Tag: ಜಾನ್ ಬೋಲ್ಟನ್

  • ಭಾರತದ ಪರ ಮಾತನಾಡಿದ್ದ ಅಮೆರಿಕ ಮಾಜಿ NSA ಬೋಲ್ಟನ್‌ ಮನೆಗೆ ಎಫ್‌ಬಿಐ ದಾಳಿ

    ಭಾರತದ ಪರ ಮಾತನಾಡಿದ್ದ ಅಮೆರಿಕ ಮಾಜಿ NSA ಬೋಲ್ಟನ್‌ ಮನೆಗೆ ಎಫ್‌ಬಿಐ ದಾಳಿ

    ವಾಷಿಂಗ್ಟನ್‌: ಅಮೆರಿಕದ (USA) ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA), ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ, ಜಾನ್‌ ಬೋಲ್ಟನ್‌ (John Bolton) ಅವರ ಮನೆಗೆ ಎಫ್‌ಬಿಐ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ಶುಕ್ರವಾರ ಬೆಳಗ್ಗೆ ಜಾನ್ ಬೋಲ್ಟನ್ ಅವರ ವಾಷಿಂಗ್ಟನ್ ಡಿಸಿಯಲ್ಲಿರುವ ನಿವಾಸದ ಮೇಲೆ ಎಫ್‌ಬಿಐ (FBI) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಮೊದಲ ಅವಧಿಯಲ್ಲಿ ಭದ್ರತಾ ಸಲಹೆಗಾರಾಗಿದ್ದ ಜಾನ್‌ ಬೋಲ್ಟನ್‌ ಈಗ ಟ್ರಂಪ್‌ ಸುಂಕ ನೀತಿಗಳನ್ನು ಕಟು ಪದಗಳಿಂದ ಟೀಕಿಸುತ್ತಿದ್ದರು.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ಭಾರತ ಮತ್ತು ಅಮೆರಿಕ ಸಂಬಂಧ ಈಗ ಬಹಳಷ್ಟು ಹದಗೆಟ್ಟಿದೆ. ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವ ಭಾರತದ ಮೇಲೆ ದಂಡವಾಗಿ 25% ಸುಂಕ ಹೇರುತ್ತಿರುವ ಟ್ರಂಪ್‌ ಚೀನಾಗೆ ವಿನಾಯಿತಿ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಬಂಧನ

    ಟ್ರಂಪ್ ಪುಟಿನ್ ಅವರನ್ನು ಸಭೆಗೆ ಅಲಾಸ್ಕಾಗೆ ಆಹ್ವಾನಿಸಿದ್ದನ್ನು ಬೋಲ್ಟನ್ ಟೀಕಿಸಿದ್ದರು. ಸಭೆಗೂ ಮೊದಲೇ ಅಮೆರಿಕದ ಮಣ್ಣಿಗೆ ಸ್ವಾಗತಿಸಿದ್ದು ಪುಟಿನ್ ಅವರು ಜಯಗಳಿಸಿದ್ದಾರೆ ಎಂದು ತಿಳಿಸಿದ್ದರು. ಬೋಲ್ಟನ್‌ ಅವರ ಈ ವಿಶ್ಲೇಷಣೆಯನ್ನು ಟ್ರಂಪ್‌ ಇದು ಮೂರ್ಖತನದ ಹೇಳಿಕೆ ಎಂದು ಟೀಕಿಸಿದ್ದರು.

    17 ತಿಂಗಳುಗಳ ಕಾಲ ಡೊನಾಲ್ಡ್ ಟ್ರಂಪ್ ಅವರಿಗೆ ಭದ್ರತಾ ಸಲಹೆಗಾರರಾಗಿದ್ದ ಬೋಲ್ಟನ್‌ ಇರಾನ್, ಅಫ್ಘಾನಿಸ್ತಾನ ಮತ್ತು ಉತ್ತರ ಕೊರಿಯಾ ಸೇರಿದಂತೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    ಬೋಲ್ಟನ್ ಅವರ ಪುಸ್ತಕದ ಬಿಡುಗಡೆಯನ್ನು ತಡೆಯಲು ಟ್ರಂಪ್ ಸರ್ಕಾರ ಬಹಳ ಪ್ರಯತ್ನಿಸಿತ್ತು. ಈ ವರ್ಷದ ಆರಂಭದಲ್ಲಿ ಅಧ್ಯಕ್ಷ ಟ್ರಂಪ್ ಅವರು ಅಧಿಕಾರಕ್ಕೆ ಮರಳಿದಾಗ 40 ಕ್ಕೂ ಹೆಚ್ಚು ಮಾಜಿ ಗುಪ್ತಚರ ಅಧಿಕಾರಿಗಳ ಭದ್ರತಾ ಅನುಮತಿಗಳನ್ನು ರದ್ದುಗೊಳಿಸಿದ್ದರು. ಈ ಪಟ್ಟಿಯಲ್ಲಿ ಬೋಲ್ಟನ್ ಅವರ ಹೆಸರೂ ಸೇರಿತ್ತು. ಭದ್ರತಾ ಅನುಮತಿಗಳನ್ನು  ರದ್ದುಗೊಳಿಸಿದ ಮೂವರು ಮಾಜಿ ಟ್ರಂಪ್ ಸಹಾಯಕರಲ್ಲಿ ಅವರು ಒಬ್ಬರಾಗಿದ್ದರು.

  • ಟ್ರಂಪ್‌ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಿದ್ದಾರೆ: ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಡಿ

    ಟ್ರಂಪ್‌ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಿದ್ದಾರೆ: ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಡಿ

    – ಭಾರತದ ಮೇಲೆ 50% ಸುಂಕ ಹಾಕಿದ್ದು ತಪ್ಪು ನಿರ್ಧಾರ: ಜಾನ್‌ ಬೋಲ್ಟನ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಿದ್ದಾರೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಭಾರತದ ಮೇಲೆ 50% ರಷ್ಟು ಸುಂಕ ವಿಧಿಸಿರುವುದು ದ್ವಿಪಕ್ಷೀಯ ಸಂಬಂಧದಲ್ಲಿ ತಪ್ಪು ನಡೆಯಾಗಿದೆ ಎಂದು ಟ್ರಂಪ್‌ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.

    ಭಾರತದ ಮೇಲೆ ಅಮೆರಿಕದ ಅತ್ಯಧಿಕ ಸುಂಕವನ್ನು ವಿಧಿಸಿದೆ. ಭಾರತದ ಆಮದುಗಳ ಮೇಲೆ ಶೇ.25 ಸುಂಕ ಹಾಕಿತ್ತು. ರಷ್ಯಾದಿಂದ ತೈಲ ಖರೀದಿ ಕಾರಣಕ್ಕಾಗಿ ಮತ್ತೆ 25% ಸೇರಿ ಒಟ್ಟು 50% ಟ್ಯಾರಿಫ್‌ ಹಾಕಿದೆ. ಟ್ರಂಪ್‌ ಅವರ ಈ ನಡೆಯು ಎರಡು ದೇಶಗಳ ನಡುವಿನ ಸಂಬಂಧಕ್ಕೆ ಹಾನಿಕಾರಕ ಎಂದು ಬೋಲ್ಟನ್‌ ಹೇಳಿದ್ದಾರೆ.

    ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಭಾರತ ಸಹಾಯ ಮಾಡುತ್ತಿದೆ ಎಂದು ಟ್ರಂಪ್‌ ಆರೋಪಿಸಿದ್ದರು. ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಹತ್ಯೆಯಾಗುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ ಎಂದು ಟ್ರಂಪ್‌ ಅವರು ಟ್ರುತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದರು.

    ಚೀನಾ ಕೂಡ ರಷ್ಯಾದ ತೈಲವ ಖರೀದಿಸುತ್ತಿದೆ. ಆದರೆ, ಚೀನಾ ಅಂತಹ ಯಾವುದೇ ಸುಂಕಗಳು ಅಥವಾ ದ್ವಿತೀಯಕ ನಿರ್ಬಂಧಗಳನ್ನು ಎದುರಿಸಲಿಲ್ಲ ಎಂದು ಬೋಲ್ಟನ್‌ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ಕದನ ವಿರಾಮವನ್ನು ಜಾರಿಗೆ ತರುವ ಟ್ರಂಪ್ ಪ್ರಯತ್ನದಿಂದ ತೊಂದರೆ ಅನುಭವಿಸಿದ ಏಕೈಕ ಸರ್ಕಾರ ಭಾರತ ಎಂದು ಒತ್ತಿ ಹೇಳಿದ್ದಾರೆ.

  • ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಬೆಂಬಲ: ಅಮೆರಿಕ

    ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಬೆಂಬಲ: ಅಮೆರಿಕ

    ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಪ್ರಕರಣ ಸಂಬಂಧ ಜಾನ್ ಬೋಲ್ಟನ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರ ಜೊತೆಗೆ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಉಗ್ರರನ್ನು ಸೆದೆಬಡಿಯಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಜಾನ್ ಬೋಲ್ಟನ್ ತಿಳಿಸಿದ್ದಾರೆ.

    ಜೈಶ್-ಇ-ಮೊಹಮ್ಮದ್ ಹಾಗೂ ಬೇರೆ ಬೇರೆ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನವು ಸುರಕ್ಷಿತ ಪ್ರದೇಶವನ್ನು ಒದಗಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪುಲ್ವಾಮಾ ದಾಳಿಯ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲು ಎಲ್ಲ ರೀತಿಯ ಸಹಕಾರವನ್ನು ಒಂದಗಿಸುತ್ತೇವೆ ಎಂದು ಜಾನ್ ಬೋಲ್ಟನ್ ಹೇಳಿದ್ದಾರೆ.

    ಈ ಮೂಲಕ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆ ವಿರುದ್ಧ ಅಮೆರಿಕಾ ಹೊರಹಾಕಿದ್ದು, ಪುಲ್ವಾಮಾ ದಾಳಿಯ ಪ್ರತಿಕಾರಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ.

    ಭಾರತದ ಸಂರಕ್ಷಣೆ ನಾವು ಬೆಂಬಲ ನೀಡುತ್ತೇವೆ ಎಂದು ಅಜಿತ್ ದೊವಲ್ ಅವರಿಗೆ ತಿಳಿಸಿದ್ದೇನೆ. ಇಂದು ಬೆಳಗ್ಗೆ ಸೇರಿದಂತೆ ಎರಡು ಬಾರಿ ಅವರೊಂದಿಗೆ ಮಾತನಾಡಿದ್ದೇನೆ. ಉಗ್ರರ ದಾಳಿಯನ್ನು ಅಮೆರಿಕ ಖಂಡಿಸಿದೆ ಎಂದು ಬೋಲ್ಟ್ ಹೇಳಿದ್ದಾರೆ.

    ದಾಳಿಯ ಸಂಬಂಧ ಪಾಕಿಸ್ತಾನದ ಜೊತೆಗೆ ಚರ್ಚೆ ಮಾಡುತ್ತೇವೆ. ಈ ದಾಳಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ನಮ್ಮ ನಿರ್ಧಾರ ಸ್ಪಷ್ಟವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಂಸ್ಥೆ ತಿಳಿಸಿದೆ.

    ಭಯೋತ್ಪಾದನೆ ಎದರಿಸಲು ನಾವು ಭಾರತದ ಪರವಾಗಿದ್ದೇವೆ. ಪಾಕಿಸ್ತಾನ ಯಾವುದೇ ಕಾರಣಕ್ಕೂ ಉಗ್ರ ಸಂಘಟನೆಗಳಿಗೆ ಸುರಕ್ಷಿತ ನೆಲೆಗಳನ್ನು ಒದಗಿಸಿಕೊಡಬಾರದು ಎಂದು ಅಮೆರಿಕ ಕಾರ್ಯದರ್ಶಿ ಪೊಂಪೆಯೊ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv