Tag: ಜಿಲ್ಲಾದಿಕಾರಿ

  • ಕೊಡಗಿನ ಗಡಿದಾಟಿದ್ರೆ ಕೋವಿಡ್ ಸೆಂಟರೇ ಗತಿ: ಡಿಸಿ ವಾರ್ನಿಂಗ್

    ಕೊಡಗಿನ ಗಡಿದಾಟಿದ್ರೆ ಕೋವಿಡ್ ಸೆಂಟರೇ ಗತಿ: ಡಿಸಿ ವಾರ್ನಿಂಗ್

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಕೊಡಗು ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಿರುವಾಗ ಯಾರಾದ್ರೂ ನಿಯಮವನ್ನು ಮೀರಿ ಕರ್ನಾಟಕದ ಕೊಡಗಿಗೆ ಅಥವಾ ಕೊಡಗಿನಿಂದ ಕೇರಳಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಪರಿಶೀಲನೆಯನ್ನೂ ಮಾಡದೇ 14 ದಿನಗಳ ಕಾಲ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.

    ಗಡಿ ದಾಟಿ ಬಂದವರು ವಿದೇಶದಿಂದ ವಾಪಸ್ ಆಗಿರುವ ಇತಿಹಾಸ ಇಲ್ಲದಿದ್ದರೂ ನೇರವಾಗಿ ಕೋವಿಡ್ ಸೆಂಟರಿಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ಕೇರಳದಿಂದ ಬಂದ ಇಬ್ಬರನ್ನು ಕೊಡಗಿನಲ್ಲಿರುವ ಕೋವಿಡ್ ಸೆಂಟರಿಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ವಿದೇಶದಿಂದ ಬಂದು ಹೋಂ ಕ್ವಾರಂಟೈನ್‍ನಲ್ಲಿ ಇರುವವರು ನಿಯಮ ಮೀರಿ ಹೊರಗೆ ಓಡಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ. ಕಾನೂನು ಪ್ರಕಾರ ಶಿಕ್ಷೆಯಾಗುತ್ತೆ. ಹೀಗೆ ಶಿಕ್ಷೆಗೆ ಒಳಗಾದವರ ಪಾಸ್‍ಪೋರ್ಟ್ ಅಥವಾ ವೀಸಾಗಳಿಗೆ ಸಮಸ್ಯೆಯಾಗಲಿದ್ದು, ನಂತರ ಪುನಃ ನೀವು ವಿದೇಶಕ್ಕೆ ತೆರಳು ಸಮಸ್ಯೆಯಾಗುತ್ತೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿದ್ದಾರೆ.

  • ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಬೀದರ್: ಕೊರೊನಾ ವೈರಸ್ ಸೋಂಕು ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲು ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್ ಮಹಾದೇವ್ ಅವರು ಡಿಹೆಚ್‍ಓ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ ವಿಜಯ್‍ಭಾಸ್ಕರ್ ಅವರು ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೊರ ದೇಶ ಅಥವಾ ಹೊರ ರಾಜ್ಯಗಳಿಂದ ವಿಮಾನ, ರೈಲ್ವೆ ಅಥವಾ ಬಸ್‍ಗಳ ಮೂಲಕ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳ ತಪಾಸಣೆ ನಡೆಸಬೇಕು. ಕೆಲವು ದಿನಗಳ ಹಿಂದೆ ಜಿಲ್ಲೆಗೆ ಯಾರಾದರೂ ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ಆಗಮಿಸಿದ್ದರೆ ಆ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ, ಅವರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ತಿಳಿಸಿದರು.

    ಜಾತ್ರೆ, ಸಂತೆಗಳು ಸಾಧ್ಯವಾದಷ್ಟು ನಡೆಯದಂತೆ ಎಚ್ಚರ ವಹಿಸುವುದು ಸೂಕ್ತ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಘೋಷಣಾ ಪ್ರಮಾಣ ಪತ್ರಗಳ ಅರ್ಜಿಗಳು ಮತ್ತು ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸಹ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸೂರ್ಯಕಾಂತ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ ರೆಡ್ಡಿ, ಬೀದರ ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಬ್ರಿಮ್ಸ್ ವೈದ್ಯಾಧಿಕಾರಿಗಳಾದ ವಿಜಯ್‍ಕುಮಾರ್ ಅಂತಪನೋರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.