Tag: ಜಾನ್ ಕಾರ್ನಿನ್

  • ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹೌಡಿ ಮೋದಿ – ಯುಎಸ್ ಸಂಸದನ ಪತ್ನಿ ಬಳಿ ಕ್ಷಮೆ ಕೇಳಿದ ಪ್ರಧಾನಿ

    ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಸ್ ಟಕ್ಸಾಸ್‍ನ ಸೆನೆಟರ್(ಸಂಸದ) ಜಾನ್ ಕಾರ್ನಿನ್ ಅವರ ಪತ್ನಿಯ ಜನ್ಮದಿನದಂದು ಕ್ಷಮೆಯಾಚಿಸಿದ್ದಾರೆ.

    60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕಾರ್ನಿನ್ ಅವರ ಪತ್ನಿ ಸ್ಯಾಂಡಿಯವರನ್ನು ನೇರವಾಗಿ ಉದ್ದೇಶಿಸಿ ಅವರ ಬಳಿ ಮೋದಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಸಮೃದ್ಧ ಹಾಗೂ ಶಾಂತಿಯುತ ಭವಿಷ್ಯ ನಿಮ್ಮದಾಗಲೆಂದು ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.

    ನಾನು ಕ್ಷಮೆ ಕೇಳಲು ಬಯಸುತ್ತೇನೆ, ಏಕೆಂದರೆ ಇಂದು ನಿಮ್ಮ ಜನ್ಮದಿನ ಮತ್ತು ನಿಮ್ಮ ಉತ್ತಮ ಜೀವನ ಸಂಗಾತಿ ನನ್ನೊಂದಿಗಿದ್ದಾರೆ. ಆದ್ದರಿಂದ ಸ್ವಾಭಾವಿಕವಾಗಿ ನಿಮಗೆ ಜಲಸ್ ಆಗಿರಬೇಕು ಎಂದು ಮೋದಿ ಹೇಳಿದ್ದಾರೆ. ಆಗ ಮೋದಿ ಪಕ್ಕದಲ್ಲೇ ಇದ್ದ 67 ವರ್ಷದ ಸೆನೆಟರ್ ಮೋದಿಯವರನ್ನು ನೋಡಿ ಮುಗುಳುನಕ್ಕಿದ್ದಾರೆ.

    ನಿಮಗೆ ಶುಭ ಹಾರೈಸುತ್ತೇನೆ, ಸಂತೋಷದ, ಸಮೃದ್ಧಯುತ ಶಾಂತಿಯ ಭವಿಷ್ಯ ನಿಮ್ಮದಾಗಲಿ ಎಂದು ಬಯಸುತ್ತೇನೆ. ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಈ ದಂಪತಿಗೆ ಮದುವೆಯಾಗಿ 40 ವರ್ಷಗಳಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ.

    ಭಾನುವಾರ ಹ್ಯೂಸ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, 50 ಸಾವಿರ ಭಾರತೀಯ ಅಮೆರಿಕನ್ನರ ದಾಖಲೆಯ ಜನಸಮೂಹವನ್ನುದ್ದೇಶಿಸಿ ಭಾಷಣ ಮಾಡಿದ್ದರು.