Tag: ಜಿಲ್ಲಾಧಿಕಾರಿಗಳು

  • ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿ, ಸಿಇಓಗಳಿಗೆ ಸಿಎಂ ಎಚ್ಚರಿಕೆ

    ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿ, ಸಿಇಓಗಳಿಗೆ ಸಿಎಂ ಎಚ್ಚರಿಕೆ

    – ನಾವು, ನೀವೆಲ್ಲಾ ಸವಲತ್ತುಗಳನ್ನ ಅನುಭವಿಸ್ತಿರೋದು ಜನರ ತೆರಿಗೆ ಹಣದಿಂದಲೇ ಅನ್ನೋದನ್ನ ಮರೀಬಾರದು
    – ಎಲ್ಲಾ ಅಧಿಕಾರಿಗಳು ತಾಲೂಕು ಜಿಲ್ಲಾ ಕೇಂದ್ರಗಳಲ್ಲೇ ವಾಸವಿರಬೇಕು; ಸಿಎಂ ತಾಕೀತು

    ಬೆಂಗಳೂರು: ನಾವು, ನೀವೆಲ್ಲ ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದೂ ಜನರ ತೆರಿಗೆ ಹಣದಿಂದಲೇ (Tax Money) ಅನ್ನೋದನ್ನ ಮರೆಯಬಾರದು. ಹಾಗಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೇ ಅಂತಹ ಅಧಿಕಾರಿಗಳ ವಿರುದ್ಧ ನಿಷ್ಠೂರವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

    ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳೊಂದಿಗೆ ನಡೆಸ ಸಭೆಯಲ್ಲಿ ಸಿಎಂ ಮಾತನಾಡಿದರು. ಇದನ್ನೂ ಓದಿ: ಆರ್ಟಿಕಲ್‌-370 ರದ್ದತಿ ಬಳಿಕ ಕಾಶ್ಮೀರ ಸಮೃದ್ಧಿ ಕಂಡಿದೆ – ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

    ಕಾನೂನು ಹಾಳುಮಾಡಿದ್ರೆ ಕ್ರಮ ಕೈಗೊಳ್ಳಿ:
    ಸಂವಿಧಾನ ವಿರೋಧಿ, ಜನ ವಿರೋಧಿ ದುಷ್ಟ ಶಕ್ತಿಗಳು ಕೆಲವು ಕಡೆ ಬಾಲ ಬಿಚ್ಚುತ್ತಿವೆ. ಅವರು ಎಷ್ಟೇ ಪ್ರಭಾವಿ ಆಗಿರಲಿ, ಕಾನೂನು ಹಾಳು ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಇವೆರಡಕ್ಕೂ ನೇರಾ ನೇರಾ ಸಂಬಂಧವಿದೆ. ಹಾಗಾಗಿ ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳೇ ನೇರಹೊಣೆಯಾಗುತ್ತಾರೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.  ಇದನ್ನೂ ಓದಿ:  ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ

    ಡಿಸಿ, ಸಿಇಓಗಳ ಪ್ರವಾಸ ಕಾರ್ಯಕ್ರಮ ಪ್ರಕಟಿಸಿ
    ಮುಂದುವರಿದು ಮಾತನಾಡಿದ ಸಿಎಂ, ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಪ್ರವಾಸ ಕಾರ್ಯಕ್ರಮ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ತಪಾಸಣಾ ವರದಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಲೆಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ನಿರಂತರವಾಗಿ ಭೇಟಿ ನೀಡಬೇಕು. ಮುನ್ಸೂಚನೆ ಇಲ್ಲದೇ ಇಂತಹ ಭೇಟಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು ಎಂದು ಪದೇ ಪದೇ ಸೂಚನೆ ನೀಡಿದ್ದೇನೆ. ಆದರೂ ಕೆಲವರು ಇದನ್ನು ಪಾಲಿಸಿಲ್ಲ ಎನ್ನುವ ವರದಿ ನನಗೆ ಬಂದಿದೆ. ನಿಮ್ಮ ಅಧೀನದಲ್ಲಿರುವ ಇಲಾಖೆಗಳು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿ. ನೀವು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಅಧೀನ ಅಧಿಕಾರಿಗಳು ಕಾರ್ಯನಿರ್ವಹಿಸುವುದನ್ನು ಹೇಗೆ ನಿರೀಕ್ಷಿಸಬಹುದು? ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ ಎಂದು ಅಸಮಾಧಾನ ಹೊರಹಾಕಿದರು.

    ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ. ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಹಕ್ಕು ಒದಗಿಸಲು ಯಾಕೆ ಸಾಧ್ಯವಾಗಿಲ್ಲ? ಜಿಲ್ಲಾಧಿಕಾರಿಗಳು, ಸಿಇಒಗಳು ಇಂತಹ ಹಾಡಿಗಳಿಗೆ ನಿರಂತರ ಭೇಟಿ ನೀಡಬೇಕು ಎಂದು ಸೂಚನೆ ನೀಡಿದರು.

    ಎಲ್ಲಾ ಅಧಿಕಾರಿಗಳು ತಾಲೂಕು ಜಿಲ್ಲಾ ಕೇಂದ್ರಗಳಲ್ಲೇ ವಾಸವಿರಬೇಕು:
    ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಾರೆ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು? ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಲಭ್ಯವಿರಬೇಕು. ಇದನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನನಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಟ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಎಚ್ಚರಿಸಿದರು.

    ಸಭೆಯಲ್ಲಿ ಡಿಸಿ, ಸಿಇಓಗಳಿಗೆ ಸಿಎಂ ಸೂಚನೆ
    ಇನ್ನೂ ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಯಾರೂ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಂತಹ ಶಕ್ತಿಗಳು ಬೆಳೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳು ತಲೆಎತ್ತುತ್ತಿದ್ದು, ಅಂತಹ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಅಂತಹ ವ್ಯಕ್ತಿಗಳೂ ಯಾರೇ ಆಗಿದ್ದರೂ ಅವರನ್ನು ಮಟ್ಟ ಹಾಕುವುದು ಅಂತಹ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕಾದುದು ಡಿಸಿ, ಸಿಇಒ, ಎಸ್ಪಿಗಳ ಜವಾಬ್ದಾರಿ ತಾನೇ. ಹಿಂದಿನ ಸಭೆಯಲ್ಲಿ ನೀಡಿದ ಸೂಚನೆಗಳು, ತೆಗೆದುಕೊಂಡ ನಿರ್ಣಯಗಳಲ್ಲಿ ಕೆಲವು ಇಲಾಖೆಗಳು ಶೇ.100 ರಷ್ಟು ಪ್ರಗತಿ ತೋರಿಸಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಿ ಇಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ನಿಷ್ಠುರವಾಗಿ ಕ್ರಮ ಕೈಗೊಳ್ಳುವುದು ನಮಗೆ ಅನಿವಾರ್ಯ ಆಗುತ್ತದೆ ಅಂತ ವಾರ್ನಿಂಗ್‌ ಕೊಟ್ಟರು.

    ಅಧಿಕಾರಿಗಳೇ ತಪ್ಪು ಮಾಡಿದ್ರೂ ನಿರ್ದಾಕ್ಷಿಣ್ಯ ಕ್ರಮ
    ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಸಿಇಒ ಗಳು ತಮ್ಮ ಅಹಂ ಬದಿಗೊಟ್ಟಿ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಉದ್ದೇಶಕ್ಕೇ ನೀವುಗಳು ಐಎಎಸ್ ಮಾಡಿರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಮತ್ತು ಜನಪರ ಆಶಯಗಳಿಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನೀವೆಲ್ಲಾ ಸಂವಿಧಾನ ಓದಿದ್ದೀರಿ, ಅದರ ಆಶಯಗಳಿಗೆ, ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದೀರಿ ಎಂದು ನಂಬಿದ್ದೇನೆ. ಇದನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ವಿಫಲರಾದವರ ವಿರುದ್ಧ ನಾನು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

    ಆಡಳಿತ ನಡೆಸುತ್ತಿರೋದು ಜನರ ತೆರಿಗೆ ದುಡ್ಡಿನಲ್ಲಿ
    ನಾವು ಜನರ ತೆರಿಗೆ ದುಡ್ಡಿನಲ್ಲಿ ಆಡಳಿತ ನಡೆಸುತ್ತಿದ್ದೇವೆ. ನಾವು ಮತ್ತು ನೀವು ಎಲ್ಲಾ ಸವಲತ್ತುಗಳನ್ನು ಅನುಭವಿಸುತ್ತಿರುವುದು ಜನರ ತೆರಿಗೆ ಹಣದಿಂದ ಎನ್ನುವುದನ್ನು ಮರೆಯಬಾರದು. ಕಾರು, ಮನೆ ಸೇರಿ ಎಲ್ಲಾ ಸವಲತ್ತುಗಳನ್ನು ನಾವು ಕೊಟ್ಟಿರುವುದು ತೆರಿಗೆ ಹಣದಲ್ಲಿ. ಆದ್ದರಿಂದ ಜನಪರ ಧೋರಣೆಯಲ್ಲಿ ಕೆಲಸ ಮಾಡಬೇಕು. ಇದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂದು ತಿಳಿವಳಿಕೆ ನೀಡಿದರು.

    ಈ ವರ್ಷ 700 ಬಾಲ್ಯವಿವಾಹ
    ಇದೇ ವೇಳೆ ಬಾಲ್ಯವಿವಾಹದ ಕುರಿತು ಮಾತನಾಡಿ ಬಾಲ್ಯ ವಿವಾಹ ಆಗುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಏಕೆ ಬರುವುದಿಲ್ಲ? ನಿಮ್ಮ ಕೆಳಗಿನವರು ನಿಮಗೆ ವರದಿ ಮಾಡುವುದಿಲ್ಲವೇ? ಕೆಳಗಿನವರು ನಿಮಗೆ ಹೇಳದಿದ್ದರೆ ನಿಮಗೆ ದಕ್ಷತೆ ಇಲ್ಲ ಎಂದು ಅರ್ಥ. ನಿಮಗೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ,ನಿಮ್ಮ ಬಗ್ಗೆ ಅವರಿಗೆ ಭಯ ಇಲ್ಲ ಎಂದೇ ಅರ್ಥ ಎಂದು ತರಾಟೆಗೆ ತೆಗೆದುಕೊಂಡ ಸಿಎಂ. ಈ ವರ್ಷ 700 ಬಾಲ್ಯ ವಿವಾಹ ನಡೆದಿದೆ, ಬಾಲ್ಯದಲ್ಲೇ ತಾಯಂದಿರಾದ ಘಟನೆಗಳೂ ವರದಿಗಳಾಗಿವೆ. ಈ ಬಗ್ಗೆ ಹಲವು ಕಡೆ ಎಫ್ ಐಆರ್ ಕೂಡ ದಾಖಲಾಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಸ್ವಾತಂತ್ರ‍್ಯ ಬಂದು ಇಷ್ಟ ವರ್ಷಗಳಾದರೂ 700 ಬಾಲ್ಯ ವಿವಾಹ ನಡೆಯುತ್ತಿದೆ ಎಂದರೆ ಹೇಗೆ? ಬಾಲ್ಯವಿವಾಹ ತಡೆಗೆ ಕಾಯ್ದೆ, ಕಾನೂನುಗಳಿವೆ. ಆದರೂ ಇದನ್ನು ಪರಿಣಾಮಕಾರಿಯಾಗಿ ಕೆಲವು ಕಡೆ ಬಳಸಿಲ್ಲ. ಇದು ತಪ್ಪಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

  • ಲಾಕ್‍ಡೌನ್ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಮೋದಿ

    ಲಾಕ್‍ಡೌನ್ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಮೋದಿ

    ನವದೆಹಲಿ: ಜಿಲ್ಲೆಗೆ ಅನುಗುಣವಾಗುವಂತೆ ಕ್ರಮ ಕೈಗೊಳ್ಳಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಸಂಬಂಧ ಸಂಪೂರ್ಣ ಅಧಿಕಾರವನ್ನು ಡಿಸಿಗಳ ಹೆಗಲಿಗೆ ಹಾಕಿದ್ದಾರೆ.

    ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಪ್ರಧಾನಿ, ಲಾಕ್ ಡೌನ್ ನಿರ್ಧಾರವನ್ನು ಜಿಲ್ಲಾಡಳಿತದ ಹೆಗಲಿಗೆ ವಹಿಸಿದ್ದಾರೆ. ಜಿಲ್ಲೆಯ ಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

    ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮೋದಿ ತಿಳಿಸಿದ್ದಾರೆ.  ಇದನ್ನು ಓದಿ: ಜಿಲ್ಲೆಯಲ್ಲಿ ಕಮಾಂಡರ್‌ನಂತೆ ಕೆಲಸ ಮಾಡಿ – ಡಿಸಿಗಳಿಗೆ ಸೂಚನೆ

    ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಅಧಿಕಾರಿಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ ಎಂದರು.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಕೊಡಗು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಮೊದಲಾದ ಜಿಲ್ಲೆಗಳ ಡಿಸಿಗಳ ಜೊತೆ ಪಿಎಂ ಇಂದು ಸಂವಾದ ನಡೆಸಿದರು.

  • ಶಿವಮೊಗ್ಗದಲ್ಲಿ ಕೋವಿಡ್ 19 ಇಳಿಕೆ – ಇನ್ನಷ್ಟು ಕಡಿಮೆ ಮಾಡಿದ್ದಲ್ಲಿ ರಾಜ್ಯಕ್ಕೆ ಮಾದರಿಯಾಗಬಹುದು

    ಶಿವಮೊಗ್ಗದಲ್ಲಿ ಕೋವಿಡ್ 19 ಇಳಿಕೆ – ಇನ್ನಷ್ಟು ಕಡಿಮೆ ಮಾಡಿದ್ದಲ್ಲಿ ರಾಜ್ಯಕ್ಕೆ ಮಾದರಿಯಾಗಬಹುದು

    – ಜಿಲ್ಲಾಧಿಕರಿಗಳ ಜೊತೆ ಸಿಎಂ ಸಭೆ
    – ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮಾಡಿ

    ಬೆಂಗಳೂರು: ಕೋವಿಡ್-19 ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ, ಗುರಿಯಾಧಾರಿತ (ಟಾರ್ಗೆಟ್) ಪರೀಕ್ಷೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ ಪ್ರಮಾಣ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಅಧ್ಯಕ್ಷತೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಇದೇ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.20ರಷ್ಟಿದ್ದ ಕೋವಿಡ್ ಪ್ರಕರಣಗಳನ್ನು ಕಳೆದ ವಾರಗಳಲ್ಲಿ ಶೇ.6ಕ್ಕೆ ಇಳಿಸಲಾಗಿದೆ. ಇದನ್ನು ಇನ್ನಷ್ಟು ಕಡಿಮೆ ಮಾಡಿದಲ್ಲಿ ರಾಜ್ಯಕ್ಕೇ ಮಾದರಿಯಾಗಬಹುದು ಎಂದರು.

    ಸಾಂಕ್ರಾಮಿಕ ರೋಗಕ್ಕೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಮತ್ತು ಸಾಮಾಜಿಕ ಅಂತರವೇ ಮದ್ದು ಎಂಬುದನ್ನು ಜನರು ಅರಿಯಬೇಕು. ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅರಿವಿನ ಒಂದು ಭಾಗವೇ ಹೊರತು ಸರ್ಕಾರಕ್ಕೆ ಇದರಿಂದ ಬೇರೆ ಉದ್ದೇಶ ಇಲ್ಲ ಎಂಬುದನ್ನು ಜನತೆಗೆ ಮನಗಾಣಿಸಬೇಕು ಎಂದು ಅವರು ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.

    ಜನ ಜಾಗೃತಿ ಮುಖಾಂತರ ಮುನ್ನೆಚ್ಚರಿಕೆಯೊಂದಿಗೆ ರೋಗ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಈ ಸಂಬಂಧ ಅಗತ್ಯಗಳಿದ್ದರೆ ಹಿಂಜರಿಯದೆ ನೇರವಾಗಿ ಹೇಳಿ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಕೋವಿಡ್-19 ಸಂಬಂಧಿಸಿದ ಎಸ್.ಒ.ಪಿಗಳನ್ನು ಪಾಲಿಸಿ, ಮರಣ ಪ್ರಮಾಣ ಹೆಚ್ಚದಂತೆ ಕಾಳಜಿವಹಿಸಿ ಎಂದರು.

    ಕೋವಿಡ್ 19 ಪ್ರಕರಣಗಳು ಹೆಚ್ಚಾಗಿರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತುಲನಾತ್ಮಕ ಅಧ್ಯಯನದೊಂದಿಗೆ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಡೆತ್ ಆಡಿಟ್ ಬಗ್ಗೆ ಪರಿಶೀಲಿಸಿದ ಮುಖ್ಯ ಮಂತ್ರಿಗಳು ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಒಂದು ವಿಶೇಷ ತಂಡವನ್ನು ಕಳುಹಿಸಲು ಸೂಚಿಸಿದರು.

    ಜಿಲ್ಲೆಗಳಲ್ಲಿ ಆರ್.ಎ.ಟಿ ಪರೀಕ್ಷೆಗಳನ್ನು ಹೆಚ್ಚು ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮುಖಾಂತರ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಬೇಕು ಹಾಗೂ ಆರೋಗ್ಯ ಕಿಟ್‍ಗಳನ್ನು ನೀಡಬೇಕು. ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಸಮೀಕ್ಷೆ ಮಾಡಿ ತಪಾಸಣೆ ಕೈಗೊಳ್ಳಬೇಕು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಅನಿವಾರ್ಯ ಇದ್ದಲ್ಲಿ ಮಾತ್ರ ಆರ್.ಎ.ಟಿ ಪರೀಕ್ಷೆ ಮಾಡಬೇಕೆಂದು ಸಿಎಂ ಸೂಚಿಸಿದರು.

    ಆಸ್ಪತ್ರೆಗಳಲ್ಲಿ ದಾಖಲಾದ ನಂತರ 72 ಗಂಟೆಗಳೊಳಗೆ ಆಗಿರುವ ಮರಣಗಳ ಕಾರಣವನ್ನು ತಿಳಿಯಲು ಮರಣಗಳ ಆಡಿಟ್ ಮಾಡಬೇಕು. ರಾಜ್ಯದಲ್ಲಿ ಶೇ.50 ರಷ್ಟು ಮರಣಗಳು ಮೊದಲ 72 ಗಂಟೆಗಳಲ್ಲಿ ಆಗಿವೆ. ಹಾಗಾಗಿ ಪರೀಕ್ಷೆಗಳನ್ನು ಮಾಡಿ ಸೋಂಕು ಪತ್ತೆ ಹಚ್ಚುವುದು ಅತಿ ಮುಖ್ಯ. ಈ ಸಂಬಂಧ ಲೋಪಗಳನ್ನು ತಿದ್ದಿಕೊಂಡು ಎಲ್ಲರ ಸಹಕಾರದೊಂದಿಗೆ ರೋಗ ಪ್ರಮಾಣ ಮತ್ತು ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲು ಸಭೆಯಲ್ಲಿ ಸೂಕ್ತ ನಿರ್ದೇಶನಗಳನ್ನು ಮುಖ್ಯಮಂತ್ರಿಗಳು ನೀಡಿದರು.

    ಮೈಸೂರು ಜಿಲ್ಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಮುಂದಿನ ಒಂದು ವಾರದೊಳಗೆ ಪ್ರತ್ಯೇಕ ವರದಿಯನ್ನು ನೀಡಬೇಕು. ದಸರಾ ಕಾರ್ಯಕ್ರಮಗಳು ವರ್ಚುಯಲ್ ಆಗಿ ನಡೆಯಲಿ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಕ್ಲಿನಿಕಲ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ಆರೋಗ್ಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಿಂಚು ಬಡಿದು 23 ಮಂದಿ ದುರ್ಮರಣ, 29 ಜನರಿಗೆ ಗಾಯ

    ಮಿಂಚು ಬಡಿದು 23 ಮಂದಿ ದುರ್ಮರಣ, 29 ಜನರಿಗೆ ಗಾಯ

    ಲಕ್ನೋ: ಶನಿವಾರ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮಿಂಚು ಬಡಿದು ಸುಮಾರು 23 ಮಂದಿ ಸಾವನ್ನಪ್ಪಿದರೆ, ಸುಮಾರು 29 ಮಂದಿಗೆ ಗಾಯವಾಗಿದೆ.

    ಅಧಿಕಾರಿಗಳ ಅಧಿಕೃತ ಹೇಳಿಕೆಯ ಪ್ರಕಾರ, ಅಲಹಾಬಾದ್‍ನಲ್ಲಿ ಎಂಟು, ಮಿರ್ಜಾಪುರದಲ್ಲಿ ಆರು, ಕೌಶಂಬಿಯಲ್ಲಿ ಇಬ್ಬರು ಮತ್ತು ಜಾನ್‍ಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ ರೀಲಿಫ್ ಕಮಿಷನರ್ ಆಫೀಸ್ ವರದಿಯ ಪ್ರಕಾರ ಪ್ರಯಾಗರಾಜ್‍ನಲ್ಲಿ 9 ಮಂದಿ, ಮಿರ್ಜಾಪುರದಲ್ಲಿ 10 ಮತ್ತು ಕೌಶಂಬಿಯಲ್ಲಿ ನಾಲ್ವರು ಗಂಭೀರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

    ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಿಂಚಿಗೆ ಬಲಿಯಾದವರ ಕುಟುಂಬಕ್ಕೆ 4 ಲಕ್ಷ ರೂ. ಗಳ ಪರಿಹಾರವನ್ನು ನೀಡುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಉತ್ತರ ಪ್ರದೇಶದ ಭಡೋಹಿನ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಮಿಶ್ರಾ ಮಾತನಾಡಿ, ವರದಿಯ ಪ್ರಕಾರ ನಮ್ಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಜನರು ಮಿಂಚು ಬಡಿದು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಜೆ ತಡವಾಗಿ ಮಿಂಚು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

  • ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಮಕ್ಕಳು

    ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ ಮಕ್ಕಳು

    ಧಾರವಾಡ: ಇಬ್ಬರು ಬಾಲಕಿಯರು ಧಾರವಾಡದ ಜಿಲ್ಲಾಡಳಿತದ ಸಹಾಯದಿಂದ ರಾಜಸ್ಥಾನದಲ್ಲಿದ್ದ ಹೆತ್ತವರ ಮಡಿಲು ಸೇರಿದ್ದಾರೆ.

    ಲಾಕ್‍ಡೌನ್‍ನಿಂದಾಗಿ 10 ವರ್ಷದ ರೋಮುಕುಮಾರಿ, 08 ವರ್ಷದ ಪೋಸುಕುಮಾರಿ ಇಬ್ಬರು ಬಾಲಕಿಯರು ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪೋಷಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿಯರು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ತಂದೆ-ತಾಯಿಗಳ ಮಡಿಲು ಸೇರಿದ್ದಾರೆ.

    ಕಳೆದ ಎರಡು ತಿಂಗಳ ಹಿಂದೆ ಈ ಮಕ್ಕಳ ಪೋಷಕರು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ಹೋಗಿದ್ದರು. ನಂತರ ಪೋಷಕರು ಮರಳಲು ಆಗದೇ ಮಕ್ಕಳನ್ನೂ ಕರೆತರದೇ ಪರದಾಟ ನಡೆದಿತ್ತು. 50 ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮೇ 07ರಂದು ಶುಭ ಹಾರೈಸಿ ಮಕ್ಕಳನ್ನು ಧಾರವಾಡದಿಂದ ಬೀಳ್ಕೊಟ್ಟಿದ್ದರು. ರಮೇಶ್ ರಾವಲ್ ಅವರು ತಮ್ಮ ಸ್ವಂತ ಕಾರನ್ನು ಸ್ವತಃ ಚಾಲನೆ ಮಾಡಿಕೊಂಡು ದೂರದ ರಾಜಸ್ಥಾನವರೆಗೆ ಹೋಗಿ ಮಕ್ಕಳನ್ನು ಅವರ ಪೋಷಕ ಬಳಿಗೆ ತಲುಪಿಸಿದ್ದಾರೆ. ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಅವರು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಲಿಖಿತ ಪತ್ರವನ್ನು ಬರೆದು ಧನ್ಯವಾದ ತಿಳಿಸಿದ್ದಾರೆ.

  • ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹುಳು ಮಿಶ್ರಿತ ಆಹಾರ ಸೇವಿಸಿ 30ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆದರ್ಶ ವಿದ್ಯಾಲಯಕ್ಕೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ನಿನ್ನೆ ಸಂಭವಿಸಿದ ಘಟನೆಯ ಕುರಿತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಡುಗೆ ತಯಾರಿಸುವ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಕೆ ಮಾಡಿರುವುದೇ ಕಾರಣ ಎಂಬುದು ಭೇಟಿ ವೇಳೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

    ಆದರ್ಶ ವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ತನಿಖೆಗೆ ಆದೇಶಿಸುವಂತೆಯೂ ಮನವಿ ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದ ಅಕ್ಕಿ, ಬೇಳೆ, ಗೋಧಿ ಉತ್ಪನ್ನಗಳಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣಗಳನ್ನು ಬಳಕೆ ಮಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ.

    ನವೆಂಬರ್ ಅಂತ್ಯಕ್ಕೆ ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣ ಬಳಕೆ ಮಾಡುತ್ತಿರುವ ಬಗ್ಗೆ ಆದರ್ಶ ವಿದ್ಯಾಲಯದ ಸಿಬ್ಬಂದಿಗಳನ್ನು ಅಭಿರಾಮ್ ಜಿ ಶಂಕರ್ ಪ್ರಶ್ನಿಸಿ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದಕ್ಕೆ ಶಾಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

  • ರಾಮನಗರ ಹೆದ್ದಾರಿಯಲ್ಲಿ ರಾತ್ರಿ 11ಕ್ಕೆ ಡಾಬಾ, ಹೋಟೆಲ್, ಟೀ ಸ್ಟಾಲ್ ವ್ಯಾಪಾರ ಬಂದ್

    ರಾಮನಗರ ಹೆದ್ದಾರಿಯಲ್ಲಿ ರಾತ್ರಿ 11ಕ್ಕೆ ಡಾಬಾ, ಹೋಟೆಲ್, ಟೀ ಸ್ಟಾಲ್ ವ್ಯಾಪಾರ ಬಂದ್

    ರಾಮನಗರ: ಜಿಲ್ಲೆಯಲ್ಲಿನ ಹೆದ್ದಾರಿಯಲ್ಲಿ ಅಪರಾಧ ಕೃತ್ಯಗಳು ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯ ಹೋಟೆಲ್, ಡಾಬಾ, ಟೀ ಸ್ಟಾಲ್‍ಗಳು ಕೂಡಾ ರಾತ್ರಿ 11 ಗಂಟೆಗೆ ಸಂಪೂರ್ಣ ವ್ಯಾಪಾರವನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಈ ಬಗ್ಗೆ ಪೊಲೀಸ್ ಅಧಿನಿಯಮ 1963ರ ಅಡಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದಾರೆ. ಸಣ್ಣ ಪುಟ್ಟ ಹೋಟೆಲ್‍ಗಳಿಂದ ಹಿಡಿದು ದೊಡ್ಡ ಡಾಬಾಗಳು, ಕೆಫೆ ಡೇಗಳು, ರೆಸ್ಟೋರೆಂಟ್‍ಗಳು ಇನ್ನು ಮುಂದೆ ರಾತ್ರಿ 11ರ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯವಾಗಿದ್ದು, ರಾತ್ರಿ 11 ಗಂಟೆ ನಂತರವೂ ವ್ಯಾಪಾರ ವಹಿವಾಟು ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.

    ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275(ರಾಮನಗರ ಮಾರ್ಗ), ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209(ಕನಕಪುರ ಮಾರ್ಗ) ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 (ಮಾಗಡಿ ಮಾರ್ಗ) ಹಾದು ಹೋಗಿವೆ. ಈ ಹೆದ್ದಾರಿಯ ಅಕ್ಕಪಕ್ಕದಲ್ಲಿ ನೂರಾರು ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ರೆಸಾರ್ಟ್ ಗಳು ಭರ್ಜರಿ ವ್ಯಾಪಾರ ನಡೆಸುತ್ತಿದ್ದು, ಇವುಗಳು ರಾತ್ರಿ 11 ಗಂಟೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.

    ಜಿಲ್ಲಾಡಳಿತದಿಂದ ಆದೇಶ ಜಾರಿಯಾಗಿದೆ. ರಾತ್ರಿ 11ರ ಬಳಿಕ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ. ಮತ್ತೆ ತಪ್ಪು ಮುಂದುವರಿಸಿದಲ್ಲಿ ಅಂಗಡಿ, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ ಯಾವುದೇ ರೀತಿಯ ವಹಿವಾಟು ನಡೆಸುವ ಮಾಲೀಕರ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

    ಭದ್ರತೆಯ ದೃಷ್ಟಿ, ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹಾಗೂ ರಸ್ತೆ ಪ್ರಯಾಣಿಕರ ಸುರಕ್ಷತೆಯೇ ಈ ಆದೇಶಕ್ಕೆ ಮುಖ್ಯ ಕಾರಣವಾಗಿದೆ. ಕಳೆದ 4 ವರ್ಷದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯನ್ನ ಆಧರಿಸಿ ಎಸ್‍ಪಿ ಅನೂಪ್ ಶೆಟ್ಟಿರವರು ಇಂತಹದೊಂದು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಗಣಿಸಿ ಆದೇಶ ಹೊರಡಿಸಿದ್ದಾರೆ.

    ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಾದ್ಯಂತ 2015ರ ಸೆಪ್ಟೆಂಬರ್‍ನಿಂದ ಈವರೆಗೆ ರಾತ್ರಿ ವೇಳೆ 66 ಕೊಲೆ, 14 ದರೋಡೆ, 53 ದರೋಡೆ ಯತ್ನ ಪ್ರಕರಣಗಳು ವರದಿ ಆಗಿವೆ. ಇದೇ ಸಮಯದಲ್ಲಿ 55 ಸುಲಿಗೆ, 12 ಸರಗಳ್ಳತನ, 655 ರಾತ್ರಿ ಕಳವು, 75 ಮನೆ ಕಳ್ಳತನ, 375 ಸಾಧಾರಣ ಕಳ್ಳತನ, 517 ವಾಹನ ಕಳ್ಳತನ, 637 ಮಾರಣಾಂತಿಕ ವಲ್ಲದ ರಸ್ತೆ ಅಪಘಾತ, 229 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪರಾಧ ಕೃತ್ಯಗಳ ನಿಯಂತ್ರಣದ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

    ರಾತ್ರಿ ಹೊತ್ತು ರಸ್ತೆ ಬದಿಯ ಡಾಬಾ, ಕೆಫೆಗಳಲ್ಲಿ ಜನರು ಮನೋರಂಜನೆ ಉದ್ದೇಶಕ್ಕೆ ಹೆಚ್ಚು ಸೇರುತ್ತಿದ್ದು, ತಡರಾತ್ರಿ ಮೋಜು-ಮಸ್ತಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಅಪಘಾತ, ಅಪರಾಧ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಕೋರಿದ್ದರು. ಅದರಂತೆ ರಾತ್ರಿ ವ್ಯಾಪಾರಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

  • ವಿಷ ಹಿಡಿದು ಡಿಸಿ ಮುಂದೆ ರೈತ ಕುಟುಂಬದ ಪ್ರತಿಭಟನೆ

    ವಿಷ ಹಿಡಿದು ಡಿಸಿ ಮುಂದೆ ರೈತ ಕುಟುಂಬದ ಪ್ರತಿಭಟನೆ

    ಚಿತ್ರದುರ್ಗ: ಬೆಳೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

    ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇದರ ಪರಿಹಾರ ಮೊತ್ತವನ್ನು ಸರ್ಕಾರ ಇನ್ನೂ ನೀಡಿಲ್ಲ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕಚೇರಿ ಬಳಿ ರೈತ ಚಿಕ್ಕಣ್ಣ ಕುಟುಂಬ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಅವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಬರುವವರೆಗೆ ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

    ಕಚೇರಿಗೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಅವರ ಟೇಬಲ್ ಮೇಲೆ ವಿಷದ ಬಾಟಲಿ ಇಟ್ಟು ಅಳಲು ತೋಡಿಕೊಂಡರು. ಮಹಾಮಳೆಗೆ 2 ಎಕರೆಯಲ್ಲಿ ಬೆಳೆದಿದ್ದ ಸುಮಾರು 50 ತೆಂಗಿನ ಮರಗಳು ಹಾನಿಯಾಗಿದ್ದು, ಬುಡಸಮೇತಕೊಚ್ಚಿ ಹೋಗಿವೆ. ಘಟನೆ ನಡೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರಿಟ್ಟರು. ಶೀಘ್ರದಲ್ಲೇ ಬೆಳೆ ಪರಿಹಾರ ಬಿಡುಗಡೆ ಮಾಡಿ ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಗೆ ಎಚ್ಚರಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, 5,900 ರೂ.ಗಳನ್ನು ತಾತ್ಕಲಿಕ ಪರಿಹಾರ ನೀಡಲಾಗಿದೆ. ಆದರೆ ರೈತರ ಮನವಿ ಮೇರೆಗೆ ಹೊಸದುರ್ಗ ತಹಶೀಲ್ದಾರ್ ಅವರಿಂದ ವರದಿ ಪಡೆದು ಹೆಚ್ಚಿನ ಪರಿಹಾರಕ್ಕಾಗಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನಾದ್ಯಂತ ಸುರಿದ ಮಹಾಮಳೆಯಿಂದಾಗಿ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ 40ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ಫಲಕ್ಕೆ ಬಂದಿದ್ದ ಅಡಿಕೆ, ದಾಳಿಂಬೆ ಹಾಗು ಮೆಕ್ಕೆಜೋಳ ನೀರಲ್ಲಿ ಕೊಚ್ಚಿ ಹೋಗಿತ್ತು. ಇದರಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ಆಲಿಸಲು ತಾಲೂಕಿಗೆ ಭೇಟಿ ನೀಡುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ನೀಡಿಲ್ಲ. ಇತ್ತ ಜಿಲ್ಲಾಡಳಿತ ಸಹ ಬೆಳೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿದ್ದು, ಕೇವಲ 5,949 ರೂ. ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ. ಈ ಬಗ್ಗೆ ಹಲವು ಬಾರಿ ಶಾಸಕ ಗೂಳಿಹಟ್ಟಿಶೇಖರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಹೀಗಾಗಿ ರೈತರು ಪ್ರತಿಭಟನೆ ನಡೆಸಿದರು.

  • ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡಿದ್ರೆ ಹುಷಾರ್!

    ಮೈಸೂರು: ಈರುಳ್ಳಿ ಬೆಲೆ ದುಬಾರಿ ಆಗಿರುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಅಕ್ರಮವಾಗಿ ಈರುಳ್ಳಿ ದಾಸ್ತಾನು ಮಾಡುವವರ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಮೈಸೂರು ಜಿಲ್ಲಾಧಿಕಾರಿಗಳು ಈರುಳ್ಳಿ ಮಾರಾಟಕ್ಕೆ ಲೈಸನ್ಸ್ ಪಡೆಯುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ. ಅಗತ್ಯ ವಸ್ತುಗಳ ಪರವಾನಗಿಗೆ ಆದೇಶ 1986ರ(ತಿದ್ದುಪಡಿ 2019) ಪ್ರಕಾರ, ನಗರದಲ್ಲಿ ಈರುಳ್ಳಿ ವ್ಯಾಪಾರಿಗಳು ಜಿಲ್ಲಾಧಿಕಾರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ. ತಾಲೂಕಿನಲ್ಲಿನ ಮಾರಾಟಗಾರರು ಆಯಾ ತಾಲೂಕಿನ ತಹಶಿಲ್ದಾರರ್‍ರಿಂದ ಲೈಸೆನ್ಸ್ ಪಡೆದು ಈರುಳ್ಳಿ ಮಾರಾಟ ಮಾಡಬೇಕು ಎಂದು ಆದೇಶಿಸಲಾಗಿದೆ.

    ಸರ್ಕಾರದ ಆದೇಶದಂತೆ ಈರುಳ್ಳಿ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್ ದಾಸ್ತಾನು ಮಾಡಬೇಕು. ಲೈಸೆನ್ಸ್ ಇಲ್ಲದೆ ಅದಕ್ಕಿಂತ ಹೆಚ್ಚಿನ ಈರುಳ್ಳಿ ದಾಸ್ತಾನು ಮಾಡಿದರೆ, ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಈ ಆದೇಶದಿಂದ ಈರುಳ್ಳಿಗೆ ಅಕ್ರಮ ದಾಸ್ತಾನು ಮಾಡಿಕೊಂಡವರಲ್ಲಿ ಆತಂಕ ಸೃಷ್ಟಿಯಾಗಿದೆ. ಇಂದಿನಿಂದ ಈರುಳ್ಳಿ ಅಂಗಡಿಗಳ ಮೇಲೂ ಆಹಾರ ಇಲಾಖೆ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಮತ್ತೆ ವರುಣನ ಆರ್ಭಟ – ಕೊಡಗಿಗೆ ಸಂಕಷ್ಟ

    ಮತ್ತೆ ವರುಣನ ಆರ್ಭಟ – ಕೊಡಗಿಗೆ ಸಂಕಷ್ಟ

    ಮಡಿಕೇರಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಇನ್ನೂ 24 ಗಂಟೆ ಭೀಕರ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ತಮಿಳುನಾಡು, ಕೇರಳದಲ್ಲಿ ಚಂಡಮಾರುತದ ಜೊತೆ ಭಾರೀ ಮಳೆಯಾಗಲಿದೆಯಂತೆ. ಇತ್ತ ಕೊಡಗಿನಲ್ಲೂ ಇಂದಿನಿಂದ ಇನ್ನೂ ಮೂರು ದಿನ ಭಾರೀ ಮಳೆಯ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಭೀಕರ ಪ್ರವಾಹಕ್ಕೆ ನಲುಗಿ ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಕೊಡಗು ಹಾಗೂ ಕೇರಳಕ್ಕೆ ಮಳೆಯ ಎಚ್ಚರಿಕೆ ಮತ್ತೆ ಆತಂಕ ತಂದೊಡ್ಡಿದೆ.

    ಈಗಾಗಲೇ ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಡುಕ್ಕಿ, ಜಲಾಶಯ ಸೇರಿದಂತೆ 22 ಡ್ಯಾಂಗಳಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜನರು ಮತ್ತೆ ಭಯಭೀತರಾಗಿದ್ದಾರೆ.

    ಕೊಡಗು ಜಿಲ್ಲಾಧಿಕಾರಿ ಶ್ರೀ ವಿದ್ಯಾ, ಅಧಿಕಾರಿಗಳು 6 ರಿಂದ 8ರ ವರೆಗೆ ಸಾರ್ವತ್ರಿಕ ರಜಾ ದಿನಗಳಿದ್ದರೂ ಕೇಂದ್ರ ಸ್ಥಾನ ಬಿಡದಿರುವಂತೆ ಆದೇಶ ಹೊರಡಿಸಿದ್ದಾರೆ. ಇತ್ತ ಕರಾವಳಿ ತೀರ ಪ್ರದೇಶಗಳಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಲ್ಲೂ ನಿನ್ನೆ ಇಡೀ ದಿನ ಜಿಟಿಜಿಟಿ ಮಳೆಯಾಗಿ ಜನ ಹೈರಾಣಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv