Tag: ಜಾತಿ ಜನಗಣತಿ ಸಮೀಕ್ಷೆ

  • ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ

    ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಸಮೀಕ್ಷೆಯಲ್ಲಿ ಭಾಗವಹಿಸಿ: ಡಿಕೆಶಿ ಮನವಿ

    ಬೆಂಗಳೂರು: ಎಲ್ಲಾ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸಲು ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.

    ಜಿಬಿಎ (Greater Bengaluru Authority) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ಚಾಲನೆ ನೀಡಿದರು. ಬಳಿಕ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗುತ್ತಿದ್ದು, ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ನಿಮ್ಮ ಮಾಹಿತಿ ಒದಗಿಸಿಕೊಡಬೇಕು. ಈ ಸಮೀಕ್ಷೆಗೆ ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್

    ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಜರಾಯಿಂದ ಬಿಗ್‌ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ

    ವೈಯಕ್ತಿಕ ಮಾಹಿತಿಯ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಈ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು. ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ ಸೂಕ್ಷ್ಮತೆಯಿಂದ ಮಾಡಬೇಕು ಎಂದು ಸಮೀಕ್ಷೆದಾರರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

    ಅನೇಕರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಜನರಿಗೆ ತಿಳುವಳಿಕೆ ನೀಡಬೇಕಾದದ್ದು ನಮ್ಮ ಕರ್ತವ್ಯ. ನಾವು ಅದನ್ನು ಮಾಡುತ್ತೇವೆ ಎಂದರಲ್ಲದೇ ಸರ್ವರ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಸ್ಯೆ ಸರಿಪಡಿಸ್ತಾರೆ. ಆನ್‌ಲೈನ್‌ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿಯೂ ನೀವು ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

    ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ದೊಡ್ಡವರ ಬಗ್ಗೆ ನಾವೇನು ಹೇಳೋಣ? ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

    ರಾಜ್ಯಕ್ಕಾಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಈಗ 15 ರಿಂದ 20 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ

    ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ

    – ಸಮೀಕ್ಷೆಯೂ ಒಂದು ಗೊಂದಲದ ಗೂಡು; ಪರಿಷತ್ ವಿಪಕ್ಷ ನಾಯಕ ಕಿಡಿ

    ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ. ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy)  ಆರೋಪಿಸಿದ್ದಾರೆ.

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (Caste Census Survey) ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸೋಮವಾರ ಪ್ರಾರಂಭವಾಗಿದೆ. ಈ ಸಮೀಕ್ಷೆ ಒಂದು ಗೊಂದಲದ ಗೂಡು. ಇದು ಹಿಂದುತ್ವ ವಿರೋಧ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್

    ಗೊಂದಲ ಪರಿಹರಿಸಲು ಕೋರಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಬ್ರಾಹ್ಮಣ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಒಕ್ಕಲಿಗ, ವೀರಶೈವ ಮೊದಲಾದ ಎಲ್ಲರನ್ನೂ ಕ್ರೈಸ್ತ ಎಂದು ಹೆಸರಿಸಿದ್ದಾರೆ. ಹೊಲೆಯ, ಮಾದಿಗ, ಬಂಜಾರ ಕ್ರೈಸ್ತ, ಬೋವಿ ಕ್ರೈಸ್ತ ಎಲ್ಲವನ್ನೂ ಸೇರಿಸಿದ್ದರು ಎಂದಿದ್ದಾರೆ.

    ಎಲ್ಲಾ ಜಾತಿಗಳಿಂದ ಕ್ರೈಸ್ತ ಕಾಲಂಗಳನ್ನು ಕೈಬಿಟ್ಟಿಲ್ಲ
    ಹೋರಾಟಗಳು ನಡೆದು ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಅವುಗಳನ್ನು ಕಾಣದಂತೆ ಹೈಡ್ ಮಾಡಿದ್ದಾಗಿ ಹೇಳಿದ್ದರು. ಆದರೆ, ಪರಿಶಿಷ್ಟ ವರ್ಗಗಳಿಗೆ ಸೇರಿದ್ದನ್ನು ಹೈಡ್ ಮಾಡಿಲ್ಲ. ಇದರಿಂದ ಗೊಂದಲವಾಗಿದೆ. ಎಲ್ಲಾ ಜಾತಿಗಳಿಂದ ಕ್ರೈಸ್ತ ಕಾಲಂಗಳನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ ಎಂದು ದೂರಿದ್ದಾರೆ.

