Tag: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು

  • ಹೊಸ ವರ್ಷ ಆಚರಣೆ – 23 ಸೂಚನೆಗಳನ್ನು ಪಾಲಿಸಬೇಕೆಂದ ಶಿವಮೊಗ್ಗ ಪೊಲೀಸರು

    ಹೊಸ ವರ್ಷ ಆಚರಣೆ – 23 ಸೂಚನೆಗಳನ್ನು ಪಾಲಿಸಬೇಕೆಂದ ಶಿವಮೊಗ್ಗ ಪೊಲೀಸರು

    ಶಿವಮೊಗ್ಗ: ಹೊಸ ವರ್ಷಕ್ಕೆ ವಿಶೇಷ ಟೀಂ ಜೊತೆ ಶಿವಮೊಗ್ಗ ಪೊಲೀಸರು ಸಜ್ಜಾಗಿದ್ದು ಸಾರ್ವಜನಿಕರಿಗೆ 23 ಸೂಚನೆಗಳನ್ನು ನೀಡಿದ್ದಾರೆ.

    2020ನೇ ಹೊಸ ವರ್ಷ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಡಿಸೆಂಬರ್ 31ರ ರಾತ್ರಿ ಜಿಲ್ಲಾಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ನಡೆದುಕೊಳ್ಳಬೇಕು. ಹೊಸ ವರ್ಷಾಚರಣೆಯೂ ಯಶಸ್ವಿಯಾಗಿ ಮತ್ತು ಶಾಂತ ರೀತಿಯಿಂದ ಆಚರಿಸುವ ಸಂಬಂಧ ಸಾರ್ವಜನಿಕರು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜ್ ಸೂಚಿಸಿದ್ದಾರೆ.

    1) ನಗರಗಳ ಮತ್ತು ತಾಲೂಕು ಕೇಂದ್ರಗಳಲ್ಲಿನ ಎಲ್ಲಾ ಹೋಟೆಲ್‍ಗಳು, ಭೋಜನ ಗೃಹ, ಕ್ಲಬ್‍ಗಳು, ಆಶ್ರಯ ಸ್ಥಾನಗಳು ಮತ್ತು ಸಂಘಗಳು, ಹಮ್ಮಿಕೊಂಡಿರುವ ಔತಣಕೂಟ/ಸಮಾರಂಭಗಳನ್ನು ಡಿಸೆಂಬರ್ 31ರಂದು ರಾತ್ರಿ ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸುವುದು.

    2) ಹೊಸ ವರ್ಷದ ಔತಣಕೂಟ, ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯುವುದು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳುವುದು. ಏನಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

    3) ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ವಾಹನ ಚಲಾವಣೆ ಮಾಡಬಾರದು. ಪಾನಮತ್ತರಾಗಿ ವಾಹನ ಚಾಲನೆ ಮಾಡಿದವರ ಮೇಲೆ ಡ್ರಂಕ್ & ಡ್ರೈವ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು.

    4) ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲಿ, ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ/ವೀಲಿಂಗ್ ನಡೆಸುವುದು ನಿಷೇಧಿಸಿದೆ. ಇಲಾಖಾ ವತಿಯಿಂದ ಚುರುಕು ಪ್ರತಿಕ್ರಿಯಿಸುವ ತಂಡ ಮತ್ತು ಕಾವಲು ಪಡೆಯನ್ನು ರಚಿಸಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    5) ಹೋಟೆಲ್, ಭೋಜನ ಗೃಹ, ಕ್ಲಬ್‍ಗಳಿಗೆ ಅವರುಗಳೇ ಖಾಸಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲು ಸೂಚಿಸಿರುತ್ತೆ. ಸಿಸಿಟಿವಿ ಅಳವಡಿಸದಿದ್ದಲ್ಲಿ ಅಳವಡಿಸಲು ಸೂಚಿಸಿರುತ್ತೆ.

    6) ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಮುಖ್ಯಸ್ಥರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರಗಳನ್ನು ಸರಹದ್ದಿನ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಒದಗಿಸುವುದು.

    7) ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್, ಬಟ್ಟಿಂಗ್ಸ್, ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು.

    8) ಅನುಮತಿಯನ್ನು ಪಡೆಯದೇ ಬ್ಯಾನರ್, ಬಂಟಿಂಗ್ಸ್, ಧ್ವಜಗಳನ್ನು ಹಾಕಿದ್ದೆ ಆದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

    9) ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಿದ್ದಲ್ಲಿ ಪೂರ್ವಾನುಮತಿ ಪಡೆಯತಕ್ಕದ್ದು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ರೀತಿ ಮೇಲು ಧ್ವನಿಯಲ್ಲಿ ಬಳಕೆ ಮಾಡದೆ, ನಿಗದಿತ ಮಿತಿಯಲ್ಲಿ ಮತ್ತು ಸಮಯದಲ್ಲಿ ಮುಗಿಸುವುದು.

    10) ವಿದೇಶಿಯರು ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಸುರಕ್ಷತೆಗಾಗಿ ಭದ್ರತೆ ಒದಗಿಸುವುದು.

    11) ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುವವರು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟು ಮಾಡದಂತೆ ಆಚರಣೆ ಮಾಡುವುದು.

    12) ಹೊಸ ವರ್ಷದ ಆಚರಣೆಯ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದ್ದಲ್ಲಿ ಆಯೋಜಕರೇ ಜವಬ್ದಾರರು.

    13) ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇದಿಸಿದೆ.

    14) ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು, ಜೂಜಾಟಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇದಿಸಿದೆ.

    15) ಯುವಕರು ಮತ್ತು ವಯಸ್ಕರು ರಸ್ತೆಯಲ್ಲಿ ಹೊಸ ವರ್ಷ ಆಚರಣೆಯ ಕಾರಣದಿಂದ ದುರ್ವರ್ತನೆ ತೋರಬಾರದು.

    16) ಅಬಕಾರಿ ಕಾಯ್ದೆ ಅಡಿಯಲ್ಲಿ ಪರವಾನಗಿ ಅನ್ವಯ ಮದ್ಯ ಮಾರಾಟ ವೇಳೆಯನ್ನು ಅನುಸರಿಸುವುದು.

    17) ರಸ್ತೆಯಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿದೆ.

    18) ಮಹಿಳೆಯರು, ಹೆಣ್ಣು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸುವುದು ಮತ್ತು ಆಯೋಜಿತ ಕಾರ್ಯಕ್ರಮಗಳಲ್ಲಿ ಸ್ಥಳದಲ್ಲಿ ಮಹಿಳೆಯವರಿಗೆ ಆಸನದ ಪ್ರತ್ಯೇಕ ವ್ಯವಸ್ಥೆ ಮಾಡುವುದು.

    19) ಇತರರಿಗೆ ತೊಂದರೆಯಾಗುವ ರೀತಿ ಪಟಾಕಿ ಸುಡುವುದನ್ನು ನಿಷೇಧಿಸಿದೆ.

    20) ಹೊಸ ವರ್ಷದ ಸಮಾರಂಭ ನಡೆಸಿದಲ್ಲಿ ವಿಡಿಯೋ ಚಿತ್ರೀಕರಿಸುವುದು.

    21) ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಹಕರಿಸುವುದು.

    22) ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಅಳವಡಿಸುವುದು.

    23) ಹೊಸ ವರ್ಷ ಆಚರಣೆಯು ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸುವುದು.

    ಹೊಸ ವರ್ಷ ಆಚರಣೆಯನ್ನು ಶಾಂತ ರೀತಿಯಾಗಿ ನೆರವೇರುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಯೋಗ್ಯವಾದ ರೀತಿಯಲ್ಲಿ ಬಂದೋಬಸ್ತ್ ನಿಯೋಜಿಸಿಕೊಂಡಿದೆ. 2020ನೇ ಹೊಸ ವರ್ಷ ಎಲ್ಲರ ಬಾಳಲಿ ನೆಮ್ಮದಿಯನ್ನು ಹಾಗೂ ಸುಖ ಶಾಂತಿಯನ್ನು ತರಲಿ ಎಂದು ಶಿವಮೊಗ್ಗ ಪೊಲೀಸ್ ಇಲಾಖೆ ಹಾರೈಸಿದೆ.

  • ಗಂಗಾಧರ ಚಡಚಣ ಹತ್ಯೆ ಪ್ರಕರಣ ಕುರಿತಂತೆ ನನಗೆ ಬೆದರಿಕೆ ಕರೆ ಬಂದಿದ್ದವು-ನಾಗಠಾಣ ಶಾಸಕ

    ಗಂಗಾಧರ ಚಡಚಣ ಹತ್ಯೆ ಪ್ರಕರಣ ಕುರಿತಂತೆ ನನಗೆ ಬೆದರಿಕೆ ಕರೆ ಬಂದಿದ್ದವು-ನಾಗಠಾಣ ಶಾಸಕ

    ವಿಜಯಪುರ: ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾವೂಕಾರ್ ರಿಂದ ನನಗೆ ಜೀವ ಬೆದರಿಕೆ ಕರೆ ಬಂದಿತ್ತು ಎಂದು ವಿಜಯಪುರದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

    ನನಗೆ ಚುನಾವಣಾ ಪೂರ್ವ ಹಾಗೂ ನಂತರ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಚಡಚಣ ಭಾಗದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಅದೇ ಕಾರಣಕ್ಕೆ ನನಗೆ ಬೆದರಿಕೆ ಕರೆ ಬಂದಿತ್ತು ಎಂದು ಹೇಳಿದರು.

    ಈ ಕುರಿತಂತೆ ಆಗಿನ ಎಸ್ಪಿ ಆಗಿದ್ದ ಕುಲದೀಪ್ ಕುಮಾರ್ ಜೈನ್ ಅವರಿಗೆ ಮಾಹಿತಿ ನೀಡಿದ್ದೆ. ಶಾಸಕನಾದ ಮೇಲೆ ಈಗಿನ ಎಸ್ಪಿ ಅವರಿಗೂ ಸೂಕ್ತ ಭದ್ರತೆ ಒದಗಿಸಲು ಮನವಿ ಮಾಡಿದ್ದೆ. ಆದರೆ ಇದುವರೆಗೂ ನನಗೆ ಸೂಕ್ತ ಭದ್ರತೆ ನೀಡಿಲ್ಲ ಎಂದು ದೂರಿದರು.

    ಇನ್ನು ಧರ್ಮರಾಜ್ ಚಡಚಣ ಎನ್ ಕೌಂಟರ್ ಕೂಡ ನಕಲಿ ಇದೆ. ಧರ್ಮರಾಜ್ ಎನ್ ಕೌಂಟರ್ ಕುರಿತು ತನಿಖೆಗಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಚಡಚಣ ಭಾಗದಲ್ಲಿ ಹಿಂದೆ ನಡೆದ ನರಮೇಧಗಳ ಪ್ರಕರಣಗಳನ್ನು ಮತ್ತೆ ತನಿಖೆ ನಡೆಸಲು ಸಿಎಂ ಮತ್ತು ಡಿಸಿಎಂ ಗೆ ಮನವಿ ಮಾಡುವುದಾಗಿ ಸ್ಪಷ್ಟಪಡಿಸಿದರು.

  • ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೋ ಮಂದಿಗೆ ರವಿ ಚನ್ನಣ್ಣನವರ್ ಮನವಿ

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡೋ ಮಂದಿಗೆ ರವಿ ಚನ್ನಣ್ಣನವರ್ ಮನವಿ

    ಮೈಸೂರು: ಜಿಲ್ಲೆಯಲ್ಲಿ ಕಳೆದ 1 ವರ್ಷ 4 ತಿಂಗಳುಗಳಿಂದ ರಕ್ಷಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಈ ಸಂದರ್ಭದಲ್ಲಿ ಯಾವುದೇ ಜಾತಿ, ಪಂಗಡ, ಧರ್ಮಕ್ಕೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಏಳಿಗೆಗಾಗಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನ ಪಟ್ಟಿದ್ದೇನೆ ಎಂದು ಮೈಸೂರು ಎಸ್‍ಪಿ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ.

    ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ನಾನು ಪರಿಪೂರ್ಣನಲ್ಲ ಆದರೆ ಹುಣಸೂರಿನಲ್ಲಿ ನಡೆದ ಘಟನೆಗೆ ಕುರಿತಂತೆ ಹಲವಾರು ಜನ ಬೇರೆ-ಬೇರೆ ಬಣ್ಣವನ್ನು ಕೊಟ್ಟು ಮಾನ್ಯ ಗೌರವಾನ್ವಿತ ಸಂಸದರಿಗೆ ಮತ್ತು ನನಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ತುಣುಕುಗಳು ಹಾಗೂ ಫೋಟೋಗಳನ್ನು ಬಳಸಿ ಓಟು ಮಾಡಿ, ಯಾರಿಗೆ ನಿಮ್ಮ ಬೆಂಬಲ ಹಾಗೂ ಇನ್ನಿತರ ಬೇಡದ ಪೋಸ್ಟ್ ಗಳನ್ನು ಹಾಕುತ್ತಿರುವುದು ಸರಿಯಲ್ಲ ಎಂದು ಮನವಿ ಮಾಡಿದ್ದಾರೆ.

    ನಾನು ರಕ್ಷಣಾಧಿಕಾರಿ ಹಾಗೂ ಅವರು ಮಾನ್ಯ ಸಂಸದರು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಿತ್ಯ ಕರ್ತವ್ಯ ಮಾಡಬೇಕಾದರೆ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಕಾನೂನಿನ ಅಡಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಹೊರತು ಯಾವುದೇ ವೈಯಕ್ತಿಕ ದ್ವೇಷ ಆಗಲಿ ಭಿನ್ನ ಅಭಿಪ್ರಾಯವಾಗಲಿ ಇಲ್ಲ. ಈ ಘಟನೆಯ ಕುರಿತಂತೆ ಜಿಲ್ಲಾಡಳಿತದ ವತಿಯಿಂದ, ಹುಣಸೂರಿನಲ್ಲಿ ಆದ ಘಟನೆಗಳನ್ನು ಆಧಾರಿತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗುವುದು. ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಮಾನ್ಯ ಜಿಲ್ಲಾಧಿಕಾರಿಗಳು ಮೆರವಣಿಗೆಯನ್ನ ನಿಷೇಧಿಸಿಲ್ಲ, ಮೆರವಣಿಗೆಗೆ ಇನ್ನೊಂದು ಪ್ರದೇಶವನ್ನು ಸೇರಿಸಬೇಕೆಂಬ ಬೇಡಿಕೆ ಇತ್ತು. ಮೆರವಣಿಗೆಯನ್ನು ನಿಷೇಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆದೇಶ ಮಾಡುವುದು, ನಿಷೇಧಿಸುವುದು, ಮಾರ್ಪಡಿಸುವುದು ದಂಡಾಧಿಕಾರಿಗಳಿಗೆ ಸೇರಿದ್ದು. ಪೊಲೀಸ್ ಇಲಾಖೆಗೆ ಮಾರ್ಪಡಿಸುವ ಅಥವಾ ನಿಷೇಧಿಸುವ, ಪರವಾನಗಿ ನೀಡುವ ಅಧಿಕಾರ ಇಲ್ಲ. ಮಾನ್ಯ ದಂಡಾಧಿಕಾರಿಗಳು ಹೊರಡಿಸುವ ಆದೇಶವನ್ನು ಪಾಲೀಸುವುದಷ್ಟೇ ನಮ್ಮ ಜವಾಬ್ದಾರಿ ಹಾಗೂ ನಾವು ಅದನ್ನೆ ಮಾಡಿದ್ದೇವೆ ಎಂದು ಸ್ಪಷ್ಟಡಿಸಿದರು.

    ಮಾನ್ಯ ಸಂಸದರ ಬಗ್ಗೆ ನನಗೆ ಅಪಾರ ಗೌರವವಿದೆ. ಆದ್ದರಿಂದ ದಯಮಾಡಿ ಎಲ್ಲರಲ್ಲೂ ವೈಯಕ್ತಿಕವಾಗಿ ಬೇಡಿಕೊಳ್ಳುವುದೇನೆಂದರೆ ಮಾನ್ಯ ಸಂಸದರ ಹಾಗೂ ನನ್ನ ಭಾವಚಿತ್ರಗಳನ್ನು ಬಳಸಿ ಅವರ ಹೇಳಿಕೆ ಹಾಗೂ ನನ್ನ ಹೇಳಿಕೆಗಳಿಗೆ ಇಲ್ಲ ಸಲ್ಲದ ಹೋಲಿಕೆಗಳನ್ನ ಮಾಡುತ್ತಾ ತಿರುಗೇಟು ಕೊಟ್ಟರು ಎಂದು ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದನ್ನು ನಿಲ್ಲಿಸಬೇಕು. ಹಾಗಾಗಿ ಈ ಸುಳ್ಳು ಸುದ್ದಿಗಳ ಬಗ್ಗೆ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

    https://www.youtube.com/watch?v=26wWJftihNg