Tag: ಜಾಮೀನು ಅರ್ಜಿ

  • ತೀವ್ರ ವಿರೋಧ ನಡುವೆಯೂ ದೇಶದ್ರೋಹಿಗಳ ಜಾಮೀನು ಅರ್ಜಿ ಸಲ್ಲಿಕೆ

    ತೀವ್ರ ವಿರೋಧ ನಡುವೆಯೂ ದೇಶದ್ರೋಹಿಗಳ ಜಾಮೀನು ಅರ್ಜಿ ಸಲ್ಲಿಕೆ

    – ನ್ಯಾಯಾಲಯಕ್ಕೆ ವಕೀಲರನ್ನ ಕರೆತರಲು ಹರಸಾಹಸ ಪಟ್ಟ ಪೊಲೀಸ್ರು

    ಧಾರವಾಡ: ಹುಬ್ಬಳ್ಳಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಾಕ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತೂ ಆರೋಪಿಗಳ ಪರ ಜಾಮೀನಿಗೆ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

    ಬೆಂಗಳೂರು ಹೈಕೋರ್ಟ್ ಮಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆರೋಪಿಗಳ ಪರ ವಕಾಲತ್ತು ವಹಿಸಲು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲರಿಗೆ ಭಾರಿ ಭದ್ರತೆ ನೀಡಲಾಗಿತ್ತು. ಕೋರ್ಟ್ ಆವರಣ ಹಾಗೂ ಸುತ್ತಮುತ್ತ ಐದು ನೂರು ಪೊಲೀಸರನ್ನು ನಿಯೋಜಿಸಲಾಗಿತ್ತು.

    ಬೆಳಿಗ್ಗೆಯಿಂದಲೇ ಭದ್ರತೆ ಇದ್ದರೂ ವಕೀಲರು ಬೆಳಗಾವಿಯಿಂದ ಮಧ್ಯಾಹ್ನ 2:25ಕ್ಕೆ ಬಂದರು. ಪೊಲೀಸರು ಕೋರ್ಟಿನ ಹಿಂಬಾಗಿಲಿನಿಂದ ಕರೆ ತಂದು ಹತ್ತೇ ನಿಮಿಷಗಳಲ್ಲಿ ಪ್ರಕ್ರಿಯೆ ಮುಗಿಸಿ ಬಳಿಕ ಮತ್ತೆ ಅದೇ ಬಾಗಿಲಿನಿಂದ ಕರೆದುಕೊಂಡು ಹೋದರು. ಈ ಮಧ್ಯೆ ಬೆಂಗಳೂರಿನ ವಕೀಲರು ಬಂದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಕೋರ್ಟ್ ಆವರಣದ ಹೊರಗೆ ಗೋ ಬ್ಯಾಕ್ ಘೋಷಣೆ ಕೂಗಿದ ಘಟನೆ ಕೂಡಾ ನಡೆಯಿತು.

    ಕೋಟಿ9ನಲ್ಲಿ ಮಧ್ಯಾಹ್ನ 2 ರಿಂದ 2:45 ರವರೆಗೆ ಊಟದ ಸಮಯ. ಈ ವೇಳೆ ಯಾವುದೇ ಅರ್ಜಿ ಸ್ವೀಕರಿಸುವುದಿಲ್ಲ. ಆದರೆ ಈ ವೇಳೆ ಹೇಗೆ ಅರ್ಜಿಯನ್ನು ಸ್ವೀಕರಿಸಲಾಯಿತು ಎಂಬ ಪ್ರಶ್ನೆ ಮುನ್ನೆಲೆಗೆ ಬಂತು. ಸಣ್ಣ ಪ್ರಕ್ರಿಯೆಯೊಂದಕ್ಕೆ ಇಡೀ ಸರ್ಕಾರಿ ವ್ಯವಸ್ಥೆಯನ್ನು ದುರುಪಯೋಗಗೊಂಡಿದ್ದಲ್ಲದೇ ಇದೀಗ ಮತ್ತೆ ನಿಯಮ ಬಿಟ್ಟು ಅರ್ಜಿ ಸ್ವೀಕರಿಸಿದ್ದಕ್ಕೆ ಧಾರವಾಡದ ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.

    ಫೆಬ್ರವರಿ 24 ರಂದು ಮೂವರು ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಧಾರವಾಡದ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಆಗಮಿಸಿದಾಗ ಸ್ಥಳೀಯ ವಕೀಲರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಗಲಾಟೆ ನಡೆದಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಂದಿದ್ದ ವಕೀಲರು ಧಾರವಾಡ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದೇ ವಾಪಸಾಗಿದ್ದರು. ಇದಾದ ಬಳಿಕ ಬೆಂಗಳೂರು ಹೈಕೋರ್ಟ್ ಮಧ್ಯಸ್ಥಿಕೆ ವಹಿಸಿ, ಆರೋಪಿಗಳ ಹಕ್ಕನ್ನು ರಕ್ಷಿಸುವಂತೆ ವಕೀಲರು ಹಾಗೂ ಪೊಲೀಸರಿಗೆ ಕೆಲವು ಸೂಚನೆ ನೀಡಿತ್ತು. ಈ ಹಿನ್ನೆಲೆ ಇವತ್ತು ಆರೋಪಿ ಪರ ಅರ್ಜಿ ಸಲ್ಲಿಸಲು ಬಂದ ವಕೀಲರಿಗೆ ಭಾರಿ ಭದ್ರತೆ ನೀಡಲಾಗಿತ್ತು.

  • ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಫೆಬ್ರವರಿ 5ಕ್ಕೆ ನಿತ್ಯಾನಂದನ ಭವಿಷ್ಯ

    ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಫೆಬ್ರವರಿ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.

    ನಿತ್ಯಾನಂದ ಆಧ್ಯಾತ್ಮದ ಹೆಸರಿನಲ್ಲಿ ಚಾತುರ್ಮಾಸ ಅಂತ ಊರು ಬಿಟ್ಟಿದ್ದಾನೆ. ಹೀಗೆ ಊರು ಬಿಟ್ಟವನಿಗೆ ಪೊಲೀಸರು ರಕ್ಷಣೆಯನ್ನು ನೀಡುವ ಹಾಗಿಲ್ಲ. ಹೀಗಿರುವಾಗ ಕಾನೂನಿನ ರಕ್ಷಣೆಯನ್ನು ಕೊಡಬಾರದು, ಕೂಡಲೇ ನಿತ್ಯಾನಂದನ ಜಾಮೀನು ವಜಾಗೊಳಿಸುವಂತೆ ಲೆನಿನ್ ಪರ ವಕೀಲರು ಇಂದು ಹೈ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್

    ನಿತ್ಯಾನಂದ ಇಲ್ಲದೇ ಇರುವ ಕಾರಣ ಆತನ ಪ್ರಕರಣಕ್ಕೇನು ತೊಂದರೆ ಆಗಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಅದರ ಪಾಡಿಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೋಷಾರೋಪ ಪಟ್ಟಿಯೂ ತಯಾರಾಗಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಿತ್ಯಾನಂದನ ಅವಶ್ಯಕತೆಯಿಲ್ಲ. ಪದೇ ಪದೇ ಕೋರ್ಟಿನಲ್ಲಿ ಆತ ಇರೋದು ಬೇಕಾಗಿಲ್ಲ ಎಂದು ನಿತ್ಯಾನಂದ ಪರ ವಕೀಲರು ವಾದ ಮಂಡಿಸಿದರು.

    ಆದರೆ ನಿತ್ಯಾನಂದನ ಪಾಸ್‍ಪೋರ್ಟ್ ಕಾಲಾವಧಿ ಮುಕ್ತಾಯ ಆಗಿದ್ದರೂ ಕೂಡ ಆತ ದೇಶ ಬಿಟ್ಟು ಹೋಗಿದ್ದಾನೆ. ಪೊಲೀಸರು ಆ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಪಾಸ್‍ಪೋಟ್ ಇಲ್ಲದೇ ದೇಶ ಬಿಟ್ಟು ಹೋಗಿರೋದು ದೇಶದ್ರೋಹ. ಅತ್ಯಾಚಾರಿ ಓರ್ವ ದೇಶ ಬಿಟ್ಟಿರೋದೇ ಅಪರಾಧ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದು ಮಾಡುವಂತೆ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 5ಕ್ಕೆ ಈ ಸಂಬಂಧ ಆದೇಶ ಕಾಯ್ದಿರಿಸಿದೆ.

  • ಬಂಧನಕ್ಕೊಳಗಾದ ನಂತರ ಚಿದಂಬರಂ ತೂಕ 8-9 ಕೆಜಿ ಕಡಿಮೆಯಾಗಿದೆ – ಕುಟುಂಬಸ್ಥರ ಬೇಸರ

    ಬಂಧನಕ್ಕೊಳಗಾದ ನಂತರ ಚಿದಂಬರಂ ತೂಕ 8-9 ಕೆಜಿ ಕಡಿಮೆಯಾಗಿದೆ – ಕುಟುಂಬಸ್ಥರ ಬೇಸರ

    ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಸಚಿವ ಚಿದಂಬರಂ ಅವರ ದೇಹದ ತೂಕ ಭಾರೀ ಇಳಿಕೆಯಾಗಿದೆ ಎಂದು ಕುಟುಂಬ ಬೇಸರ ವ್ಯಕ್ತಪಡಿಸಿದೆ.

    ಪಿ.ಚಿದಂಬರಂ ಅವರು ಕ್ರೋನ್ಸ್ ಖಾಯಿಲೆಯಿಂದ ಬಳಲುತ್ತಿದ್ದು, ತಿಹಾರ್ ಜೈಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆ ತೃಪ್ತಿಕರವಾಗಿಲ್ಲ, ಖಾಯಿಲೆ ಉಲ್ಬಣಗೊಂಡಿದ್ದರಿಂದ ಅವರ ತೂಕ ಕಡಿಮೆಯಾಗುತ್ತಲೇ ಇದೆ. ಚಿದಂಬರಂ ಬಂಧನಕ್ಕೊಳಗಾದ ನಂತರ ಸುಮಾರು 8-9 ಕೆ.ಜಿ.ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಕುಟುಂಬದವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಜೈಲಿನಲ್ಲಿ ಅವರಿಗೆ ನೀಡುತ್ತಿರುವ ಚಿಕಿತ್ಸೆ ನಮಗೆ ತೃಪ್ತಿ ತಂದಿಲ್ಲ. ಖಾಯಿಲೆಯಿಂದ ಅವರು ತುಂಬಾ ಬಳಲುತ್ತಿದ್ದಾರೆ. ಕೂಡಲೇ ಅವರಿಗೆ ಹೈದರಾಬಾದ್‍ನ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ನಾಗೇಶ್ವರ ರೆಡ್ಡಿ ಅವರ ಬಳಿ ಚಿಕಿತ್ಸೆ ಕೊಡಿಸಬೇಕಿದೆ. ಚಿದಂಬರ್ ಆರೋಗ್ಯದ ಕುರಿತು ಅವರಿಗೆ ಮಾತ್ರ ತಿಳಿದಿದೆ, ರೆಡ್ಡಿ 2016 ರಿಂದಲೂ ಚಿದಂಬರಂ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಐಎನ್‍ಎಕ್ಸ್ ಮೀಡಿಯಾದ ಭ್ರಷ್ಟಾಚಾರ ಪ್ರಕರಣದ ಕುರಿತ ಪ್ರಕರಣದಲ್ಲಿ ಚಿದಂಬರಂ ಅವರನ್ನು ಆಗಸ್ಟ್ 21ರಂದು ಸಿಬಿಐ ಬಂಧಿಸಿತ್ತು. ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದ ದೆಹಲಿಯ ಕೋರ್ಟ್ ನ.27ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.

    ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ಲಕ್ಷ ಬಾಂಡ್ ಜೊತೆಗೆ ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ಸಲ್ಲಿಸಬೇಕೆಂದು ಆದೇಶಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ ಮತ್ತೊಂದು ಪ್ರಕರಣದಲ್ಲಿ ಪಿ.ಚಿದಂಬರಂ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ತಿಹಾರ್ ಜೈಲಿನಲ್ಲೇ ಮುಂದುವರಿಯಬೇಕಾದ ಪರಿಸ್ಥಿತಿ ಎದುರಾಗಿದೆ.

    ದೆಹಲಿ ನ್ಯಾಯಾಲಯವು ಪಿ.ಚಿದಂಬರಂ ಅವರನ್ನು ನ.27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಚಿದಂಬರಂ ಅವರನ್ನು ಇಡಿ ಪ್ರಶ್ನಿಸಲು ಅವಕಾಶ ನೀಡಿದ್ದಾರೆ. ಜೊತೆಗೆ ಯಾವುದೇ ವೈದ್ಯಕೀಯ ತೊಂದರೆಗಳಿದ್ದಲ್ಲಿ ತಕ್ಷಣ ಅವರನ್ನು ಏಮ್ಸ್ ಗೆ ಕರೆದೊಯ್ಯಬೇಕೆಂದು ಆದೇಶಿಸಿದ್ದರು.

    ತಿಹಾರ್ ಜೈಲಿನಲ್ಲಿರುವ ಆರೋಪಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಮಾನ್ಯವಾಗಿ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ನಾಯಕ ಚಿದಂಬರಂ ಪ್ರಕರಣದಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದರು. ಬಳಿಕ ಕಚೇರಿಗೆ ಕರೆತಂದಿದ್ದರು.

    ಏನಿದು ಪ್ರಕರಣ?
    ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕಾ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

    ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿತ್ತು.

  • ಡಿಕೆಶಿಗೆ ತಿಹಾರ್ ಜೈಲೇ ಗತಿ – ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ

    ಡಿಕೆಶಿಗೆ ತಿಹಾರ್ ಜೈಲೇ ಗತಿ – ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ

    ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲುಪಾಲಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

    ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠ ಇಂದು ಡಿಕೆಶಿ  ಕಡೆಯ ವಾದ ಆಲಿಸಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

    ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಶಿವಕುಮಾರ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿಂದೆಯೇ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ದಸರಾ ಹಬ್ಬದ ಕಾರಣ ಮುಂದೂಡಲಾಗಿತ್ತು.

    ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಳಪಡಿಸಲಾಗಿದೆ. ಡಿಕೆಶಿ ಅವರಿಗೆ ಜಾಮೀನು ಸಿಗುವವರೆಗೂ ಡಿಕೆಶಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಬೇಕಿದೆ.

    ಇಂದು ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಪೊಲೀಸರು ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್ ಮತ್ತೆ 10 ದಿನಗಳ ಕಾಲ ವಿಸ್ತರಣೆ ಮಾಡಿದ್ದು ಅ.25ರವರೆಗೆ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನಲ್ಲೇ ಇರಬೇಕಾಗುತ್ತದೆ.

  • ದೆಹಲಿ ಹೈಕೋರ್ಟಿನಿಂದ ಡಿಕೆಶಿಗೆ ಸಿಗುತ್ತಾ ಬೇಲ್?

    ದೆಹಲಿ ಹೈಕೋರ್ಟಿನಿಂದ ಡಿಕೆಶಿಗೆ ಸಿಗುತ್ತಾ ಬೇಲ್?

    ನವದೆಹಲಿ: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಂದು ಮಹತ್ವ ದಿನವಾಗಿದೆ. ಜಾಮೀನು ಕೋರಿ ದೆಹಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ ಬರಲಿದೆ.

    ಹೌದು. ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ಜಾರಿ ನಿರ್ದೇಶನಾಲಯ(ಇಡಿ) ಸುಳಿಯಿಂದ ನ್ಯಾಯಾಂಗ ಬಂಧನದಡಿ ತಿಹಾರ್ ಜೈಲ್ ಸೇರಿರುವ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ವಿಚಾರಣೆ ಬರಲಿದೆ. ಬೆಳಗ್ಗೆ ದೆಹಲಿ ಹೈಕೋರ್ಟಿನ ನ್ಯಾ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಆಲಿಸಲಿದೆ.

    ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಲಿದ್ದಾರೆ. ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಡಿಕೆಶಿ ಪರ ವಕೀಲರು ಮೊದಲು ವಾದ ಮಂಡಿಸಲಿದ್ದಾರೆ.

    ಡಿಕೆಶಿ ಪರ ವಕೀಲರ ವಾದ ಏನಿರಬಹುದು?
    ಡಿಕೆಶಿ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಲ್ಲದೆ ಜೈಲಿನಲ್ಲೂ 2 ದಿನ ವಿಚಾರಣೆಗೆ ಒಳಪಟ್ಟಿದ್ದಾರೆ. ಅನಾರೋಗ್ಯವಿದ್ದರೂ ತನಿಖೆಗೆ ಸಹಕರಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳ ವಿಚಾರಣೆಯೂ ಅಂತ್ಯಕ್ಕೆ ಬಂದಿದೆ. ಹೀಗಾಗಿ, ಡಿಕೆಶಿ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅವಶ್ಯಕತೆ ಇಲ್ಲ ಎಂದು ಡಿಕಶಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆಗಳಿವೆ.

    ಇಂದೇ ಇಡಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದ್ದು ಹೆಚ್ಚುವರಿ ತನಿಖಾ ವರದಿಯನ್ನು ಹೈಕೋರ್ಟ್ ಮುಂದೆ ಇಡಲಿದ್ದು ಜಾಮೀನು ನೀಡದಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

    ಇಡಿ ಪರ ವಕೀಲರ ವಾದ ಏನಿರಬಹುದು..?
    ಪ್ರಕರಣ ಸಂಬಂಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ ಸುರೇಶ್, ಡಿಕೆಶಿ ಆಪ್ತ ಸುನೀಲ್ ಕುಮಾರ್ ಶರ್ಮಾ, ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದೆ. ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಸಾಕಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಹೀಗಾಗಿ ಜಾಮೀನಿ ನೀಡಿದರೆ ಸಾಕ್ಷಿನಾಶ ಆಗಬಹುದು. ಹೀಗಾಗಿ ತನಿಖೆ ಮುಗಿಯೋವರೆಗೂ ಜಾಮೀನು ನೀಡಬೇಡಿ ಎಂದು ಇಡಿ ಪರ ವಕೀಲರು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

    ಡಿಕೆಶಿ ಪರ ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ, ಮುಕುಲ್ ರೋಹಟಗಿ, ದಯಾನ್ ಕೃಷ್ಣನ್ ವಾದ ಮಂಡಿಸುವ ಸಾಧ್ಯತೆ ಇದ್ದು, ಜಾಮೀನು ಪಡೆಯಲು ದೊಡ್ಡ ವಕೀಲರ ಪಡೆಯನ್ನೇ ಡಿಕೆಶಿ ನೇಮಿಸಿಕೊಂಡಿದ್ದಾರೆ.

  • ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ವಿಷ ಪ್ರಸಾದ ಕೇಸ್- ಹೈಕೋರ್ಟಿನಲ್ಲೂ ಇಮ್ಮಡಿ ಸ್ವಾಮೀಜಿ ಜಾಮೀನು ಅರ್ಜಿ ವಜಾ

    ಚಾಮರಾಜನಗರ: 17 ಮಂದಿ ಸಾವಿಗೀಡಾಗಿ, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದ ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಲ್ಲಿ ಸೆಪ್ಟೆಂಬರ್ 20ರಂದು ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲರು ವಾದ ಮಂಡಿಸಿ, ಇಮ್ಮಡಿ ಮಹದೇವಸ್ವಾಮೀಜಿಯನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಇದೊಂದು ಹೇಯ ಹಾಗೂ ಗಂಭೀರ ಪ್ರಕರಣ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ವಾದಮಂಡನೆ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯಪೀಠವು ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು.

    ಏನಿದು ಪ್ರಕರಣ?:
    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ 2018ರ ಡಿಸೆಂಬರ್ 14ರಂದು ವಿಶೇಷ ಪೂಜೆ ನಡೆದಿತ್ತು. ಈ ವೇಳೆ ದೇವಸ್ಥಾನದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ವಿಷ ಹಾಕಿದ್ದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದು, 112 ಮಂದಿ ಭಕ್ತರು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯನನ್ನು ಬಂಧಿಸಿದ್ದರು.

    ಈ ದುರಂತವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹೀಗಾಗಿ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಜಾಮರಾಜನಗರ ಜಿಲ್ಲಾ ವಕೀಲರ ಸಂಘವು ತೀರ್ಮಾನಿಸಿತ್ತು. ಇದರಿಂದಾಗಿ 6 ತಿಂಗಳು ಯಾರೊಬ್ಬರೂ ಆರೋಪಿಗಳ ಪರ ವಾದ ಮಾಡಲು ಮುಂದೆ ಬರಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿ ಪರ ಮಡಿಕೇರಿ ಮೂಲದ ವಕೀಲ ಅಪ್ಪಣ್ಣ ವಕಾಲತ್ತು ವಹಿಸಲು ಮುಂದೆ ಬಂದಿದ್ದರು. ಉಳಿದ ಆರೋಪಿಗಳಾದ ಅಂಬಿಕಾ, ಮದೇಶ್ ಹಾಗೂ ದೊಡ್ಡಯ್ಯ ಪರವಾಗಿ ವಕಾಲತ್ತು ಮಾಡಲು ಬೆಂಗಳೂರು ಮೂಲದ ಡಿ.ಪಿ.ಸದಾನಂದ ಅವರು ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಲಿದ್ದರು.

    ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಕೋರಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದ. ಸದ್ಯ ಹೈಕೋರ್ಟ್ ನಲ್ಲಿಯೂ ಇಮ್ಮಡಿ ಸ್ವಾಮೀಜಿಗೆ ಹಿನ್ನಡೆಯಾಗಿದೆ.

  • ಡಿಕೆಶಿ ಜಾಮೀನು ಅರ್ಜಿ ವಜಾ – ತಿಹಾರ್ ಜೈಲೇ ಗತಿ

    ಡಿಕೆಶಿ ಜಾಮೀನು ಅರ್ಜಿ ವಜಾ – ತಿಹಾರ್ ಜೈಲೇ ಗತಿ

    ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾದ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದ್ದು ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

    ಎರಡು ಕಡೆಯ ವಾದವನ್ನು ಸುದೀರ್ಘವಾಗಿ ಆಲಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಇಂದು ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ ಇಂದು ಸಂಜೆ 5. 11 ರ ವೇಳೆಗೆ  ಆದೇಶವನ್ನು ಪ್ರಕಟಿಸಿದರು.

    ಸೆ.21ರಂದು ಬೆಳಗ್ಗೆ 11 ಗಂಟೆಯಿಂದ ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.  ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡಿದ್ದರು.

    ಇಡಿ ಪರ ವಕೀಲ ನಟರಾಜ್, ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದೇ ಹೊರತು ಚಿನ್ನ ಬೆಳೆಯಲು ಸಾಧ್ಯ ಇಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆದಾಯ ನೋಡಿದರೆ ಕೃಷಿ ಭೂಮಿಯಲ್ಲಿ ಚಿನ್ನ ಬೆಳೆದಂತಿದೆ ಎಂದು ವಾದಿಸಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಡಿಕೆಶಿ ಚಿನ್ನ ಬೆಳೆದಿದ್ದಾರೆ – ಇಡಿ ವಕೀಲರಿಂದ ಸುದೀರ್ಘ ವಾದ

    ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ಡಿಕೆಶಿಯನ್ನು ಇಡಿ ಸೆ.3 ರಂದು ಬಂಧಿಸಿತ್ತು. ಇದಾದ ಬಳಿಕ ಕೋರ್ಟ್ ಡಿಕೆಶಿಯನ್ನು ಇಡಿ ಕಸ್ಟಡಿಗೆ ನೀಡಿತ್ತು. ನಂತರ ಸೆ.17 ರಂದು ಡಿಕೆಶಿಗೆ ಕೋರ್ಟ್ ಅ.1 ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

    ಹೈ ಬಿಪಿ ಮತ್ತು ಹೈ ಶುಗರ್ ಹಿನ್ನೆಲೆಯಲ್ಲಿ ಆರ್‌ಎಂಎಲ್ ಆಸ್ಪತ್ರೆಯಲ್ಲಿ  ಡಿಕೆ ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯಾಧಿಕಾರಿಗಳು ಆರೋಗ್ಯ ಸ್ಥಿರ ಎಂಬ ವರದಿ ನೀಡಿದ ಬೆನ್ನಲ್ಲೇ ಸೆ. 19 ರಂದು  ತಿಹಾರ ಜೈಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಶಿಫ್ಟ್ ಮಾಡಲಾಗಿತ್ತು. ಇದನ್ನೂ ಓದಿ: ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ

  • ಡಿಕೆ ಶಿವಕುಮಾರ್‌ಗೆ  14 ದಿನ ನ್ಯಾಯಾಂಗ ಬಂಧನ ಮತ್ತೆ ಆಸ್ಪತ್ರೆಗೆ ದಾಖಲು

    ಡಿಕೆ ಶಿವಕುಮಾರ್‌ಗೆ 14 ದಿನ ನ್ಯಾಯಾಂಗ ಬಂಧನ ಮತ್ತೆ ಆಸ್ಪತ್ರೆಗೆ ದಾಖಲು

    ನವದೆಹಲಿ: ಅಕ್ರಮ ಹಣಕಾಸು ವ್ಯವಹಾರದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್ ಒಂದು ದಿನ ನ್ಯಾಯಾಂಗ ಬಂಧನ ವಿಧಿಸಿದೆ.

    ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಕುಮಾರ್ ಅವರನ್ನು ಸಂಜೆ 4 ಗಂಟೆಗೆ  ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

    ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರೆ, ವಿಚಾರಣೆ ಪೂರ್ಣಗೊಂಡಿಲ್ಲ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದಿಸಿದರು. ಅಷ್ಟೇ ಅಲ್ಲದೇ ನನಗೆ ವಾದ ಮಾಡಲು 1 ಗಂಟೆ ಸಮಯ ಬೇಕು ಎಂದು ನಟರಾಜ್ ಮನವಿ ಮಾಡಿದರು.

    ಎರಡು ಕಡೆಯ ವಾದ ಆಲಿಸಿದ ನ್ಯಾ. ಅಜಯ್ ಕುಮಾರ್ ಕುಹಾರ್ ಅ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು. ತಮ್ಮ ಆದೇಶದಲ್ಲಿ ಕೂಡಲೇ ಡಿಕೆಶಿಯನ್ನು ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಆರೋಗ್ಯ ಸರಿ ಇದ್ದು ಡಿಸ್ಚಾರ್ಜ್ ಮಾಡಲು ವೈದ್ಯರು ಅನುಮತಿ ನೀಡಿದರೆ ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಸೂಚಿಸಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು

  • ತನಿಖೆ ಪ್ರಾಥಮಿಕ ಹಂತದಲ್ಲಿದೆ, ಜಾಮೀನು ನೀಡಬೇಡಿ – ಇಡಿಯಿಂದ ಆಕ್ಷೇಪಣೆ ಸಲ್ಲಿಕೆ

    ತನಿಖೆ ಪ್ರಾಥಮಿಕ ಹಂತದಲ್ಲಿದೆ, ಜಾಮೀನು ನೀಡಬೇಡಿ – ಇಡಿಯಿಂದ ಆಕ್ಷೇಪಣೆ ಸಲ್ಲಿಕೆ

    ನವದೆಹಲಿ: ಸೆ.3 ರಂದು ಜಾರಿ ನಿರ್ದೇಶನಾಲಯದಿಂದ(ಇಡಿ) ಬಂಧನಕ್ಕೊಳಗಾಗಿ ಈಗ ಕಸ್ಟಡಿಯಲ್ಲಿರುವ ಮಾಜಿ ಸಚಿವ, ಶಾಸಕ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ.

    ನವದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಜಾಮೀನು ನೀಡದಂತೆ ಇಡಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ. ಸೆ.13 ರಂದು ನಾವು 4 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಕಸ್ಟಡಿಗೆ ನೀಡಿದ್ದರೂ ನಾವು ಯಾವುದೇ ವಿಚಾರಣೆ ನಡೆಸಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಡಿ ಎಂದು ಇಡಿ ಆಕ್ಷೇಣೆ ಸಲ್ಲಿಸಿದೆ.

    ಆಕ್ಷೇಪಣೆಯಲ್ಲಿ ಏನಿದೆ?
    ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಚಾರಣೆ ಅಗತ್ಯವಿದ್ದು, ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯೂ ಇದ್ದು, ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದ್ದು ಜಾಮೀನು ನೀಡುವುದು ಸರಿಯಲ್ಲ. ಇಡಿ ಸಂಸ್ಥೆಯೂ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ವ್ಯಕ್ತಿಗಳ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾರೀ ಪ್ರಮಾಣದ ಹಣ ಬಳಕೆಯಾಗಿದೆ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಒಂದೊಮ್ಮೆ ಜಾಮೀನು ನೀಡಿದರೆ ಪ್ರಕರಣದ ಪ್ರಮುಖ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆಯಿದೆ.

    ಆರೋಪಿಗೆ ನಿರಂತರ ವೈದ್ಯಕೀಯ ಪರೀಕ್ಷೆಯಿಂದ ವೈದ್ಯಕೀಯ ಸಮಸ್ಯೆಗಳು ಇರುವುದು ಕಂಡುಬಂದಿಲ್ಲ. ಜೈಲಿನಲ್ಲೂ ಡಿಕೆಶಿ ವೈದ್ಯಕೀಯ ಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ. ಜಾಮೀನು ನೀಡುವುದರಿಂದ ದೊಡ್ಡ ಮತ್ತು ಬಹುಹಂತದ ಷಡ್ಯಂತ್ರವನ್ನು ಬಯಲಿಗೆಳೆಯಲು ತೊಂದರೆ ಉಂಟಾಗುತ್ತದೆ. ಅಲ್ಲದೇ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದಿದ್ದಾರೆ.

    ಇಡಿ ಅಧಿಕಾರಿಗಳು ಕೋರ್ಟಿಗೆ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದಂತೆ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರು ಅಭಿಷೇಕ್ ಮನು ಸಿಂಘ್ವಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

    ಡಿಕೆಶಿ ಪರ ವಕೀಲರ ವಾದ ಹೇಗಿರಬಹುದು?
    ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಆರೋಗ್ಯ ಸಮಸ್ಯೆ ಮುಂದಿಟ್ಟುಕೊಂಡು ಜಾಮೀನು ನೀಡುವಂತೆ ಮನವಿ ಮಾಡಬಹುದು. ಆರೋಗ್ಯ ಸುಧಾರಿಸಿದ ಬಳಿಕ ವಿಚಾರಣೆಗೆ ಹಾಜರಾಗುತ್ತೇವೆ. ಇಲ್ಲಿಯವರೆಗೆ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಿನದಿಂದ ಆಸ್ಪತ್ರೆಗೆ ದಾಖಲಾಗಿದ್ದೇವೆ. ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ಕೋರ್ಟಿನಲ್ಲಿ ವಾದ ಮಂಡಿಸಬಹುದಾಗಿದೆ.

  • ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್‍ಪಿ

    ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್‍ಪಿ

    ರಾಮನಗರ: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ ಮಾಡುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಭಾನೋತ್ ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದು, ನಾಲ್ಕು ತಂಡಗಳು ಪ್ರತ್ಯೇಕವಾಗಿ ಶಾಸಕರ ಹುಡುಕಾಟದಲ್ಲಿ ನಿರತವಾಗಿವೆ. ಪ್ರಕರಣ ನಡೆದ ಬಳಿಕ ನಮಗೆ ಯಾವುದೇ ದೂರು ಹಾಗೂ ಎಂಎಲ್‍ಸಿ ಬಂದಿರಲಿಲ್ಲ. ಎಂಎಲ್‍ಸಿ ಬಂದ ಬಳಿಕ ಸ್ಥಳೀಯ ಪೊಲೀಸರನ್ನ ಕಳುಹಿಸಿ ಶಾಸಕ ಆನಂದ್ ಸಿಂಗ್ ಹೇಳಿಕೆ ಪಡೆದು ಎಫ್‍ಐಆರ್ ದಾಖಲಿಸಲಾಗಿತ್ತು. ಶಾಸಕ ಆನಂದ್ ಸಿಂಗ್ ನೀಡಿರುವ ಹೇಳಿಕೆಯಲ್ಲಿ ಸಚಿವ ತುಕಾರಾಂ, ಶಾಸಕರಾದ ತನ್ವೀರ್ ಸೇಠ್, ರಘುಮೂರ್ತಿ, ರಾಮಪ್ಪರ ಹೆಸರನ್ನ ಎಫ್‍ಐಆರ್‍ನಲ್ಲಿ ನಮೂದಿಸಲಾಗಿದ್ದು ಘಟನೆಯಲ್ಲಿ ಪ್ರತ್ಯಕ್ಷವಾಗಿ ನೋಡಿದ್ದನ್ನ ಹೇಳಿಕೆ ಪಡೆಯಲಿದ್ದೇವೆ. ಜೊತೆಗೆ ಘಟನೆ ನಡೆದ ವೇಳೆ ಇದ್ದವರು, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದು ಕ್ರಮ ಜರುಗಿಸುವುದಾಗಿ ವಿವರಿಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಉಳಿದಂತೆ ಪ್ರಕರಣ ಸಂಬಂಧ ಈಗಾಗಲೇ ರೆಸಾರ್ಟಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಗೆ ಯಾವುದೇ ರಾಜಕೀಯ ಒತ್ತಡ ಹೇರಿಲ್ಲ, ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ. ಅಲ್ಲದೇ ಶಾಸಕ ಗಣೇಶ್ ಮೇಲೆ ರೌಡಿಶೀಟರ್ ತೆರೆಯುವ ಸಂಬಂಧ ಯಾವ ಕ್ರಮ ಜರುಗಿಸಬೇಕು ಎಂಬುವುದನ್ನು ನೋಡುತ್ತೇವೆ. ಈ ಬಗ್ಗೆ ಬಳ್ಳಾರಿ ಎಸ್‍ಪಿ ಅವರೊಂದಿಗೆ ಮಾಹಿತಿ ಪಡೆಯುತ್ತಿದ್ದು ಮಾಹಿತಿ ಬಂದ ಬಳಿಕ ರೌಡಿ ಶೀಟರ್ ತೆರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

    ಜನವರಿ 19 ರ ರಾತ್ರಿ ಈಗಲ್ಟನ್ ರೆಸಾರ್ಟಿನಲ್ಲಿ ಗಲಾಟೆ ಮಾಡಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಇತ್ತ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು ಕೂಡ ಶಾಸಕ ಗಣೇಶ್ ಘಟನೆ ಬಗ್ಗೆ ಮಾಹಿತಿ ನೀಡಿ ಫೇಸ್‍ಬುಕ್ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಶಾಸಕ ಆನಂದ್ ಸಿಂಗ್ ತಮ್ಮ ಮೇಲೆ ಮೊದಲು ಹಲ್ಲೆ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv