Tag: ಜಿಲ್ಲಾಧಿಕಾರಿ ಕಚೇರಿ

  • ಪಶುವೈದ್ಯರ ನಿರ್ಲಕ್ಷಕ್ಕೆ 50 ಕುರಿಗಳ ಮಾರಣಹೋಮ

    ಪಶುವೈದ್ಯರ ನಿರ್ಲಕ್ಷಕ್ಕೆ 50 ಕುರಿಗಳ ಮಾರಣಹೋಮ

    ಗದಗ: ಜಿಲ್ಲೆಯಲ್ಲಿ ಅನಾರೊಗ್ಯಕ್ಕೆ ತುತ್ತಾಗಿ ನಿತ್ಯವೂ ಕುರಿಗಳ ಮಾರಣಹೋಮ ನಡೆಯುತ್ತಿದ್ದರೂ ಪಶು ವೈದ್ಯಾಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅದೇ ರೀತಿ ಗದಗ ಜಿಲ್ಲೆ ಕಳಸಾಪುರ ಗ್ರಾಮದ ಈರಪ್ಪ ಕನ್ಯಾಳ ಎಂಬ ರೈತನಿಗೆ ಸೇರಿದ 50ಕ್ಕೂ ಅಧಿಕ ಕುರಿಗಳು ಏಕಾಏಕಿ ಸಾವನ್ನಪ್ಪಿವೆ. ಎರಡು ದಿನಗಳಾದರೂ ಪಶುವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡದೆ ಇರುವುದಕ್ಕೆ ಸಾವನ್ನಪ್ಪಿವೆ ಎಂಬದು ನೊಂದ ರೈತರ ಆರೋಪವಾಗಿದೆ.

    ತಡವಾಗಿ ಬಂದ ಮುಖ್ಯ ಪಶುವೈದ್ಯಾಧಿಕಾರಿ ಎಸ್.ಎಸ್.ಹೊಸಮಠ ಹಾಗೂ ಸಹಾಯಕಿ ಜಯಮ್ಮಾ ಅವರನ್ನು ರೈತರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಮುಖದಲ್ಲಿ ಬೆವರಿಳಿಸುವ ಮೂಲಕ, ಈಗ್ಯಾಕೆ ಬಂದ್ರಿ, ನಮಗೂ ಸ್ವಲ್ಪ ವಿಷಕೊಡಿ. ನಾವು ಕುರಿಗಳು ಸತ್ತ ಹಾಗೆ ಸಾಯುತ್ತೇವೆ ಎಂದು ಈರಪ್ಪನ ಕುಟುಂಬದವರು ಕಣ್ಣೀರಿಟ್ಟರು. ಕುರಿಗಳನ್ನು ಕಳೆದುಕೊಂಡ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

    ಹಲವಾರು ದಿನಗಳಿಂದ ಕುರಿಗಳು ಸಾವನ್ನಪ್ಪುತ್ತಿದ್ದರೂ ಕಾಯಿಲೆಗೆ ಸೂಕ್ತ ಔಷಧ ದೊರೆಯುತ್ತಿಲ್ಲ. ಕುರಿಗಳು ಕಣ್ಣು ಮುಂದೆಯೇ ಸಾಯುತ್ತಿರುವುದನ್ನು ನೋಡಲಾಗದೇ ಕಣ್ಣೀರಿಡುತ್ತಿದ್ದಾರೆ. ಎಲ್ಲಂದರಲ್ಲಿ ನಿತ್ಯವೂ ಕುರಿಗಳು ಸಾವನ್ನಪ್ಪುತ್ತಿವೆ. ಪಶುವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬರುತ್ತಿಲ್ಲ, ಕುರಿಗಾಹಿಗಳ ಸಮಸ್ಯ ಆಲಿಸುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.

    ಈ ಬಗ್ಗೆ ವೈದ್ಯಾಧಿಕಾರಿ ಕೇಳಿದರೆ, ನಮಗೆ ತಿಳಿಸದೇ ಕುರಿಗಳಿಗೆ ಅತಿಯಾದ ಉಪ್ಪು ನೀರು ಕುಡಿಸಲಾಗಿದೆ. ಹೀಗಾಗಿ ಕುರಿಗಳು ಸಾವನ್ನಪ್ಪಿವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದು ರೈತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು. ಪಶುವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಸೂಕ್ತ ಔಷಧ ದೊರೆಯದಿರುವುದಕ್ಕೆ ಬೇಸತ್ತ ರೈತರು ಮೃತ ಕುರಿಗಳನ್ನು ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಗದಗ ಜಿಲ್ಲಾಡಳಿತ ಭವನದ ಬಳಿಬಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.

    ಜಿಲ್ಲಾಧಿಕಾರಿ ಕಚೇರಿ ಬಳಿ ಕುರಿಗಳನ್ನು ಹಾಕಿ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ರೈತರಿಗೆ ಸಮಾಧಾನ ಪಡಿಸಿ ಸಾಂತ್ವಾನ ಹೇಳಿದರು. ಜಿಲ್ಲೆಯಲ್ಲಿ ಪಶುವೈದಾಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಸಮಸ್ಯ ಬಗೆರಿಸುತ್ತೇನೆ ಹಾಗೂ ನಿಮಗೆ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

  • ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನವರ ಕಾಟ ಹೆಚ್ಚಾಗಿದ್ದು, ಈ ಕೂಡಲೇ ಸಂತ್ರಸ್ತ ಮಹಿಳೆಯರ ಸಾಲ ಮನ್ನಾ ಮಾಡುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳನ್ನು ಮುಚ್ಚುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಮಹಿಳೆಯರು ಈ ಕೂಡಲೇ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದುಕೊಂಡವರ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಜಾರಿಗೆ ತಂದು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಹಿಳೆಯರ ಗುಂಪುಗಳನ್ನಾಗಿ ಮಾಡಿ ಮೈಕ್ರೋ ಫೈನಾನ್ಸ್‌ನವರು ಸಾಲ ನೀಡಿ ನಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ನೊಂದ ಮಹಿಳೆಯರು ಆರೋಪಿಸಿದರು.

    ಗುಂಪಿನ ಆಧಾರದ ಮೇಲೆ ಸಾಲ ನೀಡಿರುವ ಫೈನಾನ್ಸ್‌ನ ಪ್ರತಿನಿಧಿಗಳು ನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಕೂಲಿ ಕೆಲಸವೂ ಇಲ್ಲದಂತಾಗಿದ್ದು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಬಡಜನತೆಗೆ ಸಾಲ ಸೌಲಭ್ಯ ನೀಡಲಾಗುತ್ತಿಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಕಾನೂನುಗಳನ್ನು ಉಲ್ಲಂಘಿಸಿ ವಿಪರೀತ ಬಡ್ಡಿ ವಿಧಿಸಿ ನಮಗೆ ವಿನಾಕಾರಣ ಮೈಕ್ರೋ ಫೈನಾನ್ಸ್ ತೊಂದರೆ ನೀಡುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ.

    ಶೇ. 25ರಿಂದ 40ರವರೆಗೆ ಬಡ್ಡಿ ವಿಧಿಸಿರುವುದು ಅಲ್ಲದೇ, ಸಾಲ ಪಡೆದಿರುವ ಮಹಿಳೆಯರ ಮನೆಗೆ ನಿರಂತರವಾಗಿ ಬಂದು ಕಿರುಕುಳ ನೀಡಲಾಗುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ನೂರಾರು ಮಹಿಳೆಯರ ಸಮಸ್ಯೆ ಮನಗಂಡು ಮೈಕ್ರೋ ಫೈನಾನ್ಸ್‌ನವರ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದೆ. ಜೊತೆಗೆ ಋಣಮುಕ್ತ ಕಾಯ್ದೆ ಜಾರಿಗೆ ತಂದು ನಮ್ಮ ಸಾಲ ಮನ್ನಾ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.

  • ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

    ಶಿವಮೊಗ್ಗ: ಪತಿ ತಲಾಕ್ ನೀಡಿರುವುದನ್ನು ವಿರೋಧಿಸಿ ಇದೀಗ ಆತನ ಪತ್ನಿ ಹಾಗು ಮಗಳು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ತಂದಿದ್ದರೂ ಶಿವಮೊಗ್ಗದಲ್ಲಿ ವಾಟ್ಸಾಪ್ ಮೂಲಕ ಪತಿ ಮಹಾಶಯನೋರ್ವ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.

    ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಹಾಗು ಆಯಿಷಾ ಕಳೆದ 21 ವರ್ಷಗಳ ಹಿಂದೆ ಪರಸ್ವರ ಪ್ರೀತಿಸಿ ವಿವಾಹವಾಗಿದ್ದರು. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮುಸ್ತಫಾ ಬೇಗ್ ತನ್ನ ಪತ್ನಿಯನ್ನು ಶಿವಮೊಗ್ಗದಲ್ಲಿಯೇ ಉಳಿಸಿದ್ದ. ಆದರೆ ಒಂದು ತಿಂಗಳ ಹಿಂದೆ ಇದ್ದಕಿದ್ದಂತೆ ದುಬೈನಲ್ಲಿಯೇ ಕುಳಿತು ಪತ್ನಿ ಆಯಿಷಾಗೆ ವಾಟ್ಸಾಪ್ ನಲ್ಲಿಯೇ ತಲಾಕ್ ನೀಡಿ ಕೈ ತೊಳೆದುಕೊಂಡಿದ್ದಾನೆ.

    ಪತ್ನಿ ಆಯಿಷಾ ಮಾತ್ರ ನನಗೆ ತಲಾಕ್ ಬೇಡ ಪತಿಯೇ ಬೇಕು ನಾನು ಆತನ ಜೊತೆಯೇ ಸಂಸಾರ ನಡೆಸಬೇಕು. ನನಗೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ತಾಯಿ ಮಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ಧರಣಿ ಸ್ಥಳಕ್ಕೆ ಆಗಮಿಸಿ ನೊಂದ ಮಹಿಳೆಯ ಮನವಿ ಆಲಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ನಿಮಗೆ ಕಾನೂನಿನಡಿಯಲ್ಲಿ ನ್ಯಾಯ ಕೊಡಿಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ತಿಳಿಸಿದರೂ ನನಗೆ ನ್ಯಾಯ ಸಿಗುವವರೆಗು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದಾರೆ.

  • ಧಾರವಾಡ ಕಟ್ಟಡ ದುರಂತ-ಗಾಯಾಳುಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

    ಧಾರವಾಡ ಕಟ್ಟಡ ದುರಂತ-ಗಾಯಾಳುಗಳಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

    ಧಾರವಾಡ: ಜಿಲ್ಲೆಯ ಕುಮಾರೇಶ್ವರ ನಗರದ ಕಟ್ಟಡ ದುರಂತ ನಡೆದು ಇಂದಿಗೆ 38 ದಿನಗಳೇ ಕಳೆದಿವೆ. ಮಾರ್ಚ್ 19ರಂದು ನಡೆದ ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದರೆ, 54 ಜನರು ಜೀವಂತವಾಗಿ ಹೊರ ಬಂದಿದ್ದರು. ಅದರಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದುರಂತ ಕುರಿತು 25ಕ್ಕೂ ಹೆಚ್ಚು ಜನರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.

    ಕೈ ಕಾಲು ಮುರಿದುಕೊಂಡ ಗಾಯಾಳುಗಳು ಚೇತರಿಸಿಕೊಂಡಿಲ್ಲ. ಅವರೆಲ್ಲ ಈಗಲೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರಿಗೆ ಬೇಕಾಗಿದ್ದು ಸರ್ಕಾರದ ಪರಿಹಾರ. ಆ ಪರಿಹಾರಕ್ಕಾಗಿ ಅವರೆಲ್ಲ ಕೈಚಾಚುವಂತೆ ಆಗಿದೆ.

    ಇದೇ ಘಟನೆಯಲ್ಲಿ ಅಂಗಡಿ ಮಾಲೀಕರು ಸಾವನ್ನಪ್ಪಿದ್ದರು. ಅವರ ಕುಟುಂಬದವರು ತಮಗೆ ಆದ ನಷ್ಟ ಭರಿಸೊಕೆ ಆಗದೆ ಕಣ್ಣೀರಿಡುವಂತೆ ಆಗಿದೆ. ಕಾರಣ 30 ರಿಂದ 40 ಲಕ್ಷ ಸಾಲ ಮಾಡಿ ಅಂಗಡಿ ತೆರೆದಿದ್ದರು. ಆದರೆ ಜೀವನೂ ಹೋಯಿತು, ಅದರ ಜೊತೆಯಲ್ಲಿ ಅಂಗಡಿನೂ ಹೋಯ್ತು. ಈಗ ಮನೆ ಹಾಗೂ ಮಕ್ಕಳ ಗತಿ ಬೀದಿಗೆ ಬಂದಿವೆ ಎಂದು ಗಾಯಾಳು ಯಲ್ಲಪ್ಪ ಹೇಳುತ್ತಿದ್ದಾರೆ.

    ಈಗಾಗಲೇ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರದ ವತಿಯಿಂದ 2 ಲಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2 ಲಕ್ಷ ಪರಿಹಾರ ನೀಡಲಾಗಿದೆ. ಉಳಿದಂತೆ ಹೆಚ್ಚಿನ ಗಾಯಾಳುಗಳಿಗೆ ಸಹ ಪರಿಹಾರ ನೀಡಲಾಗಿದೆ. ಉಳಿದಂತೆ ಚಿಕ್ಕಪುಟ್ಟ ಗಾಯಾಳುಗಳಿಗೆ ಇನ್ನೂ ಪರಿಹಾರ ನೀಡಬೇಕಿದ್ದು, ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಘಟನೆಯಲ್ಲಿ ಕೈ,ಕಾಲು ಕಳೆದುಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಬಂದಿರುವವರ ಗಾಯವೂ ಚಿಕ್ಕಪುಟ್ಟವಾದುದಲ್ಲ. ಹೀಗಾಗಿ ಪರಿಹಾರ ಏಕೆ ಕೊಟ್ಟಿಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ.

  • ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ಸಿಎಂ ಬರೋವರೆಗೂ ಕಚೇರಿಯಿಂದ ಹೋಗಲ್ಲ ಎಂದು ಪಟ್ಟು ಹಿಡಿದ ವೃದ್ಧೆ

    ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಸ್ಥಳಕ್ಕೆ ಬಂದು ಪರಿಹಾರ ನೀಡುವವರೆಗೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ಹೋಗಲ್ಲ ಎಂದು ವೃದ್ಧೆ ಪಟ್ಟು ಹಿಡಿದು ಕುಳಿತ ಘಟನೆ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹರಿಹರ ತಾಲೂಕಿನ ಬುಳ್ಳಾಪುರ ಗ್ರಾಮದ ರತ್ನಮ್ಮ ಎಂಬ ವೃದ್ಧೆ ಸಿಎಂ ಅವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಗೋಮಾಳ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ವೃದ್ದೆಯ ಮನೆಯನ್ನು ತೆರವು ಮಾಡಲಾಗಿತ್ತು. ದಾವಣಗೆರೆ ಜಿಲ್ಲಾಧಿಕಾರಿಗಳ ಆದೇಶದಂತೆ ಗೋಮಾಳ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಅಧಿಕಾರಿಗಳು ತೆರವು ಮಾಡಿದ್ದರು.

    ಇದರಿಂದ ಮನೆ ಕಳೆದುಕೊಂಡ ವೃದ್ಧೆ, ಹಲವು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಪರಿಹಾರಕ್ಕಾಗಿ ಅಲೆದಾಡಿದ್ದಾರೆ. ತನಗೆ ಮನೆ ಬೇಕು ಎಂದು ಕಚೇರಿಗೆ ಅಲೆದಾಡಿ ವೃದ್ಧೆ ಬೇಸತ್ತಿದ್ದರು. ಆದ್ದರಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕುಳಿತು ಸಿಎಂ ಕುಮಾರಸ್ವಾಮಿಯವರು ಬರಲಿ, ನನ್ನ ಸಮಸ್ಯೆಗೆ ಪರಿಹಾರ ನೀಡಲಿ. ಸಿಎಂ ಬರುವವರೆಗೂ ನಾನು ಹೋಗಲ್ಲ ಅಂತ ಗೋಳಾಡಿದ್ದಾರೆ. ಕೊನೆಗೆ ಕಚೇರಿಯಲ್ಲಿದ್ದ ಅಧಿಕಾರಿಗಳು ವೃದ್ಧೆಯ ಮನ ಓಲೈಸಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಲಾರ ಜಿಲ್ಲಾಧಿಕಾರಿ ಕಟ್ಟಡದ 3ನೇ ಮಹಡಿ ಕಿಟಕಿಯಿಂದ ನವಜಾತ ಶಿಶು ಎಸೆದ್ರು!

    ಕೋಲಾರ ಜಿಲ್ಲಾಧಿಕಾರಿ ಕಟ್ಟಡದ 3ನೇ ಮಹಡಿ ಕಿಟಕಿಯಿಂದ ನವಜಾತ ಶಿಶು ಎಸೆದ್ರು!

    ಕೋಲಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕೋಲಾರ ನಗರದ ಟಮಕಾ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿರುವ ವಿಮಾ ಅಧಿಕಾರಿ ಕಚೇರಿಯ ಕಿಟಕಿಯಿಂದ ಮಗುವನ್ನು ಎಸೆಯಲಾಗಿದೆ.

    ಇಂದು ಮುಂಜಾನೆ ಕಿಡಿಗೇಡಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಮಗುವನ್ನ ಕಚೇರಿಯ ಕಿಟಕಿಯಿಂದ ಬಿಸಾಡಿದ್ದಾರೆ. ಪರಿಣಾಮ ಕಿಟಕಿ ಬಳಿ ರಕ್ತದ ಕಲೆಗಳಾಗಿವೆ. ಆದರೆ ಕಚೇರಿ ಒಳಗೆ ಮಗು ಹೇಗೆ ಬಂತು, ಯಾರಾದರೂ ತಂದು ಉದ್ದೇಶ ಪೂರ್ವಕವಾಗಿ ಹಾಕಿದ್ದಾರಾ ಅನ್ನೋ ಸಾಕಷ್ಟು ಅನುಮಾನಗಳು ಕಚೇರಿ ಸಿಬ್ಬಂದಿಯಲ್ಲಿ ಮೂಡಿವೆ.

    ಕಚೇರಿಯ ಬಾಗಿಲಿಗೆ ಅಳವಡಿಸಿರುವ ಚಿಲಕವನ್ನ ತೆಗೆದು ಯಾರೋ ಒಳಗೆ ಹೋಗಿರುವ ಗುರುತುಗಳು ಪತ್ತೆಯಾಗಿದೆ. ಕಚೇರಿಯಲ್ಲಿ ರಕ್ತದ ಕಲೆಗಲಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

    ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಐನೂರರಿಂದ ಸಾವಿರ ರೂಪಾಯಿ ನೀಡಲೇ ಬೇಕು. ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಿಬ್ಬಂದಿ ಅಲೆದಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕೆಲ ಸಿಬ್ಬಂದಿ ಹಣ ತಗೆದುಕೊಂಡು ಕೀ ಪ್ಯಾಡ್ ಕೆಳಗೆ ಇಡುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮನೆ, ಆಸ್ತಿ ಖರೀದಿ ಸೇರಿದಂತೆ ನೊಂದಣಿ ಮಾಡಿಸಲು ಬಂದವರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.