Tag: ಜಾರಿನಿರ್ದೇಶನಾಲಯ

  • ಮಾಜಿ ಮುಖ್ಯಮಂತ್ರಿ ಮೇಲೆ ಇಡಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧತೆ!

    ಮಾಜಿ ಮುಖ್ಯಮಂತ್ರಿ ಮೇಲೆ ಇಡಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧತೆ!

    ಬೆಂಗಳೂರು: ಕೃಷಿ ಜಮೀನಿನಲ್ಲಿ ಮನೆ ಕಟ್ಟಿ ಮಾರಾಟ ಮಾಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಜಾರಿನಿರ್ದೇಶನಾಲಯ(ಇಡಿ) ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಹೌದು, ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಕೈ ಜೋಡಿಸಿರುವ ಸಿದ್ದರಾಮಯ್ಯನವರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಲು ಮುಂದಾಗಿದೆ. ಕೃಷಿ ಜಮೀನಿನಲ್ಲಿ ಮನೆ ಕಟ್ಟಿ, ಮಾರಾಟ ಮಾಡಿದ ಅರೋಪದಲ್ಲಿ ಇಡಿ ಫುಲ್ ಅಲರ್ಟ್ ಆಗಿದ್ದು, 1 ಕೋಟಿ ರೂಪಾಯಿ ಹಣಕ್ಕೆ ಮನೆ ಮಾರಾಟ ಮಾಡಿರುವ ಸಿದ್ದರಾಮಯ್ಯ ಇಡಿ ಬ್ರಹ್ಮಾಸ್ತ್ರಕ್ಕೆ ಸಿಲುಕಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಏನಿದು ಪ್ರಕರಣ?
    1981ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಡಿನೋಟಿಫೈ ಮಾಡಿದ್ದ ಭೂಮಿಯ ವಿಜಯನಗರದ 2ನೇ ಹಂತದ 10 ಗುಂಟೆ ಜಾಗದಲ್ಲಿ ಸಿದ್ದರಾಮಯ್ಯನವರು ಮನೆ ನಿರ್ಮಿಸಿದ್ದರು. ಕೃಷಿ ಕೆಲಸಕ್ಕೆಂದು ಭೂಮಿ ಪಡೆದು, ಮನೆ ನಿರ್ಮಾಣ ಮಾಡಿದ್ದರು ಎನ್ನುವ ಆರೋಪ ಮಾಡಲಾಗಿತ್ತು. ನಿರ್ಮಾಣ ಮಾಡಿದ ಮನೆಯನ್ನು 2003ರಲ್ಲಿ 1 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಈ ಬಗ್ಗೆ ಮೈಸೂರಿನ ಗಂಗರಾಜು ಎಂಬವರು ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ಮಾತ್ರ ಎಫ್‍ಐಆರ್ ದಾಖಲು ಮಾಡಿಕೊಂಡಿರಲಿಲ್ಲ.

    ಪೊಲೀಸರ ವರ್ತನೆಯಿಂದಾಗಿ ಬೇಸತ್ತ ಗಂಗರಾಜು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಬಳಿಕ ಜುಲೈ 23ರಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‍ಐಆರ್ ದಾಖಲಾಗಿತ್ತು. ಆದರೆ ತನಿಖೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಗಂಗರಾಜು ಡಿಜಿಪಿಗೆ ದೂರು ನೀಡಿದ್ದರು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಡಿಜಿಪಿ ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದಲ್ಲದೇ ಗಂಗರಾಜುರವರು ವರ್ಷದ ಹಿಂದೆಯೇ ಜಾರಿನಿರ್ದೇಶನಾಲಯಕ್ಕೂ ಸಹ ದೂರನ್ನು ನೀಡಿದ್ದರು. ಆದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೇ ಹೊರತು, ಇಡಿ ತನಿಖೆ ಅಸಾಧ್ಯವಾಗಿತ್ತು.

    ಸದ್ಯ ಎಫ್‍ಐಆರ್ ಆಗಿರುವ ಮಾಹಿತಿಯನ್ನು ಗಂಗರಾಜು ಜಾರಿನಿರ್ದೇಶನಾಲಯಕ್ಕೆ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ 30 ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣ ಅಕ್ರಮ ಗಳಿಸಿದ್ದಾರೆ ಎಂದು ಹೇಳಲಾಗತ್ತಿದೆ. ಕೃಷಿಗಾಗಿ ಡಿನೋಟಿಫೈ ಮಾಡಿಸಿಕೊಂಡು, ಮನೆ ಕಟ್ಟಿದ್ದು ಹೇಗೆ ಎಂಬ ಬಗ್ಗೆ ಇಡಿ ತನಿಖೆಯಲ್ಲಿ ಪ್ರಶ್ನಿಸಲಿದೆ. ಅಲ್ಲದೇ ಕಟ್ಟಿದ ಮನೆಯನ್ನು 1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದನ್ನೇ ಮುಂದಿಟ್ಟುಕೊಂಡು ಮನಿ ಲ್ಯಾಂಡ್ರಿಂಗ್ ಕಾಯ್ದೆಯಡಿ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

    ಹೀಗಾಗಿ ಅಕ್ರಮ ಹಣ ಗಳಿಕೆ ಅಡಿಯಲ್ಲಿ ಜಾರಿನಿರ್ದೇಶನಾಲಯ ಪ್ರಕರಣದ ತನಿಖೆಯನ್ನು ನಡೆಸಲು ಮುಂದಾಗಿದೆ. ಅಲ್ಲದೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರೀತಿಯಲ್ಲೇ ಸಿದ್ದರಾಮಯ್ಯ ಕೂಡ ಇಡಿ ದಾಳಿಯಲ್ಲಿ ಸಿಲುಕುತ್ತಾರಾ ಎನ್ನುವ ಪ್ರಶ್ನೆ ಹುಟ್ಟುಹಾಕಿಕೊಂಡಿದೆ. ಸಿದ್ದರಾಮಯ್ಯನವರ ಅಕ್ರಮ ಹಣ ಗಳಿಕೆಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಏರ್‍ಸೆಲ್ ಮ್ಯಾಕ್ಸಿಸ್ ಹಗರಣ: ದಯಾನಿಧಿ ಮಾರನ್ ಸಹೋದರರಿಗೆ ಬಿಗ್ ರಿಲೀಫ್

    ನವದೆಹಲಿ: ಏರ್‍ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಹಾಗೂ ಇವರ ಸೋದರ ಕಲಾನಿಧಿ ಮಾರನ್ ಎಲ್ಲ ಆರೋಪದಿಂದ ಮುಕ್ತರಾಗಿದ್ದಾರೆ.

    ಸಾಕ್ಷ್ಯಧಾರದ ಕೊರತೆಯಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಖುಲಾಸೆಗೊಳಿಸಿ ಆದೇಶ ಪ್ರಕಟಿಸಿದ್ದಾರೆ.

    ಇದು ಅಪಾಯಕಾರಿ ವಿದ್ಯಮಾನ, ಈ ರೀತಿಯ ಆರೋಪ ಮಾಡಿದರೆ ಸರ್ಕಾರದಲ್ಲಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾದಿತು ಎಂದು ಜಡ್ಜ್ ಒ.ಪಿ. ಶೈನಿ ಆದೇಶದಲ್ಲಿ ಹೇಳಿದ್ದಾರೆ.

    ಏನಿದು ಪ್ರಕರಣ?
    ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನ್ ಹಾಗೂ ಇವರ ಸೋದರ ಕಲಾನಿಧಿ ಮಾರನ್ ವಿರುದ್ಧದ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಿತ್ತು.

    2006ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಲೇಷ್ಯಾದ ಮ್ಯಾಕ್ಸಿಸ್ ಕಂಪೆನಿಗೆ ಅನುಕೂಲ ಮಾಡಿಕೊಡಲು ಡೀಲ್ ನಡೆಸಿದ್ದರು. ಈ ಡೀಲ್ ನಡೆಸಿದ್ದಕ್ಕೆ ಮಾರನ್ ಅವರಿಗೆ ಮ್ಯಾಕ್ಸಿಸ್ ಕಡೆಯಿಂದ 700 ಕೋಟಿ ರೂ. ಹಣ ಸಂದಾಯವಾಗಿದೆ. ಈ ಪೈಕಿ ಸ್ವಲ್ಪ ಹಣವನ್ನು ತಮ್ಮ ಸೋದರ ಕಲಾನಿಧಿ ಒಡೆತನದಲ್ಲಿರುವ ಸನ್ ಸಮೂಹ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು ಎಂದು ಎನ್ನುವ ಆರೋಪ ಮಾರನ್ ಸಹೋದರರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಸೇರಿ 8 ಮಂದಿ ಆರೋಪಿಗಳೆಂದು ಹೆಸರಿಸಲಾಗಿತ್ತು.

    ಆರೋಪ ಕೇಳಿ ಬಂದ ಬಳಿಕ ದಯಾನಿಧಿ ಮಾರನ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.