Tag: ಜಿಲ್ಲಾ ಕ್ರೀಡಾಂಗಣ

  • ಚಿಕ್ಕಬಳ್ಳಾಪುರ | 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹೈಟೆಕ್ ಮಾಡಲು ಕ್ರಮ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ | 70 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹೈಟೆಕ್ ಮಾಡಲು ಕ್ರಮ: ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಇಲ್ಲಿನ ಸರ್ ಎಂ.ವಿ ಕ್ರೀಡಾಂಗಣವನ್ನು (Sir M.V. Stadium) ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ‌ ಕ್ರೀಡಾ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನೀಲಿನಕ್ಷೆಯನ್ನೂ ಸಿದ್ಧಪಡಿಸಿ ಸಂಪನ್ಮೂಲ ಕ್ರೋಢೀಕರಣದತ್ತ ಚಿಂತನೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ (MC Sudhakar) ಅವರು ತಿಳಿಸಿದರು.

    ಇಂದು ಬೆಳಗ್ಗೆ ಜಿಲ್ಲಾ ಕೇಂದ್ರದಲ್ಲಿನ ಸರ್.ಎಂ.ವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಸಚಿವರು, ಯುವಜನ ಸೇವೆ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    ಜಿಲ್ಲಾ ಕ್ರೀಡಾಂಗಣವನ್ನು ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳೊಂದಿಗೆ ಸುಮಾರು 70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಸಾಧ್ಯತೆಗಳತ್ತ ಚಿಂತನೆ ನಡೆಸಲಾಗುತ್ತಿದೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕೇ? ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಂತಹ ಸಂಸ್ಥೆಗಳಿಗೇ ಜವಾಬ್ದಾರಿ ನೀಡಿ ಅಭಿವೃದ್ಧಿಪಡಿಸಬೇಕೇ? ಇಲ್ಲವೇ ಸರ್ಕಾರದ ಅನುದಾನದಲ್ಲೇ ಅಭಿವೃದ್ಧಿಪಡಿಸಬೇಕೇ? ಎಂಬೆಲ್ಲಾ ದೃಷ್ಟಿಕೋನಗಳಲ್ಲಿ ಚರ್ಚೆ ನಡೆಸಲಾಗುತ್ತಿದೆ.

    ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಸದ್ಯದಲ್ಲೇ ಕ್ರೀಡಾ ವಸತಿ ನಿಲಯವನ್ನು ಉದ್ಘಾಟಿಸಲಾಗುವುದು ಎಂದರು. ಇದನ್ನೂ ಓದಿ: IPL 2025: ಕೊಹ್ಲಿ, ಸಾಲ್ಟ್‌ ಫಿಫ್ಟಿ ಆಟ – 7 ವಿಕೆಟ್‌ ಜಯದೊಂದಿಗೆ ಆರ್‌ಸಿಬಿಗೆ ಶುಭಾರಂಭ; ತವರಲ್ಲಿ ಕೆಕೆಆರ್‌ಗೆ ಮುಖಭಂಗ

  • ರಸ್ತೆ ಮಧ್ಯೆ ವ್ಯಾಯಾಮ ಮಾಡಿ ಕ್ರೀಡಾಪಟುಗಳಿಂದ ಪ್ರತಿಭಟನೆ

    ರಸ್ತೆ ಮಧ್ಯೆ ವ್ಯಾಯಾಮ ಮಾಡಿ ಕ್ರೀಡಾಪಟುಗಳಿಂದ ಪ್ರತಿಭಟನೆ

    ಕೋಲಾರ: ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಯನ್ನು ಖಂಡಿಸಿ ಬೆಳ್ಳಂಬೆಳಗ್ಗೆ ಕೋಲಾರದ ಕ್ರೀಡಾಪಟುಗಳೆಲ್ಲ ರಸ್ತೆ ಮಧ್ಯೆ ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ರಸ್ತೆಯಲ್ಲೇ ವಾಲಿಬಾಲ್ ಆಟವಾಡಿ, ಜಾಗಿಂಗ್ ಹಾಗೂ ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಕ್ರೀಡಾಂಗಣದಲ್ಲಿ ಸೂಕ್ತವಾದ ಸಿಂಥೆಟಿಕ್ ಟ್ರ್ಯಾಕ್ ಮಾಡಿಲ್ಲ. ಕ್ರೀಡಾಂಗಣದಲ್ಲಿ ಹಾಕಿರೋ ಡಾಂಬರಿನಿಂದಾಗಿ ಪ್ರತಿ ನಿತ್ಯ ಕ್ರೀಡಾಪಟುಗಳಿಗೆ ಕಿರಿಕಿರಿ ಉಂಟಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಆರೋಪಿಸಲಾಗಿದೆ.

    ಜಿಲ್ಲೆಯಿಂದ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇದ್ದರೂ ಸ್ಥಳೀಯವಾಗಿ ಕ್ರೀಡಾಪಟುಗಳಿಗೆ ಸರಿಯಾದ ಬೆಂಬಲ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕ್ರೀಡಾಂಗಣದ ಅಭಿವೃದ್ದಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಕೂಡಲೇ ಕ್ರೀಡಾಂಗಣ ಸರಿಪಡಿಸದೆ ಇದ್ದಲ್ಲಿ ಪ್ರತಿನಿತ್ಯ ಹೀಗೆ ರಸ್ತೆ ತಡೆದು ರಸ್ತೆಯನ್ನೇ ಕ್ರೀಡಾಂಗಣ ಮಾಡಿಕೊಳ್ಳಬೇಕಾಗುತ್ತದೆ ಎಂದು ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಬೆಳ್ಳಂಬೆಳಗ್ಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡ ಬೇಕಾಯಿತು. ಇದೇ ವೇಳೆ ಹಿರಿಯರು, ಮಕ್ಕಳು ಸೇರಿದಂತೆ ನೂರಾರು ಜನರು ಪ್ರತಿಭಟನೆಗೆ ಬೆಂಬಲ ನೀಡಿ ಕ್ರಿಡಾಪಟುಗಳಿಗೆ ಸಾಥ್ ನೀಡಿದರು.