Tag: ಜಿಂಕೆ ಮರಿ

  • ಜಿಂಕೆ ಉಳಿಸಲು ಹೋಗಿ ಹೆಬ್ಬಾವು ಕೊಂದು 7 ಮಂದಿ ಜೈಲು ಪಾಲಾದ್ರು!

    ಜಿಂಕೆ ಉಳಿಸಲು ಹೋಗಿ ಹೆಬ್ಬಾವು ಕೊಂದು 7 ಮಂದಿ ಜೈಲು ಪಾಲಾದ್ರು!

    ಕಾರವಾರ: ಜಿಂಕೆ ಮರಿಯನ್ನು ಹೆಬ್ಬಾವೊಂದು ನುಂಗುತ್ತಿದ್ದ ದೃಶ್ಯ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ನಂದಿಕಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಕಂಡುಬಂದಿದೆ.

    ಅರಣ್ಯ ಪ್ರದೇಶದಲ್ಲಿ ಜಿಂಕೆಮರಿಯನ್ನು ಹೆಬ್ಬಾವೊಂದು ನುಂಗುತ್ತಿದ್ದ ದೃಶ್ಯವನ್ನು ಈ ಗ್ರಾಮದ ಗ್ರಾಮಸ್ಥರು ನೋಡಿ ಜಿಂಕೆಯನ್ನು ಬದುಕಿಸಲು ಯತ್ನಿಸಿದ್ದಾರೆ. ಹೀಗಾಗಿ ಅರ್ಧ ನುಂಗಿದ್ದ ಹೆಬ್ಬಾವಿನ ಬಾಯಿಂದ ಜಿಂಕೆಯನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅರ್ಧ ಭಾಗದಷ್ಟು ಜಿಂಕೆಯ ದೇಹ ಹೆಬ್ಬಾವಿನ ಹೊಟ್ಟೆ ಸೇರಿದ್ದು ಹೊರ ಎಳೆದರೂ ಜಿಂಕೆ ಉಳಿಯಲಿಲ್ಲ.

    ಇದರಿಂದ ಕುಪಿತರಾದ ಗ್ರಾಮದ ಕೆಲವರು ಸಿಟ್ಟಿನಿಂದ ಹೆಬ್ಬಾವನ್ನು ಹೊಡೆದು ಕೊಂದಿದ್ದಾರೆ. ಕೊಂದ ಹೆಬ್ಬಾವು ಹಾಗೂ ಸತ್ತ ಜಿಂಕೆಯನ್ನು ಊರಿಗೆ ಕೊಂಡೊಯ್ದು ಅದರ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದಾರೆ. ವಾಟ್ಸಾಪ್‍ನಲ್ಲಿ ಹರಿಬಿಟ್ಟ ಫೋಟೋ ವೈರಲ್ ಆಗಿ ಅರಣ್ಯಾಧಿಕಾರಿಗಳ ಮೊಬೈಲ್‍ಗೂ ತಲುಪಿ ನಂತರ ಶೋಧಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ಆಹಾರವನ್ನು ಭಕ್ಷಿಸುತ್ತಿರುವಾಗ ಹೆಬ್ಬಾವನ್ನು ನೋಡಿ ಬಿಡಿಸಲು ಹೋಗಿದ್ದ ಬಸವರಾಜ್ ಕೋನಿ, ಶೇಖಪ್ಪ ಬೇವಿನಮರದ, ಮೋಹನ್ ಸಿಂಹ್ ರಜಪೂತ್, ಮಹದೇವ್ ಸೂಟಗಟ್ಟಿ, ಬಸಪ್ಪ ಹುಚ್ವಣ್ಣನವರ್, ಮಧು ಸಿಂಗ್ ರಜಪೂತ್ ಹಾಗೂ ವಿಜಯ್ ಸಿಂಗ್ ಏಳು ಜನರನ್ನು ಮುಂಡಗೋಡು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮುಂಡಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv