನೆಯಲ್ಲೇ ಕುಳಿತುಕೊಳ್ಳಬಹುದು. ಆಗ ನಾನು ನ್ಯಾಯಾಧೀಶನಾಗಲು ಅರ್ಹನಾಗಿದ್ದೇನೆ ಮನೆಯಲ್ಲಿ ಕುಳಿತುಕೊಳ್ಳಬಾರದು’ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದೆ.

    ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯವು ಆಕೆ ಪತಿಯೊಂದಿಗೆ ವಿಚ್ಛೇದನ ಪಡೆದ ನಂತರ ಜೀವನಾಂಶ ಪಡೆಯುವ ಸಾಮರ್ಥ್ಯ ಹೊಂದಿರುತ್ತಾಳೆ ಎಂದು ಹೇಳಿದೆ. ಜೊತೆಗೆ ಅರ್ಜಿದಾರರು ಪತ್ನಿಗೆ ಪ್ರತಿ ತಿಂಗಳು 5 ಸಾವಿರ ಹಾಗೂ ಪ್ರಸ್ತುತ 13 ವರ್ಷದ ಮಗಳು ತಾಯಿಯೊಂದಿಗೆ ವಾಸಿಸುತ್ತಿರುವುದರಿಂದ ಮಗಳ ನಿರ್ವಹಣೆಗಾಗಿ 7 ಸಾವಿರ ಪಾವತಿಸಲು ನ್ಯಾಯಾಲಯ ಸೂಚಿಸಿದೆ.

    ಹೆಚ್ಚಿನ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿದೆ.

  • ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹ ಆಗದಿದ್ದಲ್ಲಿ ಜೀವನಾಂಶ ಪಡೆಯಲು ಅರ್ಹಳು: ಕೋರ್ಟ್‌

    ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹ ಆಗದಿದ್ದಲ್ಲಿ ಜೀವನಾಂಶ ಪಡೆಯಲು ಅರ್ಹಳು: ಕೋರ್ಟ್‌

    ಲಕ್ನೋ: ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹ ಆಗದೇ ಇದ್ದಲ್ಲಿ, ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.

    ವಿಚ್ಛೇದಿತ ಮುಸ್ಲಿಂ ಮಹಿಳೆಯು ‘ಇದ್ದತ್’ (40 ದಿನ) ಅವಧಿ ಮುಗಿದ ನಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸುವುದಾದರೆ, ಆಕೆ ಮರುಮದುವೆಯಾಗದೇ ಇರುವವರೆಗೆ ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳಾಗಿದ್ದಾಳೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತಿಳಿಸಿದೆ. ಇದನ್ನೂ ಓದಿ: ಪೋಷಕರು ಆಯ್ಕೆ ಮಾಡಿದ ಹುಡ್ಗ ಇಷ್ಟವಿಲ್ಲವೆಂದು ಸರ್ಪ್ರೈಸ್‌ ನೆಪದಲ್ಲಿ ಕತ್ತು ಕೊಯ್ದಳು

    ಇಸ್ಲಾಮಿಕ್ ಕಾನೂನಿನಲ್ಲಿ, ವಿಚ್ಛೇದಿತ ಮಹಿಳೆಯು ಮರುಮದುವೆಯಾಗಲು ಸುಮಾರು ಮೂರು ತಿಂಗಳ ಕಾಲ ‘ಇದ್ದತ್’ ಅವಧಿಯಲ್ಲಿ ಕಾಯಬೇಕಾಗುತ್ತದೆ.

    ಸಿಆರ್‌ಪಿಸಿಯ ಸೆಕ್ಷನ್ 125 ರ ನಿಬಂಧನೆಯು ಪ್ರಯೋಜನಕಾರಿ ಶಾಸನವಾಗಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಅದರ ಪ್ರಯೋಜನ ತಲುಪಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ಮಧ್ಯಪ್ರವೇಶ ಮಾಡಲು ನಿರಾಕರಿಸಿದ ಹೈಕೋರ್ಟ್

    ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಕೆ.ಎಸ್.ಪವಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

    ವಿಚಾರಣಾ ನ್ಯಾಯಾಲಯದ ಮುಂದೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಮುಸ್ಲಿಂ ಮಹಿಳೆಗೆ ಜೀವನಾಂಶ ಮೊತ್ತ ಪಾವತಿಯಾಗಬೇಕು ಎಂದು ಪೀಠವು ನಿರ್ದೇಶಿಸಿದೆ.

    ಮುಸ್ಲಿಂ ಮಹಿಳೆಯೊಬ್ಬರು ತನಗೆ ಮತ್ತು ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣಾ ನ್ಯಾಯಾಲಯವು ಜನವರಿ 23, 2007 ರಂದು, ಆದೇಶ ನೀಡಿದ ದಿನಾಂಕದಿಂದ ಅವರಿಗೆ ಜೀವನಾಂಶ ನೀಡುವಂತೆ ಸೂಚಿಸಿತ್ತು. ನಂತರ ಆಕೆಯ ಪತಿಯು ವಿಚಾರಣಾ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಪ್ರತಾಪಗಢದ ಅಡಿಷನಲ್‌ ಸೆಷನ್‌ ಜಡ್ಜ್‌ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    ಪತಿ ಹಾಗೂ ಪತ್ನಿ ಇಬ್ಬರೂ ಮುಸ್ಲಿಂ ಸಮುದಾಯದವರಾಗಿರುವುದರಿಂದ ಪ್ರಕರಣವು 1986ರ ಮುಸ್ಲಿಂ ಮಹಿಳೆ ರಕ್ಷಣೆ ಕಾಯ್ದೆಯಡಿ ಬರುತ್ತದೆ. ಹೀಗಾಗಿ ಸಿಆರ್‌ಪಿಸಿ ಸೆಕ್ಷನ್‌ 125ರಡಿ ಆಕೆ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಡಿಷನಲ್‌ ಸೆಷನ್‌ ಜಡ್ಜ್‌ ರದ್ದುಗೊಳಿಸಿದರು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ವೇಳೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹಳು ಎಂದು ತಿಳಿಸಿತು.

  • ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

    ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

    ನವದೆಹಲಿ: ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ. ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

    ವಿಚ್ಛೇದನದ ಬಳಿಕ ಸಿಆರ್‌ಪಿಸಿ (ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌) ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ಇದನ್ನೂ ಓದಿ: ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    COURT (2)

    ನಿರಂತರವಾಗಿ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿಯೇ ಒಟ್ಟಾಗಿ ಇರುವುದಕ್ಕೆ ಕಠಿಣ ಸಿಆರ್‌ಪಿಸಿ ಸೆಕ್ಷನ್ 125 (4) ಅನ್ವಯಿಸುತ್ತದೆ ಎಂದು ದೇಶದ ಹಲವು ಹೈಕೋರ್ಟ್ಗಳು ಹೇಳಿವೆ ಎಂದು ನ್ಯಾಯಾಲಯ ಹೇಳಿದೆ.

    ವ್ಯಭಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್ಗಳು ತೀರ್ಪನ್ನು ನೀಡಿದ್ದು, ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದ ವಿಚಾರವನ್ನು ಪರಿಹರಿಸಿವೆ. ಸಿಆರ್‌ಪಿಸಿ ಸೆಕ್ಷನ್ 125(4) ಅನ್ನು ಅನ್ವಯಿಸಲು ಪತಿಯು ಪತ್ನಿ ಪೂರ್ಣ ವ್ಯಭಿಚಾರದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಪತಿಯೂ ಸಾಕ್ಷಿಯಿಂದ ಸಾಬೀತುಪಡಿಸಬೇಕು. ಹೀಗಾಗಿ, ಯಾವಾಗಲಾದರೊಮ್ಮೆ ಏಕಾಂತದಲ್ಲಿ ನಡೆಸಿದ ವ್ಯಭಿಚಾರವು, ವ್ಯಭಿಚಾರದ ಬದುಕು ಆಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    COURT (1)

    ಸಿಆರ್‌ಪಿಸಿ ಸೆಕ್ಷನ್ 125 ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅದಾಗ್ಯೂ, ಪತ್ನಿಯು ಲಿವಿಂಗ್ ಇನ್ ವ್ಯಭಿಚಾರದಲ್ಲಿದ್ದರೆ, ಪ್ರತ್ಯೇಕವಾಗಿದ್ದರೆ ಅಥವಾ ಸಕಾರಣವಿಲ್ಲದೇ ತನ್ನ ಪತಿಯ ಜೊತೆ ನೆಲೆಸಲು ಪತ್ನಿ ನಿರಾಕರಿಸಿದರೆ ಆಗ ಆಕೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಪ್ರಕಟಿಸಿದೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

    ಅರ್ಜಿದಾರರ ಪರ ವಕೀಲರಾದ ಅಣ್ಣು ನರುಲಾ, ವಿಶಾಲ್ ಸಿಂಗ್, ರವಿಕುಮಾರ್ ಮತ್ತು ಶಿವ ಚೌಹಾಣ್ ವಾದ ಮಂಡಿಸಿದರೆ, ಪ್ರತಿವಾದಿ ಪರ ವಕೀಲ ಎಂ ಶಮಿಖ್ ವಾದ ಮಂಡಿಸಿದ್ದರು.

  • 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಹೈದರಾಬಾದ್: ದಕ್ಷಿಣ ಭಾರತದ ಕ್ಯೂಟ್ ಕಪಲ್ ಆಗಿದ್ದ ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ಶನಿವಾರ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ಇದೀಗ ನಾಗ ಚೈತನ್ಯ ಹಾಗೂ ಅಕ್ಕಿನೇನಿ ಕುಟುಂಬದ ಕಡೆಯಿಂದ 200 ಕೋಟಿ ಜೀವನಾಂಶವನ್ನು ಸಮಂತಾ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಸಮಂತಾ ಹಾಗೂ ನಾಗ ಚೈತನ್ಯ ಶನಿವಾರ ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿವಾಹವಾಗಿ ಕೇವಲ ನಾಲ್ಕೆ ವರ್ಷ ಕಳೆದಿದ್ದು, ಐದನೇ ವರ್ಷ ತುಂಬುತ್ತಿದ್ದಂತೆ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನೆ ಪಡೆದುಕೊಂಡಿದ್ದಾರೆ. ಸದ್ಯ ಸಮಂತಾಗೆ ಜೀವನಾಂಶವಾಗಿ 200 ಕೋಟಿ ರೂ.ವನ್ನು ನೀಡಲು ಅಕ್ಕಿನೇನಿ ಕುಟುಂಬ ಮುಂದಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಈ ಕುರಿತಂತೆ ಸಮಂತಾ ನನಗೆ ಜೀವನಾಂಶ ಬೇಡ ಹಾಗೂ ನಾಗ ಚೈತನ್ಯ ಅಥವಾ ಅವರ ಕುಟುಂಬದವರಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ತಮ್ಮ ಕಠಿಣ ಶ್ರಮ ಹಾಗೂ ಪರಿಶ್ರಮದಿಂದ ಟಾಲಿವುಡ್‍ನಲ್ಲಿ ಸಮಂತಾ ಅಗ್ರಸ್ಥಾನದಲ್ಲಿರುವುದರಿಂದ ವಿಚ್ಛೇದನದಿಂದ ತನಗೆ ಯಾವುದೇ ಹಣದ ಅಗತ್ಯ ಇಲ್ಲ ಎಂದು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಸಮಂತಾ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳಿಂದ ದೂರ ಸರಿದು ಕೆಲಸದ ಕಡೆಗೆ ಗಮನ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  29ರ ವಸಂತಕ್ಕೆ ಕಾಲಿಟ್ಟ ಚಂದನವನದ ಡಿಂಪಲ್ ಕ್ವೀನ್

  • ಪತಿಗೆ 1,248 ಕೋಟಿ ಪರಿಹಾರ ನೀಡಿ ವಿಚ್ಛೇದನ ಪಡೆದ ಗಾಯಕಿ

    ಪತಿಗೆ 1,248 ಕೋಟಿ ಪರಿಹಾರ ನೀಡಿ ವಿಚ್ಛೇದನ ಪಡೆದ ಗಾಯಕಿ

    ನವದೆಹಲಿ: ಹಲವು ಪ್ರಕರಣಗಳಲ್ಲಿ ಪತಿಯೇ ಪತ್ನಿಗೆ ಜೀವನಾಂಶ ನೀಡಿ ವಿಚ್ಛೇದನ ಪಡೆಯುವುದನ್ನು ನೋಡಿರುತ್ತೇವೆ. ಆದರೆ ಹಾಲಿವುಡ್ ಖ್ಯಾತ ಗಾಯಕಿ ಅಡೆಲೆ ವಿಚ್ಛೇದನ ಪಡೆಯಲು ತಮ್ಮ ಪತಿಗೆ ಬರೋಬ್ಬರಿ 1,248 ಕೋಟಿ ರೂ.ಗಳ ಪರಿಹಾರವನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಹೌದು ಶುಕ್ರವಾರ ಅವರ ವಿಚ್ಛೇದನ ಪ್ರಕರಣ ಬಗೆಹರಿದಿದ್ದು, ಪತಿ ಸೈಮನ್ ಕೊನೆಕಿ ಅವರಿಗೆ 171 ಮಿಲಿಯನ್ ಡಾಲರ್ ಪರಿಹಾರ ನೀಡಿ ವಿಚ್ಛೇದನ ಪಡೆದಿದ್ದಾರೆ. ಸೈಮನ್ ಸಹ ಉದ್ಯಮಿಯಾಗಿದ್ದು, ಅಡೆಲೆ ಡ್ರಾಪ್ ಫೋರ್ ಡ್ರಾಪ್ ಚಾರಿಟಿಯ ಸಿಇಒ ಆಗಿದ್ದಾರೆ. ಅಡೆಲೆ ಜೊತೆ ಆಗಮಿಸಿದ್ದ ಸೈಮನ್ ಗುರುವಾರ ಸೆಟಲ್‍ಮೆಂಟ್‍ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅಂತಿಮವಾಗಿದ್ದು, 171 ಮಿಲಿಯನ್ ಡಾಲರ್ ನೀಡಲು ಒಪ್ಪಿದ್ದಾರೆ.

    ಹಣಕಾಸಿನ ಹಾಗೂ ಇತರ ಗೌಪ್ಯ ವ್ಯವಹಾರದ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ನಿರ್ಬಂಧಿಸಲಾಗಿದೆ. ವಿಚ್ಛೇದನ ಪಡೆಯಲು ಅಡೆಲೆಯವರು ತಮ್ಮ ಮಾಜಿ ಪತಿಗೆ ದೊಡ್ಡ ಮೊತ್ತ ಪಾವತಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ವಿಚ್ಛೇದನ ಫೈನಲ್ ಮಾಡಲು ದಂಪತಿ ದಾಖಲೆಗಳನ್ನು ಸಲ್ಲಿಸಿದರೂ, ನ್ಯಾಯಾಧೀಶರ ಅನುಮೋದನೆ ಇಲ್ಲದೆ ವಿವಾಹ ಅಧಿಕೃತವಾಗಿ ಕೊನೆಗೊಳ್ಳುವುದಿಲ್ಲ. ಹೀಗಾಗಿ ತಡವಾಗಿದೆ.

    ಪ್ರಾಥಮಿಕ ಒಪ್ಪಂದದ ಪ್ರಕಾರ, ಅಡೆಲೆ ಹಾಗೂ ಸೈಮನ್ ಇಬ್ಬರೂ ತಮ್ಮ ಎಂಟು ವರ್ಷದ ಮಗ ಏಂಜೆಲೊ ಜೊತೆ ಜಂಟಿಯಾಗಿ ಉತ್ತಮ ಬಂಧನ ಮುಂದುವರಿಸಲು ನಿಶ್ಚಯಿಸಿದ್ದಾರೆ. ಅಲ್ಲದೆ ಇಬ್ಬರೂ ಸೇರಿ ತಮ್ಮ ಮಗನನ್ನು ಪ್ರೀತಿಯಿಂದ ಬೆಳೆಸಲು ಬದ್ಧವಾಗಿರುವುದಾಗಿ ಹೇಳಿಕೊಂಡಿದ್ದಾರೆ.

    ಪ್ರತಿಷ್ಠಿತ ಗ್ರ್ಯಾಮಿ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಗಾಯಕಿ ಅಡೆಲೆ ಅವರು 2011ರಿಂದ ಸೈಮನ್ ಜೊತೆ ಡೇಟಿಂಗ್‍ನಲ್ಲಿದ್ದರು. ಬಳಿಕ ಅಕ್ಟೋಬರ್ 2012ರಲ್ಲಿ ಮಗ ಏಂಜೆಲೊಗೆ ಜನ್ಮ ನೀಡಿದರು. 2016ರಲ್ಲಿ ಲೋ-ಕೀ ಸಮಾರಂಭದಲ್ಲಿ ದಂಪತಿ ವಿವಾಹವಾಗಿದ್ದರು. 2019ರ ಏಪ್ರಿಲ್‍ನಲ್ಲಿ ತಾವು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಬಳಿಕ ಇಬ್ಬರೂ ಬೇರಿಯಾಗಿರುವುದು ಬಹಿರಂಗವಾಗಿ 5 ತಿಂಗಳ ಬಳಿಕ ಗಾಯಕಿ ಕೋರ್ಟ್‍ಗೆ ದಾಖಲೆಗಳನ್ನು ನೀಡಿ ವಿಚ್ಛೇದನ ಪಡೆಯಲು ಮುಂದಾದರು. ಇದೀಗ ಇಬ್ಬರೂ ಸೆಟಲ್‍ಮೆಂಟ್ ಮಾಡಿಕೊಂಡಿದ್ದು, ಅಡೆಲೆ ಅವರು ತಮ್ಮ ಮಾಜಿ ಪತಿ ಸೈಮನ್ ಅವರಿಗೆ 171 ಕೋಟಿ ರೂ. ಪರಿಹಾರ ನೀಡಿ ವಿಚ್ಛೇದನ ಪಡೆದಿದ್ದಾರೆ.

  • ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ

    ಪ್ರತಿ ತಿಂಗಳು ಪತಿಗೆ 2 ಸಾವಿರ ಜೀವನಾಂಶ ನೀಡಿ – 58ರ ಪತ್ನಿಗೆ ಕೋರ್ಟ್ ಆದೇಶ

    ಲಕ್ನೋ: ಪತಿಗೆ ಪ್ರತಿ ತಿಂಗಳು 2 ಸಾವಿರ ರೂ. ಜೀವನಾಂಶ ನೀಡುವಂತೆ 58 ವರ್ಷದ ಮಹಿಳೆಗೆ ಕೋರ್ಟ್ ಆದೇಶಿಸಿದೆ.

    ಮುಜಾಫರ್ ನಗರ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದು, 62 ವರ್ಷದ ಕಿಶೋರಿ ಲಾಲ್ ಸೊಹಂಕರ್ ಟೀ ಅಂಗಡಿ ನಡೆಸುತ್ತಿದ್ದು, ಇವರಿಗೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಆದರೆ 58 ವರ್ಷದ ಇವರ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದವರಾಗಿದ್ದಾರೆ. ಹೀಗಾಗಿ ಇವರಿಗೆ 12 ಸಾವಿರ ರೂ. ಪೆನ್ಷನ್ ಬರುತ್ತದೆ. ಇದರಲ್ಲಿ 2 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶಿಸಿದೆ.

    ಕಿಶೋರ್ ಲಾಲ್ ಸೊಹಂಕರ್ ಮುಜಾಫರ್ ನಗರದ ಖಟುವಾಲಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದು, ಸೇನೆಯಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಇವರ ಪತ್ನಿ 12 ಸಾವಿರ ರೂ. ಪಿಂಚಣಿ ಪಡೆಯುತ್ತಾರೆ.

    ಆರಂಭದಲ್ಲಿ ಕಿಶೋರಿ ಲಾಲ್ ಸೊಹಂಕರ್ ಪತ್ನಿಯನ್ನು ಮನೆಗೆ ಬರುವಂತೆ ನಿರ್ದೇಶಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಪತ್ನಿ ಇವರ ಜೊತೆಗೆ ಇರಲು ಒಪ್ಪಿಲ್ಲ. ಹೀಗಾಗಿ ಸೊಹಂಕರ್ ತನ್ನ ಜೀವನ ನಿರ್ವಹಣೆಗೆ ಪ್ರತಿ ತಿಂಗಳ ಹಣ ಕೊಡಿಸುವಂತೆ ಕೋರ್ಟ್ ಬಳಿ ಮನವಿ ಮಾಡಿದರು ಎಂದು ಸೊಹಂಕರ್ ಪರ ವಕೀಲ ಬಿ.ಕೆ.ತಾಯಲ್ ಅವರು ತಿಳಿಸಿದ್ದಾರೆ.

    ಮಹಿಳೆಯರು ತಮ್ಮ ಗಂಡಂದಿರಿಗೆ ಜೀವನಾಂಶ ಕೊಡುವ ಪ್ರಕರಣಗಳು ನಮ್ಮ ದೇಶದಲ್ಲಿ ತುಂಬಾ ವಿರಳ. ಹೀಗಾಗಿ ಸೊಹಂಕರ್‍ಗೆ ಮಾಸಿಕ ಜೀವನಾಂಶ ನೀಡುವ ಕುರಿತು ಮುನ್ನಿ ದೇವಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ಹಿಡಿಯಿತು ಎಂದು ವಕೀಲರು ತಿಳಿಸಿದ್ದಾರೆ.

