Tag: ಜಾಫರ್ ಶರೀಫ್

  • ಜಾಫರ್ ಶರೀಫ್‍ಗೆ ಭಾವ ಪೂರ್ಣ ಶ್ರದ್ಧಾಂಜಲಿ

    ಜಾಫರ್ ಶರೀಫ್‍ಗೆ ಭಾವ ಪೂರ್ಣ ಶ್ರದ್ಧಾಂಜಲಿ

    – ಪೇಜಾವರ ಶ್ರೀ ಸೇರಿದಂತೆ ಹಲವು ಗಣ್ಯರು ಭಾಗಿ

    ಬೆಂಗಳೂರು: ಕೇಂದ್ರ ಮಾಜಿ ಸಚಿವ, ದಿವಂಗತ ಜಾಫರ್ ಶರೀಫ್ ಅವರಿಗೆ ಇಂದು ನಗರದ ಮಜೀದ್ ಖಾದ್ರಿಯಾ ಮೈದಾನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೇಜಾವರ ಶ್ರೀಗಳು ಸೇರಿದಂತೆ ರಾಜ್ಯ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ನಮನ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು, ಜಾಫರ್ ಶರೀಫ್ ಅವರ ಹೆಸರಿನಲ್ಲಿ ಯೋಜನೆ ಅಥವಾ ಕಾರ್ಯಕ್ರಮ ಜಾರಿಗೆ ಮಾಡುವುದಕ್ಕೆ ಚಿಂತಿಸಲಾಗಿದೆ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ಸರ್ಕಾರ ಕಾರ್ಯಕ್ರಮಕ್ಕೆ ಅವರ ಹೆಸರಿಡಲಾಗುವುದು. ಶರೀಫ್ ಅವರಿ ಶಾರೀರಿಕವಾಗಿ, ಭೌತಿಕವಾಗಿ ನಮ್ಮನ್ನ ಅಗಲಿದ್ದಾರೆ ಅಷ್ಟೇ, ಅವರು ನಮ್ಮ ಜೊತೆಗೆ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕಾರ್ಯಕ್ರಮ ಯೋಜನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

    ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ರೆಹಮಾನ್ ಖಾನ್, ಸ್ಪೀಕರ್ ರಮೇಶ್ ಕುಮಾರ್, ಬಿ.ಕೆ ಹರಿಪ್ರಸಾದ್, ಸಿಎಂ ಇಬ್ರಾಹಿಂ, ಯುಟಿ ಖಾದರ್, ಕೆ.ಹೆಚ್ ಮುನಿಯಪ್ಪ, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿ ಇದ್ದರು.

    ಪೇಜಾವರ ಶ್ರೀಗಳ ಭಾಷಣ ತಡೆದ ಜಮೀರ್:
    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು ಜಾಫರ್ ಶರೀಫ್ ಅವರಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಆದರೆ ಈ ವೇಳೆ ನಮಾಜ್ ಆರಂಭವಾದದ್ದನ್ನು ಗಮನಿಸಿದ ಸಚಿವ  ಜಮೀರ್ ಅವರು  ಶ್ರೀಗಳ ಭಾಷಣವನ್ನು ಅರ್ಧಕ್ಕೆ ತಡೆದರು. 2 ನಿಮಿಷಗಳ ಬಳಿಕ ಭಾಷಣ ಆರಂಭಿಸಿದ ಪೇಜಾವರ ಶ್ರೀಗಳು, ಸಂಧ್ಯಾ ಸಮಯದಲ್ಲಿ ದೇವರ ಪ್ರಾರ್ಥನೆ ಮಾಡುವ ಮುಸಲ್ಮಾನ ಭಾಂದವರಿಗೆ ಧನ್ಯವಾದ ಎಂದು ಹೇಳಿ ಭಾಷಣ ಆರಂಭಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರಲ್ಲಿ ನಮ್ಮನ್ನ ಅಗಲಿದ ಗಣ್ಯರು

    2018ರಲ್ಲಿ ನಮ್ಮನ್ನ ಅಗಲಿದ ಗಣ್ಯರು

    ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ, ತಮಿಳುನಾಡಿನ ಡಿಎಂಕೆ ನಾಯಕ ಕರುಣಾನಿಧಿ, ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ, ಸಚಿವ ಅನಂತ್ ಕುಮಾರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ವರ್ಷ ವಿಧವಶರಾಗಿದ್ದಾರೆ. ಅಷ್ಟೇ ಅಲ್ಲದೆ ವರ್ಷ ಆರಂಭವಾದ ಕೆಲ ದಿನಗಳಲ್ಲಿಯೇ ಕಾಶಿನಾಥ್ ಅವರನ್ನು ಕಳೆದುಕೊಂಡಿದ್ದ ಸ್ಯಾಂಡ್‍ವುಲ್ ವರ್ಷಾಂತ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕಳೆದುಕೊಂಡಿತು.

    ರಾಧಾ ವಿಶ್ವನಾಥ್:
    ಎಂ.ಎಸ್. ಸುಬ್ಬಲಕ್ಷ್ಮಿ ಅವರ ಪುತ್ರಿ ಹಾಗೂ ಖ್ಯಾತ ಗಾಯಕಿಯಾಗಿದ್ದ ರಾಧಾ ವಿಶ್ವನಾಥ್ ಅವರು ಜನವರಿ 2ರಂದು ನಿಧನರಾದರು.

    ಕಾಶಿನಾಥ್:
    ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ ಕಾಶಿನಾಥ್(67) ಅವರು ಜನವರಿ 18ರಂದು ನಿಧನರಾದರು. ಅಂದು ಚಾಮರಾಜಪೇಟೆಯ ಟಿಆರ್ ಮಿಲ್‍ನ ರುದ್ರಭೂಮಿಯಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.

    ಶ್ರೀದೇವಿ:
    ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಫೆಬ್ರವರಿ 24ರಂದು ರಾತ್ರಿ ಮೃತಪಟ್ಟಿದ್ದರು. ನಟಿ ಶ್ರೀದೇವಿ ಸಾವು ಭಾರೀ ಚರ್ಚೆಗೆ ಕಾರಣವಾಗಿತ್ತು. ದುಬೈನಿಂದ ಮೃತದೇಹವನ್ನು ಮುಂಬೈಗೆ ತಂದು ಫೆಬ್ರವರಿ 27ರಂದು ವಿಲೆ ಪಾರ್ಲೆ ಸೇವಾ ಸಮಾಜದ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ತಮಿಳುನಾಡಿನ ಶಿವಕಾಶಿಯಲ್ಲಿ 1963ರ ಆಗಸ್ಟ್ 13ರಂದು ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲಿಯೇ ತಮಿಳಿನ `ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು.

    ಕರುಣಾನಿಧಿ:
    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕಲೈನರ್ ಕರುಣಾನಿಧಿ(94) ಆಗಸ್ಟ್ 7ರಂದು ವಿಧಿವಶರಾದರು. ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಜಾಗದ ಸಮಸ್ಯೆಯನ್ನು ಆಲಿಸಿದ ಕೋರ್ಟ್ ಆಗಸ್ಟ್ 8ರಂದು ರಾತ್ರಿಯೇ ವಿಚಾರಣೆ ನಡೆಸಿ, ಮರಿನಾ ಬೀಚ್‍ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿತು. ಇದರಿಂದಾಗಿ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರ ಅಂತ್ಯಸಂಸ್ಕಾರ ನೆರವೇರಿದ ಮರಿನಾ ಬೀಚ್‍ನಲ್ಲಿಯೇ ಕರುಣಾನಿಧಿ ಅವರಿಗೂ ಜಾಗ ಸಿಕ್ಕಂತಾಯಿತು.

    ಸೋಮನಾಥ ಚಟರ್ಜಿ:
    ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ(89) ಆಗಸ್ಟ್ 13ರಂದು ಕೋಲ್ಕತಾದ ಆಸ್ಪತ್ರೆಯಲ್ಲಿ ನಿಧನರಾದರು. ಚಟರ್ಜಿ ಅವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 2004 ರಿಂದ 2009ರವರೆಗೆ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

    ಅಟಲ್ ಬಿಹಾರಿ ವಾಜಪೇಯಿ:
    ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ(93) ಅವರು ಆಗಸ್ಟ್ 16ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಅನೇಕ ರಾಜಕೀಯ ನಾಯಕರು ಪಕ್ಷಭೇದ ಮರೆತು ದೇಶದ ಮೂಲೆ ಮೂಲೆಯಿಂದ ಬಂದು ಅಟಲ್ ಜೀ ಅವರ ಅಂತಿಮ ದರ್ಶನ ಪಡೆದರು. ಬ್ರಾಹ್ಮಣ ಸಂಪ್ರದಾಯದಂತೆ ವಾಜಪೇಯಿ ಅವರ ಅಂತ್ಯಸಂಸ್ಕಾರವು ಆಗಸ್ಟ್ 17ರಂದು ದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿತು.

    ಅನಂತ್ ಕುಮಾರ್:
    ದೆಹಲಿಯ ಕನ್ನಡ ಧ್ವನಿ ಎಂದೇ ಗುರುತಿಸಿಕೊಂಡಿದ್ದ ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ಸಚಿವ ಅನಂತ್ ಕುಮಾರ್ (59) ಅವರು ನವೆಂಬರ್ 12ರಂದು ನಿಧನರಾದರು. ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

    ರೆಬಲ್ ಸ್ಟಾರ್ ಅಂಬರೀಶ್:
    ಮಾಜಿ ಸಚಿವ, ಸ್ಯಾಂಡಲ್‍ವುಡ್ ಟ್ರಬಲ್ ಶೂಟರ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ವಿಧಿವಶರಾದರು. ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಸಾಗಿಸಿ ಅಲ್ಲಿನ ಜನತೆಗೆ ದರ್ಶನ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿತು. ಅಂಬರೀಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಪುತ್ರ ಅಭಿಷೇಕ್ ಅಗ್ನಿ ಸ್ಪರ್ಶ ನೆರವೇರಿಸಿದರು.

    ಜಾಫರ್ ಶರೀಫ್:
    ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್(85) ಅವರು ನವೆಂಬರ್ 25ರಂದು ನಿಧನರಾದರು. ನವೆಂಬರ್ 3, 1933 ರಂದು ಜನಿಸಿದ್ದ ಷರೀಫ್ 1991-95ರ ಅವಧಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಆಪ್ತರಾಗಿದ್ದ ಜಾಫರ್ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದರು. ಬೆಂಗಳೂರಿನ ಖಬರಸ್ತಾನ ಸ್ಮಶಾನದಲ್ಲಿ ನವೆಂಬರ್ 26ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಮಧುಕರ್ ಶೆಟ್ಟಿ:
    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ(47) ಅವರು ಹೈದ್ರಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 28ರಂದು ವಿಧಿವಶರಾದರು. ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ರಾಮನಗರ ಚನ್ನಪಟ್ಟಣದಿಂದ ವೃತ್ತಿ ಜೀವನ ಆರಂಭಿಸಿದ್ದರು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿಯ ಮನೆಯ ಅಡಿಕೆ ತೋಟದಲ್ಲಿ ಡಿಸೆಂಬರ್ 30ರಂದು ಅಂತ್ಯಕ್ರಿಯೆ ನೆರವೇರಿತು.

    ಸೂಲಗಿತ್ತಿ ನರಸಮ್ಮ:
    ದೇಶದ ಉನ್ನತ ನಾಗರಿಕ ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡತಿ ಸೂಲಗಿತ್ತಿ(98) ನರಸಮ್ಮ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಡಿಸೆಂಬರ್ 25ರಂದು ನಿಧನರಾದರು. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಾಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು. ಸೂಲಗಿತ್ತಿ ನರಸಮ್ಮ ಅವರ ಅಂತ್ಯ ಸಂಸ್ಕಾರ ಡಿಸೆಂಬರ್ 26ರಂದು ನಗರದ ಗಂಗಸಂದ್ರ ಸರ್ಕಾರಿ ಜಮೀನಿನಲ್ಲಿ ನೆರವೇರಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಪುಸ್ತಕ ಲೋಕಾರ್ಪಣೆಗೆ ಮುನ್ನವೇ ಜಾಫರ್ ವಿಧಿವಶ- ಮಾಜಿ ರಾಷ್ಟ್ರಪತಿ ಆಗಮನ

    ಬೆಂಗಳೂರು: ಕಳೆದ ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

    ಮೌಲಾನ ಅಬ್ದುಲ್ ಕಲಾಮ್ ಆಝಾದ್ ಅವರ `ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಕೃತಿಯನ್ನು ಜಾಫರ್ ಶರೀಫ್ ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದರು. ಆ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪ್ರಣವ್ ಮುಖರ್ಜಿಯನ್ನು ಪುಸ್ತಕದ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಪುಸ್ತಕದ ಲೋಕಾರ್ಪಣೆಗೆ ಮುನ್ನ ಜಾಫರ್ ಶರೀಫ್ ಇಹಲೋಕ ತ್ಯಜಿಸಿದರು.

    ಈ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರಣವ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಜಾಫರ್ ಶರೀಫ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಜಾಫರ್ ಶರೀಫ್ ಕುಟುಂಬದ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋಹನ್ ಭಾಗವತ್‍ಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿದ್ದು ಯಾಕೆ: ಜಾಫರ್ ಶರೀಫ್ ಹೇಳ್ತಾರೆ

    ಮೋಹನ್ ಭಾಗವತ್‍ಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿದ್ದು ಯಾಕೆ: ಜಾಫರ್ ಶರೀಫ್ ಹೇಳ್ತಾರೆ

    ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಪತ್ರ ಬರೆದಿರುವುದು ಯಾಕೆ ಎನ್ನುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಮೋಹನ್ ಭಾಗವತ್ ಹೆಸರು ಪ್ರಸ್ತಾಪ ವಾಗಿತ್ತು. ದೇಶದ ಪ್ರಜೆ ಯಾಗಿ ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಮೋಹನ್ ಭಾಗವತ್ ಯಾವ ದೃಷ್ಟಿಯಿಂದಲೂ ಅನರ್ಹರಲ್ಲ ಅವರು ರಾಷ್ಟ್ರಪತಿ ಹುದ್ದೆಗೆ ಅರ್ಹ ಎಂದು ಹೇಳುವ ಮೂಲಕ ಭಾಗವತ್ ಪರ ಬ್ಯಾಟ್ ಬೀಸಿದರು.

    ರಾಷ್ಟ್ರಪತಿ ಹುದ್ದೆ ಏರಿದವರು ಸಂವಿಧಾನದ ಅಡಿ ಕೆಲಸ ಮಾಡಬೇಕು. ಹೀಗಾಗಿ ಆರ್‍ಎಸ್‍ಎಸ್ ನಿಂದಲೂ ಬಂದರೂ ಸಂವಿಧಾನದ ಅಡಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ನಾನು ಮೋಹನ್ ಭಾಗವತ್ ಅರ್ಹ ಎಂದು ಪತ್ರ ಬರೆದಿದ್ದೇನೆ ಎಂದು ಸಮರ್ಥಿಸಿದರು.

    ಈ ಪತ್ರ ಬರೆದ ತಕ್ಷಣಕ್ಕೆ ನಾನು ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ನನಗೆ ಎಲ್ಲವೂ ಕೊಟ್ಟಿದೆ. ಬಿಜೆಪಿಗೆ ಹೋಗುವ ಪ್ರಶ್ನೆ ಯೇ ಇಲ್ಲ, ಕಾಂಗ್ರೆಸ್ ಕಡೆಗಣಿಸಿ ಮಾತನಾಡುವುದು ಧರ್ಮವೂ ಅಲ್ಲ ನೀತಿಯೂ ಅಲ್ಲ. ದೇಶದ ಐಕ್ಯತೆ ಸಮಗ್ರತೆ ದೃಷ್ಟಿಯಿಂದ ಈ ಪತ್ರ ಬರೆದಿದ್ದೇನೆ ಎಂದು ಹೇಳಿದರು.

    ಜಾಫರ್ ಶರೀಫ್ ಅವರು ಮೋಹನ್ ಭಾಗವತ್ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿರುವುದು ಸಂಘ ಪರಿವಾರದ ನಾಯಕರ ಅಚ್ಚರಿಗೆ ಕಾರಣವಾಗಿದ್ದರೆ, ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಆರ್‍ಎಸ್‍ಎಸ್‍ಗಾಗಿ ದುಡಿಯುತ್ತೇನೆ, ರಾಷ್ಟ್ರಪತಿ ಪಟ್ಟ ಬೇಡ: ಮೋಹನ್ ಭಾಗವತ್