Tag: ಜಾನುವಾರ

  • ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂತ್ರಸ್ತರಾಗಿ ಸೂರು ಕಳೆದುಕೊಂಡ ಇಬ್ಬರು ಸಹೋದರಿಯರು ಸಹಾಯಕ್ಕಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಕೊಡಗು ಸಂಪಾಜೆ ಸಮೀಪದ ಕೊಯನಾಡಿನ ನಿವಾಸಿಗಳಾದ 80 ವರ್ಷದ ಸಾಯಿಬಾ ಮತ್ತು ಅಂಗವಿಕಲ ತಂಗಿ ಸೈನಬಾ ಇಬ್ಬರು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಭೀಕರ ಮಳೆ ಭೂ ಕೂಸಿತಕ್ಕೆ ಪ್ರಾಣ ಹೋಗುವ ಸಂದರ್ಭ ಬಂದಿದ್ರೂ ತಾವು ಸಾಕುತ್ತಿರುವ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಬರುವುದಿಲ್ಲ ಎಂದು ಹಠ ಹಿಡಿದು ನಾಡಿನ ಗಮನ ಸೆಳೆದವರು ಈ ಸಹೋದರಿಯರು. ಮುದ್ದಿನಿಂದ ಸಾಕಿದ ಮೂಕ ಪ್ರಾಣಿಗಳ ರಕ್ಷಣೆ ಬಿಟ್ಟು ಬರುವುದಿಲ್ಲ ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಮಾದರಿಯಾದವರು. ಭೀಕರ ಮಳೆಯಿಂದಾಗಿ ಮನೆಯ ಸುತ್ತಲೂ ನೀರು ಆವರಿಸಿದ್ದರೂ, ಪಯಸ್ವಿನಿ ನದಿ ಭೋರ್ಗರೆಯುತ್ತಿದ್ದರೂ ಧೃತಿಗೆಡದೇ ನದಿಯ ತಟದಲ್ಲೇ ಇದ್ದು ಜಾನುವಾರಗಳ ರಕ್ಷಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

    ದಿನ ಕಳೆದಂತೆ ಪಯಸ್ವಿನಿ ಶಾಂತವಾಗಿ ನೀರಿನ ಮಟ್ಟ ಇಳಿದು ಸಹಜ ಸ್ಥಿತಿಗೆ ಬಂದಿದ್ದು, ಸಾವನ್ನು ಗೆದ್ದು ಬಂದು ಜಾನುವಾರುಗಳೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಹಿರಿ ಜೀವಗಳ ಛಲ ನಿಜಕ್ಕೂ ಅಚ್ಚರಿ.

    ಗಂಡು ದಿಕ್ಕು ಇಲ್ಲದ ಈ ಮನೆಯ ವೃದ್ಧ ಜೀವಗಳಿಗೆ 80 ಅಡಿಕೆ ಮರಗಳು ಹಾಗು ಜಾನುವಾರುಗಳೇ ಆಧಾರ. ಪಯಸ್ವಿನಿ ನದಿ ಉಕ್ಕಿ ಹರಿದಿದ್ದರಿಂದ ಭಾರೀ ಸಂಕಷ್ಟ ಅನುಭವಿಸಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಈ ಜೀವಗಳಿಗೆ ನೆಮ್ಮದಿಯ ಜೀವನ ಮಾಡಲು ಸರಿಯಾದ ಮನೆ ಇಲ್ಲದೇ ಪರಿಪಾಟಲು ಪಡುತ್ತಿದ್ದಾರೆ.

    ವಯಸ್ಸಾದ ಈ ದಿಟ್ಟ ಮಹಿಳೆಯರು ಕೊನೆಗಾಲದಲ್ಲಿ ನೆಮ್ಮದಿಯ ಜೀವನ ಮಾಡಲು ಬಯಸುತ್ತಿದ್ದು, ಒಂದು ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಸಹಾಯ ಬಯಸುತ್ತಿದ್ದಾರೆ. ಕರುನಾಡಿನ ಸಹೃದಯಿಗಳ ಸಹಕಾರದಿಂದ ಈ ಹಿರಿ ಜೀವಗಳಿಗೆ ಸೂರು ನಿರ್ಮಿಸುವ ಪ್ರಯತ್ನದ ಭಾಗವಾಗಿ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XG6KkYHmHbc

  • ಸ್ವಂತ ಖರ್ಚಲ್ಲಿ ಬೋರ್ ಕೊರೆಸಿ ಜಾನುವಾರುಗಳ ನೀರಿನ ದಾಹ ತಣಿಸ್ತಿರೋ ಯಾದಗಿರಿಯ ಮೆಕ್ಯಾನಿಕ್

    ಸ್ವಂತ ಖರ್ಚಲ್ಲಿ ಬೋರ್ ಕೊರೆಸಿ ಜಾನುವಾರುಗಳ ನೀರಿನ ದಾಹ ತಣಿಸ್ತಿರೋ ಯಾದಗಿರಿಯ ಮೆಕ್ಯಾನಿಕ್

    ಯಾದಗಿರಿ: ಯರಗೋಳ ಗ್ರಾಮದ ಗೋವುಗಳು ಭೀಕರ ಬರಗಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿವೆ. ವೃತ್ತಿಯಲ್ಲಿ ಮೋಟರ್ ಸೈಕಲ್ ಮೆಕ್ಯಾನಿಕ್, ಪ್ರವೃತ್ತಿಯಲ್ಲಿ ರೈತರಾಗಿರೋ ಗ್ರಾಮದ ನಿವಾಸಿ ಅಬ್ದುಲ್ ಗಫೂರಸಾಬ್ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್‍ವೆಲ್ ಕೊರೆಸಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

    ಗಫೂರಸಾಬ್ ಅವರು ಯಾದಗಿರಿ ನಗರದಲ್ಲಿ ವಾಸವಿದ್ದು, ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಅಂಗಡಿ ಇಟ್ಟುಕೊಂಡಿದ್ದಾರೆ. ತಮ್ಮ ಸ್ವಗ್ರಾಮ ಯರಗೋಳದಲ್ಲಿ 3 ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಕೂಡಾ ಮಾಡುತ್ತಾರೆ. ಆದ್ರೆ ಒಂದೇ ಒಂದು ಜಾನುವಾರು ಸಾಕದಿದ್ದರೂ ಈ ಬಾರಿಯ ಭೀಕರ ಬರದ ಬೇಗುದಿಯಿಂದ ಜಾನುವಾರುಗಳು ನೀರಿಲ್ಲದೆ ಪರಿತಪಿಸುವುದನ್ನು ಅರಿತು, ತಮ್ಮ ಜಮೀನಿನಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚುಮಾಡಿ ಬೋರ್ ಕೊರೆಸಿದ್ದಾರೆ. ಜಾನುವಾರುಗಳಿಗೆ ನೀರು ಕುಡಿಯಲು ಅನೂಲವಾಗುವಂತೆ 22 ಬೈ 15 ಅಡಿ ಅಳತೆಯ ಕೊಳ ನಿರ್ಮಿಸಿದ್ದಾರೆ. ಈಗ ನೀರಿನ ಕೊಳ ನೋಡಿಕೊಳ್ಳಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಎರಡು ದಿನಕ್ಕೊಮ್ಮೆ ಯಾದಗಿರಿಯಿಂದ ಯರಗೋಳಕ್ಕೆ ಹೋಗಿ ನೀರಿನ ನಿಗಾ ವಹಿಸುತ್ತಾರೆ.

    ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿ ನೀರಿಲ್ಲದೆ ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿರುವ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟಪಡುತ್ತಿದೆ. ಈ ಸ್ಥಿತಿಯಲ್ಲಿ ಸಾಮನ್ಯ ರೈತ ಗಫೂರ್‍ಸಾಬ್ ಜಾನುವಾರುಗಳಿಗೆ ನೀರುಣಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

     

  • ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

    ರಾಯಚೂರಿನಲ್ಲಿ ಭೀಕರ ಬರಗಾಲ: ಕಸಾಯಿಖಾನೆ ಪಾಲಾಗುತ್ತಿರುವ ಜಾನುವಾರುಗಳು

    ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ತಾವು ಸಾಕಿದ ಜಾನುವಾರುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ದನಗಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಿಲ್ಲಾರಿ, ಕಂಬಾರಿ, ದುಪ್ಪಟ್ಟಿ, ಸೀಮೆ ಸೇರಿ ವಿವಿಧ ಜಾತಿಯ ಎತ್ತು ಹಾಗೂ ಹಸುಗಳು ಕಡಿಮೆ ಬೆಲೆಯಲ್ಲಿ ಕಸಾಯಿಖಾನೆ ಪಾಲಾಗುತ್ತಿವೆ.

    ಮಳೆರಾಯನ ಅವಕೃಪೆಯಿಂದ ರಾಯಚೂರು ಜಿಲ್ಲೆಯ ರೈತರು ಬದುಕು ಸಾಗಿಸಲು ನಿತ್ಯ ಕಸರತ್ತು ಮಾಡುತ್ತಿದ್ದಾರೆ. ಒಂದು ಕಡೆ ಹೊಲದಲ್ಲಿ ಬೆಳೆಯಿಲ್ಲ ಇನ್ನೊಂದೆಡೆ ಬ್ಯಾಂಕ್‍ನಲ್ಲಿ ಸಾಲ ಬೆಳೆಯುತ್ತಿದೆ. ಹೀಗಾಗಿ ಮಕ್ಕಳಂತೆ ಸಾಕಿ ಬೆಳೆಸಿದ ಜಾನುವಾರುಗಳನ್ನ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಲದಲ್ಲಿ ಕೆಲಸವೇ ಇಲ್ಲದೆ ರೈತರು ನಗರ ಪ್ರದೇಶಗಳಿಗೆ ಗುಳೆ ಹೊರಡುವ ಪರಸ್ಥಿತಿಯೂ ಇದೆ.

    ಲಕ್ಷಾಂತರ ರೂಪಾಯಿಗೆ ಕೊಂಡ ಜಾನುವಾರುಗಳನ್ನ ಕೇವಲ ಸಾವಿರಾರು ರೂಪಾಯಿಗೆ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿರುವುದರಿಂದ ಬೆಳೆ ಬೆಳೆಯುವುದಿರಲಿ, ಕುಡಿಯಲು ಸಹ ನೀರು ಸಿಗದಂತಾಗಿದೆ. ಜಾನುವಾರಿಗಳಿಗೆ ಮೇವು ಸಿಗದಿರುವುದರಿಂದ ಎತ್ತು, ಆಕಳು, ಎಮ್ಮೆಗಳನ್ನ ಒಲ್ಲದ ಮನಸ್ಸಿನಿಂದ ಮಾರಾಟ ಮಾಡುತ್ತಿದ್ದಾರೆ. ಆದ್ರೆ ರೈತರು ಅರ್ಧ ಬೆಲೆಗೆ ಮಾರಲು ತಯಾರಿದ್ದರೂ ಮೇವು, ನೀರಿನ ಕೊರತೆಯಿಂದಾಗಿ ಜಾನುವಾರು ಸಂತೆಗಳಲ್ಲಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಿದೆ.

    ಜಾನುವಾರುಗಳನ್ನ ಮಾರಾಟ ಮಾಡಿ ಸಾಲ ತೀರಿಸಿಕೊಳ್ಳುವ ಪ್ರಯತ್ನದಲ್ಲಿರುವ ರೈತರ ಕೈಗೆ ಸಿಗುತ್ತಿರುವುದು ಕೇವಲ ಹತ್ತಿಪ್ಪತ್ತು ಸಾವಿರ ರೂಪಾಯಿ ಮಾತ್ರ. ಜಿಲ್ಲೆಯಲ್ಲಿ ಒಟ್ಟು 4 ಲಕ್ಷ 95 ಸಾವಿರದ 978 ಜಾನುವಾರುಗಳಿದ್ದು, 4 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಿದೆ. ಆದ್ರೆ ಜಾನುವಾರುಗಳಿಗೆ ಮೇವಿನ ಕೊರತೆ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ನೀರು ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರು ಕೊಳ್ಳುವವರು ಮುಂದೆ ಬರುತ್ತಿಲ್ಲ. ಹೀಗಾಗಿ ಸಿಕ್ಕಷ್ಟು ಬೆಲೆಗೆ ಜಾನುವಾರುಗಳನ್ನ ರೈತರು ಕಸಾಯಿಖಾನೆಗೆ ಮಾರುತ್ತಿದ್ದಾರೆ.

    ಒಟ್ನಲ್ಲಿ, ವರುಣನ ಮುನಿಸಿನಿಂದ ಜಮೀನು ಕೈಹಿಡಿಯುತ್ತಿಲ್ಲ. ಇತ್ತ ಸರ್ಕಾರದ ಬೆಳೆಹಾನಿ ಪರಿಹಾರವೂ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ರೈತರು ಜಾನುವಾರುಗಳನ್ನ ಸಾಲಭಾರ ತಾಳದೇ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆಯಿದ್ದು ರೈತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ.