ತುಮಕೂರು: ಸಂಸದ ಜಿ.ಎಸ್.ಬಸವರಾಜು ಅವರ ಹಿರಿತನ ಹಾಗೂ ಸಂಸದ ಸ್ಥಾನಕ್ಕೆ ಬೆಲೆ ಕೊಡದೇ ಅವಹೇಳನ ಮಾಡಿದ ಗುಬ್ಬಿ ಜೆ.ಡಿ.ಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರದ್ದು ವಿಕೃತ ಮನೋಭಾವ ಎಂದು ಬಿಜೆಪಿ ಪಕ್ಷ ಟೀಕಿಸಿದೆ.
ಶಾಸಕ ಶ್ರೀನಿವಾಸ್ ಸಂಸದರಿಗೆ ಅವಹೇಳನ ಮಾಡಿದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕ ಪ್ರತಿಭಟಿಸಿದೆ. ನಗರದ ಟೌನ್ ಹಾಲ್ ವೃತ್ತದಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಶಾಸಕ ಶ್ರೀನಿವಾಸ್ ವಿರುದ್ಧ ಘೋಷಣೆ ಕೂಗಿದರು.
ಶ್ರೀನಿವಾಸ್ ಜಿ.ಎಸ್.ಬಸವರಾಜ್ ಗೆ ಅವಹೇಳನ ಮಾಡಿಲ್ಲ. ಬದಲಾಗಿ ಸಂವಿಧಾನದತ್ತವಾದ ಸಂಸದ ಸ್ಥಾನಕ್ಕೆ ಅವಹೇಳನ ಮಾಡುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದರು.
ಮುಖಂಡ ಹೆಬ್ಬಾಕ ರವಿ ಮಾತನಾಡಿ, ಎಸ್.ಆರ್.ಶ್ರೀನಿವಾಸ್ ರದ್ದು ವಿಕೃತ ಮನೋಭಾವ. ಹಾಗಾಗಿ ಅವರ ಬಾಯಿಯಿಂದ ಇಂತಹ ಮಾತುಗಳು ಬರುತ್ತದೆ. ಇಡೀ ದೇಶದಲ್ಲಿ ಇಂತಹ ಘಟನೆ ನಡೆಯಬಾರದು ಎಂದು ಖಂಡಿಸಿದರು. ಯುವ ಮುಖಂಡ ಹನುಮಂತರಾಜು ಮಾತಾಡಿ, ಶ್ರೀನಿವಾಸ್ ಅವರ ಕೊನೆಯ ದಿನ ಹತ್ತಿರವಾದಂತೆ ಕಾಣುತ್ತಿದೆ. ಹಾಗಾಗಿ ತಮ್ಮ ನಾಲಿಗೆ ಹರಿಬಿಡುತ್ತಾರೆ. ಶ್ರೀನಿವಾಸ್ ಆಡಿದ ಕೆಟ್ಟೋದಗಳ ಮಾತನ್ನು ಗುಬ್ಬಿ ಕ್ಷೇತ್ರದ ಮನೆ ಮನೆಗೆ ತಲುಪಿಸಿ ಮುಂದಿನ ದಿನದಲ್ಲಿ ಪಾಠ ಕಲಿಸುತ್ತೆವೆ ಎಂದು ಎಚ್ಚರಿಕೆ ಕೊಟ್ಟರು.
ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.
ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡರು. 550 ಕೋಟಿ ತಂದಿದ್ದೀವಿ ಎಂದ ಬಸವರಾಜುಗೆ 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ ಎಂದು ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು: ನನಗೆ 82 ವರ್ಷ ವಯಸ್ಸಾಗಿದ್ದು, ನಾನು ಸಚಿವನಾಗಲು ಅನರ್ಹನಾಗಿದ್ದೇನೆ ಎಂದು ಹಿರಿಯ ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸಂಪುಟ ಪುನಾರಚನೆಯಲ್ಲಿ ನಿಮಗೆ ಸಚಿವ ಸ್ಥಾನ ಕೈತಪ್ಪಿದೆಯಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಜಿ.ಎಸ್.ಬಸವರಾಜು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 81 ವರ್ಷದ ನನಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಾರೆ. ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ನನಗೆ ಮಂತ್ರಿಗಿರಿಗಿಂತ ಹೆಚ್ಚು ಎಂದು ಪ್ರತಿಕ್ರಿಯಿಸಿದ್ದಾರೆ.
ನಾನು ಹಿರಿಯ ಸಂಸದನಾಗಿರೋದು ಸತ್ಯ ಆದರೆ ನನಗೆ ವಯಸ್ಸಾಗಿರೋದ್ರಿಂದಲೇ ಮಂತ್ರಿಗಿರಿ ತಪ್ಪಿದೆ ಹೊರತು ಬೇರೆ ಕಾರಣದಿಂದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಕ್ಕಿರೋದು ಖುಷಿಯ ವಿಚಾರ ಆಕೆ ಧೈರ್ಯಶಾಲಿ ಮಹಿಳೆಯಾಗಿದ್ದಾಳೆ. ಅದರಂತೆ ಸದಾನಂದ ಗೌಡರೂ ಒಳ್ಳೆಯವರು ಆದರೂ ಸಂಪುಟ ಪುನಾರಚನೆ ಅನಿವಾರ್ಯ ಆದ್ದರಿಂದ ಅವರು ರಾಜೀನಾಮೆ ಕೊಡಬೇಕಾಯಿತು ಎಂದರು.
ತುಮಕೂರು: ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜು ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‍ನವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳೋಕಾಗಲ್ಲ. ಅವರು ಇವತ್ತೇ ಎಲೆಕ್ಷನ್ ನಡೆಯುತ್ತೆ ಅಂತಾರೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಒಬ್ಬರು ಚಂಗಲು ಬಿದ್ದು ಆಟಾ ಆಡಿದ್ದಾರಾ? ಒಬ್ಬ ಬಿಜೆಪಿ ಎಂಎಲ್‍ಎ ಏನಾದರೂ ಈ ವಿಚಾರದ ಬಗ್ಗೆ ಅಪ್ಪಿತಪ್ಪಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಜಿಎಸ್ ಬಸವರಾಜು ಅತಿ ದೊಡ್ಡ ಸುಳ್ಳುಗಾರ ಎಂಬ ಎಸ್.ಅರ್ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್.ಆರ್ ಶ್ರೀನಿವಾಸ್ ಗೆ ಚೆಡ್ಡಿ ಹಾಕುವುದಕ್ಕೆ ಕಾಸ್ ಇರಲಿಲ್ಲ. ಹೆಂಡದಂಗಡಿ ಮಾಡಿಸಿಕೊಟ್ಟೆ. ಚೆನ್ನಾಗಿ ದುಡ್ಡಾಗಿದೆ ನನ್ನನ್ನ ಬೈಬೇಕು ಅಂತಾನೇ ಬೈತಾನೆ. ನಾನು ಯಾಕೆ ಉತ್ತರ ಕೊಡಲಿ. ಅವರಪ್ಪನ ಕೇಳಿದರೆ ಅವನಿಗೆ ಗೊತ್ತಾಗುತ್ತೆ ನಮ್ಮಿಂದ ಏನಾಗಿದೆ ಎಂದು. ಅವರಪ್ಪ ಬಸವರಾಜು ಭ್ರಷ್ಟ ಎಂದು ಹೇಳಿದರೆ ಆಗ ನಾನು ಒಪ್ಪಿಕೊಳ್ಳುತ್ತೇನೆ. ಶ್ರೀನಿವಾಸ್ ನನ್ನ ಮುಂದೆ ಬಚ್ಚ. ಬಾಯಿಗ್ ಬಂದಂತೆ ಮಾತನಾಡುತ್ತಾನೆ. ಗುಬ್ಬಿ ತಾಲೂಕಿಗೆ ಅವನ ಕೊಡುಗೆ ಏನು? ರೈಲನ್ನೂ ನಾನೇ ಬಿಟ್ಟೆ ಅಂತಾನೆ ಎಂದು ವಾಗ್ದಾಳಿ ಮಾಡಿದರು.
ಬಸವರಾಜು ಕಾರನ್ನು ನಾನೇ ಡ್ರೈವ್ ಮಾಡುತ್ತಿದ್ದೆ ಅವನ ಬಗ್ಗೆ ಚೆನ್ನಾಗಿ ಗೊತ್ತು ಎಂಬ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರಪ್ಪ ನನ್ನ ಜೊತೆ ಇರೋನು. ಆಗ ಇವನು ಬರೋನು ಡ್ರೈವರ್ ಕೆಲಸ ಮಾಡಿಕೊಂಡು ಹೋಗೋನು ನನ್ನ ಕೆಲಸ ಏನು ಮಾಡಿಲ್ಲ. ಹೆಂಡದಂಗಡಿಳನ್ನು ಮಂಜೂರು ಮಾಡಿಸಿಕೊಳ್ಳಲು ಕರೆದುಕೊಂಡು ಹೋಗೋನು ಎಂದು ಶ್ರೀನಿವಾಸ್‍ಗೆ ಏಕವಚನದಲ್ಲೇ ಬಸವರಾಜು ಕಿಡಿಕಾರಿದ್ದಾರೆ.
ನವದೆಹಲಿ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಮಂತ್ರಿ ಆಗೇ ಆಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ತುಮಕೂರು ನೂತನ ಸಂಸದ ಜಿ.ಎಸ್ ಬಸವರಾಜು ತಿಳಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸವರಾಜು, ನಾನೊಬ್ಬ ಆಕಾಂಕ್ಷಿ ಅಲ್ಲ. ಆದರೆ ಆಕಾಂಕ್ಷಿ ಅಂದರೆ 100ಕ್ಕೆ 100 ಮಂತ್ರಿ ಆಗುತ್ತೇನೆ ಎಂದಲ್ಲ. ಸಚಿವ ಸ್ಥಾನ ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ ಎಂದರು.
ನನ್ನನ್ನು ಮಂತ್ರಿ ಮಾಡೋದು ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಬಿಟ್ಟಿದ್ದು. ನಾವು ಅವರ ನಿರ್ಧಾರದ ಬಗ್ಗೆ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಸಚಿವ ಸ್ಥಾನ ಕೊಡಬಹುದು ಇಲ್ಲದೆ ಇರಬಹುದು. ನನಗೆ ಇವರೆಗೂ ಹೈಕಮಾಂಡ್‍ನಿಂದ ಯಾವುದೇ ಕರೆ ಬಂದಿಲ್ಲ. ನಾನು ಅದರ ಬಗ್ಗೆ ಯೋಚನೆ ಕೂಡ ಮಾಡುತ್ತಿಲ್ಲ. ಜಾತಿ ಪ್ರದೇಶ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಆಗಬಹುದು ಎಂದರು.
ಶಿಸ್ತು ಎಂಬುವುದು ಬಿಜೆಪಿ ಪಕ್ಷದಲ್ಲಿದೆ. ಶಿಸ್ತು ಇಲ್ಲದ ಕಾರಣ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಬಿಜೆಪಿಯಲ್ಲಿ ಎಲ್ಲರು ಮೆಚ್ಚಿಕೊಳ್ಳುವಂತೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಯಾವುದೇ ಒತ್ತಡ ಇಲ್ಲದೆ ಅವರಿಗೆ ಹೇಗೆ ಬೇಕೋ ಹಾಗೆ ಕೆಲಸ ಮಾಡಬಹುದು. ಸೇವೆ ಮಾಡುವುದಕ್ಕೆ ಯಾವ ಸ್ಥಳವಾದರು ಏನು ಎಂದರು.
ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಎಡವಟ್ಟು ಮಾಡಿದ್ದಾರೆ.
ಅಭ್ಯರ್ಥಿ ಗಳ ವಿಶ್ರಾಂತಿ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಮನಮೋಹನ್ ಸಿಂಗ್ ಪರವಾಗಿ 303, 340, 370 ಹೇಳುತ್ತಾರೆ. ಒಟ್ಟಿನಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ತನ್ನ ತಪ್ಪಿನ ಅರಿವಾಗಿ ಕ್ಷಮಿಸಿ, ಮನಮೋಹನ್ ಸಿಂಗ್ ಅಲ್ಲ ಮೋದಿ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ.
8 ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಹಾಗೆಯೇ ಸುಗಮವಾಗಿ ಚುನಾವಣೆ ನಡೆದಿದೆ. ಭಾರತೀಯ ಜನತಾ ಪಕ್ಷಕ್ಕೆ ಪೂರ್ಣ ಬೆಂಬಲ ಸಿಕ್ಕಿದೆ. ಎಲ್ಲರ ಅಭಿಪ್ರಾಯವನ್ನು ಇಂದು ಸಂಗ್ರಹಿಸಿದ್ದೇವೆ. ನನ್ನ ಮಟ್ಟಿಗೆ ಇಂದು ನಮ್ಮ ಪಕ್ಷ ಮುನ್ನಡೆ ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸಮೀಕ್ಷೆಗಳು ಅವರವರ ಇಷ್ಟಕ್ಕೆ ಬಂದಂತೆ, ಗಿಣಿ ಶಾಸ್ತ್ರ ಹೇಳಿದಂತೆ ಎಂದು ಎಕ್ಸಿಟ್ ಪೋಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಹಾಲಿ ಸಂಸದ ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಸ್ಪರ್ಧಿಸಿದ್ದಾರೆ.
ತುಮಕೂರು: ಇವತ್ತಿನ ಎಕ್ಸಿಟ್ ಪೋಲ್ ಸಮೀಕ್ಷೆ ನೋಡಿ ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿದ್ದಿದೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ವ್ಯಂಗ್ಯವಾಡಿದ್ದಾರೆ.
ಇಂದಿಗೆ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಎಸ್.ಬಸವರಾಜು ಅವರು, ಮೋದಿ ಮತ್ತೇ ಪ್ರಧಾನಿ ಅನ್ನೋದನ್ನು ಸಮೀಕ್ಷೆ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಎಕ್ಸಿಟ್ ಪೋಲ್‍ನಲ್ಲಿ ಮೋಸ ಇಲ್ಲ. ಇದು ಒಂದು ರೀತಿ ಶಾಸ್ತ್ರ ಹೇಳಿದಹಾಗೆ ನೂರಕ್ಕೆ 80% ಸತ್ಯ ಇರುತ್ತದೆ. ಚುನಾವಣೋತ್ತರ ಸಮೀಕ್ಷೆ ಯಿಂದ ದೇವೇಗೌಡರಿಗೆ ನಿದ್ದೆ ಬರುವುದಿಲ್ಲ. ಈ ಸಮೀಕ್ಷೆ ಬಂದು ಮತ್ತೆ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ಅವರ ಆಸೆಗೆ ತಣ್ಣೀರು ಬಿದ್ದ ಹಾಗಾಗಿದೆ ಎಂದು ಹೇಳಿದರು.
ಅತ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಈ ತೀರ್ಪು ನೀಡಿದ್ದಾರೆ. ಯುವಕರು ಯುವತಿಯರು ಮತ್ತು ಪ್ರಜ್ಞಾವಂತರು ಬಿಜೆಪಿಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಡೈವೋರ್ಸ್ ಪಡೆದ ಗಂಡ ಹೆಂಡತಿ ಇದ್ದ ಹಾಗೆ. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಸರಿಯಾಗಿ ಕೆಲಸ ಮಾಡಿಲ್ಲ. ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಹಾಕಿದರೆ ತುಮಕೂರಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ನೋಡಿದರೆ ಡೈವೋರ್ಸ್ ಕೊಟ್ಟ ಗಂಡ, ಹೆಂಡತಿ ಮಗಳ ಮದುವೆಗೆ ಬಂದಹಾಗೆ ಬಂದು ಹೋಗಿದ್ದಾರೆ. ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.
ಕಲ್ಪತರುನಾಡು ತುಮಕೂರಿನಲ್ಲಿ ಈಗ ಜಿದ್ದಾಜಿದ್ದಿನ ಅಖಾಡ ನಿರ್ಮಾಣವಾಗಿದೆ. ರಾಜಕಾರಣದ ಕಡೆಯ ಮಗ್ಗುಲಿಗೆ ಬಂದು ನಿಂತಿರುವ ದೇವೇಗೌಡರು ಮೊಮ್ಮಗ ಪ್ರಜ್ವಲ್‍ಗಾಗಿ ತುಮಕೂರಿಗೆ ವಲಸೆ ಬಂದಿದ್ದಾರೆ. ನಾಲ್ಕು ಬಾರಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್ ನೀಡುವ ಮೂಲಕ ಈ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
ತುಮಕೂರು ಲೋಕಸಭಾ ಕ್ಷೇತ್ರ 1952 ರಿಂದ ಒಂದು ಉಪಚುನಾವಣೆ ಸೇರಿದಂತೆ 17 ಸಾರ್ವತ್ರಿಕ ಚುನಾವಣೆ ಕಂಡಿದೆ. ಇಲ್ಲಿ ಕಾಂಗ್ರೆಸ್ 11 ಬಾರಿ, ಬಿಜೆಪಿ 4 ಬಾರಿ, ಪ್ರಜಾ ಸೋಶಿಯಲಿಸ್ಟ್ ಹಾಗೂ ಜನತಾದಳ ತಲಾ ಒಂದು ಬಾರಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ವಿರುದ್ಧ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗೆಲುವು ಸಾಧಿಸಿದ್ದರು. ಈಗ ಮೈತ್ರಿಯ ಧರ್ಮದ ಟಿಕೆಟ್ ಹಂಚಿಕೆಯಲ್ಲಿ ಬಿಟ್ಟು ಕೊಟ್ಟಿರುವ ಏಕೈಕ ಹಾಲಿ ಸಂಸದರ ಕ್ಷೇತ್ರ ತುಮಕೂರು. ಸಿದ್ದರಾಮಯ್ಯ ಆಪ್ತ ಕೆ.ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ ಇಬ್ಬರು ಬಂಡಾಯ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸಿ ಕೊನೆ ಕ್ಷಣದಲ್ಲಿ ವಾಪಸ್ ಪಡೆದಿದ್ದರೂ, ದೇವೇಗೌಡರಿಗೆ ಕಂಟಕ ತಪ್ಪಿದ್ದಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ತುಮಕೂರು ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಲಿಂಗಾಯತ ಹಾಗೂ ಒಕ್ಕಲಿಗ ಮತದಾರರೂ ಸಮ ಪ್ರಮಾಣದಲ್ಲಿದ್ದರೂ ಅಹಿಂದ ಮತಗಳೇ ನಿರ್ಣಾಯಕವಾಗಲಿದೆ ಎನ್ನುವುದೇ ಸ್ಪಷ್ಟ.
ತುಮಕೂರು ಒಟ್ಟು ಮತದಾರರು: ತುಮಕೂರು ಲೋಕಸಭಾ ಕ್ಷೇತ್ರ 15,94,703 ಮತದಾರರನ್ನು ಹೊಂದಿದೆ. ಇವುಗಳಲ್ಲಿ ಮಹಿಳಾ ಮತದಾರರು 7,97,191 ಮತ್ತು ಪುರುಷ ಮತದಾರರು 7,97,512ರಷ್ಟಿದ್ದಾರೆ. ಜಾತಿವಾರು ನೋಡೋದಾದ್ರೆ ಒಕ್ಕಲಿಗ ಸಮುದಾಯ 3.20 ಲಕ್ಷ, ಲಿಂಗಾಯತ ಸಮುದಾಯ 3.5 ಲಕ್ಷ, ಎಸ್‍ಸಿ ಸಮುದಾಯ 2.80 ಲಕ್ಷ, ಮುಸ್ಲಿಂ ಸಮುದಾಯ 1.8 ಲಕ್ಷ, ಕುರುಬ ಸಮುದಾಯ 1.70 ಲಕ್ಷ, ಗೊಲ್ಲ ಸಮುದಾಯ 90 ಸಾವಿರ, ತಿಗಳ ಸಮುದಾಯ 80 ಸಾವಿರ, ಇತರೇ ಸಮುದಾಯ 1.30 ಲಕ್ಷರಷ್ಟು ಮತದಾರರನ್ನು ತುಮಕೂರು ಅಖಾಡ ಹೊಂದಿದೆ.
ತುಮಕೂರು ಕ್ಷೇತ್ರ ಕದನ: ತುಮಕೂರು ಕ್ಷೇತ್ರ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಿಜೆಪಿ 4, ಜೆಡಿಎಸ್ 3, ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿವೆ. ತುಮಕೂರು ನಗರ- ಜ್ಯೋತಿ ಗಣೇಶ್ (ಬಿಜೆಪಿ), ತುರುವೇಕೆರೆ – ಮಸಾಲೆ ಜಯರಾಮ (ಬಿಜೆಪಿ), ತಿಪಟೂರು- ಬಿ.ಸಿ.ನಾಗೇಶ್ (ಬಿಜೆಪಿ), ಚಿಕ್ಕನಾಯಕನಹಳ್ಳಿ – ಜೆ.ಸಿ.ಮಾಧುಸ್ವಾಮಿ (ಬಿಜೆಪಿ), ತುಮಕೂರು ಗ್ರಾಮಾಂತರ- ಗೌರಿಶಂಕರ್ (ಜೆಡಿಎಸ್), ಗುಬ್ಬಿ- ಎಸ್.ಆರ್.ಶ್ರೀನಿವಾಸ್ (ಜೆಡಿಎಸ್), ಮಧುಗಿರಿ – ವೀರಭದ್ರಯ್ಯ (ಜೆಡಿಎಸ್) ಮತ್ತು ಕೊರಟಗೆರೆ – ಜಿ.ಪರಮೇಶ್ವರ್ (ಕಾಂಗ್ರೆಸ್)
2014ರ ಫಲಿತಾಂಶ: 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮುದ್ದುಹನುಮೇಗೌಡರು 74,041 (06.68%) ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ವಿರುದ್ಧ ಗೆಲುವು ಸಾಧಿಸಿದ್ದರು. ಎಸ್.ಪಿ.ಮುದ್ದಹನುಮೇಗೌಡ – 4,29,868, ಬಿಜೆಪಿಯ ಜಿ.ಎಸ್.ಬಸವರಾಜು-3,55,827 ಮತ್ತು ಜೆಡಿಎಸ್‍ನ ಎ.ಕೃಷ್ಣಪ್ಪ-2,58,683 ಮತಗಳನ್ನು ಪಡೆದಿದ್ದರು.
2019ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
1. ಹೆಚ್.ಡಿ.ದೇವೇಗೌಡ- ಜೆಡಿಎಸ್
2. ಜಿ.ಎಸ್.ಬಸವರಾಜು- ಬಿಜೆಪಿ
ಹೆಚ್.ಡಿ.ದೇವೇಗೌಡ
ಪ್ಲಸ್ ಪಾಯಿಂಟ್: ಕಾಂಗ್ರೆಸ್, ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರಿಂದ ಎರಡು ಪಕ್ಷದ ಮತಗಳ ಕ್ರೋಢಿಕರಣವಾಗುವ ಸಾಧ್ಯತೆಗಳಿವೆ. ಇತ್ತ ಪುತ್ರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರೋದು ಮತ್ತೊಂದು ಪ್ಲಸ್ ಪಾಯಿಂಟ್. ಒಕ್ಕಲಿಗರ ಪ್ರಶ್ನಾತೀತ ನಾಯಕ ಎಂದು ಕರೆಸಿಕೊಳ್ಳುವ ದೇವೇಗೌಡರಿಗೆ ಒಕ್ಕಲಿಗ ಮತಗಳು ಹೆಚ್ಚಾಗಿರೋದು ಲಾಭದಾಯಕವಾಗಿದೆ. ಒಕ್ಕಲಿಗರ ಜೊತೆಗೆ ಮುಸ್ಲಿಂ, ದಲಿತ, ಹಿಂದುಳಿದವರು ಕೈ ಹಿಡಿದ್ರೆ ಗೆಲುವು ಮತ್ತಷ್ಟು ಸರಳವಾಗಲಿದೆ. ಕ್ಷೇತ್ರದಲ್ಲಿ ದೋಸ್ತಿ ಮತ್ತು ಬಿಜೆಪಿ ಶಾಸಕರ ಬಲ ಸಮವಾಗಿದ್ದು, ಸೋಲಿನ ಭಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈನಸ್ ಪಾಯಿಂಟ್: ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಆರೋಪದ ಜೊತೆಗೆ ಇಬ್ಬರು ಮೊಮ್ಮಕ್ಕಳು ಕೂಡ ಸ್ಪರ್ಧೆ ಮಾಡಿರುವುದು ಹೊಡೆತ ನೀಡುತ್ತೆ ಎನ್ನಲಾಗುತ್ತಿದೆ. ಹೇಮಾವತಿ ನೀರು ತುಮಕೂರಿಗೆ ಹರಿಸಲು ಗೌಡರ ಅಡ್ಡಿ ಆರೋಪಗಳು ಕೇಳಿ ಬಂದಿವೆ. ಕ್ಷೇತ್ರದ ಹೊರಗಿನವರು ಅನ್ನೋದು, ಕಾಂಗ್ರೆಸ್‍ನ ಒಳ ಅಸಮಾಧಾನದ ಕಿಡಿ ಕಾಣಿಸಿಕೊಂಡಿದ್ದು, ಗೊಂದಲದ ನಡುವೆ ಕಡೇ ಕ್ಷಣದಲ್ಲಿ ಕ್ಷೇತ್ರವನ್ನು ದೇವೇಗೌಡರು ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೇಲಗೈ ಸಾಧಿಸಿರೋದು ಮತ್ತೊಂದು ಮೈನಸ್ ಪಾಯಿಂಟ್ ಆಗಿದ್ದರೆ, ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿಸಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿ.ಎಸ್.ಬಸವರಾಜು (ಬಿಜೆಪಿ)
ಪ್ಲಸ್ ಪಾಯಿಂಟ್: ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿದ್ದು, ದೋಸ್ತಿಗಳಲ್ಲಿನ ಒಳ ಜಗಳ, ಕ್ಷೇತ್ರ ಹಂಚಿಕೆಯಲ್ಲಿನ ಅಸಮಾಧಾನದ ಲಾಭ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರಿಗೆ ಸಿಗುವ ಲಕ್ಷಣಗಳಿವೆ. ಪ್ರಧಾನಿ ನರೇಂದ್ರ ಮೋದಿ ಅಲೆ ಜೊತೆಗೆ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆ ಬಸವರಾಜು ಅವರ ಗೆಲುವಿಗೆ ಸಹಕಾರಿ ಆಗಬಹುದು.
ಮೈನಸ್ ಪಾಯಿಂಟ್: ತುಮಕೂರು ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಜಿ.ಎಸ್.ಬಸವರಾಜರಲ್ಲಿ ಮನೆ ಮಾಡಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಮತಗಳ ವಿಭಜೀಕರಣ ಅಸಾಧ್ಯ ಎಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿನ ಅಸಮಾಧಾನ, ನಾಯಕರ ನಡುವೆ ಶೀತಲ ಸಮರಗಳಿಂದ ಒಳ ಹೊಡೆತ ಇದೆ ಎಂದು ಹೇಳಲಾಗುತ್ತಿದೆ.
