Tag: ಜಿಮ್

  • ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

    ನಿಮ್ಮನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ: ಪ್ರಕಾಶ್ ರೈ

    ಹೈದರಾಬಾದ್: ಬಹುಭಾಷಾ ನಟ ಪ್ರಕಾಶ್ ರೈ ಇತ್ತೀಚೆಗಷ್ಟೆ ಚಿತ್ರೀಕರಣ ವೇಳೆ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲವೇ ದಿನಗಳಲ್ಲಿ ಜಿಮ್‍ಗೆ ಭೇಟಿ ನೀಡಿದ್ದು, ಈ ವೇಳೆ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕಾಲಿವುಡ್ ನಟ ಧನುಷ್ ಅಭಿನಯದ ಡಿ44 ಸಿನಿಮಾದ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಕೆಳಗೆ ಬಿದ್ದು, ಕೈ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಹೈದರಾಬಾದ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಪ್ರಕಾಶ್ ರೈ ಬೆಡ್ ಮೇಲೆ ಮಲಗಿಕೊಂಡು ಕೈಗೆ ಪಟ್ಟಿಯೊಂದನ್ನು ಸುತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಡೆವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ: ಪ್ರಕಾಶ್ ರೈ

    75ನೇ ಸ್ವತಂತ್ರ್ಯ ದಿನಾಚರಣೆಯ ದಿನದಂದು ಸಿನಿಮಾ ಶೂಟಿಂಗ್ ಸೆಟ್‍ನಲ್ಲಿ ಧ್ವಜ ಹಾರಿಸಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಇದೀಗ ಮುಂಜಾನೆ ಜಿಮ್‍ಗೆ ಭೇಟಿ ನೀಡಿದ್ದ ಅವರು, ಚಿರಂಜೀವಿಯನ್ನು ಭೇಟಿ ಮಾಡಿ ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂಜಾನೆ ಬಾಸ್‍ರನ್ನು ಜಿಮ್‍ನಲ್ಲಿ ಭೇಟಿ ಮಾಡಿದೆ. ಚಿತ್ರರಂಗದಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದ ಅವರಿಗೆ ಧನ್ಯವಾದ. ನೀವು ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯಲ್ಲಿ ಅನಿಲ್ ಕಪೂರ್ ಡ್ಯಾನ್ಸ್- ವೀಡಿಯೋ ವೈರಲ್

  • ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂದಿನ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಈ ಮಧ್ಯೆ ತಮ್ಮ ದಿನನಿತ್ಯದ ವರ್ಕೌಟ್ ಮಾತ್ರ ಮಿಸ್ ಮಾಡದೇ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬುಧವಾರ ಬೆಳಗ್ಗೆ ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡವನ್ನು ಸೇರಿದ್ದಾರೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡುವ ಮೂಲಕ ಬೆವರಿಳಿಸಿದ್ದಾರೆ.

    ಇದಕ್ಕೂ ಮುನ್ನ ಆರ್‌ಆರ್‌ಆರ್ ಸೆಟ್‍ನಲ್ಲಿ ಡ್ರೆಸ್ಸಿಂಗ್ ರೂಮ್‍ನ ಕನ್ನಡಿ ಮುಂದೆ ಕುಳಿತು ರೆಡಿಯಾಗುತ್ತಿರುವ ಫೋಟೋವನ್ನು ಆಲಿಯಾ ಭಟ್ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರೈಸ್ ಮತ್ತು ಶೈನ್, ಬೆಳಗ್ಗೆ 6.41ಕ್ಕೆ ಎಂದು ಟೈಮ್ ಸ್ಟ್ಯಾಂಪ್‍ನಲ್ಲಿ ಹಾಕಿದ್ದಾರೆ.

    ಆರ್‌ಆರ್‌ಆರ್ ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ನಡೆದ ಕಥಾ ಹಂದರವಾಗಿದ್ದು, ಜ್ಯೂನಿಯರ್ ಎನ್‍ಟಿಆರ್ ಸ್ವಾತಂತ್ರ್ಯ ಹೋರಾಟಗಾರ ಕೋಮರಮ್ ಭೀಮ್ ಮತ್ತು ರಾಮ್‍ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರಾಮ್ ಚರಣ್‍ಗೆ ಜೋಡಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 13ರಂದು ಆರ್‌ಆರ್‌ಆರ್ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ. ಇದನ್ನೂ ಓದಿ:ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

  • 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ

    80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಸದಾ ತಮ್ಮ ಫಿಟ್ನೆಸ್ ವೀಡಿಯೋಗಳಿಗೆ ಹೆಸರುವಾಸಿ. ಈಗ 80 ಕೆಜಿ ತೂಕ ಎತ್ತಿ ಅದರ ಜೊತೆಗೆ ಸ್ಕ್ವಾಟ್ಸ್ ಮಾಡಿದ್ದಾರೆ. ನಟಿಯ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಸರಳವಾಗಿ ಮಾಡಿ ಶೇಂಗಾ ಹೋಳಿಗೆ

    ದಿಶಾ ಪಟಾಣಿ ತುಂಬಾ ಕಷ್ಟಕರವಾದಂತಹ ಕಸರತ್ತುಗಳನ್ನು ಜಿಮ್‍ನಲ್ಲಿ ಮಾಡುತ್ತಿದ್ದು, ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಬಾರ್‍ಬೆಲ್ 80ಕೆಜಿ ತೂಕದ್ದು ಎಂದು ಬರೆದಿದ್ದಾರೆ. ತೂಕದ ಬಾರ್‍ಬೆಲ್ ಅನ್ನು ಎತ್ತಲು ದಿಶಾ ಅವರಿಗೆ ತರಬೇತುದಾರ ರಾಜೇಂದ್ರ ಧೊಲೆ ಸಹಾಯ ಮಾಡುತ್ತಿದ್ದಾರೆ. ದಿಶಾ ಕಪ್ಪು ಬಣ್ಣದ ಜಿಮ್ ಡ್ರೆಸ್ ಅನ್ನು ಧರಿಸಿದ್ದು, ತಮ್ಮ ಸೊಂಟದ ಭಾಗದಲ್ಲಿ ಯಾವುದೇ ಗಾಯಗಳು ಆಗಬಾರದೆಂದು ಬೆಲ್ಟ್ ಅನ್ನು ಧರಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 80 ಕೆಜಿ ತೂಕ ಎತ್ತಿದ ದಿಶಾ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by disha patani (paatni) (@dishapatani)

    ದಿಶಾ ಪಟಾನಿ ಅವರ ಈ ವಿಡಿಯೋ ನೋಡಿ ದಿಶಾ ಸಹೋದರಿ ಖುಷ್ಬೂ ಪಟಾನಿ ತಮ್ಮ ಸಹೋದರಿ ದಿಶಾರನ್ನು ಓ ದೇವರೇ.. ಪುರಾತನ ಕಾಲದ ಬಲಶಾಲಿ ಮಹಿಳೆ ಎಂದು ಪ್ರತಿಕ್ರಿಯಿಸಿದ್ದಾರೆ. ಟ್ರೈನರ್ ರಾಜೇಂದ್ರ ನೇರ ಮತ್ತು ಬಲಿಷ್ಠ ಎಂದು ಕಮೆಂಟ್ ಮಾಡಿದ್ದಾರೆ. ಬಾಲಿವುಡ್‍ನಲ್ಲಿ ದಿಶಾ ಅವರು 80 ಕೆಜಿ ಭಾರವನ್ನು ಎತ್ತಿರುವುದು ಸಖತ್ ಸುದ್ದಿಯಾಗುತ್ತಿದೆ. ಸದಾ ಹಾಟ್ ಫೋಟೋಶೂಟ್, ಸಿನಿಮಾ ಎಂದು ಸುದ್ದಿಯಲ್ಲಿರುವ ದಿಶಾ ಇದೀಗ ಫಿಟ್ನೆಸ್ ವೀಡಿಯೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

  • ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಸೀರೆಯುಟ್ಟು ಜಿಮ್‍ನಲ್ಲಿ ಮಹಿಳೆ ಪುಷ್ ಅಪ್ಸ್ – ವೀಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಜಿಮ್‍ನಲ್ಲಿ ವರ್ಕೌಟ್ ಮಾಡುವವರನ್ನು ನಾವು ನೋಡಿರುತ್ತೇವೆ. ಆದರೆ ಮಹಿಳೆಯೊಬ್ಬರು ಸೀರೆಯುಟ್ಟು ಜಿಮ್‍ನಲ್ಲಿ ಪುಷ್-ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕೊರನಾ ಲಾಕ್‍ಡೌನ್ ವೇಳೆ ಮನೆಯಲ್ಲಿಯೇ ಇದ್ದು, ವ್ಯಾಯಾಮ ಮಾಡದೇ ಸೋಮಾರಿಯಂತೆ ಹಲವಾರು ಮಂದಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ಆದರೆ ಆರೋಗ್ಯಕರವಾಗಿದ್ದು, ಫಿಟ್ ಆಗಿ ಕಾಣಬೇಕು ಅಂದರೆ ವ್ಯಾಯಾಮಾ ದೇಹಕ್ಕೆ ಬಹಳ ಮುಖ್ಯ. ಹೀಗಾಗಿ ಬಿಡುವಿದ್ದಾಗಲೆಲ್ಲಾ ಫಿಟ್ನೆಸ್ ಕಾಪಾಡಿಕೊಳ್ಳಲು ವ್ಯಾಯಾಮ ಮಾಡುವುದು ಉತ್ತಮ.

    ಸದ್ಯ ಪುಣೆ ಮೂಲದ ಡಾ. ಶಾರ್ವರಿ ಇಮಾಮ್ದಾರ್ ಎಂಬವರು ಸೀರೆಯುಟ್ಟು ಬಹಳ ಸಲೀಸಾಗಿ ಪುಷ್ ಅಪ್ಸ್ ಮಾಡಿದ್ದಾರೆ. ಈ ವೀಡಿಯೋ ವ್ಯಾಯಾಮ ಮಾಡಲು ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಿದ್ದು, ಶಾರ್ವರಿ ಇಮಾಮ್ದಾರ್ ರವರು ಕಳೆದ 5 ವರ್ಷದಿಂದ ಪ್ರತಿನಿತ್ಯ ಪುಷ್-ಅಪ್ಸ್ ಹಾಗೂ ಪುಲ್ ಆಪ್ಸ್, ಲಿಫ್ಟ್, ಭಾರವಾದ ಡಂಬಲ್ಸ್‌ಗಳನ್ನು ಎತ್ತುವ ಮೂಲಕ ಫಿಟ್ನೆಸ್ ಮೈಂಟೈನ್ ಮಾಡುತ್ತಿದ್ದಾರೆ.

    ಸದ್ಯ ಈ ವೀಡಿಯೋವನ್ನು ಶಾರ್ವರಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾನ್ಯವಾಗಿ ಸೀರೆತೊಟ್ಟು ನಡೆಯುವುದಕ್ಕೆ ಕಷ್ಟ, ಸೀರೆ ಅನ್ ಕಂಫರ್ಟ್‍ಟೇಬಲ್ ಎನ್ನುವ ಇಂದಿನ ಮಹಿಳೆಯರ ಮಧ್ಯೆ, ಸಂಪ್ರದಾಯಿಕ ಉಡುಗೆ ತೊಟ್ಟು ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಈ ವೀಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಮಹಿಳೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಾರೆ ಪ್ರೀತಿ, ಛಲ, ಆಸಕ್ತಿ, ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ಎಂದೇ ಹೇಳಬಹುದು. ಇದನ್ನೂ ಓದಿ:  ನಂಗೆ ಅವನೇ ಬೇಕು – ಕೊನೆಗೆ ಇಬ್ಬರನ್ನು ಒಂದೇ ಮಂಟಪದಲ್ಲಿ ಮದ್ವೆಯಾದ ವರ

  • ಮತ್ತೆ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಮತ್ತೆ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ಮುಂಬೈ: ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿನ್ನೆ ಮುಂಬೈನಲ್ಲಿ ಮತ್ತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

    ಜಿಮ್‍ನಿಂದ ಹೊರಬರುವಾಗ ವಿಜಯ್ ದೇವರಕೊಂಡ ಟೋಪಿ ಹಾಗೂ ಮಾಸ್ಕ್‍ನಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರೆ, ರಶ್ಮಿಕಾ ಆರಾಮಾಗಿ ಮಾಸ್ಕ್ ಧರಿಸದೇ ನಗುತ್ತಾ ಖುಷಿಯಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರು ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಬಹಳ ದಿನಗಳ ನಂತರ ಇದೀಗ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಕೆಲವು ದಿನಗಳ ಹಿಂದೆ ಈ ಜೋಡಿ ಮುಂಬೈನ ರೆಸ್ಟೋರೆಂಟ್‍ವೊಂದಕ್ಕೆ ಊಟಕ್ಕೆ ತೆರಳಿದ್ದು, ಈ ವೇಳೆ ರೆಸ್ಟೋರೆಂಟ್ ಹೊರಗೆ ಇಬ್ಬರು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು.

    ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆಫ್ ಸ್ಕ್ರೀನ್‍ನಲ್ಲಿ ಉತ್ತಮ ಸ್ನೇಹ ಹೊಂದಿದ್ದು, ಈ ಹಿಂದೆ ಇವರಿಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‍ಗಳು ಹರಿದಾಡುತ್ತಿತ್ತು. ಅಲ್ಲದೇ ಡಿಯರ್ ಕಾಮ್ರೇಡ್ ಸಿನಿಮಾದ ಬಿಡುಗಡೆ ವೇಳೆ ಈ ಜೋಡಿ ರಿಲೇಶನ್ ಶಿಪ್‍ನಲ್ಲಿದ್ದಾರೆ ಎಂದು ವರದಿಯಾಗಿತ್ತು.

    ಸದ್ಯ ವಿಜಯ್ ದೇವರಕೊಂಡ ಪುರಿಜಗನ್ನಾಥ್ ಆ್ಯಕ್ಷನ್ ಕಟ್ ಹೇಳುತ್ತಿರುವ ಲೈಗರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ರಶ್ಮಿಕಾ ಮಿಷನ್ ಮಜ್ನು ಹಾಗೂ ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಮುಂಬೈನಲ್ಲಿ ತಂಗಿದ್ದಾರೆ. ಜೊತೆಗೆ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

  • ಜಿಮ್ ಆರಂಭಕ್ಕೆ ಗ್ರೀನ್ ಸಿಗ್ನಲ್ – ಕಂಡಿಷನ್ ಅಪ್ಲೈ

    ಜಿಮ್ ಆರಂಭಕ್ಕೆ ಗ್ರೀನ್ ಸಿಗ್ನಲ್ – ಕಂಡಿಷನ್ ಅಪ್ಲೈ

    ಬೆಂಗಳೂರು: ಜಿಮ್ ಬಂದ್ ಆದೇಶವನ್ನ ಸರ್ಕಾರ ಹಿಂಪಡೆದಿದ್ದು, ಕೆಲವು ಷರತ್ತುಗಳನ್ನ ವಿಧಿಸಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

    ಜಿಮ್ ಕೇಂದ್ರಗಳಿಗೆ ಷರತ್ತುಬದ್ಧ ನಿಯಮಗಳೊಂದಿಗೆ ಸರ್ಕಾರ ಜಿಮ್ ತೆರೆಯಲು ಅನುಮತಿ ನೀಡಿದೆ. ಜಿಮ್, ಫಿಟ್ನೆಸ್ ಕೇಂದ್ರಗಳ ಮನವಿಗೂ ಸ್ಪಂದಿಸಿದ ಸರ್ಕಾರ ಕೆಲವು ಮಾರ್ಗಸೂಚಿಯನ್ನು ಹೊರಡಿಸಿ ಜಿಮ್ ತೆರೆಯಲು ಅನುಮತಿ ನೀಡಿದೆ. ಸಿಎಸ್ ರವಿಕುಮಾರ್ ಮಾರ್ಗಸೂಚಿ ಇರುವ ಆದೇಶವನ್ನು ಹೊರಡಿಸಿದ್ದಾರೆ.

    ಜಿಮ್ ತೆರೆಯಲು ಇರುವ ಮಾರ್ಗಸೂಚಿಗಳು

    * ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ಕಲ್ಪಿಸಬೇಕು.
    * ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ.
    * ಜಿಮ್‍ನಲ್ಲಿ ಪ್ರತೀ ಸಲ ಬಳಕೆ ಮಾಡಿದ ಬಳಿಕ ಜಿಮ್ ಸಲಕರಣೆಗಳನ್ನು ಸ್ಯಾನಿಟೈಸ್ ಮಾಡಬೇಕು.
    * ನಿಯಮ ಉಲ್ಲಂಘಿಸಿದರೆ ಜಿಮ್ ಬಂದ್ ಮಾಡಿಸುವ ಎಚ್ಚರಿಕೆಯನ್ನು ನೀಡಿದೆ.

    ಕೊರೊನಾ 2ನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ಕೊರೊನಾ ಕುರಿತಾದ ಕೆಲವು ಮುಂಜಾಗೃತಾ ಕ್ರಮಗಳ ಪಾಲನೆಗಾಗಿ ಜಿಮ್‍ನ್ನು ಕೆಲ ದಿನ ಮುಚ್ಚುವಂತೆ ಹೇಳಿತ್ತು. ಇದೀಗ ಜಿಮ್ ಮಾಲೀಕರ ಮನವಿಗೆ ಸ್ಪಂದಿಸಿರುವ ಸರ್ಕಾರ ಆರಂಭಕ್ಕೆ ಕೆಲವು ಷರತ್ತಿನ ಮೇಲೆ ಗ್ರೀನ್ ಸಿಗ್ನಲ್ ನೀಡಿದೆ.

  • ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಜಿಮ್‌ ಉದ್ಘಾಟನೆ

    ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಜಿಮ್‌ ಉದ್ಘಾಟನೆ

    ಬೆಂಗಳೂರು: ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ದಿನಚರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ಹಾಗೂ ಜಿಮ್ ಉದ್ಘಾಟನೆ ನೆರವೇರಿಸಿದರು.

    ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ವತಿಯಿಂದ ಶತಮಾನೋತ್ಸವ ಭವನದ ಶಂಕುಸ್ಥಾಪನೆ, ಜಿಮ್ ಉದ್ಘಾಟನೆಯನ್ನು ಅತ್ಯಂತ ಸಂತೋಷದಿಂದ ನೆರವೇರಿಸಿದ್ದೇನೆ. ಕರ್ನಾಟಕ ಆಡಳಿತ ಸೇವೆ ಪ್ರಾರಂಭವಾಗಿ 100 ವರ್ಷಗಳು ಸಂದಿರುವ ಸಂದರ್ಭದಲ್ಲಿ ಸಂಘದ ವತಿಯಿಂದ ಶತಮಾನೋತ್ಸವ ಭವನದ ನಿರ್ಮಾಣಕ್ಕೆ ಮುಂದಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

    ರಾಜ್ಯದ ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಕೆಎಎಸ್ ಅಧಿಕಾರಿಗಳು ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸರ್ಕಾರದ ಆಡಳಿತ ಯಂತ್ರವು ಸುಗಮವಾಗಿ ನಿರ್ವಹಿಸಲು ಹಾಗೂ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದರು.

    ‘Sound Body Carries Sound Mind’ ಎಂಬ ಉಕ್ತಿಯಂತೆ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜೀ ಯವರು ಫಿಟ್‌ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿರುವುದು ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಒತ್ತಡ ನಿವಾರಣೆ, ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಹಾಗೂ ಆರೋಗ್ಯ ವೃದ್ಧಿಗೆ ಇಂದು ಉದ್ಘಾಟನೆಗೊಂಡಿರುವ ಜಿಮ್ ಸಹಕಾರಿಯಾಗಲಿದೆ. ಸರ್ಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದರು.

    ಜನರು ತಮ್ಮ ದೂರು, ಸಂಕಷ್ಟಗಳನ್ನು ಹೊತ್ತು ಬಂದಾಗ ಸಕಾಲದಲ್ಲಿ ಸ್ಪಂದಿಸಿ ಪರಿಹಾರ ಸೂಚಿಸಿದರೆ, ಸರ್ಕಾರ ಜನಪರವಾಗಿದೆ ಎಂಬ ಸದಭಿಪ್ರಾಯ ಮೂಡುತ್ತದೆ. ಆ ಜವಾಬ್ದಾರಿ ನಿಮ್ಮ ಮೇಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ತೊಡಕು ಎದುರಾದರೂ ನಿಮ್ಮ ಬೆಂಬಲಕ್ಕೆ ಸರ್ಕಾರ ಇರುತ್ತದೆ. ನಿಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿಷ್ಠೆಯಿಂದ ನಿರ್ವಹಿಸಿ ಎಂದು ತಿಳಿಸಿದರು.

    ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ತಾವೆಲ್ಲರೂ ಕಾರ್ಯೋನ್ಮುಖರಾಗಿ. ನೂತನವಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿಗಳು, ನಿಷ್ಠೆ, ಜವಾಬ್ದಾರಿ ಹಾಗೂ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ಹಾರೈಸುತ್ತೇನೆ. 2021ರ ವರ್ಷ ಎಲ್ಲರಿಗೂ ಶುಭಪ್ರದವಾಗಿರಲಿ ಹಾಗೂ ಶತಮಾನೋತ್ಸವ ಆಚರಣೆ ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇನೆ ಎಂದು ಶುಭ ಹಾರೈಸಿದರು.

    ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ , ಸಿ.ಆ.ಸು.ಇ ಕಾರ್ಯದರ್ಶಿ ಪಿ.ಹೇಮಲತಾ, ಕೆ.ಎ. ಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್.ವರಪ್ರಸಾದ್ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಜಿಮ್‍ನಲ್ಲೇ ಜಿಮ್ ಟ್ರೈನರ್ ಆತ್ಮಹತ್ಯೆ

    ಜಿಮ್‍ನಲ್ಲೇ ಜಿಮ್ ಟ್ರೈನರ್ ಆತ್ಮಹತ್ಯೆ

    – ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

    ಚಿಕ್ಕಮಗಳೂರು: 26 ವರ್ಷದ ಜಿಮ್ ಟ್ರೈನರ್ ಜಿಮ್‍ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

    ಮೃತನನ್ನ ಜಯಪುರ ಸಮೀಪದ ದೂಬ್ಳ ಗ್ರಾಮದ ಸುನಿಲ್ ಎಂದು ಗುರುತಿಸಲಾಗಿದೆ. ಮೃತ ಸುನಿಲ್ ಜಯಪುರದಲ್ಲಿ ಜಿಮ್ ಇಟ್ಟುಕೊಂಡು, 30 ರಿಂದ 40 ಜನ ಯುವಕರಿಗೆ ಜಿಮ್ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದ. ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಿಮ್ ಕ್ಲೋಸ್ ಮಾಡಲಾಗಿತ್ತು. ಆದರೆ ಸುನೀಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಎಂದು ಹೇಳಲಾಗುತ್ತಿದೆ.

    ಅಷ್ಟೇ ಅಲ್ಲದೇ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಲು ಜಿಮ್ ಟ್ರೈನರ್ ಸುನಿಲ್ ಕಳೆದ ಮೂರು ತಿಂಗಳಿಂದ ಆಟೋ ಓಡಿಸುತ್ತಿದ್ದನು. ಆರ್ಥಿಕ ನಷ್ಟ ಹಾಗೂ ಕಷ್ಟದಿಂದ ಮಾನಸಿಕವಾಗಿ ಕುಗ್ಗಿದ್ದರಿಂದ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

    ಜಿಮ್ ಟ್ರೈನರ್ ಸುನಿಲ್ ಆರೋಗ್ಯವಾಗಿ ಕಟ್ಟುಮಸ್ತಾಗಿದ್ದ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದೇಹದಾಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು. ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಮಿಸ್ಟರ್ ಕೊಪ್ಪ ಎಂಬ ಕೀರ್ತಿಗೂ ಪಾತ್ರನಾಗಿದ್ದನು. ಇದೀಗ 26ನೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾಗಿರೋದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.

    ಘಟನೆ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಸದ್ಯಕ್ಕೆ ಜಿಮ್‍ಗಳು ಆರಂಭವಾಗಲ್ಲ: ಆರ್ ಅಶೋಕ್

    ಸದ್ಯಕ್ಕೆ ಜಿಮ್‍ಗಳು ಆರಂಭವಾಗಲ್ಲ: ಆರ್ ಅಶೋಕ್

    ಬೆಂಗಳೂರು: ಸದ್ಯಕ್ಕೆ ಜಿಮ್‍ಗಳು ಆರಂಭವಾಗುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಬೆಂಗಳೂರು ನಗರ ಸಕ್ಸಸ್ ಆಗಿದೆ. ಕೇಂದ್ರ ಸರ್ಕಾರ ಪ್ರಶಂಸೆ ಮಾಡಿದ್ದು ಖುಷಿ ತಂದಿದೆ. ಇದಕ್ಕೆ ನಮ್ಮ ವೈದ್ಯ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿ ಎಲ್ಲ ಇಲಾಖೆಗಳ ಶ್ರಮವೂ ಕಾರಣ ಎಂದು ತಿಳಿಸಿದರು.

    ಸದ್ಯ ಜಿಮ್‍ಗಳು ಆರಂಭವಾಗಲ್ಲ. ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಿದ್ದೇವೆ. ನೇಕಾರರು, ಕ್ಷೌರಿಕ ವೃತ್ತಿ ಅವರಿಗೂ ಸಂಕಷ್ಟ ಇತ್ತು ಆ ಸಮುದಾಯಗಳನ್ನು ಗುರುತಿಸಿದ್ದೇವೆ. ನಮ್ಮ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆಯು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಕೆಲ ಸಮುದಾಯಗಳಿಗೆ ಸಹಾಯಧನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

    ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಸ್ಟಾಪ್ ಡ್ಯೂಟಿಗೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ತಮಿಳುನಾಡು ಸರ್ಕಾರ ಅಪಾರ್ಟ್‍ಮೆಂಟ್ ರಿಜಿಸ್ಟರ್ ನಲ್ಲಿ ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದೆ. ಈ ಬಗ್ಗೆ ಇಂದು ಸಂಜೆ ಸಿಎಂ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕೊರೊನಾ ಸಂಕಷ್ಟದಲ್ಲಿ ಹಣಕಾಸಿನ ತೊಂದರೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಆರ್ ಆಶೋಕ್ ಅವರು ಹೇಳಿದ್ದಾರೆ.

  • ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    – ಸನ್ಮಾನಿಸಿದ ಶಾಲುಗಳನ್ನೇ ನಿರ್ಗತಿಕರಿಗೆ ದಾನ ಮಾಡಿದ್ರು

    ಬೆಂಗಳೂರು: ಲಾಕ್‍ಡೌನ್ ಜಾರಿಯಾದ ಬಳಿಕ ನಗರದಲ್ಲಿರುವ ಭಿಕ್ಷುಕರು ಮತ್ತು ವಲಸೆ ಕಾರ್ಮಿಕರು ಆಹಾರಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ವಿಜಯನಗರದ ಐರನ್ ಟೆಂಪಲ್ ಜಿಮ್ ಮಾಲೀಕ ಒಡಿ ಇಂಡಿಯಾ ವಿಶ್ವಾಸ್‍ಗೌಡ ನೆರವಾಗಿದ್ದಾರೆ. ನಿತ್ಯ ನೂರಾರು ಜನ್ರಿಗೆ ಉಚಿತವಾಗಿ ಆಹಾರ ನೀರು ಪೂರೈಸುತ್ತಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳಿಗೂ ಹೋಗಲಾಗದೆ, ಇತ್ತ ನಗರದಲ್ಲಿಯೂ ಇರಲಾಗದೆ ಸಣ್ಣಪುಟ್ಟ ಶೆಡ್ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಹಾಗೂ ವಿವಿಧ ಸಮುದಾಯ ಭವನಗಳಲ್ಲಿರುವ ಕಾರ್ಮಿಕರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ಪ್ರೊಫೆಷನಲ್ ಬಾಡಿಬಿಲ್ಡರ್ ಆಗಿರುವ ವಿಶ್ವಾಸ್‍ಗೌಡ ಲಾಕ್‍ಡೌನ್ ಜಾರಿಯಾದ ಬಳಿಕ ಆಹಾರವಿಲ್ಲದೆ ಪರದಾಡುತ್ತಿದ್ದ ಜನರಿಗೆ ನೆರವಾಗಲು ತಮ್ಮದೇ ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದ ಯುವಕರ ಗುಂಪು ಕಟ್ಟಿಕೊಂಡು ಈ ಅನ್ನ ದಾಸೋಹ ಕಾರ್ಯ ಆರಂಭಿಸಿದ್ದಾರೆ.

    ಕಳೆದ 20 ದಿನಗಳಿಂದ ಪ್ರತಿದಿನ ಆಹಾರ ಮತ್ತು ಬಡ ಕುಟುಂಬದವರಿಗೆ ರೇಷನ್ ಕಿಟ್ (ಅಕ್ಕಿ, ಬೇಳೆ, ಸಕ್ಕರೆ, ರವೆ, ಉಪ್ಪು, ಎಣ್ಣೆ ಈರುಳ್ಳಿ, ಸೋಪ್) ಗಳನ್ನು ಹಂಚುತ್ತಿದ್ದಾರೆ. ಜೊತೆಗೆ ನಿರ್ಗತಿಕರಿಗೆ ಹೊದ್ದು ಮಲಗಲು ತಮಗೆ ಸನ್ಮಾನಿಸಿದ ಶಾಲುಗಳನ್ನೇ ಕೊಟ್ಟು ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ.