Tag: ಜಿಲೆಟಿನ್

  • ಶಿವಮೊಗ್ಗದ ಹುಣಸೋಡು ಬಳಿ ಸ್ಫೋಟ ಪ್ರಕರಣ: ಕ್ರಷರ್ ಮಾಲೀಕ ಸುಧಾಕರ್ ಅರೆಸ್ಟ್

    ಶಿವಮೊಗ್ಗದ ಹುಣಸೋಡು ಬಳಿ ಸ್ಫೋಟ ಪ್ರಕರಣ: ಕ್ರಷರ್ ಮಾಲೀಕ ಸುಧಾಕರ್ ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಹಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಸುಧಾಕರ್ ನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಗಣಿಗಾರಿಕೆಗೆ ಭೂಮಿ ಕೊಟ್ಟಿರುವ ಅನಿಲ್ ಕುಲಕರ್ಣಿ ಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಿವಮೊಗ್ಗದ ರವೀಂದ್ರ ನಗರದ ನಿವಾಸಿ ಸುಧಾಕರ್ ಒಡೆತನದ ಕಲ್ಲನಾಗೂರಿನಲ್ಲಿರುವ ಬಿವಿಎಸ್ ಸ್ಟೋನ್ ಕ್ರಷರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೂರು ವರ್ಷದ ಮಟ್ಟಿಗೆ ಜಿಲ್ಲಾಡಳಿತ ಪರವಾನಗಿ ನೀಡಿತ್ತು. ಈ ವೇಳೆ ಸುರಕ್ಷಿತ ವಲಯದ ಸುತ್ತ 100 ಮೀಟರ್ ಅಂತರದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳಲ್ಲ ಎಂಬ ಷರತ್ತಿಗೆ ಒಪ್ಪಿಗೆ ಸೂಚಿಸಿ ಸುಧಾಕರ್ ಸಹಿ ಕೂಡ ಹಾಕಿದ್ದ.

    ಆ ಬಳಿಕ ಸ್ಫೋಟಕಗಳ ಬಗ್ಗೆ ಸ್ಥಳೀಯರು ಹತ್ತಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಇದೀಗ ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ನಿನ್ನೆ ರಾತ್ರಿ 10.30ರ ವೇಳೆ ಭಾರೀ ಶಬ್ದ ಕೇಳಿದ ಜನ ಭಯಭೀತರಾಗಿದ್ದರು. ಬಳಿಕ ಅದು ಜಲ್ಲಿ ಕ್ರಷರ್‍ನಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿರುವುದಾಗಿ ಬಯಲಾಗಿದೆ. ಈ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದು, ಸದ್ಯ 7 ಮೃತದೇಹಗಳು ಪತ್ತೆಯಾಗಿವೆ. ಜಿಲೆಟಿನ್ ತುಂಬಿದ ಲಾರಿ ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿ ಪೀಸ್ ಪೀಸ್ ಆಗಿದೆ. ಕಿಲೋಮೀಟರ್ ದೂರದವರೆಗೂ ಲಾರಿಯ ಬಿಡಿಭಾಗಗಳು ಹಾರಿವೆ.

    ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದ್ದು, ಒಂದೊಂದು ಅಂಗಾಂಗ ಒಂದೊಂದು ಕಡೆ ಸಿಕ್ಕಿದೆ. ಕ್ರಷರ್ ಸುತ್ತಮುತ್ತ ಇದ್ದ ಬಹುತೇಕ ಮರಗಳು ನಾಶವಾಗಿವೆ. 40 ಕಿಲೋಮೀಟರ್ ದೂರದವರೆಗೂ ಶಬ್ದ ಕೇಳಿದೆ. ಸ್ಫೋಟದ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಘಟನೆಯಿಂದ ಭಾರೀ ಹಾನಿ ಸಂಭವಿಸಿದೆ.

  • ಶಿವಮೊಗ್ಗ ಘೋರ ದುರಂತ – ನರೇಂದ್ರ ಮೋದಿ ಸಂತಾಪ

    ಶಿವಮೊಗ್ಗ ಘೋರ ದುರಂತ – ನರೇಂದ್ರ ಮೋದಿ ಸಂತಾಪ

    ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್ ನಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡು ಹಲವು ಕಾರ್ಮಿಕರು ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಪಿಎಂಓ ಇಂಡಿಯಾ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಶಿವಮೊಗ್ಗದಲ್ಲಿ ಘನಘೋರ ದುರಂತ ಸಂಭವಿಸಿದ್ದು, ಇದರಿಂದ ನೋವಾಗಿದೆ. ಮೃತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ, ಇನ್ನು ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳುವಂತಾಗಲಿ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ನೆರವು ನೀಡುತ್ತದೆ ಎಂದು ಬರೆದುಕೊಳ್ಳಲಾಗಿದೆ.

    ಸಿಎಂ ತವರು ಜಿಲ್ಲೆಯಲ್ಲಿ ಅಕ್ರಮ ಕ್ರಷರ್ ಮಾಫಿಯಾ ನಡೆಯುತ್ತಿರುವುದು ಬಯಲಾಗಿದೆ. ನಿನ್ನೆ ರಾತ್ರಿ 10.30ರ ಸಮಯಕ್ಕೆ ಏಕಾಏಕಿ ಭಾರೀ ಶಬ್ದಕ್ಕೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಬಳಿಕ ಇದು ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದಾಗಿ ತಿಳಿದುಬಂದಿದೆ.

    ಸ್ಫೋಟದ ತೀವ್ರತೆಗೆ ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದ್ದು, ರುಂಡ ಮುಂಡ ಬೇರೆ ಬೇರೆಯಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಅಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟಗೊಂಡ ಸ್ಥಳದ ಸುತ್ತಮುತ್ತ ಮರಗಿಡಗಳು ಸಂಪೂರ್ಣ ಹಾನಿಗೊಳಗಾಗಿವೆ. ಸ್ಫೋಟದಿಂದ ಲಾರಿಯ ಬಿಡಿಭಾಗಗಳು ನೂರಾರು ಮೀಟರ್ ದೂರಕ್ಕೆ ಹಾರಿವೆ.

     

  • ಅಕ್ರಮ ಕ್ರಷರ್ ನಿಲ್ಲಿಸಿ, ನಮ್ಮನ್ನು ಕಾಪಾಡಿ- ಶಿವಮೊಗ್ಗದ ಹುಣಸೋಡು ಜನರ ಆಕ್ರೋಶ ಸ್ಫೋಟ

    ಅಕ್ರಮ ಕ್ರಷರ್ ನಿಲ್ಲಿಸಿ, ನಮ್ಮನ್ನು ಕಾಪಾಡಿ- ಶಿವಮೊಗ್ಗದ ಹುಣಸೋಡು ಜನರ ಆಕ್ರೋಶ ಸ್ಫೋಟ

    – ಇದ್ರಲ್ಲಿ ಪ್ರಭಾವಿಗಳ ಕೈವಾಡ ಇದೆ

    ಶಿವಮೊಗ್ಗ: ಸಿಎಂ ತವರು ಜಿಲ್ಲೆಯಲ್ಲಿ ಅಕ್ರಮ ಕ್ರಷರ್ ಮಾಫಿಯಾ ನಡೆಯುತ್ತಿರುವುದು ಬಯಲಾಗಿದೆ. ನಿನ್ನೆ ರಾತ್ರಿ 10.30ರ ಸಮಯಕ್ಕೆ ಏಕಾಏಕಿ ಭಾರೀ ಶಬ್ದಕ್ಕೆ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಬಳಿಕ ಇದು ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಹುಣಸೋಡು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಕ್ರಮ ಕ್ರಷರ್ ನಿಲ್ಲಿಸಿ, ನಮ್ಮನ್ನು ಕಾಪಾಡಿ. ನಮ್ಮನ್ನು ಹಾಗೂ ನಮ್ಮ ಬದುಕನ್ನು ಕಾಪಾಡಿ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ. ನಮ್ಮನ್ನು ಇಲ್ಲೆಲ್ಲಿಗೂ ಬಿಟ್ಟುಕೊಳ್ಳಲ್ಲ ಯಾಕೆ..? ಸತ್ತವರು ಮನುಷ್ಯರಲ್ವಾ ಎಂದು ಪ್ರಶ್ನಿಸುವ ಮೂಲಕ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.

    ಶಿವಮೊಗ್ಗದ ಸುತ್ತಮುತ್ತ ಪ್ರದೇಶಗಳಾದ ಅಬ್ಬಲಗೆರೆ ಪಂಚಾಯತಿ, ಕಲ್ಲುಗಂಗೂರು ಗ್ರಾಮ, ಹುಣಸೋಡು, ಬಸವನಗಂಗೂರು, ಮತ್ತೋಡು, ಗೆಜ್ಜೆನಹಳ್ಳಿ ಎಲ್ಲಿ ನೊಡಿದ್ರೂ ಅಕ್ರಮ ಕ್ರಷರ್‍ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಲ್ಲಿನ ಇಡೀ ಪರಿಸರ ಸಂಪೂರ್ಣ ಸರ್ವನಾಶವಾಗಿದೆ. ಸದ್ಯ ನಡೆದ ಈ ಘನಘೋರ ದುರಂತಕ್ಕೆ ಯಾರು ಹೊಣೆ? ಜಲ್ಲಿ ಕ್ರಷರ್‍ಗಳ ಹಿಂದೆ ಜಿಲ್ಲೆಯ ಪ್ರಭಾವಿಗಳ ಪಾತ್ರವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಘಟನೆಯಲ್ಲಿ 15 ಮಂದಿ ಕಾರ್ಮಿಕರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದುರಂತ ಸಂಬಂಧ ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಪ್ರತಿಕ್ರಿಯಿಸಿ, ಶಿವಮೊಗ್ಗದ ಅಬಲಗೇರೆ ಬಳಿ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ ತುಂಬಿದ ಲಾರಿ ಸ್ಪೋಟ್ ಅಗಿರುವ ಬಗ್ಗೆ ಶಂಕೆಯಿದೆ. ಸದ್ಯಕ್ಕೆ ಲಾರಿಯೊಂದು ಸುಟ್ಟಿದೆ ಕೆಲವೂಂದು ಮೃತದೇಹಗಳು ಪತ್ತೆಯಾಗಿವೆ. ರಾತ್ರಿ ಸುಮಾರು 10-30ರ ವೇಳೆಗೆ ದೊಡ್ಡ ಶಬ್ದವೂಂದು ಕೇಳಿಬಂದಿದೆಯೆಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಹಿನ್ನೆಲೆ ಸ್ಥಳಕ್ಕೆ ಬಂದಿ ಪರಿಶೀಲನೆ ಮಾಡಿದ ಬಳಿಕ ನಮಗೆ ಇಷ್ಟೂ ಮಾಹಿತಿ ತಿಳಿದಿದೆ. ಸದ್ಯಕ್ಕೆ ಕತ್ತಲೆಯಾಗಿರುವ ಕಾರಣ ಯಾವುದರ ಬಗ್ಗೆ ನಿಖರ ಮಾಹಿತಿ ನೀಡಲು ಸಾಧ್ಯವಿಲ್ಲ. ನಾಳೆ ಬೆಂಗಳೂರಿನಿಂದ ವಿಧಿವಿಜ್ಞಾನ ತಂಡ ಹಾಗೂ ಸಿಆರ್‍ಎಫ್ ತಂಡ ಅಗಮಿಸಲಿದೆ. ಬಳಿಕ ವಷ್ಟೇ ಮಾಹಿತಿ ನೀಡಲು ಸಾಧ್ಯವೆಂದು ಹೇಳಿದ್ದರು.

  • ಶಿವಮೊಗ್ಗದಲ್ಲಿ ಕಂಡುಕೇಳರಿಯದ ಘನಘೋರ ದುರಂತ – ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡು 15 ಕಾರ್ಮಿಕರು ಬಲಿ..?

    ಶಿವಮೊಗ್ಗದಲ್ಲಿ ಕಂಡುಕೇಳರಿಯದ ಘನಘೋರ ದುರಂತ – ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡು 15 ಕಾರ್ಮಿಕರು ಬಲಿ..?

    – ಕಾರ್ಮಿಕರ ಮೃತದೇಹ ಛಿದ್ರ ಛಿದ್ರ

    ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿರುವ ನಿಗೂಢ ಶಬ್ದ, ಇಡೀ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರಲ್ಲೂ ಆತಂಕ ಮನೆ ಮಾಡಿತ್ತು. ನಿಗೂಢ ಶಬ್ಧ, ಭೂಕಂಪನಾ ಎಂದು ಜನರು ಮಾತನಾಡಿಕೊಳ್ಳುವ ವೇಳೆಯಲ್ಲಿಯೇ ಇದು ಶಿವಮೊಗ್ಗದ ಸಮೀಪದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್ ನಲ್ಲಿ ಒಂದು ಲಾರಿ ಲೋಡ್ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದು ತಿಳಿಯಿತು. ಘಟನೆಯಲ್ಲಿ 15 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ.

    ಜನರು ನಿನ್ನೆ ರಾತ್ರಿ ಊಟ ಮಾಡಿ ಮಲಗೋ ಸಮಯ. ಹಾಸಿಗೆ ಹಾಸಿಕೊಂಡು ಮಲಗಲು ಅಣಿಯಾಗುತ್ತಿದ್ದಂತೆ, ಒಮ್ಮೆಲೆ ಕೇಳಿ ಬಂದ ಶಬ್ದ ಇಡೀ ಶಿವಮೊಗ್ಗ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು. ಇದೇನು ಭೂಕಂಪನಾ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ, ಜನರು ಎದ್ನೋ ಬಿದ್ನೋ ಎಂದು ಮನೆಯಿಂದ ಹೋರ ಓಡಿ ಬಂದಿದ್ದರು. ಭೂಕಂಪನಾ ಎಲ್ಲಿ…!? ಏನೂ ಎಂದು ಮಾತನಾಡಿಕೊಳ್ಳುವ ಹೊತ್ತಲ್ಲೇ, ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಒಂದು ಲಾರಿಯಲ್ಲಿ ತಂದಿಟ್ಟುಕೊಂಡಿದ್ದ ಸುಮಾರು 50 ಡಬ್ಬಗಳಲ್ಲಿದ್ದ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿರುವುದು ಬಯಲಾಯಿತು.

    ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿರುವ ಅಕ್ರಮ ಕ್ರಷರ್ ಗಳ ಮಾಫಿಯಾ ಇದೀಗ ಈ ರೀತಿ ಬಯಲುಗೊಂಡಿದ್ದು, ಅಕ್ರಮ ಕ್ರಷರ್ ಗಳಿಗೆ ಇದೀಗ ಅಧಿಕಾರಿಗಳ ತಲೆದಂಡವಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ಅಷ್ಟಕ್ಕೂ ನಿನ್ನೆ ರಾತ್ರಿ ಸುಮಾರು 10.30 ರ ವೇಳೆಗೆ ಕೇಳಿ ಬಂದ ಭಾರೀ ಶಬ್ದ, ಇಲ್ಲಿನ ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು, ಭೂಮಿಯೇ ನಲುಗಿ ಹೋಗಿದೆ. ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿವೆ. ಭಾರೀ ಶಬ್ದಕ್ಕೆ ಕೆಲವು ಕಡೆಗಳಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಕೆಲವು ಕಾರುಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ.

    ಈ ಅಕ್ರಮ ಕ್ರಷರ್ ಗಳ ಹಾವಳಿ ಇಲ್ಲಿ ಮಿತಿ ಮೀರಿದ್ದು, ಇದರಿಂದಾಗಿ ಈ ಭಾಗದ ಗ್ರಾಮಸ್ಥರು ಬೇಸರಗೊಂಡಿದ್ದಾರೆ. ಈಗಲಾದರೂ, ಅಕ್ರಮ ಕ್ರಷರ್ ಗಳು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಸ್ಫೋಟದಿಂದಾಗಿ ಒಂದು ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುಮಾರು 15 ಕ್ಕೂ ಹೆಚ್ಚು ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಸಾವನಪ್ಪಿದ್ದು, ಇಡೀ ಪ್ರದೇಶ ಧೂಳಿನಿಂದ ಆವೃತಗೊಂಡಿದೆ. ಅಷ್ಟೇ ಅಲ್ಲ ಕ್ರಷರ್ ನಲ್ಲಿದ್ದ ಮರಗಳು ಸಂಪೂರ್ಣವಾಗಿ ಮುರಿದು ಹೋಗಿವೆ. ಸ್ಫೋಟದ ತೀವ್ರತೆಗೆ ಇಡೀ ಕ್ರಷರ್ ಸೇರಿದಂತೆ, ಅಕ್ಕಪಕ್ಕದ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.

    ಒಟ್ಟಿನಲ್ಲಿ ಅಕ್ರಮ ಕ್ರಷರ್ ನ ಸ್ಫೋಟಕ್ಕೆ ಇಡೀ ರಾಜ್ಯವಷ್ಟೇ ಅಲ್ಲ, ದೇಶವೇ, ಶಿವಮೊಗ್ಗದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ. ಭೂಕಂಪದ ಬಳಿಕ ಈ ಸ್ಫೋಟ ಸಂಭವಿಸಿದೆಯೋ ಅಥವಾ ಭೂಕಂಪನ ಆಗಿಯೇ ಇಲ್ಲವೋ ಅಥವಾ ಭೂಕಂಪನದ ತೀವ್ರತೆಗೆ ಈ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆಯೋ ಎಂಬುದು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಹೊರಬೀಳಬೇಕಿದೆ. ಏನೇ ಆಗಲಿ ಈ ಅಕ್ರಮ ಕ್ರಷರ್ ನಲ್ಲಿ ನಡೆದಿರುವ ಸ್ಪೋಟದ ಹಿನ್ನೆಲೆಯಲ್ಲಿ ಅದೆಷ್ಟು ಜನ ಅಧಿಕಾರಿಗಳ ತಲೆದಂಡವಾಗಲಿದೆಯೋ ಕಾದು ನೋಡಬೇಕಿದೆ.

  • ಬೆಂಗ್ಳೂರು ಎಚ್‍ಎಎಲ್ ಡಂಪಿಂಗ್ ಯಾರ್ಡ್ ಬಳಿ ಸ್ಫೋಟ – ಆತಂಕಗೊಂಡ ಸ್ಥಳೀಯರು

    ಬೆಂಗ್ಳೂರು ಎಚ್‍ಎಎಲ್ ಡಂಪಿಂಗ್ ಯಾರ್ಡ್ ಬಳಿ ಸ್ಫೋಟ – ಆತಂಕಗೊಂಡ ಸ್ಥಳೀಯರು

    ಬೆಂಗಳೂರು: ಕಸದ ಡಂಪಿಂಗ್ ಯಾರ್ಡ್ ನಲ್ಲಿ ಸ್ಫೋಟ ಸಂಭವಿಸಿ ಭೂಮಿ ನಡುಗಿದ ಘಟನೆ ಬೆಂಗಳೂರಿನ ಹೆಚ್‍ಎಎಲ್ ನಲ್ಲಿ ನಡೆದಿದೆ.

    ಇಂದು ಸಂಜೆ 4.30 ರ ಸುಮಾರಿನಲ್ಲಿ ಎಲ್.ಎನ್. ಶಾಸ್ತ್ರಿ ನಗರದಲ್ಲಿ ಈ ಸ್ಫೋಟ ಸಂಭವಿಸಿದ್ದು ಸ್ಥಳೀಯರಲ್ಲಿ ನಡುಕವನ್ನು ಉಂಟುಮಾಡಿತ್ತು. ಹೆಚ್‍ಎಎಲ್ ಕಂಪನಿ ಎಂಟು ಎಕರೆ ಪ್ರದೇಶದಲ್ಲಿ ಕ್ವಾಟ್ರಸ್ ನಿರ್ಮಿಸುತ್ತಿದ್ದು, ಅದರ ಕಾರ್ನರ್ ಸೈಟ್ ನಲ್ಲಿ ಕಳೆದ ಎರಡು-ಮೂರು ತಿಂಗಳ ಹಿಂದೆ ಬಂಡೆ ಸ್ಫೋಟಿಸಲು ಜಿಲೆಟಿನ್ ಬಳಕೆ ಮಾಡಿದ್ದಾರೆ. ನಂತರ ಅದರ ಮೇಲೆಯೇ ಕಾರ್ಮಿಕರು ಕಸ ಹಾಕುತ್ತಿದ್ದು ಇಂದು ಸಂಜೆ ಅದೇ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ.

    ಸ್ಫೋಟದ ತೀವ್ರತೆಗೆ ಒಂದು ಕಿ.ಮೀ ಭೂಮಿ ಕಂಪಿಸಿದಂತಾಗಿದ್ದು, ಸ್ಥಳದಲ್ಲಿದ್ದ ಸಿಂಟೆಕ್ಸ್ ನೀರಿನ ಟ್ಯಾಂಕ್ ಕೂಡ ಸ್ಫೋಟಗೊಂಡಿದೆ. ಈ ವೇಳೆ ಸ್ಥಳದ ಅಕ್ಕಪಕ್ಕದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.

    ಹೆಚ್‍ಎಎಲ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯದಳ ಸಿಬ್ಬಂದಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಮಾತನಾಡಿ, ಎಚ್‍ಎಎಲ್ ಆವರಣದ ಎಲ್ ಬಿ ಶಾಸ್ತಿ ನಗರದಲ್ಲಿ ಘಟನೆ ಸಂಭವಿಸಿದ್ದು, ಈ ಹಿಂದೆ ಕಟ್ಟಡ ನಿರ್ಮಿಸುತಿದ್ದ ಕಾರ್ಮಿಕರ ನಿರ್ಲಕ್ಷ್ಯದಿಂದ ಸ್ಫೋಟ ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದರು.

    ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ವಿಜ್ಞಾನ ನಗರ ವಾರ್ಡ್ ಕಾರ್ಪೊರೇಟರ್ ಎಸ್.ಜಿ.ನಾಗರಾಜ್ ಮಾತನಾಡಿ, ಎಚ್‍ಎಎಲ್ ಅಪಾಟ್ರ್ಮೆಂಟ್ ಕಟ್ಟುವಾಗ ಜಿಲೆಟಿನ್ ಕಡ್ಡಿಗಳಿಂದ ಬಂಡೆಗಳನ್ನು ಸ್ಫೋಟಿಸಿದೆ. ಆದರೆ ಈ ಬಗ್ಗೆ ಬಿಬಿಎಂಪಿಯಿಂದ ಅನುಮತಿ ಪತ್ರ ಪಡೆದಿಲ್ಲ. ನಿಯಮ ಉಲ್ಲಂಘಿಸಿ 300 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಲಾಗುತ್ತಿದೆ. ಕೂಡಲೇ ಬಿಬಿಎಂಪಿಯಿಂದ ಎಚ್‍ಎಎಲ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಅಪಾಟ್ರ್ಮೆಂಟ್ ನಿರ್ಮಾಣ ಬಗ್ಗೆ ತನಿಖೆ ನಡೆಸಲು ಸೂಚಿಸುತ್ತೇನೆ ಎಂದು ಹೇಳಿದರು.