Tag: ಜಾಹೀರಾತು

  • ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    ಐದೇ ನಿಮಿಷದಲ್ಲಿ ಆಟೋ, ಇಲ್ಲವಾದಲ್ಲಿ 50 ರೂ. ಆಫರ್ ನೀಡಿ ವಂಚನೆ – ರಾಪಿಡೋಗೆ 10 ಲಕ್ಷ ದಂಡ

    – ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ

    ನವದೆಹಲಿ: ‘ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ಅಥವಾ 50 ರೂ. ಪಡೆಯಿರಿ’ (AUTO IN 5 MIN OR GET Rs 50) ಹೀಗೆ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ‘ರಾಪಿಡೋ’ (Rapido) ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 10 ಲಕ್ಷ ರೂ. ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂಥ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.

    ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಸಿಸಿಪಿಎ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ತಕ್ಷಣದಿಂದಲೇ ಇಂಥ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶ ಸಹ ನೀಡಿದೆ.

    ಗ್ರಾಹಕರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಜನರ ದಾರಿ ತಪ್ಪಿಸುವ ಜಾಹೀರಾತು ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸುತ್ತಿದ್ದ ಕಾರಣಕ್ಕೆ ರಾಪಿಡೋ ಟ್ರಾನ್ಸ್ಪೋರ್ಟೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ.

    ಮೋಸದ ಜಾಹೀರಾತು ನಿಲ್ಲಿಸಲು ರಾಪಿಡೋಗೆ ಸ್ಪಷ್ಟ ನಿರ್ದೇಶನ:
    ‘5 ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿ’ ಹಾಗೂ ‘ಗ್ಯಾರಂಟಿ ಆಟೋ’ ಎಂದೆಲ್ಲಾ ಭರವಸೆ ನೀಡುತ್ತಿದ್ದ ರಾಪಿಡೋ ಜಾಹೀರಾತು ಮತ್ತು ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಪಿಎ ಇದೊಂದು ಮೋಸದ ಜಾಹೀರಾತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಜನರ ದಾರಿ ತಪ್ಪಿಸುವುದಾಗಿದೆ. ಅಲ್ಲದೇ, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ. ಹಾಗಾಗಿ ತಕ್ಷಣವೇ ಇದನ್ನು ನಿಲ್ಲಿಸುವಂತೆ ರಾಪಿಡೋಗೆ ಸ್ಪಷ್ಟ ನಿರ್ದೇಶನ ನೀಡಿದೆ.

    ಗ್ರಾಹಕರಿಂದ 1799 ದೂರುಗಳು:
    ರಾಪಿಡೋ ಸಂಸ್ಥೆಯ ಮೋಸದ ಜಾಹೀರಾತು ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಹೆಚ್) ಮೂಲಕ ಅತ್ಯಧಿಕ ದೂರುಗಳು ದಾಖಲಾಗಿವೆ. 2023ರ ಏಪ್ರಿಲ್‌ನಿಂದ 2024ರ ಮೇ ವರೆಗೆ 575 ದೂರುಗಳು ಬಂದಿವೆ. 2024 ಜೂನ್‌ನಿಂದ 2025ರ ಜುಲೈವರೆಗೆ ಹಿಂದಿನಕ್ಕಿಂತ ದುಪ್ಟಟ್ಟು ಅಂದರೆ 1,224 ದೂರುಗಳು ಬಂದಿವೆ. ಹೀಗಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು.

    ಸಿಸಿಪಿಎ ತನಿಖೆ ವೇಳೆ ರಾಪಿಡೋ ಜಾಹೀರಾತುಗಳಲ್ಲಿ ಟಿ&ಸಿ ಅನ್ವಯ ಎಂಬುದು ಓದಲಾಗದಂಥ ಅತ್ಯಂತ ಚಿಕ್ಕ ಗಾತ್ರದ ಅಕ್ಷರದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಅಲ್ಲದೇ, ಭರವಸೆ ನೀಡಿದಂತೆ 50 ರೂ. ಮೊತ್ತವೂ ಸಿಗುತ್ತಿರಲಿಲ್ಲ. ಬದಲಿಗೆ ‘ರಾಪಿಡೋ ನಾಣ್ಯಗಳು’ ರೂಪದಲ್ಲಿ ಅದೂ ಕೇವಲ 7 ದಿನಗಳ ಮಾನ್ಯತೆ ಹೊಂದಿತ್ತು. ಇದಲ್ಲದೆ, ಈ ಆಫರ್ ಅನ್ನು ‘ವೈಯಕ್ತಿಕ ಕ್ಯಾಪ್ಟನ್‌ಗಳು ನೀಡುತ್ತಿದ್ದಾರೆಯೇ ಹೊರತು ರಾಪಿಡೋ’ ಅಲ್ಲ ಎಂದು ಹೇಳಿ ಕಂಪನಿ ಹೊಣೆಗಾರಿಕೆಯಿಂದ ಜಾರಿಕೊಳ್ಳತೊಡಗಿತ್ತು.

    ರಾಪಿಡೋ ವಿರುದ್ಧ ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಲೇ ಇದ್ದವು. ಸೇವಾ ನ್ಯೂನತೆ, ಪಾವತಿಸಿದ ಮೊತ್ತ ಮರುಪಾವತಿ ಮಾಡದೇ ಇರುವುದು, ಅಧಿಕ ಶುಲ್ಕ ವಿಧಿಸುವುದು, ಭರವಸೆ ನೀಡಿದಂತೆ ಸೇವೆ ಒದಗಿಸುವಲ್ಲಿ ವಿಫಲ ಹಾಗೂ ಖಾತರಿಪಡಿಸಿದ ‘5 ನಿಮಿಷ’ ಸೇವೆ ಪೂರೈಸದಿರುವ ಬಗ್ಗೆ ದೂರುಗಳು ವ್ಯಾಪಕವಾಗಿದ್ದವು. ಈ ಬಗ್ಗೆ ಸಂಸ್ಥೆಯ ಗಮನ ಸೆಳೆದರೂ ಪರಿಹರಿಸದೆ ಕಡೆಗಣಿಸಿತ್ತು ರಾಪಿಡೋ.

    ದೊಡ್ಡ ದೊಡ್ಡ ಭರವಸೆ ನೀಡುವ ಅಥವಾ ಷರತ್ತುಗಳನ್ನು ವಿವರಿಸದೆ ‘ಖಾತರಿ’ ಅಥವಾ ‘ಖಚಿತ’ದಂತಹ ನುಡಿಗಟ್ಟು ಬಳಸುವ ಜಾಹೀರಾತುಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಸಿಸಿಪಿಎ ಸಲಹೆ ನೀಡಿದೆ. ಅಲ್ಲದೇ, ಇಂಥ ದಾರಿ ತಪ್ಪಿಸುವ ಜಾಹೀರಾತು, ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಸಮಸ್ಯೆ ಎದುರಿಸಿದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ‘1915’ ಕರೆ ಮಾಡಿ ದೂರು ಸಲ್ಲಿಸಲು ಅಥವಾ ಎನ್‌ಸಿಹೆಚ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ದೂರು ಸಲ್ಲಿಸುವಂತೆ ತಿಳಿಸಿದೆ.

  • ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

    ನಗದಿನ ಮೂಲಕ ಸಂಭಾವನೆ – ಮಹೇಶ್‌ ಬಾಬುಗೆ ಇಡಿ ನೋಟಿಸ್‌

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರಿಗೆ ಏ.28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

    ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ (Real Estate) ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಮೇಲೆ ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ದಾಳಿ ನಡೆಸಿತ್ತು. ಈ ಕಂಪನಿಗಳ ಜಾಹೀರಾತಿನಲ್ಲಿ (Advertisement) ಮಹೇಶ್‌ ಬಾಬು ನಟಿಸಿದ್ದರು.

    ನಟಿಸಿದ್ದಕ್ಕೆ ಮಹೇಶ್‌ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ಪೈಕಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಗದು ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ  ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿದೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಸಾಯಿ ಸೂರ್ಯ ರಿಯಲ್‌ ಎಸ್ಟೇಟ್‌ ಕಂಪನಿಯ ಪ್ರಚಾರದ ಜಾಹೀರಾತಿನಲ್ಲಿ ಮಹೇಶ್‌ ಬಾಬು

    ತೆಲಂಗಾಣ ಪೊಲೀಸರು ಹೈದರಾಬಾದ್ ಪ್ರಾಪರ್ಟೀಸ್ ಲಿಮಿಟೆಡ್‌ನ ನರೇಂದ್ರ ಸುರಾನಾ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅನಧಿಕೃತ ಲೇಔಟ್‌ಗಳಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ. ಒಂದೇ ಪ್ಲಾಟ್ ಅನ್ನು ಹಲವು ಬಾರಿ ಮಾರಾಟ ಮಾಡಿದ ಮತ್ತು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಿದ ಆರೋಪ ಕಂಪನಿಯ ಮೇಲಿದೆ. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು

    ನಿಯಮ ಏನು ಹೇಳುತ್ತೆ?
    ಯಾವುದೇ ವ್ಯಕ್ತಿಯು ಒಂದೇ ವಹಿವಾಟಿಗೆ ಅಥವಾ ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ದಿನದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಈ ನಿಯಮವು ಶುಲ್ಕಗಳು, ದೇಣಿಗೆ, ಸಂಭಾವನೆ ಎಲ್ಲದ್ದಕ್ಕೂ ಅನ್ವಯವಾಗುತ್ತದೆ. ಈ ಮಿತಿಯನ್ನು ಉಲ್ಲಂಘಿಸಿದರೆ ಆದಾಯ ತೆರಿಗೆ ಕಾಯ್ದೆ 271DA ಅಡಿಯಲ್ಲಿ ಸ್ವೀಕರಿಸಿದ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು UPI, NEFT ಮತ್ತು RTGS ಮೂಲಕ ಪಾವತಿಸಬೇಕಾಗುತ್ತದೆ.

  • ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಐಪಿಎಲ್‌ 10 ಸೆಕೆಂಡ್‌ ಜಾಹೀರಾತಿಗೆ ಲಕ್ಷ ಲಕ್ಷ – 4,500 ಕೋಟಿ ಆದಾಯ ನಿರೀಕ್ಷೆಯಲ್ಲಿ ಜಿಯೋಸ್ಟಾರ್‌

    ಮುಂಬೈ: ಇಂದಿನಿಂದ ಐಪಿಎಲ್‌ (IPL) ಹಬ್ಬ ಆರಂಭವಾಗಲಿದ್ದು ಪ್ರಸಾರ ಹಕ್ಕುಗಳನ್ನು ಪಡೆದಿರುವ ಜಿಯೋ ಮತ್ತು ಸ್ಟಾರ್‌ ಈ ಬಾರಿಯ ಟೂರ್ನಿಯ ಜಾಹೀರಾತುಗಳಿಂದ ಒಟ್ಟು 4,500 ಕೋಟಿ ರೂ. ಆದಾಯವನ್ನು ನಿರೀಕ್ಷಿಸುತ್ತಿದೆ.

    ಟಿವಿ ಮತ್ತು ಡಿಜಿಟಲ್‌ನಿಂದ 100 ಕೋಟಿ ವೀಕ್ಷಣೆಯ ಗುರಿಯನ್ನು ಹಾಕಲಾಗಿದ್ದು ಹತ್ತು ಸೆಕೆಂಡ್‌ ಟಿವಿ ಜಾಹೀರಾತಿಗೆ 8.5 ಲಕ್ಷ ರೂ. ದರವನ್ನು ನಿಗದಿಪಡಿಸಲಾಗಿದೆ. ಈಗಾಗಲೇ 32 ಕಂಪನಿಗಳು ಜಾಹೀರಾತು ನೀಡಲು ಮುಂದೆ ಬಂದಿದ್ದು ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.

    ಸಾಧಾರಣವಾಗಿ ಐಪಿಎಲ್‌ನಲ್ಲಿ ದೊಡ್ಡ ಕಂಪನಿಗಳು ಜಾಹೀರಾತು ನೀಡುತ್ತಿದ್ದವು. ಆದರೆ ಈ ಬಾರಿ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೋದಲ್ಲಿ ಜಾಹೀರಾತು ನೀಡುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು (SME) ಜಿಯೋಹಾಟ್‌ಸ್ಟಾರ್‌ ಸಂಪರ್ಕಿಸಿವೆ. ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?

    ಜಿಯೋಹಾಟ್‌ಸ್ಟಾರ್‌ (JioHotstar) ಐಪಿಎಲ್‌ ಅವಧಿಯಲ್ಲಿ ಒಟ್ಟು 10 ಕೋಟಿ ಸಬ್‌ಸ್ಕ್ರೈಬರ್‌ ಅದರಲ್ಲೂ 4 ಕೋಟಿ ಹೊಸ ಗ್ರಾಹಕರ ಮೇಲೆ ಕಣ್ಣಿಟ್ಟಿದೆ.

    ಕಳೆದ ವರ್ಷ ಟಿವಿ ಮತ್ತು ಡಿಜಿಟಲ್‌ನಿಂದ ಒಟ್ಟು 4,000 ಕೋಟಿ ರೂ. ಆದಾಯ ಬಂದಿತ್ತು.  ಕಳೆದ ಬಾರಿಗಿಂತ  ಬಾರಿ  500 ಕೋಟಿ ರೂ. ಹೆಚ್ಚು ಆದಾಯ ಸಂಗ್ರಹಿಸುವ ಗುರಿಯನ್ನು ಜಿಯೋ ಸ್ಟಾರ್‌ ಹಾಕಿಕೊಂಡಿದೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಐಪಿಎಲ್‌ ಡಿಜಿಟಲ್‌ ರೈಟ್ಸ್‌ ಅನ್ನು ವಯಾಕಾಮ್‌ ಪಡೆದ ನಂತರ ಕ್ರಿಕೆಟ್‌ ಪ್ರೇಮಿಗಳು ಜಿಯೋಸಿನಿಮಾದಲ್ಲಿ (JioCinema) ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದಾಗಿತ್ತು. ಆದರೆ ಈಗ ಜಿಯೋ ಮತ್ತು ಹಾಟ್‌ಸ್ಟಾರ್‌ ವಿಲೀನಗೊಂಡಿದೆ. ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಸ್ಟಾರ್ ಆಗಿ ಬದಲಾಗಿದ್ದು ಈ ವರ್ಷದಿಂದ ಐಪಿಎಲ್‌ ಅಭಿಮಾನಿಗಳು ಹಣವನ್ನು ಪಾವತಿಸಿ ಕ್ರಿಕೆಟ್‌ ವೀಕ್ಷಣೆ ಮಾಡಬೇಕಾಗುತ್ತದೆ.

    ಮಾಧ್ಯಮ ಹಕ್ಕು ಎಷ್ಟು?
    2008 ಸೋನಿ ನೆಟ್‌ವರ್ವಕ್‌ಗೆ 10 ವರ್ಷ ಕಾಲ ಒಟ್ಟು 8,200 ಕೋಟಿ ರೂ.ಗೆ ನೀಡಿತ್ತು. 2017-22 ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ ಒಟ್ಟು 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. ಆದರೆ 2023-27ರ ಅವಧಿಯ 410 ಪಂದ್ಯಗಳಿಗೆ ಡಿಜಿಟಲ್‌ ಮತ್ತು ಟಿವಿ ರೈಟ್ಸ್‌ ಪ್ರತ್ಯೇಕವಾಗಿ ವಿಂಗಡನೆ ಮಾಡಲಾಗಿತ್ತು. ಡಿಜಿಟಲ್‌ ರೈಟ್ಸ್‌ -ವಯಾಕಾಮ್‌ 23,758 ಕೋಟಿ ರೂ. ನೀಡಿ ಖರೀದಿಸಿದರೆ ಟಿವಿ ಹಕ್ಕುಗಳನ್ನು- 23,575 ಕೋಟಿ ರೂ.ಗೆ ವಾಲ್ಟ್‌  ಡಿಸ್ನಿ ಕಂಪನಿ ನೀಡಿ ಪಡೆದುಕೊಂಡಿತ್ತು.

     

  • 25 ನಿಮಿಷ ಜಾಹೀರಾತು ಪ್ರಕಟಿಸಿ ಸಮಯ ವ್ಯರ್ಥಗೊಳಿಸಿದ್ದಕ್ಕೆ PVR- INOXಗೆ 1.20 ಲಕ್ಷ ದಂಡ – ಬೆಂಗಳೂರು ವ್ಯಕ್ತಿಗೆ ಜಯ

    25 ನಿಮಿಷ ಜಾಹೀರಾತು ಪ್ರಕಟಿಸಿ ಸಮಯ ವ್ಯರ್ಥಗೊಳಿಸಿದ್ದಕ್ಕೆ PVR- INOXಗೆ 1.20 ಲಕ್ಷ ದಂಡ – ಬೆಂಗಳೂರು ವ್ಯಕ್ತಿಗೆ ಜಯ

    ಬೆಂಗಳೂರು: 25 ನಿಮಿಷ ಜಾಹೀರಾತು (Advertisement) ಪ್ರಕಟಿಸಿ ಸಮಯ ವ್ಯರ್ಥ ಮಾಡಿದ್ದಕ್ಕೆ ಪಿವಿಆರ್‌-ಐನಾಕ್ಸ್‌ (PVR- INOX) ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಸಿನಿಮಾ ಅಭಿಮಾನಿಗೆ ಜಯ ಸಿಕ್ಕಿದೆ.

    ಸಿನಿಮಾ ಅಭಿಮಾನಿಯ ವಾದವನ್ನು ಪುರಸ್ಕರಿಸಿದ ಗ್ರಾಹಕ ನ್ಯಾಯಾಲಯ (Consumer Court) ಸಮಯವನ್ನು ಹಣವೆಂದು ಪರಿಗಣಿಸಿ ದೂರುದಾರರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು PVR ಸಿನಿಮಾಸ್ ಮತ್ತು INOXಗೆ 1.20 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಪ್ರಕಟಿಸಿದೆ.

    ಏನಿದು ಪ್ರಕರಣ?
    ಬೆಂಗಳೂರಿನ ಅಭಿಷೇಕ್‌ 2023 ರಲ್ಲಿ ಶ್ಯಾಮ್ ಬಹದ್ದೂರ್ ಸಿನಿಮಾ ವೀಕ್ಷಿಸಲು ಬುಕ್‌ಮೈಶೋ (BookmyShow) ಮೂಲಕ 3 ಟಿಕೆಟ್‌ ಖರೀದಿಸಿದ್ದರು. ಸಂಜೆ 4:05ಕ್ಕೆ ನಿಗದಿಯಾಗಿದ್ದ ಸಿನಿಮಾ ಸಂಜೆ 6:30ಕ್ಕೆ ಮುಗಿಯಬೇಕಿತ್ತು. ಆದರೆ ಸಿನಿಮಾ ಪ್ರದರ್ಶನ 4:05ಕ್ಕೆ ಆರಂಭವಾಗುವ ಬದಲು ಸಂಜೆ 4:30ಕ್ಕೆ ಆರಂಭವಾಗಿದೆ.

     

    ಸುಮಾರು 30 ನಿಮಿಷಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದರಿಂದ ನಾನು ನಿಗದಿ ಪಡಿಸಿದ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದ ನನಗೆ ನಷ್ಟವಾಗಿದೆ ಎಂದು ಕೋರಿ ಅಭಿಷೇಕ್‌ ದೂರು ನೀಡಿದ್ದರು. ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಅನಗತ್ಯ ಲಾಭ ಪಡೆಯಲು ಪ್ರದರ್ಶನದ ಸಮಯವನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದರು.

    ಇಂದಿನ ಕಾಲದಲ್ಲಿ ಸಮಯವನ್ನು ಹಣವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಸಮಯವು ಬಹಳ ಅಮೂಲ್ಯವಾಗಿದೆ. ಇತರರ ಸಮಯ ಮತ್ತು ಹಣದಿಂದ ಲಾಭ ಪಡೆಯುವ ಹಕ್ಕು ಯಾರಿಗೂ ಇಲ್ಲ.  ಸುಮ್ಮನೆ ಕುಳಿತು ಥಿಯೇಟರ್‌ನಲ್ಲಿ ಪ್ರಸಾರವಾಗುವ ಎಲ್ಲವನ್ನೂ 25-30 ನಿಮಿಷಗ ವೀಕ್ಷಿಸುವುದು ಕಡಿಮೆಯಲ್ಲ. ಬಿಗಿಯಾದ ವೇಳಾಪಟ್ಟಿಯೊಂದಿಗೆ ಕಾರ್ಯನಿರತ ಜನರಿಗೆ ಅನಗತ್ಯ ಜಾಹೀರಾತುಗಳನ್ನು ನೋಡುವುದು ಕಷ್ಟ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

    court order law

    ಅಂತಿಮವಾಗಿ ಅನ್ಯಾಯದ ವ್ಯಾಪಾರ ಪದ್ಧತಿ ಮತ್ತು ದೂರುದಾರರ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 20,000 ರೂ., ಮಾನಸಿಕ ಯಾತನೆಗಾಗಿ 8,000 ರೂ. ದಂಡ ಮತ್ತು ಗ್ರಾಹಕ ಕಲ್ಯಾಣ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಇಡುವಂತೆ ನಿರ್ದೇಶಿಸಿದೆ. ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ ಗಡುವು ನೀಡಿದೆ.

    ಬುಕ್‌ಮೈಶೋ ಟಿಕೆಟ್ ಬುಕ್ಕಿಂಗ್‌ ವೇದಿಕೆಯಾಗಿರುವುದರಿಂದ ಮತ್ತು ಜಾಹೀರಾತುಗಳ ಸ್ಟ್ರೀಮಿಂಗ್ ಸಮಯದ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರದ ಕಾರಣ ಈ ಪ್ರಕರಣದಲ್ಲಿ ಬಾಧ್ಯಸ್ಥವಾಗುವುದಿಲ್ಲ ಎಂದು ಹೇಳಿತು.

    ತಮ್ಮ ಪ್ರತಿವಾದದಲ್ಲಿ PVR ಸಿನಿಮಾಸ್ ಮತ್ತು INOX, ಕಾನೂನಿನ ಅಡಿಯಲ್ಲಿ ಜಾಗೃತಿ ಮೂಡಿಸಲು ಕೆಲವು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು (PSA) ಪ್ರದರ್ಶಿಸಿದ್ದೇವೆ ಎಂದ ಹೇಳಿತ್ತು.

    ಈ ವೇಳೆ ಕೋರ್ಟ್‌ ಸಿನಿಮಾ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಮತ್ತು ಚಲನಚಿತ್ರ ಪ್ಯಾಕೇಜ್‌ನ ದ್ವಿತೀಯಾರ್ಧದ ಪ್ರಾರಂಭದ ಮೊದಲು ಮಧ್ಯಂತರ ಅವಧಿಯಲ್ಲಿ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶಿಸಬೇಕು ಎಂದು  ಸೂಚಿಸಿದೆ.

     

  • ಬಿಜೆಪಿ ಕೊಟ್ಟಿದ್ದ ಜಾಹೀರಾತೇ ಈಗ ಕಾಂಗ್ರೆಸ್ ಪಾಲಿಗೆ ಅಸ್ತ್ರ!

    ಬಿಜೆಪಿ ಕೊಟ್ಟಿದ್ದ ಜಾಹೀರಾತೇ ಈಗ ಕಾಂಗ್ರೆಸ್ ಪಾಲಿಗೆ ಅಸ್ತ್ರ!

    ಮೈಸೂರು: ಬಿಜೆಪಿ (BJP) ನೀಡಿದ್ದ ಜಾಹೀರಾತನ್ನು ಈಗ ಕಾಂಗ್ರೆಸ್ (Congress) ಅಸ್ತ್ರ ಮಾಡಿಕೊಂಡು ದೊಸ್ತಿ ವಿರುದ್ಧ ಠಕ್ಕರ್‌ ನೀಡುತ್ತಿದೆ.

    ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಕುಟುಂಬದ ವಿರುದ್ದ ನೀಡಿದ್ದ ಜಾಹೀರಾತನ್ನು (Advertisement) ಅಸ್ತ್ರವಾಗಿ ಬಳಸಿದೆ.

     

    ದೇವೇಗೌಡರ ಕುಟುಂಬ ಮುಡಾ ಸೈಟ್ ಗಳ ಪಡೆದ ಬಗ್ಗೆ ಈ ಹಿಂದೆ ಬಿಜೆಪಿ ನೀಡಿದ್ದ ಜಾಹೀರಾತನ್ನು ಕಾಂಗ್ರೆಸ್ ಬಳಸಿಕೊಂಡಿದೆ. ನಗರದ ಹಲವು  ಸರ್ಕಲ್‌ನಲ್ಲಿ ಫ್ಲೆಕ್ಸ್‌ ಅಳವಡಿಕೆ ಮಾಡಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತೇ ಈಗ ಕಾಂಗ್ರೆಸ್ ಬ್ರಹ್ಮಾಸ್ತ್ರವಾಗಿದೆ.

    ಮಹಾರಾಜ ಮೈದಾನದಲ್ಲಿ 11 ಗಂಟೆಗೆ ಜನಾಂದೋಲನ ಸಮಾವೇಶ ನಡೆಯಲಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

  • ಸತ್ತ ಯುವತಿಗೆ ಪ್ರೇತ ವರ ಬೇಕೆಂದು ಜಾಹೀರಾತು ನೀಡಿದ ಕುಟುಂಬ!

    ಸತ್ತ ಯುವತಿಗೆ ಪ್ರೇತ ವರ ಬೇಕೆಂದು ಜಾಹೀರಾತು ನೀಡಿದ ಕುಟುಂಬ!

    – ತುಳುನಾಡಿನಲ್ಲಿ ಇಂದಿಗೂ ನಡೆಯುತ್ತೆ ಪ್ರೇತಗಳ ಮದುವೆ

    ಮಂಗಳೂರು: ಮದುವೆ ವಯಸ್ಸಿಗೆ ಬಂದ ಹುಡುಗ-ಹುಡುಗಿಗೆ ಸೂಕ್ತ ವಧು-ವರ ಸಿಗದೇ ಇದ್ದಾಗ ಜಾಹೀರಾತು (Advertisement) ನೀಡುವುದು ಸಾಮಾನ್ಯ. ಆದ್ರೆ ಕರಾವಳಿಯಲ್ಲಿ ಮೃತ ಯುವತಿಯ ಮದುವೆಗೆ, ಮೃತ ಯುವಕ ಬೇಕು ಅಂತ ಜಾಹೀರಾತು ನೀಡಿದ್ದು, ಸದ್ಯ ಈ ಜಾಹೀರಾತು ಕಟ್ಟಿಂಗ್ ಭಾರೀ ಟ್ರೆಂಡಿಗ್ ಆಗಿದೆ. ಕರಾವಳಿಯಲ್ಲಿ ಇದು ಹೊಸತಲ್ಲ. ಹಿಂದಿನಿಂದಲೂ ಪ್ರೇತ ವಿವಾಹ ಇತ್ತು.

    ಹೌದು. 30 ವರ್ಷಗಳ ಹಿಂದೆ ತೀರಿಹೋದ ಹೆಣ್ಣುಮಗುವಿಗೆ ಅದೇ ಜಾತಿಯ, ಕುಲ, ಗೋತ್ರ ಸರಿಹೊಂದುವ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ (Marriage) ಮಾಡಿಸಲು ತಯಾರಿದ್ದಾರೆ. ಹೀಗೊಂದು ಜಾಹೀರಾತು ಕರಾವಳಿಯಲ್ಲಿ ಭಾರೀ ವೈರಲ್ ಆಗುತ್ತಿದೆ. ಇದು ಕೆಲವರಿಗೆ ಹಾಸ್ಯವಾಗಿ ಕಂಡರೂ ಜಾಹೀರಾತು ನೀಡಿದ ಮನೆಯವರಿಗೆ ಹಾಗೂ ತುಳುವರಿಗೆ ಭಾವನಾತ್ಮಕ ವಿಷಯ. ತುಳುವರಿಗೆ ಗತಿಸಿ ಹೋದವರ ಬಗ್ಗೆಯೂ ಎಷ್ಟೊಂದು ಭಾವನಾತ್ಮಕ ನಂಟು ಇದೆ ಎನ್ನುದನ್ನು ಇದು ತೋರಿಸುತ್ತೆ. ಇದಕ್ಕಾಗಿಯೇ ಕರಾವಳಿಯಲ್ಲಿ ಗತಿಸಿದ ಹೆಣ್ಣಿನ ಮನೆಯವರು 30 ವರ್ಷದ ಪ್ರಾಯದ ಗತಿಸಿದ ಗಂಡು ಬೇಕು ಅಂತ ಕರಾವಳಿಯ ಪ್ರಸಿದ್ಧ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.

    ಮದುವೆಯಾಗದೇ ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಅಂತ ತುಳುವರ ಬಲವಾದ ನಂಬಿಕೆ. ಅದೃಶ್ಯ ರೂಪದಲ್ಲಿ ಕುಟುಂಬದೊಂದಿಗೆ ಸದಾಕಾಲ ಜೀವಿಸುತ್ತಿರುವ ಅವಿವಾಹಿತರಿಗೆ ಮದುವೆಯ ಸಂಸ್ಕಾರಕ್ಕಾಗಿ ಪ್ರೇತಮದುವೆ ಮಾಡಿಸಲಾಗುತ್ತದೆ. ಮದುವೆಯಾಗದೆ ಸತ್ತವರು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ಮದುವೆಯ ಬಗ್ಗೆಯೂ ಕುಟುಂಬಸ್ಥರು ಚಿಂತನೆ ಮಾಡುತ್ತಾರೆ. ಕೆಲವೊಂದು ಕಡೆಗಳಲ್ಲಿ ಗತಿಸಿದವರೇ ತಮ್ಮ ಮದುವೆಯ ಬಗ್ಗೆ ಕುಟುಂಬದವರಿಗೆ ತೊಂದರೆ ನೀಡಿ ನೆನಪಿಸೋದು ಇದೆ ಎನ್ನುವ ನಂಬಿಕೆ ಇದೆ.

    ಮದುವೆಯೆಂದ್ರೆ ಇದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ಮದುವೆಯ ರೀತಿಯಲ್ಲಿಯೇ ಹೆಣ್ಣು – ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ. ಧಾರೆಯ ಬಳಿಕ ಸೇರಿದವರಿಗೆ ಮದುವೆಯ ಊಟವನ್ನು ಬಡಿಸಲಾಗುತ್ತದೆ. ಪ್ರೇತ ಮದುವೆ ಆಷಾಢ ತಿಂಗಳ ರಾತ್ರಿ ವೇಳೆ ನಡೆಯುವುದು ಸಂಪ್ರದಾಯ.

    ಆಧುನಿಕ ಕಾಲಘಟ್ಟದಲ್ಲೂ ಇಂತಹ ನಂಬಿಕೆಗಳನ್ನು ಜೀವಂತ ಇರೋದು ವಿಶೇಷ. ಪ್ರೇತ ವಿವಾಹ ಮಾಡಿದ್ರೆ ಕುಟುಂಬಕ್ಕೆ ಸಮಸ್ಯೆ ಇಲ್ಲ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ.

  • IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    ಪಿಎಲ್ 2024ರ (IPL) ಜಾಹೀರಾತು ತಯಾರಾಗಿದ್ದು, ದಕ್ಷಿಣದ ಹೆಸರಾಂತ ನಟ ಪ್ರಭಾಸ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಮ್ಮ ಕಲ್ಕಿ ಸಿನಿಮಾವನ್ನೂ ಅವರು ಪ್ರಮೋಟ್ ಮಾಡಿದ್ದಾರೆ. ಕಲ್ಕಿ ಸಿನಿಮಾದ ಲುಕ್ ಅನ್ನೇ ಜಾಹೀರಾತಿನಲ್ಲೂ (Advertisement) ತಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಒಂದು ಕಡೆ ಐಪಿಎಲ್ ಜಾಹೀರಾತು ಮತ್ತೊಂದು ಕಡೆ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ಜಾಹೀರಾತು ಕಿರಿಕಿರಿಗೆ ಪಿವಿಆರ್-ಐನಾಕ್ಸ್ ಬ್ರೇಕ್

    ಜಾಹೀರಾತು ಕಿರಿಕಿರಿಗೆ ಪಿವಿಆರ್-ಐನಾಕ್ಸ್ ಬ್ರೇಕ್

    ಪಿವಿಆರ್-ಐನಾಕ್ಸ್ (PVR-Inox)ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಹೋದರೆ, ಸಿನಿಮಾ ಶುರುವಿಗೂ ಮುಂಚೆ ಕನಿಷ್ಠ ಹತ್ತು ನಿಮಿಷಗಳ ಕಾಲ ಜಾಹೀರಾತುಗಳನ್ನು (Advertisement) ನೋಡಬೇಕಾಗಿತ್ತು. ಅದು ಅನಿವಾರ್ಯವಾಗಿತ್ತು. ಎಷ್ಟೋ ಸಲ ಬೈದುಕೊಂಡೇ ಜಾಹೀರಾತುಗಳನ್ನು ನೋಡಿದ್ದೂ ಇದೆ.

    ಸಿನಿಮಾ ಶುರುವಾಗುವ ಮುಂಚೆ ಮಾತ್ರವಲ್ಲ, ಮಧ್ಯಂತರ ಬಿಡುವಿನಲ್ಲೂ ಜಾಹೀರಾತುಗಳನ್ನು ತೋರಿಸಲಾಗುತ್ತಿತ್ತು. ಈಗ ಅದಕ್ಕೆ ಬ್ರೇಕ್ ಹಾಕುವಂತಹ ಕೆಲಸವನ್ನೂ ಪಿವಿಆರ್ ಮಂಡಳಿ ಚಿಂತನೆ ಮಾಡಿದೆಯಂತೆ. ಮುಂದಿನ ದಿನಗಳಲ್ಲಿ ಜಾಹೀರಾತು ರಹಿತ ಸಿನಿಮಾವನ್ನು ನೋಡಬಹುದು ಎಂದಿದೆ.

     

    ಜಾಹೀರಾತು ಪ್ರದರ್ಶನಕ್ಕೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಕಡಿಮೆ ದರದಲ್ಲಿ ಚಿತ್ರ ತೋರಿಸ್ತೀರಾ ಎಂದು ಪ್ರಶ್ನೆ ಕೇಳಿದವರೂ ಇದ್ದರು. ಈ ಎಲ್ಲ ಪ್ರಶ್ನೆಗೆ ಗೋಲಿ ಹೊಡೆದು, ಅದೇ ಸಮಯವನ್ನು ಒಟ್ಟು ಮಾಡಿ, ಮತ್ತೊಂದು ಶೋ ತೋರಿಸುವ ಪ್ಲ್ಯಾನ್ ಆಡಳಿತ ಮಂಡಳಿಯದ್ದು ಆಗಿದೆಯಂತೆ.

  • ಕ್ರಿಕೆಟಿಗ ಡೇವಿಡ್ ವಾರ್ನರ್ ನಟನೆ ಕಂಡು ತಲೆ ಚೆಚ್ಚಿಕೊಂಡ ರಾಜಮೌಳಿ

    ಕ್ರಿಕೆಟಿಗ ಡೇವಿಡ್ ವಾರ್ನರ್ ನಟನೆ ಕಂಡು ತಲೆ ಚೆಚ್ಚಿಕೊಂಡ ರಾಜಮೌಳಿ

    ಸ್ಟ್ರೇಲಿಯಾದ ಕ್ರಿಕೆಟ್ ತಾರೆ ಡೇವಿಡ್ ವಾರ್ನರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ ರಾಜಮೌಳಿ (Rajamouli). ಡೇವಿಡ್ ನಟನೆ ಕಂಡು ತಲೆ ಚಚ್ಚಿಕೊಂಡಿದ್ದಾರೆ. ಹಾಗಂತ ಇದು ಸಿನಿಮಾವಲ್ಲ, ಜಾಹೀರಾತು (Advertisement). ಆ ಜಾಹೀರಾತಿನಲ್ಲಿ ರಾಜಮೌಳಿ ನಿರ್ದೇಶಕನಾಗಿ ನಟಿಸಿದ್ದರೆ, ವಾರ್ನರ್ (David Warner) ರಾಜಮೌಳಿ ಚಿತ್ರದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

    ಆಪ್ ಒಂದರ ಜಾಹೀರಾತು ಇದಾಗಿದ್ದು, ಡೇವಿಡ್ ಗೆ ಕಾಲ್ ಮಾಡುವ ರಾಜಮೌಳಿ, ನಿಮ್ಮ ಕ್ರಿಕೆಟ್ ಪಂದ್ಯದ ಟಿಕೆಟ್ ಅನ್ನು ರಿಯಾಯತಿ ದರದಲ್ಲಿ ಕೊಡಬಹುದೆ ಎಂದು ಕೇಳ್ತಾರೆ. ಕ್ರೆಡಿಟ್ ಯುಪಿಐ ಆಗಿದ್ದರೆ ಕ್ಯಾಶ್ ಬ್ಯಾಕ್ ಬರುತ್ತದೆ ಎನ್ನುತ್ತಾರೆ ಡೇವಿಡ್. ಸಾಮಾನ್ಯ ಯುಪಿಐ ಇದ್ದರೆ? ಎಂದು ಮರು ಪ್ರಶ್ನೆ ಮಾಡುತ್ತಾರೆ ರಾಜಮೌಳಿ. ನಿಮಗೆ ರಿಯಾಯಲಿ ಬೇಕು ಅಂದರೆ, ನನಗೊಂದು ಅವಕಾಶ ಕೊಡಿ ನಿಮ್ಮ ಸಿನಿಮಾದಲ್ಲಿ ಎನ್ನುವ ಡೇವಿಡ್. ತಮ್ಮ ಸಿನಿಮಾದಲ್ಲಿ ಡೆವಿಡ್ ಇದ್ದರೆ ಹೇಗೆಲ್ಲ ನಟಿಸಬಹುದು ಎಂದು ಅಂದಾಜಿಸಿಕೊಂಡು ರಿಯಾಯತಿಯೇ ಬೇಡವೆಂದು ಬೆಚ್ಚಿ ಬೀಳ್ತಾರೆ ರಾಜಮೌಳಿ.

     

    ಈ ಜಾಹೀರಾತು ಮಜವಾಗಿದೆ. ತಮಾಷೆ ತಮಾಷೆಯಾಗಿ ಇಬ್ಬರೂ ಲವಲವಿಕೆಯಿಂದ ನಟಿಸಿದ್ದಾರೆ. ಅದರಲ್ಲೂ ಡೇವಿಡ್ ನಟನೆ ಸಖತ್ ಇಷ್ಟವಾಗುತ್ತಿದೆ. ಇಬ್ಬರು ದಿಗ್ಗಜರನ್ನು ಬಳಸಿಕೊಂಡು ಆ ಆಪ್ ಜಾಹೀರಾತು ನಿರ್ಮಾಣವಾಗಿದೆ.

  • ಗೀತಾ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ದೂರು

    ಗೀತಾ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ದೂರು

    ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ವಿರುದ್ಧ ಚುನಾವಣೆ ಆಯೋಗಕ್ಕೆ ಬಿಜೆಪಿ (BJP) ಕರ್ನಾಟಕ ದೂರು ನೀಡಿದೆ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆ ಸಮಯದಲ್ಲಿ ತಮ್ಮ ಸಿನಿಮಾದ ಜಾಹೀರಾತನ್ನು ನೀಡಿರುವುದರಿಂದ ಅದನ್ನು ಚುನಾವಣೆ ವೆಚ್ಚಕ್ಕೆ ಸೇರಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

    ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಗೀತಾ. ಯುಗಾದಿ ಸಂದರ್ಭದಲ್ಲಿ ಈ ಸಿನಿಮಾದ ಜಾಹೀರಾತು ಅನ್ನು ಎಲ್ಲ ದಿನಪತ್ರಿಕೆಗಳಿಗೆ ನೀಡಲಾಗಿತ್ತು. ಜಾಹೀರಾತಿಗೆ ನೀಡಿದ ಹಣದ ಖರ್ಚನ್ನು ಚುನಾವಣೆ ವೆಚ್ಚದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಬೇಕು ಎಂದು ದೂರಿನಲ್ಲಿ (Complaint) ಹೇಳಲಾಗಿದೆ.

     

    ಈ ಹಿಂದೆ ಶಿವರಾಜ್ ಕುಮಾರ್ ಚಿತ್ರಗಳನ್ನು ಮತ್ತು ಜಾಹೀರಾತುಗಳನ್ನು ತಡೆ ಹಿಡಿಯುವಂತೆ ಇದೇ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ, ತಡೆಹಿಡಿಯಲು ಆಯೋಗ ನಿರಾಕರಿಸಿತ್ತು. ಈಗ ಮತ್ತೊಂದು ದೂರನ್ನು ಬಿಜೆಪಿ ನೀಡಿದೆ.