Tag: ಜಿಯೋ

  • ಜಿಯೋ ಉಚಿತ ಕರೆ ಇಲ್ಲ, ಹೊರ ಹೋಗುವ ಬೇರೆ ಟೆಲಿಕಾಂ ಕರೆಗೆ ಶುಲ್ಕ – ಏನಿದು ಐಯುಸಿ?

    ಜಿಯೋ ಉಚಿತ ಕರೆ ಇಲ್ಲ, ಹೊರ ಹೋಗುವ ಬೇರೆ ಟೆಲಿಕಾಂ ಕರೆಗೆ ಶುಲ್ಕ – ಏನಿದು ಐಯುಸಿ?

    ನವದೆಹಲಿ: ಜಿಯೋ ಸೇವೆ ಆರಂಭಗೊಂಡ ಬಳಿಕ ಇಲ್ಲಿಯವರೆಗೂ ಬೇರೆ ಟೆಲಿಕಾಂ ಕಂಪನಿಗಳಿಗೆ ಉಚಿತವಾಗಿ ಲಭ್ಯವಿದ್ದ ಹೊರ ಹೋಗುವ ಕರೆಗಳಿಗೆ ದರ ಅನ್ವಯವಾಗಲಿದೆ.

    ಹೌದು. ಅಚ್ಚರಿಯ ಬೆಳವಣಿಗೆಯಲ್ಲಿ ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ ಜಿಯೋ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ವಿಧಿಸುತ್ತಿರಲಿಲ್ಲ. ಆದರೆ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಜಿಯೋ ಮುಂದಾಗುತ್ತಿದೆ. ಬೇರೆ ಕಂಪನಿಗಳ ನಂಬರ್ ಗಳ ಕರೆಗಳಿಗೆ ಮಾತ್ರ ಶುಲ್ಕ ವಿಧಿಸಿದ್ದು ಜಿಯೋದಿಂದ ಜಿಯೋ ನಂಬರಿಗೆ ಹೋಗುವ ಕರೆಗಳು ಎಂದಿನಂತೆ ಉಚಿತವಾಗಿ ಇರಲಿದೆ.

    ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.

    ಏನಿದು ಐಯುಸಿ?
    ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.

    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.

    ಐಯುಸಿಯಿಂದಾಗಿ ಏರ್ ಟೆಲ್, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.

    ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.

     

    ಜಿಯೋ ವಿರೋಧ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿದೆ.

    ಜಿಯೋ ಕರೆ ಪ್ಲಾನ್ ಹೀಗಿದೆ
    ಐಯುಸಿ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಯೋ ಕರೆಯ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ಖರೀದಿಸಿದ ಗ್ರಾಹಕರಿಗೆ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಹೇಳಿದೆ. 10 ರೂ ಪ್ಲಾನ್ ಹಾಕಿದರೆ 124 ನಿಮಿಷ(1 ಜಿಬಿ ಉಚಿತ), 20 ರೂ. ಪ್ಲಾನಿಗೆ 249 ನಿಮಿಷ(2ಜಿಬಿ ಡೇಟಾ), 50 ರೂ. 656 ನಿಮಿಷ(5ಜಿಬಿ ಡೇಟಾ), 100 ರೂ. ಪ್ಲಾನ್ ಹಾಕಿದರೆ 1,362 ನಿಮಿಷ(10 ಜಿಬಿ) ಮಾತನಾಡಬಹುದಾಗಿದೆ.

  • ಜಿಯೋ ದೀಪಾವಳಿ ಆಫರ್ – 699 ರೂ.ಗೆ ಜಿಯೋ ಫೋನ್, 700 ರೂ. ಡೇಟಾ ಉಚಿತ 

    ಜಿಯೋ ದೀಪಾವಳಿ ಆಫರ್ – 699 ರೂ.ಗೆ ಜಿಯೋ ಫೋನ್, 700 ರೂ. ಡೇಟಾ ಉಚಿತ 

    ಮುಂಬೈ: ದಸರಾ, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಯೋ ತನ್ನ 4ಜಿ ಎಲ್‍ಟಿಇ ಫೋನಿನ ಬೆಲೆಯನ್ನು 800 ರೂ. ಕಡಿತಗೊಳಿಸಿದೆ.

    ಹೌದು. ಇಲ್ಲಿಯವರೆಗೆ ಜಿಯೋ ತನ್ನ ಫೋನನ್ನು 1500 ರೂ.ಗೆ ಮಾರಾಟ ಮಾಡುತಿತ್ತು. ಈ ಫೋನ್ ಈ ದರದಲ್ಲಿ ಸಿಗಬೇಕಾದರೆ ಹಳೆ ಫೋನ್ ಬದಲಾಯಿಸಬೇಕಿತ್ತು. ಆದರೆ ಈಗ ಹಳೆ ಫೋನ್ ಬದಲಾಯಿಸದೇ 699 ರೂ.ಗೆ ಹೊಸ ಫೋನ್ ಖರೀದಿಸಬಹುದಾಗಿದೆ.

    ಇದರ ಜೊತೆ ಜಿಯೋ 700 ರೂ. ಡೇಟಾವನ್ನು ಉಚಿತವಾಗಿ ನೀಡಲಿದೆ. ಮೊದಲ 7 ರಿಚಾರ್ಜ್ ವೇಳೆ ಜಿಯೋ ಉಚಿತವಾಗಿ 99 ರೂ. ಡೇಟಾವನ್ನು ನೀಡಲಿದೆ. ಈ ಆಫರ್ ದಸರಾದಿಂದ ದೀಪಾವಳಿಯವರೆಗೆ ಮಾತ್ರ ಇರಲಿದೆ ಎಂದು ಜಿಯೋ ಹೇಳಿದೆ.

    ಭಾರತದಲ್ಲಿ 2ಜಿ ಫೋನ್‍ಗಳ ಪೈಕಿ ಅತ್ಯಂತ ಕಡಿಮೆ ದರದಲ್ಲಿ ಈ ಫೋನ್ ಈಗ ಸಿಗುತ್ತಿದೆ. ಎಚ್‍ಡಿ ವಾಯ್ಸ್ ಕಾಲ್ ಜೊತೆ ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಫೋನ್ ಬಾಕ್ಸ್ ನಲ್ಲಿ ಹ್ಯಾಂಡ್ ಸೆಟ್, ತೆಗೆಯಲು ಸಾಧ್ಯವಿರುವ ಬ್ಯಾಟರಿ, ಚಾರ್ಜರ್ ಅಡಾಪ್ಟರ್, ಜಿಯೋ ಸಿಮ್ ಕಾರ್ಡ್ ಇರಲಿದೆ.

    ಕನ್ನಡ ಸೇರಿದಂತೆ ಒಟ್ಟು 22 ಭಾಷೆಗಳಿಗೆ ಜಿಯೋ ಫೋನ್ ಬೆಂಬಲ ನೀಡುತ್ತಿದ್ದು  ಮೈ ಜಿಯೋ, ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಎಕ್ಸ್ ಪ್ರೆಸ್ ನ್ಯೂಸ್, ಜಿಯೋ ವಿಡಿಯೋ ಕಆಲ್, ಜಿಯೋ ಶೇರ್, ಜಿಯೋ ಗೇಮ್ಸ್ ಅಪ್ಲಿಕೇಶನ್ ಬಳಸಬಹುದು. ಸೇವೆ ಆರಂಭಗೊಂಡ ಬಳಿಕ 7 ಕೋಟಿ 2ಜಿ ಬಳಕೆದಾರರು ಜಿಯೋ ಫೋನ್ ಖರೀದಿಸಿದ್ದಾರೆ.

    ಫೋನಿನ ಗುಣ ವೈಶಿಷ್ಟ್ಯಗಳು:
    2.4 ಇಂಚಿನ ಕ್ಯುವಿಜಿಎ ಟಿಎಫ್‍ಟಿ ಸ್ಕ್ರೀನ್(320*240 ಪಿಕ್ಸೆಲ್), 1.2 ಗಿಗಾಹಟ್ರ್ಸ್ ಡ್ಯುಯಲ್ ಕೋರ್ ಪ್ರೊಸೆಸರ್, 512 ಎಂಬಿ ರ‍್ಯಾಮ್, 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಣೆ, 4ಜಿ ವೋಲ್ಟ್, ಜಿಪಿಎಸ್/ಎನ್‍ಎಫ್‍ಸಿ, ಹಿಂದುಗಡೆ 2 ಎಂಪಿ, ಮುಂದುಗಡೆ 0.3 ಎಂಪಿ ಕ್ಯಾಮೆರಾ, ಯುಎಸ್‍ಬಿ 2.0, 2000 ಎಂಎಎಚ್ ಬ್ಯಾಟರಿ.

  • ಸಿಗಲಿದೆ 4ಕೆ ಟಿವಿ – ಜಿಯೋ ಫೈಬರ್ ಪ್ಯಾಕ್ ದರ ಎಷ್ಟು? ಯಾವ ಪ್ಯಾಕ್‍ನಲ್ಲಿ ಸ್ಪೀಡ್ ಎಷ್ಟು? ಏನು ಸೇವೆ ಸಿಗುತ್ತೆ?

    ಸಿಗಲಿದೆ 4ಕೆ ಟಿವಿ – ಜಿಯೋ ಫೈಬರ್ ಪ್ಯಾಕ್ ದರ ಎಷ್ಟು? ಯಾವ ಪ್ಯಾಕ್‍ನಲ್ಲಿ ಸ್ಪೀಡ್ ಎಷ್ಟು? ಏನು ಸೇವೆ ಸಿಗುತ್ತೆ?

    ಮುಂಬೈ: ಡೇಟಾ ದರ ಸಮರ ಆರಂಭಿಸಿ ಟೆಲಿಕಾಂ ಮಾರುಕಟ್ಟೆಯ ಬುಡವನ್ನೇ ಅಲುಗಾಡಿಸುತ್ತಿರುವ ಜಿಯೋ ಈಗ ಅಧಿಕೃತವಾಗಿ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಇಲ್ಲಿಯವರೆಗೆ ಪರೀಕ್ಷಾರ್ಥ ಪ್ರಯೋಗ ಮಾಡುತ್ತಿದ್ದ ಜಿಯೋ ಗಿಗಾ ಫೈಬರ್ ಇಂದಿನಿಂದ ಎಲ್ಲ ಬಳಕೆದಾರರಿಗೆ ಸಿಗಲಿದೆ.

    ದೇಶದ ಒಟ್ಟು 1600 ನಗರಗಳಲ್ಲಿ ಈ ಸೇವೆ ಆರಂಭಗೊಂಡಿದೆ. ಸದ್ಯ ಭಾರತದಲ್ಲಿ 25 ಎಂಬಿಪಿಎಸ್ ವೇಗದಲ್ಲಿ ಬ್ರಾಡ್ ಬ್ಯಾಡ್ ಸಿಗುತ್ತದೆ. ಅಭಿವೃದ್ಧಿ ಹೊಂದಿರುವ ದೇಶವಾದ ಅಮೆರಿಕದಲ್ಲಿ 90 ಎಂಬಿಪಿಎಸ್ ವೇಗದಲ್ಲಿ ಸಿಕ್ಕಿದರೆ ನಾವು 100 ಎಂಬಿಪಿಎಸ್ ವೇಗದ ಬ್ರಾಡ್‍ಬ್ಯಾಂಡ್ ಕಲ್ಪಿಸುತ್ತೇವೆ. ಪ್ಲಾಟಿನಂ ಮತ್ತು ಟೈಟಾನಿಯಂ ಪ್ಯಾಕ್ ಹಾಕಿಸಿದ ಗ್ರಾಹಕರಿಗೆ 1ಜಿಬಿಪಿಎಸ್ ವೇಗದ ಸಂಪರ್ಕ ನೀಡಲಾಗುವುದು. ಈ ಮೂಲಕ ಭಾರತ ವಿಶ್ವದ ಟಾಪ್ ಬ್ರಾಡ್‍ಬ್ಯಾಂಡ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಜಿಯೋ ಹೇಳಿದೆ.

    ಏನು ಸೇವೆ ಸಿಗುತ್ತೆ?
    ಅಲ್ಟ್ರಾ ಹೈ ಸ್ಪೀಡ್ ಬ್ರಾಡ್‍ಬ್ಯಾಂಡ್(1ಜಿಬಿಪಿಎಸ್ ವರೆಗೆ), ದೇಶಿಯ ಕರೆಗಳು ಪೂರ್ಣ ಉಚಿತ, ಟಿವಿ ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಕಾಲರ್, ಒಟಿಟಿ ಅಪ್ಲಿಕೇಶನ್ ಬಳಕೆ, ಗೇಮಿಂಗ್, ಹೋಮ್ ನೆಟ್‍ವರ್ಕಿಂಗ್, ಡಿವೈಸ್ ಸೆಕ್ಯೂರಿಟಿ, ವರ್ಚುಯಲ್ ರಿಯಲಿಟಿ ಅನುಭವ ಸಿಗಲಿದೆ.

    ಪ್ಲಾನ್ ದರ ಎಷ್ಟು?
    ತಿಂಗಳಿಗೆ ಕನಿಷ್ಟ 699 ರೂ. ನಿಂದ ಆರಂಭಗೊಂಡು 8,499 ರೂ. ವರೆಗಿನ ಪ್ಯಾಕ್ ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಎಲ್ಲ ಪ್ಲಾನ್ ಗಳಲ್ಲಿ ಮೇಲೆ ತಿಳಿಸಿದ ಎಲ್ಲ ಸೇವೆಗಳನ್ನು ಬಳಸಬಹುದಾಗಿದೆ. ಗೇಮಿಂಗ್, ಡಿವೈಸ್ ಸೆಕ್ಯೂರಿಟಿ, ಹೋಮ್ ನೆಟ್‍ವರ್ಕಿಂಗ್, ವಿಆರ್, ವಿಡಿಯೋ ಸೇವೆಗಳು, ವಿಡಿಯೋ ಕಾಲಿಂಗ್ ಮತ್ತು ಕಾನ್ಫರೆನ್ಸ್ ಮಾಡಲು ಬೇಕಾಗಿರುವ ಸಾಧನಗಳನ್ನು ಗ್ರಾಹಕರು ಹಣವನ್ನು ಪಾವತಿಸಿ ಖರೀದಿಸಬೇಕು.

    ಇದರ ಜೊತೆ ಮೂರು, ಆರು ಮತ್ತು ಒಂದು ವರ್ಷದ ಪ್ಲಾನ್ ಇದೆ. ಜಿಯೋ ಬ್ಯಾಂಕ್ ಗಳ ಜೊತೆ ಮಾತುಕತೆ ನಡೆಸಿದ್ದ ವಾರ್ಷಿಕ ಪ್ಲಾನ್ ಖರೀದಿಸಿದವರು ಇಎಂಐ ಮೂಲಕ ಹಣವನ್ನು ಪಾವತಿಸಬಹುದಾಗಿದೆ.

    ಜಿಯೋ ಗಿಗಾ ಫೈಬರ್ ಬ್ರೋಂಜ್, ಸಿಲ್ವರ್, ಗೋಲ್ಡ್, ಡೈಮಡ್, ಪ್ಲಾಟಿನಂ, ಟೈಟಾನಿಯಂ ಒಟ್ಟು ಆರು ಪ್ಲಾನ್ ನಲ್ಲಿ ಸೇವೆ ನೀಡಲಿದೆ. ವಾರ್ಷಿಕವಾಗಿ ಗೋಲ್ಡ್ ನಂತರದ ಪ್ಲಾನ್ ಖರೀದಿಸಿದರೆ 4ಕೆ ಟಿವಿ ನೀಡಲಾಗುವುದು ಎಂದು ಜಿಯೋ ತಿಳಿಸಿದೆ.

    ಜಿಯೋ ಸೇವೆ ಆರಂಭಗೊಂಡಾಗ ಹೇಗೆ ವೆಲಕಂ ಆಫರ್ ಪ್ರಕಟಿಸಿತ್ತೋ ಅದೇ ರೀತಿಯಾಗಿ ವಾರ್ಷಿಕ ಪ್ಲಾನ್ ಖರೀದಿಸುವ ಗ್ರಾಹಕರಿಗೆ ಇಲ್ಲೂ ವೆಲಕಂ ಆಫರ್ ಸಿಗಲಿದೆ.

    ಈ ವೆಲ್ಕಂ ಆಫರಿನಲ್ಲಿ ಜಿಯೋ ಹೋಮ್ ಗೇಟ್‍ವೇ, ಜಿಯೋ 4ಕೆ ಸೆಟ್ ಟಾಪ್ ಬಾಕ್ಸ್, 4ಕೆ ಟಿವಿ ಸೆಟ್(ಗೋಲ್ಡ್, ಡೈಮಂಡ್, ಪ್ಲಾಟಿನಂ, ಟೈಟಾನಿಯಂ ಗ್ರಾಹಕರಿಗೆ ಮಾತ್ರ ಅನ್ವಯ), ಉಚಿತ ಆನ್ ಓವರ್ ದಿ ಟಾಪ್(ಒಟಿಟಿ) ಅಪ್ಲಿಕೇಶನ್, ಅನ್‍ಲಿಮಿಟೆಟ್ ವಾಯ್ಸ್ ಮತ್ತು ಡೇಟಾ ಸೇವೆ ಸಿಗಲಿದೆ.

    ತಿಂಗಳಿಗೆ ಎಷ್ಟು ರೂ? ಎಷ್ಟು ಸ್ಪೀಡ್?
    ಬ್ರೋಂಜ್ – 699 ರೂ., 100 ಎಂಬಿಪಿಎಸ್, 100 ಜಿಬಿ+50 ಜಿಬಿ ಉಚಿತ
    ಸಿಲ್ವರ್ – 849 ರೂ., 100 ಎಂಬಿಪಿಎಸ್, 200 ಜಿಬಿ + 200 ಜಿಬಿ ಉಚಿತ
    ಗೋಲ್ಡ್ -1,299 ರೂ., 250 ಎಂಬಿಪಿಎಸ್, 500 ಜಿಬಿ +250 ಜಿಬಿ ಉಚಿತ
    ಡೈಮಂಡ್ – 2,499 ರೂ., 500 ಎಂಬಿಪಿಎಸ್, 1250 ಜಿಬಿ +250 ಜಿಬಿ ಉಚಿತ
    ಪ್ಲಾಟಿನಂ – 3,999 ರೂ., 1 ಜಿಬಿಪಿಎಸ್, 2500 ಜಿಬಿ
    ಟೈಟಾನಿಯಂ – 8,499 ರೂ., 1 ಜಿಬಿಪಿಎಸ್, 5000 ಜಿಬಿ

    ಜಿಯೋ ಫೈಬರ್ ಪಡೆಯುವುದು ಹೇಗೆ?
    www.jio.com ಅಥವಾ MyJio ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಜಿಯೋ ಫೈಬರ್ ಸೇವೆ ಸಂಬಂಧ ನೊಂದಣಿ ಮಾಡಿ. ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಜಿಯೋ ಫೈಬರ್ ಸಿಬ್ಬಂದಿ  ನಿಮ್ಮನ್ನು ಸಂಪರ್ಕಿಸುತ್ತಾರೆ.

     

  •  ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

     ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

    ಮುಂಬೈ: ಬ್ರಾಡ್‍ಬ್ಯಾಂಡ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿರುವ ಜಿಯೋ ಫೈಬರ್ ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಆರಂಭವಾಗಲಿದೆ.

    ರಿಲಯನ್ಸ್ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಈ ವಿಚಾರವನ್ನು ತಿಳಿಸಿದ್ದು ಅಮೆರಿಕದಲ್ಲಿರುವ ವೇಗದ ಡೇಟಾಕ್ಕಿಂತಲೂ ನಾವು ವೇಗದ ಡೇಟಾ ಸೇವೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಅಮೆರಿಕದಲ್ಲಿ ಸಾಧಾರಾಣ ಡೇಟಾ ಸ್ಪೀಡ್ 90 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ಇದ್ದರೆ, ಜಿಯೋದ ಕಡಿಮೆ ಸ್ಪೀಡ್ 100 ಎಂಬಿಪಿಎಸ್ ಇರಲಿದೆ. ಮುಂದೆ 1 ಜಿಬಿಪಿಎಸ್(ಗಿಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಸೇವೆ ನೀಡಲಾಗುವುದು ಎಂದು ಮುಕೇಶ್ ಅಂಬಾನಿ ವಿವರಿಸಿದರು.

    1600 ನಗರಗಳಲ್ಲಿ ಆರಂಭದಲ್ಲಿ ಆರಂಭಿಸಿ 2 ಕೋಟಿ ಜನ, 1.5 ವ್ಯಾಪಾರ ಸಂಸ್ಥೆಗಳನ್ನು ತಲುಪುವ ಗುರಿಯನ್ನು ಜಿಯೋ ಹಾಕಿಕೊಂಡಿದೆ. ಈಗಾಗಲೇ ಜಿಯೋ ಫೈಬರ್ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, 5 ಲಕ್ಷ ಮನೆಗೆ ಸಂಪರ್ಕ ನೀಡಲಾಗಿದೆ. ಒಟ್ಟು 34 ಕೋಟಿ ಗ್ರಾಹಕರನ್ನು ತಲುಪುವ ಮೂಲಕ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಜಿಯೋ ಈಗ ವಿಶ್ವದ ನಂಬರ್ 2 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ.

    ಬೆಲೆ ಎಷ್ಟು? ವಿಶೇಷತೆ ಏನು?
    ತಿಂಗಳಿಗೆ 700 ರೂ. ಕನಿಷ್ಟ ಪ್ಯಾಕ್ ಇರಲಿದ್ದು 10 ಸಾವಿರ ರೂ. ಗರಿಷ್ಟ ಪ್ಯಾಕ್ ಇರಲಿದೆ. ದೇಶದ ಒಳಗಡೆಯ ಕರೆಗೆ ಸಂಪೂರ್ಣ ಉಚಿತವಾಗಿದ್ದು, ವಿದೇಶದ ಕರೆಗಳೂ ಕಡಿಮೆ ದರದಲ್ಲಿ ಇರಲಿದೆ. ಅದರಲ್ಲೂ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ತಿಂಗಳಿಗೆ 500 ರೂ. ಪಾವತಿಸಿದ್ರೆ ಅನ್‍ಲಿಮಿಟೆಡ್ ಕರೆ ಮಾಡಬಹುದು.

    2016ರಲ್ಲಿ ಜಿಯೋ ತನ್ನ ಮೊಬೈಲ್ ಸೇವೆಗೆ ಎಂಟ್ರಿ ಕೊಟ್ಟಾಗ ಮೂರು ತಿಂಗಳು ವೆಲಕಂ ಆಫರ್ ಬಿಡುಗಡೆ ಮಾಡಿತ್ತು. ಮೂರು ತಿಂಗಳು ಉಚಿತವಾಗಿ ಡೇಟಾ ನೀಡುವ ಆಫರ್ ಭರ್ಜರಿ ಯಶಸ್ವಿ ಕಂಡಿತ್ತು. ಈಗ ಇದೇ ರೀತಿಯ ಉಚಿತ ಆಫರ್ ಬಿಡುಗಡೆ ಮಾಡಿದೆ. ಒಂದು ವರ್ಷದ ವಾರ್ಷಿಕ ಪ್ಲಾನ್ ಖರೀದಿ ಮಾಡಿದವರಿಗೆ ಉಚಿತವಾಗಿ 4ಕೆ ಎಲ್‍ಇಡಿ ಟಿವಿ ಮತ್ತು 4ಕೆ ಸೆಟ್ ಟಾಪ್ ಬಾಕ್ಸ್ ನೀಡಲಿದೆ. ಟಿವಿ ಯಾವ ಕಂಪನಿಯದ್ದು ಗಾತ್ರ ಎಷ್ಟು? ಒಂದು ವರ್ಷದ ಪ್ಲಾನ್ ಗೆ ಎಷ್ಟು ರೂ. ಶುಲ್ಕ ಎನ್ನುವ ವಿವರ ಸೆಪ್ಟೆಂಬರ್ 5 ರಂದು ಗೊತ್ತಾಗಲಿದೆ.

    ಗ್ರಾಹಕರನ್ನು ಸೆಳೆಯಲು ಜಿಯೋ ಮತ್ತೊಂದು ಆಫರ್ ಬಿಡುಗಡೆ ಮಾಡಿದ್ದು ಇನ್ನು ಮುಂದೆ ಬಿಡುಗಡೆಯಾದ ದಿನವೇ ಮನೆಯಲ್ಲಿ ಕುಳಿತು ಚಿತ್ರವನ್ನು ವೀಕ್ಷಿಸಬಹುದು. 2020ರ ಮಧ್ಯಂತರಲ್ಲಿ ಇದು ಜಾರಿಯಾಗಲಿದೆ, ಇದಕ್ಕೆ ‘ಜಿಯೋ ಫಸ್ಟ್ ಡೇ ಫಸ್ಟ್ ಶೋ‘ ಹೆಸರನ್ನು ಇರಿಸಿದೆ.

  • ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ನವದೆಹಲಿ: ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

    ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗುತ್ತಿವೆ ಎಂದು ಆರೋಪಿಸಿ ಜಿಯೋ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ದೂರು ನೀಡಿತ್ತು.

    ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ನೀತಿ ಆಯೋಗ, ಆರ್ಥಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳಿರುತ್ತಾರೆ. ಈಗಾಗಲೇ ವೊಡಾಫೋನ್ ಮತ್ತು ಏರ್ ಟೆಲ್ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ಡಿಸಿಸಿ ಈಗ ದಂಡಕ್ಕೆ ಅನುಮೋದನೆ ನೀಡಿರುವುದು ಮತ್ತೆ ಹಿನ್ನಡೆಯಾಗಿದೆ.

    ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರ್‍ರಾಜನ್ ತಿಳಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಈ ಶಿಫಾರಸ್ಸಿನ ಬದಲಾವಣೆ ಸಾಧ್ಯವೇ ಎಂದು ಕೇಳಿ ಟ್ರಾಯ್‍ಗೆ ವಾಪಸ್ ಕಳುಹಿಸಲಾಗಿತ್ತು. ಆದರೆ ಟ್ರಾಯ್ ಈ ಶಿಫಾರಸ್ಸಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿತ್ತು.

    2016ರಲ್ಲೇ ಟ್ರಾಯ್ ಈ ಬಗ್ಗೆ ಮೊದಲ ಶಿಫಾರಸ್ಸು ಮಾಡಿತ್ತು. ಡಿಸಿಸಿ ಅನುಮೋದನೆ ಕೊಟ್ಟ ಬಳಿಕ ಈ ಶಿಫಾರಸ್ಸು ದೂರಸಂಪರ್ಕ ಸಚಿವಾಲಯಕ್ಕೆ ಹೋಗುತ್ತದೆ. ಈ ವಿಚಾರದಲ್ಲಿ ದೂರಸಂಪರ್ಕ ಸಚಿವಾಲಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುಂದರ್‍ರಾಜನ್ ತಿಳಿಸಿದರು.

    ಏನಿದು ಪ್ರಕರಣ?
    2016ರ ಸೆಪ್ಟೆಂಬರ್ 5 ರಂದು ಜಿಯೋ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಒಳ ಬರುವ ಮತ್ತು ಹೊರ ಹೋಗುವ ಕರೆಗಳಲ್ಲಿ ಜಿಯೋ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದರು. ಎರಡು ಟೆಲಿಕಾಂ ಕಂಪನಿಗಳ ಮಧ್ಯೆ ಒಂದು ಕರೆ ಪೂರ್ಣಗೊಳ್ಳಬೇಕಾದರೆ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ಬಳಕೆ ಮಾಡಲಾಗುತ್ತದೆ. ಅಕ್ಟೋಬರ್ 2016ರಲ್ಲಿ ಟ್ರಾಯ್ ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳಿಗೆ 1,050 ಕೋಟಿ ರೂ., ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

    ಗ್ರಾಹಕ ವಿರೋಧಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತಿದೆ ಎಂದು ಜಿಯೋ ದೂರು ನೀಡಿತ್ತು. ಈ ವಿಚಾರದ ಬಗ್ಗೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿ, ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ ಎಂದು ತಿಳಿಸಿದೆ.

  • ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.

    ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ ಈ ಸೇವೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಆರಂಭದಲ್ಲಿ ಉಚಿತ:
    ಜಿಯೋ ಸೇವೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಮೂರು ತಿಂಗಳು ಉಚಿತ ಸೇವೆ ನೀಡಿತ್ತು. ಜಿಯೋ ಫೈಬರ್ ಕೂಡ ಒಂದು ವರ್ಷ ಉಚಿತವಾಗಿ ಸಿಗಲಿದೆ. ಲ್ಯಾಂಡ್‍ಲೈನ್‍ನಲ್ಲಿ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿ ನೀಡಲಿದೆ. ಲ್ಯಾಂಡ್‍ಲೈನ್ ಮತ್ತು ಟಿವಿ ವಾಹಿನಿ ಸೇವೆಗಳು ಮೂರು ತಿಂಗಳಿನಲ್ಲಿ ಸೇರ್ಪಡೆಯಾಗಲಿದೆ. ಈಗಾಗಲೇ ಟಿವಿ ವೀಕ್ಷಣೆಗೆ ಜಿಯೋ ಟಿವಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ನಲ್ಲಿ ಬರುವ ಎಲ್ಲ ಟಿವಿಗಳನ್ನು ವೀಕ್ಷಿಸಬಹುದಾಗಿದೆ. ಈ ಸೇವೆ ಆರಂಭಗೊಂಡ ದಿನದಿಂದ ಒಂದು ವರ್ಷದವರೆಗೆ ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದ್ದು, ಒಂದು ವರ್ಷದ ಬಳಿಕ ಗ್ರಾಹಕರು ಬೇಕಾದ ಪ್ಯಾಕ್‍ಗೆ ಅನುಗುಣವಾಗಿ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಸ್ಪೀಡ್ ಎಷ್ಟು?
    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಜಿಯೋದ ಡೌನ್‍ಲೋಡ್ ಸ್ಪೀಡ್ 22.2 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದೆ. ಸದ್ಯ ಜಿಯೋ ದೇಶದಲ್ಲಿ ಮೊಬೈಲ್ ಡೇಟಾ ಸ್ಪೀಡ್‍ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಈಗ ಬರುತ್ತಿರುವ ಜಿಯೋ ಫೈಬರ್‍ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ ಇಂಟರ್‍ನೆಟ್ ಸೇವೆ ಸಿಗಲಿದೆ.

    ರೂಟರ್ ಖರೀದಿಸಬೇಕು:
    ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀಸಬೇಕು. ಎಲ್ಲ ಇಂಟರ್‍ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು.

    ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

    ಎಲ್ಲೆಲ್ಲಿ ಸಿಗುತ್ತೆ?
    ಸದ್ಯ ದೆಹಲಿ ಮತ್ತು ಮುಂಬೈ ನಗರದಲ್ಲಿ ಪರೀಕ್ಷೆಗಳು ನಡೆಯುತ್ತಿದೆ. ದೇಶದ 1,600 ನಗರಗಳಲ್ಲಿ ಜಿಯೋ ಫೈಬರ್ ನೀಡಲು ಕಂಪನಿ ಪ್ಲಾನ್ ಮಾಡಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಜಿಯೋ ಫೈಬರ್ ಗ್ರಾಹಕರ ನೊಂದಣಿ ಆರಂಭಿಸಿದೆ.

    ಇಲ್ಲಿಯವರೆಗೆ ಕಂಪನಿ ಈ ಪ್ಲಾನ್ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿ ಅಧಿಕಾರಿಯೊಬ್ಬರು, ಇಲ್ಲಿಯವರೆಗೂ ಯಾವ ಪ್ಲಾನ್ ಬಗ್ಗೆ ಮಾಹಿತಿ ನಮಗೆ ಇಲ್ಲ. ಜಿಯೋ ಗಿಗಾ ಫೈಬರ್ ಬ್ರಾಂಡ್ ಮಾರುಕಟ್ಟೆಗೆ ಬರಲು ಅಂದಾಜು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಭಾರತದಲ್ಲಿ 1.8 ಕೋಟಿ ಜನ ಬ್ರಾಂಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದರೆ 53 ಕೋಟಿ ಜನ ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಅಧಿಕೃತವಾಗಿ ಆರಂಭವಾದರೆ ಟೆಲಿಕಾಂ ಕಂಪನಿಗಳಿಗೆ ಹೇಗೆ ಹೊಡೆತ ನೀಡಿತ್ತೋ ಅದೇ ರೀತಿಯಾಗಿ ಬ್ರಾಡ್‍ಬ್ಯಾಂಡ್ ಕಂಪನಿಗಳಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.

  • ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ಜಿಯೋ

    ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ಜಿಯೋ

    ಮುಂಬೈ: ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ಜಿಯೋ ಈಗ ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದೆ. ಆರಂಭಗೊಂಡ ಎರಡೂವರೆ ವರ್ಷದಲ್ಲಿ 36 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಾರ್ಚ್ 2 ರಂದು ಜಿಯೋ ಈ ಸಾಧನೆ ನಿರ್ಮಿಸಿದೆ. ಈ ಸಾಧನೆ ನಿರ್ಮಿಸಿದ್ದಕ್ಕೆ ಐಪಿಎಲ್ ಕ್ರಿಕೆಟ್ ಪ್ರಸಾರದ ವೇಳೆ 300 ದಶಲಕ್ಷ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ಜಿಯೋ ಟಿವಿ ಜಾಹೀರಾತು ನೀಡುತ್ತಿದೆ.

    ಅಧಿಕೃತವಾಗಿ ಆರಂಭಗೊಂಡ 170 ದಿನದಲ್ಲಿ 10 ಲಕ್ಷ ಗ್ರಾಹಕರು ಜಿಯೋ ಸಂಪಾದಿಸಿತ್ತು. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ 10 ಲಕ್ಷ ಗ್ರಾಹಕರನ್ನು ಸಂಪಾದಿಸಿದ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿತ್ತು.

    ಭಾರತಿ ಏರ್‌ಟೆಲ್ ಅಧಿಕೃತವಾಗಿ ಆರಂಭಗೊಂಡ 19 ವರ್ಷದಲ್ಲಿ 30 ಕೋಟಿ ಗ್ರಾಹಕರನ್ನು ಸಂಪಾದಿಸಿತ್ತು.

    ಐಡಿಯಾ ಜೊತೆಗೆ ವಿಲೀನದಿಂದಾಗಿ ವೋಡಾಫೋನ್ ಕಂಪನಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದ್ದು, 40 ಕೋಟಿ ಗ್ರಾಹಕರಿದ್ದಾರೆ. ಏರ್‍ಟೆಲ್ 34 ಕೋಟಿ ಗ್ರಾಹಕರನ್ನು ಹೊಂದಿದೆ.

    2007 ಫೆ.15 ರಂದು ಜಿಯೋ ಕಂಪನಿ ಆರಂಭಗೊಂಡಿದ್ದರೂ ಅಧಿಕೃತವಾಗಿ 2016ರ ಸೆ.5 ರಂದು ಆರಂಭಗೊಂಡಿತ್ತು. ಆರಂಭದ ಮೂರು ತಿಂಗಳು ಉಚಿತ ಡೇಟಾ ನೀಡಿ ಗ್ರಾಹಕರ ಸಂಖ್ಯೆಯನ್ನು ಜಿಯೋ ಹೆಚ್ಚಿಸಿಕೊಂಡಿತ್ತು.

  • ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ದೇಶದಲ್ಲಿ ಡೇಟಾ ಕ್ರಾಂತಿ ನಡೆದಿದ್ದು ನಿಮಗೆ ಗೊತ್ತೇ ಇದೆ. ಈಗ ಈ ಕ್ರಾಂತಿಯಿಂದ ಏನಾಯ್ತು ಎನ್ನುವ ಪ್ರಶ್ನೆಗೆ ಉತ್ತರ ಎಂಬಂತೆ ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

    ಭಾರತದಲ್ಲಿ ಒಂದು ಜಿಬಿ ಮೊಬೈಲ್ ಡೇಟಾಕ್ಕೆ ಸರಾಸರಿ 18.50 ರೂ. ಇದ್ದರೆ ವಿಶ್ವದಲ್ಲಿ 1 ಜಿಬಿ ಡೇಟಾ ದರ ಸರಾಸರಿ 600 ರೂ. ಇದೆ ಎಂದು ಕೇಬಲ್ ಕೊ ಡಾಡ್ ಯುಕೆ ಸಂಸ್ಥೆ ತಿಳಿಸಿದೆ. ಒಟ್ಟು 232 ದೇಶಗಳನ್ನು ಅಧ್ಯಯನಕ್ಕೆ ಪರಗಣಿಸಿ ಈ ವರದಿಯನ್ನು ಸಿದ್ದಪಡಿಸಲಾಗಿದೆ.

    ಭಾರತದಲ್ಲಿ ಒಂದು ಜಿಬಿ ಡೇಟಾಕ್ಕೆ ಕನಿಷ್ಟ ದರ 1.75 ರೂ. ಇದ್ದರೆ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ. ಇಲ್ಲಿ 1 ಜಿಬಿ ಡೇಟಾಗೆ 0.26 ಡಾಲರ್(18.22 ರೂ.) ದರ ಇದೆ. ಮೂರನೇ ಸ್ಥಾನದಲ್ಲಿ ಚೀನಾ(60.97 ರೂ.), ನಾಲ್ಕನೇಯ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್(105.14 ರೂ.) ಇದೆ. ಒಂದು ಜಿಬಿಗೆ ಅತಿ ಹೆಚ್ಚು ಹಣವನ್ನು ಜಿಂಬಾಬ್ವೆ ಜನ ಪಾವತಿಸುತ್ತಿದ್ದಾರೆ. ಇಲ್ಲಿ 1 ಜಿಬಿ ಡೇಟಾ ದರ 525.72 ರೂ. ಇದೆ. ಭಾರತದ ಮೇಲೆ ಉಗ್ರರನ್ನು ಕಳುಹಿಸಿ ದಾಳಿ ನಡೆಸುವ ಪಾಕಿಸ್ತಾನದಲ್ಲಿ 1 ಜಿಬಿ ಡೇಟಾ ಕನಿಷ್ಟ ದರ 40 ಪಾಕಿಸ್ತಾನ ರೂ. ಇದೆ.

    ಭಾರತದಲ್ಲಿ ಭಾರೀ ವೇಗದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಡಿಮೆ ದರದಲ್ಲಿ ಡೇಟಾವನ್ನು ನೀಡುತ್ತಿವೆ ಎಂದು ಅಧ್ಯಯನ ತಿಳಿಸಿದೆ.

    ವಿಶ್ವದ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ದರ ಕಡಿಮೆ ಎನ್ನುವುದು ಹೊಸ ಸುದ್ದಿಯಲ್ಲ. ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಿಯೋಗೆ ಸಂಬಂಧಿಸಿದ ಹೊಸ ಪ್ಲಾನ್ ಬಿಡುಗಡೆ ಮಾಡುವಾಗಲೇ ಈ ವಿಚಾರವನ್ನು ತಿಳಿಸಿದ್ದರು. 2015ರ ಸೆಪ್ಟೆಂಬರ್ 5 ರಂದು ಜಿಯೋ ಎಂಟ್ರಿ ಕೊಟ್ಟ ಬಳಿಕ ದೇಶದಲ್ಲಿ ಡೇಟಾ ಸಮರ ಆರಂಭಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

    ಹೊಸ ವರ್ಷಕ್ಕೆ ಜಿಯೋನಿಂದ ಧಮಾಕಾ ಆಫರ್!

    ನವದೆಹಲಿ: ಹಬ್ಬಗಳು ಬಂದರೆ ಸಾಕು ವ್ಯಾಪಾರಸ್ಥರು ಗ್ರಾಹಕರಿಗಾಗಿ ವಿಶೇಷ ಆಫರ್ ಗಳನ್ನು ನೀಡುತ್ತಾರೆ. ಈ ಆಫರ್ ಗಳ ಮುಲಕ ಗ್ರಾಹಕರನ್ನು ತಮ್ಮ ಉತ್ಪನ್ನದತ್ತ ಸೆಳೆದುಕೊಳ್ಳುವುದು ಮಾರುಕಟ್ಟೆಯ ಮತ್ತೊಂದು ಉದ್ದೇಶ. ಮೊಬೈಲ್ ಗ್ರಾಹಕರಿಗೂ ಈ ರೀತಿ ಸೌಲಭ್ಯಗಳು ಲಭ್ಯವಾಗಿರುತ್ತೇವೆ. ಇದೀಗ ಜಿಯೋ ತನ್ನ ನೆಟ್‍ವರ್ಕ್ ಬಳಕೆದಾರರಿಗೆ ಬಂಪರ್ ಆಫರ್ ನೀಡಿದೆ.

    ಜಿಯೋ ಬಳಕೆದಾರರು 399 ರೂ. ರಿಚಾರ್ಜ್ ಮಾಡಿಕೊಂಡಲ್ಲಿ 100% ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಆಫರ್ ಡಿಸೆಂಬರ್ 29ರಿಂದ ಆರಂಭವಾಗಿದ್ದು, ಜನವರಿ 30, 2019ರವರೆಗೂ ಲಭ್ಯವಿರಲಿದೆ. ಈ ಆಫರ್ ಪಡೆದುಕೊಳ್ಳಲು ಗ್ರಾಹಕರು ಮೊದಲಿಗೆ MyJio ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಮೂಲಕವೇ 399 ರೂ. ರಿಚಾರ್ಜ್ ಮಾಡಿಕೊಳ್ಳಬೇಕು. ರಿಚಾರ್ಜ್ ಬಳಿಕ ಮೈ ಕೂಪನ್ ಸೆಕ್ಷನ್ ನಿಂದ 399 ರೂ. AJIO  ಕೂಪನ್ ಸಿಗುತ್ತದೆ. AJIO ಮುಂದಿನ 72 ಗಂಟೆಗಳಲ್ಲಿ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.

    ಕ್ಯಾಶ್‍ಬ್ಯಾಕ್ ಪಡೆದುಕೊಳ್ಳೋದು ಹೇಗೆ?: 72 ಗಂಟೆಗಳ ಬಳಿಕ 399 ರೂ. ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. AJIO ವೆಬ್‍ಸೈಟ್ ಗೆ ಹಣವನ್ನ ರಿದೀಮ್ ಮಾಡಿಕೊಳ್ಳಬಹುದು. ಈ ಕ್ಯಾಶ್‍ಬ್ಯಾಕ್ ಪಡೆದುಕೊಳ್ಳಲು ನೀವು ಕನಿಷ್ಠ 1 ಸಾವಿರ ರೂ. ಶಾಪಿಂಗ್ ಮಾಡಬೇಕು. ಅಂದರೆ ನೀವು 1 ಸಾವಿರ ರೂ. ಶಾಪಿಂಗ್ ಮಾಡಿದಾಗ ಬಿಲ್ ನಲ್ಲಿ ತಾನಾಗಿಯೇ 399 ರೂ. ಕಡಿತವಾಗುತ್ತದೆ. 15 ಮಾರ್ಚ್, 2019ರವರೆಗೆ ಈ ಕೂಪನ್ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

    399 ರೂ. ರಿಚಾರ್ಜ್ ಪ್ಲಾನ್ ಹೀಗಿದೆ: ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಟ್ಟಾರೆಯಾಗಿ ನಿಮಗೆ ಈ ರಿಚಾರ್ಜ್ ನಿಂದ 126 ಜಿಬಿ 4ಜಿ ಡಾಟಾ ಸಿಗಲಿದೆ. ಒಂದು ದಿನಕ್ಕೆ 1.5ಜಿಬಿ 4ಜಿ ಡಾಟಾ ನಿಮ್ಮದಾಗಲಿದೆ. ಪ್ರತಿದಿನ 100 SMS ಉಚಿತ. ಎಲ್ಲ ನೆಟ್‍ವರ್ಕ್ ಕಾಲಿಂಗ್ ಫ್ರೀ ಜೊತೆ ರೋಮಿಂಗ್ ಸಿಗಲಿದೆ. ಈ ರಿಚಾರ್ಜ್ ನಿಂದ ಜಿಯೋದ ಎಲ್ಲ ಆ್ಯಪ್ ಗಳ ಬಳಕೆ ಉಚಿತವಾಗಿ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ಮುಂಬೈ: ಭಾರತ ಮತ್ತು ಜಪಾನ್ ನಡುವೆ ವಾಯ್ಸ್ ಓವರ್ ಎಲ್‍ಟಿಇ(ವಿಓಎಲ್‍ಟಿಇ) ಆಧರಿತ ಒಳಬರುವ (ಇನ್‍ಬೌಂಡ್) ಅಂತರಾಷ್ಟ್ರೀಯ ರೋಮಿಂಗ್ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.

    ಈ ಸೇವೆಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಿಓಎಲ್‍ಟಿಇ ಆಧರಿತ ಅಂತರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸಿದ ಮೊದಲ 4ಜಿ ಮೊಬೈಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಈ ಸೇವೆಯನ್ನು ಬಳಸುವ ಅಂತರಾಷ್ಟ್ರೀಯ ಪ್ರಯಾಣಿಕರು ಎಚ್‍ಡಿ ವಾಯ್ಸ್ ಹಾಗೂ ಎಲ್‍ಟಿಇ ಅತಿವೇಗದ ಡೇಟಾ ಸಂಪರ್ಕವನ್ನು ಪಡೆಯಲಿದ್ದಾರೆ.

    ಜಿಯೋನ ಸಂಪೂರ್ಣ-ಐಪಿ ಮತ್ತು 4ಜಿ ಜಾಲದಲ್ಲಿ ಅತಿವೇಗದ ಡೇಟಾ ಹಾಗೂ ವಾಯ್ಸ್ ಸೇವೆಗಳನ್ನು ಅಂತರಾಷ್ಟ್ರೀಯ ಪ್ರಯಾಣಿಕರೂ ಪಡೆಯಲು ಜಿಯೋ ವಿಓಎಲ್‍ಟಿಇ ಕಾಲಿಂಗ್ ಹಾಗೂ ಎಲ್‍ಟಿಇ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ನೆರವಾಗಲಿದ್ದು, ಇದನ್ನು ಬಳಸಲಿರುವ ಮೊದಲ ಅಂತರಾಷ್ಟ್ರೀಯ ಮೊಬೈಲ್ ಸೇವಾ ಸಂಸ್ಥೆ ಜಪಾನಿನ ಕೆಡಿಡಿಐ ಕಾರ್ಪೊರೇಶನ್ ಆಗಲಿದೆ.

    “ಇಡೀ ಭಾರತ ಮತ್ತು ಹಾಗೂ ಜಪಾನಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಡೇಟಾ ಮತ್ತು ವಾಯ್ಸ್ ಅನುಭವವನ್ನು ನೀಡುವುದು ರಿಲಯನ್ಸ್ ಜಿಯೋ ಗುರಿ. ಭಾರತದ ಮೊದಲ ಅಂತರಾಷ್ಟ್ರೀಯ ವಿಓಎಲ್‍ಟಿಇ ಹಾಗೂ ಎಚ್‍ಡಿ ರೋಮಿಂಗ್ ಬಳಕೆದಾರರಾಗಿ ಕೆಡಿಡಿಐ ಗ್ರಾಹಕರನ್ನು ನಾವು ಜಿಯೋಗೆ ಸ್ವಾಗತಿಸುತ್ತೇವೆ,” ಎಂದು ರಿಲಯನ್ಸ್ ಜಿಯೋದ ಮಾರ್ಕ್ ಯಾರ್ಕೋಸ್ಕಿ ಹೇಳಿದರು.

    ಸೆಪ್ಟೆಂಬರ್ 2018ರಲ್ಲಿ 20.6 ಎಂಬಿಪಿಎಸ್ ಡೌನ್‍ಲೋಡ್ ವೇಗದೊಡನೆ, ಟ್ರಾಯ್‍ನ ಮೈಸ್ಪೀಡ್ ಅಪ್ಲಿಕೇಶನ್‍ನಿಂದ ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಸತತವಾಗಿ ದೇಶದ ಅತ್ಯಂತ ವೇಗದ ಜಾಲವೆಂಬ ಹೆಗ್ಗಳಿಕೆಯನ್ನು ಜಿಯೋ ಪಡೆದುಕೊಂಡಿದೆ. ದೇಶದಲ್ಲೇ ಅತ್ಯಂತ ದೊಡ್ಡದಾದ ಎಲ್‍ಟಿಇ ವ್ಯಾಪ್ತಿ ಹೊಂದಿರುವ ಹೆಗ್ಗಳಿಕೆಯನ್ನೂ ಜಿಯೋ ಹೊಂದಿದೆ.

    ಪ್ರಾರಂಭವಾದ ಎರಡೇ ವರ್ಷಗಳಲ್ಲಿ 25.2 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಪಡೆದು, ವಿಶ್ವದ 9ನೇ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಜಿಯೋ ಬೆಳೆದಿದೆ. ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕ್ ಗಳನ್ನು ಘೋಷಿಸುವುದರೊಂದಿಗೆ ಭಾರತವನ್ನು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿ ಜಿಯೋ ಈಗ ಬದಲಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv