Tag: ಜಿಲ್ಲಾಧಿಕಾರಿ ದೀಪಾ ಚೋಳನ್

  • ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ವಲಸೆ ಕಾರ್ಮಿಕರನ್ನು ಸ್ವ-ಸ್ಥಳಕ್ಕೆ ತಲುಪಿಸಿದ ಸಾರಿಗೆ ಸಿಬ್ಬಂದಿಗೆ ಹೂ ಮಳೆ ಸ್ವಾಗತ

    ಹುಬ್ಬಳ್ಳಿ: ಲಾಕ್‍ಡೌನ್‍ನಿಂದಾಗಿ ಪರ ಊರುಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಸ್ವ-ಸ್ಥಳಗಳಿಗೆ ತಲುಪಿಸಲು ಶ್ರಮ ವಹಿಸಿದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಇತರೆ ಸಿಬ್ಬಂದಿಗೆ ಹೂ ಮಳೆಗರೆದು ಅಭಿನಂದನೆ ಸಲ್ಲಿಸಲಾಯಿತು. ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಆಗಮಿಸಿ ಹುಬ್ಬಳ್ಳಿ ವಿಭಾಗದ ಚಾಲಕರು ಹಾಗೂ ನಿರ್ವಾಹಕರುಗಳ ಸಾರ್ಥಕ ಕಾರ್ಯಕ್ಕೆ ಮನದುಂಬಿ ಹರಿಸಿದರು.

    ಕಳೆದ ಮೂರು ದಿನಗಳಿಂದ ಸರ್ಕಾರದ ನಿರ್ದೇಶನದಂತೆ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಬರಮಾಡಿಕೊಳ್ಳುವ ಹಾಗೂ ಜಿಲ್ಲೆಯಿಂದ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ ಹಾಗೂ ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಈ ಕರ್ತವ್ಯದಲ್ಲಿ ನಿರ್ವಹಿಸಿದ್ದಾರೆ. ಇವರುಗಳಿಗೆ ಕೃತಜ್ಞನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

    ಬಳಿಕ ಮಾತನಾಡಿದ ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಹಾಗೂ ಬಿ.ಆರ್.ಟಿ.ಎಸ್. ವ್ಯವಸ್ಥಾಕ ನಿರ್ದೇಶಕರಾದ ರಾಜೇಂದ್ರ ಚೋಳನ್, ಬೆಂಗಳೂರಿನಿಂದ 148 ಬಸ್‍ಗಳಲ್ಲಿ ವಲಸೆ ಕಾರ್ಮಿಕರನ್ನು ಆಗಮಿಸಿದ್ದಾರೆ. 200 ಬಸ್‍ಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಗೆ 14 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯಾಪ್ತಿಯ 8 ಜಿಲ್ಲೆಗಳಿಂದ ಕಳುಹಿಸಿಕೊಡಲಾಗಿದೆ. ಅಲ್ಲದೆ ಇತರೆ ರಾಜ್ಯಗಳಿಗೂ ವಲಸೆ ಕಾರ್ಮಿಕರನ್ನು ಸಂಸ್ಥೆಯ ಬಸ್‍ಗಳಲ್ಲಿ ಕಳುಹಿಸಲಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಚಾಲಕ ನಿರ್ವಾಹಕ ಹಾಗೂ ವೈದ್ಯಕೀಯ ಸಿಬ್ಬಂದಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಇವರಿಗೆ ಸಾವಿರ ರೂಪಾಯಿಗಳ ಗೌರವಧನ ನೀಡಿ ಅಭಿನಂದಿಸಲಾಗಿದೆ. ಸಂಸ್ಥೆಯ ಇತರೆ ಜಿಲ್ಲಾ ಘಟಕಗಳಲ್ಲೂ 1,500ಕ್ಕೂ ಹೆಚ್ಚು ಚಾಲಕ ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

    240 ಕೋಟಿ ರೂಪಾಯಿಗಳ ನಷ್ಟ: ಪ್ರತಿದಿನ ಸಂಸ್ಥೆಯಲ್ಲಿ ಬಸ್‍ಗಳು 5 ಸಾವಿರ ವೇಳಾಪಟ್ಟಿಗಳಲ್ಲಿ 16 ಲಕ್ಷ ಕಿ.ಮೀ. ಸಂಚಾರ ಮಾಡುತ್ತಿದ್ದವು. ಇದರಿಂದ 6 ಕೋಟಿ ಸಾರಿಗೆ ಆದಾಯ ಬರುತ್ತಿತ್ತು. ಕಳೆದ 40 ದಿನಗಳ ಲಾಕ್‍ಡೌನ್ ನಿಂದಾಗಿ ಸುಮಾರು 240 ಕೋಟಿ ರೂ. ನಷ್ಟ ಸಂಸ್ಥೆಗೆ ಉಂಟಾಗಿದೆ. ಬಿ.ಆರ್.ಟಿ.ಎಸ್ ನಗರ ಸಾರಿಗೆಯಿಂದ ಪ್ರತಿದಿನ 15 ಲಕ್ಷ, ತಿಂಗಳಿಗೆ 5 ಕೋಟಿ ಆದಾಯ ಬರುತ್ತಿತ್ತು. ಇದರಲ್ಲೂ ಕೂಡ ನಷ್ಟ ಉಂಟಾಗಿದೆ. ಸಾರಿಗೆ ಮಂತ್ರಿಗಳು ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ನೌಕರರ ಪೂರ್ಣ ಪ್ರಮಾಣ ವೇತನ ನೀಡಲು ಆದೇಶ ನೀಡಿದ್ದಾರೆ.

    ಮೇ 17 ನಂತರ ಸಾಮಾಜಿಕ ಅಂತರದೊಂದಿಗೆ ಬಸ್‍ಗಳನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ಬಸ್ ತನ್ನ ಪೂರ್ಣ ಪ್ರಮಾಣ ಪ್ರಯಾಣಿಕರೊಂದಿಗೆ ಸಂಚರಿಸಿದರೆ ಪ್ರತಿ ಕಿ.ಮೀ. 36 ರೂಪಾಯಿ ವೆಚ್ಚ ಬರುತ್ತದೆ. ಸಾಮಾಜಿಕ ಅಂತರದಡಿ ಪ್ರಯಾಣಿಕರ ಪ್ರಮಾಣವನ್ನು ಶೇ.50 ನಿಗದಿಪಡಿಸಿದೆ ವೆಚ್ಚ 80 ರೂಪಾಯಿಗಳಾಗುತ್ತಿದೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸದ್ಯ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲಾಗುತ್ತಿದ್ದು ಬಸ್ ದರ ಏರಿಸಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಹೆಚ್ .ಆರ್.ರಾಮನ ಗೌಡರ್, ಹುಬ್ಬಳ್ಳಿ ನಗರ ತಹಶೀಲದಾರರಾದ ಶಶಿಧರ ಮಾಢ್ಯಾಳ, ಡಿ.ಟಿ.ಓ. ಅಶೋಕ್ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಚಾಲಕರು, ನಿರ್ವಾಹಕರು, ವೈದ್ಯಾಧಿಕಾರಿಗಳು ಉಪಸ್ಥಿತಿದ್ದರು.

  • ಉಗ್ರರ ಗುಂಡೇಟಿಗೆ ಬಲಿಯಾಗಿಲ್ಲ, ಆತ್ಮಹತ್ಯೆಯಿಂದ ಹುಬ್ಬಳ್ಳಿಯ ಯೋಧ ಸಾವು

    ಉಗ್ರರ ಗುಂಡೇಟಿಗೆ ಬಲಿಯಾಗಿಲ್ಲ, ಆತ್ಮಹತ್ಯೆಯಿಂದ ಹುಬ್ಬಳ್ಳಿಯ ಯೋಧ ಸಾವು

    ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನಮಂತಪ್ಪ ಓಲೇಕಾರ(29) ಹುತಾತ್ಮರಾಗಿದ್ದರು ಎನ್ನಲಾಗಿತ್ತು. ಆದರೆ ಈಗ ಯೋಧ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸೇನೆ ತಿಳಿಸಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ.

    ಮಂಜುನಾಥ ತಮ್ಮ 20ನೇ ವಯಸ್ಸಿನಲ್ಲಿಯೇ ಭಾರತೀಯ ಸೇನೆಗೆ ಸೇರಿದ್ದರು. ಒಂಬತ್ತು ವರ್ಷದಿಂದ ಸೇನೆಯಲ್ಲಿದ್ದ ಅವರು ಸದ್ಯ ಮದ್ರಾಸ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುನಾಥ ಗಡಿ ಕಾಯಲು ಸೇನೆಗೆ ಮರಳಿದ್ದರು. ಈ ಮೊದಲು ಯೋಧ ಮಂಜುನಾಥ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು ಎಂದು ಮಾಹಿತಿ ಬಂದಿತ್ತು. ಆದರೆ ಈಗ ಭಾರತೀಯ ಸೇನೆ ಯೋಧ ಸಾವನ್ನಪ್ಪಿದ್ದು ಉಗ್ರರ ಅಟ್ಟಹಾಸಕ್ಕಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಕೊಟ್ಟಿದೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಇಂದು ಸೇನೆಯಿಂದ ಈ ಮಾಹಿತಿ ರವಾನೆಯಾಗಿದೆ. ಯೋಧ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೆ ಯಾವುದೇ ಸರ್ಕಾರಿ ಗೌರವ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಆದರೆ ಖಾಸಗಿಯಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಅಂತ್ಯ ಸಂಸ್ಕಾರಕ್ಕೆ ಅವಶ್ಯ ನೆರವು ನೀಡುವುದಾಗಿ ಡಿಸಿ ತಿಳಿಸಿದ್ದಾರೆ.

    ಈಗಾಗಲೇ ಸ್ವಗ್ರಾಮಕ್ಕೆ ಯೋಧ ಮಂಜುನಾಥ ಓಲೇಕಾರ ಅವರ ಪಾರ್ಥೀವ ಶರೀರ ತಲುಪಿದ್ದು, ಗ್ರಾಮದಲ್ಲಿ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯೋಧನ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.