Tag: ಜೀತ ಪದ್ಧತಿ

  • 10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

    10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

    ಬೆಂಗಳೂರು: ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಜೀತಪದ್ಧತಿ ಅಂತ್ಯವಾಗಿಲ್ಲ ಎಂಬುದಕ್ಕೆ ಬೆಂಗಳೂರು ಹೊರವಲಯ ಅನೇಕಲ್ ಮಾತಲಿಂಗಾಪುರ ಸಮೀಪದ ಕಲ್ಲು ಕ್ವಾರಿಯಲ್ಲಿ ಜೀವಂತ ಸಾಕ್ಷಿ ಲಭಿಸಿದೆ.

    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದ ರಾಜಪ್ಪ ಮತ್ತು ಮುನಿಲಕ್ಷ್ಮಮ್ಮ ಕುಟುಂಬ ಕಳೆದ 10 ವರ್ಷಗಳಿಂದ ಕಲ್ಲಿನ ಕ್ವಾರಿಯಲ್ಲಿ ಜೀತದಾಳುಗಳಾಗಿ ದುಡಿಮೆ ಮಾಡಿದ್ದಾರೆ.

     

    ಬೆಂಗಳೂರು ಹೊರವಲಯದಲ್ಲಿರುವ ಕಲ್ಲಿನ ಕ್ವಾರಿ ದಿಲೀಪ್ ಎಂಬವರಿಗೆ ಸೇರಿದ್ದು, ಹತ್ತು ವರ್ಷಗಳ ಹಿಂದೆ ರಾಜಪ್ಪ ಅವರ ಕುಟುಂಬ ಕಲ್ಲು ಕ್ವಾರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಕ್ವಾರಿಯ ಮಾಲೀಕ ದಿಲೀಪ್ ದುಡಿಯಲು ಬಂದ ಇವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ಜೀತಕ್ಕೆ ಇಟ್ಟುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇವರಿಗೆ ಒಂದು ರೂಪಾಯಿ ಸಂಬಳ, ರಜೆ ನೀಡದೆ ಹೊರಗಡೆಯೂ ಬಿಡದೆ ಬೆಳಗ್ಗಿನಿಂದ ಸಂಜೆವರೆಗೂ ದುಡಿಸಿಕೊಂಡಿದ್ದಾರೆ. ಅಲ್ಲದೇ ದುಡಿಮೆಗೆ ತಕ್ಕ ಸಂಬಳವನ್ನು ನೀಡಿಲ್ಲ ಎನ್ನಲಾಗಿದೆ.

    ಈ ಕುರಿತು ಮಾಹಿತಿ ಪಡೆದ ನಗರದ ಎನ್.ಜಿ.ಓ ಸಂಸ್ಥೆಯೊಂದರ ನೆರವಿನಿಂದ ಜಿಗಣಿ ಪೊಲೀಸರು ಹಾಗೂ ಅನೇಕಲ್ ತಹಶೀಲ್ದಾರ್ ದಿನೇಶ್ ಕಾರ್ಯಾಚರಣೆ ನಡೆಸಿ ಜೀತ ನಡೆಸುತ್ತಿದ್ದ ರಾಜಪ್ಪ, ಮುನಿಲಕ್ಷ್ಮಮ್ಮ, ಕಿರಣ್, ಚಿನ್ನರಾಜು, ಮಾದೇಶ, ಗುರುಸ್ವಾಮಿ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಆರೋಪಿ ದಿಲೀಪ್ ನನ್ನು ವಶಕ್ಕೆ ಪಡೆದಿರುವ ಜಿಗಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಮಿಕರು, ಇಷ್ಟು ದಿನಗಳಿಂದ ದುಡಿದ ಶ್ರಮಕ್ಕೆ ಒಂದು ರೂಪಾಯಿಯನ್ನೂ ಪಡೆದಿಲ್ಲ. ನಮ್ಮನ್ನು ನೋಡಲು ಯಾರಾದರೂ ಹತ್ತಿರದ ಸಂಬಂಧಿಕರು ಬಂದರೆ ಅವರನ್ನು ನೋಡಲು ಬಿಡದೆ ಕುಡಿಹಾಕಲಾಗಿತ್ತು. ಕೇವಲ ವಾರಕ್ಕೆ ಅಂಗಡಿಯೊಂದರಿಂದ ಆಹಾರ ಪದಾರ್ಥಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಪ್ರಶ್ನಿಸಿದರೆ ದಿಲೀಪ್ ತಾಯಿ ಸೇರಿ ಹಿಗ್ಗಾಮುಗ್ಗ ಥಳಿಸುತ್ತಿದ್ದರು ಎಂದು ತಿಳಿಸಿದ್ದಾರೆ.

  • ಜೀತದಾಳಾಗಿ ಕೆಲಸ ಮಾಡಲು ಒಪ್ಪದ್ದಕ್ಕೆ ಮೂಗು ಕತ್ತರಿಸಿದ್ರು!

    ಜೀತದಾಳಾಗಿ ಕೆಲಸ ಮಾಡಲು ಒಪ್ಪದ್ದಕ್ಕೆ ಮೂಗು ಕತ್ತರಿಸಿದ್ರು!

     

    ಭೋಪಾಲ್: ಜೀತದಾಳಾಗಿ ಕೆಲಸ ಮಾಡಲು ಒಪ್ಪದಿದ್ದಕ್ಕೆ ಮಹಿಳೆಯ ಮೂಗು ಕತ್ತರಿಸಿರೋ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರೇನ್ವಜಾ ಗ್ರಾಮದಲ್ಲಿ ನಡೆದಿದೆ.

    ಮಹಿಳೆ ಜಾನಕಿ ಧಾನಕ್ ಹಾಗೂ ಆಕೆಯ ಗಂಡ ಜೀತಕ್ಕೆ ದುಡಿಯಲು ನಿರಾಕರಿಸಿದ್ದರಿಂದ ಗ್ರಾಮದ ನರೇಂದ್ರ ರಜ್‍ಪೂತ್ ಹಾಗೂ ಸಾಹಬ್ ಸಿಂಗ್ ಆಕೆಯ ಮೂಗು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮನೆ ಹಾಗೂ ಜಮೀನಿನ ಕೆಲಸ ಮಾಡುವುದಿಲ್ಲ ಎಂದಿದ್ದಕ್ಕೆ ಆರೋಪಿಗಳು ಜಾನಕಿ ಅವರ ಪತಿ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಬಳಿಕ ಜಾನಕಿ ಪತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಆಕೆಯ ಮೂಗು ಕತ್ತರಿಸಿದ್ದಾರೆ. ಕೂಡಲೇ ಜಾನಕಿಯನ್ನು ಬುಂದೇಲ್‍ಖಂಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.

    ಮಹಿಳಾ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನ ಆಲಿಸಲು ಮಧ್ಯಪ್ರದೇಶ ಮಹಿಳಾ ಆಯೋಗ ಬುಧವಾರದಂದು ಆಯೋಜಿಸಿದ್ದ ಕ್ಯಾಂಪ್‍ವೊಂದಕ್ಕೆ ಮಹಿಳೆ ಹೋದಾಗ ಮೂಗು ಕತ್ತರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಆಯೋಗವು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಸಾಗರ್ ಎಸ್‍ಪಿಗೆ ಈ ಬಗ್ಗೆ ತನಿಖೆ ಆರಂಭಿಸುವಂತೆ ಆದೇಶಿಸಿದೆ.

    ಇದೊಂದು ಗಂಭೀರವಾದ ವಿಚಾರ. ಮಹಿಳೆಯನ್ನ ಬಲವಂತವಾಗಿ ಜೀವ ಪದ್ಧತಿಗೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಆಯೋಗದ ಸದಸ್ಯೆ ಲತಾ ವಾಂಖೇಡೆ ಹೇಳಿದ್ದಾರೆ.