Tag: ಜಾತಿ ನಿಂಧನೆ

  • ಜಿಲ್ಲಾಧಿಕಾರಿಯ ಕಿರುಕುಳ, ಜಾತಿ ನಿಂದನೆಗೆ ಬೇಸತ್ತು ಅಧಿಕಾರಿ ರಾಜೀನಾಮೆ

    ಜಿಲ್ಲಾಧಿಕಾರಿಯ ಕಿರುಕುಳ, ಜಾತಿ ನಿಂದನೆಗೆ ಬೇಸತ್ತು ಅಧಿಕಾರಿ ರಾಜೀನಾಮೆ

    ಲಕ್ನೋ: ಜಿಲ್ಲಾಧಿಕಾರಿ ಜಾತಿ ನಿಂದನೆಯ ಮಾತುಗಳನ್ನಾಡಿ, ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಕುರಿತು ಜಿಲ್ಲಾಧಿಕಾರಿ ಭವಾನಿ ಸಿಂಗ್ ಖಂಗ್ರಾಟ್ ಪ್ರತಿಕ್ರಿಯಿಸಿ, ನಾನು ಅಧಿಕಾರಿಯೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಧಿಕಾರಿಗಳ ಮಾಹಿತಿ ಪ್ರಕಾರ ಕಿರುಕುಳ ಹಾಗೂ ಜಾತಿ ನಿಂದನೆಯೇ ರಾಜೀನಾಮೆ ನೀಡಲು ಕಾರಣ ಎಂದು ತಿಳಿದು ಬಂದಿದೆ.

    ಯುಪಿ ರಾಜ್ಯ ರಸ್ತೆ ಸಾರಿಗೆ ನಿಗಮದ(ಯುಪಿಎಸ್‍ಆರ್ ಟಿಸಿ) ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಬಿಂದು ಪ್ರಸಾದ್ ಅವರು ಸೋಮವಾರ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ನಾನು ದಲಿತ ಹೀಗಾಗಿ ಖಂಗ್ರಾಟ್ ಅವರು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಬಲ್ಲಿಯಾ ಜೈಲಿನಲ್ಲಿನ ಖೈದಿಗಳನ್ನು ಸ್ಥಳಾಂತರಿಸಲು 15 ಬಸ್‍ಗಳು ಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ಯುಪಿಎಸ್‍ಆರ್‍ಟಿಸಿ ಎಂಡಿಗೆ ಸಲ್ಲಿಸಿದ ಪತ್ರದಲ್ಲಿ ಪ್ರಸಾದ್ ಆರೋಪಿಸಿದ್ದಾರೆ.

    ಎಲ್ಲ ಬಸ್‍ಗಳು ಜೈಲಿಗೆ ತಲುಪಿದ ನಂತರ ಪ್ರಸಾದ್ ಕಚೇರಿಗೆ ಮರಳಿದರು. ಆಗ ಜಿಲ್ಲಾಧಿಕಾರಿಗಳು ಪ್ರಸಾದ್ ಅವರ ಕಾಲರ್ ಹಿಡಿದು ಎಳೆದರು. ಮತ್ತೆ ಅವರನ್ನು ಜಿಲ್ಲೆಯ ಜೈಲಿಗೆ ಕರೆದೊಯ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಯುಪಿಎಸ್‍ಆರ್ ಟಿಸಿ ಎಂಡಿ ರಾಜಶೇಖರ್ ಈ ಕುರಿತು ಪ್ರತಿಕ್ರಿಯಿಸಿ, ಪ್ರಸಾದ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ. ಈ ಬಗ್ಗೆ ವಾಸ್ತವಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಬಂದ ನಂತರ ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.