Tag: ಜಾನುವಾರು ಸಾಗಾಣಿಕೆ

  • ಬಕ್ರೀದ್ ಹಬ್ಬದಲ್ಲಿ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದ್ರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

    ಬಕ್ರೀದ್ ಹಬ್ಬದಲ್ಲಿ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದ್ರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ

    ಕಲಬುರಗಿ: ಜಿಲ್ಲೆಯಾದ್ಯಂತ ಜುಲೈ 10 ರಂದು ಬಕ್ರೀದ್ ಹಬ್ಬ ಅಚರಿಸಲಾಗುತ್ತಿದೆ. ಹಬ್ಬದ ಹಿನ್ನೆಲೆ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಯಶವಂತ್ ವಿ ಗುರುಕರ್ ಎಚ್ಚರಿಕೆ ನೀಡಿದ್ದಾರೆ.

    ಮಂಗಳವಾರ ತಮ್ಮ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾರಣ ಗೋಹತ್ಯೆ ನಿಷೇಧಿಸಲಾಗಿದೆ. ಇನ್ನೂ ಕಾಯ್ದೆ ಉಲ್ಲಂಘನೆಯಾಗದಂತೆ ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದಾರೆ. ಇದನ್ನೂ ಓದಿ: ದೇಶದ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಸಾಜಿ ಚೆರಿಯನ್ 

    ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸಲು ಎಲ್ಲ ಅಗತ್ಯ ಕ್ರಮಕೈಗೊಳ್ಳಬೇಕು. ಪೊಲೀಸ್, ಪಶುಸಂಗೋಪನಾ ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಪರಸ್ಪರ ಸಮನ್ವಯ ಸಾಧಿಸಿ ಹಬ್ಬಕ್ಕೆ 3 ದಿನಗಳ ಮುಂಚಿತವಾಗಿ ಜಿಲ್ಲೆಯಾದ್ಯಂತ ಜಾನುವಾರುಗಳ ಅಕ್ರಮ ಸಾಗಾಣಿಕೆ ಆಗದಂತೆ ಕಣ್ಗಾವಲು ಇಡಬೇಕು ಎಂದು ತಿಳಿಸಿದ್ದಾರೆ.

    ಅಕ್ರಮ ಜಾನುವಾರು ಸಾಗಣಿಕೆ ತಡೆಗಟ್ಟಲು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರತ ಅಧಿಕಾರಿ-ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ತಾಲೂಕು ಮಟ್ಟದಲ್ಲಿ ಪೊಲೀಸ್ ಇಲಾಖೆಯಿಂದ ಅನಧಿಕೃತ ಪ್ರಾಣಿ ವಧೆ, ಸಾಗಟ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

    ಕ್ರಮವೇನು?
    ಅಕ್ರಮವಾಗಿ ಸಾಗಾಣಿಕೆ ಕಂಡುಬಂದಲ್ಲಿ ಕೂಡಲೇ ಗೋವುಗಳನ್ನು ವಶಪಡಿಸಿಕೊಂಡು ಸಾಗಾಣಿಕೆದಾರರ ವಿರುದ್ಧ ಎಫ್‍ಐಆರ್ ದಾಖಲಿಸುವುದು. ನಂತರ ಗೋವುಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಗೋಶಾಲೆಗಳಿಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ:  ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿ ಗಿಫ್ಟ್ ಕೊಟ್ಟ ಪೊಲೀಸ್ – ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ 

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾವಹಕ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ವರ ಪಾಟೀಲ್ ದೇವಿದಾಸ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಕೇಶವ ಮೋಟಗಿ, ಪಶು ಸಂಗೋಪನೆ ಇಲಾಖೆಯ ತಾಂತ್ರಿಕ ಅಧಿಕಾರಿ ಡಾ.ಇಂಗಳೆ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಇದ್ದರು.

    Live Tv
    [brid partner=56869869 player=32851 video=960834 autoplay=true]

  • ಜಾನುವಾರು ಸಾಗಿಸುತ್ತಿದ್ದ 25 ಜನರನ್ನು ಕಟ್ಟಿ ‘ಗೋ ಮಾತಾ ಕೀ ಜೈ’ ಹೇಳಿಸಿದ್ರು

    ಜಾನುವಾರು ಸಾಗಿಸುತ್ತಿದ್ದ 25 ಜನರನ್ನು ಕಟ್ಟಿ ‘ಗೋ ಮಾತಾ ಕೀ ಜೈ’ ಹೇಳಿಸಿದ್ರು

    ಭೋಪಾಲ್: ಜಾನುವಾರುಗಳನ್ನು ಸಾಗಿಸುತ್ತಿದ್ದ 25 ಜನರನ್ನು ಕಟ್ಟಿ ಗೋ ಮಾತಾ ಕೀ ಜೈ ಎಂದು ಹೇಳಿಸಿದ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮಹಾರಾಷ್ಟ್ರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ 25 ಜನರನ್ನು ಖಲ್ವಾಸ್ ಪ್ರಾಂತ್ಯದ ಸಾನ್ವಲಿಖೇಡ ಗ್ರಾಮಸ್ಥರು ಭಾನುವಾರ ಹಿಡಿದಿದ್ದಾರೆ. ಬಳಿಕ ಅವರನ್ನು ಹಗ್ಗದಿಂದ ಕಟ್ಟಿದ್ದ ಗ್ರಾಮಸ್ಥರು, ಮೊಣಕಾಲೂರಿ ಕಿವಿ ಹಿಡಿದು ಕುಳಿತುಕೊಳ್ಳುವಂತೆ ಆರೋಪಿಗಳಿಗೆ ಹೇಳಿದರು. ಈ ವೇಳೆ ಅವರಿಗೆ ಥಳಿಸಿ, ಗೋ ಮಾತಾ ಕಿ ಜೈ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ.

    ಗ್ರಾಮಸ್ಥರು ಥಳಿಸಿದ್ದರಿಂದ ಹೆದರಿದ ಆರೋಪಿಗಳು ಗೋ ಮಾತಾ ಕಿ ಜೈ ಎಂದು ಹೇಳಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಅನೇಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 100ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಗ್ರಾಮಸ್ಥರು ಆರೋಪಿಗಳನ್ನು ಥಳಿಸಿದ ಬಳಿಕ 2 ಕಿ.ಮೀ ನಡೆಸಿಕೊಂಡು ಬಂದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ 21 ವಾಹನಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳ ಮೇಲೆ ಹಲ್ಲೆ ಮಾಡಿದ ರೈತರು, ಗ್ರಾಮಸ್ಥರು ಸೇರಿದಂತೆ 100 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಖುಲ್ವಾಸ್ ಠಾಣೆಯ ಇನ್‍ಸ್ಪೆಕ್ಟರ್ ಹರಿಶಂಕರ್ ರಾವತ್ ತಿಳಿಸಿದ್ದಾರೆ.

    ಇಂತಹದ್ದೆ ಘಟನೆ ಮೇ ತಿಂಗಳಿನಲ್ಲಿ ನಡೆದಿತ್ತು. ಆಟೋದಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಎಂದು ಓರ್ವ ಮಹಿಳೆ ಸೇರಿದಂತೆ ಮೂವರು ಮುಸ್ಲಿಮರನ್ನು ಗುಂಪೊಂದು ಹಲ್ಲೆ ಮಾಡಿತ್ತು. ಅಷ್ಟೇ ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದೇಶ ವ್ಯಾಪಿ ಭಾರೀ ಟೀಕೆ ವ್ಯಕ್ತವಾಗಿತ್ತು.