ತುಮಕೂರು: ಡಿಕೆ ಬ್ರದರ್ಸ್ ಹಾಗೂ ದೇವೇಗೌಡ ಕುಟುಂಬ ಎರಡೂ ಸೇರಿ ತುಮಕೂರಿಗೆ ಬರುವ ಹೇಮಾವತಿಗೆ ನೀರಿಗೆ ಅಡ್ಡ ಹಾಕುವ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ವಿಷಯದಲ್ಲಿ ಡಿಸಿಎಂ ಜಿ. ಪರಮೇಶ್ವರ್ ಅವರು ಅಮೂಲ್ ಬೇಬಿ ತರಹ ಆಗಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಟೀಕಿಸಿದ್ದಾರೆ.
ಜಿಲ್ಲೆಗೆ ಬರುವ ನೀರನ್ನು ರಾಮನಗರ ತಾಲೂಕಿಗೆ ತೆಗೆದುಕೊಂಡ ಹೋಗಲಾಗುತ್ತಿದೆ. ತುಮಕೂರು ಜಿಲ್ಲೆಗೆ ಇದು ಮರಣ ಶಾಸನವಾಗಲಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲೆಯ ರಾಜಕಾರಣಿಗಳು ನಿದ್ದೆ ಮಾಡ್ತಿದ್ದಾರೆ. ಸಂಸದ ಮುದ್ದಹನುಮೇಗೌಡ ಜಿಲ್ಲೆಯಿಂದ ನೀರು ಬಿಟ್ಟು ಕೊಡಲ್ಲ ಅಂತ ಕಳೆದ ವಾರ ಹೇಳಿದ್ದಾರೆ. ಈಗ ಈ ವಿಚಾರವಾಗಿ ಕ್ರಮ ತೆಗೆದುಕೊಂಡು ಪುರುಷತ್ವ ತೋರಿಸಬೇಕು. ಈ ಕುರಿತು ಹೋರಾಟ ಮಾಡಬೇಕಿದ್ದ ಡಿಸಿಎಂ ಸುಮ್ಮನಿದ್ದಾರೆ. ಪರಮೇಶ್ವರ್ ಅವರು ನಮ್ಮ ದೃಷ್ಟಿಯಲ್ಲಿ ಅಮೂಲ್ ಬೇಬಿ. ಡಿಸಿಎಂಗೆ ಸಮ್ಮಿಶ್ರ ಸರ್ಕಾರದಲ್ಲಿ ಹಾಯಲ್ಲ, ಒದೆಯಲ್ಲ, ಒಳ್ಳೆಯದು ಮಾಡೋಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ಇವರು ಕ್ಯಾಬಿನೇಟ್‍ನಲ್ಲಿ ಈ ಯೋಜನೆ ವಿರೋಧ ವ್ಯಕ್ತಪಡಿಸಬೇಕಾದವರ್ರು ಸುಮ್ಮನ್ನಿದ್ದಾರೆ. ಈಗಿನ ಸರ್ಕಾರಕ್ಕೆ ಮೂರು ಜಿಲ್ಲೆಗಳು ಮಾತ್ರ ಗೊತ್ತು ಬೇರೆ ಜಿಲ್ಲೆಗಳು ಗೊತ್ತಿಲ್ಲ. ರೇವಣ್ಣ ಅವರಿಗಂತೂ ಹೊಳೆನರಸೀಪುರ ಕರ್ನಾಟಕ ಇದ್ದಹಾಗೆ, ಹಾಸನ ಜಿಲ್ಲೆ ಇಂಡಿಯಾ ಇದ್ದಹಾಗೆ. ಅವರಿಗೆ ಅವರ ಜಿಲ್ಲೆ ಮಾತ್ರ ಗೊತ್ತಿರುವುದು. ಹಾಸನ ಜಿಲ್ಲೆಯ ಪಕ್ಕದವರ ನೋವು ಗೊತ್ತಿಲ್ಲ. ಕುಮಾರಸ್ವಾಮಿಯವರು ಸಿಎಂ ಸ್ಥಾನದಲ್ಲಿದ್ದಾರೆ. ಎಲ್ಲರನ್ನು ಕರೆದು ನೀರಿನ ವಿಚಾರವಾಗಿ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿ.ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.