    ದಲಿತರು ಕ್ರೈಸ್ತರಾಗಿ ಸೇರಿದರೆ ಅವರನ್ನು ದಲಿತರೆಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಗೊಂದಲವಿದೆ. ಮತಾಂತರ ಆದವರ ಜಾತಿ ನೋಡದಿರಿ. ಇದೇರೀತಿ ಮುಂದುವರೆಸಿ ಮನೆಗಳಿಗೆ ಬರುವುದಾದರೆ, ನೀವು ಒಂದೇ ಒಂದು ಬರಹವನ್ನೂ ಬರೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಬಿಡುವುದಿಲ್ಲ ಎಂದಿದ್ದಾರೆ.

    ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಕಾಂತರಾಜು ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಕ್ರಿಶ್ಚಿಯನ್ ಪದ ಇರಲಿಲ್ಲ. ಈಗ ಯಾಕೆ ಹುಟ್ಟಿದೆ? ಇಂದು ಸಭೆ ಕರೆದು ತೀರ್ಮಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಇಂದೇ ತೀರ್ಮಾನ ಆಗದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಯೋಗವೇ ಹೊಣೆ ಎಂದು ಹೇಳಿದ್ದಾರೆ.

    ಈ ವಿಚಾರ ಮಾತನಾಡುವಾಗ ವಾದವಿವಾದವೂ ಆಗಿದೆ. ಜನರಲ್ಲಿ ನೋವಿದೆ. ಕ್ರಿಶ್ಚಿಯನ್ ಧರ್ಮ ಸೇರ್ಪಡೆಗೆ ವಿರೋಧ ಇಲ್ಲ. ಆಯೋಗವು ದಲ್ಲಾಳಿ ಕೆಲಸ ಮಾಡುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.

  • ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸರ್ವರ್‌ನಲ್ಲಿ ಸಮಸ್ಯೆ; ಸಿಬ್ಬಂದಿ ಹೈರಾಣು

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸರ್ವರ್‌ನಲ್ಲಿ ಸಮಸ್ಯೆ; ಸಿಬ್ಬಂದಿ ಹೈರಾಣು

    ಗದಗ: ಸೆ.22 ರಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Caste Census Survey) ಆರಂಭವಾಗಿದೆ. 2ನೇ ದಿನವೂ ಸರ್ವೆ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಗದಗ (Gadag) ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಿಬ್ಬಂದಿ ಸರ್ವರ್ ಸಮಸ್ಯೆಯಿಂದ ಪರದಾಡಿದ್ದಾರೆ.

    ಸಮೀಕ್ಷೆಯ ಆಪ್ ಓಪನ್ ಆಗುತ್ತಿರಲಿಲ್ಲ. ಇನ್ನು ಕೆಲವು ಮೊಬೈಲ್‌ನಲ್ಲಿ ಓಪನ್ ಆದ್ರೂ ಓಟಿಪಿ ಬರುತ್ತಿರಲಿಲ್ಲ. ಅಪ್ಡೇಟ್ ಕೇಳಿ ತಂತಾನೆ ಆಪ್ ಕ್ಲೋಸ್ ಆಗುತ್ತಿತ್ತು. ಸರ್ವೆ ಸಂಬಂಧಿಸಿದ ಯುಹೆಚ್‌ಐಡಿ ಸ್ಟಿಕ್ಕರ್ ಸರಿಯಾಗಿ ಅಂಟಿಸಿರಲಿಲ್ಲ ಈ ರೀತಿಯಾದ ಸಮಸ್ಯೆಯನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಟಾರ್ಗೆಟ್‌ 20 ಲಕ್ಷ, ನಡೆದಿದ್ದು 10 ಸಾವಿರ ಮಂದಿ ಗಣತಿ – ಮೊದಲ ದಿನವೇ ನೀರಸ ಆರಂಭ

    ಕೆಲವು ಕಡೆಗಳಲ್ಲಿ ಸರಿಯಾಗಿ ಲೊಕೇಷನ್ ತೋರಿಸದೇ ಎಲ್ಲೆಲ್ಲೋ ತೋರಿಸುತ್ತಿದೆ. ಒಂದು ಮನೆ ಅರ್ಜಿ ಭರ್ತಿ ಮಾಡಲು 2 ರಿಂದ 3 ಗಂಟೆ ತೆಗೆದುಕೊಳ್ಳುತ್ತಿದೆ. ನಾಲ್ಕೈದು ಬಾರಿ ಒಟಿಪಿ ತೆಗೆದುಕೊಳ್ಳುತ್ತದೆ. ಪದೇಪದೇ ಒಟಿಪಿ ಹೇಳಲು ಜನರು ಹಿಂದೇಟು ಹಾಕ್ತಿದ್ದಾರೆ. ಇದನ್ನೂ ಓದಿ: ಹಾವೇರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷ – ಸಿಬ್ಬಂದಿ ಪರದಾಟ

    ಇನ್ನು ಕೆಲವು ಮನೆಗಳಲ್ಲಿ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ. ಕೆಲವು ಮನೆಗಳಲ್ಲಿ ಬರಬೇಡಿ ಹೋಗಿ ಅಂತಾರೆ. ಇನ್ನು ಕೆಲವರು ಎಷ್ಟು ಸಮಯಬೇಕು ನಿಮಗೆ ಸಾಕು ಎದ್ದು ಹೋಗಿ ಎನ್ನುತ್ತಿದ್ದಾರೆಂದು ಸಿಬ್ಬಂದಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

    ಕಷ್ಟಪಟ್ಟು ಅರ್ಜಿ ಭರ್ತಿ ಮಾಡಿದಾಗ ಕೊನೆ ಕ್ಷಣದಲ್ಲಿ ಸಬ್ಮಿಟ್ ತೆಗೆದುಕೊಳ್ಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಸೂಕ್ತ ಪರಿಹಾರ ಹೇಳುತ್ತಿಲ್ಲ. ಈ ಎಲ್ಲದರಿಂದ ನಾವೆಲ್ಲ ಗೊಂದಲಕ್ಕೀಡಾಗಿದ್ದೇವೆ. ಮೊದಲು ಸಮಸ್ಯೆ ಬಗೆಹರಿಸಿ, ನಂತರ ಕೆಲಸಕ್ಕೆ ಬರುತ್ತೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.

  • ಹಾವೇರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷ – ಸಿಬ್ಬಂದಿ ಪರದಾಟ

    ಹಾವೇರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆಪ್‌ನಲ್ಲಿ ಮೊದಲ ದಿನವೇ ತಾಂತ್ರಿಕ ದೋಷ – ಸಿಬ್ಬಂದಿ ಪರದಾಟ

    ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ ಪ್ರಾರಂಭವಾಗಿದೆ. ಆದರೆ ಹಾವೇರಿಯಲ್ಲಿ (Haveri) ಆರಂಭದಲ್ಲಿಯೇ ತಾಂತ್ರಿಕ ದೋಷ ಉಂಟಾಗಿದ್ದು, ಸಮೀಕ್ಷೆ ಮಾಡುವ ಶಿಕ್ಷಕರು ಪರದಾಡುವಂತಾಗಿತ್ತು.

    ಹಾವೇರಿಯ ಮಂಜುನಾಥ ನಗರ ಮತ್ತು ಬಸವೇಶ್ವರ ನಗರದಲ್ಲಿ ಸಮೀಕ್ಷೆ ಪ್ರಾರಂಭ ಮಾಡಲಾಗಿತ್ತು. ಸಮೀಕ್ಷೆಯ ಆಪ್‌ನಲ್ಲಿ ಯುಹೆಚ್ ಐಡಿ ನಂಬರ್ ಹಾಕಿ ಸಬ್ಮಿಟ್ ಅಂತ ಒತ್ತಿದರೆ ಆಪ್ ಓಪನ್ ಆಗುತ್ತಿರಲಿಲ್ಲ. ಬೆಳಗ್ಗೆಯಿಂದ ಸಮೀಕ್ಷೆಗಾಗಿ ಕಾದು ಕುಳಿತಿದ್ದ ಶಿಕ್ಷಕರಿಗೆ ಆಪ್ ಲಿಂಕ್ ಬರೋದು ಕೂಡಾ ವಿಳಂಬವಾಗಿತ್ತು. ಇದನ್ನೂ ಓದಿ: ಇಂದಿನಿಂದ ಜಾತಿ ಗಣತಿ ಆರಂಭ – ಬೆಂಗಳೂರಲ್ಲಿ 3 ದಿನ ವಿಳಂಬ

    ಆಪ್ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆಗೆ ತೆರಳಿದ ಶಿಕ್ಷಕರಿಗೆ ಆರಂಭದಲ್ಲೇ ಅಡಚಣೆ ಉಂಟಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಸಮೀಕ್ಷೆಗಾಗಿ ಒಟ್ಟು 3,777 ಶಿಕ್ಷಕರ ನಿಯೋಜನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಕೆಲ ಕಡೆ ಸಮೀಕ್ಷೆ ಯಾವುದೇ ಅಡೆತಡೆಗಳಿಲ್ಲದೇ ಸಾಗಿದೆ. ಆದರೆ ಹಾವೇರಿ ನಗರದಲ್ಲಿಯೇ ಆಪ್ ಓಪನ್ ಆಗದೇ ಶಿಕ್ಷಕರ ಪರದಾಡಿದರು.

    ಶಿಕ್ಷಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸಿದರು. ಬಳಿಕ ಶಿಕ್ಷಕರು ಸಮೀಕ್ಷೆಯನ್ನು ಮುಂದುವರಿಸಿದರು.

  • ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಪಾಕ್ ಹೇಳಿಕೆ ಗಮನಿಸಬೇಕು, ಪಂದ್ಯ ನಡೆಸಬಾರದಿತ್ತು: ಬೊಮ್ಮಾಯಿ ಬೇಸರ

    ಪಹಲ್ಗಾಮ್ ಹತ್ಯಾಕಾಂಡದ ಬಳಿಕ ಪಾಕ್ ಹೇಳಿಕೆ ಗಮನಿಸಬೇಕು, ಪಂದ್ಯ ನಡೆಸಬಾರದಿತ್ತು: ಬೊಮ್ಮಾಯಿ ಬೇಸರ

    – ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಸಿಎಂ ಹೇಳಿದ್ದಾರೆ
    – ಜಾತಿ ಜನಗಣತಿ ಮರುಸಮೀಕ್ಷೆ 425 ಕೋಟಿ ಮೀಸಲು; ಬೊಮ್ಮಾಯಿ ಆಕ್ಷೇಪ

    ಬೆಂಗಳೂರು: ಪಹಲ್ಗಾಮ್ ಹತ್ಯಾಕಾಂಡ (Pahalgam Terror Attack), ಆಪರೇಷನ್‌ ಸಿಂಧೂರ ಬಳಿಕ ಪಾಕಿಸ್ತಾನದ (Pakistan) ಹೇಳಿಕೆಗಳನ್ನ ಗಮನಿಸಬೇಕು. ಬಿಸಿಸಿಐ ಭಾರತ-ಪಾಕ್ ಪಂದ್ಯವನ್ನು ನಡೆಸಬಾರದಿತ್ತು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಬೇಸರ ಹೊರಹಾಕಿದರು.

    ಇಂದು ನಡೆಯಲಿರುವ ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಬಗ್ಗೆ ಮಾತನಾಡಿದ ಅವರು, ಬಿಸಿಸಿಐಯು (BCCI) ಪಹಲ್ಗಾಮ್ ಹತ್ಯಾಕಾಂಡ, ಆಪರೇಷನ್ ಸಿಂಧೂರ (Operation Sindoor) ಹಾಗೂ ಭಾರತ ಬಗ್ಗೆ ಪಾಕ್ ನೀಡಿರುವ ಹೇಳಿಕೆಗಳನ್ನು ಗಮನಿಸಬೇಕು. ಇವೆಲ್ಲದನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯವನ್ನು ನಡೆಸದೇ ಇದ್ದಿದ್ದರೆ ಚೆನ್ನಾಗಿತ್ತು. ಕ್ರೀಡೆ ಇರಬೇಕು, ಆದ್ರೆ ದೇಶ ಹಾಗೂ ದೇಶದ ಜನರ ಭರವಸೆ ಬಹಳ ಮುಖ್ಯ. ಬಿಸಿಸಿಐ ದೇಶದ ಜನರ ಭಾವನೆಗಳಿಗೆ ತಕ್ಕ ನಿರ್ಧಾರ ತಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: Hassan Tragedy | ಹೆಚ್ಚಿನ ಪರಿಹಾರ ಕೊಡದಿದ್ರೆ ರಾಜೀನಾಮೆ ಕೊಟ್ಟು ಹೋಗಿ – ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

    ಮತಾಂತರಕ್ಕೆ ಮನ್ನಣೆ ಕೊಟ್ಟಿರೋದೇಕೆ?
    ಜಾತಿ ಜನಗಣತಿ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನದಲ್ಲಿ ಕೇವಲ ಆರು ಧರ್ಮಗಳಿವೆ. ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ರಾಜ್ಯದಲ್ಲಿ ಮತಾಂತರಗೊಂಡ ಕ್ರೈಸ್ತರು ಅನ್ನೋ ಹೊಸ ಕಾಲಂ ಮಾಡಿದ್ದಾರೆ. ಇದೊಂದು ಧರ್ಮದ ರೀತಿ ಕಾಲಂ ಮಾಡಿದ್ದಾರೆ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ, ರಾಜಕೀಯ ಪ್ರೇರಿತವಾಗಿದೆ. ಎರಡೂ ಕಡೆಯೂ ಮತಾಂತರ ಆಗಿರುತ್ತದೆ. ಆದ್ರೆ ಸಿಎಂ ಕ್ರೈಸ್ತ ಧರ್ಮದ ಮತಾಂತರಕ್ಕೆ ಮಾತ್ರ ಮನ್ನಣೆ ಕೊಟ್ಟಿರೋದೇಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    ಸಿಎಂ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮತಾಂತರ ಅವರ ಹಕ್ಕು ಅಂದಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಸಿಎಂ ಹೇಳಿದ್ದಾರೆ. ಇದು ಸಮಾನತೆ ಪ್ರಶ್ನೆ ಅಲ್ಲ, ಆಸೆ ಆಮಿಷ ಒಡ್ಡಿ ಮತಾಂತರ ಮಾಡಲಾಗಿದೆ. ಅವರ ಬಡತನದ ದುರುಪಯೋಗ, ಶಿಕ್ಷಣ ಇಲ್ಲದಿರೋದನ್ನು ಗಮನಿಸಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದರು.

    ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಜಾತಿ ಏಕೆ ಬೇಕು?
    ಇವರಿಗೆ ಜಾತಿ ಕಾಲಂನಲ್ಲಿ ಮತಾಂತರಗೊಂಡವರಿಗೆ ಹೊಸ ಕಾಲಂ ಮಾಡಲು ಯಾರು ಅಧಿಕಾರ ಕೊಟ್ರು? ಯಾವ ಕಾನೂನಿನಲ್ಲಿದೆ? ಇದು ಧರ್ಮ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಗಲಭೆ ಮಾಡಿಸುವ ಕೆಲಸವಾಗ್ತಿದೆ. ಈಗಾಗಲೇ ಒಂದು ಬಾರಿ ಜಾತಿ ಸಮೀಕ್ಷೆ ಹೆಸ್ರಲ್ಲಿ 350 ಕೋಟಿ ರೂ. ಪೋಲು ಮಾಡಿದರು. ಈಗ ಮತ್ತೆ ಜಾತಿ ಜನಗಣತಿ ಮರುಸಮೀಕ್ಷೆಗೆ 425 ಕೋಟಿ ರೂ. ಮೀಸಲಿಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಜಾತಿ ಏಕೆ ಬೇಕು ಎಂದು ಕಿಡಿಕಾರಿದರು.

    ಸಿಎಂ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಜಾತಿ ಸಮೀಕ್ಷೆ
    ಡಿಸೆಂಬರ್‌ನಲ್ಲಿ ಜಾತಿ ಜನಗಣತಿ ವರದಿ (Caste Census Report) ಕೊಡಿ ಅಂತ ಆಯೋಗಕ್ಕೆ ಸಿಎಂ ಹೇಳಿದ್ದಾರೆ. ಈ ಕಡೆ ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಅಂತ ಡಿಕೆಶಿ ಟೀಮ್ ಹೇಳ್ತಿದೆ. ಡಿಕೆಶಿ ಸಿಎಂ ಆಗ್ತಾರೆ ಅಂತಿದ್ದಾರೆ. ಹೀಗಾಗಿ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಿಎಂ ಜಾತಿ ಸಮೀಕ್ಷೆ ವರದಿಯನ್ನು ರಾಜಕೀಯವಾಗಿ ಬಳಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸೆ.22ಕ್ಕೆ ಹೈಕೋರ್ಟ್‌ನಲ್ಲಿ ಬೈಕ್ ಟ್ಯಾಕ್ಸಿ ಭವಿಷ್ಯ – ಚಾಲಕರಿಗೆ ಸಿಹಿ ಸುದ್ದಿ ಸಿಗುತ್ತಾ?

    ಜಾತಿ ಗಣತಿಯಲ್ಲಿ ನಾಸ್ತಿಕ ಕಾಲಂ ಸಿದ್ದರಾಮಯ್ಯಗೋಸ್ಕರ ಮಾಡಿದ್ದು
    ಜಾತಿ ಜನಗಣತಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ವಿಚಾರವಾಗಿ ಮಾತನಾಡಿದ ಅವರು ಜಾತಿ ಜನಗಣತಿಯಲ್ಲಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಅನ್ನು ಸಿದ್ದರಾಮಯ್ಯಗೋಸ್ಕರ (Siddaramaiagh) ಮಾಡಿದ್ದಾರೆ ಲೇವಡಿ ಮಾಡಿದರು.

    ಹಾಸನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹ
    ಹಿಂದೆ ನಡೆದ ಹಲವು ಪ್ರಕರಣಗಳಲ್ಲಿ ಇದೇ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಹಾಸನದಲ್ಲಿ ದುರಂತದಲ್ಲಿ ಮೃತಪಟ್ಟವರು ಅಮಾಯಕರು ಹಾಗೂ ಯುವಕರು. ಅವರ ಕುಟುಂಬಗಳೂ ಕಷ್ಟದಲ್ಲಿವೆ. ಇದೆಲ್ಲವನ್ನು ನೋಡಿಕೊಂಡು ಸಿಎಂ ಹೆಚ್ಚಿನ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

    ಜಾತಿ ಜನಗಣತಿ ಸಮೀಕ್ಷೆ ಮೂಲಕ ಗ್ಯಾರಂಟಿ ಫಲಾನುಭವಿಗಳ ಡೇಟಾ ಸಂಗ್ರಹಕ್ಕೆ ಸರ್ಕಾರ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳಿಗೂ ಸಾಮಾಜಿ ಆರ್ಥಿಕ ಸಮೀಕ್ಷೆಗೂ ಏನು ಸಂಬಂಧ. ಇದು ರಾಜಕೀಯ ಪ್ರೇರಿತವಾದ ಸಮೀಕ್ಷೆ. ಗ್ಯಾರಂಟಿ ಫಲಾನುಭವಿಗಳ ಪರಿಶೀಲನೆಗೆ ಮಾಹಿತಿ ಸಂಗ್ರಹ ಜಾತಿ ಜನಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಮುಂದಾಗಿದೆ ಎಂದು ಹೇಳಿದರು.

  • ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ

    ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ

    – ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದಿದ್ದ ಗಣತಿ ವರದಿ ತಿರಸ್ಕಾರ
    – ಮಧುಸೂದನ್ ನಾಯಕ್ ಕಮಿಟಿಗೆ ಸಮೀಕ್ಷೆ ಹೊಣೆ; ಡಿಸೆಂಬರ್‌ ಒಳಗೆ ವರದಿ
    – ಮರು ಸಮೀಕ್ಷೆಗೆ 420 ಕೋಟಿ ಮೀಸಲು, 1.75 ಲಕ್ಷ ಶಿಕ್ಷಕರ ಬಳಕೆ

    ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಹೊಸದಾಗಿ ಜಾತಿ ಜನಗಣತಿ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರ ವರೆಗೆ ಮಧುಸೂದನ್ ನಾಯಕ್ ಸಮಿತಿ ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ. ಮರು ಸಮೀಕ್ಷೆಗೆ ಸದ್ಯ 420 ಕೋಟಿ ರೂ. ಖರ್ಚಾಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಈ ಗಣತಿ ಮುಖ್ಯವಾಗಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಳ್ಳಬೇಕು, ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಜಾತಿ ಜನಗಣತಿ ವರದಿ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವೈರುಧ್ಯ, ಅಸಮಾನತೆ ಇದೆ. ಆದ್ರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಕೊಡಬೇಕು ಅಂತ ಹೇಳುತ್ತೆ. ಅಂಬೇಡ್ಕರ್ ಕೂಡ ಇದನ್ನೇ ಹೇಳಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದೆ ಅಂತ ಅಂಬೇಡ್ಕರ್ ಹೇಳಿದ್ರು. ಈ ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಅಸಮಾನತೆ ಹೋಗಲಾಡಿಸಬೇಕು. ಅಸಮಾನತೆ ಇದ್ದರೆ ಅದರಿಂದ ನರಳೊ ಜನರು ಪ್ರಜಾಪ್ರಭುತ್ವದ ಸೌಧ ಧ್ವಂಸ ಮಾಡ್ತಾರೆ ಅಂತ ಹೇಳಿದ್ರು. ಹಾಗಾಗಿ ಸಮಾಜದಲ್ಲಿ ಅಸಮಾನತೆ ಉಳಿಯಲು ಅವಕಾಶ ಕೊಡಬಾರದು ಎಂದು ಸಿಎಂ ಕಿವಿಮಾತು ಹೇಳಿದರು.

    ರಾಜ್ಯದಲ್ಲಿದ್ದಾರೆ 7 ಕೋಟಿ ಜನ
    ಮುಂದುವರಿದು… ನಮ್ಮ ರಾಜ್ಯದಲ್ಲಿ ಸದ್ಯ 7 ಕೋಟಿ ಜನಸಂಖ್ಯೆ ಇದೆ. ಸುಮಾರು 2 ಕೋಟಿ ಕುಟುಂಬಗಳು ಇವೆ. ಇವರಿಗೆ ಸಮಾನ ಅವಕಾಶ ಒದಗಿಸಬೇಕು. ಸಮಾನತೆ ಸಮವಾಗಿ ಕೊಡಬೇಕು. ಅದನ್ನೇ ಸಂವಿಧಾನ ಹೇಳಿರೋದು. ಸಮಾನತೆ, ಸಮಾನ ಅವಕಾಶ ಒದಗಿಸೋದು ನಮ್ಮ ಕರ್ತವ್ಯ ಹೀಗಾಗಿ 2015 ರಲ್ಲೇ ಸಮೀಕ್ಷೆ ಮಾಡಿಸಿದ್ದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ವಿ. ಕಾಂತರಾಜು ಸರ್ವೆ ಮಾಡಿದ್ರು, ಶಿಕ್ಷಣ, ಉದ್ಯೋಗ, ಜಾತಿ, ಧರ್ಮ ಅಂತ ಗೊತ್ತಾಗಲು ಸರ್ವೆ ಮಾಡಿಸಿದ್ದೆ. ಅವರ ಮಾಹಿತಿ ಗೊತ್ತಾದರೆ ಅವರಿಗೆ ಯೋಜನೆ ಕೊಡಲು ಅನುಕೂಲ ಆಗುತ್ತದೆ ಅನ್ನೋದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ತಿಳಿಸಿದರು.

    ಗ್ಯಾರಂಟಿ ಯೋಜನೆ ಮೂಲಕ ಅಸಮಾನತೆ ಸ್ವಲ್ಪ ಕಡಿಮೆ ಮಾಡೋ ಪ್ರಯತ್ನ ಮಾಡಿದ್ದೇವೆ. ಭಾಗ್ಯಗಳ ಮೂಲಕ ಸಮಾನತೆ ಕೊಡೋ ಕೆಲಸ ಮಾಡ್ತಿದ್ದೇವೆ. ಇದರ ಹೊರತಾಗಿಯೂ ಅವಕಾಶ ವಂಚಿತರಿಗೆ ಅವಕಾಶ ಕೊಡಲು ಅವರ ಬಗ್ಗೆ ಮಾಹಿತಿ ಇರಬೇಕು. ವಿಶೇಷ ಕಾರ್ಯಕ್ರಮ ಕೊಡಲು ದತ್ತಾಂಶಗಳು ನಮಗೆ ಗೊತ್ತಾಗಬೇಕು. ಅಮೆರಿಕದಲ್ಲಿ ಕರಿಯರಿಗೆ ಮೀಸಲಾತಿ ಇದೆ. ನಾವು ಹಿಂದುಳಿದವರಿಗೆ ಶಕ್ತಿ ತುಂಬೋ ಕೆಲಸ ಮಾಡಬೇಕು. ಹೀಗಾಗಿ ದತ್ತಾಂಶದ ಅವಶ್ಯಕತೆ ಇದೆ ಎಂದು ಹೇಳಿದರು.

    ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ವರೆಗೆ ಸಮೀಕ್ಷೆ
    ಕಾಂತರಾಜು ಅಧ್ಯಕ್ಷತೆಯಲ್ಲಿ ಸರ್ವೆ ಮಾಡಿಸಿದ್ವಿ. ಆದ್ರೆ ವರದಿ 10 ವರ್ಷ ಮೀರಿದೆ, ಹಾಗಾಗಿ ಕಾಂತರಾಜು ವರದಿಯನ್ನ ರಿಜೆಕ್ಟ್‌ ಮಾಡಿದ್ದೇವೆ. ಈಗ ಹೊಸದಾಗಿ ಸರ್ವೆ ಮಾಡಿಸ್ತಿದ್ದೇವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ವರೆಗೆ ಸಮೀಕ್ಷೆ ನಡೆಯಲಿದೆ. 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮಾಹಿತಿ ಪಡೆಯಲು ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಮಾಡಿಸ್ತಾ ಇದ್ದೇವೆ. ಮಧುಸೂದನ್ ನಾಯಕ್ ನೇತೃತ್ವದ ಆಯೋಗದಿಂದ ಸಮೀಕ್ಷೆ ನಡೆಯಲಿದೆ. ಜಾಗ್ರತೆಯಿಂದ ಸರ್ವೆ ಮಾಡಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಡಿಸೆಂಬರ್ ಒಳಗೆ ವರದಿ ಕೊಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

    ಸಮೀಕ್ಷೆ ಕಾರ್ಯಕ್ಕರ 1.75 ಲಕ್ಷ ಶಿಕ್ಷಕರ ಬಳಕೆ
    ಈ ಅವಧಿಯಲ್ಲಿ ದಸರಾ ರಜೆ ಇದೆ. ಹಾಗಾಗಿ ಶಿಕ್ಷಕರನ್ನ ಸರ್ವೇ ಕಾರ್ಯಕ್ಕೆ ಬಳಕೆ ಮಾಡಿಕೊಳ್ತೇವೆ. ಟೀಚರ್ ಗಳನ್ನ ಸರ್ವೆಗೆ ಬಳಕೆ ಮಾಡಿಕೊಳ್ತೀವಿ. 1.75 ಲಕ್ಷ ಶಿಕ್ಷಕರಿಂದ ಸಮೀಕ್ಷೆ ನಡೆಯುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೆ ವಿಶೇಷ ಗೌರವ ಧನ ಕೊಡ್ತೀವಿ. ಪ್ರತಿಯೊಬ್ಬರಿಗೆ 20 ಸಾವಿರ ಗೌರವ ಧನ ಸಿಗಲಿದೆ. ಇದಕ್ಕಾಗಿ 325 ಕೋಟಿ ಖರ್ಚು ಆಗಲಿದೆ. ಜೊತೆಗೆ ಮರು ಸಮೀಕ್ಷಗೆ 420 ಕೋಟಿ ಹಣ ಕೊಡುತ್ತೇವೆ. ಇನ್ನೂ ಅಗ್ಯವಿದ್ದರೆ ಮತ್ತೆ ಹಣ ಕೊಡುತ್ತೇವೆ ಎಂದು ವಿವರಿಸಿದ್ದಾರೆ.

    ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, 60 ಪ್ರಶ್ನೆಗೆ ಉತ್ತರಿಸಿ
    ಇನ್ನೂ ಮಧುಸೂದನ್ ನಾಯಕ್ ಕಮಿಟಿ ವೈಜ್ಞಾನಿಕ ಸರ್ವೆ ಮಾಡಬೇಕು. ವರದಿಯನ್ನ ಡಿಸೆಂಬರ್ ಒಳಗೆ ಕೊಡಬೇಕು. ಈ ಬಾರಿ ವಿನೂತನ ಸರ್ವೇ ಪದ್ದತಿ ಮಾಡ್ತಿದ್ದೇವೆ. ಮೀಟರ್ ರೀಡರ್‌ಗಳು, ಆರ್‌ಆರ್‌ ನಂಬರ್, ಜಿಯೊ ಟ್ಯಾಗ್ ಮಾಡಿ ಮನೆ ಮನೆಗೆ ಪಟ್ಟಿ ಮಾಡಿ ನಂಬರ್ ಕೊಡ್ತಾರೆ. UHI ನಂಬರ್ ಮೀಟರ್ ರೀಡರ್ ಹಾಕ್ತಾರೆ. 2 ಕೋಟಿ ಮನೆಗೂ ಸ್ಟಿಕ್ಕರ್‌ ಅಂಟಿಸುವ ಅಂಟಿಸೋ ಕೆಲಸ ಮಾಡ್ತಾರೆ. ಇವತ್ತಿನವರೆಗೂ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ (ಸ್ಲಿಪ್‌) ಅಂಟಿಸಿದ್ದಾರೆ. ಇದಾದ ಮೇಲೆ ಮನೆ ಮನೆಗೆ ಟೀಚರ್ ಸರ್ವೆ ಮಾಡ್ತಾರೆ. BPL ಕಾರ್ಡ್, ಆಧಾರ್ ಕಾರ್ಡ್ ಇದ್ದರೆ ಮೊಬೈಲ್ ಗೆ ಲಿಂಕ್ ಮಾಡ್ತಾರೆ. ಮೊಬೈಲ್ ಇಲ್ಲದೇ ಹೋದ್ರೆ ಆ ಮನೆಗಳ ಸರ್ವೆ ಮಾಡ್ತಾರೆ. ಎಲ್ಲರು ಈ ಸರ್ವೆಯಲ್ಲಿ ಭಾಗವಹಿಸಬೇಕು. ಈ ಸರ್ವೆಯಲ್ಲಿ 60 ಪ್ರಶ್ನೆ ಕೇಳ್ತಾರೆ. ಜಾತಿ, ಧರ್ಮ, ಉದ್ಯೋಗ, ಶಿಕ್ಷಣ, ಸೇರಿ ಕುಟುಂಬದ ಸಂಪೂರ್ಣ ಮಾಹಿತಿ ಇರೋ 60 ಪ್ರಶ್ನೆ ಕೇಳ್ತಾರೆ. ಎಲ್ಲಾ ಜನರು ಇದರಲ್ಲಿ ಭಾಗಿಯಾಗಬೇಕು. ಪ್ರತಿಯೊಬ್ಬರೂ 60 ಪ್ರಶ್ನೆಗೆ ಉತ್ತರ ಕೊಡಬೇಕು. ಯಾರೂ ಸರ್ವೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.