  • ತಲೆ ಮರೆಸಿಕೊಂಡಿರುವ ಪತಿಗಾಗಿ ಪತ್ನಿ ಮೊರೆ

    ತಲೆ ಮರೆಸಿಕೊಂಡಿರುವ ಪತಿಗಾಗಿ ಪತ್ನಿ ಮೊರೆ

    – ಜೀವನಾಂಶ ಕೊಡದೆ ಪರಾರಿಯಾದ ಪ್ರಾಧ್ಯಾಪಕ

    ದಾವಣಗೆರೆ: ನ್ಯಾಯಾಲಯದ ಆದೇಶವಿದ್ದರೂ ತಮಗೆ ಜೀವನಾಂಶ ಕೊಡದೆ ತಲೆಮರೆಸಿಕೊಂಡಿರುವ ಪತಿಯನ್ನು ಹುಡುಕಿಕೊಡುವಂತೆ ದಾವಣಗೆರೆಯಲ್ಲಿ ಮಹಿಳೆಯೊಬ್ಬರು ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ನಗರದ ಸಿದ್ಧವೀರಪ್ಪ ಬಡಾವಣೆ ನಿವಾಸಿ ಎಸ್.ರೇಣುಕಾ ಪತಿಗಾಗಿ ಹುಡುಕಾಟ ನಡೆಸುತ್ತಿರುವ ಮಹಿಳೆಯಾಗಿದ್ದಾರೆ. ಈ ಕುರಿತು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿರುವ ರೇಣುಕಾ ಅವರು, ಜಿಲ್ಲೆಯ ಚನ್ನಗಿರಿ ತಾಲೂಕು ನಲೂರು ಗ್ರಾಮದ ವಾಸಿಯಾಗಿರುವ ನನ್ನ ಪತಿ ಅನಾಟಮಿ ಪ್ರೊಫೆಸರ್ ಡಾ. ಟಿ.ಮಂಜಪ್ಪ, ನನ್ನನ್ನು ತೊರೆದು 2ನೇ ಮದುವೆಯಾಗಿದ್ದಾರೆ. ನ್ಯಾಯಾಲಯವು ನನಗೆ 12,000 ರೂ. ಹಾಗೂ ಇಬ್ಬರು ಮಕ್ಕಳಿಗೆ ತಲಾ 2,500 ರೂ. ಮಾಸಿಕ ಜೀವನಾಂಶ ಕೊಡುವಂತೆ 2014ರಲ್ಲಿ ಆದೇಶಿಸಿತ್ತು. ಆದರೂ ಜೀವನಾಂಶ ಕೊಡದೆ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು 2015ರಿಂದ ತಲೆಮರೆಸಿಕೊಂಡಿದ್ದಾರೆ. ಮಾಸಿಕ 2 ಲಕ್ಷ ರೂ.ಗೂ ಹೆಚ್ಚು ವರಮಾನವಿದ್ದರೂ ನನ್ನ ಹಾಗೂ ನನ್ನ ಹಿರಿಯ ಮಗನ ಜೀವನಾಂಶಕ್ಕೆ ಹಣ ಕೊಡದೆ ವಂಚಿಸಿದ್ದಾರೆ. ವಾರೆಂಟ್ ಇದ್ದರೂ ಈವರೆಗೆ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ದೂರಿದ್ದಾರೆ.

    ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾನು ಜೀವನಾಂಶ ಸಿಗದೆ ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿರುವೆ. ಇಬ್ಬರು ಮಕ್ಕಳಲ್ಲಿ ಚಿಕ್ಕ ಮಗನನ್ನು ಪತಿ ಡಾ.ಮಂಜಪ್ಪ ಕರೆದುಕೊಂಡು ಹೋಗಿರುವುದರಿಂದ ಮಕ್ಕಳ ಸಹೋದರತ್ವ ಮತ್ತು ಬಾಲ್ಯದ ಜೀವನವನ್ನು ಒಟ್ಟಿಗೆ ಕಳೆಯುವ ಅವಕಾಶವನ್ನು ತಪ್ಪಿಸಿದ್ದಾರೆ ಎಂದು ಎಸ್.ರೇಣುಕಾ ಆರೋಪಿಸಿದ್ದಾರೆ.

    ಪತಿ ಅನಧಿಕೃತವಾಗಿ ಎರಡನೇ ಮದುವೆಯಾಗಿ ಅವಳೊಂದಿಗೆ ಸಂಸಾರ ಮಾಡಿಕೊಂಡು ಸುಖವಾಗಿದ್ದಾರೆ. ಆಗಾಗ ತಮ್ಮೂರಿಗೆ ಬಂದು ಹೋಗುತ್ತಿದ್ದರೂ ಪೊಲೀಸರು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ನ್ಯಾಯಾಲಯದ ಆದೇಶಗಳಿಗೂ ಬೆಲೆ ಕೊಡದೆ, ಪೊಲೀಸ್ ಅಧಿಕಾರಿಗಳೊಂದಿಗೆ ಶಾಮೀಲಾಗಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು, ಚಾಲ್ತಿಯಲ್ಲಿರುವ ವಾರಂಟ್ ಜಾರಿ ಮಾಡಿ ನನಗೂ ಮತ್ತು ನನ್ನ ಮಗನಿಗೂ ನ್ಯಾಯ ದೊರಕಿಸಿಕೊಡಬೇಕು ಎಂದು ರೇಣುಕಾ ಕಣ್ಣೀರಿಟ್ಟಿದ್ದಾರೆ.